ADVERTISEMENT

ಚೇತರಿಕೆಯ ಹಾದಿಯಲ್ಲಿ ಜಾಗತಿಕ ಅರ್ಥ ವ್ಯವಸ್ಥೆ

ಡಿ.ಮರಳೀಧರ
Published 12 ಮಾರ್ಚ್ 2013, 19:59 IST
Last Updated 12 ಮಾರ್ಚ್ 2013, 19:59 IST
ಚೇತರಿಕೆಯ ಹಾದಿಯಲ್ಲಿ ಜಾಗತಿಕ ಅರ್ಥ ವ್ಯವಸ್ಥೆ
ಚೇತರಿಕೆಯ ಹಾದಿಯಲ್ಲಿ ಜಾಗತಿಕ ಅರ್ಥ ವ್ಯವಸ್ಥೆ   

ಇತ್ತೀಚಿನ ಎರಡು ಆರ್ಥಿಕ ವಿದ್ಯಮಾನಗಳು ನನ್ನ  ಗಮನ ಸೆಳೆದಿವೆ. ಅಮೆರಿಕದ ಷೇರುಪೇಟೆ ಸೂಚ್ಯಂಕವಾಗಿರುವ `ಡೋವ್ ಜೋನ್ಸ್ ಕೈಗಾರಿಕಾ ಸೂಚ್ಯಂಕ'ವು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿರುವುದು ಮತ್ತು ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣವು ಶೇ 7.7ಕ್ಕೆ ಕುಸಿದಿರುವುದೇ ಆ ಎರಡು ಪ್ರಮುಖ ಬೆಳವಣಿಗೆಗಳಾಗಿವೆ.

ಬರಾಕ್ ಒಬಾಮ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗಿನ ಅತಿ ಕಡಿಮೆ ಪ್ರಮಾಣದ ನಿರುದ್ಯೋಗ ಇದಾಗಿದೆ. ಮೂರು ವರ್ಷಗಳಿಂದ ಅಮೆರಿಕದಲ್ಲಿ ಪ್ರತಿ ತಿಂಗಳೂ ಹೊಸ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದರಿಂದ ನಿರುದ್ಯೋಗ ಮಟ್ಟವು ಗಮನಾರ್ಹವಾಗಿ ಕಡಿಮೆ ಆಗುತ್ತಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಕಚ್ಚಾ ತೈಲ ಆಮದು ಪ್ರಮಾಣವು ಶೇ 40ರಷ್ಟು ಕಡಿಮೆ ಆಗಿರುವುದು  ಅಮೆರಿಕ ಅರ್ಥ ವ್ಯವಸ್ಥೆಯ ಇನ್ನೊಂದು ಆಸಕ್ತಿದಾಯಕ ಸಂಗತಿಯಾಗಿದೆ. `ಶೇಲ್' ಅನಿಲದ ನಿಕ್ಷೇಪ ಪತ್ತೆ ಮತ್ತು ಬಳಕೆಯು  ಕಚ್ಚಾ ತೈಲ ಆಮದು ಪ್ರಮಾಣ ಮತ್ತು ಅಮೆರಿಕದ ಅರ್ಥ ವ್ಯವಸ್ಥೆ ಮೇಲೆ  ವ್ಯಾಪಕ ಪರಿಣಾಮ ಬೀರಿದೆ. ಅಮೆರಿಕವು 2020ರಷ್ಟೊತ್ತಿಗೆ ಕಚ್ಚಾ ತೈಲ ಆಮದಿನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೆಲ ಆರ್ಥಿಕ  ತಜ್ಞರು ಅಂದಾಜಿಸಿದ್ದಾರೆ.

ವಿಶ್ವದ ಎರಡನೆ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿರುವ ಚೀನಾ ಕೂಡ ಆರ್ಥಿಕ ಚೇತರಿಕೆಯ ಹಾದಿಯಲ್ಲಿ ಇದೆ. ಚೀನಾದ ಕೈಗಾರಿಕಾ ಉತ್ಪಾದನೆ ಮತ್ತು ಚಿಲ್ಲರೆ ಮಾರಾಟ ಪ್ರಮಾಣವು, ನಿರೀಕ್ಷಿತ ಮಟ್ಟಕ್ಕಿಂತ ಉತ್ತಮ ಸಾಧನೆ ಮಾಡಿದೆ. ಫೆಬ್ರುವರಿ ತಿಂಗಳಲ್ಲಿ ಅಮೆರಿಕ ಮತ್ತು ಯೂರೋಪ್ ಒಕ್ಕೂಟಕ್ಕೆ ಚೀನಾದ ರಫ್ತು ಪ್ರಮಾಣವು ಕ್ರಮವಾಗಿ 12 ಮತ್ತು 18 ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಇದೆ. ಜಾಗತಿಕ ಅರ್ಥ ವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಇದೆ ಎನ್ನುವುದಕ್ಕೆ ಇದೊಂದು ಇನ್ನೊಂದು ಪ್ರಮುಖ ನಿದರ್ಶನವಾಗಿದೆ.

ಹಿಂದಿನ ತ್ರೈಮಾಸಿಕ ಅವಧಿಯಲ್ಲಿಯೂ ಚೀನಾದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 7.9ರಷ್ಟು ದಾಖಲಾಗಿತ್ತು. ಅದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಈ ಆರ್ಥಿಕ ವೃದ್ಧಿ ದರವು ಶೇ 7.4ರಷ್ಟಿತ್ತು.
ವಿಶ್ವದ 2ನೆ ಅತಿದೊಡ್ಡ ಅರ್ಥವ್ಯವಸ್ಥೆಯಲ್ಲಿನ ಈ ಆಶಾದಾಯಕ ಬೆಳವಣಿಗೆಯು, ಜಾಗತಿಕ ಆರ್ಥಿಕತೆಯು  ಚೇತರಿಕೆಯ ಹಾದಿಯಲ್ಲಿ ಸಾಗಿರುವುದನ್ನು ದೃಢಪಡಿಸುತ್ತದೆ.

ಜಪಾನ್ ಕೂಡ, ವಿಶ್ವ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುವ ಇನ್ನೊಂದು ಪ್ರಮುಖ ದೇಶವಾಗಿದೆ. ವಿಶ್ವದ 3ನೆ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿರುವ ಜಪಾನ್, 2012ರ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ವೃದ್ಧಿ ದರದಲ್ಲಿ ಉತ್ತಮ ಸಾಧನೆ ದಾಖಲಿಸಿದೆ. ಜಪಾನ್ ಅರ್ಥ ವ್ಯವಸ್ಥೆಯು ಆರ್ಥಿಕ ಹಿಂಜರಿಕೆಗೆ ತುತ್ತಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜು ಮಾಡಿದ್ದರಿಂದ  ಈ ಸಾಧನೆ ಅನಿರೀಕ್ಷಿತವಾಗಿತ್ತು.

ಹಿಂದಿನ ತ್ರೈಮಾಸಿಕದಲ್ಲಿ ಸಾಧಾರಣ ಎನ್ನಬಹುದಾದ ಶೇ 0.2ರಷ್ಟು ವೃದ್ಧಿ ದರ ದಾಖಲಿಸಿದ್ದ ಜಪಾನ್, 2012ರಲ್ಲಿ ಶೇ 2ರಷ್ಟು `ಜಿಡಿಪಿ' ದಾಖಲಿಸಿತ್ತು. ಇದು ಈ ಹಿಂದೆ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿಗಿತ್ತು. ಬ್ಯಾಂಕ್ ಆಫ್ ಜಪಾನಿನ ಆಕ್ರಮಣಶೀಲ ವಿನಿಮಯ ದರ ನೀತಿಯೂ, ದೇಶಿ ಅರ್ಥ ವ್ಯವಸ್ಥೆಯು ಅಭಿವೃದ್ಧಿಯ ಹಳಿಗೆ ಮರಳಲು ನೆರವಾಗಿದೆ.
ಐರೋಪ್ಯ ವಲಯದ ಬಿಕ್ಕಟ್ಟು ಈಗಲೂ ಮುಂದುವರೆದಿದೆ.  ಜರ್ಮನಿ ಹೊರತುಪಡಿಸಿ ಯೂರೋಪ್‌ನ ಉಳಿದೆಲ್ಲ ದೇಶಗಳ ಅರ್ಥ ವ್ಯವಸ್ಥೆ ಒಂದಲ್ಲ ಒಂದು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದೆ.

ಇತ್ತೀಚೆಗೆ ಇಂಗ್ಲೆಂಡ್‌ನ ಉದ್ಯಮಿಗಳನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ನನಗೆ ದೊರೆತಿತ್ತು. ಅವರ ಜತೆಗಿನ ಭೇಟಿ ಸಂದರ್ಭದಲ್ಲಿಯೂ ನನಗೆ ವಿಶ್ವದಾದ್ಯಂತ ಆರ್ಥಿಕ ಚೇತರಿಕೆಯ ಆಶಾವಾದದ ಮಾತುಗಳೇ ಕೇಳಿ ಬಂದವು.

ಇಲ್ಲಿಯವರೆಗೆ ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಉದ್ದಿಮೆ ವಹಿವಾಟುಗಳು ಈಗ ಸಾಮಾನ್ಯ ಮಟ್ಟಕ್ಕೆ ಮರಳಿವೆ. ಈ ಉದ್ದಿಮೆಗಳ ಪೈಕಿ ಕೆಲವು ಸಂಸ್ಥೆಗಳು ಹೆಚ್ಚುವರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದೂ ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದು ಬರೀ ತೋರಿಕೆಯ ಚೇತರಿಕೆಯಲ್ಲ ಎಂದೂ ನಾನು ಆಶಿಸುವೆ.

ಭೂಮಿ ಅಭಿವೃದ್ಧಿಪಡಿಸುವ, ವಸತಿ ಮತ್ತಿತರ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ (ರಿಯಲ್ ಎಸ್ಟೇಟ್) ವಹಿವಾಟು ಕೂಡ ಜಾಗತಿಕ ಮಟ್ಟದಲ್ಲಿ ಚೇತರಿಕೆ ಕಾಣುತ್ತಿದೆ. ಆರ್ಥಿಕ  ಪ್ರಗತಿಯ ಇನ್ನೊಂದು ಪ್ರಮುಖ ಮಾನದಂಡವಾಗಿರುವ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನೂ ಆರ್ಥಿಕ ತಜ್ಞರು ತುಂಬ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಈ ವಲಯದಲ್ಲಿನ ಚಟುವಟಿಕೆಗಳೂ ಆಶಾದಾಯಕವಾಗಿವೆ.  ಅಮೆರಿಕ ಮತ್ತು ಯೂರೋಪಿನ ಕೆಲ ದೇಶಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಏರಿಕೆ ಹಾದಿಯಲ್ಲಿವೆ.

ನಾನು ಇತ್ತೀಚೆಗೆ ಮಧ್ಯಪ್ರಾಚ್ಯ ದೇಶಗಳಿಗೆ ಭೇಟಿ ನೀಡಿದ್ದಾಗ, ಅಲ್ಲಿಯೂ ರಿಯಲ್ ಎಸ್ಟೇಟ್ ಉದ್ದಿಮೆಯು ಚೇತರಿಕೆ ಕಾಣುತ್ತಿರುವುದು ನನ್ನ ಅನುಭವಕ್ಕೆ ಬಂದಿತು. ಎಲ್ಲೆಡೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿ ಇದ್ದವು.
ಈ ಎಲ್ಲ ಲಕ್ಷಣಗಳು ಜಾಗತಿಕ ಅರ್ಥ ವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಇರುವುದನ್ನು ಅಧಿಕೃತವಾಗಿ ದೃಢಪಡಿಸುತ್ತವೆಯೇ ಅಥವಾ  ಬರೀ ಅಂಕಿ ಸಂಖ್ಯೆಗಳು ನಮ್ಮ ಕಣ್ಣಿಗೆ ಮಂಕುಬೂದಿ ಎರಚುತ್ತವೆಯೇ.

ವಿಶ್ವದಾದ್ಯಂತ ಕಂಡು ಬರುತ್ತಿರುವ ಆಶಾದಾಯಕ ಚಿತ್ರಣವು, ಭಾರತದ ಅರ್ಥ ವ್ಯವಸ್ಥೆಯನ್ನೂ ಅಭಿವೃದ್ಧಿ ಪಥಕ್ಕೆ  ಮರಳಿ ಕರೆತರಲಿದೆಯೇ ಎನ್ನುವ ಪ್ರಶ್ನೆಗಳಿಗೆ, ನಾನು `ಹೌದು, ನಿಜ' ಎಂದೇ ದೃಢವಾಗಿ ಹೇಳಲು ಇಷ್ಟಪಡುವೆ.
ಸ್ಥಳೀಯ ಮತ್ತು ವಿದೇಶಗಳಲ್ಲಿನ ಆರ್ಥಿಕ ಚಟುವಟಿಕೆಗಳು ಚೇತರಿಕೆಯ ಹಾದಿಯಲ್ಲಿ ಇವೆ. 2013-14ನೆ ಹಣಕಾಸು ವರ್ಷದಲ್ಲಿ ಎಲ್ಲೆಡೆ ಉತ್ತಮ ಆರ್ಥಿಕ ಬೆಳವಣಿಗೆ ಕಂಡು ಬರುವ ಸಾಧ್ಯತೆಗಳೂ ಇವೆ.

ಐರೋಪ್ಯ ವಲಯ ಹೊರತುಪಡಿಸಿ, ಇತರ ಪ್ರಮುಖ ಆರ್ಥಿಕ ವಲಯಗಳಾದ ಉತ್ತರ ಅಮೆರಿಕ, ಚೀನಾ, ಭಾರತ ಸೇರಿದಂತೆ ಆಗ್ನೆಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯದ ದೇಶಗಳು ಉತ್ತಮ ಮಟ್ಟದ ಆರ್ಥಿಕ ಬೆಳವಣಿಗೆ ದಾಖಲಿಸುತ್ತಿವೆ.

ಯೂರೋಪ್ ದೇಶಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನಾವು ಜಾಗತಿಕ ಅರ್ಥ ವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಇದೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಹಾಗೆ ಹೇಳುವುದು  ಐತಿಹಾಸಿಕ ಪ್ರಮಾದವೂ ಆಗಲಿದೆ. ಆದರೆ, ಈಗ ಕಾಲ ಬದಲಾಗಿದೆ.  ಏಷ್ಯಾದ ಅರ್ಥ ವ್ಯವಸ್ಥೆಯು ಜಾಗತಿಕ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಭಾರತವು ಜಾಗತಿಕ ಆರ್ಥಿಕತೆಗೆ ನಷ್ಟವನ್ನೇನೂ ಉಂಟು ಮಾಡದೆ, ಅದರ ಬೆಳವಣಿಗೆಗೆ ಖಂಡಿತವಾಗಿಯೂ ನೆರವಾಗುತ್ತಿದೆ.

ದೇಶಿ ಮತ್ತು ವಿದೇಶಿ ಷೇರುಗಳು ಉತ್ತಮ ಸಾಧನೆ ಮಾಡುತ್ತಿರುವುದು, ದೇಶದೊಳಗೆ ವಿದೇಶಿ ಸಾಂಸ್ಥಿಕ ಹೂಡಿಕೆಯು (ಎಫ್‌ಐಐ) ಗರಿಷ್ಠ ಮಟ್ಟದಲ್ಲಿ ಇರುವುದು, ರೂಪಾಯಿ ವಿನಿಮಯ ದರ ಸ್ಥಿರಗೊಳ್ಳಲು ನೆರವಾಗಲಿದೆ.  ದೇಶಿ ಆರ್ಥಿಕತೆಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ವಿಶ್ವಾಸ ಹೆಚ್ಚುತ್ತಿರುವ ದ್ಯೋತಕವೂ ಇದಾಗಿದೆ. ಭಾರತದ ಅರ್ಥ ವ್ಯವಸ್ಥೆ ಪ್ರಬುದ್ಧವಾಗಿರುವುದು ಮತ್ತು ಬಾಹ್ಯ ಒತ್ತಡಗಳ ಪ್ರಭಾವಕ್ಕೆ ಗುರಿಯಾಗದೇ ತನ್ನ ಆರ್ಥಿಕ ಸದೃಢತೆ ರಕ್ಷಿಸಿಕೊಂಡಿರುವುದು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.

ಹಲವಾರು ಮೌಲ್ಯಮಾಪನಾ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು, ದೇಶದ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಪರಿಷ್ಕರಿಸಿದ್ದು, ಮುಂದಿನ ವರ್ಷದ ಹೊತ್ತಿಗೆ `ಜಿಡಿಪಿ ಶೇ 7ರಿಂದ ಶೇ 7.5ಕ್ಕೆ  ಮರಳಲಿದೆ ಎಂದು ಅಂದಾಜಿಸಿವೆ.
ಇನ್ನೊಂದೆಡೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಾಂತ್ರಿಕ ಸಂಖ್ಯೆಯಾಗಿರುವ 20 ಸಾವಿರ ಅಂಶಗಳ ಜತೆ ಚೆಲ್ಲಾಟ ಆಡುತ್ತಿದ್ದು, ಸದ್ಯಕ್ಕೆ ಸಾರ್ವಕಾಲಿಕ ದಾಖಲೆ ಮಟ್ಟದ ಸಮೀಪ ಬಂದಿದೆ.

ದೇಶಿ ಷೇರುಪೇಟೆಯು ಈ ವರ್ಷ ಹೊಸ ದಾಖಲೆ ಬರೆಯಲಿದೆ ಎಂದು ಹಣಕಾಸು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ. ವಿತ್ತೀಯ ಕೊರತೆ ತಗ್ಗಿಸುವ ಗುರಿಯೂ ಸದ್ಯದಲ್ಲಿಯೇ ಈಡೇರುವ ನಿರೀಕ್ಷೆ ಇದೆ.  ಒಟ್ಟಾರೆ ದೇಶಿ  ಅರ್ಥ ವ್ಯವಸ್ಥೆಯು ಸರಿಯಾದ ದಿಸೆಯಲ್ಲಿ ಹೆಜ್ಜೆ ಹಾಕಲಿದೆ.

ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು, ತಮ್ಮ ಬಜೆಟ್ ಭಾಷಣದಲ್ಲಿ, ದೇಶದಲ್ಲಿ ಉದ್ದಿಮೆ ವಹಿವಾಟು ಆರಂಭಿಸಲು ಅಡಚಣೆಗಳನ್ನೆಲ್ಲ ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ. ನಿಜಕ್ಕೂ ಇದೊಂದು ಶುಭ ಶಕುನ. ಉದ್ದಿಮೆ - ವಹಿವಾಟು ಆರಂಭಿಸಲು, ಸ್ಥಾಪಿಸಲು ಇರುವ ಕಂಟಕಗಳನ್ನೆಲ್ಲ ದೂರ ಮಾಡುವಲ್ಲಿ ರಾಜ್ಯ ಸರ್ಕಾರಗಳೂ ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ಅಭಿವೃದ್ಧಿ ವಿಷಯದಲ್ಲಿ ಸಕ್ರಿಯವಾಗಿರುವ ರಾಜ್ಯ ಸರ್ಕಾರಗಳು, ತಮ್ಮ, ತಮ್ಮ ರಾಜ್ಯಗಳಲ್ಲಿ ಆರ್ಥಿಕ ಚೇತರಿಕೆ ಸಾಧ್ಯವಾಗಲು ಉದ್ದಿಮೆಗಳಿಗೆ ಪೂರಕವಾದ ವಾತಾವರಣ ಕಲ್ಪಿಸಲು ಮೊದಲು ಮುಂದಾಗಬೇಕಾಗಿವೆ. ಕೇಂದ್ರ ಸರ್ಕಾರದ ನಿರ್ಧಾರ, ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರಗಳೂ ಸೂಕ್ತವಾಗಿ ಕೈಜೋಡಿಸಬೇಕಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳಲ್ಲಿ ಇರುವ ಅಧಿಕಾರಿಗಳು ಆರ್ಥಿಕ ಅಭಿವೃದ್ಧಿಗೆ  ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸುವಂತಾದರೆ ಅದರಿಂದ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಮತ್ತು ದೇಶಿ ಹೂಡಿಕೆ ಪ್ರಮಾಣದ ಹರಿವು ಸಹಜವಾಗಿಯೇ ಹೆಚ್ಚಳಗೊಳ್ಳಲಿದೆ.

ಉದ್ದಿಮೆ - ವ್ಯಾಪಾರಿಗಳು ಯಾವಾಗಲೂ ಆಶಾವಾದಿಗಳಾಗಿರುತ್ತಾರೆ, ಆಶಾವಾದಿಯಾಗಿಯೇ ಬದುಕುತ್ತಾರೆ. ಭಾರತ ಸೇರಿದಂತೆ ವಿಶ್ವದ ಎಲ್ಲೆಡೆ ಆರ್ಥಿಕ  ಚೇತರಿಕೆಯ ಕುರುಹುಗಳು ಕಂಡು ಬರುತ್ತಿವೆ. ಇವು ನಿಜವಾಗಲಿ, ಇನ್ನಷ್ಟು ಬಲಗೊಳ್ಳಲಿ ಮತ್ತು ಸುಸ್ಥಿರಗೊಳ್ಳಲಿ ಎಂದೇ ನಾನು  ಶುಭ ಹಾರೈಸುವೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT