ADVERTISEMENT

ಪುರುಷನಿಗೆ ಅತಿ ಸೂಕ್ತ ಸಂಗಾತಿ

ಅಮೃತವಾಕ್ಕು

ಫಾ.ಚೇತನ್ ಕಾಪುಚಿನ್
Published 15 ಆಗಸ್ಟ್ 2016, 19:30 IST
Last Updated 15 ಆಗಸ್ಟ್ 2016, 19:30 IST
ಫಾ. ಚೇತನ್ ಕಾಪುಚಿನ್
ಫಾ. ಚೇತನ್ ಕಾಪುಚಿನ್   

ಈ ಲೋಕವನ್ನು ಈ ಲೋಕವನ್ನು ಹಾಗೂ ಅದರಲ್ಲಿರುವ ಎಲ್ಲವನ್ನು ಸೃಷ್ಟಿಸಿದ ಭಗವಂತ ತನ್ನ ಸೃಷ್ಟಿಯ ಮೇಲೆ ದೃಷ್ಟಿ ಹಾಯಿಸಿ, ಬಹಳ ಚೆನ್ನಾಗಿದೆ’ ಎಂದು ಸಂಭ್ರಮಪಟ್ಟ ಎಂದು ಬೈಬಲ್ ಶ್ರೀಗ್ರಂಥ ಹೇಳುತ್ತದೆ.

ದೈವಸೃಷ್ಟಿಯಲ್ಲಿರುವುದೆಲ್ಲಾ ಒಳ್ಳೆಯದು, ಕೆಟ್ಟದ್ದು ಅಥವಾ ನಿಷ್ಪ್ರಯೋಜಕ ಎಂಬುದು ಇಲ್ಲವೇ ಇಲ್ಲ ಎಂಬುದು ಇದರರ್ಥ. ‘ಎಲ್ಲವೂ ಒಳ್ಳೆಯದಿದೆ’ ಎಂದು ತನ್ನ ಸೃಷ್ಟಿಕಾರ್ಯದಿಂದ ತೃಪ್ತಗೊಂಡ ದೇವರು ಒಂಟಿಯಾಗಿರುವ ಪುರುಷನನ್ನು ನೋಡಿ ಅಸಮಾಧಾನಗೊಂಡ ಸಂದರ್ಭವನ್ನು ಶ್ರೀಗ್ರಂಥವು ಉದ್ದರಿಸುತ್ತದೆ.

ಮನುಷ್ಯ ಒಂಟಿಯಾಗಿರುವುದು ಒಳ್ಳೆಯದಲ್ಲ, ಅವನಿಗೆ ಸೂಕ್ತ ಸಂಗಾತಿಯನ್ನು ನೀಡುವೆನು ಎಂದು ಸೃಷ್ಟಿಕರ್ತ ಸ್ತ್ರೀಯನ್ನು ಸೃಷ್ಟಿಸಿದ. ಹೀಗಾಗಿ ಪುರುಷನಿಗೆ/ಸ್ತ್ರೀಗೆ ದೈವದತ್ತ ಅತ್ಯಂತ ಸೂಕ್ತ ಆಯ್ಕೆಯಾಗಿ ಸ್ತ್ರೀಯು/ಪುರುಷನು ದೊರಕಿ ಅವರು ಸತಿ-ಪತಿಗಳಾಗುತ್ತಾರೆ.

ಸತಿ-ಪತಿಯ ಆಯ್ಕೆ ಅಕಸ್ಮಾತ್ತಾಗಿ ಆಗದೇ ಅದು ದೈವೇಚ್ಛೆಯಿಂದ ಆಗುತ್ತದೆ ಎಂಬ ದೃಢ ವಿಶ್ವಾಸವು ವಿವಾಹ ಎಂಬ ಬಹು ಪುರಾತನ ಸಂಸ್ಕಾರವೂ ಇಂದಿಗೂ ಅತ್ಯಮೂಲ್ಯವಾಗಿದೆ. ಹೀಗೊಂದು ಕಥೆಯಿದೆ.

ಯುವಕನೊಬ್ಬ ಕುಟೀರದಲ್ಲಿದ್ದ ಸನ್ಯಾಸಿಯೊಬ್ಬನ ಬಳಿಗೆ ಹೋಗಿ, ಸ್ವಾಮಿ, ವಿವಾಹವೆಂದರೇನು ಎಂದು ತಿಳಿಸಿ ಎಂದು ಬೇಡಿದ. ಸನ್ಯಾಸಿಯು ಆ ಯುವಕನಿಗೆ, ಕುಟೀರದ ಹಿಂಭಾಗದಲ್ಲಿ ದೊಡ್ಡ ಮಾವಿನ ತೋಪಿದೆ.

ಅಲ್ಲಿಗೆ ಹೋಗಿ, ಮರಗಳಿಂದ ಅತ್ಯಂತ ಒಳ್ಳೆಯ ಒಂದು ಮಾವಿನ ಹಣ್ಣನ್ನು ತರಬಲ್ಲೆಯಾ? ಎಂದು ಕೇಳಿದಾಗ, ಯುವಕ ಕೊಂಚ ಕೋಪಗೊಂಡರೂ, ಮನಸ್ಸಿಲ್ಲದ ಮನಸ್ಸಿನಿಂದ ತೋಪಿನೆಡೆಗೆ ಹೊರಟ. ಸನ್ಯಾಸಿಯು ಯುವಕನಿಗೆ, ಮಾವಿನ ಹಣ್ಣುಗಳನ್ನು ಹುಡುಕುವಾಗ ಒಂದು ನಿಯಮವನ್ನು ಪಾಲಿಸು - ಹುಡುಕಿಕೊಂಡು ಮುಂದಕ್ಕೆ ಮಾತ್ರ ಹೋಗು, ಹಿಂದಿರುಗುವಂತಿಲ್ಲ ಎಂದು ಎಚ್ಚರಿಸಿದ.

ತೋಪಿನ ಮೊದಲ ಸಾಲಿನಲ್ಲಿರುವ ಮೊದಲನೇ ಮರದಲ್ಲೇ ದೊಡ್ಡ ಗಾತ್ರದ ಅತ್ಯುತ್ತಮ ತಳಿಯ ಮಾವಿನ ಹಣ್ಣುಗಳಿದ್ದವು. ಅದರಲ್ಲೊಂದನ್ನು ಕೀಳಬೇಕೆನ್ನುವಷ್ಟರಲ್ಲಿ, ಮುಂದಿನ ಇಷ್ಟೊಂದು ಮರಗಳಲ್ಲಿ ಇದಕ್ಕಿಂತ ಉತ್ತಮವಾದ ಹಣ್ಣುಗಳಿರಬಹುದು ಎಂದು ಹಣ್ಣನ್ನು ಕೀಳದೆ ಮುಂದುವರಿದ. ಹೀಗೆಯೇ ಅತ್ಯುತ್ತಮ ಹಣ್ಣುಗಳ ಹುಡುಕಾಟದಲ್ಲಿ ಮುಂದುವರಿದು ತೋಪಿನ ಕೊನೆಗೆ ಬಂದ.

ಅಲ್ಲಿದ್ದ ಮರಗಳಲ್ಲೂ ದೊಡ್ಡ ಉತ್ತಮ ಹಣ್ಣುಗಳಿದ್ದರೂ ಕೀಳದೆ ಮುಂದುವರೆದು ಕೊನೆಯ ಮರದ ಬುಡಕ್ಕೆ ಬಂದು ತಲೆಯೆತ್ತಿ ನೋಡಲು ಆ ಮರದಲ್ಲಿ ಸಣ್ಣ ಗಾತ್ರದ ಹಣ್ಣುಗಳಿದ್ದವು.

ಹಿಂದಿರುಗಿ ಹೋಗಬಾರದೆಂದು ಸನ್ಯಾಸಿಯ ಆಜ್ಞೆಯಿದ್ದುದರಿಂದ ಆ ಮರದ ಹಣ್ಣೊಂದನ್ನು ಕಿತ್ತು ಸನ್ಯಾಸಿಯ ಬಳಿಗೆ ಬಂದ. ಯುವಕನು ಆ ಮಾವಿನ ಹಣ್ಣನ್ನು ಸನ್ಯಾಸಿಯ ಮುಂದೆ ಒಡ್ಡಿ, ಈಗಲಾದರೂ, ವಿವಾಹವೆಂದರೆ ಏನು ಅಂತ ಹೇಳಿ ಎಂದ. ಸನ್ಯಾಸಿಯು ಯುವಕನ ಕೈಯಲ್ಲಿದ್ದ ಮಾವಿನ ಹಣ್ಣನ್ನು ದಿಟ್ಟಿಸಿ ಯುವಕನನ್ನು ನೋಡಿ, ಅತ್ಮೀಯತೆಯಿಂದ, ವಿವಾಹ ಅಂದರೆ ಇದೇ ಎಂದುತ್ತರಿಸಿ ಸುಮ್ಮನಾದ.

ಮನುಷ್ಯನ ಆಯ್ಕೆಯ ಮಾನದಂಡಗಳು - ಸೌಂದರ್ಯ, ಶ್ರೀಮಂತಿಕೆ, ಗುಣನಡತೆ, ವಿದ್ಯಾಭ್ಯಾಸ, ಇತ್ಯಾದಿ. ಈ ಮಾನದಂಡಗಳ ಪ್ರಕಾರ ಸಂಗಾತಿ ದೊರೆತ ನಿದರ್ಶನಗಳು ಕಡಿಮೆ. ಹಲವು ಬಾರಿ ಈ ಮಾನದಂಡಗಳ ಪ್ರಕಾರ ಮಾಡಿದ ಆಯ್ಕೆಯು ತಪ್ಪಾಗಿರುತ್ತದೆ. ಆದರೆ ಸೃಷ್ಟಿಕರ್ತ ತನ್ನ ಪ್ರೀತಿಯ ಸೃಷ್ಟಿಗಾಗಿ ಮಾಡಿದ ಆಯ್ಕೆ ಎಂದಿಗೂ ತಪ್ಪಾಗದು. ಸುಖಮಯ ದಾಂಪತ್ಯ ಜೀವನಕ್ಕೆ ಈ ವಿಶ್ವಾಸವೇ ಅತ್ಯಂತ ಬಲಿಷ್ಠ ತಳಹದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.