ADVERTISEMENT

ಮಕ್ಕಳಲ್ಲಿ ಮಧುಮೇಹ

ಡಾ.ಆಶಾ ಬೆನಕಪ್ಪ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST
ಮಕ್ಕಳಲ್ಲಿ ಮಧುಮೇಹ
ಮಕ್ಕಳಲ್ಲಿ ಮಧುಮೇಹ   

ನಾನು ಎಂಬಿಬಿಎಸ್ ವಿದ್ಯಾರ್ಥಿನಿ ಆಗಿದ್ದಾಗ, ನನ್ನ ಅಚ್ಚುಮೆಚ್ಚಿನ ಪುಸ್ತಕಗಳಲ್ಲೊಂದು ರಾಬಿನ್ಸ್ ಅವರ ರೋಗಶಾಸ್ತ್ರದ ಕುರಿತಾದ ಪಠ್ಯ ಪುಸ್ತಕ. ಮಧುಮೇಹದ ಕುರಿತು ಓದುವಾಗಲೆಲ್ಲಾ ನನಗೆ ಈ ಮಾರಕ ಕಾಯಿಲೆ ನೀಡಬೇಡವೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ.

ದೇವರು ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಳ್ಳಲಿಲ್ಲ. ನನಗೆ 50 ವರ್ಷವಾದಾಗ ಮಧುಮೇಹ ಇರುವುದು ಗೊತ್ತಾಯಿತು. ಅದೂ ತೀರಾ ಆಕಸ್ಮಿಕ ಸಂದರ್ಭದಲ್ಲಿ. ನಾನು ಆರೋಗ್ಯ ವಿಮೆ ಪಡೆದುಕೊಳ್ಳಲು ಬಯಸಿದ ದಿನವದು. ನಾಲ್ಕು ವರ್ಷದ ಹಿಂದಿನ ಆ ದಿನ ನನಗೆ ಸ್ಪಷ್ಟವಾಗಿ ನೆನಪಿದೆ. 11-11-11ರ ವಿಶಿಷ್ಟ ದಿನಾಂಕವನ್ನು ಜಗತ್ತು ಖುಷಿಯಿಂದ ಆಚರಿಸುತ್ತಿದ್ದ ಗಳಿಗೆ ನನ್ನ ಪಾಲಿಗೆ ಕೆಟ್ಟ ದಿನ.

ಸಕ್ಕರೆ ಕಾಯಿಲೆ ನಿಯಂತ್ರಿಸಲಾಗದೆ ಡಾ. ದ್ವಾರಕನಾಥ್ ಅವರ ಮಧುಮೇಹ ಕ್ಲಿನಿಕ್‌ನಲ್ಲಿ ಕಾದು ಕುಳಿತಿದ್ದೆ. ಪಥ್ಯಾಹಾರ ಅಭ್ಯಾಸ ಮತ್ತು ಔಷಧಗಳಿಂದ ನನ್ನ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದ ಅವರು, ನಾನು ತಪ್ಪಿಸಿಕೊಳ್ಳಲು ಹಟ ಮಾಡುತ್ತಿದ್ದ ಪ್ರತಿದಿನದ ಇನ್ಸುಲಿನ್ ಚುಚ್ಚುಮದ್ದನ್ನು ಪ್ರಾರಂಭಿಸಿದರು.

ನಾನು ಅವರ ಮುಂದೆಯೇ ಎಳೆ ಮಗುವಿನಂತೆ ಅತ್ತೆ. ಈ ಕಾಯಿಲೆ ನನ್ನನ್ನು ಖಿನ್ನತೆಗೆ ನೂಕಿತು. ಹೆಚ್ಚೂಕಡಿಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಃಸ್ಥಿತಿಯೂ ಉಂಟಾಯಿತು.

ಜನರು ವಂಶಪಾರಂಪರ್ಯವಾಗಿ ಸಂಪತ್ತನ್ನು ಪಡೆದುಕೊಂಡರೆ, ನಾನು ನನ್ನ ಕುಟುಂಬದ ಕೆಟ್ಟ ವಂಶವಾಹಿನಿಯಿಂದ ವಂಶಪಾರಂಪರ್ಯವಾಗಿ ಪಡೆದದ್ದು ಮಧುಮೇಹ ಎಂಬ ಮಾರಕ ಕಾಯಿಲೆಯನ್ನು.

ಮಧುಮೇಹ ಒಂದು ರಾಸಾಯನಿಕ ಕಾಯಿಲೆ. ಈ ರೋಗದಿಂದ ಬಳಲುವ ಜನರು ನೋಡಲು ಆರೋಗ್ಯವಂತರಾಗಿಯೇ ಕಾಣಿಸುತ್ತಾರೆ. ಸೂಕ್ತವಾದ ಚಿಕಿತ್ಸೆ ಇಲ್ಲದಿದ್ದಾಗ ಮಾತ್ರ ಇದು ಚೇತರಿಸಿಕೊಳ್ಳಲು ಸಾಧ್ಯವಾಗದಂತೆ ಬೇರೂರುತ್ತದೆ ಹಾಗೂ ಈ ಮಾರಣಾಂತಿಕ ಕಾಯಿಲೆ ಸಾವಿನವರೆಗೂ ಕೊಂಡೊಯ್ಯುತ್ತದೆ.

ಇಷ್ಟಕ್ಕೂ ಮಧುಮೇಹ ಎಂದರೆ ಏನು? ಅದೊಂದು ದೀರ್ಘಕಾಲದ ಕಾಯಿಲೆಯಾಗಿದ್ದು, ಮೇದೋಜೀರಕ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸದಿದ್ದಾಗ ಅಥವಾ ಅದು ಉತ್ಪಾದಿಸಿದ ಇನ್ಸುಲಿನ್ ಅನ್ನು ಪರಿಣಾಮಕಾರಿ ಆಗಿ ಬಳಸಿಕೊಳ್ಳಲು ದೇಹಕ್ಕೆ ಸಾಧ್ಯವಾಗದಿದ್ದಾಗ ಅದು ನಮ್ಮನ್ನು ಆವರಿಸುತ್ತದೆ. ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಹಾರ್ಮೋನು.

ರಕ್ತದಲ್ಲಿನ ಸಕ್ಕರೆ ಅಂಶದ ಹೆಚ್ಚಳ ದೇಹದ ಅನೇಕ ವ್ಯವಸ್ಥೆಗಳಿಗೆ ಗಂಭೀರ ಸ್ವರೂಪದ ಹಾನಿಯುಂಟು ಮಾಡುತ್ತದೆ.ಮಧುಮೇಹವನ್ನು ರಾಬಿನ್ಸ್ `ಟ್ರೈಪಥಿ~ (ಮೂರು) ಕಾಯಿಲೆಯೆಂದು ವಿವರಿಸುತ್ತಾರೆ; ರೆಟಿನೊಪಥಿ (ಕಣ್ಣುಗಳು), ನೆಪ್ರೊಪಥಿ (ಮೂತ್ರಕೋಶ) ಮತ್ತು ನ್ಯೂರೊಪಥಿ (ನರಗಳು). ಇದು ಗಣಿತದ ಭಿನ್ನರಾಶಿಯ ರೂಪವಾದರೆ, ವಸ್ಕ್ಯುಲೊಪಥಿ (ರಕ್ತನಾಳಗಳು) ಅದರ ಛೇದವಿದ್ದಂತೆ.

ಮಧುಮೇಹದಲ್ಲಿ ಮೂರು ವಿಧ. ಮೊದಲನೆಯದು, ಇನ್ಸುಲಿನ್ ಅವಲಂಬಿತವಾಗಿರುವ, ಇನ್ಸುಲಿನ್ ಕೊರತೆ ಅನುಭವಿಸುವ ಮತ್ತು ಪ್ರತಿದಿನವೂ ಇನ್ಸುಲಿನ್ ಬಳಕೆ ಅನಿವಾರ್ಯ ಆಗಿರುವಂಥದ್ದು. ಇದಕ್ಕೆ ಕಾರಣ ಪತ್ತೆ ಹಚ್ಚುವುದು ಸಾಧ್ಯವಿಲ್ಲ ಮತ್ತು ಇದನ್ನು ಇದುವರೆಗಿನ ವೈದ್ಯಕೀಯ ವಿಜ್ಞಾನದಲ್ಲಿ ತಡೆಯಲು ಸಾಧ್ಯವಾಗಿಲ್ಲ.

ಮೂತ್ರ ಅತಿಯಾಗಿ ವಿಸರ್ಜನೆಯಾಗುವುದು (ಪಾಲ್ಯೂರಿಯಾ), ಪದೇ ಪದೇ ಬಾಯಾರಿಕೆ ಆಗುವುದು (ಪಾಲಿಡಿಪ್ಸಿಯಾ), ಹೆಚ್ಚು ಆಹಾರ ಸೇವನೆ (ಪಾಲಿಫಾಗಿಯಾ), ಅಧಿಕ ಪ್ರಮಾಣದಲ್ಲಿ ತಿಂದರೂ ತೂಕ ಕಳೆದುಕೊಳ್ಳುವುದು, ದೃಷ್ಟಿದೋಷ ಮತ್ತು ಅತೀವ ಆಯಾಸ, ಇದು ಇದರ ಲಕ್ಷಣಗಳು.

ಎರಡನೇ ವಿಧದ ಮಧುಮೇಹ ಬರುವುದು ಇನ್ಸುಲಿನ್ ದೇಹದಲ್ಲಿ ಪರಿಣಾಮಕಾರಿ ಆಗದಿದ್ದಾಗ. ಇದು ಪ್ರಪಂಚದ ಶೇ 90ರಷ್ಟು ಮಧುಮೇಹಿಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚಾಗಲು ಕಾರಣ ದೇಹದ ಅಧಿಕ ತೂಕ ಮತ್ತು ದೈಹಿಕ ಚಟುವಟಿಕೆಗಳ ಕೊರತೆ. ಇದರ ಲಕ್ಷಣಗಳನ್ನು ಗುರುತಿಸುವುದು ಕಷ್ಟಕರ.

ರೋಗದ ಸಮಸ್ಯೆಗಳು ವೃದ್ಧಿಗೊಂಡು ಸಂಕೀರ್ಣಗೊಂಡಾಗಲೇ ಇದನ್ನು ಗುರುತಿಸಲು ಸಾಧ್ಯವಾಗುವುದು. ವಯಸ್ಕರಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಬಗೆಯ ಮಧುಮೇಹ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಕಂಡುಬರುತ್ತಿದೆ.

ಮೂರನೇ ಮಧುಮೇಹ ಗರ್ಭಾವಸ್ಥೆಯ ಮಧುಮೇಹ. ರಕ್ತದಲ್ಲಿನ ಸಕ್ಕರೆ ಹೆಚ್ಚಳದ (ಹೈಪರ್‌ಗ್ಲಿಕೇಮಿಯಾ) ಪರಿಣಾಮವಾಗಿದ್ದು, ಗರ್ಭಿಣಿಯಾದಾಗ ಇದು ಪತ್ತೆಯಾಗುತ್ತದೆ. ಇದರ ಲಕ್ಷಣಗಳು ಮಾಮೂಲಿ ಮಧುಮೇಹದಂತೆಯೇ ಇದ್ದು, ಗರ್ಭಾವಧಿಯ ಸಮಯದಲ್ಲಿ ಗೋಚರಿಸುತ್ತದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು ಆಗುವ ಸುಮಾರು 1500 ಪ್ರಸವಗಳಲ್ಲಿ 10ಕ್ಕೂ ಹೆಚ್ಚು ಈ ಬಗೆಯ ಮಧುಮೇಹ ಪ್ರಕರಣವಿರುತ್ತದೆ.

ಸಹಜ ಆರೋಗ್ಯ ಮತ್ತು ಮಧುಮೇಹದ ನಡುವಿನ ಪಲ್ಲಟಗಳು ನಡೆಯುತ್ತವೆ. ಅದು ಮಧುಮೇಹದ ಸಂಕ್ರಮಣ. ಈ ಸ್ಥಿತಿ ಹೆಚ್ಚಾಗಿ ಕಂಡುಬರುವುದು ದುರ್ಬಲ ಗ್ಲುಕೋಸ್ ಸೈರಣೆ (ಐಜಿಟಿ) ಮತ್ತು ರಕ್ತದಲ್ಲಿನ ಸಕ್ಕರೆಯ ಸಾಮರ್ಥ್ಯದ ಕೊರತೆಯಿಂದ. ಇದನ್ನು ಕೆಲವರು ರಾಸಾಯನಿಕ ಮಧುಮೇಹ ಎಂದು ಕರೆಯುತ್ತಾರೆ. ಈ ಪರಿಸ್ಥಿತಿಯು ಜನರು ಆರೋಗ್ಯ ವಿಮೆ ಮಾಡಿಸುವಾಗ ನಡೆಸುವ ಅತಿಮುಖ್ಯ ಆರೋಗ್ಯ ತಪಾಸಣೆ ಸಂದರ್ಭದಲ್ಲಿಯೇ ಗ್ರಹಿಕೆಗೆ ಬರುವುದು.

ಬೆಂಗಳೂರು ವೈದ್ಯಕೀಯ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದಾಗ, ಅಪ್ಪಾಜಿ ಮುಖ್ಯಸ್ಥರಾಗಿದ್ದ ಶಿಶುವೈದ್ಯ ವಿಭಾಗಕ್ಕೆ ಕಳುಹಿಸಲ್ಪಟ್ಟೆ. ಅಲ್ಲಿ ನನಗೆ ಆ ವಿಭಾಗದ ಕಾಫಿ ಕ್ಲಬ್‌ನ ಮೇಲ್ವಿಚಾರಣೆ ಮಾಡುತ್ತಿದ್ದ ವೆಂಕಟೇಶ್ ಬಗ್ಗೆ ಕುತೂಹಲ ಮೂಡಿತು. ಆತ ಮುದ್ದುಮುಖದ ಉತ್ಸಾಹಿ. ಅಪ್ಪಾಜಿ ಆತನ ಕಥೆ ತೆರೆದಿಟ್ಟರು.

ಅರೆಪ್ರಜ್ಞಾವಸ್ಥೆಯಲ್ಲಿ ವೆಂಕಟೇಶ್ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾದಾಗ ಆತನಿಗೆ ಐದು ವರ್ಷ. ಆತನಿಗೆ ಮಧುಮೇಹದ ಮೇಲ್ಮಟ್ಟದ ಸ್ಥಿತಿ ಕೆಟೊಆಸಿಡೊಸಿಸ್ ಡಯಾಬಿಟಿಕ್ ಇರುವುದು ಪತ್ತೆಯಾಯಿತು. ಕನಕಪುರದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ಆತನ ಪೋಷಕರು ಕಾಯಿಲೆಯ ಬಗ್ಗೆ ತಿಳಿದು ಮಾನಸಿಕವಾಗಿ ಕುಸಿದರು.

ಆ ದಿನಗಳಲ್ಲಿ ಇನ್ಸುಲಿನ್ ಅತ್ಯಂತ ದುಬಾರಿಯಾಗಿತ್ತು ಮತ್ತು ಮಧುಮೇಹದಿಂದ ಬಳಲುವ ಮಗುವನ್ನು ನಿರ್ವಹಣೆ ಮಾಡುವ ಪರಿಣಿತರು ಹೆಚ್ಚಿನ ಆಸ್ಪತ್ರೆಗಳಲ್ಲಿ ಇರಲಿಲ್ಲ. ಅಸಿಸ್ಟೆಂಟ್ ಸರ್ಜನ್ ಆಗಿದ್ದ ದಿವಂಗತ ಡಾ.ಟಿ.ಎಸ್. ಮಲ್ಲೇಶ್, ಸ್ವತಃ ಮಧುಮೇಹಿಯಾಗಿದ್ದರು. ಅವರು ಈ ಮಗುವನ್ನು ಸಲಹಿದ್ದು ಮಾತ್ರವಲ್ಲ, ಆತನನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳುವಂತೆ ಅಪ್ಪಾಜಿಯನ್ನು ಒಪ್ಪಿಸಿದರು.

ಇದರಿಂದ ಆತನನ್ನು ನಿಯಮಿತವಾಗಿ ಪರೀಕ್ಷೆ ಮಾಡಲು ಮತ್ತು ಇನ್ಸುಲಿನ್ ನೀಡಲು ಅನುಕೂಲವಾಗಿತ್ತು. ಹೀಗಾಗಿ ವೆಂಕಟೇಶನನ್ನು ಕಾಫಿ ಕ್ಲಬ್‌ನ ಮೇಲ್ವಿಚಾರಕನಾಗಿ ನೇಮಿಸಲಾಯಿತು. ಆತನಿಗೆ ಕಾಫಿ ಮಾಡುವುದು ಹೇಗೆಂದು ಹೇಳಿಕೊಡಲಾಯಿತು. ಕಾಫಿ ಕ್ಲಬ್‌ಗೆ ಸಂಗ್ರಹಿಸಿದ ಹಣದಲ್ಲಿ ಆತನಿಗೆ ಸಂಬಳವನ್ನೂ ನೀಡಲಾಗುತ್ತಿತ್ತು.

ಆತನ ವೈದ್ಯಕೀಯ ವೆಚ್ಚಗಳನ್ನೆಲ್ಲಾ ಡಾ. ಮಲ್ಲೇಶ್ ಮತ್ತು ಅವರ ಸ್ನೇಹಿತರು ನೋಡಿಕೊಳ್ಳುತ್ತಿದ್ದರು. ತನ್ನ ಬದುಕಿಗಾಗಿ ಸ್ವತಃ ಸಂಪಾದನೆ ಮಾಡಿಕೊಳ್ಳುತ್ತೇನೆಂದು ದೃಢನಿಶ್ಚಯ ಮಾಡಿಕೊಂಡಿದ್ದ ವೆಂಕಟೇಶ್ ಉಚಿತ ಆರ್ಥಿಕ ನೆರವನ್ನು ಸ್ವೀಕರಿಸುತ್ತಿರಲಿಲ್ಲ. ಡಾ. ಮಲ್ಲೇಶ್ ಆತನಿಗೆ ಬೆಳಗಿನ ಇನ್ಸುಲಿನ್ ನೀಡಿ, ತಮ್ಮ ಸ್ಕೂಟರ್‌ನಲ್ಲಿ ಒಂದು ಸುತ್ತು ಕರೆದುಕೊಂಡು ಹೋಗಿಬರುತ್ತಿದ್ದದ್ದನ್ನು ನಾನು ನೋಡಿದ್ದೆ.

ಅವರಿಬ್ಬರೂ ತಂದೆ-ಮಗನಂತೆ ಇದ್ದರು. ಕಾಫಿ ಕ್ಲಬ್ ವೆಂಕಟೇಶನ ಮನೆಯಾಗಿತ್ತು.
ನಾನು 1981ರಲ್ಲಿ ಹೌಸ್ ಸರ್ಜನ್ ಆಗಿ ಶಿಶುವೈದ್ಯ ವಿಭಾಗಕ್ಕೆ ಬಂದಾಗ, ವೆಂಕಟೇಶ್‌ನ ಕಾಯಿಲೆ ತಾರಕಕ್ಕೇರಿತ್ತು. ಆತನ ಬಗ್ಗೆ ಮತ್ತು ಕಾಯಿಲೆ ಬಗ್ಗೆ ತಿಳಿದಾಗ ನನಗೆ ಹೃದಯವೇ ಬಾಯಿಗೆ ಬಂದಂತಾಯಿತು.

ಇಂಟರ್ನ್‌ಶಿಪ್ ಅವಧಿಯಲ್ಲಿ ನಮಗೆ ಸ್ಟೈಪೆಂಡ್ ನೀಡಲಾಗುತ್ತಿತ್ತು. ನನಗೆ ತಿಂಗಳಿಗೆ 330 ರೂಪಾಯಿ ಸಿಗುತ್ತಿತ್ತು. ಇಂದು ಇಂಟರ್ನಿಗಳಿಗೆ 15,000 ರೂ ಸಿಗುತ್ತದೆ. ವೆಂಕಟೇಶ್‌ನನ್ನು ಹೊರಗಡೆ ಸುತ್ತಾಟಕ್ಕೆ ನಾನೇ ಕರೆದೊಯ್ಯುತ್ತೇನೆ ಎಂದು ಡಾ. ಮಲ್ಲೇಶ್ ಅವರಿಗೆ ಹೇಳಿದೆ. ಅವರು ಅನುಮತಿ ನೀಡಿದರು.

ಒಮ್ಮೆ ನಾನು ಮತ್ತು ಮಲ್ಲೇಶ್ ಒಟ್ಟಾಗಿ ಹಣ ಹಾಕಿ ಕೊಡಿಸಿದ್ದ ಹೊಸ ಬಟ್ಟೆಯನ್ನು ಈ ಸಂದರ್ಭಕ್ಕಾಗಿ ಧರಿಸಿ ಸಿದ್ಧನಾಗಿದ್ದ. ಆತನಿಗೆ ಕೆನೆಬಣ್ಣದ ಕುತ್ತಿಗೆ ಬಳಿ `ವಿ~ ಆಕಾರದ ಸ್ವೆಟರ್ ಅನ್ನು ತೆಗೆದುಕೊಂಡದ್ದು ನನಗಿನ್ನೂ ನೆನಪಿದೆ. ಈಗ ಕ್ರಿಕೆಟ್ ಆಟಗಾರರು ಈ ಬಗೆಯ ದಿರಿಸನ್ನು ಧರಿಸುತ್ತಾರೆ.

ಡಾ. ಮಲ್ಲೇಶ್ ಕ್ರಿಕೆಟರ್ ಮಾತ್ರವಲ್ಲ, ಕ್ರಿಕೆಟ್ ಪಂದ್ಯಗಳನ್ನು ನೋಡುವುದನ್ನು ಸಂಭ್ರಮಿಸುತ್ತಿದ್ದರು. ಅವರ ಜೊತೆ ಕ್ರಿಕೆಟ್ ವೀಕ್ಷಣೆಗೆ ವೆಂಕಟೇಶ್ ತೆರಳುತ್ತಿದ್ದ. ವೆಂಕಟೇಶ್ ಬಳಿ ಕ್ರಿಕೆಟ್ ಕಾಮೆಂಟರಿ ಕೇಳಲು ಅಂಗೈ ಅಗಲದ ಪುಟ್ಟ ರೇಡಿಯೊ ಇತ್ತು (ಡಾ. ಮಲ್ಲೇಶ್ ಕೊಟ್ಟಿದ್ದು).

ನನ್ನ ಸ್ಟೈಪಂಡ್ ಡ್ರಾ ಮಾಡಿಕೊಂಡು, ಇಡೀ ದಿನದ ಚಟುವಟಿಕೆಗಳಿಗಾಗಿ ಯೋಜನೆ ಹಾಕಿಕೊಂಡೆ. ಪ್ರಕಾಶ್ ಕೆಫೆಯಲ್ಲಿ ಡಾ. ಮಲ್ಲೇಶ್ ಅವರೊಂದಿಗೆ ಊಟ ಮುಗಿಸಿ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿನ ಅಭಿನಯ್ ಚಿತ್ರಮಂದಿರದಲ್ಲಿ ಮ್ಯಾಟನಿ ಷೋಗೆ ತೆರಳಿದೆ. ಆಗಿನ ದಿನಗಳಲ್ಲೇ ಎಸ್ಕಲೇಟರ್ ಹೊಂದಿದ್ದ ಕಾರಣಕ್ಕೆ ಆ ಚಿತ್ರಮಂದಿರ ಪ್ರಸಿದ್ಧವಾಗಿತ್ತು. ಆ ಎಸ್ಕಲೇಟರ್‌ನಲ್ಲಿ ನೂರಾರು ಬಾರಿ ನಾವು ಓಡಾಡಲೇಬೇಕಿತ್ತು. ವೆಂಕಟೇಶ್‌ನ ಆ ಸಂಭ್ರಮ ಇಂದಿಗೂ ನನ್ನ ಕಣ್ಣಮುಂದಿದೆ.

ಡಿಂಪಲ್ ಕಪಾಡಿಯಾ ನಟಿಸಿದ `ಸಾಗರ್~ ಚಿತ್ರ ಅಂದು ಪ್ರದರ್ಶನವಾಗುತ್ತಿತ್ತು. ನೋಡಲು ಅಸಹನೀಯವೆನಿಸುವ ದೃಶ್ಯ ಬಂದಾಗ ನಾನು ವೆಂಕಟೇಶ್ ಕಣ್ಣುಗಳನ್ನು ಮುಚ್ಚುತ್ತಿದ್ದೆ. ಚಿತ್ರ ಮುಗಿದ ಬಳಿಕ ಹತ್ತಿರದಲ್ಲಿದ್ದ ತಿರುಗುವ ಹೋಟೆಲ್‌ಗೆ ಹೋದೆವು. ಇಡೀ ಹೋಟೆಲ್ ತಿರುಗುತ್ತದೆ ಎಂದರೆ ಆ ಮಗುವಿಗೆ ನಂಬಿಕೆಯೇ ಬರುತ್ತಿರಲಿಲ್ಲ. ಹರಟೆ ಹೊಡೆಯುತ್ತಾ ನಡೆದುಕೊಂಡೇ ಆಸ್ಪತ್ರೆಗೆ ಹಿಂದಿರುಗಿದೆವು.

ಆತನ ರಾತ್ರಿ ಔಷಧೋಪಚಾರ ನಡೆಸಿ ಚಾಮರಾಜಪೇಟೆಯಲ್ಲಿದ್ದ ಮನೆಗೆ ಮರಳಿದೆ.
ನಂತರದ ದಿನಗಳಲ್ಲಿ ನಾನು ಕಾಫಿ ಕ್ಲಬ್‌ಗೆ ಹೋದಾಗ ವೆಂಕಟೇಶ್ ಅಲ್ಲಿ, ತನ್ನ ಹೊರಗಿನ ಸುತ್ತಾಟಗಳನ್ನು ಮತ್ತು `ಬಹುತೇಕ ಅಂಧ~ಗೊಂಡಿದ್ದ ಆತನ ಕಣ್ಣುಗಳನ್ನು ನಾನು ಹೇಗೆ ಮುಚ್ಚುತ್ತಿದ್ದೆ ಎಂಬುದನ್ನು ವಿವರಿಸಿ ಹೇಳುತ್ತಿದ್ದ. ನನಗೆ ದುಃಖ ಆಗುತ್ತಿತ್ತು.

ಏಕೆಂದರೆ ವೆಂಕಟೇಶ್‌ನಿಗೆ ಇದ್ದದ್ದು `ಡಯಾಬೆಟಿಕ್ ರೆಟಿನೊಪಥಿ~. ಕಣ್ಣೊಂದು ಮಧುಮೇಹದ ತೀವ್ರತೆಗೆ ತುತ್ತಾಗಿತ್ತು. 13 ವರ್ಷಗಳಿಂದ ಆಸ್ಪತ್ರೆಯ್ಲ್ಲಲೇ ಇದ್ದು ತನ್ನ ಹಾದಿಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ವೆಂಕಟೇಶ, ಅಂಧತ್ವದಲ್ಲಿಯೂ ಕೆಲಸಗಳನ್ನು ಸಲೀಸಾಗಿ ನಿಭಾಯಿಸುತ್ತಿದ್ದ. 1985ರಲ್ಲಿ ವೆಂಕಟೇಶ ಮೂತ್ರಪಿಂಡದ ವೈಫಲ್ಯದಿಂದ ಕಾಯಿಲೆಯ ತುತ್ತತುದಿಗೆ ತಲುಪಿ ಮರಣವನ್ನಪ್ಪಿದ. ನಾನು ದಾವಣಗೆರೆಯಲ್ಲಿ ಎಂ.ಡಿ. ಪಿಡಿಯಾಟ್ರಿಕ್ಸ್ ಓದುತ್ತಿದ್ದಾಗ ಆತ ಸತ್ತಿದ್ದನ್ನು ಅಪ್ಪಾಜಿ ಪತ್ರದ ಮೂಲಕ ತಿಳಿಸಿದ್ದರು (ಆ ಪತ್ರ ಇಂದಿಗೂ ನನ್ನ ಬಳಿ ಇದೆ).

ಡಾ. ಮಲ್ಲೇಶ್ ತಮ್ಮ ಪುಟ್ಟ ಸ್ನೇಹಿತನನ್ನು ಕಳೆದುಕೊಂಡರು. ವೆಂಕಟೇಶ್ ಉಳಿಸಿದ್ದ ಸಂಪಾದನೆಯ ಹಣವನ್ನು ಆತನ ದೇಹದೊಂದಿಗೆ ಕುಟುಂಬಕ್ಕೆ ಒಪ್ಪಿಸಲಾಯಿತು.
ಪ್ರಪಂಚದಲ್ಲಿ ಇಂದು 34.7 ಕೋಟಿ ಮಧುಮೇಹಿಗಳಿದ್ದಾರೆ.

34 ಲಕ್ಷ ಜನ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚುವುದರಿಂದ ಸಾವಿಗೀಡಾಗುತ್ತಿದ್ದಾರೆ. ಮಧುಮೇಹದ ಏರಿಕೆ ಹೃದಯಾಘಾತ ಮತ್ತು ಸ್ಟ್ರೋಕ್‌ಗೆ (ಸಕ್ಕರೆಯ ಅಸಹಜ ಏರಿಕೆಯಿಂದ ರಕ್ತನಾಳಗಳು ಹಾನಿಗೀಡಾಗುವುದು) ಕಾರಣವಾಗುತ್ತಿದ್ದು, ಈ ಸ್ಥಿತಿಯಿಂದ ಶೇ 50ರಷ್ಟು ಮಧುಮೇಹಿಗಳು ಮೃತಪಡುತ್ತಿದ್ದಾರೆ.

ಪಾದದ ಭಾಗಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ (ರಕ್ತನಾಳಗಳು ಹಾನಿಯಾಗುವುದರಿಂದ) ಮತ್ತು ನರಗಳು (ನ್ಯೂರೊಪಥಿ) ನೋವನ್ನು ಗ್ರಹಿಸದಿರುವ ಸ್ಥಿತಿ ಕಾಲಿನ ಹುಣ್ಣು ಮತ್ತು ಅಂಗಾಂಗ ಛೇದನದ ಅನಿವಾರ್ಯತೆಗೆ ಎಡೆಮಾಡಿಕೊಡುತ್ತದೆ.

ಅಂಧತ್ವಕ್ಕೆ ಡಯಾಬೆಟಿಕ್ ರೆಟಿನೊಪಥಿ ಅತಿಮುಖ್ಯ ಕಾರಣ. ಇದು ರೆಟಿನಾದ ಸಣ್ಣ ರಕ್ತನಾಳಗಳು ದೀರ್ಘಕಾಲ ಹಾನಿಗೊಳಗಾದ ಸ್ಥಿತಿಯಲ್ಲಿದ್ದಾಗ ಸಂಭವಿಸುತ್ತದೆ. 15 ವರ್ಷಗಳ ಬಳಿಕ ಅಂದಾಜು ಶೇ 2ರಷ್ಟು ಅಂಧತ್ವ ಮತ್ತು ಶೇ 10ರಷ್ಟು ಜನ ದೃಷ್ಟಿ ದೋಷದ ಸಮಸ್ಯೆಗೆ ಒಳಗಾಗುತ್ತಾರೆ. ಶೇ 10-20ರಷ್ಟು ಮಧುಮೇಹಿಗಳು ಮೂತ್ರಕೋಶ ವೈಫಲ್ಯದಿಂದ ಸಾವಿಗೆ ತುತ್ತಾಗುತ್ತಾರೆ. ಶೇ 50ರಷ್ಟು ಮಧುಮೇಹಿಗಳು ಡಯಾಬೆಟಿಕ್ ನ್ಯೂರೊಪಥಿ ಎಂದು ಕರೆಯಲಾಗುವ ಹಾನಿಗೊಳಗಾದ ನರಗಳ ಸಮಸ್ಯೆಗೆ ಒಳಗಾಗಿದ್ದಾರೆ.

ಮಧುಮೇಹಿಗಳು ಧೂಮಪಾನ ಮಾಡುವುದು ಅಪಾಯಕಾರಿ. ನಿಕೋಟಿನ್ ರಕ್ತನಾಳ (ವಸ್ಕ್ಯುಲೊಪಥಿ)ವನ್ನು ಎರಡು ಪಟ್ಟು ಹೆಚ್ಚು ಹಾಳುಮಾಡುತ್ತದೆ. ಮೈ ಜುಮ್ಮೆನುವುದು, ನೋವು, ಕೈಕಾಲುಗಳು ಮರಗಟ್ಟಿದಂತೆ ಆಗುವುದು ಅಥವಾ ಶಕ್ತಿಹೀನತೆ ಡಯಾಬಿಟಿಕ್ ನ್ಯೂರೊಪಥಿಯ ಸಾಮಾನ್ಯ ಲಕ್ಷಣಗಳು.

ಮಾಜಿ ಪ್ರಧಾನಿ ನೆಹರು ತಮ್ಮ ಜನ್ಮದಿನವನ್ನು `ಮಕ್ಕಳ ದಿನಾಚರಣೆ~ ಎಂದು ಆಚರಿಸಲು ಬಯಸಿದ್ದರು. ಆದರೆ ಅದೇ ದಿನವನ್ನೀಗ `ವಿಶ್ವ ಮಧುಮೇಹ ದಿನ~ ಎಂದು ಆಚರಿಸಲಾಗುತ್ತಿದೆ. ಇದು ವಿಪರ್ಯಾಸ.

ಮಧುಮೇಹಿ ರೋಗಿಗಳಿಗೆ ವಿಮಾ ಸೌಲಭ್ಯ ಇಲ್ಲದಿರುವುದು ದುರದೃಷ್ಟಕರ. ಒಂದು ವೇಳೆ ಕಂಪೆನಿಗಳು ನೀಡಿದರೂ ಅದರ ಪ್ರೀಮಿಯಂ ದೊಡ್ಡ ಮೊತ್ತದ್ದೇ ಆಗಿರುತ್ತದೆ! ಅದೃಷ್ಟವಷಾತ್ ಮಧುಮೇಹವುಳ್ಳ ಬಡ ಮಕ್ಕಳಿಗೆಂದು ನವೊ ನಾರ್‌ಡಿಸ್ಕ್ ಎಜುಕೇಷನ್ ಫೌಂಡೇಷನ್ ಜೊತೆಗೂಡಿ `ಚೇಂಜಿಂಗ್ ಡಯಾಬಿಟಿಸ್ ಇನ್ ಚಿಲ್ಡ್ರನ್~ ಎಂಬ ಬ್ಯಾನರ್ ಅಡಿಯಲ್ಲಿ ಈ ಕೆಳಗಿನ ಸಂಸ್ಥೆಗಳು ಉಚಿತ ಚಿಕಿತ್ಸೆ ನೀಡುತ್ತಿವೆ.

1. ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ: ಡಾ. ರಿಯಾಜ್, ಸಂಪರ್ಕ ಸಂಖ್ಯೆ: 9901033871.

2. ಸಮತ್ವಮ್: ಬೆಳವಾಡಿ, ಸಂಪರ್ಕ ಸಂಖ್ಯೆ: 8970070085.

3. ಬೆಂಗಳೂರು ಮಧುಮೇಹ ಆಸ್ಪತ್ರೆ: ರತ್ನ, ಸಂಪರ್ಕ ಸಂಖ್ಯೆ: 9036585592.

ಮಕ್ಕಳು 18 ವರ್ಷದೊಳಗಿನವರಾಗಿರುವುದು, ಬಿಪಿಎಲ್ ಕಾರ್ಡ್, ಭಾವಚಿತ್ರ ಮತ್ತು ವಯಸ್ಸಿನ ದೃಢೀಕರಣಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕೆನ್ನುವುದು ಈ ಸಂಸ್ಥೆಗಳ ನಿಯಮ.

ಮಧುಮೇಹದ ಜಗತ್ತು ಅನೇಕ ಕಥೆ-ಪುರಾಣಗಳು ಮತ್ತು ತಪ್ಪು ಕಲ್ಪನೆಗಳಿಂದ ಸುತ್ತುವರಿದಿದೆ. ನನ್ನ ಇತ್ತೀಚಿನ ಲಿಂಗದಹಳ್ಳಿ ಮತ್ತು ನುಗ್ಗೇಹಳ್ಳಿಯ ಭೇಟಿ ಸಂದರ್ಭದಲ್ಲಿ ಜನರ ಮನೋಭಾವ ನೋಡಿ ಬೇಸರವಾಯಿತು. ಅಲ್ಲಿ ಮಧುಮೇಹ ಹೊಂದಿರುವ ಬಹುತೇಕ ಪುರುಷರು ಮತ್ತು ಮಹಿಳೆಯರು `ಅದೇನೂ ದೊಡ್ಡ ವಿಷಯವಲ್ಲ. ಬೆಲ್ಲದಿಂದ ಮಾಡಿರುವ ಸಿಹಿ ತಿನ್ನಲು ಅಡ್ಡಿಯಿಲ್ಲ.

ಕಾಯಿ ಸಿಪ್ಪೆಗಳ ಕಹಿ ರಸ ಸೇವನೆ, ಮೆಂತೆ, ಪುದೀನಾ ಸೇವನೆಯಿಂದ ಮಧುಮೇಹ ಗುಣವಾಗುತ್ತದೆ~ ಎಂದು ತೀರಾ ಸಾಮಾನ್ಯ ಸಮಸ್ಯೆಯೆಂಬಂತೆ ಮಧುಮೇಹವನ್ನು ಪರಿಗಣಿಸಿದ್ದಾರೆ. ಸಕ್ಕರೆಗೆ ಪರ್ಯಾಯವನ್ನು ಬಳಸುವುದೂ ಅಪಾಯಕಾರಿ. ಎರಡು ತಿಂಗಳಿಗೊಮ್ಮೆ ತಪಾಸಣೆ, ನಿಯಮಿತ ಪಥ್ಯ, ದೈಹಿಕ ಚಟುವಟಿಕೆ ಮತ್ತು ಔಷಧ ಸೇವನೆ ಅತ್ಯಗತ್ಯ.

ಮಧುಮೇಹ ರೋಗಿಗಳ ಏರಿಕೆಯನ್ನು ಗಮನಿಸಿ ಕರ್ನಾಟಕ ಸರ್ಕಾರವು, ಮಧುಮೇಹ ಚಿಕಿತ್ಸೆಗಾಗಿ `ಕರ್ನಾಟಕ ಮಧುಮೇಹ ವಿಜ್ಞಾನಗಳ ಸಂಸ್ಥೆ~ (ಕಿಡ್ಸ್) ಎಂಬ ಪ್ರತ್ಯೇಕ ಆಸ್ಪತ್ರೆಯೊಂದನ್ನು ಡಾ. ನರಸಿಂಹ ಶೆಟ್ಟಿ ಅವರ ನಿರ್ದೇಶನದಡಿ ಪ್ರಾರಂಭಿಸಿದೆ. ಎಲ್ಲಾ ಮಧುಮೇಹ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಮತ್ತು ಉಳಿದವರಿಗೆ ಕಡಿಮೆ ವೆಚ್ಚದಲ್ಲಿ ಪೌಷ್ಟಿಕತೆ ಕೌನ್ಸಿಲಿಂಗ್ ಸೇವೆ ಸೇರಿದಂತೆ ಇದು ಒದಗಿಸುತ್ತಿದೆ.

ಇದು ಜಯದೇವ ಹೃದ್ರೋಗ ಸಂಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮಧುಮೇಹ ಒಂದು ಸಿಹಿಯಾದ ಕಾಯಿಲೆ. ಅದರ `ಸಿಹಿತನ~ವೇ ಕೊಲ್ಲುವುದು. ರಕ್ತನಾಳಗಳಲ್ಲಿನ ಸಕ್ಕರೆ ಅಂಶ ರಕ್ತನಾಳಗಳನ್ನು ಮಾತ್ರವಲ್ಲ ಈ ನಾಳಗಳ ಸಂಪರ್ಕ ಹೊಂದಿರುವ ಪ್ರಮುಖ ಅಂಗಗಳನ್ನೂ (ಹೃದಯ, ಮೂತ್ರಕೋಶ, ಕಣ್ಣು, ನರಗಳು) ನಾಶಪಡಿಸುತ್ತದೆ.

ಮಧುಮೇಹಿಗೆ ಹೃದಯಾಘಾತವಾದಾಗ ನೋವು ಅತಿ ಕಡಿಮೆ ಇರುತ್ತದೆ, ಏಕೆಂದರೆ ಹಾನಿಗೊಳಗಾದ ನರಗಳು ನೋವನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಹೀಗಾಗಿ ಹೃದಯದ ನಿರಂತರ ತಪಾಸಣೆ ಅತಿ ಮುಖ್ಯ.

ಶಶಿಕುಮಾರನ ಸಮಸ್ಯೆ ಕುರಿತು ಚರ್ಚಿಸಲು (`ಶಶಿಕುಮಾರನ ಜವಾಬ್ದಾರಿಗಳು~ ನೆನಪಿಸಿಕೊಳ್ಳಿ) ಮೂತ್ರಪಿಂಡ-ಮೂತ್ರಕೋಶ ಸಂಸ್ಥೆಗೆ ತೆರಳಿದ್ದೆ. ಅಲ್ಲಿಂದ ಹಿಂದಿರುಗುವಾಗ ನಾನು ಸಾಕಷ್ಟು ಖಿನ್ನಳಾಗಿದ್ದೆ. ಅಲ್ಲಿ ಮೂತ್ರಪಿಂಡ ವೈಫಲ್ಯದ ಹಲವು ಹಂತಗಳಲ್ಲಿ ವಿವಿಧ ಚಿಕಿತ್ಸೆ ಪಡೆಯುತ್ತಿದ್ದ ಮಧುಮೇಹ ರೋಗಿಗಳನ್ನು ನೋಡಿದೆ.

ಮಾನವ ಮೂತ್ರಪಿಂಡದ ಎಂದಿನ ಕಾರ್ಯಾಚರಣೆಯನ್ನು ಮತ್ತೆ ವಾಪಸು ತರಲು ಸಾಧ್ಯವಿಲ್ಲ. ಆದರೆ ಇಲ್ಲಿಯೂ ಅನೇಕ ಮೂತ್ರಪಿಂಡ ಕಾರ್ಯಾಚರಣೆ ನಡೆಸುವ ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿಯಂಥ ಕೃತಕ ವಿಧಾನಗಳಿವೆ.
ಬದುಕಿರುವ ಅಥವಾ ಮೃತ ವ್ಯಕ್ತಿಯ ಮೂತ್ರಪಿಂಡದ ಕಸಿ ಮತ್ತೊಂದು ಆಯ್ಕೆ. ಒಮ್ಮೆ ಮೂತ್ರಪಿಂಡ ಕಸಿ ಮಾಡಿದರೆ ಕಸಿ ಮಾಡಿದ ಮೂತ್ರಪಿಂಡವನ್ನು ತಿರಸ್ಕರಿಸುವ ದೇಹವನ್ನು ನಿಯಂತ್ರಿಸಲು ಜೀವನಪರ್ಯಂತ ಅತಿ ವೆಚ್ಚದಾಯಕ ಔಷಧ ಸೇವನೆ ಅನಿವಾರ್ಯ.

ನಮ್ಮ ಆಸ್ಪತ್ರೆಯ ದಾದಿಯೊಬ್ಬರು ತನ್ನ ಗಂಡನಿಗೆ ಮೂತ್ರಪಿಂಡವನ್ನು ದಾನ ಮಾಡುವ ಪ್ರಯತ್ನದಲ್ಲಿ ಓಡಾಡುತ್ತಿದ್ದಾರೆ. ಏಕೆಂದರೆ ಇದರ ಪ್ರಕ್ರಿಯೆಗಳು ಹಲವಾರು ಮತ್ತು ಬಲು ತುಟ್ಟಿ.

ಮಧುಮೇಹ ಗುಣವಾಗುವುದಿಲ್ಲ. ನಿರಂತರ ಚಿಕಿತ್ಸೆಯಿಂದ ಅದನ್ನು ನಿಯಂತ್ರಿಸಬಹುದಷ್ಟೆ. ದಿನನಿತ್ಯದ ಇನ್ಸುಲಿನ್ ಚುಚ್ಚುಮದ್ದು, ನಿರಂತರ ಗ್ಲೂಕೋಸ್ ಪರೀಕ್ಷೆ, ದ್ವಿಮಾಸಿಕ ರಕ್ತ ಪರೀಕ್ಷೆ ಮತ್ತು ಡಯಾಲಿಸಿಸ್ ಮಾಡಿಸುತ್ತಿರುವ ನಮ್ಮಂಥ ಮಧುಮೇಹಿಗಳ ಸಂಖ್ಯೆ ಅಪಾರ.ನಿಮಗೆ ಈಗ ಅರಿವಿಗೆ ಬಂದಿರಬಹುದು, ನಾನೇಕೆ ನನ್ನ ಕೆಟ್ಟ ವಂಶವಾಹಿನಿ ಮತ್ತು ಮಧುಮೇಹವನ್ನು ಶಪಿಸುತ್ತೇನೆಂದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.