ADVERTISEMENT

ತನು ಮನ ಧನ - ಅಧ್ಯಾತ್ಮ ಯೋಗ

ಎಸ್.ಜಿ.ಸಿದ್ದರಾಮಯ್ಯ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ತನು ಮನ ಧನ - ಅಧ್ಯಾತ್ಮ ಯೋಗ
ತನು ಮನ ಧನ - ಅಧ್ಯಾತ್ಮ ಯೋಗ   

ದಾನ-ಧರ್ಮ-ಸಮರ್ಪಣೆ ಈ ವಿಚಾರಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ನಾವು ಬಳಸುವ ಪ್ರಯೋಗ ತನು-ಮನ-ಧನ ಎಂಬ ತ್ರಿವಿಧಗಳ ವಿಚಾರ. ಇದು ಎಷ್ಟು ರೂಢಿಗತವಾಗಿದೆ ಅಂದರೆ, ತನು ಮನ ಧನ ಪೂರ್ಣವಾಗಿ ಸೇವೆಗೆ ಸಮರ್ಪಿಸಿಕೊಂಡರು ಎಂದು ಸಲ್ಲದವರಿಗೆಲ್ಲಾ ಪ್ರಯೋಗಿಸುತ್ತೇವೆ. ಆದರೆ ಶರಣ ಧರ್ಮದಲ್ಲಿ ತನು-ಮನ-ಧನಕ್ಕೆ ಸಂಬಂಧಿಸಿದಂತೆ ತ್ರಿವಿಧ ರೂಪದ ಸಂಪಾದನೆಗಳಿವೆ.

ಆ ಸಂಪಾದನೆಗಳು ಆ ಮೂಲ ವಸ್ತುಗಳನ್ನು ಅವುಗಳ ಮೂಲ ರೂಪದಲ್ಲಿ ಉಳಿಸದೆ ಪರಿವರ್ತಿತ ಪರಿಸ್ಥಿತಿಯಲ್ಲಿ ಪರಿಷ್ಕರಿಸಿರುತ್ತವೆ. ಹೀಗಾಗಿ ಸಂಪಾದನೆ ಸ್ವಾರ್ಥದ ಬಳಕೆಗೆ ಸೀಮಿತವಾಗದೆ ಪರಾರ್ಥದ ವಿನಿಯೋಗದಲ್ಲಿ ಪರಮ ಸ್ವರೂಪಿಯಾಗುತ್ತದೆ. ಈ ವಿಚಾರವಾಗಿ ಉರಿಲಿಂಗ ಪೆದ್ದಿಗಳ ಒಂದು ವಚನ ಇಂತಿದೆ :

ತನು ತನ್ನದಾದಡೆ ದಾಸೋಹಕ್ಕೆ ಕೊರತೆಯಿಲ್ಲ
ದಾಸೋಹ ಸಂಪೂರ್ಣ, ದಾಸೋಹವೇ ಮುಕ್ತಿ.
ಮನ ತನ್ನದಾದಡೆ ಜ್ಞಾನಕ್ಕೆ ಕೊರತೆಯಿಲ್ಲ
ಜ್ಞಾನ ಸಂಪೂರ್ಣ ಆ ಜ್ಞಾನವೇ ಮುಕ್ತಿ
ಧನ ತನ್ನದಾದಡೆ ಭಕ್ತಿಗೆ ಕೊರತೆಯಿಲ್ಲ
ಭಕ್ತಿ ಸಂಪೂರ್ಣ ಭಕ್ತಿಯಲ್ಲಿ ಮುಕ್ತಿ
ತನು ಮನ ಧನವೊಂದಾಗಿ ತನ್ನದಾದಡೆ
ಗುರುಲಿಂಗ ಜಂಗಮವೊಂದೆಯಾಗಿ ತಾನಿಪ್ಪನು
ಬೇರೆ ಮುಕ್ತಿ ಎಂತಪ್ಪುದಯ್ಯಾ?
ಉರಿಲಿಂಗ ಪೆದ್ದಿ ಪ್ರಿಯ ವಿಶ್ವೇಶ್ವರ.

ADVERTISEMENT

ಈ ವಚನ ಇಡೀ ಲಿಂಗಾಯತ ಜೀವನ ಧರ್ಮದ ಕಡೆ ಬೆರಳು ತೋರಿ ಮಾತಾಡಿದೆ. ಇಲ್ಲಿ ತನು-ಮನ-ಧನ ಗಳು ತನ್ನದಾಗುವ ಬಗ್ಗೆ ಮಾತಿದೆ. ತನು ತನ್ನದಾಗುವುದೆಂದರೆ ತನುವಿಕಾರಕ್ಕೆಳಸದ ಪರಿಯಲ್ಲಿ ತನುವನ್ನು ತನ್ನಂತೆ ತಾನಿಚ್ಚಿಸಿದಂತೆ ನಿಯೋಗಿಸುವುದು. ಕಾಯಕ ಸಂಬಂಧದ ಅರ್ಥಾತ್ ಶ್ರಮ ಸಂಬಂಧದ ನಿಯೋಗವಿದು. ಸತ್ಯ ಶುದ್ಧ ಕಾಯಕ ಜೀವಿಯ ಕಾಯವೇ ಕೈಲಾಸ ಸ್ವರೂಪಿಯಾದುದು. ಇಂಥ ಕಾಯಕದ ಉತ್ಪನ್ನವನ್ನು ಸದ್ವಿನಿಯೋಗಿಸುವುದೇ ದಾಸೋಹ ಧರ್ಮ.

ದಾಸೋಹವೆಂಬುದು ಅಂತರಂಗ ಬಹಿರಂಗಗಳ ಅಹಂ ನೀಗಿ ಕೊಂಡದ್ದು. ಸೋಹಂ ಎಂಬುದು ಅಂತರಂಗದ ಮದ; ಶಿವೋಹಂ ಎಂಬುದು ಬಹಿರಂಗದ ಮದ. ಇವರೆಡನ್ನೂ ನೀಗಿ ಕೊಂಡ ನಿರಹಂಭಾವದ ನಿಲುವೇ ದಾಸೋಹಂ. ಇದೇ ಮುಕ್ತಿ, ಬೇರೆ ಮುಕ್ತಿ ಎಲ್ಲಿದೆ? ಇದು ಉರಿಲಿಂಗಪೆದ್ದಿಯ ಧರ್ಮ ವಿಚಾರ. ಅದೇ ರೀತಿ ಮನ ಧನದ ವಿಚಾರ. ಮನದ ಉತ್ಪನ್ನ ಜ್ಞಾನ, ಧನದ ಉತ್ಪನ್ನ ಭಕ್ತಿ. ಇವು ಸತ್ಯ ಶುದ್ಧ ಗಳಿಕೆಗಳಾದಾಗ ಅದೇ ಸದಾಚಾರ ಮಾರ್ಗ.

ಈ ಸದಾಚಾರ ಸಂಪನ್ನ ಸಂಯೋಗದ ಪರಿಣಾಮವೇ ಗುರುಲಿಂಗ ಜಂಗಮ ಸ್ವರೂಪ ಸ್ಥಿತಿ. ಇದು ವ್ಯಕ್ತಿ ತನ್ನ ವ್ಯಕ್ತಿತ್ವದಲ್ಲಿ ಸಂಪಾದಿಸಿಕೊಳ್ಳಬಹುದಾದ ಪರಮಾತ್ಮ ಯೋಗ. ಇದು ಲಿಂಗಾಯತದ ಅಧ್ಯಾತ್ಮ ಯೋಗ; ಇದೇ ತನು-ಮನ-ಧನಗಳ ನೀತಿಗೂ ಕಾಯ-ಕಾಯಕ-ದಾಸೋಹಗಳ ನೀತಿಗೂ ಇರುವ ಅಂತರ್ ಸಂಬಂಧ. ಅರಿವೇ ಗುರುವಾದಂತೆ ತನ್ನ ತಾನರಿತು ಸತ್ಯಶುದ್ಧ ಶ್ರಮಬದ್ಧ ಬದುಕು ಕಟ್ಟಿಕೊಳ್ಳುವುದೇ ಪರಮ ಗಂತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.