ADVERTISEMENT

ಅಂಗಡಿ ಲೆಕ್ಕ ಮುಗಿದಿತ್ತು

ದ್ವಾರಕೀಶ್
Published 16 ಜೂನ್ 2012, 19:30 IST
Last Updated 16 ಜೂನ್ 2012, 19:30 IST

ಭಾಗ-8

ಅಂಬುಜಾ ಅವರ ದೊಡ್ಡಪ್ಪ ರಂಗರಾವ್ ನನಗೊಂದು ಕಥೆ ಹೇಳಿದ್ದರು. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದ ಮೇಲೆ ಅವರ ಮನೆಗೊಮ್ಮೆ ಬಂದರಂತೆ. `ಒಂದು ಕುರ್ಚಿ ಕೊಡು~ ಎಂದು ಕೇಳಿದವರು ಆಮೇಲೆ `ಮೊಳೆ ಕೊಡು~ ಎಂದು ಕೇಳಿದಾಗ ಅವರಿಗೆ ಅಚ್ಚರಿ. ನಡುಮನೆಯ ಗೋಡೆಗೆ ಮೊಳೆ ಹೊಡೆದು, ಅಲ್ಲಿ ವಿಧಾನಸೌಧದ ಕ್ಯಾಲೆಂಡರನ್ನು ನೇತುಹಾಕಿದರಂತೆ.
 
`ನಾನು ಕಟ್ಟಿದ ವಿಧಾನಸೌಧ ಇದು. ಪ್ರತಿಯೊಬ್ಬರ ಮನೆಯಲ್ಲೂ ಇದು ಕಾಣಬೇಕು~ ಅಂತ ಅವರು ಹೇಳಿದ್ದರಂತೆ. ಅಂಬುಜಾ ಚಿತ್ರದುರ್ಗದ ಹುಡುಗಿ. ಅವಳದ್ದು ಸ್ವಾತಂತ್ರ್ಯ ಹೋರಾಟಗಾರರಿದ್ದ ವಂಶ. ಭೀಮರಾವ್, ರಂಗರಾವ್, ವಾಸುದೇವ ರಾವ್ ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರು.

ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದವರು. ನಾನು ಈಗ ಬದುಕಿರಲು ಕಾರಣರಾದ ಜಾಫರ್ ಷರೀಫ್ ಕೂಡ ಅದೇ ಪಕ್ಷದವರು. ಜಾಫರ್ ಷರೀಫ್ ತಮ್ಮ ಬದುಕಿನ ಕುರಿತ ಪುಸ್ತಕದಲ್ಲಿ ಚಿತ್ರದುರ್ಗದ ಅಂಬುಜಾ ವಂಶಸ್ಥರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಬರೆದಿದ್ದಾರೆ. 1997ರಲ್ಲಿ ನಾನು ಕಷ್ಟದಲ್ಲಿದ್ದಾಗ ಜಾಫರ್ ಷರೀಫ್ ಬೈಪಾಸ್ ಸರ್ಜರಿ ಮಾಡಿಸಿ, ನನ್ನನ್ನು ಬದುಕಿಸಿದರು. ಅವರು ನನ್ನ ಪಾಲಿನ ಅಲ್ಲಾಹು ಎಂದೇ ಭಾವಿಸಿದ್ದೇನೆ. ಆದರೆ, 1997-98ರಲ್ಲಿ ನಾನು ಓಡಾಡಿದ್ದು ಬಿಜೆಪಿ ಪಕ್ಷದ ಪರವಾಗಿ.

ಅಂಬುಜಾ ಅವರ ಸೋದರ ಸಂಬಂಧಿ ಡಾ. ಸಿ.ಆರ್.ರಾವ್ ನಮ್ಮ ಮನೆಯ ಹಿಂಬದಿಯ ಮನೆಯಲ್ಲಿ ವಾಸವಿದ್ದರು. ಅವರ ಮನೆಗೆ ನಾನು ಆಗಾಗ ಹೋಗಿ ಬರುತ್ತಿದ್ದೆ.
1960-61ರಲ್ಲಿ ಅಣ್ಣ ಹೊಸ ಫಿಯೆಟ್ ಕಾರ್ ಕೊಂಡುಕೊಂಡ. ಅವನು ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದ. ಆ ಸಂದರ್ಭ ನೋಡಿ ನಾನು ಕಾರು ತೆಗೆದುಕೊಂಡು ಮೈಸೂರಿನಿಂದ ಬೆಂಗಳೂರಿಗೆ ಹೋದೆ. ಆಗ ನನಗೆ ದೊಡ್ಡಸ್ಥಿಕೆ.

ನಾನೇ ದೊಡ್ಡ ಸಾಹುಕಾರ ಎಂಬ ಹಮ್ಮು. ಮರುದಿನ ಬೆಳಿಗ್ಗೆ ಕಾರು ತೆಗೆದುಕೊಂಡು ಮೈಸೂರಿಗೆ ವಾಪಸ್ ಹೋಗುವಾಗ ರಾಮನಗರದ ಬಳಿ ಎಮ್ಮೆ ಮರಿಗೆ ಕಾರನ್ನು ಗುದ್ದಿಬಿಟ್ಟೆ. ರೇಡಿಯೇಟರ್ ಒಡೆದು ಫಜೀತಿ ಆಯಿತು. ಕಾರನ್ನು ಬೆಂಗಳೂರಿಗೆ ವಾಪಸ್ ಓಡಿಸಿಕೊಂಡು ಹೋಗಿ, ಟಿವಿಎಸ್ ಸರ್ವಿಸ್ ಸ್ಟೇಷನ್‌ಗೆ ಬಿಟ್ಟೆ. ಅಣ್ಣನಿಗೆ ವಿಷಯ ಗೊತ್ತಾಯಿತು.

ನನಗೂ ಅವನಿಗೂ ವಾಗ್ವಾದ ನಡೆಯಿತು. ನಾನು ಕೋಪ ಮಾಡಿಕೊಂಡು, ಮನೆಯಲ್ಲಿ ಮಲಗದೆ ಡಾ.ಸಿ.ಆರ್.ರಾವ್ ಮನೆಯಲ್ಲಿ ಮಲಗಲು ಹೋಗುತ್ತಿದ್ದೆ. ಆಗಲೇ ಅಂಬುಜಾ ಅವರ ಮನೆಗೆ ರಜೆಗೆಂದು ಬಂದದ್ದು. ದಿನ ರಾತ್ರಿ 12 ಗಂಟೆಯವರೆಗೆ ಅಂಬುಜಾ ಜೊತೆ ಮಾತನಾಡುತ್ತಾ ಇದ್ದೆ. ದಸರಾ ಬೇರೆ ಇದ್ದಿದ್ದರಿಂದ ಅವಳನ್ನು ಹತ್ತು ದಿನ ಊರು ಸುತ್ತಿಸಿದೆ. ಅವಳು ಊರಿಗೆ ಹೋದಳು.

ಆಮೇಲೂ ನನಗೆ ಅವಳನ್ನು ಮರೆಯಲು ಆಗಲಿಲ್ಲ. ನನ್ನ ಮನಸ್ಸಿನಲ್ಲಿ ಕೂತಳು. ಅವಳಿಗೆ ಕಾಗದ ಬರೆದೆ. ಅವಳೂ ಪತ್ರ ಬರೆಯಲಾರಂಭಿಸಿದಳು. ನಮ್ಮ ನಡುವೆ ಪ್ರೇಮಾಂಕುರವಾದದ್ದು ಹೀಗೆ. ಡಬಲ್ ಗ್ರಾಜುಯೇಟ್ ಆದ ಅವಳು ನನ್ನಂಥ ನಟನ ಹೆಂಡತಿಯಾಗಿ ಬಂದದ್ದು ಕೂಡ ಬದುಕಿನ `ಟ್ವಿಸ್ಟ್~.
*
`ಮೊದಲ ತೇದಿ~, `ಸ್ಕೂಲ್ ಮಾಸ್ಟರ್~, `ಬೇಡರ ಕಣ್ಣಪ್ಪ~, `ರೇಣುಕಾ ಮಹಾತ್ಮೆ~ ಮೊದಲಾದ ಚಿತ್ರಗಳನ್ನು ನಾನು ಮೈಸೂರಿನಲ್ಲಿ ನೋಡಿದ್ದೆ. ಪದ್ಮಿನಿ ಪಿಕ್ಚರ್ಸ್‌ ನಾನು ಕಂಡ ಶ್ರೇಷ್ಠ ಬ್ಯಾನರ್. ಬಿ.ಎಸ್.ರಂಗಾ ಅವರ ವಿಕ್ರಮ್ ಪ್ರೊಡಕ್ಷನ್ಸ್‌ಗೆ ನಂತರದ ಸ್ಥಾನ. `ಅಮರಶಿಲ್ಪಿ ಜಕಣಾಚಾರಿ~ ಬಂದಾಗ ನಾವೆಲ್ಲಾ ಪುಳಕಿತರಾಗಿ ನೋಡಿದ್ದೆವು. ಮೊದಲ ಬಣ್ಣದ ಚಿತ್ರ ಅದಾಗಿದ್ದರಿಂದ ನಮಗೆಲ್ಲಾ ಸಂಭ್ರಮವೋ ಸಂಭ್ರಮ.

ನಾನು ನರಸಿಂಹರಾಜು ಅವರ ಪರಮ ಅಭಿಮಾನಿ. ಅವರು ಇಲ್ಲದೇ ಇದ್ದರೆ ಆಗ ಸಿನಿಮಾಗಳು ಓಡುತ್ತಲೇ ಇರಲಿಲ್ಲ. ಕನ್ನಡ ಸಿನಿಮಾ ಮಾಡಬೇಕು ಎಂದು ಯಾರಾದರೂ ನಿಶ್ಚಯ ಮಾಡಿದರೆ ಮೊದಲು ಕಾರು ಹೋಗುತ್ತಿದ್ದುದೇ ನರಸಿಂಹರಾಜು ಅವರ ಮನೆಗೆ. `ಸ್ಕೂಲ್ ಮಾಸ್ಟರ್~ನ ಒಂದು ಸೀನ್‌ನಲ್ಲಿ ಅವರು ಹಲ್ಲು ಬಿಡುತ್ತಾರೆ. ಅದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ದೊಡ್ಡ ದೊಡ್ಡ ನಟರೆಲ್ಲಾ ಮೇಲೆ ಬರಲು ಒಂದು ವಿಧದಲ್ಲಿ ನರಸಿಂಹರಾಜು ಅವರೇ ಕಾರಣ.

`ನಟಶೇಖರ~ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಕೂಡ ತುಂಬಾ ಸೊಗಸಾಗಿ ಅಭಿನಯಿಸಿದ್ದರು. ವಿದ್ಯಾವತಿ ಆ ಚಿತ್ರದ ನಾಯಕಿ; ಆ ಕಾಲದಲ್ಲಿ ನಾವು ಕಂಡ ಸುಂದರಿ. ಅವರು ಬೀಚ್ ಸೀನ್‌ನಲ್ಲಿ ಸ್ನಾನ ಮಾಡಿ ಓಡಾಡುವ ದೃಶ್ಯವಿತ್ತು. ಅದನ್ನು ನೋಡಿದಾಗ ನಮಗೆಲ್ಲಾ ರೋಮಾಂಚನ.

ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದ ನನಗೆ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತದೆ ಎಂಬ ವಿಷಯ ಬಲು ಬೇಗ ಕಿವಿಮೇಲೆ ಬೀಳುತ್ತಿತ್ತು. ಶೂಟಿಂಗ್ ನಡೆಯುವ ಸ್ಥಳಕ್ಕೆ ಓಡಿ ಹೋಗುತ್ತಿದ್ದೆ. `ಭೂಲೋಕ ರಂಭೈ~ ಎಂಬ ತಮಿಳು ಸಿನಿಮಾ ಶೂಟಿಂಗ್‌ಗೆ ಜೆಮಿನಿ ಗಣೇಶ್, ಸಾವಿತ್ರಿ ಬಂದಿದ್ದರು. ಬೆಳಿಗ್ಗೆ 8ರಿಂದ ರಾತ್ರಿ ಪ್ಯಾಕಪ್ ಆಗುವವರೆಗೆ ಆ ಶೂಟಿಂಗ್ ನೋಡಿಯೇ ಮನೆಗೆ ಬರುತ್ತಿದ್ದದ್ದು. `ಜನಕ್ ಜನಕ್ ಪಾಯಲ್ ಬಾಜೇ~ ಎಂಬ ವಿ.ಶಾಂತಾರಾಂ ಹಿಂದಿ ಚಿತ್ರದ ಶೂಟಿಂಗ್ ಕೂಡ ಮೈಸೂರಲ್ಲೇ ನಡೆದದ್ದು. ಅದರ ಚಿತ್ರೀಕರಣವನ್ನೂ ನಾನು ಕಣ್ತುಂಬಿಕೊಂಡಿದ್ದೆ.

ಅಂಥ ಸಂದರ್ಭದಲ್ಲಿ ಸಿ.ವಿ.ಶಿವಶಂಕರ್ ಮೈಸೂರಿಗೆ ಬಂದರು. `ರತ್ನಮಂಜರಿ~ ಮುಗಿಸಿದ್ದ ಮಾವ `ವೀರಸಂಕಲ್ಪ~ ಮಾಡಬೇಕೆಂದು ನಿರ್ಧರಿಸಿದ್ದರು. ಹಾಡಿನ ಸಾಹಿತ್ಯದಲ್ಲಿ ಗಪದ್ಯ ತಂದವರಲ್ಲಿ ಹುಣಸೂರು ಕೃಷ್ಣಮೂರ್ತಿ ಮುಖ್ಯರಾದವರು. `ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು?~ ಹಾಡು `ರತ್ನಮಂಜರಿ~ ಚಿತ್ರದ ಹೈಲೈಟ್.

ಆ ಹಾಡು ಬಂದಾಗ ಚಿತ್ರಮಂದಿರದಲ್ಲಿ ಜನರ ಕೇಕೆ ಮುಗಿಲು ಮುಟ್ಟುತ್ತಿತ್ತು. ಆ ಸಿನಿಮಾ ಬಂದಾಗ ಕೆ.ಎಸ್.ಎಲ್.ಸ್ವಾಮಿ- ಅವರನ್ನು ನಾನು ರವಿ ಅಣ್ಣ ಎಂದೇ ಕರೆಯುವುದು- ಲಕ್ಷ್ಮೀ ಟಾಕೀಸ್ ಮುಂದೆ ನಿಂತಿದ್ದರು. ನಾನೂ ಅವರೂ ಆ ಸಿನಿಮಾದ ರಸನಿಮಿಷಗಳನ್ನು ಅನುಭವಿಸಿದ್ದೆವು.

ಮಾವ `ವೀರಸಂಕಲ್ಪ~ ಮಾಡಲು ಹೊರಟಾಗ ತಾವೇ ನಾಯಕರಾಗಲು ನಿರ್ಧರಿಸಿದರು. ತಮ್ಮ ಫೋಟೊ ತಾವೇ ನೋಡಿಕೊಂಡು, `ನಾನು ಯಾವ ದಿಲೀಪ್ ಕುಮಾರ್‌ಗಿಂತ ಏನು ಕಡಿಮೆ~ ಎನ್ನುತ್ತಿದ್ದರು. ನಾನು, ವಾಣಿಶ್ರೀ, ಎಂ.ಪಿ.ಶಂಕರ್, ರಾಜೇಶ್ ಮೊದಲಾದವರು ಸಿನಿಮಾಗೆ ಬಂದದ್ದೇ ಮಾವ ಹುಣಸೂರು ಕೃಷ್ಣಮೂರ್ತಿಯವರು ಮನಸ್ಸು ಮಾಡಿದ್ದರಿಂದ. ಸಿ.ವಿ.ಶಿವಶಂಕರ್ ಮೈಸೂರಿನಲ್ಲಿ ಒಂದು ನಾಟಕ ಆಡಿದರು. ಆಗ ಅವರು `ಸಿನಿಮಾಗೆ ಬಾ, ಒಳ್ಳೆಯದಾಗುತ್ತದೆ~ ಎಂದು ನನ್ನನ್ನು ಕರೆದರು. ನನ್ನ ಸಿನಿಮಾ ಬಯಕೆ ಆಗ ಇನ್ನಷ್ಟು ಚಿಗಿತುಕೊಂಡಿತು~.

`ವೀರಸಂಕಲ್ಪ~ ಚಿತ್ರದಲ್ಲಿ ನನಗಾಗಿ ಮಾವ ಒಂದು ಪಾತ್ರ ಬರೆದರು. `ಹಣ ಹದ್ದು~ ಎಂಬ ನಾಟಕವನ್ನು ಮೈಸೂರು ಟೌನ್‌ಹಾಲ್‌ನಲ್ಲಿ ಆಡಿದ್ದನ್ನು ನೋಡಿ ಅವರು ಆ ಪಾತ್ರವನ್ನು ನನಗೆ ಕೊಡಲು ನಿರ್ಧರಿಸಿದ್ದು. ಹಂಗೂಹಿಂಗೂ ಮಾಡಿ ಆ ವಿಷಯವನ್ನು ಅಣ್ಣನಿಗೆ ಹೇಳಿದೆ. ಅವನಿಗೆ ಎಲ್ಲೂ ಇಲ್ಲದ ಕೋಪ ಬಂತು.

ಅಂದು ರಾತ್ರಿ ಎಂಟೊಂಬತ್ತು ಗಂಟೆಗೆ ನಮ್ಮ ನಡುವೆ ಜೋರಾಗಿ ಮಾತುಕತೆ ಶುರುವಾಯಿತು. `ನಾನು ಅರಳಿಮರದ ಹಾಗಿದೀನಿ. ಬಣ್ಣ ಹಚ್ಚಿಕೊಂಡು ಯಾಕೆ ಹಾಳಾಗುತ್ತೀಯಾ~ ಎಂದು ತರಾಟೆಗೆ ತೆಗೆದುಕೊಂಡ. ಒಂದು ಸಿನಿಮಾದಲ್ಲಿ ಪಾತ್ರ ಮಾಡಿ ಬಂದುಬಿಡುತ್ತೇನೆ. ಮತ್ತೆ ಹೋಗೊಲ್ಲ ಎಂದು ನಾನು ವಿನಂತಿಸಿಕೊಂಡೆ.
 
`ಸ್ಕ್ರೀನಾ, ಆಟೊಮೊಬೈಲಾ ನೀನೇ ನಿರ್ಧರಿಸು~ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿಬಿಟ್ಟ. ವಿಶ್ವನಾಥ್, ನಾನು, ಅಣ್ಣ ಮೂವರ ಪಾರ್ಟ್‌ನರ್‌ಷಿಪ್‌ನಲ್ಲಿ ಆಟೊಮೊಬೈಲ್ ಅಂಗಡಿ ಶುರುವಾಗಿತ್ತು. ಆ ಅಂಗಡಿ ಬಿಟ್ಟು ನಾನು ಹೋಗುವುದು ಅಣ್ಣನಿಗೆ ಇಷ್ಟವಿರಲಿಲ್ಲ. ನನಗೆ ಆಗ ಅವನ ಆ ಕಾಳಜಿ ಗೊತ್ತಾಗಲಿಲ್ಲ. ಈಗಲೂ ಕೆಲವೊಮ್ಮೆ ಅಣ್ಣ ಆ ದಿನ ಆಡಿದ ಮಾತು ಕೇಳಬೇಕಿತ್ತು ಅಂತ ಅನಿಸುತ್ತದೆ.

ಅಂದು ಅವನು ಆ ರಾತ್ರಿಯೇ ಆಡಿಟರ್‌ನ ಕರೆದ. ಪಾರ್ಟ್‌ನರ್ ಆಗಿದ್ದವರನ್ನೂ ಕರೆಸಿದ. ಬ್ಯಾಲೆನ್ಸ್ ಷೀಟ್ ಬರೆಸಿಯೇ ಬಿಟ್ಟ. ರಾತ್ರಿ ಹನ್ನೊಂದಕ್ಕೆ ಲೆಕ್ಕ ಹಾಕಿದ್ದು ಮುಗಿದಿತ್ತು. 2,224 ರೂಪಾಯಿ 32 ಪೈಸೆ ನನ್ನ ಷೇರು. ಆ ಮೊತ್ತಕ್ಕೆ ಚೆಕ್ ಕೊಟ್ಟು, `ಶಾಂತಾ, ನಿನ್ನ ಮೈದುನ ನಾಳೆ ಊರು ಬಿಟ್ಟು ಹೋಗ್ತಾ ಇದಾನೆ. ಸಿನಿಮಾಗೆ ಹೋಗಬೇಕಂತೆ.

ಹುಡುಗೀರನ್ನ ನೋಡಬೇಕಂತೆ. ಏನೋ ಶೋಕಿ ಇದೆ. ಮುಗಿಸಲಿ. ನಾಳೆ ಪಾಯಸದ ಅಡುಗೆ ಮಾಡು~ ಎಂದ. ನಮ್ಮ ಅತ್ತಿಗೆಯನ್ನು ನಾನು ವೈನಿ ಎಂದು ಕರೆಯುತ್ತಿದ್ದೆ. ಮರುದಿನ ಅವರು ಪಾಯಸದ ಅಡುಗೆ ಮಾಡಿ ನನ್ನನ್ನು ಕಳುಹಿಸಿಕೊಟ್ಟರು. ಸ್ನೇಹಿತರ ಜೊತೆಗೂ ಸಿನಿಮಾಗೆ ಹೋಗುವ ವಿಚಾರ ಹೇಳಿ, ಅನುಮತಿ ಪಡೆದುಕೊಂಡೆ. ಅಣ್ಣ ತನ್ನ ಕಾರಿನಲ್ಲಿ ನನ್ನನ್ನು ಕರೆದುಕೊಂಡು ಮೈಸೂರು ಬಸ್‌ಸ್ಟ್ಯಾಂಡ್‌ನಲ್ಲಿ ಬಿಟ್ಟ.
 
ರಾತ್ರಿ 11 ಗಂಟೆ ಬಸ್ಸು ಹತ್ತಿದೆ. ಮರುದಿನ ಬೆಳಿಗ್ಗೆ 5.15 ಗಂಟೆಗೆ ಕಲಾಸಿಪಾಳ್ಯದಲ್ಲಿ ಬಸ್ ಇಳಿದೆ. `ಇಲ್ಲಿ ಕೈ ನೋಡಲಾಗುತ್ತದೆ... ಭವಿಷ್ಯ ಹೇಳಲಾಗುತ್ತದೆ~ ಎಂಬ ಬೋರ್ಡ್ ಕಾಣಿಸಿತು. ಅಲ್ಲಿಗೆ ಹೋಗಿ ಕೈತೋರಿಸಿದೆ. `ಒಳ್ಳೆ ಹೆಸರು ಮಾಡ್ತೀಯಾ ಹೋಗಯ್ಯಾ...~ ಅಂತ ಅವನಂದ. ಸಿನಿಮಾ ರೈಲಿಗೆ ನಾನು ಹತ್ತಿದ್ದು ಹಾಗೆ.

 ಮುಂದಿನ ವಾರ: ಚಿತ್ರರಂಗದ ಮೊದಲ ದಿನಗಳು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.