ADVERTISEMENT

ಸಮಾನತೆಯ ಪೂರ್ಣಪ್ರಜ್ಞೆ

ಎಸ್.ಜಿ.ಸಿದ್ದರಾಮಯ್ಯ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಸಮಾನತೆಯ ಪೂರ್ಣಪ್ರಜ್ಞೆ
ಸಮಾನತೆಯ ಪೂರ್ಣಪ್ರಜ್ಞೆ   

ಸ್ತ್ರೀವಾದಿ ಚಿಂತನೆಯೆಂಬುದು ಇಂದು ನಿನ್ನೆಯದಲ್ಲ; ಅದು ಬುದ್ಧಿ ಮೊಳೆತಾಗಿನಿಂದ, ಹೆಣ್ಣು-ಗಂಡು ಅಸಮಾನ ಎಂಬ ಭಿನ್ನ ಭಾವ ತಲೆದೋರಿದಾಗಿನಿಂದ ಹರಿದು ಬಂದದ್ದು. ಪುರುಷ ಪ್ರಧಾನತೆ ವಿಜೃಂಭಿಸಿದಂತೆ ಪುರುಷನದು ಮೇಲುಗೈ ಸಾಧನೆಯಾಯಿತು, ಹೆಣ್ಣಿನದು ಅಡಿಯಾಳಿನ ಬದುಕಾಯಿತು. ಈ ಅಧಿಕಾರ ಮತ್ತು ಅಧೀನತೆಯೆಂಬುದು ಭಾಷಾ ರಚನೆಯಲ್ಲೂ ಬಿಡದೆ ಆವರಿಸಿದ ಆಕ್ರಮಣವಾಯಿತು. ಅದು ಎಷ್ಟರಮಟ್ಟಿಗೆ ಇದೆ ಎಂದರೆ ಒಟ್ಟು ಸಮುದಾಯವನ್ನು ನಿರ್ದೇಶಿಸುವಾಗ ಅಲ್ಲಿ ಪುರುಷ ಠೇಂಕಾರ ಮುನ್ನುಗ್ಗುತ್ತದೆ. ಉದಾಹರಣೆಗೆ (1) ಮನುಷ್ಯ ಜಾತಿ ತಾನೊಂದೆ ವಲಂ ಎನ್ನುವ ಪ್ರಯೋಗ ನೋಡಿದಾಗ ಮನುಷ್ಯ ಪುರುಷ ಸಂಕೇತವೋ ಸ್ತ್ರೀ ಸಂಕೇತವೋ? ಇಬ್ಬರನ್ನೂ ಒಳಗೊಂಡದ್ದೋ?. ಸ್ತ್ರೀ ಪುರುಷರಿಬ್ಬರಿಗೂ ಸಮಾನವಾಗಿ ಪ್ರಯೋಗವಾಗುವ ಸಮಾನ ವಾಚಕ ಶಬ್ದ ಇಲ್ಲಿನ ಬಳಕೆಗೆ ಯಾವುದಿದೆ? ಉದಾಹರಣೆ (2) His-story (ಅದು) ಅವನ ಚರಿತ್ರೆ (Her-story) ಅವಳ ಚರಿತ್ರೆ ಅಲ್ಲ. ಇಂಥ ಪದಗಳ ಉದಾಹರಣೆಗಳು ಬೇಕಾದಷ್ಟಿವೆ. ಇತ್ತೀಚೆಗೆ ಸ್ತ್ರೀವಾದಿ ಪ್ರಜ್ಞೆಯ ಚಿಂತಕರು ಸಾಮಾನ್ಯವಾಚಕವಾಗಿ ಅವನು ಬಳಸುವ ಕಡೆ ಅವಳು/ನು ಎಂಬುದನ್ನೂ ಪ್ರಜ್ಞಾಪೂರ್ವಕವಾಗಿ ಬಳಸುತ್ತಾರೆ. ಅಂದರೆ ಗಂಡುಪ್ರಧಾನಭಾಷೆಯ ಮಿತಿಯನ್ನು ಹೀಗೆ ಒಳಗೊಳ್ಳುವ ಪ್ರಯೋಗದಿಂದ ನಿವಾರಿಸಿಕೊಳ್ಳತೊಡಗಿದ್ದಾರೆ. ಕನ್ನಡ ಭಾಷೆಯ ಸಂದರ್ಭದಲ್ಲಿ ಸ್ತ್ರೀ ಸಮಾನತೆಗೆ ಕೊರಳೆತ್ತಿದ ಮೊದಲ ಕಾಲಘಟ್ಟವೆಂದರೆ ಅದು ವಚನ ಚಳವಳಿಯ ಕಾಲಘಟ್ಟ. ಈ ವಿಚಾರವಾಗಿ, ಮೊಲೆ ಮೂಡಿ ಬಂದರೆ ಹೆಣ್ಣೆಂಬರು.. ಎಂಬ ವಚನವನ್ನು ಮಾತ್ರ ಪದೇ ಪದೇ ಬಳಸಿ ಆತ್ಮದ ಪರಿಕಲ್ಪನೆಯಲ್ಲಿ ಸಮಾನತೆ ಬಗ್ಗೆ ಮಾತು ಹರಿಸುತ್ತೇವೆ. ಆದರೆ ಈ ಆತ್ಮದ ಪರಿಕಲ್ಪನೆಯನ್ನೇ ಪ್ರಶ್ನಿಸಿದಂತೆ ಹಲವು ಜನ ಶರಣ-ಶರಣೆಯರು ಮಾತನಾಡಿದ್ದರ ಬಗ್ಗೆ ಉಲ್ಲೇಖವೇ ಇರುವುದಿಲ್ಲ. ಢಕ್ಕೆಯ ಮಾರಯ್ಯನ ಒಂದು ವಚನ ಇಂತಿದೆ;

ಸತಿಯ ಗುಣ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೇ?
ಪತಿಯಿಂದ ಬಂದ ಸೋಂಕು ಸತಿಗೆ ಕೇಡಲ್ಲವೇ?
ಒಂದಂಗದ ಕಣ್ಣು ಉಭಯದಲ್ಲಿ ಬಂದು ಹಿಂಗಲಿಕ್ಕೆ
ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರ ಲಿಂಗಕ್ಕೆ ಸಲೆ ಸಂದಿತ್ತು.

ಇಲ್ಲಿ ಗಂಡ-ಹೆಂಡಿರಲ್ಲಿ ಮೇಲು-ಕೇಳು ತರತಮತೆ ಸಲ್ಲದು ಎಂಬುದನ್ನು ಹೇಳುತ್ತಲೆ, ಇಬ್ಬರ ಸಾಮರಸ್ಯದ ಸಮಾನಶೀಲತೆಯ ಬಗ್ಗೆ ಮಾತನಾಡಿದ್ದಾನೆ ಮಾರಯ್ಯ. ಕಣ್ಣಿನ ರೂಪಕದ ಮೂಲಕ ಸಂಸಾರದಲ್ಲಿ ಉಂಟಾಗಬಹುದಾದ ಬಿರುಕಿನ ಭಂಗದ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬ ಭಾವದ ತಿಳಿವಳಿಕೆ ಇದು. ಇಲ್ಲಿ ಹಿತವಾಗುವುದು ಶಿವನಿಗೆ; ಶಿವ ಅಂದರೆ ಸತ್ಯ, ಸುಂದರ, ಮಂಗಳ ಎಂಬ ಅರ್ಥಗಳಿವೆ. ಈ ಮೂರು ಅರ್ಥಗಳು ಸಮಾಜಕ್ಕೆ ಹಿತವನ್ನು ಹಾರೈಸುವ ದೃಷ್ಟಿ ಧೋರಣೆಯವು. ಮಾರಯ್ಯನ ಕಣ್ಣಿನ ರೂಪಕ ಹೇಳುವುದು ಇದೇ ಅನುಭವದ ಸಾರವನ್ನು. ಗಂಡ ಹೆಂಡಿರ ಭಂಗದಿಂದ ಸಂಸಾರ ಕೆಡುವುದಷ್ಟೇ ಅಲ್ಲ ಸಮಾಜದ ಹಿತವೂ ಕೆಡುತ್ತದೆ. ಕುಟುಂಬದ ಕಲ್ಯಾಣವೆಂದರೆ ಅದು ಕಲ್ಯಾಣರಾಜ್ಯದ ಬಿತ್ತಮೂಲದ ಬೆಳಸು. ಇದು ಲಿಂಗಾಯತದ ಸಮಾನತೆಯ ಪೂರ್ಣತ್ವ ಕುರಿತ ಅಧ್ಯಾತ್ಮಿಕ ಪರಿಕಲ್ಪನೆಯ ದಾರಿದೀಪದ ಚಿಂತನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.