ADVERTISEMENT

ಎದೆಗೆಬಿದ್ದ ಅಕ್ಷರ

ಎಸ್.ಜಿ.ಸಿದ್ದರಾಮಯ್ಯ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

ಕಲಿತವರೆಲ್ಲ ಜ್ಞಾನಿಗಳಲ್ಲ, ಕಲಿಯದವರೆಲ್ಲ ಅಜ್ಞಾನಿಗಳಲ್ಲ. ಕಲಿಯುವುದೆಂದರೆ ಅರಿಯುವುದು. ಈ ಅರಿವು ಅಕ್ಷರ ಕಲಿತಂತೆ ಬರಬಹುದು, ಅಕ್ಷರ ಕಲಿಯದೆಯೂ ಬರಬಹುದು. ಇಲ್ಲಿ ಕಲಿಯುವುದು ಅಂದರೆ ತಿಳಿವಳಿಕೆ ಪಡೆಯುವುದು. ಅರಿಯುವುದೆಂದರೆ ಅರಿವೇ ಗುರುವಾಗುವುದು. ಈ ಅರ್ಥದಲ್ಲಿಯೇ ಎದೆಗೆ ಬಿದ್ದ ಅಕ್ಷರ ಎಂಬ ಮಾತನ್ನು ಪ್ರಯೋಗಿಸಲಾಗಿದೆ.

ಕ್ಷರ ಅಂದರೆ ನಾಶ ಅಂದರೆ ಕಳೆದು ಹೋಗುವುದು. ಅಕ್ಷರವೆಂದರೆ ಕಳೆದು ಹೋಗದ್ದು. ಅವಿನಾಶಿಯಾದದ್ದು. ಹೀಗಾಗಿ ಅಕ್ಷರ ಕಲಿಯುವ ಕ್ರಿಯೆಯ ಮೂಲದಲ್ಲಿಯೇ ಕಲಿಯುವುದರ ಕಲಿತದ್ದರ ಮಹತ್ವವೇನು ಎಂಬುದರ ಸೂಚನೆ ಇದೆ; ನಿರ್ದೇಶನವಿದೆ. ಹೀಗಾಗಿ ಮನುಷ್ಯನಿಗೆ ಕಲಿಕೆ ಎಂಬುದು ಜ್ಞಾನ, ತಿಳಿವಳಿಕೆ. ಯಾವುದೇ ಕೆಲಸವನ್ನು ತಿಳಿದು ಮಾಡುವುದು ಒಳ್ಳೆಯದು. ತಿಳಿಯದೆ ತಿಳಿದುಕೊಳ್ಳದೆ ಮಾಡ ಹೋಗುವುದು ಅಜ್ಞಾನದ ಕೇಡು. ಅರಿವು ಇಲ್ಲದ ಕ್ರಿಯೆ, ಕ್ರಿಯೆ ಇಲ್ಲದ ಅರಿವು ಎರಡೂ ಹೀನವಪ್ಪುವವು.

ಗಿಳಿಯೋದಿ ಫಲವೇನು, ಬೆಕ್ಕು ಬಹುದ ಹೇಳಲರಿಯದು ಎಂದು ಶರಣರು ಹೇಳಿದ್ದಾರೆ. ಗಿಳಿಯೋದು ಅಂದರೆ ಅರಿವಿಲ್ಲದ ಓದು. ಕೇವಲ ಕಂಠಸ್ತ ಮಾಡಿಕೊಂಡದ್ದು; ಹೃದ್ಗತ ಮಾಡಿಕೊಳ್ಳದೆ ಹೋದದ್ದು. ಇದು ಕೇಳಿದಾಗ ಒಪ್ಪಿಸುವ ಅಪಜ್ಞಾನ. ಕಣ್ಣು ಮುಚ್ಚಿ ಉಚ್ಚರಿಸುವ ಲಿಪಿಜ್ಞಾನ, ಶಬ್ದಜ್ಞಾನ; ಶಬ್ದಕ್ಕೆ ಅರ್ಥವಿರುತ್ತದೆ, ಅರ್ಥ ಅರಿವಿನ ತಿಳಿವಿನ ಕ್ರಿಯಾಜ್ಞಾನ ಶಕ್ತಿ. ಇಂಥ ಕ್ರಿಯಾಜ್ಞಾನಿಯನ್ನೇ ವಿದ್ಯಾವಂತ ವಿದ್ವಾಂಸ ಪಂಡಿತ ಎಂದು ಕರೆಯಲಾಗಿದೆ. ವಿದ್ವಾಂಸನಾದವನು ಜ್ಞಾನಿಯಾದವನು ಹೊಣೆಯರಿತ ಪ್ರಜೆ ಅವನ ಎದೆಗೆ ಬಿದ್ದದ್ದು ಶಬ್ದವಲ್ಲ ಅಕ್ಷರ. ಇದನ್ನು ಶರಣ ಸಿದ್ಧರಾಮಣ್ಣ ತನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾನೆ.

ADVERTISEMENT

ವಚಿಸಿ ವಚಿಸಿ ಅನುಭಾವಿಯಾಗದವ ಪಿಶಾಚಿಯಯ್ಯಾ ವಚಿಸಿ ಅನುಭಾವಿಯಾದವ ಪಂಡಿತನಯ್ಯಾ ವಿದ್ಯೆ ಎಂಬುದು ಅಭ್ಯಾಸಿಕನ ಕೈವಶ ಅವಿದ್ಯೆ ಎಂಬುದು ಸರ್ವರಲ್ಲಿ ವಶ. ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ ಮಹಾ ಪಂಡಿತ ನೋಡಾ ಕಪಿಲಸಿದ್ಧ ಮಲ್ಲಿಕಾರ್ಜುನಾ. ಇಲ್ಲಿ ವಚಿಸಿದವನ ವಚನ ಬರೀ ರಚನೆಯಾಗುವುದಲ್ಲ, ರಚಿಸಿದವನ ಮನೋರಚನೆಯನ್ನು ಪ್ರಭಾವಿಸಿದಂತೆ ಮೂಡಬೇಕು.

ಇಲ್ಲಿ ಕುವೆಂಪು ಮಾತು ನೆನಪಾಗುತ್ತದೆ; ಕುವೆಂಪು ಶ್ರೀರಾಮಾಯಣ ದರ್ಶನವನ್ನು ಬರೆದರು. ಆದರೆ ಅವರು ಹೇಳುತ್ತಾರೆ. ಕುವೆಂಪುವಂ ಸೃಜಿಸಿದೀ ರಾಮಾಯಣ ದರ್ಶನಂ ಎಂದು ವಚಿಸಿ ಅನುಭಾವಿಯಾಗುವ ಪ್ರಕ್ರಿಯೆ ಈ ಪರಿಯದು. ಬರೆದು ಬದಲಾಗದವ ಸಂವೇದನಾಶೀಲನಲ್ಲದವ ಅಂಥವನು ಪಿಶಾಚಿಯೇ ಸರಿ. ಅವನ ಬರಹಕ್ಕೂ ಬೆಲೆ
ಇರುವುದಿಲ್ಲ. ಏಕೆಂದರೆ ಅದು ಎದೆಗೆ ಬಿದ್ದ ಅಕ್ಷರವಲ್ಲ. ಕೇವಲ ಗಿಳಿಯೋದು. ಆದ್ಯರ ವಚನವೆಂಬುದು ಬಹುವೇದ್ಯ ಗುಣವುಳ್ಳದು. ಅಂಥ ಅರಿವಿನ ಶಿಕ್ಷಣದಲ್ಲಿ ಪಡೆದ ಜ್ಞಾನ-ಜ್ಞಾನಿ ಸಮಾಜಕ್ಕೆ ಬಹುವೇದ್ಯರು; ಅದು ಸಮಾಜ ದ್ರೋಹಿ ನಡೆಯ ಜ್ಞಾನವಲ್ಲ, ಅವನು ವಿದ್ರೋಹಿ ನಡೆಯ ಜ್ಞಾನಿಯಲ್ಲ, ಮಾಡುವ ಕೆಲಸದಲ್ಲಿ ವಿದ್ರೋಹಿ ಬುದ್ಧಿ ಮೆರೆಯುವ ಕಲಿತವರು ಪಿಶಾಚಿಗಳೇ ಸರಿ. ಕಲಿಯದಿದ್ದರೂ ಅನುಭವದಿಂದ ಅನುಭಾವಿಗಳಾದವರು ಕಾಮಧೇನುಗಳೇ ಸರಿ. ಇದು ಲಿಂಗಾಯತದ ಕ್ರಿಯಾಜ್ಞಾನ ಸಾಂಗತ್ಯದ ಜೀವನ ಮೀಮಾಂಸಾ ತತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.