ADVERTISEMENT

ಪ್ರೇಮಪಥದ ಯಾತನೆಗಳು

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST
ಪ್ರೇಮಪಥದ ಯಾತನೆಗಳು
ಪ್ರೇಮಪಥದ ಯಾತನೆಗಳು   

ಪ್ರೇಮಪಥದ ಹುತಾತ್ಮರಿಗೆ ಸಲ್ಲುವ ಪಾರಮಾರ್ಥಿಕ ಗೌರವಗಳು, ಸ್ವರ್ಗದ ಸವಲತ್ತುಗಳನ್ನು ದೇವರೇ ಖುದ್ದಾಗಿ ಒದಗಿಸುತ್ತಾನೆಂದೂ, ಅವನಿಂದ ಎಂದೆಂದಿಗೂ ದೂರ ಅಗಲಲಾರರೆಂದೂ ಸೂಫಿಗಳು ಬಲವಾಗಿ ನಂಬುತ್ತಾರೆ. ಈ ಅಭಿಪ್ರಾಯ ಸೂಫಿಗಳಲ್ಲಿ ಬಲವಾಗಿರುವುದರಿಂದ ಅಲ್ಲಾಹನ ಸಲುವಾಗಿ ಯಾವುದೇ ರೀತಿಯ ತೀವ್ರಯಾತನೆಗಳನ್ನು ಸಹಿಸುವುದಕ್ಕೆ ತಯಾರಾಗಿರುತ್ತಾರೆ. ಈ ಯಾತನೆಗಳನ್ನು ಸಹಿಸಿಕೊಳ್ಳುವುದು ಮಾತ್ರವಲ್ಲ, ಇದು, ದೇವರು ತಮಗೆ ತೋರುವ ವಿಶೇಷ ಕರುಣೆಯ ಚಿನ್ಹೆಯಾಗಿದೆ ಎಂದೂ ಪರಿಗಣಿಸುತ್ತಾರೆ!

ಮಿತ್ರನ (ದೇವರ) ಹೊಡೆತಗಳನ್ನು ಸಹಿಸಿಕೊಂಡು ಯಾರು ಖುಶಿಪಟ್ಟುಕೊಳ್ಳುವುದಿಲ್ಲವೋ ಅವನು ತನ್ನ ಪ್ರೇಮದಲ್ಲಿ ಪ್ರಾಮಾಣಿಕನಲ್ಲವೆಂದು ತೀರ್ಮಾನಿಸಲಾಗುತ್ತದೆ. ಇದಷ್ಟೇ ಅಲ್ಲ, ಪ್ರೇಮದಲ್ಲಿ ಪ್ರಾಮಾಣಿಕನಾಗಿರುವವನೆಂದರೆ ತನಗೆ ಎದುರಾದ ಸಂಕಷ್ಟಗಳನ್ನು ಮರೆತು ಮತ್ತೆ ದೇವರನ್ನು ನೆನೆಯುತ್ತಿರುವವನು ಎನ್ನಲಾಗಿದೆ. ಇದನ್ನು ಸೂಫಿಗಳು ವೈದ್ಯನೊಬ್ಬ ರೋಗಿಯ ದೇಹವನ್ನು ಗಾಯಗೊಳಿಸಿ ರೋಗವನ್ನು ಗುಣಪಡಿಸುವುದನ್ನು ಉದಾಹರಿಸಿ ಹೇಳುತ್ತಾರೆ. ಗಾಯವನ್ನು ಯಾರು ಮಾಡಿದ್ದಾನೋ ಆತನೇ ಅದನ್ನು ಗುಣಪಡಿಸಬಲ್ಲ! ಯಾತನೆಗಳು ಸಂಕಷ್ಟಗಳು ದೇವರು ಹತ್ತಿರವಾಗಿದ್ದಾನೆ ಎನ್ನುವುದಕ್ಕೆ ನಿದರ್ಶನವೆಂದು ತಿಳಿಯಲಾಗುತ್ತದೆ.

ಸಂತ ಹಲ್ಲಾಜ ನೇರವಾಗಿ ಹೇಳುತ್ತಾರೆ, ‘ಯಾತನೆ, ಸಂಕಷ್ಟಗಳೆಂದರೆ ಖುದ್ದು ಅವನೇ ಆಗಿದ್ದಾನೆ’. ಅವನು ಯಾರನ್ನು ಹೆಚ್ಚು ಪ್ರೀತಿಸುತ್ತಾನೋ ಅವರನ್ನು ಪರೀಕ್ಷಿಸುವ ಸಲುವಾಗಿ ಹೆಚ್ಚು ಯಾತನೆ, ಸಂಕಷ್ಟಗಳಿಗೆ ಒಳಪಡಿಸುತ್ತಾನೆ. ಅವನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗುವರಲ್ಲಿ ಪ್ರವಾದಿಗಳು ಮೊದಲಿಗರು, ನಂತರ ಅವನ ಗೆಳೆಯರೆಂದು ಪರಿಗಣಿಸಲ್ಪಟ್ಟ ಸಂತರು, ತದನಂತರ ಉಳಿದವರು. ಸೂಫಿಗಳಲ್ಲಿ ಸಾಮಾನ್ಯವಾಗಿ ಪ್ರಚಾರದಲ್ಲಿರುವ ಒಂದು ಮಾತೆಂದರೆ, ‘ಪ್ರವಾದಿಗಳು ಅವನ ಸನಿಹವಾಗಿರುವವರು, ಆದುದರಿಂದ ಅವರು ಹೆಚ್ಚು ಯಾತನೆಗಳನ್ನು ಸಹಿಸಿಕೊಳ್ಳುವವರೂ ಸಂಕಷ್ಟಗಳನ್ನು ಎದುರಿಸುವವರೂ ಆಗಿದ್ದಾರೆ’.

ADVERTISEMENT

ಗೋದಿಯನ್ನು ಕುಟ್ಟಿ ಪುಡಿಮಾಡಿ, ಹಿಟ್ಟಾಗಿಸಿ ಗುದ್ದಿ ಹದಗೊಳಿಸಿ ತಟ್ಟಿ, ಸುಟ್ಟು ರೊಟ್ಟಿ ಮಾಡಿದಂತೆ, ಮನುಷ್ಯನ ಆತ್ಮವು ಸಂಕಷ್ಟಗಳಿಗೆ ಈಡಾದರೆ ಮಾತ್ರ ಹದಗೊಂಡು ಪಕ್ವವಾಗುತ್ತದೆ. ಹಾಗೆಯೇ ವಿರಕ್ತನೊಬ್ಬ ದೇವರ ಪ್ರೀತಿ, ಕರುಣೆ, ದಯೆ (ರಹ್‍ಮಾ) ಪಡೆಯಬೇಕಿದ್ದರೆ ಪ್ರೇಮಪಥದಲ್ಲಿ ನೋವು, ಯಾತನೆಗಳನ್ನು ಸಹಿಸಿಕೊಳ್ಳಬೇಕು.

ಹೀಗೆ ಯಾತನೆ, ಸಂಕಷ್ಟಗಳನ್ನು ಹಾದು ಬಂದ ಮನುಷ್ಯ ಪರಿಪೂರ್ಣತೆಯನ್ನು ಪಡೆಯುತ್ತಾನೆ. ಈ ವಿಚಾರವು ನಂತರದ ಸೂಫಿ ಕವಿಗಳ ಮೇಲೆ ಹೆಚ್ಚು ಪ್ರಭಾವ ಬೀರಿತು. ಹತ್ತನೆಯ ಶತಮಾನಕ್ಕಿಂತ ಹಿಂದೆ ಅಧ್ಯಾತ್ಮ ಪ್ರೇಮ ಮತ್ತು ಹಂಬಲದ ಚರ್ಚೆಗಳು ಮುಖ್ಯವಾಗಿ ಸೈದ್ಧಾಂತಿಕ ನೆಲೆಯಲ್ಲಿ ನಡೆಯುತ್ತಿದ್ದವು. ‌‘ಮಹಬ್ಬಾ’ ಅಥವಾ ಪ್ರೇಮವೆಂಬ ಶಬ್ದದ ಪ್ರಯೋಗಕ್ಕೆ ಸಂಪ್ರದಾಯವಾದಿ ಸೂಫಿಗಳು ವಿರೋಧಿಸುತ್ತಿದ್ದರು. ಇದರಿಂದಾಗಿ ನಂತರದ ಸೂಫಿಗಳು ಮತ್ತು ಸೂಫಿ ಕವಿಗಳು ‘ಇಷ್ಕ್’ (ಉತ್ಕಟ ಪ್ರೇಮ) ಎಂಬ ಶಬ್ದವನ್ನು ಉಪಯೋಗಿಸಲು ಪ್ರಾರಂಭಿಸಿ, ಹೆಚ್ಚಾಗಿ ದೇವರು ಮತ್ತು ಮನುಷ್ಯರ ನಡುವಿನ ಅಧ್ಯಾತ್ಮ ಸಂಬಂಧಕ್ಕೆ ಪ್ರಯೋಗಿಸತೊಡಗಿದರು. ಈ ಶಬ್ದದ ಬಳಕೆಯನ್ನು ಕೂಡ ಸಂಪ್ರದಾಯಸ್ಥ ಸೂಫಿಗಳು ವಿರೋಧಿಸಿದರು, ಯಾಕೆಂದರೆ ಇಷ್ಕ್ ಕೂಡ ಉತ್ಕಟವಾದ, ಅತಿರೇಕದ ಹಂಬಲವನ್ನು ಪ್ರತಿನಿಧಿಸುತ್ತದೆ. ದೇವರು ಮತ್ತು ಭಕ್ತರ ನಡುವೆ ಇದು ಹೇಗೆ ಸಾಧ್ಯವಾಗುತ್ತದೆ? ಮನುಷ್ಯನು ದೇವರನ್ನು ಈ ರೀತಿಯಲ್ಲಿ ಬಯಸುವುದು ತರವಲ್ಲವೆಂಬುದು ಅವರ ವಾದವಾಗಿತ್ತು. ಕವಿಗಳು ಈ ಪದಪ್ರಯೋಗವನ್ನು ಹೆಚ್ಚುಹೆಚ್ಚಾಗಿ ಬಳಸಿ ಜನಪ್ರಿಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.