ADVERTISEMENT

ಪ್ರೇಮ ಮತ್ತು ರಹಸ್ಯಜ್ಞಾನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಪ್ರೇಮ ಮತ್ತು ರಹಸ್ಯಜ್ಞಾನ
ಪ್ರೇಮ ಮತ್ತು ರಹಸ್ಯಜ್ಞಾನ   

ಸೂಫಿ ಅಧ್ಯಾತ್ಮ ಪಥದ ಕೊನೆಯ ಹಂತ ಪ್ರೇಮ ಮತ್ತು ರಹಸ್ಯ ಜ್ಞಾನಪ್ರಾಪ್ತಿ ಎನ್ನಲಾಗುತ್ತದೆ. ಕೆಲವೊಮ್ಮೆ ಈ ಎರಡೂ ಪರಸ್ಪರ ಪೂರಕವಾಗಿರುತ್ತದೆ ಎಂದರೆ, ಇನ್ನು ಹಲವುಬಾರಿ ಅಧ್ಯಾತ್ಮದಲ್ಲಿ ಪ್ರೇಮವು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವೊಮ್ಮೆ ಅಬೂ ನಸ್ರ್ ಅಸ್ಸರ್ರಾಜ್ ತಮ್ಮ ಗ್ರಂಥ ‘ಕಿತಾಬ್ ಅಲ್ ರಹಸ್ಯಜ್ಞಾನವನ್ನು ಶ್ರೇಷ್ಠವೆನ್ನಲಾಗುತ್ತದೆ. ಪ್ರೇಮವೆಂದರೆ ಸಾಮಾನ್ಯವಾಗಿ ಗಂಡುಹೆಣ್ಣಿನ ಆಕರ್ಷಣೆಗೆ ಸಂಬಂಧಿಸಿದ್ದೆಂದು ತಿಳಿಯಲಾಗುತ್ತದೆ.ಆದರೆ, ಸೂಫಿ ಆಧ್ಯಾತ್ಮದಲ್ಲಿ ಇಲ್ಲಿಗೇನೇ ಸೀಮಿತಗೊಳಿಸದೆ ದೇವರು ಮತ್ತು ಸೂಫಿ ಅಧ್ಯಾತ್ಮಿಯ ಭಕ್ತಿಯ ಪರಾಕಾಷ್ಟೆಯಲ್ಲಿ ಉದ್ಭವಿಸುವ ಭಾವನಾತ್ಮಕ ಸಂಬಂಧದ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಈ ಸಂಬಂಧವನ್ನು ಸ್ನೇಹ(ವಲಿ) ಎಂದೂ ಕರೆಯಲಾಗುತ್ತದೆ.

‘ರಹಸ್ಯ ಜ್ಞಾನವನ್ನು ಹೊರತು ಪಡಿಸಿ (ಅಧ್ಯಾತ್ಮ)ಪ್ರೇಮವು ಸಾಧ್ಯವಾಗದು, ತನಗೆ ಜ್ಞಾನವಿರುವಷ್ಟು ಮಾತ್ರ ಓರ್ವ ಸೂಫಿ ಸಾಧಿಸುವುದು ಸಾಧ್ಯವಾಗುತ್ತದೆ’ ಎಂದು ಸೂಫಿ ಅಧ್ಯಾತ್ಮ ಪಂಡಿತರೆನಿಸಿದ ಇಮಾಮ್ ಗಝ್ಝಾಲಿಯವರು ಅಭಿಪ್ರಾಯಪಟ್ಟಿದ್ದರು. ಸೂಫಿಗಳು ‘ಮಾರಿಫಾ’ ಜ್ಞಾನದ ಬಗ್ಗೆ ಹಲವಾರು ದೃಷ್ಟಿಕೋನಗಳಿಂದ ವ್ಯಾಖ್ಯಾನಿಸಲು ಪ್ರಯತ್ನಿಸಿದ್ದರೂ, ಒಂದು ತಾರ್ಕಿಕ ಯಾ ವಿಚಾರಾತ್ಮಕ ನಿರ್ಣಯಕ್ಕೆ ತಲುಪಲು ಸಾಧ್ಯವಾಗದೆ ಅದೊಂದು ಅತ್ಯಂತ ಶ್ರೇಷ್ಠವಾದ ದೈವಿಕ ಅರಿವಿನ ರಹಸ್ಯವೆಂದು ತೀರ್ಮಾನಿಸಲಾಗಿತ್ತು. ಕಾಲ ಕಳೆದಂತೆ, ‘ಆರಿಫ್’(ಅಧ್ಯಾತ್ಮ ರಹಸ್ಯ ಜ್ಞಾನ) ಎಂಬ ಶಬ್ಧವನ್ನು ಸಾಮಾನ್ಯವಾಗಿ ಮುಂದುವರಿದ, ಉನ್ನತವಾದ ಅಧ್ಯಾತ್ಮ ಸಾಧನೆ ಎಂದು ಪರಿಗಣಿಸಲ್ಪಟ್ಟಿತ್ತು. "ಶ್ರದ್ಧಾವಂತನೊಬ್ಬ ದೈವೀ ಬೆಳಕಿನಿಂದ ನೋಡಿದರೆ, ಅಧ್ಯಾತ್ಮ ಸಾಧಕ ನೇರವಾಗಿ ದೇವರ ಮೂಲಕ ನೋಡುತ್ತಾನೆ" ಎಂದು ‘ಕಿತಾಬ್ ಅಲ್ ಲುಮಾ ಫೀ ತಸವ್ವುಫ್’ನಲ್ಲಿ ಅಭಿಪ್ರಾಯಪಟ್ಟಿದ್ದಾರೆ

ಅಧ್ಯಾತ್ಮ ಸಾಧಕರಲ್ಲಿ ಹೆಚ್ಚಿನವರು ಕುರಾನ್(೨೭:೩೪)ನಲ್ಲಿ ನೀಡಿರುವ "...ರಾಜರು ಒಂದು ನಾಡಿನ ಮೇಲೆ ದಾಳಿನಡೆಸಿದಾಗ (ಸಾಮಾನ್ಯವಾಗಿ) ಅದನ್ನು ಧ್ವಂಸ ಮಾಡಿಯೇ ಬಿಡುತ್ತಾರಲ್ಲದೆ..." ಎಂಬ ಸಂದೇಶವನ್ನು ಬಳಸಿಕೊಂಡು ರಾಜರನ್ನು ಎಂಬ ಶಬ್ಧದ ಬದಲಿಗೆ ಸಾಂಕೇತಿಕವಾಗಿ ‘ಮಾರಿಫಾ’ ಎಂದು ಉದಾಹರಿಸಿಕೊಳ್ಳುತ್ತಾರೆ. ದೈವೀಜ್ಞಾನವು ಹೃದಯವನ್ನು ಸೂರೆಗೊಂಡು, ಸಂಪೂರ್ಣವಾಗಿ ಆವರಿಸಿಕೊಂಡು ಬರಿಯ ದೇವರ ಸ್ಮರಣೆಯೇ ಉಳಿದುಕೊಳ್ಳುವಂತಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಹಜ್ರತ್ ಹುಜ್ವೇರಿಯವರಂತಹ ಸೂಫಿ ಅಧ್ಯಾತ್ಮ ಪಂಡಿತರು, ತತ್ವಶಾಸ್ತ್ರ್ರಜ್ಞರು ಮಾರಿಫಾದ ಬಗ್ಗೆ ವ್ಯಾಖ್ಯಾನವನ್ನು ಬಹಳ ರೀತಿಯಲ್ಲಿ ಮಾಡಿದ್ದಾರೆ. ಎಲ್ಲರಿಗಿಂತ ಮಾರ್ಮಿಕವಾಗಿ ವ್ಯಾಖ್ಯಾನಿಸಿದವರು ಹಜ್ರತ್ ಜುನೈದ್ ಬಗ್ದಾದಿ ‘ಅಧ್ಯಾತ್ಮ ರಹಸ್ಯ ಜ್ಞಾನವೆಂದರೆ ದೇವರನ್ನು ಅರ್ಥಮಾಡಿಕೊಳ್ಳುವುದಕ್ಕೆ ತುಂಬ ಕಷ್ಟದಾಯಕವಾದುದು ಮತ್ತು ಗ್ರಹಿಸುವುದಕ್ಕೆ ತುಂಬ ಕ್ಲಿಷ್ಟಕರವೆಂಬ ಅಭಿಪ್ರಾಯಗಳ ಮಧ್ಯೆ ಮನಸ್ಸು ಓಲಾಡುತ್ತಿರುವಂತೆ ಮಾಡುತ್ತದೆ. ಹೃದಯದಲ್ಲಿ ಏನಾದರೊಂದು ತೀರ್ಮಾನಕ್ಕೆ ಬರುವಾಗ ದೇವರು ಅದಕ್ಕೆ ವಿರುದ್ಧವಾಗಿರುವುದನ್ನು ಕಂಡುಕೊಂಡು ಚಕಿತರಾಗುತ್ತೇವೆ‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.