ADVERTISEMENT

ಸತ್ಯ ನಗ್ನವಾಗಿ ನಿಂತಿದೆ...

ಪ್ರಕಾಶ್ ರೈ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಸತ್ಯ ನಗ್ನವಾಗಿ ನಿಂತಿದೆ...
ಸತ್ಯ ನಗ್ನವಾಗಿ ನಿಂತಿದೆ...   

‘ನೀನಿಲ್ಲದೆ ನನಗೆ ಬದುಕೇ ಇಲ್ಲ ಕಣೋ’ ಎಂದು ಹೇಳಿದ ಪ್ರೇಯಸಿ ಈಗ ಬೇರೊಬ್ಬನೊಡನೆ ಬದುಕುತ್ತಿದ್ದಾಳೆ. ಎಂದಾದರೊಮ್ಮೆ ಅಕಸ್ಮಾತ್‌ ಭೇಟಿಯಾದರೆ, ‘ಏನೂ ನಡೆದೇ ಇಲ್ಲ’ ಎಂಬಂತೆ ‘ಹಲೋ ಪ್ರಕಾಶ್’ ಅಂತ ಕ್ಯಾಶುವಲ್‌ ಆಗಿ ನಗುತ್ತಾಳೆ. ರಂಗಭೂಮಿಯಲ್ಲಿ ಕಷ್ಟಪಡುತ್ತಿದ್ದಾಗ ಬಡತನದ ಜತೆಗೆ ಕನಸುಗಳನ್ನೂ ಹಂಚಿಕೊಂಡಿದ್ದ ಗೆಳೆಯ ಈಗ ನನ್ನನ್ನು ತನ್ನ ವೃತ್ತಿಜೀವನದ ಶತ್ರು ಎಂಬಂತೆ ನೋಡುತ್ತಾನೆ.

‘ನೋಡ್ತಾ ಇರ್ರೋ... ಈ ಸಿನಿಮಾ ರಿಲೀಸ್‌ ಆದ್ರೆ ನಾನು ಭಾಳ ದೊಡ್ಡ ನಟನಾಗಿ ಹೆಸರು ಮಾಡ್ತೇನೆ’ ಎಂದ ಸಿನಿಮಾ ಸೂಪರ್‌ ಫ್ಲಾಪ್‌! ಯಾವಾಗಲೂ ನನ್ನನ್ನು ಅಪ್ಪಿ ಹಿಡಿದು ಮಲಗುವ ನನ್ನ ಪುಟ್ಟ ಮಗಳು ಹೊಸದಾಗಿ ಒಂದು ಗೊಂಬೆಯನ್ನು ಕಂಡೊಡನೆ ನನ್ನನ್ನು ಮರೆತುಬಿಡುತ್ತಾಳೆ. ಅವಳ ಪ್ರಪಂಚದಲ್ಲಿ ಜೀವಂತವಾಗಿರುವ ಅಪ್ಪನಿಗಿಂತ ಜೀವವಿಲ್ಲದ ಒಂದು ಗೊಂಬೆ ಹೇಗೆ ಮುಖ್ಯವಾಯಿತು?

ಯೋಚಿಸತೊಡಗಿದರೆ ತಲೆಸುತ್ತುತ್ತದೆ. ಆದರೆ ಎಲ್ಲವೂ ಸತ್ಯ. ಅಪಘಾತದಲ್ಲಿ ತೀರಿಹೋದ ಮಡದಿಯ ಮುಖವನ್ನು ನೋಡಲು ನಿರಾಕರಿಸಿ ‘ಇಲ್ಲ ಪ್ರಕಾಶ್‌... ಅವಳು ಸತ್ತಿಲ್ಲ, ಇವರು ಬೇರೆ ಯಾರೋ’ ಎಂದು ಗೆಳೆಯ ರಾಯಾಪೇಟೆ ಆಸ್ಪತ್ರೆಯ ವರಾಂಡದಲ್ಲಿ ನನ್ನ ತೋಳಿನ ಮೇಲೆ ತಲೆಯಿಟ್ಟು ಹರಿಸಿದ ಕಣ್ಣೀರಿನ ಬಿಸಿ ಇನ್ನೂ ನನ್ನ ತೋಳನ್ನು ಸುಡುತ್ತಿದೆ.

ADVERTISEMENT

ಸತ್ಯವನ್ನು ಕಂಡರೆ ಮನುಷ್ಯನಿಗೆ ಏಕೆ ಇಷ್ಟೊಂದು ಭಯ? ಸರಿ, ಹಾಗಾದರೆ ಸತ್ಯವನ್ನು ಹೇಗೆ ಎದುರುಗೊಳ್ಳುವುದು? ಎಲ್ಲರ ಮುಂದಿರುವ ದೊಡ್ಡ ಸವಾಲು ಇದು. ಸುಳ್ಳು ಸರಳವಾಗಿರುತ್ತದೆ. ಸುಂದರವಾಗಿರುತ್ತದೆ. ಜ್ವಲಿಸುವ ಕಿರೀಟದಂತಿರುತ್ತದೆ. ಒಂದು ಸುಳ್ಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಎಷ್ಟೋ ಜನ ರಾಜರಂತೆ ಮೆರೆಯುತ್ತಾರೆ ಈ ಊರಲ್ಲಿ. ಆದರೆ ಸತ್ಯ ನಗ್ನವಾಗಿಯೇ ನಿಂತಿರುತ್ತದೆ. ತಲೆಯ ಮೇಲಿಟ್ಟ ಮುಳ್ಳುಕಿರೀಟದಂತೆ ಚುಚ್ಚುತ್ತದೆ. ಆದ್ದರಿಂದಲೇ ಸತ್ಯವನ್ನು ಕಂಡಾಗ ಓಡಿ ಬಚ್ಚಿಟ್ಟುಕೊಳ್ಳುತ್ತೇವೆ. ಸುಳ್ಳು ಅಟ್ಟಿಸಿಕೊಂಡು ಬರುತ್ತಿದ್ದಂತೆ, ಸತ್ಯ ಉಸಿರುಗಟ್ಟಿಸುತ್ತಿದ್ದಂತೆ ಕೆಲವರು ಸ್ವಾಮೀಜಿಗಳಾಗಿ ತಿರುಗುತ್ತಾರೆ. ಹಲವರು ಹುಚ್ಚರಾಗಿ ಅಲೆಯುತ್ತಾರೆ.

ನನ್ನನ್ನು ಕೇಳಿದರೆ ಸತ್ಯಕ್ಕೆ ನೇರವಾಗಿ ಮುಖಾಮುಖಿಯಾಗುವ ಧೈರ್ಯವೇ ಬದುಕು. ಅದು ನೋವನ್ನುಂಟುಮಾಡುತ್ತದೆ. ಉಸಿರುಗಟ್ಟಿಸುತ್ತದೆ. ಆದರೆ ಅದುವೇ ಸರಿ.

ಕಾಲೇಜಿನಲ್ಲಿ ಓದುತ್ತಿದ್ದಾಗ ತನ್ನ ಜೀವನದಲ್ಲಿ ಒಬ್ಬಳು ಗೆಳತಿ ಬಂದಳು. ನನಗಿಂತ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವಳು. ನಮ್ಮಿಬ್ಬರನ್ನು ಬೆಸೆದದ್ದು ಪ್ರೇಮವೆಂದು ಹೇಳಲಾಗದು. ಪ್ರೇಮವನ್ನು ಮೀರಿ ಅವಳು ನನಗೆ ಬಹಳಷ್ಟು ವಿಷಯವನ್ನು ಕಲಿಸಿಕೊಟ್ಟಳು. ನನ್ನ ಗುರುವಿನಂತಿದ್ದಳು. ಬುದ್ಧಿವಂತೆ. ಕಾಲೇಜೇ ಅವಳ ಹಿಂದೆ ಬಿದ್ದಂಥ ಸುಂದರಿ.

ನಾನು ಬೆಂಗಳೂರಿನ ಗಡಿಯನ್ನು ದಾಟಿರದಿದ್ದ ಆ ವಯಸ್ಸಿನಲ್ಲಿಯೇ ಆಕೆ ವಿದೇಶಗಳನ್ನು ಸುತ್ತಿ ಬಂದಿದ್ದಳು. ಪ್ರಗತಿಪರ ಚಿಂತನೆಯಿದ್ದ ದಿಟ್ಟ ಹೆಣ್ಣು. ರಾಜಕೀಯ, ಸಾಹಿತ್ಯ, ಯುದ್ಧ, ಸಿನಿಮಾ, ಅಡುಗೆ, ಪ್ರಯಾಣ ಹೀಗೆ ಎಲ್ಲ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದಳು. ಅವಳ ಮಾತೆಂದರೆ ನನಗೆ ಇಷ್ಟವಾಗುತ್ತಿತ್ತು. ನಾನು ಕೇಳುವುದು ಅವಳಿಗೆ ಇಷ್ಟವಾಗುತ್ತಿತ್ತು.

ಬೆಂಗಳೂರಿನ ಮೂಲೆಯೊಂದರಲ್ಲಿ ನನ್ನ ಕೊಠಡಿ. ರಾತ್ರಿ ಒಂಬತ್ತುಗಂಟೆಗೆ ಕೊನೆಯ ಬಸ್‌. ಮಿಸ್‌ ಮಾಡಿದರೆ ನಡೆದೇ ಹೋಗಬೇಕು. ಅವಳಿಗಾಗಿ ಬೇಕಂತಲೇ ಬಸ್‌ ಮಿಸ್‌ ಮಾಡಿಕೊಳ್ಳುತ್ತಿದ್ದ ದಿನಗಳು ಬಹಳ ಸುಂದರ. ನಡುರಾತ್ರಿ ಅವಳ ಗುಂಗಿನಲ್ಲೇ ನಡೆದು ಕೋಣೆ ಸೇರುತ್ತಿದ್ದೆ.

ಹೀಗೊಂದು ದಿನ ‘ನಮ್ಮಿಬ್ಬರ ನಡುವೆ ಇರುವ ಈ ಸಂಬಂಧಕ್ಕೆ ಹೆಸರೇನು?’ ಎಂದು ಕೇಳಿದೆ. ‘ಗೊತ್ತಿಲ್ಲ ಪ್ರಕಾಶ್‌’ ಎಂದಳು. ‘ನೀನು ಯಾವಾಗಲೂ ನನ್ನೊಂದಿಗಿದ್ದರೆ ಏನನ್ನಾದರೂ ಸಾಧಿಸಬಲ್ಲೆ ಎನಿಸುತ್ತಿದೆ. ಆದರೆ ನಿನ್ನನ್ನು ಪ್ರೇಯಸಿಯಂತೆ ನೋಡಲು ಸಾಧ್ಯವಾಗುತ್ತಿಲ್ಲ. ನಮ್ಮಿಬ್ಬರೊಳಗೆ ಕಾಮಿಸುವ ಬಯಕೆ ಮಾತ್ರ ಯಾಕೆ ಹುಟ್ಟುತ್ತಿಲ್ಲ’ ಎಂದು ಪ್ರಾಮಾಣಿಕವಾಗಿ ಕೇಳಿದೆ. ‘ನೀನು ಹೇಳುತ್ತಿರುವುದು ತುಂಬಾ ಸರಿ. ನನಗೂ ನನ್ನ ಜೀವನದಲ್ಲಿ ನಿನ್ನ ಜತೆಗೇ ಇರಬೇಕು ಎಂದು ಆಸೆಯಾಗುತ್ತಿದೆ. ಕಾಮವಿಲ್ಲದೆ ಒಂದು ಹೆಣ್ಣು– ಗಂಡು ಕೂಡಿ ಬದುಕಲು ಗಂಡ ಹೆಂಡತಿ ಎಂಬ ಸಂಬಂಧದ ಅವಶ್ಯತೆ ಇಲ್ಲ. ಒಂದು ಕೆಲಸ ಮಾಡೋಣ. ನಮ್ಮಿಬ್ಬರ ನಡುವೆ ಕಾಮ ಇದೆಯೇ ಎಂದು ಪರೀಕ್ಷೆ ಮಾಡಿ ನೋಡಿಯೇಬಿಡೋಣ’ ಎಂದಾಗ ನನಗೆ ಶಾಕ್‌! ಆದರೆ ಈ ಪರಿಶೋಧನೆಯಲ್ಲಿ ಗೆದ್ದರೆ ನನ್ನ ಜೀವನದುದ್ದಕ್ಕೂ ಅವಳಿರುತ್ತಾಳೆ ಎನ್ನುವ ಆಸೆ.

ಇಬ್ಬರೂ ಮೈಸೂರಿನ ಹೋಟೆಲೊಂದರಲ್ಲಿ ರೂಮ್‌ ಬುಕ್‌ ಮಾಡಿ ಹೋದೆವು. ನನಗೆ ಇಷ್ಟವಾದವಳೊಂದಿಗೆ ನಾನು, ಅವಳಿಗಿಷ್ಟವಾದವನೊಂದಿಗೆ ಅವಳು. ಒಂದೇ ಮಂಚದಲ್ಲಿದ್ದೇವೆ. ಎಲ್ಲ ಹದ್ದುಗಳನ್ನು ಮೀರಬಹುದು. ಒಬ್ಬರು ಇನ್ನೊಬ್ಬರ ಮೇಲೆ ತಪ್ಪು ಹೊರಿಸಬಾರದು ಎಂದು ನಮ್ಮೊಳಗೇ ಒಂದು ಧಾರ್ಮಿಕ ಒಪ್ಪಂದ. ಬೆಳಗಾಗುವವರೆಗೆ ಮಾತನಾಡುತ್ತಲೇ ಇದ್ದಳು... ಉಸ್ತಾದರ ಶಹನಾಯಿ, ವರ್ಡ್ಸ್‌ವರ್ತ್‌ನ ಕವಿತೆಗಳು, ಕಾಲೇಜ್‌, ಮಳೆ, ಆನೆ, ಮಕ್ಕಳು ಹೀಗೆ ಏನೇನೋ.. ನಾನೂ ಕೇಳುತ್ತಲೇ ಇದ್ದೇನೆ. ಒಂದು ಮುತ್ತನ್ನಾದರೂ ಹಂಚಿಕೊಳ್ಳಬೇಕೆನಿಸಲಿಲ್ಲ ಇಬ್ಬರಿಗೂ. ಅವಳ ಮಾತನ್ನು ಕೇಳುವುದರಲ್ಲಿ ಇದ್ದ ಸುಖ ಅವಳನ್ನು ಸ್ಪರ್ಶಿಸುವುದರಲ್ಲಿರಲಿಲ್ಲ. ‘ನಾವಿಬ್ಬರೂ ಗಂಡ ಹೆಂಡಿರಾಗಲು ಸಾಧ್ಯವೇ ಇಲ್ಲ ಪ್ರಕಾಶ್‌’ ಎಂದು ಹೇಳಿಬಿಟ್ಟಳು. ನನಗೂ ಅದುವೇ ಸರಿ ಎಂದೆನಿಸಿತು.

ಆನಂತರ ವೃತ್ತಿಯ ಬೆನ್ನೇರಿ ನಾನು ಚೆನ್ನೈಗೆ ಬಂದುಬಿಟ್ಟೆ. ಲತಾಳನ್ನು ಪ್ರೇಮಿಸಿ ಮದುವೆಯಾದೆ. ಮಗಳು ಹುಟ್ಟಿ ಮೂರು ನಾಲ್ಕು ವರ್ಷ ಓಡಿಯೇ ಹೋಯಿತು. ಅವಳಿಗೂ ಮದುವೆಯಾಯಿತು. ನನ್ನ ಗೆಳತಿ ಇನ್ನೊಬ್ಬನನ್ನು ಮದುವೆಯಾಗುವಳೆಂಬ ಸತ್ಯವನ್ನು ಸಂಧಿಸಲು ಧೈರ್ಯವಿಲ್ಲದೆ ಮದುವೆಗೆ ಹೋಗಲಿಲ್ಲ. ಹೂಗುಚ್ಛವೊಂದನ್ನು ಕಳುಹಿಸಿಕೊಟ್ಟೆ.

ಮುಂದೊಂದು ದಿನ ಬೆಂಗಳೂರಿನಲ್ಲಿ ಶೂಟಿಂಗ್‌ನಲ್ಲಿದ್ದಾಗ ದಿಢೀರ್‌ ಎಂದು ಅವಳ ನೆನಪು ಕಾಡತೊಡಗಿತು. ಅವಳನ್ನು ನೋಡಬೇಕು ಎಂದೆನಿಸಿತು. ಫೋನ್‌ ಮಾಡಿದೆ. ಅವಳು ‘ಪ್ರಕಾಶಾ, ನಿನ್ನನ್ನು ನೋಡಬೇಕೆನಿಸುತ್ತಿದೆ. ನೀನು ಯಾವೂರಿನಲ್ಲಿದ್ದರೂ ಸರಿ, ಬರ್ತೇನೆ’ ಎಂದಳು. ‘ಬೆಂಗಳೂರಿನಲ್ಲಿಯೇ ಇದ್ದೇನೆ’ ಎಂದೆ. ‘ಸರಿ. ಸಂಜೆ ಸಿಗ್ತೇನೆ’ ಅಂದಳು. ನನ್ನ ಮನಸ್ಸು ಸಂತೋಷದಿಂದ ಕುಣಿಯತೊಡಗಿತ್ತು. ತುಂಬ ದಿನಗಳ ನಂತರ ಮತ್ತೆ ಅವಳ ಮಾತನ್ನು ಕೇಳಲಿದ್ದೇನೆ. ಇಷ್ಟು ವರ್ಷಗಳ ಕಥೆಗಳಿರುತ್ತವೆ ಅವಳಲ್ಲಿ. ನಾನು ಇಷ್ಟಪಟ್ಟು ಬಸ್‌ ಮಿಸ್‌ ಮಾಡಿದ ಆ ರಾತ್ರಿ ಮತ್ತೆ ಬರುತ್ತಿದೆ...

ಕೊನೆಗೂ ಅವಳು ಬಂದಳು. ಈಗ ಇನ್ನೂ ಸುಂದರವಾಗಿದ್ದಾಳೆ ಎನಿಸಿತು. ಮತ್ತೊಮ್ಮೆ ಒಂದೇ ಕೋಣೆಯಲ್ಲಿ, ಒಂದೇ ಮಂಚದ ಮೇಲೆ ಕುಳಿತು ಮಾತನಾಡತೊಡಗಿದೆವು. ‘ಅವನೊಂದಿಗೆ ಬದುಕಲು ಇಷ್ಟವಾಗ್ತಿಲ್ಲ ಕಣೋ’ ಎಂದು ವಿರಕ್ತಿಯಿಂದ ಮಾತನ್ನಾರಂಭಿಸಿದಳು. ಏನು ಹೇಳಬೇಕು ಎಂದು ತೋಚದೇ ನಾನು ಸುಮ್ಮನೆ ಕೇಳುತ್ತಿದ್ದೆ. ದಿಢೀರ್‌ ಎಂದು ಕಣ್ಣಲ್ಲಿ ಕಣ್ಣಿಟ್ಟು, ‘ಈ ರಾತ್ರಿ ನಿನ್ನೊಂದಿಗೆ ಬದುಕಬೇಕು ಎಂದು
ಆಸೆಯಾಗುತ್ತಿದೆ. ಬದುಕಲೇ?’ ಎಂದಳು. ಅವಳಿಗೆ ಮದುವೆಯಾಗಿದೆ. ನನಗೆ ಮಗಳು ಹುಟ್ಟಿದ್ದಾಳೆ. ಅವಳೊಡನೆ ಕಾಮಿಸುವ ಆಸೆಯನ್ನು ಹತ್ತಿಕ್ಕಬೇಕೆಂದು ನಾನು ಹಾಕಿಕೊಂಡಿದ್ದ ಎಲ್ಲ ತಡೆಗಳನ್ನು ಒಂದೇ ಒಂದು ಮಾತಿನಲ್ಲಿ ಒಡೆದು ಛಿದ್ರಗೊಳಿಸಿದಳು.

‘ನೀನಂದ್ರೆ ನಂಗೆ ಭಾಳ ಇಷ್ಟ. ನಾಲ್ಕು ವರ್ಷಗಳ ಹಿಂದೆ ಇದು ನಡೆದಿದ್ದರೆ ನಮ್ಮ ಬದುಕೇ ಬೇರೆಯಾಗಿರುತ್ತಿತ್ತು. ಈಗ ಕೇಳ್ತಾ ಇದ್ದೀಯಲ್ಲೇ... ಆಗ ಯಾಕೆ ನಮ್ಮಿಬ್ಬರ ಮಧ್ಯೆ ಕಾಮ ಮಾತ್ರ ಇಲ್ಲದೇ ಹೋಯಿತು? ಈಗ ಎಲ್ಲಿಂದ ಬಂತು?’ ಎಂದು ಕೇಳಿದೆ. ಸತ್ಯದ ಮುಂದೆ ನಾವಿಬ್ಬರೂ ತಲೆತಗ್ಗಿಸಿ ನಿಂತೆವು. ‘ನಿನಗಾಗಿ ಏನನ್ನಾದರೂ ಮಾಡುವೆ’ ಎಂದ ಕ್ಷಣಗಳು ಕಣ್ಣಲ್ಲಿ ಹೆಪ್ಪುಗಟ್ಟಿವೆ. ‘ಸಾರಿ ಕಣೇ... ನಾಳೆ ಶೂಟಿಂಗ್‌. ರಾತ್ರಿನೇ ಚೆನ್ನೈಗೆ ಹೋಗ್ಬೇಕು. ಇನ್ನೊಂದಿನ ಭೇಟಿಯಾಗೋಣ’ ಎಂದು ಹೇಳುವಾಗಲೇ ಗಂಟಲು ಗದ್ಗದಿತವಾಗುತ್ತಿದೆ. ಅವಳಿಗಾಗಿ ಶೂಟಿಂಗ್‌ ಮಿಸ್‌ ಮಾಡಬೇಕು ಎಂದು ತೋಚಲಿಲ್ಲ. ಕಾರಣ ಭಯ.

ನಾವಿಬ್ಬರೂ ಬಟ್ಟೆ ಹಾಕಿಕೊಂಡೇ ಇದ್ದೇವೆ. ಆದರೆ ನಮ್ಮ ಮುಂದೆ ಸತ್ಯ ನಗ್ನವಾಗಿ ನಿಂತಿದೆ. ಅದನ್ನು ಎದುರುಗೊಳ್ಳುವ ಪಕ್ವತೆ ಇಲ್ಲದೆ ಅವಿತುಕೊಳ್ಳಲು, ಶೂಟಿಂಗ್‌ ಎಂಬ ಕಾರಣ ಹೇಳಿ ಓಡಿಬಂದುಬಿಟ್ಟೆ.

ಈಗಲೂ ಪ್ರತಿವರ್ಷ ಹುಟ್ಟುಹಬ್ಬಕ್ಕೆ ಫೋನ್‌ ಮಾಡಿ ವಿಶ್‌ ಮಾಡುತ್ತೇನೆ. ನನ್ನ ಫೋನ್‌ ಕರೆಗೆ ಆ ದಿನ ಅವಳೂ
ಕಾಯುತ್ತಿರುತ್ತಾಳೆ. ನಡುವಿನ ಮುನ್ನೂರ ಅರವತ್ನಾಲ್ಕು ದಿನಗಳಲ್ಲಿ ನನ್ನ ನೆನಪುಗಳಲ್ಲಿ ಅವಳು, ಅವಳ ನೆನಪುಗಳಲ್ಲಿ ನಾನು ಎಷ್ಟು ಸಲ ಬಂದು ಹೋಗುತ್ತೇವೆಂದು ಇಬ್ಬರಿಗೂ ಗೊತ್ತಿಲ್ಲ.

ಇನ್ನೂ ಹೇಳಲು ಬಹಳಷ್ಟು ಸತ್ಯಗಳಿವೆ. ಆದರೆ ಮನಸ್ಸಿನೊಳಗೆ ಮನೆಮಾಡಿ ಕುಳಿತಿರುವ ಸುಳ್ಳುಗಳೆಲ್ಲ ಒಂದಾಗಿ ‘ಬೇಡ ಬೇಡ’ ಎನ್ನುತ್ತಿವೆ. ಏನು ಮಾಡೋಣ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.