ADVERTISEMENT

ವಿಮಾನಯಾನ ರಂಗದಲ್ಲಿ ಹೊಸ ಗಾಳಿ

ಡಿ.ಮರಳೀಧರ
Published 7 ಮೇ 2013, 19:59 IST
Last Updated 7 ಮೇ 2013, 19:59 IST
ವಿಮಾನಯಾನ ರಂಗದಲ್ಲಿ ಹೊಸ ಗಾಳಿ
ವಿಮಾನಯಾನ ರಂಗದಲ್ಲಿ ಹೊಸ ಗಾಳಿ   

ದೇಶದ ವಿಮಾನ ಯಾನ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಗಾಳಿ ಬೀಸುತ್ತಿದ್ದು, ಈ ಬದಲಾವಣೆಯು ಅನೇಕ ವಿಮಾನ ಯಾನ ಸಂಸ್ಥೆಗಳ ಪಾಲಿಗೆ ಹೊಸ ಅವಕಾಶಗಳ ಹೆಬ್ಬಾಗಿಲು ತೆರೆದಿದೆ. ವಿಮಾನ ಯಾನ ರಂಗದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಹಣಕಾಸು ಸಚಿವ ಪಿ. ಚಿದಂಬರಂ ಅವರು ಹೆಚ್ಚಿಸಿರುವುದು ಈ ಎಲ್ಲ ಹೊಸ ಬೆಳವಣಿಗೆಗಳಿಗೆ ಹಾದಿ ಮಾಡಿಕೊಟ್ಟಿದೆ.

ಈಚೆಗೆ ಮೂರು ಪ್ರಮುಖ ವಿದ್ಯಮಾನಗಳು ಘಟಿಸಿದ್ದು, ಇನ್ನಷ್ಟು ಬೆಳವಣಿಗೆಗಳೂ ನಡೆಯುವ ನಿರೀಕ್ಷೆ ಇದೆ. ಮಲೇಷ್ಯಾದ ಅಗ್ಗದ ವಿಮಾನ ಯಾನ ಸಂಸ್ಥೆ `ಏರ್ ಏಷ್ಯಾ', ದೇಶದ ಪ್ರತಿಷ್ಠಿತ ಉದ್ಯಮ ಸಮೂಹ `ಟಾಟಾ ಗ್ರೂಪ್' ಸಹಭಾಗಿತ್ವದಲ್ಲಿ ಹೊಸ ವಿಮಾನ ಯಾನ ಸಂಸ್ಥೆ ಹುಟ್ಟು ಹಾಕಲು ಒಪ್ಪಂದ ಮಾಡಿಕೊಂಡಿದೆ.

`ಏರ್ ಏಷ್ಯಾ' ಸಂಸ್ಥೆಯು, ಏಷ್ಯಾದ ಅತಿದೊಡ್ಡ ಅಗ್ಗದ ವಿಮಾನ ಯಾನ ಸಂಸ್ಥೆಯಾಗಿದ್ದು, ವಿಮಾನಗಳ ಸಂಖ್ಯೆ ಮತ್ತು ಸಂಚರಿಸುವ ಮಾರ್ಗ ಆಧರಿಸಿ ಹೇಳುವುದಾದರೆ, 20ಕ್ಕೂ ಹೆಚ್ಚು ದೇಶಗಳಿಗೆ ಸಂಪರ್ಕ ಕಲ್ಪಿಸಿದ ಹೆಗ್ಗಳಿಕೆ ಹೊಂದಿದೆ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ವಿಮಾನ ಯಾನ ಸಂಸ್ಥೆಯಲ್ಲಿ `ಏರ್ ಏಷ್ಯಾ'     ಶೇ 49, ಟಾಟಾ ಸಮೂಹ ಶೇ 30 ಮತ್ತು ಅರುಣ್ ಭಾಟಿಯಾ ಶೇ 21ರಷ್ಟು ಪಾಲು ಬಂಡವಾಳ ಹೊಂದಲಿದ್ದಾರೆ. ಜಂಟಿ ಸಂಸ್ಥೆಯ ಸ್ವರೂಪ ಮತ್ತು ಕಾರ್ಯಚಟುವಟಿಕೆಗಳು ಭರದಿಂದ ಸಾಗಿದ್ದು, ಇದೇ ವರ್ಷಾಂತ್ಯದ ಹೊತ್ತಿಗೆ (2013) ಸೇವೆ ಆರಂಭಿಸುವ ಸಾಧ್ಯತೆಗಳು ಇವೆ.

ಈ ಹೊಸ ವಿಮಾನ ಯಾನ ಸಂಸ್ಥೆಯು  ಆರಂಭದಲ್ಲಿ ಎರಡನೆ ಮತ್ತು ಮೂರನೇ ಹಂತದ ನಗರಗಳಿಗೆ ನೇರ ಸಂಪರ್ಕ ಕಲ್ಪಿಸಲು ಆದ್ಯತೆ ನೀಡಲಿದೆ. ನಾಲ್ಕರಿಂದ ಐದು ವಿಮಾನಗಳ ಮೂಲಕ ಕಾರ್ಯಾರಂಭ ಮಾಡಲಿದ್ದು, ಹೊಸ ಸೇವೆಗೆ ಯಾವುದೇ ಅಡಚಣೆ ಎದುರಾಗಲಾರದು  ಎಂದು ನಿರೀಕ್ಷಿಸಲಾಗಿದೆ.

ಟಾಟಾ ಸಮೂಹವು 60 ವರ್ಷಗಳ ನಂತರ ವಿಮಾನ ಯಾನ ರಂಗಕ್ಕೆ ಮತ್ತೆ ಮರಳಿದಂತಾಗಲಿದೆ. `ಏರ್ ಏಷ್ಯಾ', ಭಾರತದಲ್ಲಿನ  ಈ ಹೊಸ ವಹಿವಾಟಿನಲ್ಲಿ ತನ್ನ ಯಶಸ್ವಿ ಅಗ್ಗದ  ವಿಮಾನ ಯಾನ ಸೂತ್ರವನ್ನೂ ಪರಿಚಯಿಸುವ ಸಾಧ್ಯತೆಗಳು ಇವೆ. 1997ರಲ್ಲಿ `ಟಾಟಾ -  ಸಿಂಗಪುರ ಏರ್‌ಲೈನ್ಸ್'ನ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿದ್ದರೆ ಇಷ್ಟೊತ್ತಿಗೆ ದೇಶಿ ವಿಮಾನ ಯಾನ ರಂಗದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಹೊಸ ವಿಮಾನ ಯಾನ ಸಂಸ್ಥೆ ಆರಂಭಿಸಲು ಜಂಟಿ ಒಪ್ಪಂದಕ್ಕೆ ಬರಲು ಉತ್ಸುಕವಾಗಿದ್ದ ಅನೇಕ ವಿಮಾನ ಯಾನ ಸಂಸ್ಥೆಗಳೇ ಈ  ಒಪ್ಪಂದ ಜಾರಿಗೆ ಬರದಂತೆ ತೀವ್ರ ಪ್ರಯತ್ನ ಪಟ್ಟಿದ್ದವು.

ವಿಮಾನ ಯಾನ ಉದ್ದಿಮೆ ಬಗ್ಗೆ ಮೊದಲಿನಿಂದಲೂ ಭಾವನಾತ್ಮಕ ನಂಟು ಹೊಂದಿರುವ ಟಾಟಾ ಸಮೂಹದ ಹೊಸ ಯತ್ನವು ಈ ಬಾರಿ ಯಾವುದೇ ಕಂಟಕ ಇಲ್ಲದೇ ಯಶಸ್ವಿಯಾಗುವ ಸಾಧ್ಯತೆಗಳು ಇವೆ.

ಅಬುಧಾಬಿ ಮೂಲದ `ಇತಿಹಾದ್  ಏರ್‌ಲೈನ್ಸ್', ದೇಶದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆ `ಜೆಟ್ ಏರ್‌ವೇಸ್'ನ ಶೇ 24ರಷ್ಟು ಪಾಲು ಬಂಡವಾಳ ಖರೀದಿಸಿದೆ. ಪಾಲು ಬಂಡವಾಳ ಖರೀದಿಸುವ ಮೂಲಕವೇ ವಹಿವಾಟು ವಿಸ್ತರಿಸುತ್ತಿರುವ `ಇತಿಹಾದ್ ಏರ್‌ಲೈನ್ಸ್'ನ ವಹಿವಾಟು ಸ್ವರೂಪವು ವಿಮಾನ ಯಾನ ರಂಗದಲ್ಲಿ ಇದುವರೆಗೆ ಯಶಸ್ಸು ಕಂಡಿದೆ. `ಇತಿಹಾದ್ ಏರ್‌ಲೈನ್ಸ್' ಈಗಾಗಲೇ ಮೂರು ವಿದೇಶಿ ವಿಮಾನ ಯಾನ ಸಂಸ್ಥೆಗಳಲ್ಲಿ ಪಾಲು ಬಂಡವಾಳ ಹೊಂದಿದ್ದು, `ಜೆಟ್ ಏರ್‌ವೇಸ್' ಜತೆಗಿನ ಸಹಭಾಗಿತ್ವವು ನಾಲ್ಕನೆಯದ್ದು ಆಗಿದೆ.

ಸ್ಥಳೀಯ ವಿಮಾನ ಯಾನ ಸಂಸ್ಥೆಗಳ ಜತೆಗಿನ ಸಹಭಾಗಿತ್ವದಲ್ಲಿ ಮತ್ತು ತ್ವರಿತವಾಗಿ  ವಹಿವಾಟು ವಿಸ್ತರಿಸುವ ಕಾರ್ಯತಂತ್ರದಲ್ಲಿ    `ಇತಿಹಾದ್ ಏರ್‌ಲೈನ್ಸ್' ವಿಶ್ವಾಸ ಇರಿಸಿರುವುದು ಇದರಿಂದ ವೇದ್ಯವಾಗುತ್ತದೆ. ಅಬುಧಾಬಿಯಲ್ಲಿನ ಕಚ್ಚಾ ತೈಲ ವಹಿವಾಟಿನ ಹಣದ ಥೈಲಿ ಈ ಸಂಸ್ಥೆಯ ನೆರವಿಗೆ ಇರುವುದರಿಂದ ಸಂಪನ್ಮೂಲಕ್ಕೇನೂ ಕೊರತೆ ಇಲ್ಲ. `ಜೆಟ್ ಏರ್‌ವೇಸ್'ನಲ್ಲಿನ ಪಾಲು ಬಂಡವಾಳ ಖರೀದಿಯು ಸಕಾಲಿಕವಾಗಿದ್ದು, ಈ ಸಹಭಾಗಿತ್ವವು ಯಶಸ್ಸಿನ  ಹಾದಿಯಲ್ಲಿಯೇ ಸಾಗುವ ನಿರೀಕ್ಷೆ ಇದೆ.

ದೇಶಿ ವಿಮಾನ ಯಾನ ರಂಗದ ಮಾರುಕಟ್ಟೆಯು ದಿನೇ ದಿನೇ ಬೆಳೆಯುತ್ತಿದ್ದು, `ಕಿಂಗ್‌ಫಿಷರ್ ಏರ್‌ಲೈನ್ಸ್'  ನೇಪಥ್ಯಕ್ಕೆ ಸರಿದ  ನಂತರ ವಿಮಾನ ಯಾನ ಸೇವೆಗೆ ತೀವ್ರ ಅಡಚಣೆ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ದೇಶಿ ವಿಮಾನ ಯಾನ ರಂಗದಲ್ಲಿ ಸಾಕಷ್ಟು ಹಣದ ಬಲ ಇರುವ  ಇನ್ನೂ ಹಲವು ವಿಮಾನ ಯಾನ ಸಂಸ್ಥೆಗಳ ಅಗತ್ಯ ಇದೆ ಎಂದು ಅನೇಕ ಪರಿಣತರು ಅಭಿಪ್ರಾಯಪಡುತ್ತಾರೆ. `ಇತಿಹಾದ್ ಏರ್‌ಲೈನ್ಸ್'ಗೆ ಇರುವ ತೈಲ ಹಣದ ಬೆಂಬಲವು ಈ ಕೊರತೆಯನ್ನು ಕೆಲ ಮಟ್ಟಿಗೆ ತುಂಬಿ ಕೊಡಲಿದೆ. `ಜೆಟ್ ಏರ್‌ವೇಸ್' ಪಾಲಿಗೂ ಈ ಒಪ್ಪಂದವು ಸಾಕಷ್ಟು ಲಾಭದಾಯಕವಾಗಿರಲಿದೆ. ಅಬುಧಾಬಿಯ ಅತ್ಯಾಧುನಿಕ ವಿಮಾನ ನಿಲ್ದಾಣದ ಮೂಲಕ ಪಶ್ಚಿಮದ ದೇಶಗಳಿಗೆ ವಿಮಾನ ಸೇವೆ ಆರಂಭಿಸಲು   `ಜೆಟ್ ಏರ್‌ವೇಸ್'ಗೆ ನೆರವಾಗಲಿದೆ.

ಟಿಕೆಟ್ ಜತೆಗೆ ದೊರೆಯುವ ಅನೇಕ ಸೌಲಭ್ಯಗಳಿಗೆ  ಹೆಚ್ಚುವರಿ ಶುಲ್ಕ ಭರಿಸಬೇಕು ಎಂದು ವಿಮಾನ ಯಾನ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ದೇಶಿ ವಿಮಾನ ಪ್ರಯಾಣಿಕರಿಗೆ ಕಡ್ಡಾಯ ಮಾಡುತ್ತಿವೆ. ಈಗಾಗಲೇ ನೀಡುತ್ತಿರುವ ಮತ್ತು ಹೊಸದು ಸೇರಿದಂತೆ ಪ್ರತಿಯೊಂದು ಸೇವೆಯು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಶೌಚಾಲಯ ಸೌಲಭ್ಯ ಹೊರತುಪಡಿಸಿ ಪ್ರತಿಯೊಂದಕ್ಕೂ ಈಗ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರಮುಖ ವೃತ್ತಪತ್ರಿಕೆಯೊಂದು ಇತ್ತೀಚಿಗೆ ಲೇಖನವೊಂದನ್ನು ಪ್ರಕಟಿಸಿತ್ತು.

ಸೀಟಿನ ಆಯ್ಕೆ, ಪ್ಲಾಸ್ಟಿಕ್ ಹಣದ ಬಳಕೆ, ಲಾಂಜ್‌ನಲ್ಲಿನ ಸೌಲಭ್ಯಗಳ ಬಳಕೆ, ವೈ- ಫೈ, ಊಟ, ಕುಡಿಯುವ ನೀರು, ಸರಕು - ಸರಂಜಾಮು- ಹೀಗೆ ಪ್ರತಿಯೊಂದು ಸೇವೆಗೂ ಸೇವಾ ಶುಲ್ಕ ವಸೂಲಿ ಮಾಡುತ್ತಿರುವ ವಿಮಾನ ಯಾನ  ಸಂಸ್ಥೆಗಳು, ಈ ಬಾಬತ್ತಿನಿಂದಲೇ ಸಾಕಷ್ಟು ವರಮಾನ ಗಳಿಸುತ್ತಿವೆ. ಆಸ್ಟ್ರೇಲಿಯಾದಲ್ಲಿನ ಕೆಲ ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕರ ತೂಕ ಆಧರಿಸಿ ಟಿಕೆಟ್ ಬೆಲೆ ವಸೂಲಿ ಮಾಡುತ್ತಿವೆ. ವಿಮಾನ ಪ್ರಯಾಣವು ಈಗ ವಿಲಾಸಿ ಎಂದೇನೂ ಪರಿಗಣಿತವಾಗುತ್ತಿಲ್ಲ. ಹೀಗಾಗಿ ಸೇವಾ ಶುಲ್ಕದ ಹೆಸರಿನಲ್ಲಿ ಪ್ರಯಾಣಿಕರ ಜೇಬು ಬರಿದು ಮಾಡುವ ತಂತ್ರಗಳು ಸ್ವೀಕಾರ್ಹವೂ ಅಲ್ಲ.
ವಿಮಾನ ಯಾನ ರಂಗದಲ್ಲಿ ಹಿಂದೊಮ್ಮೆ  `ಇಂಡಿಯನ್ ಏರ್‌ಲೈನ್ಸ್', ತನ್ನ ಬಸ್‌ಗಳಲ್ಲಿ ವಿಮಾನ ನಿಲ್ದಾಣಕ್ಕೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತಿದ್ದ ದಿನಗಳಿಂದ ನಾವು ಈಗಾಗಲೇ ಸಾಕಷ್ಟು ದೂರ ಕ್ರಮಿಸಿ ಬಂದಿದ್ದೇವೆ.

ದಿನೇ ದಿನೇ ಹೆಚ್ಚೆಚ್ಚು ಪ್ರಯಾಣಿಕರು ವಿಮಾನಗಳನ್ನು ನೆಚ್ಚಿಕೊಳ್ಳುತ್ತಿರುವುದು  ಸಕಾರಾತ್ಮಕ ಬೆಳವಣಿಗೆಯಾಗಿದೆ. ದೇಶಿ ವಿಮಾನ ಯಾನ ರಂಗದಲ್ಲಿ ಸ್ಪರ್ಧೆ ಹೆಚ್ಚಿದಷ್ಟೂ ಸೇವೆಗಳ ಗುಣಮಟ್ಟ ಸುಧಾರಣೆಯಾಗಲಿದೆ. ಸ್ಪರ್ಧಾತ್ಮಕ ದರಗಳ ಕಾರಣಕ್ಕೆ ಪ್ರಯಾಣಿಕರು ತಮಗೆ ಇಷ್ಟದ ವಿಮಾನ ಯಾನ ಸಂಸ್ಥೆಗಳನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸಣ್ಣ- ಪುಟ್ಟ ನಗರಗಳಿಗೆ ವಿಮಾನ ಸೇವೆ ಕಲ್ಪಿಸುವುದರಿಂದ ವೆಚ್ಚ ಮತ್ತು ಸಮಯದ ಸಾಕಷ್ಟು ಉಳಿತಾಯವಾಗಲಿದೆ.

ಭಾರತೀಯರು ಈಗಲೂ ವಿದೇಶಗಳ ದೂರದ ನಗರಗಳಿಗೆ ಪ್ರಯಾಣಿಸಲು ವಿದೇಶದಲ್ಲಿನ ವಿಮಾನ ನಿಲ್ದಾಣಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದು ಕೆಲ ಮಟ್ಟಿಗೆ ಅನಾನುಕೂಲತೆಗೆ ಆಸ್ಪದ ಮಾಡಿಕೊಟ್ಟಿದೆ. ದೇಶದಲ್ಲಿ ನಿರ್ಮಾಣವಾಗಿರುವ ದೊಡ್ಡ, ದೊಡ್ಡ ವಿಮಾನ ನಿಲ್ದಾಣಗಳ ಸ್ಥಳಾವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಬಳಸದಿರುವುದರಿಂದ, ಉದ್ದಿಮೆಯು ದುಬಾರಿ ಬಳಕೆ ವೆಚ್ಚ, ಕಡಿಮೆ ವರಮಾನದ ವಿಷವರ್ತುಳದಲ್ಲಿ ಸಿಲುಕಿಕೊಂಡಂತೆ ಆಗಿದೆ.
ಹೊಸ ವಿಮಾನ ಯಾನ ಸಂಸ್ಥೆಗಳ ಪ್ರವೇಶದಿಂದಾಗಿ ದೇಶಿ ವಿಮಾನ ಯಾನ ಸಂಸ್ಥೆಗಳಿಗೂ ಸಾಕಷ್ಟು ಬಿಸಿ ಮುಟ್ಟಲಿದೆ. ಸರ್ಕಾರಿ ಸ್ವಾಮ್ಯದ ಮತ್ತು ಮುದ್ದಿನ `ಏರ್ ಇಂಡಿಯಾ'ದ ಹಲವಾರು ಪ್ರಮುಖ ಮಾರ್ಗಗಳು ಕೈತಪ್ಪಲಿವೆ.

ದೇಶಿ ಪ್ರಯಾಣಿಕರ ಅಗತ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸುವ ನಿಟ್ಟಿನಲ್ಲಿ ಸ್ಥಳೀಯ ವಿಮಾನ ಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಅಭಿವೃದ್ಧಿಗೊಳ್ಳುವ ಅಗತ್ಯ ಇರುವುದು  ಸರ್ಕಾರಕ್ಕೆ  ಮನವರಿಕೆ ಆಗಬೇಕಾಗಿದೆ.

ನಮ್ಮ ನೆರೆಹೊರೆಯಲ್ಲಿ ಇರುವ ಸಣ್ಣ - ಪುಟ್ಟ ದೇಶಗಳೂ ವಿಮಾನ ಯಾನ ಉದ್ದಿಮೆಯನ್ನು ಸ್ಥಳೀಯವಾಗಿಯೇ ತೃಪ್ತಿದಾಯಕವಾಗಿ ಅಭಿವೃದ್ಧಿಪಡಿಸಿವೆ. ಪ್ರಯಾಣಿಕರ ಸಂಖ್ಯೆ  ಭಾರಿ ಪ್ರಮಾಣದಲ್ಲಿ ಇರುವಾಗ, ಉದ್ದಿಮೆ ಅಭಿವೃದ್ಧಿಗೆ ಗಮನ ನೀಡದಿದ್ದರೆ ವಹಿವಾಟು ಮತ್ತು ಪ್ರವಾಸೋದ್ಯಮದ ಆರ್ಥಿಕ ಲಾಭಗಳಿಗೆ ಭಾರತ     ಎರವಾಗುವ ಸಾಧ್ಯತೆಗಳಿವೆ.

ವಿಮಾನ ಯಾನ ರಂಗದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ ಭಾರತದ ಉದಾರ ನೀತಿಯನ್ನು ಅನೇಕ ದೇಶಗಳು ಈಗಲೂ ಪಾಲಿಸುತ್ತಿಲ್ಲ. ಸರ್ಕಾರ ಇನ್ನಷ್ಟು ದಿಟ್ಟ ನಿರ್ಧಾರ ಕೈಗೊಂಡು, ವಿಮಾನ ಯಾನ ಸಂಸ್ಥೆಗಳಿಗೆ ನೆರವಾಗುತ್ತಲೇ ಅವುಗಳ ಸಹಯೋಗದಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.

`ಏರ್ ಇಂಡಿಯಾ'ದ ಭವಿಷ್ಯದ ದೃಷ್ಟಿಯಿಂದಲೂ ಸೂಕ್ತ ನಿರ್ಧಾರಕ್ಕೆ ಬರಲು ಸರ್ಕಾರಕ್ಕೆ ಇದು ಸಕಾಲವೂ ಹೌದು. ದೀರ್ಘಾವಧಿಯಲ್ಲಿ ಹೆಚ್ಚು ಪ್ರಯೋಜನ ಪಡೆಯಲು ಸರ್ಕಾರ ಕಾರ್ಯಪ್ರವೃತ್ತವಾಗಬೇಕಾಗಿದೆ.
- ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.