ADVERTISEMENT

ಹುಲುಮಾನವರು ಮತ್ತು ಕುನ್ಮಾರಿ ದೇವರು

ಕೃಪಾಕರ ಸೇನಾನಿ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಚಾರ್ಜಿಂಗ್ ಎಲಿಫಂಟ್
ಚಾರ್ಜಿಂಗ್ ಎಲಿಫಂಟ್   
ಮುದುಮಲೈ ಮನೆಯಿಂದ ಉತ್ತರಕ್ಕೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಹಳೆಯ ಜೀಪ್ ರಸ್ತೆಯೊಂದಿತ್ತು. ಆ ದಿನಗಳಲ್ಲಿ ಪ್ರವಾಸಿಗರ ಹಾಗೂ ವಾಹನಗಳ ಸಂಖ್ಯೆ ತೀರಾ ಕಡಿಮೆಯಿದ್ದುದರಿಂದ ವಾರಕ್ಕೊಂದೋ ಎರಡೋ ಜೀಪುಗಳು ಮಾತ್ರ ಆ ರಸ್ತೆಯಲ್ಲಿ ಓಡಾಡುತ್ತಿದ್ದವು.
 
ಆ ದಾರಿ, ಕಾಡಿನ ಕಾಗುಣಿತಗಳ ಕಲಿಕೆಗೆ ನಮಗೆ ಹೇಳಿ ಮಾಡಿಸಿದ ಹೆದ್ದಾರಿಯಂತಿತ್ತ. ಬೃಹದಾಕಾರದ ಮತ್ತಿಮರಗಳು, ಬಿದಿರು ಮೆಳೆಗಳು ದಟ್ಟವಾಗಿದ್ದ ಈ ಭಾಗದ ಕಾಡು ಸಮೃದ್ಧವಾಗಿತ್ತು. ಈ ರಸ್ತೆಯಲ್ಲಿ, ಹಕ್ಕಿಗಳ ಹಾಡು ಅಥವ ಯಾವುದೋ ಹೆಜ್ಜೆಗಳ ಜಾಡು ಹಿಡಿದು ಸಾಗಿ, ನಾವೆಲ್ಲಿಗೆ ಹೋಗುತ್ತಿದ್ದೇವೆಂಬುದನ್ನೇ ಮರೆತು ದಾರಿ ತಪ್ಪಿ, ಹೇಗೋ ವಾಪಸ್ಸಾಗುವ ದಿನಚರಿಗಳು ಸಾಮಾನ್ಯವಾಗಿತ್ತು.
ಒಮ್ಮೆ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಈ ರಸ್ತೆಯ ಪಕ್ಕದ ಬಿದಿರಿನ ಮೆಳೆಯೊಂದರಲ್ಲಿ ಪುಟ್ಟ ಹಕ್ಕಿಯ ಗೂಡನ್ನು ನೋಡಿದ್ದೆವು. ಆಕಸ್ಮಿಕವಾಗಿ ಆ ಗೂಡನ್ನು ನೋಡಿದ್ದ ನಮಗೆ ಅದು ಯಾವ ಹಕ್ಕಿಯದೆಂದು ತಿಳಿದಿರಲಿಲ್ಲ. 
 
ಮರುದಿನ, ಆ ಗೂಡಿನ ಬಳಿಗೆ ಹೋಗಲೆಂದು, ನಮ್ಮ ನೆಚ್ಚಿನ ಕಾಡುಹಾದಿಯಲ್ಲಿ ನಡೆದುಹೋಗುತ್ತಿರುವಾಗ ದೂರದ ಹಳ್ಳದಿಂದ ಆನೆಗಳ ಕೂಗು ಕೇಳಿಬರುತ್ತಿತ್ತು. ದಾರಿಯಲ್ಲೊಂದೆಡೆ, ಆಗತಾನೆ ಅಡ್ಡಹಾದು ಹಳ್ಳದ ಕಡೆಗೆ ಹೋಗಿದ್ದ ಚಿರತೆಯೊಂದರ ಹೆಜ್ಜೆಯ ಗುರುತುಗಳಿದ್ದವು. ಮಂಗಗಳ ಎಚ್ಚರಿಕೆಯ ಕೂಗಿನ್ನೂ ನಿಂತಿರಲಿಲ್ಲ. ಆದರೆ ಗಮನ ಬೇರೆಡೆಗೆ ತಿರುಗುವುದನ್ನು ಪ್ರಜ್ಞಾಪೂರ್ವಕವಾಗಿ ನಿಗ್ರಹಿಸಿಕೊಂಡು ಸೀದಾ ಆ ಗೂಡಿನೆಡೆಗೆ ನಡೆದಿದ್ದೆವು.
 
ಆ ಗೂಡನ್ನು ಮತ್ತೆ ಪತ್ತೆಹಚ್ಚಲು ಹೆಚ್ಚು ಸಮಯ ಹಿಡಿಯಲಿಲ್ಲ. ಆದರೆ ಗೂಡಿನಲ್ಲಿ ಮೊಟ್ಟೆಗಳಿವೆಯೇ ಎಂದು ತಿಳಿದುಕೊಳ್ಳುವಷ್ಟರಲ್ಲಿ ಬಿದಿರಿನ ಮುಳ್ಳುಗಳು ಗೀರಿ ಹಲವಾರು ಗಾಯಗಳಾಗಿದ್ದವು. ಸಮಯ ವ್ಯರ್ಥಮಾಡದೆ ಬೇಗ ಬೇಗ ರೆಂಬೆಕೊಂಬೆಗಳನ್ನು ಜೋಡಿಸಿ ಸೊಪ್ಪು ಕಡ್ಡಿಗಳನ್ನು ಹೊದಿಸಿ ಒಂದು ‘ಹೈಡ್’ ಅಥವಾ ಮರೆಯನ್ನು ನಿರ್ಮಿಸಿದೆವು. ಕ್ಯಾಮೆರಾದೊಡನೆ ಕುಳಿತವರು ಕಣ್ಣಿಗೆ ಬೀಳದಂತೆ ಮರೆಮಾಚುವುದು ಈ ಹೈಡ್‌ನ ಉದ್ದೇಶ.
 
***
ಕೃಪಾಕರ: ಫುಟ್‌ಬಾಲ್ ಆಡುವಾಗ ನನ್ನ ಎಡಗಾಲಿನ ಲಿಗಮೆಂಟ್ ಹರಿದಿತ್ತು. ನಾನು ಆಗಷ್ಟೆ ಅದರಿಂದ ಚೇತರಿಸಿಕೊಳ್ಳುತ್ತಿದ್ದೆ. ಓಡಲು ಸಾಧ್ಯವಾಗುತ್ತಿರಲಿಲ್ಲ. ಕುಂಟುತ್ತಾ ನಡೆಯುವುದು ಅಭ್ಯಾಸವಾಗಿತ್ತು. ಬಹುಶಃ ಸೇನಾನಿ ಚಿರತೆಯ ಹೆಜ್ಜೆಯ ಹಿಂದೆ ಹೋಗದಿರುವುದಕ್ಕೆ ಇದೇ ಕಾರಣವಾಗಿತ್ತು.
 
ಹೈಡ್ ಸಿದ್ದವಾಗುತ್ತಿದ್ದಂತೆ ಸೇನಾನಿಯನ್ನು ಹೈಡ್‌ನೊಳಗೆ ಕೂರಿಸಿ ಸೊಪ್ಪು–ಕಡ್ಡಿಗಳಿಂದ ಹೆಣೆದು ಅವನು ಕಾಣದಂತೆ ಮಾಡಿದೆವು. ಕ್ಯಾಮೆರಾ ಲೆನ್ಸ್ ಮಾತ್ರ ಹೊರಬರುವಂತೆ ಒಂದು ಕಿಂಡಿ ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲ. ಈ ಹಕ್ಕಿ ನಮಗಿನ್ನೂ  ಕಾಣಸಿಕೊಂಡಿರಲಿಲ್ಲ. ಹಾಗಾಗಿ ಅದು ಬಹಳ ನಾಚಿಕೆ ಸ್ವಭಾವದ ಹಕ್ಕಿಯಿರಬಹುದೆಂದು ಊಹಿಸಿದ್ದೆವು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾವು ನಿರ್ಮಿಸಿದ್ದ ಹೈಡ್ ಎಷ್ಟು ಭದ್ರವಾಗಿತ್ತೆಂದರೆ, ಅವನಿಗೆ ಹೈಡ್‌ನಿಂದ ಆಚೆಬರಲು ಕೂಡ ಹೊರಗಿನವರ ಸಹಾಯ ಬೇಕಿತ್ತು.
 
ಆನೆಯ ಕಾಡುಗಳಲ್ಲಿ, ನೆಲದ ಮೇಲಿನ ಹೈಡ್‌ಗಳಲ್ಲಿ ಕುಳಿತವರು ಸಂಪೂರ್ಣ ಅಸಹಾಯಕರಾಗಿರುತ್ತಾರೆ. ಹಾಗಾಗಿ ಮತ್ತೊಬ್ಬರು ದೂರದಲ್ಲಿ ಕುಳಿತು ಆನೆಗಳಿಗಾಗಿ ಕಣ್ಣಾಡಿಸುವುದು ಅತ್ಯವಶ್ಯ. ಆದಿನ, ಆನೆ ಕಾಯುವ ಜವಾಬ್ದಾರಿ ನನಗೆ ಬಂದಿತ್ತು. ‘ಕುನ್ಮಾರಿ’ ನಮ್ಮೊಡನಿದ್ದ. ಹದಿವಯಸ್ಸಿನ ಸೋಲಿಗರ ಹುಡುಗ ಕುನ್ಮಾರಿ ನಮ್ಮೊಡನೆ ಕಾಡಿಗೆ ಬಂದಿದ್ದು ಅಂದೇ ಮೊದಲು. ಆದರೂ ಈ ಹುಡುಗನಿಗೆ ಕಾಡಿನ ದಾರಿ, ದಿಕ್ಕುದೆಸೆಗಳ ಬಗ್ಗೆಯಾಗಲಿ, ಕಾಡಿನಲ್ಲಿ ಬದುಕುಳಿಯುವ ಬಗ್ಗೆಯಾಗಲಿ, ನಾವು ಹೇಳಿಕೊಡುವುದು ಏನೂ ಇರಲಿಲ್ಲ.
 
(ನೀಲಿ ಸಾಮ್ರಾಟ)
 
ಅವನು ನಮ್ಮೊಡನಿದ್ದಾಗ ಆತ ನಿರ್ವಹಿಸಬೇಕಾದ ಕೆಲಸವೇನೆಂದು ವಿವರವಾಗಿ ಹೇಳಬೇಕಿತ್ತು. ನಮ್ಮೊಡನೆ ನಿತ್ಯ ಕಾಡಿಗೆ ಬರುತ್ತಿದ್ದ ಬೆಟ್ಟ ಕುರುಬ ಕ್ಯಾತನಿಗೆ ರಜೆಬೇಕಿದ್ದರಿಂದ ಆತನೇ ಕುನ್ಮಾರಿಯನ್ನು ಕಳುಹಿಸಿದ್ದ. ಕುನ್ಮಾರಿಗೆ ಕಾಡಿನಲ್ಲಿ ನಮ್ಮ ದೌರ್ಬಲ್ಯಗಳೇನೆಂದು ತಿಳಿದಿರಲಿಲ್ಲ. ಅಲ್ಲದೆ, ಪೇಟೆಯಲ್ಲಿ ಬೆಳೆದ ಜನ ಕಾಡಿನಲ್ಲಿ ಎಷ್ಟು ಅವಿವೇಕಿಗಳಾಗಿರಬಹುದೆಂಬ ತಿಳಿವಳಿಕೆ ಕೂಡ ಅವನಿಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುನ್ಮಾರಿಗೆ ತಾನು ಕಾಡಿನಲ್ಲಿ ಬದುಕುಳಿಯುವ ಕಲೆ ಕರಗತವಾಗಿತ್ತೇ ವಿನಾ ಬೇರೆಯವರನ್ನು ತಾನೇ ರಕ್ಷಿಸಬೇಕಾಗಬಹುದೆಂಬ ಆಲೋಚನೆ ಇರಲೇ ಇಲ್ಲ.
 
ಕಾಡಿನಲ್ಲಿ ಸ್ವಲ್ಪ ದೂರ ಸುತ್ತಾಡಿಕೊಂಡಿದ್ದು, ಆನೆಗಳೇನಾದರೂ ಹೈಡ್‌ಕಡೆಗೆ ಬರುತ್ತಿರುವಂತೆ ಕಂಡರೆ, ಕೂಡಲೇ ಬಂದು ನನಗೆ ತಿಳಿಸಬೇಕೆಂದು ಕುನ್ಮಾರಿಗೆ ಹೇಳಿ ಕಳುಹಿಸಿದ್ದೆ. ಬಳಿಕ ಸುಮಾರು ಎಪ್ಪತ್ತು ಮೀಟರ್ ದೂರದಲ್ಲಿ, ಸೇನಾನಿ ಕುಳಿತಿದ್ದ ಹೈಡ್ ಕಾಣುವಂತಹ ಜಾಗ ಹುಡುಕಿ ಕುಳಿತೆ. ಕಾಡಿನಲ್ಲಿ ಕೆಲವು ಜಾತಿಯ ಹುಲ್ಲುಗಳ ಮೇಲೆ ನಾವು ಕೂರುವುದೇ ಇಲ್ಲ. ಉಣ್ಣೆಗಳಿಂದ ತಪ್ಪಿಸಿಕೊಳ್ಳುವ ನಮ್ಮ ಹಲವಾರು ಉಪಾಯಗಳಲ್ಲಿ ಇದೂ ಒಂದು. ಕಣಗಾತ್ರದ ಉಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ನಾನು ಆನೆ ದಾರಿಯನ್ನು ಆಯ್ಕೆಮಾಡಿಕೊಂಡಿದ್ದೆ! ಆ ಕಾಲುದಾರಿ ನೂರಾರು ವರ್ಷಗಳಿಂದ ನಿರಂತರವಾಗಿ ಆನೆಗಳು ತಿರುಗಾಡಿ, ಸವೆದು ಸಾಕಷ್ಟು ಅಗಲವಾಗಿತ್ತು.
 
ಸೇನಾನಿ: ಮುದುಮಲೈ ಕಾಡಿನ ಹೆಚ್ಚಿನ ಹಕ್ಕಿಗಳ ಪರಿಚಯ ನಮಗಿತ್ತು. ಅವುಗಳ ಕೂಗು, ಜೀವನಕ್ರಮ, ಗೂಡುಕಟ್ಟುವ ರೂಪುರೇಷೆಗಳಲ್ಲೆವೂ ನಮಗೆ ತಿಳಿದ ವಿಷಯವೇ ಆಗಿತ್ತು. ಆದರೆ ಈ ಗೂಡು ಯಾವುದೆಂದು ನಮಗೆ ತಿಳಿದಿರಲಿಲ್ಲ.
 
ಆ ಬಿದಿರಿನ ಮೆಳೆ ಸ್ವಲ್ಪ ತಗ್ಗಿನಲ್ಲಿತ್ತು. ಹಾಗಾಗಿ ನಾವು ನಿರ್ಮಿಸಿದ್ದ ಹೈಡ್ ಕೂಡ ಪಕ್ಕದ ಕಾಲುದಾರಿಗಿಂತ ಮೂರು ಅಡಿಗಳಷ್ಟು ಕೆಳಗಿತ್ತು. ಕೃಪ ಅಲ್ಲಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿ ನನ್ನ ಎಡಭಾಗಕ್ಕೆ, ನಸುಗಂದು ಬಣ್ಣದ ಪುಟ್ಟಹಕ್ಕಿಯೊಂದು ಕಂಡುಬಂತು. ಹೈಡನ್ನು ಭದ್ರವಾಗಿ ಮುಚ್ಚಿದ್ದರಿಂದ ಎಲೆ ಕಡ್ಡಿಗಳ ನಡುವೆ ಇದ್ದ ಸಣ್ಣ ಕಿಂಡಿಗಳಲ್ಲಿ ಅಲ್ಪಸ್ವಲ್ಪ ಮಾತ್ರ ಕಾಣುತ್ತಿತ್ತು. ಹಾಗಾಗಿ ಹಕ್ಕಿಯನ್ನು ಗುರುತುಹಿಡಿಯಲು ಸಾಧ್ಯವಾಗಲೇ ಇಲ್ಲ. ಆದರೆ ಅದು ಒಮ್ಮೆ ಕಂಠ ಬಿಚ್ಚಿ ಹಾಡಿದಾಗ ಅದನ್ನು ನೋಡಿ ಗುರುತಿಸುವ ಅವಶ್ಯಕತೆಯಿರಲಿಲ್ಲ. ಅದು ‘ಕ್ವಾಕರ್ ಬ್ಯಾಬ್ಲರ್’ ಹಕ್ಕಿ ಎಂದು ಮನದಟ್ಟಾಯಿತು. ಈ ಹಕ್ಕಿಯ ಗೂಡನ್ನು ನಾವು ಇದಕ್ಕೂ ಮುನ್ನ ನೋಡಿಯೇ ಇರಲಿಲ್ಲ. ಹಾಗಾಗಿ ನನಗೆ ಎಲ್ಲಿಲ್ಲದ ಸಂತೋಷವಾಗಿತ್ತು. ಆದರೆ ಮುಂದಿನ ಕೆಲವು ನಿಮಿಷಗಳಲ್ಲಿ ‘ನೀಲಿ ಸಾಮ್ರಾಟ’ ಹಕ್ಕಿ ನನ್ನ ಬಲಗಡೆಯಿಂದ ಕೂಗಿತು. ಸಾಮಾನ್ಯವಾಗಿ ಬೇರೊಂದು ಹಕ್ಕಿಯ ಗೂಡಿನ ಬಳಿ ಮತ್ತೊಂದು ಜಾತಿಯ ಹಕ್ಕಿ ಬರುವುದಾಗಲೀ, ಬಂದು ಕುಳಿತು ಹಾಡುವುದಾಗಲೀ ಅಪರೂಪ. ಆದರೆ ನನ್ನ ಹೈಡ್‌ನೊಳಗಿನಿಂದ ಅದು ಸರಿಯಾಗಿ ಕಾಣುತ್ತಿರಲಿಲ್ಲ. ಮತ್ತು ಕಾಡಿನ ಹೈಡ್‌ನಲ್ಲಿರುವಾಗ ಅಲ್ಲಾಡದೆ ಕೂರಬೇಕೆಂಬುದು ಅಲಿಖಿತ ನಿಯಮ. ಸ್ವಲ್ಪ ಹೊತ್ತಿನ ನಂತರ ನೀಲಿ ಸಾಮ್ರಾಟ ಹಕ್ಕಿ ಅಲ್ಲಿಂದ ಕೆಲವೇ ಅಡಿಗಳ ದೂರದಲ್ಲಿ ಗೂಡು ಕಟ್ಟುತ್ತಿರುವುದು ಕಂಡು ಬಂತು. ನನ್ನ ಹೈಡ್ ಅವಸರದಲ್ಲಿ ಕಟ್ಟಿದ್ದರಿಂದ ಸ್ವಲ್ಪ ಇಕ್ಕಟ್ಟಾಗಿತ್ತು. ಆದರೆ ಈ ಎರಡು ಸುಂದರ ಹಕ್ಕಿಗಳ ನಡುವೆ ಕಾಲು ಮರಗಟ್ಟಿದ್ದು ಕೂಡ ನನ್ನ ಗಮನಕ್ಕೆ ಬಂದಿರಲಿಲ್ಲ.
 
ಕೃಪಾಕರ: ನಾನು ಕುಳಿತ ಜಾಗದಲ್ಲಿ ಹಕ್ಕಿಗಳ ಹಾಡುಗಾರಿಕೆ ಭರ್ಜರಿಯಾಗಿ ನಡೆದಿತ್ತು. ಉದ್ದ ಬಾಲದ ಕಾಜಾಣ, ಕಾಮಳ್ಳಿಗಳ ಜುಗಲ್‌ಬಂದಿಯ ಅಮೋಘ ಏರಿಳಿತಗಳು ಗುಟರ ಹಕ್ಕಿಗಳ ಕರೆಯ ಏಕತಾನತೆಯನ್ನು ಮುರಿದು ವೈವಿಧ್ಯವನ್ನು ಕಟ್ಟಿಕೊಟ್ಟಿದ್ದವು. ನನ್ನ ಹಿಂಬದಿಯ ಕಾಡಿನ ಹಳ್ಳದಿಂದ ಆಗೊಮ್ಮೆ ಈಗೊಮ್ಮೆ ಆನೆಗಳ ಕೂಗು ಕೇಳಿಬರುತ್ತಿತ್ತು. ಬಹುಶಃ ಒಂದು ಗಂಟೆಯೇ ಕಳೆದಿರಬಹುದು, ಇದ್ದಕ್ಕಿದ್ದಂತೆ, ನನ್ನ ಹಿಂದೆ ಏನೋ ಓಡಿಬಂದಂತಾಯಿತು. ಹಿಂದಿರುಗಿ ನೋಡಿದ ಆಕ್ಷಣದಲ್ಲಿ ಓಡಿ ಬರುತ್ತಿದ್ದ ಕುನ್ಮಾರಿ ನಾನು ಕುಳಿತಿದ್ದ ಕಾಲುದಾರಿಯನ್ನು ಅಡ್ಡ ಹಾದು ಕಾಡಿನಲ್ಲಿ ಕಣ್ಮರೆಯಾದ. ಹೋಗುವಾಗ ಏನೋ ತಮಿಳಿನಲ್ಲಿ ಹೇಳಿದಂತಾಯಿತು.
 
(ಕ್ವಾಕರ್ ಬ್ಯಾಬ್ಲರ್)
 
ತರ್ಕಿಸಿ ಯೋಚಿಸುವ ಸಮಯ ಅದಾಗಿರಲಿಲ್ಲ. ಕುನ್ಮಾರಿಯ ಅವಸರ ನೋಡಿದಾಗಲೇ ಅವನ ಹಿಂದೆ ಏನೋ ಓಡಿಬರುತ್ತಿರುವುದು ಖಾತರಿಯಾಗಿತ್ತು. ಬರುತ್ತಿರುವ ಪ್ರಾಣಿ ಯಾವುದೆಂದು ತಿಳಿಯುವ ಕುತೂಹಲವಾಗಲೀ ವ್ಯವಧಾನವಾಗಲೀ ನನಗಿರಲಿಲ್ಲ. ಓಡಿ ಬರುತ್ತಿರುವ ಆ ಪ್ರಾಣಿಯ ದಾರಿಗೆ ಅಡ್ಡ ಸಿಕ್ಕಿಕೊಳ್ಳದಿರುವುದು ಮಾತ್ರ ಆ ಕ್ಷಣದ ಆದ್ಯತೆಯಾಗಿತ್ತು. ದಿಢೀರನೆ ಎದ್ದು, ಓಡುವ ಮುನ್ನವೆ ನಾನು ಮುಗ್ಗರಿಸಿದ್ದೆ. ಆಗ ಯಾವುದೋ ದೊಡ್ಡ ಪ್ರಾಣಿ ಪೊದೆಗಳನ್ನು ತಳ್ಳಿಕೊಂಡು ಓಡಿಬರುತ್ತಿರುವ ಶಬ್ದ ಕೇಳಿಸಿತ್ತು. ನಾನು ಓಡಿದೆ. ಕಾಡು ನುಗ್ಗಿ ಅಡ್ಡದಾರಿ ಹಿಡಿದು ಹೈಡ್‌ನತ್ತ ಓಡಿದೆ. ನನ್ನ ವೇಗಕ್ಕೆ ನನಗೇ ಆಶ್ಚರ್ಯವಾಗಿತ್ತು. ಅಷ್ಟೊತ್ತಿಗಾಗಲೆ ನನ್ನ ಹಿಂದೆ ಬರುತ್ತಿರುವ ಪ್ರಾಣಿ ಆನೆಯೆಂದು ನನಗೆ ಖಚಿತವಾಗಿತ್ತು. ಹೈಡ್‌ನ ಪಕ್ಕ ಬಂದಾಗ ಸೇನಾನಿಗೆ ‘ಓಡು–ಆನೆ’ ಎಂದು ಎರಡು ಪದಗಳಷ್ಟನ್ನೇ ಕೂಗಿ ಓಡಿಹೋದೆ. 
ಹೈಡನ್ನು ಕಡ್ಡಿಸೊಪ್ಪುಗಳಿಂದ ಕುನ್ಮಾರಿ ಹೇಗೆ ಬಿಗಿದ್ದಿದ್ದನೆಂದರೆ, ಸೇನಾನಿಗೆ ಓಡುವುದಿರಲಿ, ಹೊರಬರಲು ಸಹ ಕಷ್ಟವಾಗುತ್ತಿತ್ತು. ಆದರೆ, ಇವೆಲ್ಲ ನನಗೆ ಆಕ್ಷಣದಲ್ಲಿ ಹೊಳೆಯಲೇ ಇಲ್ಲ.
 
ಸೇನಾನಿ: ಬಹಳ ಸಮಯವೇ ಕಳೆದಿರಬಹುದು – ಅವೆರಡು ಪುಟಾಣಿ ಹಕ್ಕಿಗಳ ಸಾನಿಧ್ಯದಲ್ಲಿ ನನಗೆ ಹೊರ ಪ್ರಪಂಚವೇ ಮರೆತುಹೋಗಿತ್ತು. ಆಗ ನನ್ನ ಹಿಂದೆ ಕೃಪ ಓಡಿದ್ದು, ಓಡುತ್ತಾ ಏನೋ ಹೇಳಿದ್ದು ಕೇಳಿಸಿತು. ಆ ಕ್ಷಣ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಇಲ್ಲಿಗೆ ಬರುವಾಗ ಕುಂಟುತ್ತಾ ನಿಧಾನವಾಗಿ ನಡೆದು ಬಂದಿದ್ದ ಕೃಪ ಈಗ ಕಣ್ಣಿಗೆ ಕಾಣದಷ್ಟು ವೇಗವಾಗಿ ಓಡಿಹೋಗಿದ್ದ. ಅಂದರೆ, ಒಂದೇ ಒಂದು ಕಾರಣವಿರಲು ಸಾಧ್ಯ, ಏನೋ ಅವನನ್ನು ಅಟ್ಟಿಸಿಕೊಂಡು ಬಂದಿದೆ. ಅದಿನ್ನೇನೂ ಆಗಿರಲು ಸಾಧ್ಯವಿಲ್ಲ... ಆನೆಯೊಂದನ್ನು ಬಿಟ್ಟು! ಅದೇ ಸಮಯದಲ್ಲಿ ನನಗೇನೋ ಭಾರಿ ಸದ್ದು ಕೇಳಿದಂತಾಯಿತು, ಬಲಕ್ಕೆ ತಿರುಗಿದೆ. ನನ್ನ ಹೈಡ್‌ನ ಕಿಂಡಿಗಳ ಮೂಲಕ, ನಾನು ಎಂದೂ ನೋಡಿರದಷ್ಟು ದೊಡ್ಡದಾದ ಪಾದಗಳು ದಬ ದಬ ಎಂದು ಸದ್ದು ಮಾಡುತ್ತಾ, ನನಗೆ ಅತ್ಯಂತ ಸಮೀಪದಲ್ಲಿ ಓಡಿಹೋದುದನ್ನು ನೋಡಿದೆ. ಅದು ನನಗೆ ಹೆದರಿಕೊಳ್ಳಲು ಕೂಡ ಅವಕಾಶವಿರದಷ್ಟು ಅನಿರೀಕ್ಷಿತವಾಗಿತ್ತು. ದೀರ್ಘವಾಗಿ ಉಸಿರೆಳೆದು ಹೈಡ್‌ನಲ್ಲೆ ಹಿಂದೆ ಸರಿದು ಕುಳಿತೆ. ಹೊರಗಿನವರ ಸಹಾಯವಿಲ್ಲದೆ ಹೈಡ್‌ನಿಂದ ಹೊರಬರಲು ಕಷ್ಟವಿತ್ತು. ಮೆಲ್ಲನೆ ಹೈಡ್‌ನ ಕಡ್ಡಿಗಳನ್ನು ಸರಿಸಿ ಸಡಿಲಗೊಳಿಸಲು ಪ್ರಯತ್ನಿಸುತ್ತಿದ್ದೆ. ಅಷ್ಟರಲ್ಲಿ ಮತ್ತೊಮ್ಮೆ, ಅದೇ ರೀತಿಯ ಸದ್ದು ನನ್ನ ಮೇಲೇ ಬಂದಂತಾಯಿತು. ಹಿಂದೆ ತೆವಳಿ ಹೈಡ್‌ನಲ್ಲಿ ಮರೆಯಾದೆ. ಮತ್ತೆ ನಾಲ್ಕು ಭಾರಿ ಗಾತ್ರದ ಕಾಲುಗಳು ನನ್ನನ್ನು ದಾಟಿ ಮುಂದೆ ಹೋದವು. ನಾನು ನೆಲಮಟ್ಟಕ್ಕಿಂತ ಕೆಳಗೆ ಕುಳಿತಿದ್ದೆ. ಹಾಗಾಗಿ ಎಲ್ಲವೂ ಥ್ರಿ–ಡಿ ಮಲ್ಟಿಫ್ಲೆಕ್ಸ್‌ನಲ್ಲಿ ಕಂಡಂತೆ ಕಾಣುತ್ತಿತ್ತು.
 
ನಡೆಯುತ್ತಿರುವುದೇನೆಂದು ಅರಿಯಲು ಪ್ರಯತ್ನಿಸಿದೆ. ಆದರೆ ಹೈಡ್‌ನೊಳಗಿನಿಂದ ಕಂಡಿದ್ದ ದೃಶ್ಯಗಳು ಅಸ್ಪಷ್ಟವಾಗಿದ್ದುದರಿಂದ ಒಟ್ಟಾರೆ ಚಿತ್ರಣ ನನಗೆ ಮೂಡಲಿಲ್ಲ.
 
ಕೃಪಾಕರ: ಹೈಡ್‌ನಿಂದ ಐವತ್ತು ಮೀಟರ್ ದೂರದಲ್ಲಿ ಮಳೆಗಾಲದಲ್ಲಿ ಮಾತ್ರ ಹರಿಯುವ ತೊರೆಯೊಂದಿತ್ತು. ನಾನು ನೇರವಾಗಿ ಈ ಹಳ್ಳದತ್ತ ಓಡಿ ಮರಳಿನ ಮೇಲೆ ಹಾರಿಕೊಂಡೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಿದ್ದ ಸಣ್ಣ ಸೇತುವೆಯೊಂದಿತ್ತು. ಜೀಪ್ ರಸ್ತೆ ಈ ತೊರೆಯ ಮೇಲಿಂದ ಸಾಗಲು ಈ ಸೇತುವೆ ನಿರ್ಮಾಣಗೊಂಡಿತ್ತು. ಯಾವ ಪರಿಜ್ಞಾನವೂ ಇಲ್ಲದೆ ನಾನು ಆ ಸೇತುವೆಯ ಕೆಳಗೆ ಸೇರಿಕೊಂಡೆ. ಆರೂವರೆ ಅಡಿ ಎತ್ತರವಿದ್ದ ಆ ಪುಟ್ಟ ಸೇತುವೆಯ ಅಡಿಯಲ್ಲಿ ನಿಂತ ಕೆಲವೇ ಕ್ಷಣಗಳಲ್ಲಿ ಯಾವುದೋ ಭಾರವಾದ ಹೆಜ್ಜೆಗಳು ನನ್ನ ನೆತ್ತಿಯ ಮೇಲಿನ ರಸ್ತೆಯಲ್ಲಿ ಓಡಿದ ಅನುಭವವಾಯಿತು. ಸೇತುವೆ ಅದುರಿತು. ಆ ಸದ್ದುಗಳ ಹೊರತಾಗಿ ನನಗೇನೂ ಕಾಣಲಿಲ್ಲ. ಆ ನಂತರ ಮೌನ. ದೀರ್ಘ ಮೌನ.
 
ಸೇನಾನಿ: ಹೃದಯಬಡಿತ ಸ್ಥಿಮಿತಕ್ಕೆ ಬಂದು ಪ್ರಶಾಂತನಾಗಲು ನನಗೆ ಬಹಳ ಸಮಯವೇ ಹಿಡಿಯಿತು. ಬಳಿಯಿದ್ದ ಛತ್ರಿ, ನೀರಿನ ಬಾಟಲ್, ಕ್ಯಾಮೆರಾ ಸ್ಟ್ಯಾಂಡ್‌ಗಳನ್ನೆಲ್ಲ ಅಲ್ಲೆ ಬಿಟ್ಟು, ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ಹಿಡಿದು ಹೊರಗೆ ಬಂದೆ. ಬಿದಿರಿನ ಮೆಳೆಯ ಆಚೆಯ ಭಾಗದಲ್ಲಿ, ನನಗೆ ಕೇವಲ ಐವತ್ತು ಅಡಿ ದೂರದಲ್ಲಿ, ಭಾರೀ ಆನೆಯೊಂದರ ಹಿಂಭಾಗ ಕಂಡಿತು. ನಾನು ಇನ್ನೂ ಸ್ವಲ್ಪ ಸರಿದು ನೋಡಿದೆ. ಸೇತುವೆಯ ಇನ್ನೊಂದು ಭಾಗದಲ್ಲಿ ಮತ್ತೊಂದು ಆನೆ ನಿಂತು ಹಿಂದಿರುಗಿ ಈ ಕಡೆಗೆ ನೋಡುತ್ತಿತ್ತು. ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಆದರೆ ಅದರ ಗಮನವೆಲ್ಲ ನನ್ನ ಮುಂದೆ ನಿಂತಿದ್ದ ಆನೆಯ ಮೇಲಿತ್ತು. ಆಗಷ್ಟೇ ಅವರೆಡು ಆನೆಗಳೂ ಲದ್ದಿ ಹಾಕಿದ್ದವು... ಲದ್ದಿಯ ಮೇಲೆ ಹಬೆಯಾಡುತ್ತಿತ್ತು.
 
ಇಷ್ಟರಲ್ಲಿ ನನ್ನ ಮನಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಆನೆ ವಿಜ್ಞಾನಿ, ಮಿತ್ರ ಅಜಯ್ ದೇಸಾಯಿಯ ಉಪಯೋಗಕ್ಕೆ ಬರಬಹುದೆಂದು ಈ ಆನೆಗಳ ಚಿತ್ರಗಳನ್ನು ತೆಗೆಯಲು ತೀರ್ಮಾನಿಸಿದೆ. ಆ ದಿನಗಳಲ್ಲಿ ಗಂಡಾನೆಗಳ ಹತ್ಯೆ ಅತಿರೇಕಕ್ಕೆ ತಲುಪಿದ್ದರಿಂದ ಆ ಚಿತ್ರಗಳು ಅವರ ಸಂಶೋಧನೆಯ ನೆರೆವಿಗೆ ಬರಬಹುದೆಂದು ತಿಳಿದೆ. ಸ್ವಲ್ಪ ಬದಿಗೆ ಸರಿದು, ಕೈಯಲ್ಲಿ ಕ್ಯಾಮೆರಾ ಹಿಡಿದು ಚಿತ್ರತೆಗೆಯುವ ಪ್ರಯತ್ನ ಮಾಡಿದೆ. ಕ್ಯಾಮೆರಾದೊಳಗೆ ಆನೆಗಳು ಕಾಣಲೇ ಇಲ್ಲ! ನಡುಗುತ್ತಿದ್ದ ನನ್ನ ಕೈಗಳು ಹಿಡಿದಿದ್ದ ಕ್ಯಾಮೆರಾದಲ್ಲಿ ಆನೆಗಳೇನು, ಕಾಡೇ ಕಾಣೆಯಾಗಿತ್ತು.
 
ಕೃಪಾಕರ: ದೀರ್ಘ ಸಮಯವೇ ಕಳೆಯಿತು. ಯಾವ ಸದ್ದುಗಳು ಮೂಡಲಿಲ್ಲ. ಸೇನಾನಿಗೆ ಏನಾಗಿರಬಹುದೆಂದು ಸಹ ತಿಳಿಯಲಿಲ್ಲ. ಗೋಡೆಗೆ ಒರಗಿದಂತೆಯೇ ಜರಗುತ್ತಾ ಸೇತುವೆಯ ಇನ್ನೊಂದು ಭಾಗಕ್ಕೆ ತಲುಪಿದೆ. ಒಳಗೆ ನಿಂತು ಕತ್ತನ್ನು ಹೊರಗೆ ಚಾಚಿ ಮೇಲೆ ನೋಡಿದೆ. ಅಲ್ಲೇನೂ ಕಾಣಲಿಲ್ಲ. ಮತ್ತೆ ನಾನು ಪ್ರವೇಶಿಸಿದ್ದ ದ್ವಾರದತ್ತ ವಾಪಸಾಗಿ ಹೊರಗೆ ಇಣುಕಿದೆ. ಆಗ, ಖಾಲಿ ಪಂಪ್‌ಸೆಟ್‌ನ ರಬ್ಬರ್ ಪೈಪ್‌ನಿಂದ ರಭಸವಾಗಿ ಹೊರಬಂದಂತ ಗಾಳಿಯ ಸದ್ದು ನನ್ನ ಎಡಕಿವಿಯ ಬಳಿ ಅಬ್ಬರಿಸಿದಂತಾಯಿತು. ಕೂಡಲೇ ಅತ್ತ ತಿರುಗಿದೆ. ನನ್ನ ಎಡಗಣ್ಣಿನಿಂದ ಮೇಲೆ ಕೇವಲ ಎರಡು ಅಡಿ ಸಮೀಪದಲ್ಲಿ ಆನೆಯೊಂದರ ಸೊಂಡಿಲ ತುದಿ ಕಂಡಿತು. ಅದು ಎಷ್ಟು ದೊಡ್ಡದಾಗಿ ಕಾಣಿಸಿತ್ತೆಂದರೆ ನಾನು ನೋಡಿದ್ದು ಏನೆಂದು ಅರ್ಥವಾಗಲು ಸ್ವಲ್ಪ ಸಮಯವೇ ಹಿಡಿಯಿತು. ಅಷ್ಟರಲ್ಲಿ ಸೇನಾನಿ ಗಟ್ಟಿಯಾಗಿ ಏನೋ ಕೂಗಿದ್ದು ಕೇಳಿಸಿತು. ನಂತರ, ಆನೆ ಸೇತುವೆಯಿಂದ ಹಳ್ಳಕ್ಕೆ ಇಳಿದರೆ ನಾನು ಪಾರಾಗಲು ಇರುವ ಸಾಧ್ಯತೆಗಳನ್ನು ಗಮನಿಸಲು ಸೇತುವೆಯ ಮತ್ತೊಂದು ದ್ವಾರದತ್ತ ಓಡಿದೆ.
 
ಸೇನಾನಿ: ಕೃಪ ಎಲ್ಲಿದ್ದಾನೆಂದು ನನಗೆ ತಿಳಿದಿರಲಿಲ್ಲ. ಕಾಡಿನಲ್ಲಿ ಓಡಿ ಮರೆಯಾಗಿರಬಹುದೆಂದು ಭಾವಿಸಿದ್ದೆ. ಹಿಂಬದಿಯಲ್ಲಿದ್ದ ಆನೆ ಸೇತುವೆಯನ್ನು ದಾಟಲು ಹಿಂಜರಿದು ಹಳ್ಳದಲ್ಲಿ ಇಳಿದು ಹೋಗಲು ತೀರ್ಮಾನಿಸಿದಂತೆ ಕಂಡಿತು. ಅದೇ ಸಮಯದಲ್ಲಿ ಕೃಪನ ತಲೆ ಸೇತುವೆಯ ದ್ವಾರದಿಂದ ಹೊರಬರುತ್ತಿದ್ದದನ್ನು ಕಂಡೆ. ಅವನಿಗೆ ಆನೆಯ ಇರುವೇ ತಿಳಿದಂತಿರಲಿಲ್ಲ. ಅವನ ತಲೆ ಆ ಸೊಂಡಿಲಿಗೆ ತೀರಾ ಹತ್ತಿರದಲ್ಲಿತ್ತು. ಕೂಡಲೇ ಅಲ್ಲಿಂದ ಓಡುವಂತೆ ಏರಿದ ಧ್ವನಿಯಲ್ಲಿ ಬೊಬ್ಬೆ ಹಾಕಿದೆ. ನನ್ನ ಧ್ವನಿ ಕೇಳುತ್ತಿದ್ದಂತೆ ಆ ಆನೆ ಕಿವಿಗಳನ್ನು ಅಗಲಿಸಿ, ಸೊಂಡಿಲನ್ನು ಮೇಲೆತ್ತಿ ಬಿರುಸಿನಿಂದ ನನ್ನತ್ತ ತಿರುಗಿತು. ಆದೇಶಕ್ಕೆ ಕಾಯದೆ ನನ್ನ ಕಾಲುಗಳು ಓಡಲಾರಂಭಿಸಿದವು. ಐವತ್ತು ಮೀಟರ್ ದೂರ ಓಡಿ, ಏನಾಗುತ್ತಿದೆ ಎಂಬುದನ್ನು ಅರಿಯಲು ಹಿಂದಿರುಗಿ ನೋಡಿದೆ.
 
ಆನೆ ನನ್ನ ಹೈಡ್ ಬಳಿಗೆ ಬಂದು ನಿಂತಿತ್ತು. ತನ್ನ ಸೊಂಡಿಲನ್ನು ಆಡಿಸುತ್ತಾ ಅಲ್ಲಿ ಹರಡಿದ್ದ ನನ್ನ ವಾಸನೆಯನ್ನು ಹಿಡಿಯುತ್ತಿತ್ತು. ನಂತರ ಅಲ್ಲಿದ್ದ ಕೊಡೆಯನ್ನು ಮೂಸಿ ಮೆಲ್ಲನೆ ಹಿಡಿದೆತ್ತಿ ಪಕ್ಕದಲ್ಲಿಟ್ಟಿತು. ನೀರಿನ ಬಾಟಲಿಯನ್ನು ಸ್ವಲ್ಪ ಆಡಿಸಿ ಬಿಸಾಡಿತು. ಮುಂದೆ ನಿನ್ನ ಸರದಿ ಎನ್ನುವಂತೆ ಅದು ನನಗೆ ಕಾಣುತ್ತಿತ್ತು.
 
ಓಡುವಾಗಲೆ ನಾನು ಮರವೊಂದನ್ನು ಹುಡುಕಿಕೊಂಡಿದ್ದೆ. ಅನೇಕ ರೆಂಬೆಗಳಿದ್ದ ಆ ಮರವೇರಲು ಅಷ್ಟೇನು ಕಷ್ಟವಿರಲಿಲ್ಲ. ಆದರೆ ಈಗ, ಐವತ್ತು ಮೀಟರ್ ದೂರದಲ್ಲಿದ್ದ ಕಾಡಾನೆಗೆ ನಾನು ನೀರಿನ ಬಾಟಲಿಯಂತೆ ಕಾಣುತ್ತಿದ್ದಾಗ, ಮರವನ್ನು ಏರುವ ಪ್ರಯತ್ನಕ್ಕೆ ನನ್ನ ಕೈ ಕಾಲುಗಳು ಸಹಕರಿಸಲೇ ಇಲ್ಲ. ಹಾಗಾಗಿ ಮತ್ತೆ ಐವತ್ತು ಮೀಟರ್ ದೂರ ಓಡಿದೆ. ನಾನು ಕುಳಿತಿದ್ದ ಸ್ಥಳದ ಬಳಿಯಿದ್ದ ಬಿದಿರಿನ ಮೆಳೆಯನ್ನು ಬಳಸಿ ನಡೆದಿದ್ದ ಆನೆ ನಿಧಾನವಾಗಿ ಹಳ್ಳಕ್ಕೆ ಇಳಿದು ಸೇತುವೆಯ ಒಳಗೆ ನೋಡುತ್ತಾ ನಿಂತಿತು.
 
ಕೃಪಾಕರ: ಸೇತುವೆಯ ಕೆಳಗಿದ್ದ ನನಗೆ, ಹೊರಗೆ ಏನಾಗುತ್ತಿದೆ ಎಂಬುದು ಗೊತ್ತಿರಲಿಲ್ಲ. ಏನೋ ಓಡಿದ ಸದ್ದಾಯಿತು. ಇದರ ನಡುವೆ ನನ್ನ ಎಡಕ್ಕೆ, ತೀರ ಹತ್ತಿರದಲ್ಲಿ ಆನೆಯ ಸೊಂಡಿಲು ಕಾಣಿಸಿತ್ತು. ಆ ಕ್ಷಣ ನಾನು ತಲ್ಲಣಗೊಂಡಿದ್ದೆ. ಬಹಳ ಸಮಯ ಕಳೆದಂತಾಯಿತು. ಹಾಗೆ ಎರಡೂ ಕಡೆ ಗಮನಿಸುತ್ತಾ ನಿಂತಿದ್ದೆ. ಆಗ ಇದ್ದಕಿದ್ದಂತೆ, ನನ್ನಿಂದ ಕೇವಲ ಮೂವತ್ತು ಮಿಟರ್ ದೂರದಲ್ಲಿ ಆನೆಯೊಂದು ಹಳ್ಳಕ್ಕೆ ಇಳಿಯಿತು. ನಾನು ಮೆಲ್ಲನೆ ಸೇತುವೆಯ ಮತ್ತೊಂದು ಭಾಗಕ್ಕೆ ಜರುಗಿ ನಿಂತೆ. ಅಲ್ಲಿ ಕನಿಷ್ಟ ಎರಡು ಆನೆಗಳಿರುವುದನ್ನು ಈಗಷ್ಟೇ ಮನಗಂಡಿದ್ದರಿಂದ, ಮತ್ತೊಂದು ಆನೆ ಎಲ್ಲಿರಬಹುದೆಂದು ಯೋಚಿಸುತ್ತಿದ್ದೆ. ಹಾಗಾಗಿ ನಾನು ಓಡುವ ಆಲೋಚನೆ ಮಾಡಲಿಲ್ಲ. ಬಳಿಕ ಸೇತುವೆಯ ಮತ್ತೊಂದು ತುದಿಯಿಂದ ಹೊರಗೆ ಇಣುಕಿದೆ. ನನ್ನ ಮುಂದೆ ನಿಂತಿದ್ದ ಸಲಗ ಹಳ್ಳದೊಳಗಿಂದ ಬರುತ್ತಿರುವ ಮತ್ತೊಂದು ಸಲಗವನ್ನು ದೃಷ್ಟಿಸುತ್ತಾ ನಿಂತಿತ್ತು. ನಂತರ ಅದು ಕಾಡಿನೊಳಗೆ ಓಡಿ ಮರೆಯಾಯಿತು. ಸೇತುವೆಯಿಂದ ಹೊರಬಂದು ಪೊದರುಗಳ ಮರೆಯಲ್ಲಿ ನಿಂತು ನೋಡಿದೆ. ಹಳ್ಳದಿಂದ ಏರಿ ಬಂದ ಆ ಸಲಗ ಓಡಿಹೋದ ಆನೆಯನ್ನು ಹಿಂಬಾಲಿಸಿ ಓಡಿತು. ಆಗ ಸನ್ನಿವೇಶದ ಅರಿವಾಯಿತು. ಆ ಎರಡು ಸಲಗಗಳ ನಡುವೆ ಅಷ್ಟೇನೂ ಗಂಭೀರವಲ್ಲದ ಕಾದಾಟ ನಡೆದಿತ್ತು. ಆಕಸ್ಮಿಕವಾಗಿ ನಾವು ಅವುಗಳ ಕಾದಾಟದ ನಡುವೆ ಸಿಕ್ಕಿ ಹಾಕಿಕೊಂಡಿದ್ದೆವು. ಆ ಪರಿಸ್ಥಿತಿಯಲ್ಲಿ ಅವುಗಳಿಗೆ ನಮ್ಮ ಬಗ್ಗೆ ಚಿಂತಿಸಲು ಕೂಡ ಸಮಯವಿರಲಿಲ್ಲ.
 
***
ಇದೆಲ್ಲ ಮುಗಿದು ಮತ್ತೆ ನಾವು ಒಂದಾದಾಗ ಭಯ ಮಾಸಿರಲಿಲ್ಲ. ಮಾತು ಬಂದಿರಲಿಲ್ಲ. ಆದರೆ ಕುನ್ಮಾರಿ ಎತ್ತ ಹೋದನೆಂದು ಚಿಂತಿಸಿದ್ದೆವು. ಅತ್ತಿತ್ತ ನೋಡುವಾಗ, ‘ಸಾ...’ ಎಂಬ ಸಣ್ಣ ಧ್ವನಿ ಆಕಾಶದಿಂದ ಮೂಡಿ ಬಂತು. ಕುನ್ಮಾರಿ, ಆನೆ ಬಂದಾಗ ಅರವತ್ತು ಅಡಿ ಎತ್ತರದ ಮರವನ್ನು ಕ್ಷಣಾರ್ಧದಲ್ಲಿ ಏರಿ ಕುಳಿತಿದ್ದ. ‘ಗಾಡ್ಸ್ ಪಾಯಿಂಟ್ ಆಫ್ ವ್ಯೂ’ನಲ್ಲಿ ಆತ ನಡೆದ ಇಡೀ ಘಟನೆಯನ್ನು ವೀಕ್ಷಿಸಿದ್ದ. ಅಥವ ಹುಲುಮಾನವರ ಬದುಕಿನಲ್ಲಿ ಹಸ್ತಕ್ಷೇಪ ಮಾಡದ ದೇವರಂತೆ ಸ್ಥಿತಪ್ರಜ್ಞನಾಗಿ ಕುಳಿತು ಎಲ್ಲವನ್ನೂ ನೋಡಿದ್ದ. ಕನಿಷ್ಟ ಆತ ಗಟ್ಟಿಯಾಗಿ ಕೂಗು ಹಾಕಿ ಆನೆಗಳ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವನ್ನು ಮಾಡಬಹುದಿತ್ತಲ್ಲ ಎನಿಸಿತು. ಈ ಕಾಡುಹುಡುಗರ ಮನೋಭಾವ ತಿಳಿದಿದ್ದರಿಂದ ನಾವೇನು ಪ್ರಶ್ನೆಗಳನ್ನು ಕೇಳಲಿಲ್ಲ. ಪೇಟೆಮಂದಿಯ ಅಜ್ಞಾನಗಳು, ಇತಿಮಿತಿಗಳು ಅವರಿಗೆಂದೂ ಅರ್ಥವಾಗುವುದಿಲ್ಲ.
 
ಬಳಿಕ ದೀರ್ಘಕಾಲ ಮೌನವಾಗಿ ಅಲ್ಲೇ ನಿಂತಿದ್ದೆವು. ಎದುರಾಗಿದ್ದ ಆಘಾತಕಾರಿ ಘಟನೆಯ ನೆನಪಿನಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಿರಲಿಲ್ಲ. ಜರುಗಿದ ಅವಗಢಕ್ಕೆ ಸಾಕ್ಷಿಯಾಗಿ ಸೇತುವೆಯ ಎರಡು ಬದಿಯಲ್ಲಿ ಹಬೆಯಾಡುತ್ತಿದ್ದ ಆನೆಯ ಲದ್ದಿಗಳಷ್ಟೆ ಉಳಿದಿದ್ದವು, ಅಷ್ಟೆ.
 
ಇದ್ದಕ್ಕಿದ್ದಂತೆ ಕಾಡಿನ ರಸ್ತೆಯಲ್ಲಿ ಜೀಪ್‌ವೊಂದು ಪ್ರತ್ಯಕ್ಷವಾಯಿತು. ಸಮುದ್ರತೀರದ ತೆಂಗಿನ ಮರಗಳ ಚಿತ್ರವಿದ್ದ ಗೋವಾ ಟೀಶರ್ಟ್‌ಗಳನ್ನು ತೊಟ್ಟಿದ್ದ ನಾಲ್ಕು ಮಂದಿ ಜೀಪ್‌ನ ಹಿಂಬದಿಯಲ್ಲಿ ನಿಂತಿದ್ದರು. ಪ್ಯಾಂಟ್ ಬೆಲ್ಟ್‌ನ ಹಿಡಿತದಿಂದ ಜಾರಿಕೊಂಡಿದ್ದ ಅವರ ದಢೂತಿ ಹೊಟ್ಟೆಗಳು, ಜೀಪ್ ಹಳ್ಳಕೊಳ್ಳಗಳಲ್ಲಿ ತೂಗುತ್ತಾ ಚಲಿಸುವಾಗ ಮೆಕ್ಸಿಕನ್ ವೇವ್‌ನಂತೆ ಲಯಬದ್ಧವಾಗಿ ಬಳಕುತ್ತಿದ್ದವು. ನಮ್ಮನ್ನು ಗುರುತಿಸಿದ ಚಾಲಕ ಜೀಪ್ ನಿಲ್ಲಿಸಿದ. ಈ ಅತಿಥಿಗಳಿಗೆ ಕಾಡಿನಲ್ಲಿ ಯಾವ ಪ್ರಾಣಿಯೂ ಕಂಡಿಲ್ಲ. ನೀವು ಏನನ್ನಾದರೂ ಕಂಡಿರಾ ಎಂದು ತಮಿಳಿನಲ್ಲಿ ಕೇಳಿದ. ಏನೂ ಇಲ್ಲವೆಂದು ತಲೆಯಾಡಿಸಿದೆವು. ನಮಸ್ಕಾರ ಹೇಳಿದ ಚಾಲಕ ಮುಂದುವರಿದ. ಆ ಹಳೆಯ ಜೀಪ್, ಅತಿಥಿಗಳ ಭಾರಕ್ಕೆ ಮುರಿದೇಹೋದಂತೆ ಶಬ್ದಮಾಡುತ್ತಾ ಸಾಗುತ್ತಿತ್ತು. ಆ ಎಲ್ಲಾ ಶಬ್ದಗಳ ನಡುವೆಯೂ ಕೂಡ, ‘ಈ ಕಾಡಲ್ಲಿ ಏನೂ ಇಲ್ಲ... ಬರಿ ಆನೆ ಚಿತ್ರ ಬರ್ದು ನಿಲ್ಸೋರೆ ಅಷ್ಟೆ’, ‘ನಾನು ಆಗ್ಲೇ ಹೇಳ್ಲಿಲ್ವಾ, ಈ ಕಾಡು ಪೂರಾ ಖಾಲಿ ಅಂತ’ ಎಂಬ ಹಿಂದಿ–ಇಂಗ್ಲಿಷ್‌ನಲ್ಲಿದ್ದ ಅವರ ಮಾತು ನಮಗೆ ಕೇಳಿಬರುತ್ತಿತ್ತು. ಕುನ್ಮಾರಿಗೆ ಅವರ ಭಾಷೆ ಅರ್ಥವಾಗಲಿಲ್ಲ.
 
ಕೆಲವೇ ನಿಮಿಷಗಳಲ್ಲಿ ಇನ್ನೊಂದು ಜೀಪ್ ಅಲ್ಲಿಗೆ ಆಗಮಿಸಿತು. ವಾಹನಗಳೇ ಬಾರದ ಆ ರಸ್ತೆಯಲ್ಲಿ ಮತ್ತೊಂದು ಜೀಪ್ ಬಂದಾಗ ಅಚ್ಚರಿಯಾಯಿತು. ಆದರೆ ಅದು ಪ್ರವಾಸಿಗಳ ಜೀಪಾಗಿರಲಿಲ್ಲ. ಕಾಡಿನ ಭಾಷೆಯಲ್ಲಿ ನಿಪುಣನಾದ ಜೇನು ಕುರುಬರ ಚೆನ್ನ ಮತ್ತು ಸಂಶೋಧಕ ಅಜಯ್ ದೇಸಾಯ್ ಆ ಜೀಪಿನಲ್ಲಿದ್ದರು. ಏನೂ ಬಾಯಿ ಬಿಡುವುದು ಬೇಡವೆಂದು ಕುನ್ಮಾರಿಗೆ ತಿಳಿಸಿದೆವು.
ಏನಾಯಿತೆಂದು ಅವರು ಕೇಳಲಿಲ್ಲ. ನಾವು ಹೇಳಲಿಲ್ಲ.
 
ಅಜಯ್ ಮತ್ತು ಚೆನ್ನರಿಬ್ಬರು ಕಾಡಿನಲ್ಲಿ ಬಿದ್ದಿದ್ದ ಅಕ್ಷರಗಳನ್ನು ಹೆಕ್ಕಿ ಜೋಡಿಸುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ‘ಇದೆಲ್ಲಾ ಅತಿಯಾಯಿತು. ನೀವು ಸತ್ತರೆ ಎದುರಾಗುವ ಪರಿಣಾಮಗಳನ್ನು ಎದಿರುಸುವವರು ಯಾರು? ಯೋಚಿಸಿದ್ದೀರಾ?’ ಎಂದು ಅಜಯ್ ಕಠುವಾಗಿ ಪ್ರಶ್ನಿಸಿದ. ನಾವು ತಲೆ ಎತ್ತಲಿಲ್ಲ.
 
ನೆಲವನ್ನೇ ನೋಡುತ್ತ ಯೋಚಿಸುತ್ತಿದ್ದ ಆತ, ಸ್ವಲ್ಪ ಸಮಯದ ನಂತರ ‘ದೊಡ್ಡ ಆನೆಗಳಾ?’ ಎಂದ.
 
ಬಹಳ ದೊಡ್ಡ ಆನೆಗಳೆಂದು ಉತ್ತರಿಸಿದೆವು.
 
ನಾವಿದ್ದ ಸನ್ನಿವೇಶದಲ್ಲಿ, ನಾವು ನೋಡುತ್ತಿದ್ದ ಕೋನಗಳಿಂದ ಅವುಗಳು ಹತ್ತು ಅಡಿಗಳಿಗಿಂತ ಎತ್ತರವಾಗಿ ದೈತ್ಯಾಕಾರವಾಗಿದ್ದ ಆನೆಗಳಂತೆ ಕಂಡಿದ್ದವು.
 
ಅಷ್ಟರಲ್ಲಿ ಸ್ವಲ್ಪ ದೂರದಿಂದ ಚೆನ್ನನ ಮಾತು ಕೇಳಿಸಿತು. ಅವನು ಅಜಯ್‌ಗೆ ಹೇಳುತ್ತಿದ್ದ. ‘ಹದಿನೈದು ನಿಮಿಷ ಆಗಿರಬಹುದು ಸಾ... ಎರಡೂ ಗಂಡಾನೆಗಳೆ... ಆದರೆ ಚಿಕ್ಕವಿದಾವೆ ಸಾ...’
 
ಚೆನ್ನ ನಮ್ಮ ಛತ್ರಿ, ಕ್ಯಾಮೆರಾ ಸ್ಟ್ಯಾಂಡ್ ಮತ್ತು ನೀರಿನ ಬಾಟಲ್‌ಗಳನ್ನು ಹುಡುಕಿ ತಂದುಕೊಟ್ಟ. ಆನೆಯ ಹೆಜ್ಜೆಗಳನ್ನು ಹತ್ತಿರದಿಂದ ನೋಡುತ್ತಿದ್ದ ಅಜಯ್ ಏಳು–ಏಳೂವರೆ ಅಡಿ ಇರಬಹುದು ಎಂದ. ನಡುನಡುವೆ ಅವರ ಮಾತು ಮುಂದುವರೆದಿತ್ತು.
 
ಕಡೆಗೂ ನಾವು ಬಾಯಿಬಿಡಲಿಲ್ಲ ಎನ್ನುವುದಷ್ಟೇ ನಮ್ಮ ಸಮಾಧಾನವಾಗಿತ್ತು. ಅವರಿಬ್ಬರಿಗೆ ಕಾಣುತ್ತಿದ್ದ ಕಾಡೇ ಬೇರೆಯದಾಗಿತ್ತು! ಅದು ಎಲ್ಲವನ್ನು ಅವರಿಗಾಗಲೆ ತಿಳಿಸಿ ಹೇಳಿತ್ತು.
 
ಕಾಡು, ಪ್ರವಾಸಿಗರಿಗೊಂದು ಕಥೆ, ನಮಗೊಂದು ಕಥೆ ಮತ್ತು ಚೆನ್ನ–ಅಜಯ್‌ರಿಗೆ ಒಂದು ಕಥೆ ಹೇಳಿತ್ತೋ ಅಥವ ನಾವೇ ಬೇರೆ ಬೇರೆ ಕತೆಯನ್ನು ಕೇಳಿಸಿಕೊಂಡಿದ್ದೆವೋ ತಿಳಿಯಲಿಲ್ಲ.
 
ಅಥವ ಕಾಡು ಎಲ್ಲರಿಗೂ ಅದೇ ಕಥೆ ಹೇಳಿತ್ತು, ಆದರೆ ನಾವುಗಳು ಅರ್ಥಮಾಡಿಕೊಂಡಿದ್ದು ಮಾತ್ರ ಬೇರೆ ಬೇರೆಯಾಗಿತ್ತೇನೊ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.