ADVERTISEMENT

ಯೋಚನೆಗಳ ನಿಯಂತ್ರಣ

ಫಾ.ಚೇತನ್ ಕಾಪುಚಿನ್
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ತೃಪ್ತಿ, ಸಂತೋಷ, ಭಯ, ಇತ್ಯಾದಿಗಳು ಮಾನವ ಜೀವನದ ಅವಿಭಾಜ್ಯ ಅಂಗಗಳು. ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳುವವರು ಕೆಲವರು ಹಾಗೂ ಸಿಕ್ಕಿದಷ್ಟು ಬಾಚಿಕೊಂಡು ಅತೃಪ್ತಿಯಲ್ಲೇ ಬಾಳುವವರು ಹಲವರು. ಸದಾ ಹಸನ್ಮುಖಿಗಳಾಗಿ ಬಾಳುವವರು ಇದ್ದಂತೆ ಸದಾ ಗಂಟುಮುಖ ಹಾಕಿಕೊಂಡಿರುವವರನ್ನೂ ನಾವು ಕಾಣಬಹುದು. ಜೀವನದ ಹಾದಿಯಲ್ಲಿ ಏನು ಎದುರಾಗಬಹುದೋ ಎಂದು ಭಯದಿಂದ ತೊಳಲಾಡುವವರೂ ಬಹಳ ಸಂಖ್ಯೆಯಲ್ಲಿದ್ದಾರೆ. ಆದರೆ ಇವೆಲ್ಲ ಬಹುಮಟ್ಟಿಗೆ ಮನುಷ್ಯನ ಯೋಚನೆಯಿಂದ ಆರಂಭವಾಗುವಂತಹವು, ವಾಸ್ತವದಲ್ಲಿ ಇವುಗಳಿಗೆ ಬೇರೆ ನೆಲೆಗಟ್ಟು ಇಲ್ಲದಿರುವುದನ್ನು ನಾವು ಕಾಣಬಹುದು.

ಒಬ್ಬಾತನು ಬಹು ಅಕ್ಕರೆಯಿಂದ ಕಟ್ಟಿಸಿದ ಬೆಲೆಬಾಳುವ ಮನೆಗೆ ಬೆಂಕಿ ಬಿತ್ತು. ಮನೆಯು ಬೆಂಕಿಯಲ್ಲಿ ಕರಕಲಾಗುತ್ತಿರಲು ನೂರಾರು ಜನರು ಮನೆಯ ಸುತ್ತ ಬಂದು ಸೇರಿದರು. ಮನೆಯ ಮಾಲೀಕನು ಗೋಳೋ ಎಂದು ಅಳಲಾರಂಭಿಸಿದನು. ಅವನನ್ನು ಸಂತೈಸಲು ಯಾರಿಗೂ ಸಾಧ್ಯವಾಗಲೇ ಇಲ್ಲ. ಅಷ್ಟರಲ್ಲಿ, ಅವನ ಹಿರಿಯ ಮಗನು ಓಡಿಬಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ: ಅಪ್ಪಾ, ಅಳಬೇಡ, ಈ ಮನೆಯನ್ನು ನಾನು ನಿನ್ನೆಯೇ ದುಪ್ಪಟ್ಟು ಮೌಲ್ಯಕ್ಕೆ ಮಾರಿಬಿಟ್ಟಿದ್ದೇನೆ. ನಿನಗೆ ತಿಳಿಸದೆ ಮಾರಿದ್ದಕ್ಕೆ ಕ್ಷಮಿಸು. ಇದನ್ನು ಕೇಳಿದ ತಂದೆ, ಅಬ್ಬಾ, ಈ ಮನೆ ನಮ್ಮದಲ್ಲವಲ್ಲ, ದೇವರು ದೊಡ್ಡವನು ಎಂದು ನಿಟ್ಟುಸಿರುಬಿಟ್ಟು ನಿರಾಳನಾದ. ಅಷ್ಟರಲ್ಲಿ ಎರಡನೇ ಮಗನು ಓಡಿಬಂದು, ಅಪ್ಪಾ, ನಿನಗೇನು ತಲೆ ಕೆಟ್ಟಿದ್ಯಾ? ಮನೆ ಸುಟ್ಟುಹೋಗುತ್ತಿರಲು ನಗುತ್ತಾ ಇದೀಯ? ಎಂದು ಬೈದನು. ಆ ಮನೆಯನ್ನು ಈಗಾಗಲೇ ಮಾರಾಟ ಮಾಡಿ ಆಗಿದೆ, ಅದು ತನ್ನದಲ್ಲ ಎಂದು ತಂದೆ ಹೇಳಲು, ಮಗನು, ಅಪ್ಪಾ, ಮನೆಯ ಅಡ್ವಾನ್ಸ್ ಹಣ ಮಾತ್ರ ಸಿಕ್ಕಿದೆ. ಇನ್ನೂ ದೊಡ್ಡ ಮೊತ್ತ ಕೈಗೆ ಸಿಕ್ಕಿಲ್ಲ ಎಂದಾಗ ತಂದೆ ಮತ್ತೆ ಗೋಳೋ ಎಂದು ಎತ್ತರದ ಸ್ವರದಲ್ಲಿ ಅಳಲಾರಂಬಿಸಿದ. ಆಗ ಮೂರನೇ ಮಗ ಅಪ್ಪನ ಬಳಿಗೆ ಬಂದು, ಅಪ್ಪಾ, ನಮ್ಮಿಂದ ಮನೆಯನ್ನು ಖರೀದಿಸಿದ ವ್ಯಕ್ತಿ ನಿಜವಾಗಿಯೂ ದೊಡ್ಡ ಮನಸ್ಸಿನವನು. ಮನೆಗೆ ಬೆಂಕಿ ಬಿದ್ದಿದ್ದರಲ್ಲಿ ನಿಮ್ಮದೇನು ತಪ್ಪು, ಬಾಕಿಯಿರುವ ಹಣವನ್ನು ನಾವು ನಾಳೆಯೇ ಕೊಟ್ಟುಬಿಡುತ್ತೇನೆ ಎಂದು ಹೇಳಿದುದಾಗಿ ಅಪ್ಪನ ಕಿವಿಯಲ್ಲಿ ಉಸುರಿದ. ಇದನ್ನು ಕೇಳಿ, ಬೆಟ್ಟದಂಥಹ ಭಾರ ತಲೆಮೇಲಿಂದ ಕೆಳಗಿಳಿದಂತೆ ಅಪ್ಪ ಸಮಾಧಾನದ ನಿಟ್ಟುಸಿರು ಬಿಟ್ಟ. ಮನೆ ಬೆಂಕಿಯಲ್ಲಿ ಕರಕಲಾಗುತ್ತಿರಲೂ, ತಾನೇನೋ ಸಾಧಿಸಿದವನಂತೆ ಹಸನ್ಮುಖದಿಂದ ಬೀಗುತ್ತಿದ್ದ.

ಈ ಕಥೆಯಲ್ಲಿ ಮನೆಯು ಬೆಂಕಿಗೆ ಆಹುತಿಯಾಗುತ್ತಿದ್ದಾಗ ಬದಲಾವಣೆಯಾಗಿದ್ದು ನಾನು ಮನೆಯ ಮಾಲೀಕ, ಮಾಲೀಕನಲ್ಲ ಎಂಬ ಎರಡು ಆಲೋಚನೆ
ಗಳು ಮಾತ್ರ. ಆ ವ್ಯಕ್ತಿಯ ತಲೆಯಲ್ಲಿ ಬದಲಾಗುತ್ತಿರುವ ಈ ಆಲೋಚನೆಗಳ ಪರಿಣಾಮವಾಗಿ ಅವನಿಗೆ ಸಂತೋಷ, ಆನಂದ, ದು:ಖ, ಬೇಸರ ಇಂತಹ ವರ್ತುಲದಲ್ಲಿ ಅವನು ಸಿಲುಕಿಕೊಂಡ. ಈ ಯೋಚನೆಗಳ ಮಾಲೀಕರೂ ನಾವೇ ಆಗಿರುವುದರಿಂದ ಅವುಗಳನ್ನು ನಮಗೆ ಬೇಕಾದಂತೆ ನಿಯಂತ್ರಿಸುವ ಶಕ್ತಿಯೂ ನಮ್ಮಲ್ಲೇ ಇದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.