ADVERTISEMENT

ಪ್ರೇಮ ಮತ್ತು ಹಂಬಲ

ಫಕೀರ್ ಮಹಮ್ಮದ ಕಟ್ಪಾಡಿ
Published 13 ಡಿಸೆಂಬರ್ 2017, 19:31 IST
Last Updated 13 ಡಿಸೆಂಬರ್ 2017, 19:31 IST
ಪ್ರೇಮ ಮತ್ತು ಹಂಬಲ
ಪ್ರೇಮ ಮತ್ತು ಹಂಬಲ   

ಅಧ್ಯಾತ್ಮದಲ್ಲಿ ಸಹಜ ಹಂಬಲಕ್ಕೆ ಕೊನೆ ಎಂಬುದಿಲ್ಲ, ಯಾಕೆಂದರೆ ಪ್ರಿಯಕರನಿಗೆ ಅಂತ್ಯವೆಂಬುದಿಲ್ಲ ಎಂದು ಹೇಳಲಾಗುತ್ತದೆ. ಅಧ್ಯಾತ್ಮ ಸಾಧಕರು ದೈವೀಪ್ರಿಯಕರನ ಗುಣಗಳ ಬಗ್ಗೆ ಹೆಚ್ಚುಹೆಚ್ಚು ತಿಳಿಯುತ್ತ ಹೋದಂತೆ ಅಗಾಧ ಅನುಭವವನ್ನು ಪಡೆಯುತ್ತಾರೆ. ಅವನ ಪರಮಸತ್ವದ ಅಗಾಧವಾದ ಆಳವನ್ನು ಅರಿಯುತ್ತಾರೆ. ಆದುದರಿಂದ ಆಳವಾಗಿ ಸಾಗುತ್ತ ತಿಳುವಳಿಕೆಯನ್ನು ಪಡೆಯಲು ಹಂಬಲಿಸಿದಷ್ಟು ಇನ್ನಷ್ಟು, ಮತ್ತಷ್ಟು, ಕೊನೆಯಿಲ್ಲದ ಚಕಿತಗೊಳಿಸುವಂತಹ ರಹಸ್ಯಗಳು ಅನಾವರಣಗೊಳ್ಳುತ್ತವೆ. ಇಮಾಮ್ ಗಝ್ಝಾಲಿಯವರು ಈ ಸ್ಥಿತಿಯನ್ನು ತನ್ನ ‘ಇಹ್ಯಾ ಉಲೂಮ್ ಅದ್ದೀನ್’ ಎಂಬ ಗ್ರಂಥದಲ್ಲಿ ವಿವರಿಸಲು ಒಂದು ಅಧ್ಯಾಯವನ್ನೇ ಮೀಸಲಾಗಿಟ್ಟಿದ್ದರು. ಪ್ರೇಮದ ಈ ಕ್ರಿಯಾತ್ಮಕ ಶಕ್ತಿ ಮತ್ತು ಹಂಬಲವು ಪರ್ಸಿಯನ್ ಸೂಫಿ ಕವಿಗಳಿಗೆ ಅದ್ಭುತ ಪ್ರೇರಣೆ ನೀಡಿದೆ. ಫರೀದುದ್ದೀನ್ ಅತ್ತಾರರ ‘ಮುಸೀಬತ್ ನಾಮಾ’ದಲ್ಲಿ ಹೀಗೆ ಹೇಳುತ್ತಾರೆ:

ಪ್ರತೀ ಕ್ಷಣವೂ ಈ ಪ್ರೇಮವು ಹೆಚ್ಚುಹೆಚ್ಚು ಅನಂತವಾಗುತ್ತದೆ
ಪ್ರತೀ ಸಾರಿಯೂ ಜನರು ಹೆಚ್ಚುಹೆಚ್ಚು ದಿಗ್ಭ್ರಾಂತರಾಗುತ್ತಾರೆ.
ಇದನ್ನೇ ಮುಂದುವರಿಸಿದ ಕವಿ ಹಫೀಜ್ ಈ ರೀತಿ ಹೇಳುತ್ತಾರೆ:
ನಾನು ಮತ್ತು ನನ್ನ ಪ್ರಿಯತಮೆಯ ನಡುವಿನ ಸಾಹಸಕಾಂಕ್ಷೆಗಳಿಗೆ ಕೊನೆಯಿಲ್ಲ,

ಅದಕ್ಕೆ ಯಾವುದೇ ಮೊದಲಿಲ್ಲ, ಅಂತೆಯೇ ಕೊನೆಯೆಂಬುದಿಲ್ಲ.
ಮೌಲಾನಾ ಜಲಾಲುದ್ದೀನ್ ರೂಮಿ ಅಧ್ಯಾತ್ಮದಲ್ಲಿ ಪ್ರೇಮದ ಭವ್ಯತೆಯನ್ನು ವ್ಯಾಖ್ಯಾನಿಸುತ್ತ ದೇವರ ಪ್ರೇರಣೆಯಿಂದ ಉಂಟಾದ ಪ್ರೇಮವನ್ನು ಸರಿಯಾಗಿ ವಿವರಿಸುವುದು ಹೇಗೆ ಸಾಧ್ಯ ಎಂಬುದಕ್ಕೆ ತನ್ನ ‘ಮಸ್ನವಿ’ ಬೃಹತ್ ಕಾವ್ಯ ಗ್ರಂಥದಲ್ಲಿ ಹೀಗೆ ಹೇಳುತ್ತಾರೆ:

ADVERTISEMENT

ಅದು ನೂರು ಪುನರುತ್ಥಾನ ದಿನಗಳಿಗಿಂತ ಭವ್ಯವಾದುದು,
ಪುನರುತ್ಥಾನ ದಿನವು ಸೀಮಾರೇಖೆಯ ಸರಹದ್ದಿನೊಳಗಿರುತ್ತದೆ, ಆದರೆ ಪ್ರೇಮವು ಸೀಮಾತೀತ. ಪ್ರೇಮಕ್ಕಿವೆ ಐದು ನೂರು ರೆಕ್ಕೆಗಳು, ಪ್ರತಿಯೊಂದು ಕೂಡ ಆವರಿಸಿರುವುದು

ದೇವರ ಸಿಂಹಾಸನದಿಂದ(ಅರ್ಷ್) ತೀರಾ ಕೆಳಗಿನ ಭೂಮಿಯ ತನಕ.

ಆದರೆ, ಪ್ರೇಮಿಯು ಕೇಳಿಸದವನಂತೆ ವರ್ತಿಸಕೂಡದು ಎಂದು ಹದಿನಾರನೆಯ ಶತಮಾನದ ಸೂಫಿ ಕವಿ ಉರ್ಫಿಯ್ಯಿ ಶಿರಾಜಿ ತನ್ನ ಗ್ರಂಥ ‘ಕುಲ್ಲಿಯ್ಯತ್’ನಲ್ಲಿ ಒತ್ತಿ ಹೇಳುತ್ತಾರೆ, ‘ಅತ್ಯಂತ ಶ್ರೇಷ್ಠವೆನಿಸಲ್ಪಟ್ಟ ಪ್ರೇಮದ ಹಂತಕ್ಕೆ ನೂರಾರು ಸ್ಥಾನಗಳಿವೆ, ಇವುಗಳ ಪೈಕಿ ಪ್ರಥಮ ಸ್ಥಾನವು ಪುನರುತ್ಥಾನ ದಿನವೆಂದು ಪರಿಗಣಿಸಲ್ಪಟ್ಟಿದೆ’. (ಪುನರತ್ಥಾನ ದಿನವೆಂಬುದು ಮುಸ್ಲಿಮ್ ದೃಢ ವಿಶ್ವಾಸದ ಒಂದು ಮುಖ್ಯಭಾಗ. ಪ್ರಳಯಕಾಲದ ನಂತರ ಭೂಮಿಯ ಸರ್ವನಾಶದ ಬಳಿಕ ದೇವಲೋಕದಲ್ಲಿ ಮತ್ತೆ ಜೀವ ಪಡೆದು ಪಾಪ ಪುಣ್ಯಗಳ ಅಂತಿಮ ತೀರ್ಮಾನಕ್ಕಾಗಿ ಸರ್ವರೂ ಸೇರಲ್ಪಡುವ ‘ಮಾಷರಾ’ ಸಭೆಯ ಸಂದರ್ಭ).

ಪರಮ ಪ್ರಿಯನಾದ ದೇವರ ಸನಿಹಕ್ಕೆ ಕರೆಯಲ್ಪಡುವುದಕ್ಕೆ ಸತತವಾದ ಪರಿಶುದ್ಧತೆ ಇರಬೇಕು, ಜೊತೆಗೆ ದೇವರ ಅರ್ಹತೆಗೆ ತಕ್ಕುದಾದ ಯೋಗ್ಯತೆ ಇರಬೇಕು. ಪ್ರಖ್ಯಾತ ಸೂಫಿ ಸಂತ ಜುನೈದ್ ಬಗ್ದಾದಿಯವರು ಪ್ರೇಮದಿಂದ ಆಗುವ ಬದಲಾವಣೆಯನ್ನು ವಿವರಿಸುತ್ತ, "ತನ್ನ ಅರ್ಹತೆಯಿಂದ ಪ್ರಿಯಕರನಲ್ಲಿ ಮೂಡುವ ಪ್ರೇಮವು ತನ್ನ ಅಸ್ತಿತ್ವದ ಪುರಾವೆಯೊಂದಿಗೆ ಮಿಲನ ಹೊಂದುವ ಪ್ರಕ್ರಿಯೆಯು ದೇಹಾತ್ಮ ವಿನಾಶಕ್ಕೆ ಸಮನಾದುದು" ಎಂದಿದ್ದರು. ಈ ಹಂತದಲ್ಲಿ ಪ್ರೇಯಸಿಯ ಗುಣವಿಶೇಷಗಳು ಪ್ರಿಯಕರನ ಗುಣಗಳೊಂದಿಗೆ ಶಾಮೀಲಾಗಿಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.