ADVERTISEMENT

ಓವರ್ ಟು ಸಿಂಗಪೂರ್

ದ್ವಾರಕೀಶ್
Published 1 ಸೆಪ್ಟೆಂಬರ್ 2012, 19:30 IST
Last Updated 1 ಸೆಪ್ಟೆಂಬರ್ 2012, 19:30 IST

`ಕಿಟ್ಟು ಪುಟ್ಟು~ ಹಿಟ್ ಆದಮೇಲೆ ನಾನು, ವೀರಾಸ್ವಾಮಿ, ಗಂಗಪ್ಪಣ್ಣ, ಸಿ.ವಿ.ಎಲ್.ಶಾಸ್ತ್ರಿಗಳು, ಅಶ್ವತ್ಥ ನಾರಾಯಣ್ ಎಲ್ಲರೂ ಸಿಂಗಪೂರ್, ಮಲೇಷ್ಯಾ, ಕೊರಿಯಾ, ಜಪಾನ್‌ಗೆ ಪ್ರವಾಸಕ್ಕೆ ಹೊರಟೆವು. ಎರಡು ಮೂರು ವರ್ಷಗಳ ಹಿಂದೆ ನಾನು ಎಂಜಿಆರ್ ನಟಿಸಿದ್ದ `ಉಲಗ ಸುಟ್ರ ವಾಲಿಬನ್~ ತಮಿಳು ಸಿನಿಮಾ ನೋಡಿದ್ದೆ.

ಆ ಪ್ರವಾಸಕ್ಕೆ ಹೋದಾಗ ಅದು ನೆನಪಾಯಿತು. ಯಾಕೆಂದರೆ, ವಿದೇಶದಲ್ಲಿ ಚಿತ್ರೀಕರಣ ನಡೆಸಿದ ಮೊದಲ ತಮಿಳು ಸಿನಿಮಾ ಅದು; ನಾವೂ ಯಾಕೆ ಸಿಂಗಪೂರ್‌ನಲ್ಲಿ ಒಂದು ಸಿನಿಮಾ ಮಾಡಬಾರದು ಎಂಬ ಬಯಕೆ ಹುಟ್ಟುಹಾಕಿದ್ದ ಚಿತ್ರ ಕೂಡ. ನಾವು ಸಿಂಗಪೂರ್‌ನಲ್ಲಿ ಓಡಾಡುತ್ತಿದ್ದಾಗಲೆಲ್ಲಾ ಎಲ್ಲೆಲ್ಲಿ ಚಿತ್ರೀಕರಣ ನಡೆಸಿದರೆ ಚೆನ್ನ ಎಂಬ ವಿಚಾರ ಸುಳಿದಾಡತೊಡಗಿತು.

ಇಪ್ಪತ್ತು ದಿನಗಳ ಪ್ರವಾಸದಲ್ಲಿ ಒಬ್ಬ ಸಸ್ಯಾಹಾರಿಯಾಗಿ ನಾನು ಪಟ್ಟ ಕಷ್ಟ ನನಗೇ ಗೊತ್ತು. ಜಪಾನ್‌ನಲ್ಲಿ ಒಂದು ಪ್ಲೇಟ್ ಮೊಸರನ್ನಕ್ಕೆ ಪರದಾಡಿದೆ. ಆ ಕಾಲದಲ್ಲಿ ಒಂದು ಸಣ್ಣ ಪ್ಲೇಟ್ ಮೊಸರನ್ನಕ್ಕೆ 500 ರೂಪಾಯಿ ಕೊಟ್ಟೆ. ಅದರ ನಡುವೆಯೇ ನಾನು ಲೊಕೇಷನ್‌ಗಳನ್ನು ಹುಡುಕುತ್ತಾ ಇದ್ದೆ. ವೀರಾಸ್ವಾಮಿಯವರಿಗೂ ಸಿಂಗಪೂರ್‌ನಲ್ಲಿ ನಾವು ಒಂದು ಸಿನಿಮಾ ತೆಗೆದರೆ ಒಳ್ಳೆಯದಲ್ಲವೇ ಎಂದು ಕೇಳಿದೆ. ಅವರಿಗೆ ಖುಷಿಯಾಯಿತು. ಮತ್ತೆ ನಾನು-ವಿಷ್ಣುವರ್ಧನ್ ಜೋಡಿ. `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಎಂದು ಚಿತ್ರಕ್ಕೆ ಹೆಸರಿಟ್ಟದ್ದೂ ಆಯಿತು.

`ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಚಿತ್ರಕ್ಕೆ ಯಾವ ಕತೆ ಮಾಡುವುದು ಎಂಬ ಪ್ರಸ್ತಾಪವಾಯಿತು. ಚಿ.ಉದಯಶಂಕರ್, ಎಂ.ಡಿ.ಸುಂದರ್ ಅವರೂ ನನ್ನ ಜೊತೆಗಿದ್ದರು. ಹಿಂದೊಮ್ಮೆ ಯಾವುದೋ ಬೀಚ್‌ನಲ್ಲಿ ಅಡ್ಡಾಡುವಾಗ ಉದಯಶಂಕರ್‌ಗೆ `ತುಮ್ ಸಾ ನಹೀ ದೇಖ~ ಎಂಬ ಹಿಂದಿ ಸಿನಿಮಾ ಬಗ್ಗೆ ಹೇಳಿದ್ದೆ.
 
ದೇವಾನಂದ್ ನಟಿಸಿದ್ದ ಆ ಚಿತ್ರವನ್ನು ಕನ್ನಡಕ್ಕೆ ತಂದು, ಅದರಲ್ಲಿ ರಾಜ್‌ಕುಮಾರ್ ನಟಿಸಿದರೆ ಚೆನ್ನಾಗಿರುತ್ತದೆ ಎಂದಿದ್ದೆ. ಆಗ ಉದಯಶಂಕರ್ ಆಗಲೀ ಸುಂದರ್ ಆಗಲೀ ಯಾರಿಗೇ ಕತೆ ಸಿದ್ಧಪಡಿಸಬೇಕಿದ್ದರೂ ನನ್ನ ಜೊತೆ ಚರ್ಚಿಸುತ್ತಿದ್ದರು. ನಾವೆಲ್ಲಾ ಒಂದು ತಂಡದಂತಿದ್ದರಿಂದ ಕತೆ ಇನ್ನೂ ಉತ್ತಮವಾಗುತ್ತದೆಂಬ ಕಾರಣಕ್ಕೆ ಎಲ್ಲರೂ ಮುಕ್ತವಾಗಿ ಮಾತನಾಡುತ್ತಿದ್ದೆವು.

`ತುಮ್ ಸಾ ನಹೀ ದೇಖ~ ಚಿತ್ರದ ಬಗೆಗೆ ಹೇಳಿದ ಹತ್ತು ದಿನಗಳ ನಂತರ ಯಾವುದೋ ಕಾರಣಕ್ಕೆ ನಾನು ವಾಹಿನಿ ಸ್ಟುಡಿಯೋಗೆ ಹೋದೆ. ಅಲ್ಲಿ ಸಾಲಾಗಿ ಕಾರುಗಳು ನಿಂತಿದ್ದವು. ರಾಜ್‌ಕುಮಾರ್, ವರದಣ್ಣನವರ ಕಾರುಗಳೂ ಅಲ್ಲಿದ್ದವು. ಸುಂದರ್ ಕೂಡ ಅವರೊಟ್ಟಿಗೆ ಒಳಗಿದ್ದ. ಅಲ್ಲೇ ಇದ್ದ ಪರಿಚಯಸ್ಥರೊಬ್ಬರನ್ನು ಏನು ಇಷ್ಟೊಂದು ಕಾರುಗಳಿವೆ ಎಂದು ಕೇಳಿದೆ.

ಒಳಗೆ `ತುಮ್ ಸಾ ನಹೀ ದೇಖ~ ಎಂಬ 16 ಎಂಎಂ ಸಿನಿಮಾ ನೋಡುತ್ತಿದ್ದಾರೆ ಎಂಬ ವಿಷಯವನ್ನು ಅವರು ಹೇಳಿದರು. ಆಮೇಲೆ ಉದಯಶಂಕರ್ ಸಿಕ್ಕಾಗ ಚೆನ್ನಾಗಿ ಜಾಡಿಸಿದೆ. ನಾನು ಹೇಳಿದ ಕತೆಯನ್ನು ನೀನು ಅಲ್ಲಿ ಹೇಳಿದೆಯಲ್ಲ ಎಂದು ತರಾಟೆಗೆ ತೆಗೆದುಕೊಂಡೆ. ರಾಧಾಕೃಷ್ಣ ಎಂಬೊಬ್ಬರಿಗೆ ರಾಜ್‌ಕುಮಾರ್ ಸಿನಿಮಾ ಮಾಡಬೇಕಿತ್ತು. ಅದಕ್ಕೆಂದೇ ಆ ಚಿತ್ರವನ್ನು ಉದಯಶಂಕರ್ ಅವರಿಗೆ ತೋರಿಸಿದ್ದ. ಆ `ತುಮ್ ಸಾ ನಹೀ ದೇಖ~ ಸ್ಫೂರ್ತಿಯಿಂದ ಬಂದದ್ದೇ ರಾಜ್‌ಕುಮಾರ್ ಅಭಿನಯದ `ಶಂಕರ್ ಗುರು~.

ಆ ಚಿತ್ರದ ಕತೆಯನ್ನು ಉದಯಶಂಕರ್ ಹಾಗೂ ಎಂ.ಡಿ.ಸುಂದರ್ ಸೇರಿ ಮಾಡಿದ್ದರಾದರೂ ನಾನು ಹೇಳಿದ ಕತೆಯೇ ಸ್ಫೂರ್ತಿ ಎಂಬುದು ಗೊತ್ತಿದ್ದರಿಂದ ನನಗೆ ಸಿಟ್ಟು ಬಂತು. ನಾನೂ ಅದೇ ಕತೆ ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡುತ್ತೇನೆ ಎಂದು ಹಟಕ್ಕೆ ಬಿದ್ದೆ. ಅದರ ಪರಿಣಾಮವೇ `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~. ಸ್ವಲ್ಪ ಒಳಹೊಕ್ಕು ನೋಡಿದರೆ `ಶಂಕರ್ ಗುರು~ ಹಾಗೂ `ಸಿಂಗಪೂರ್‌ನಲ್ಲಿ ರಾಜಾಕುಳ್ಳ~ ಎರಡರದ್ದೂ ಒಂದೇ ಕತೆ ಎಂಬುದು ಗೊತ್ತಾಗುತ್ತದೆ. ಅದರಲ್ಲೂ ತಂದೆ, ಎರಡು ಮಕ್ಕಳು; ಇದರಲ್ಲೂ ತಂದೆ, ಎರಡು ಮಕ್ಕಳು.
 
ಅದರಲ್ಲಿ ರಾಜ್‌ಕುಮಾರ್ ಮೂರು ಪಾತ್ರಗಳನ್ನು ಮಾಡಿದರು. ಇದರಲ್ಲಿ ನಾನು, ವಿಷ್ಣು, ಲೋಕನಾಥ್ ಆ ಪಾತ್ರಗಳನ್ನು ಮಾಡಿದೆವು. ಎರಡೂ ಚಿತ್ರಗಳೂ ಚೆನ್ನಾಗಿ ಓಡಿದವು. `ಶಂಕರ್ ಗುರು~ ಚಿತ್ರವನ್ನು ಟ್ರೀಟ್ ಮಾಡಿದ್ದಕ್ಕೂ ನಮ್ಮ `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಟ್ರೀಟ್ ಮಾಡಿದ್ದಕ್ಕೂ ವ್ಯತ್ಯಾಸವಿತ್ತು. ತಮಾಷೆ ಎಂದರೆ ಎರಡೂ ಚಿತ್ರಕತೆಗಳನ್ನು ಉದಯಶಂಕರ್ ಹಾಗೂ ಎಂ.ಡಿ.ಸುಂದರ್ ಸೇರಿ ಮಾಡಿದ್ದರು.
 
ಸಣ್ಣ ಸ್ಫೂರ್ತಿಯಿಂದ ಚಿತ್ರರಂಗದಲ್ಲಿ ಏನೆಲ್ಲಾ ಪ್ರಯೋಗಗಳನ್ನು ಮಾಡಬಹುದು ಎಂಬುದಕ್ಕೆ ಇದು ಉದಾಹರಣೆ. ನಾನು ಅದಕ್ಕೇ ಈಗಲೂ, ಕೋಟಿ ಕೋಟಿ ಹಣ ಮಾಡುವುದಷ್ಟೇ ಮುಖ್ಯವಲ್ಲ. ಒಳ್ಳೊಳ್ಳೆಯ ಕತೆಗಳಿಗೆ ಸ್ಫೂರ್ತಿ ಹುಡುಕಿ ಎಂದು ಹೇಳುತ್ತಿರುತ್ತೇನೆ. ಒಳ್ಳೆಯ ಚಿಂತನೆ ಬಂದರೆ ಸಿನಿಮಾ ಕತೆ ಚೆನ್ನಾಗಿಯೇ ಆಗುತ್ತದೆ. ನನ್ನ ಎಷ್ಟೋ ಪರಿಕಲ್ಪನೆಗಳನ್ನು ಉದಯಶಂಕರ್ ತೆಗೆದುಕೊಂಡಿದ್ದಾನೆ. ಅವನ ಲೆಕ್ಕವಿಲ್ಲದಷ್ಟು ಕತೆಗಳು ನನಗೂ ಸಿಕ್ಕಿವೆ. ಈ ಕೊಡು ಕೊಳ್ಳುವಿಕೆ ಇಲ್ಲದಿದ್ದರೆ ನನ್ನಿಂದ ಅಷ್ಟು ಚಿತ್ರಗಳನ್ನು ಮಾಡಲು ಸಾಧ್ಯವೇ ಇರಲಿಲ್ಲ.

ವಿಷ್ಣುವರ್ಧನ್, ಮಂಜುಳಾ, ನಾನು, ಲೋಕನಾಥ್, ತೂಗುದೀಪ ಶ್ರೀನಿವಾಸ್ ತಾರಾಗಣದ `ಸಿಂಗಪೂರ್‌ನಲ್ಲಿ ರಾಜಾ ಕುಳ್ಳ~ ಒಂದು ಸಾಹಸವೆಂದೇ ಹೇಳಬೇಕು. ಆ ಕಾಲದಲ್ಲಿ ವಿದೇಶದಲ್ಲಿ ಚಿತ್ರೀಕರಣ ನಡೆಸುವುದು ಈಗಿನಷ್ಟು ಸುಲಭವಿರಲಿಲ್ಲ. ಸರ್ಕಾರ, ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆಯಬೇಕಿತ್ತು. ನಾವು ವಿದೇಶದಲ್ಲಿ ಖರ್ಚು ಮಾಡುವ ನಾಲ್ಕರಷ್ಟನ್ನು ಸಂಪಾದಿಸಬೇಕು ಎಂಬ ಷರತ್ತು ಬೇರೆ ಇತ್ತು. ನಾನು, ವೀರಾಸ್ವಾಮಿ, ಗಂಗಪ್ಪಣ್ಣ ಬಹಳ ಕಷ್ಟಪಟ್ಟೆವು. ನಾವು ಚಿತ್ರೀಕರಣಕ್ಕೆ ಅನುಮತಿ ಪಡೆಯಲೆಂದು ದೆಹಲಿಗೆ ಹೋದಾಗ ನಡೆದ ಒಂದು ತಮಾಷೆ ಪ್ರಸಂಗವನ್ನು ಹಂಚಿಕೊಳ್ಳಬೇಕು.

ನಾನು, ಗಂಗಪ್ಪಣ್ಣ ದೆಹಲಿಗೆ ಹೊರಟೆವು. ವಿಮಾನ ಅಲ್ಲಿಗೆ ತಲುಪುವುದು ರಾತ್ರಿ 11 ಆಗುತ್ತಿತ್ತು. ನಮಗೆ `ಗುಂಡು ಹಾಕುವ~ ಶೋಕಿ. ಅಷ್ಟು ಹೊತ್ತಿನಲ್ಲಿ ಅಲ್ಲಿ ವಿಸ್ಕಿಗಾಗಿ ಹುಡುಕುವುದು ಕಷ್ಟ ಎಂದು ಇಲ್ಲಿಯೇ ಒಂದು ಬಾಟಲನ್ನು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡೆವು. ದೆಹಲಿಯಲ್ಲಿ ಇಳಿದ ಮೇಲೆ ಎಲ್ಲರ ಬಳಿಯೂ ಮದ್ಯದ ವಾಸನೆ.
 
ಲಗೇಜ್ ಕೊಡುವವನು, ಟಿಕೆಟ್ ನೋಡಿ ಹೊರಗೆ ಬಿಡುವವನು, ಲಾಂಜ್‌ನಲ್ಲಿ ಕೂತವರು ಎಲ್ಲೆಲ್ಲಿಯೂ ಅದರದ್ದೇ ವಾಸನೆ. ಇದೇನಪ್ಪ ದೆಹಲಿಯಲ್ಲಿ ಎಲ್ಲರೂ ಹೀಗೆ ಕುಡಿದಿದ್ದಾರೆ ಎಂದು ನಾವು ಮಾತನಾಡಿಕೊಂಡೆವು. ರೂಮ್ ತಲುಪಿ, ಅಲ್ಲಿ ಸೂಟ್‌ಕೇಸ್ ತೆಗೆದರೆ ನಾವು ತೆಗೆದುಕೊಂಡು ಹೋಗಿದ್ದ ಬಾಟಲ್ ಒಡೆದು, ಅಷ್ಟೂ ಸರಕು ಚೆಲ್ಲಿತ್ತು. ಅದು ಚೆಲ್ಲಿ ವಿಮಾನ ನಿಲ್ದಾಣದಲ್ಲಿ ಹರಡಿದ್ದ ವಾಸನೆಯನ್ನೇ ಆಘ್ರಾಣಿಸಿ, ಎಲ್ಲರೂ ಕುಡಿದಿದ್ದಾರೆಂದು ತಪ್ಪಾಗಿ ಭಾವಿಸಿದ್ದೆವು. ಹತ್ತು ಹನ್ನೆರಡು ದಿನ ದೆಹಲಿಯಲ್ಲಿದ್ದು ನಾವು ರಿಸರ್ವ್ ಬ್ಯಾಂಕ್‌ನ ಅನುಮತಿ ಪಡೆದುಕೊಂಡೆವು.

ಒಂದು ತಿಂಗಳ ಅವಧಿಗೆ ನಾವು ಸಿಂಗಪೂರ್‌ಗೆ ಹೊರಟೆವು. ಆಗಸ್ಟ್ 19ರಂದು ನನ್ನ ಹುಟ್ಟುಹಬ್ಬದ ದಿನ ಹೊರಟ ತಂಡ ಸೆಪ್ಟೆಂಬರ್ 18, ವಿಷ್ಣುವರ್ಧನ್ ಹುಟ್ಟುಹಬ್ಬದ ದಿನ ವಾಪಸ್ ಬಂದಿತು. ಸಿಂಗಪೂರ್‌ಗೆ ಆ ಕಾಲದಲ್ಲೇ ಮೂವತ್ತು ಮಂದಿಯ ತಂಡವನ್ನು ನಾನು ಕರೆದುಕೊಂಡು ಹೋಗಿದ್ದೆ.

ಅಲ್ಲಿ ಅಯ್ಯಾ ಕಣ್ಣು ಎಂಬುವರು ಸ್ಟುಡಿಯೊ ಇಟ್ಟುಕೊಂಡಿದ್ದರು. ಚೀನಾ ಹಾಗೂ ಜಪಾನ್ ಚಿತ್ರಗಳಿಗೆ ಅವರು ಉಪಕರಣಗಳನ್ನು ಒದಗಿಸುತ್ತಿದ್ದರು. ಅವರು ನಮಗೆ ಸಾಕಷ್ಟು ಸಹಾಯ ಮಾಡಿದರು. ನಾವು ಟೀವಿ ಧಾರಾವಾಹಿ ಚಿತ್ರೀಕರಣ ಮಾಡುತ್ತಿದ್ದೇವೆ ಎಂದೇ ಅಲ್ಲಿನವರನ್ನು ನಂಬಿಸಿ ಶೂಟಿಂಗ್ ಮಾಡುತ್ತಾ ಹೋದೆವು.

ಎಲ್ಲಾ ಕಲಾವಿದರನ್ನು ತ್ರಿತಾರಾ ಹೋಟೆಲ್‌ನಲ್ಲಿ ಇಳಿಸಿದ್ದೆವು. ಓಡಾಡಲು ಹವಾನಿಯಂತ್ರಿತ ಬಸ್ ವ್ಯವಸ್ಥೆ. ಆ ಕಾಲದಲ್ಲಿ ಅದೇ ದೊಡ್ಡ ವಿಷಯ. ಬೆಳಿಗ್ಗೆ 5.30ಕ್ಕೆ ಬಸ್ ಹೊರಡುತ್ತಿತ್ತು. ಎಲ್ಲರೂ ಅಷ್ಟು ಹೊತ್ತಿಗೆ ಸಿದ್ಧವಾಗಿರಬೇಕಾಗುತ್ತಿತ್ತು. ನಾಗರಾಜ್ ಎಂಬ ಒಬ್ಬ ಕಾಸ್ಟ್ಯೂಮರನ್ನು ನಾವು ಕರೆದುಕೊಂಡು ಹೋಗಿದ್ದೆವು.

ಆತ ಭಾರತಿ, ಲಕ್ಷ್ಮಿ ಮೊದಲಾದ ನಟಿಯರಿಗೆ ಚೀಫ್ ಕಾಸ್ಟ್ಯೂಮರ್ ಆಗಿದ್ದ. ಸುಮಾರು ಹತ್ತು ಕಲಾವಿದರ ಬಟ್ಟೆ ಒಗೆದು, ಒಣಗಿಸಿ, ಇಸ್ತ್ರಿ ಮಾಡುವ ಕೆಲಸವನ್ನು ಅಲ್ಲಿ ಅವನೊಬ್ಬನೇ ಮಾಡುತ್ತಿದ್ದ.

ಕಷ್ಟಪಟ್ಟು ಅಲ್ಲಿ ಅನುಮತಿ ಪಡೆದುಕೊಂಡು ಹೇಗೋ ಚಿತ್ರೀಕರಣ ಮುಂದುವರಿಸಿಕೊಂಡು ಹೋಗಿದ್ದೆವು. ಸಿಂಗಪೂರ್‌ನ ಸ್ಮಶಾನವೊಂದರಲ್ಲಿ ನಾನು, ವಿಷ್ಣು ಅಣ್ಣ-ತಮ್ಮ ಎನ್ನುತ್ತಾ ತಬ್ಬಿಕೊಳ್ಳುವ ಶಾಟ್ ತೆಗೆಯಲು ಹೋದೆವು. ನಾವು ಅಂಥ ದೃಶ್ಯಗಳನ್ನು ಹಿಂದಿನ ಚಿತ್ರಗಳಲ್ಲೂ ಅಭಿನಯಿಸಿದ್ದರಿಂದ ಆ ದೃಶ್ಯವೇ ತಮಾಷೆ ಎನ್ನಿಸಿತು. ನಾನು `ಅಣ್ಣಾ~ ಎಂದು ಕೂಗಿದರೆ ವಿಷ್ಣು ನಗುತ್ತಿದ್ದ.

ಅವನು `ತಮ್ಮಾ~ ಎಂದರೆ ನಾನು ನಗುತ್ತಿದ್ದೆ. ಬೆಳಿಗ್ಗೆ 9ಕ್ಕೇ ನಾವು ಲೊಕೇಷನ್‌ಗೆ ಹೋದರೂ ಮಧ್ಯಾಹ್ನ ಮೂರು ಗಂಟೆಯಾದರೂ ಆ ಶಾಟ್ ತೆಗೆಯಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಸಿ.ವಿ.ರಾಜೇಂದ್ರನ್ ಬಂದು ಕಪಾಳಮೋಕ್ಷ ಮಾಡಿದರು. ವಿಧಿ ಇಲ್ಲದೆ ನಮ್ಮ ನಗುವನ್ನು ಹತ್ತಿಕ್ಕಿ ಕೊನೆಗೂ ಶಾಟ್ ಓಕೆ ಆಗುವಂತೆ ಮಾಡಿದೆವು.

ಮುಂದಿನ ವಾರ: ಫೈಟ್ ಮಾಸ್ಟರ್‌ಕೂಡ ಅಪರೂಪದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.