ADVERTISEMENT

ಲಿಂಗಾಯತದ ಅಧ್ಯಾತ್ಮ ಜೀವಿಗೆ

ಎಸ್.ಜಿ.ಸಿದ್ದರಾಮಯ್ಯ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಲಿಂಗಾಯತದ ಅಧ್ಯಾತ್ಮ ಜೀವಿಗೆ
ಲಿಂಗಾಯತದ ಅಧ್ಯಾತ್ಮ ಜೀವಿಗೆ   

ಹಿಂದೂ ಧರ್ಮವೆಂದು ಕರೆದುಕೊಳ್ಳುತ್ತಿರುವ ವೈದಿಕದ ಪ್ರಮಾಣುದಂಡ ಚಾತುವರ್ಣವಾದರೆ ಅದರ ಚಿಂತನೆಯ ಹೊಂಡ ಚತುರ್ವಿಧ. ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಗಳು ಚಾತುವರ್ಣಗಳಾದರೆ ವೇದ ಆಗಮ ಶಾಸ್ತ್ರ ಪುರಾಣಗಳು ಅದರ ಚತುರ್ವಿಧಗಳು. ಯಾರು ಈ ವರ್ಣ ಮತ್ತು ವಿಧಗಳನ್ನು ವಿರೋಧಿಸಿದರೋ ಅವರೆಲ್ಲರೂ ವೈದಿಕ ವಿರೋಧಿಗಳಾದರು. ಅವರು ಕಟ್ಟಿಕೊಂಡ ಮಾರ್ಗಗಳು ಪರ‍್ಯಾಯ ಧರ್ಮಗಳೇ ಆದವು. ಲಿಂಗಾಯತ ಧರ್ಮ ಅಂತಹ ಒಂದು ಪರ‍್ಯಾಯ ಧರ್ಮ. ಹಡಪದ ಅಪ್ಪಣ್ಣನವರ ವಚನವೊಂದು ಇಂತಿದೆ.

ವೇದವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ ನಾಹಂ ಎಂದು ಅಹಂಕರಿಸಿ ಅನಿತ್ಯ ದೇಹಿಗಳಾಗಿ ಅನಾಮಿಕರಾಗಿ ಹೋದರು ಶಾಸ್ತ್ರವನೋದಿದವರೆಲ್ಲಾ ನಮ್ಮ ಶರಣರು ಹೋದ ಹಾದಿಯನರಿಯದೆ ಶ್ರವಣ ಸನ್ಯಾಸಿ ಯೋಗಿ ಜೋಗಿಯಾಗಿ ಹೀಗೆ ಕೆಲಬರು ಕೆಟ್ಟರು ಆಗಮವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ ಕ್ರಿಯಾಪಾದ ಚರ್ಯಪಾದ ಜ್ಞಾನಪಾದವೆಂದು ನಾನಾಪರಿಯ ಕರ್ಮ ಭಕ್ತಿಯ ಮಾಡಿ ಲಿಂಗಜಂಗಮದ ಮರ್ಮವನರಿಯದೆ ಅಧರ್ಮಿಗಳಾಗಿ ಹೋದರು.

ಪುರಾಣವನೋದಿದವರೆಲ್ಲಾ ನಮ್ಮ ಪುರಾತನರು ಹೋದ ಹಾದಿಯನರಿಯದೆ ಪುರದ ಬೀದಿಯೊಳಗೆ ಮಾತುಕತೆಯ ಪಸಾರವನಿಕ್ಕಿ ಮಾಡಿ ಫಲಪ್ರದ ಮುಕ್ತಿಗೆ ಸಲ್ಲದೇ ಹೋದರು.

ADVERTISEMENT

ಇದು ಕಾರಣ ಈ ಚತುರ್ವಿಧದೊಳಗಾವಂಗವೂ ಅಲ್ಲ

ಎಮ್ಮ ಬಸವಪ್ರಿಯ ಕೂಡಲ ಚನ್ನಬಸವಣ್ಣ ಶರಣರ ಪರಿ ಬೇರೆ

ಈ ವಚನ ಸ್ಪಷ್ಟ ಮಾತುಗಳಲ್ಲಿ ವೇದ ಶಾಸ್ತ್ರ ಆಗಮ ಪುರಾಣಗಳ ಬಗ್ಗೆ ತಿರಸ್ಕಾರವನ್ನು ತೋರುತ್ತಾ ಶರಣರ ಪರಿ ಬೇರೆ ಎಂದು ಹೇಳುತ್ತಿದೆ.

ಅಂಗವೇ ಗುರು ಲಿಂಗವೇ ಪ್ರಾಣ ಸಂಗಮವೇ ಜಂಗಮ ಸಮರಸವೇ ಪ್ರಸಾದ ಈ ಚತುರ್ವಿಧವು ಒಂದಂಗ ಈ ಚತುರ್ವಿಧವ‌ ಶೃತಿಸ್ಮೃತಿಗಳರಿಯವು, ನಮ್ಮ ಶರಣ ಬಲ್ಲ.

ಆ ಶರಣನೇ ಶಿವನವಾ -ಎಂದು ಲಿಂಗಾಯತ ಧರ್ಮದ ಚತುರ್ವಿಧ ಪರ‍್ಯಾಯಗಳ ಬಗ್ಗೆ ತಿಳಿ ಹೇಳಿದ್ದಾರೆ ಹಡಪದ ಅಪ್ಪಣ್ಣಗಳು. ವೈದಿಕ ಧರ್ಮವು ತನಗೆ ವಿರುದ್ಧವಾದವುಗಳನ್ನು ಎರಡು ರೀತಿಯಲ್ಲಿ ಪರಿಹರಿಸಿಕೊಂಡಿದೆ. ಒಂದು ದೇಶದಿಂದ ಹೊರಕ್ಕೆ ಓಡಿಸುವುದರ ಮೂಲಕ, ಇದಕ್ಕೆ ಬೌದ್ಧ ಧರ್ಮ ದೊಡ್ಡ ಉದಾಹರಣೆ. 

ಇನ್ನೊಂದು ವಾತಾಪಿ ಜೀರ್ಣೋಭವ ಎಂಬ ವಸಿಷ್ಠ ಮಾರ್ಗದ ಮೂಲಕ, ಇದಕ್ಕೆ ಲಿಂಗಾಯತವೇ ಉದಾಹರಣೆ. ಆದರೆ ಲಿಂಗಾಯತದ ಗರಿಕೆ ಬೇರಿನ ಸತ್ವಶೀಲ ವಚನಗಳು ವಸಿಷ್ಠ ಉದರವನ್ನೂ ಭೇದಿಸಿ ಹೊರಬಂದಿರುವ ಪರ‍್ಯಾಯಪೂರ್ಣ ದಾರಿದೀವಿಗೆಗಳು. ಸಂದೇಹದಿಂದ ಮುಂದುಗಾಣದೆ ದೈವದ ಅವತಾರಗಳನ್ನು ಕಲ್ಪಿಸಿಕೊಂಡು ಹೊರೆವ ವೈದಿಕಕ್ಕೆ ತಿರೋಹಿತ ಭಾವದಲ್ಲಿ ಗಂಡಳಿದು ಹೆಣ್ಣಾಗಬೇಕು, ಹೆಣ್ಣಳಿದು ಗಂಡಾಗಬೇಕು, ಉಂಡೆನುಟ್ಟೆನೆಂಬ ಹಂಗಳಿದು ಈ ಲೋಕದ ಸಂದೇಹವಳಿದವರೇ ನಿಜಶರಣರು ಎಂದು ಶರಣ ಧರ್ಮದ ನಡೆಯ ಬಗ್ಗೆ ತಿಳಿಹೇಳಿದ್ದಾರೆ ಅಪ್ಪಣ್ಣ. ಇದು ಲಿಂಗಾಯತದ ಅಧ್ಯಾತ್ಮ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.