ADVERTISEMENT

ಪಾಲಿಟೆಕ್ನಿಕ್ ದಿನಗಳು...

ದ್ವಾರಕೀಶ್
Published 2 ಜೂನ್ 2012, 19:50 IST
Last Updated 2 ಜೂನ್ 2012, 19:50 IST

ಬೆಂಗಳೂರಿಗೆ ಹೋದರೂ ಪ್ರಯೋಜನವಾಗಲಿಲ್ಲ. ಪಾಲಿಟೆಕ್ನಿಕ್ ಸೀಟಿಲ್ಲದೆ ಬರಿಗೈಲಿ ಮೈಸೂರಿನ ಮನೆಗೆ ಬಂದೆ. ಮದಣ್ಣನಿಗೆ ಪಿತ್ಥ ನೆತ್ತಿಗೇರಿತು. `ಯಾವುದೇ ಕಾರಣಕ್ಕೂ ಸೀಟಿಲ್ಲದೆ ಮನೆಗೆ ಬರಬೇಡ. ಡೋನರ್ಸ್‌ ಲೆಟರ್ ಕೊಡಿಸಿದರೂ ಒಂದು ಸೀಟು ಗಿಟ್ಟಿಸಿಕೊಳ್ಳಲು ಆಗೊಲ್ಲವೆಂದರೇನು. ಬರಿಗೈಲಿ ಬಂದು ನನಗೆ ಮುಖ ತೋರಿಸಲೇಬೇಡ~ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿಬಿಟ್ಟರು. ನನಗೂ ಕೋಪ ಬಂತು. ಹಟ ಬಂತು. ಬೆಂಗಳೂರಿಗೆ ಮತ್ತೆ ಹೋದೆ.

ಗೋಪಿ ಅಂತ ನನ್ನ ಕಸಿನ್ ಇದ್ದ. ಅವನನ್ನೂ ಜೊತೆಗೆ ಸೇರಿಸಿಕೊಂಡು ನಾನು ಸೀಟಿನ ಬೇಟೆ ಶುರುಮಾಡಿದೆ. ಆಗ ನಮಗೆ ಸೀಬೆಹಣ್ಣು ತಿನ್ನುವ ಶೋಕಿ. ವಿಧಾನಸೌಧದ ಎದುರು ಸೀಬೆಹಣ್ಣು ಮಾರುತ್ತಿದ್ದರು. ಅಲ್ಲಿ ಹಣ್ಣನ್ನು ಹೆಚ್ಚಿಸಿಕೊಂಡು, ಖಾರ ಹಚ್ಚಿಸಿಕೊಂಡು ಬಾಯಿ ಚಪ್ಪರಿಸುತ್ತಾ ತಿಂದಿದ್ದೇ ತಿಂದಿದ್ದು. ಆಗ ಅಣ್ಣಾರಾವ್ ಗಣಮುಖಿ ಎಂಬುವರು ಶಿಕ್ಷಣ ಸಚಿವರಾಗಿದ್ದರು. ಪ್ರತಿನಿತ್ಯ ಅಣ್ಣಾರಾವ್ ಗಣಮುಖಿ ಮನೆಯಿಂದ ಹೊರಗೆ ಬರುವ ಹೊತ್ತಿಗೆ ನಾನು ಅಲ್ಲಿ ನಿಂತಿರುತ್ತಿದ್ದೆ. ಅವರ ಪಾದ ಎಲ್ಲಿಗೆ ಬೆಳೆಯುತ್ತದೋ ಅಲ್ಲಿಗೇ ನನ್ನ ಪಯಣ. ಸಂಜೆ ಐದು ಗಂಟೆಗೆ ವಿಧಾನಸೌಧದಿಂದ ಹೊರಗೆ ಅವರು ಕಾಲಿಡುವಾಗಲೂ ನನ್ನ ಮುಖ ಕಾಣಬೇಕು, ಹಾಗೆ ನಿಲ್ಲುತ್ತಿದ್ದೆ. ಕೈಯಲ್ಲಿ ಆ ಡೋನರ್ಸ್‌ ಲೆಟರ್ ಹಿಡಿದು ಅವರಿಗೆ ಆಗಾಗ ತೋರಿಸುತ್ತಲೇ ಇದ್ದೆ. ನನ್ನ ಮುಖ ನೋಡಿನೋಡಿ ಅವರಿಗೆ ರೋಸಿಹೋಯಿತು. ಸೆಕ್ರೆಟರಿಯನ್ನು ಕರೆದು, `ಯಾವನಯ್ಯಾ ಇವನು ಹುಡುಗ; ದ್ವಾರಕಾನಾಥ್ ಅಂತೆ. ಅವತ್ತಿನಿಂದ ಒಂದು ಲೆಟರ್ ಹಿಡಿದುಕೊಂಡು ಬಂದು ನನ್ನ ತಲೆ ತಿನ್ನುತ್ತಲೇ ಇದ್ದಾನೆ~ ಎಂದರು. ಬೆಡ್‌ರೂಮ್ ಹೊರತುಪಡಿಸಿ ಹದಿನೈದು ದಿನ ಅವರು ಕಣ್ತೆರೆದರೆ ಸಾಕು ನಾನೇ ಕಾಣುತ್ತಿದ್ದೆ. ಅಷ್ಟರ ಮಟ್ಟಿಗೆ ಅವರ ಹಿಂದೆ ಬಿದ್ದಿದ್ದೆ. ಲೆಟರ್ ಹಿಡಿದುಕೊಂಡು ಓಡಾಡುತ್ತಾ ಸತಾಯಿಸಿದೆ. ಕೊನೆಗೆ ಅವರು ನನ್ನ ಕಾಟಕ್ಕೆ ಮಣಿದು, `ಅವನಿಗೆ ಏನು ಬೇಕೋ ಅದನ್ನು ಕೊಟ್ಟು ಕಳಿಸಿ~ ಎಂದು ಸೆಕ್ರೆಟರಿಗೆ ಹೇಳಿದರು.

ಪಾಲಿಟೆಕ್ನಿಕ್ ಸೇರಲು ಅವರಿಂದ ಪತ್ರ ದೊರೆಯಿತು. ಅದನ್ನು ಹಿಡಿದುಕೊಂಡು ಸಿಪಿಸಿ ಪಾಲಿಟೆಕ್ನಿಕ್‌ಗೆ ನಾನು ಸೇರಿದಾಗ ಅದಾಗಲೇ ಸೆಪ್ಟೆಂಬರ್ ತಿಂಗಳಾಗಿತ್ತು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿ ಅಲ್ಲಿಗೆ ನಾನು ಸೇರಿದ್ದು ಒಂದು ಸಿನಿಮೀಯ ಕಥೆಯಂತೆಯೇ ಇದೆ. ನನ್ನ ಬದುಕಿನ ಆ ಹಟದ ಕ್ಷಣಗಳನ್ನು ಯಾವುದಾದರೂ ಸಿನಿಮಾದಲ್ಲಿ ಅಳವಡಿಸಬೇಕು ಎಂಬ ಬಯಕೆ ಬಹಳ ಕಾಲದಿಂದಲೂ ಉಳಿದೇ ಇದೆ. ಅದಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.

ಕಾಲೇಜಿಗೆ ನಾನು ಸೀಟು ಗಿಟ್ಟಿಸಿದ್ದು ಮದಣ್ಣನಿಗೆ ಸಮಾಧಾನ ತಂದಿತು. ಅಲ್ಲಿಗೆ ನಾನು ಆಗಲೇ ಸ್ಕೂಟರ್‌ನಲ್ಲಿ ಹೋಗುತ್ತಿದ್ದೆ. ಅಣ್ಣ 50 ಸಿಸಿಯ ಜಾವಾ ಸ್ಕೂಟರ್ ಕೊಡಿಸಿದ್ದ. ಶಾರದಾ ವಿಲಾಸ ಕಾಲೇಜಿಗೂ ನಾನು ಅದೇ ಸ್ಕೂಟರ್‌ನಲ್ಲೇ ಓಡಾಡುತ್ತಿದ್ದದ್ದು. ನಾನು ಆ ಕಾಲದಲ್ಲಿ ಬೇರೆ ವಿದ್ಯಾರ್ಥಿಗಳಿಗೆ ಆ ಸ್ಕೂಟರ್ ಹಾಗೂ ನನ್ನ ಶೋಕಿಯ ಕಾರಣಕ್ಕೆ ಆಕರ್ಷಣೆಯ ಕೇಂದ್ರಬಿಂದು ಆಗಿದ್ದೆನಂತೆ. ಅದನ್ನು ನನ್ನ ಸ್ನೇಹಿತರೇ ಹೇಳುತ್ತಿರುತ್ತಾರೆ. ಸಿನಿಮಾ ಶೋಕಿ ಇದ್ದ ನಾನು ಬಿಳಿ ಬಟ್ಟೆ ಹಾಕುತ್ತಿದ್ದೆ. ಕ್ರಾಪಿನ ಮುಂಭಾಗದ ಕೂದಲಿನಲ್ಲಿ ಗುಂಗುರು ಮೂಡುವಂತೆ ಮಾಡುತ್ತಿದ್ದೆ. ಅದನ್ನು ನೋಡಿದರೆ ಮದಣ್ಣನಿಗೆ ಆಗುತ್ತಿರಲಿಲ್ಲ. ಆ ಗುಂಗುರು ಕೂದಲು ಅವನ ಕಣ್ಣಿಗೆ ಬಿದ್ದರೆ, ಅದನ್ನು ಹಿಂದಕ್ಕೆ ತಳ್ಳುತ್ತಿದ್ದ. `ಮೊದಲು ಹೋಗಿ ಕಟಿಂಗ್ ಮಾಡಿಸಿಕೋ~ ಎಂದು ತಾಕೀತು ಮಾಡುತ್ತಿದ್ದ. ಅವನ ಸುಪರ್ದಿಯಲ್ಲಿ ಶೋಕಿ ಮಾಡುವುದು ಕೂಡ ಆ ದಿನಗಳಲ್ಲಿ ಕಷ್ಟವಾಗಿತ್ತು. ಬಿಳಿ ಬಟ್ಟೆ ಹಾಕಿಕೊಂಡು ಅಂಗಡಿಗೆ ಹೋದರೆ, ಕೈಗೆ ಮೆತ್ತಿಕೊಂಡಿರುತ್ತಿದ್ದ ಆಯಿಲ್, ಗ್ರೀಸನ್ನು ಬಳಿದುಬಿಡುತ್ತಿದ್ದ. `ನಾವು ಮಾಡುತ್ತಾ ಇರುವುದು ಎಣ್ಣೆ ವ್ಯಾಪಾರ. ನೀನು ಸಿನಿಮಾದವನ ಥರ ಶೋಕಿ ಮಾಡುತ್ತೀಯಾ~ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದ.

`ಯಾವತ್ತು ನಿನ್ನ ಚೆಕ್ ಡಿಸಾನರ್ ಆಗುತ್ತದೋ ಅಂದು ನೀನು ಸತ್ತೆ ಅಂತ ತಿಳಿದುಕೋ~ ಎಂದು ಮದಣ್ಣ ಆಗಾಗ ನನಗೆ ಸಲಹೆ ಕೊಡುತ್ತಿದ್ದ. ಆ ಮಾತು ನಾನು ಸಿನಿಮಾಗೆ ಬಂದಮೇಲೂ ಕಾಡುತ್ತಲೇ ಇತ್ತು. ಚೆಕ್ ಡಿಸಾನರ್ ಆಗಲೇಬಾರದೆಂದು ನಾನು ಶತಾಯಗತಾಯ ಯತ್ನಿಸಿದೆ. ಆದರೆ, ಕಷ್ಟಕಾಲದಲ್ಲಿ ಚೆಕ್ ಡಿಸಾನರ್ ಆದದ್ದಿದೆ. ಆಗೆಲ್ಲಾ ನನಗೆ ಮದಣ್ಣ ನೆನಪಾಗಿ ಅತ್ತಿದ್ದೇನೆ. ಸತ್ತು ಸತ್ತು ಬದುಕಿದ್ದೇನೆ. ನಾನಿವತ್ತು ಪ್ರಾಮಾಣಿಕತೆ ಉಳಿಸಿಕೊಂಡೇ ಸಿನಿಮಾಗಳನ್ನು ಮಾಡಿ, ಬಂಗಲೆಗಳನ್ನು ಕಟ್ಟಿ, ಕಾರುಗಳನ್ನು ಕೊಂಡು ಓಡಾಡುತ್ತಿದ್ದರೆ ಅದರ ಎಲ್ಲಾ ಶ್ರೇಯಸ್ಸೂ ಮದಣ್ಣನಿಗೇ ಸಲ್ಲಬೇಕು. ನೈತಿಕತೆಯ ದೊಡ್ಡ ಚೌಕಟ್ಟಿನಲ್ಲಿ ಬದುಕಿದ ಆ ನನ್ನ ಅಣ್ಣ ತನ್ನ ಐವತ್ತೆರಡೇ ವಯಸ್ಸಿನಲ್ಲಿ ಮೆದುಳಿನಲ್ಲಿ ಒಂದು ಗೆಡ್ಡೆಯಾಗಿ ತೀರಿಕೊಂಡ. ಅವನಿಗೆ ಮುತ್ತಿನಂಥ ಮಕ್ಕಳಿದ್ದಾರೆ- ಪ್ರಸನ್ನ, ರವಿ, ಪ್ರಕಾಶ್. ಇಬ್ಬರು ಹೆಣ್ಣುಮಕ್ಕಳೂ ಇದ್ದಾರೆ. ಅವರೆಲ್ಲರೂ ಸಜ್ಜನರು. ತಂದೆ ಕಟ್ಟಿದ ಮಧು ಟೈರ್ಸ್‌ ಎಂಬ ಅಂಗಡಿಯನ್ನು ಈಗ ರಾಜ್ಯದಲ್ಲಷ್ಟೇ ಅಲ್ಲದೆ, ದೇಶದ ಅನೇಕ ಕಡೆ ಮಳಿಗೆಗಳ ಮೂಲಕ ಹಬ್ಬುವಂತೆ ಮಾಡಿದ್ದಾರೆ. ದ್ವಾರಕೀಶ್ ಎಂಬ ಗಿಡ ನಾನಾದರೆ, ಮಧು ಟೈರ್ಸ್‌ ಇನ್ನೊಂದು ಗಿಡ. ಅವೆರಡಕ್ಕೂ ಮಧುಸೂದನ ರಾವ್ ನೀರು, ಗೊಬ್ಬರ. ಕನ್ನಡದ ಜನತೆಗೆ ನಾನು ಐವತ್ತು ಸಿನಿಮಾ ಕೊಟ್ಟಿದ್ದರೆ ಅದಕ್ಕೆ ಕಾರಣ ಆ ನೀರು, ಗೊಬ್ಬರ.

ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ನಾನು ಮರೆಯಲಾಗದ ವ್ಯಕ್ತಿಯೆಂದರೆ ಪ್ರಿನ್ಸಿಪಾಲ್ ಮುನಿಯಪ್ಪ. ಅವರಿಗೆ ನಾನೆಂದರೆ ಪ್ರಾಣ. `ನೀನು ಹುಡುಗಿಯಾಗಿದ್ದರೆ ನಾನು ಮದುವೆ ಮಾಡಿಕೊಂಡು ಬಿಡುತ್ತಿದ್ದೆ~ ಎಂದು ಅವರು ಅನೇಕ ಸಲ ನನಗೆ ಹೇಳಿದ್ದರು. ಅವರೂ ಕಲಾಪ್ರೇಮಿಯಾಗಿದ್ದರಿಂದ ನನ್ನೊಳಗಿನ ನಟನನ್ನು ಕಂಡರೆ ಇನ್ನಿಲ್ಲದ ಪ್ರೀತಿ. ಮಧ್ಯಾಹ್ನ ಕೆಲಸದ ಒತ್ತಡದಿಂದ ಹೈರಾಣಾದಾಗಲೆಲ್ಲಾ ಅವರು ನನ್ನನ್ನು ಆಫೀಸಿಗೆ ಕರೆದು, `ಏ ದ್ವಾರಕಾನಾಥ, ಸ್ವಲ್ಪ ನಗಿಸಪ್ಪಾ... ಆಕ್ಟ್ ಮಾಡಪ್ಪಾ... ತಮಾಷೆ ಮಾಡಪ್ಪಾ~ ಎನ್ನುತ್ತಿದ್ದರು. ಅವರದ್ದು ಸ್ನೇಹಮಯಿ ವ್ಯಕ್ತಿತ್ವ. ನಾನು ಚಿತ್ರರಂಗಕ್ಕೆ ಬಂದಮೇಲೆ ಅವರ ಸಂಪರ್ಕ ತಪ್ಪಿಹೋಯಿತು. ಸಾಯುವ ಕಾಲದಲ್ಲೂ ಅವರು, `ಒಂದು ಸಲ ಆ ದ್ವಾರಕಾನಾಥನ್ನ ಕರೆಸಿ, ನೋಡಬೇಕು~ ಎಂದಿದ್ದರಂತೆ. ನನಗೆ ಆ ವಿಷಯವನ್ನು ಆಮೇಲೆ ಕೆಲವರು ಹೇಳಿದರು. ನನ್ನ ಬದುಕಿನಲ್ಲಿ ಮರೆಯಲಾಗದ ವ್ಯಕ್ತಿ ಮುನಿಯಪ್ಪನವರು.

ಬಸವರಾಜ್ ಎಂಬ ಫೌಂಡರಿ ಎಂಜಿನಿಯರ್ ಒಬ್ಬರಿದ್ದರು. ಮುನಿಯಪ್ಪನವರು ನನ್ನನ್ನು ಇಷ್ಟ ಪಡುತ್ತಿದ್ದರೆಂಬ ಕಾರಣಕ್ಕೋ ಏನೋ ಅವರಿಗೆ ನನ್ನನ್ನು ಕಂಡರಾಗುತ್ತಿರಲಿಲ್ಲ. ಸಣ್ಣ ಸಣ್ಣ ವಿಷಯಕ್ಕೂ ಅವರೊಡನೆ ನನಗೆ ಮನಸ್ತಾಪವಾಗುತ್ತಿತ್ತು. ಒಮ್ಮೆ ಅವರ ವಿಷಯದ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ಮುಗಿಸಿದವನೇ ನೇರ ಮುನಿಯಪ್ಪನವರ ಚೇಂಬರ್‌ಗೆ ಹೋದೆ.
`ಸಾರ್, ನಾನು ಪ್ರಾಕ್ಟಿಕಲ್ಸ್ ಮಾಡಿದ್ದೇನೆ. ಬಸವರಾಜ್ ಬೇಕೆಂದೇ ನನಗೆ ಕಡಿಮೆ ಮಾರ್ಕ್ಸ್ ಹಾಕುತ್ತಾರೆ. ದಯವಿಟ್ಟು ನೀವೇ ಬಂದು ನೋಡಿ~ ಎಂದು ಅವರನ್ನು ವಿನಂತಿಸಿಕೊಂಡೆ. ಪಾಪ, ಮುನಿಯಪ್ಪನವರು ಬಂದು, ನಾನು ಮಾಡಿದ್ದ ಪ್ರಾಕ್ಟಿಕಲ್ಸ್ ನೋಡಿ ಎಷ್ಟು ಮಾರ್ಕ್ಸ್ ಕೊಡಬೇಕೋ ಅಷ್ಟನ್ನು ಕೊಟ್ಟರು. ಶಿವರುದ್ರಪ್ಪ ಎಂಬ ಆಟೊಮೊಬೈಲ್ ಮೇಷ್ಟರು ಕೂಡ ಪರೀಕ್ಷೆ ವೇಳೆ ನನ್ನನ್ನು ಏನೋ ಪ್ರಶ್ನಿಸಲು ಬಂದರು.

`ರೀ ಶಿವರುದ್ರಪ್ಪನವರೇ, ನಾಟಕ ಶುರು ಮಾಡುತ್ತಾ ಇದೀನಿ. ನಿಮಗೆ ಒಳ್ಳೆ ಪಾರ್ಟ್ ಕೊಡುತ್ತೀನಿ~ ಎಂದೆ. ಅವರೂ ಕರಗಿಹೋದರು. ಅವರಿಗೆ ಒಳ್ಳೆ ಪಾತ್ರ ಕೊಟ್ಟೆ. ಪಾಲಿಟೆಕ್ನಿಕ್‌ನ ಕೊನೆಯ ವರ್ಷದಲ್ಲಿ ಕಲಾಪ್ರೇಮಿಗಳನ್ನೆಲ್ಲಾ ಸೇರಿಸಿ ದೊಡ್ಡ ನಾಟಕ ಮಾಡಿದೆ.

ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಚಂದ್ರಶೇಖರ್, ಬಾಲಸುಬ್ರಹ್ಮಣ್ಯಂ, ನರಸಿಂಹಮೂರ್ತಿ ಉರುಫ್ ಕಾಕ, ಜಯರಾಮ ನಾಯ್ಡು, ವೇಣು ಎಲ್ಲರೂ ನನ್ನ ಒಳ್ಳೆಯ ಸ್ನೇಹಿತರು. ಅವರೆಲ್ಲಾ ಆರ್‌ಟಿಒ ಆಗಿ ಕೆಲಸ ಮಾಡಿ, ನಿವೃತ್ತರಾಗಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಮಾರಂಭವಾದಾಗ ಅದೇ ಪಾಲಿಟೆಕ್ನಿಕ್‌ನಲ್ಲಿ ನನಗೆ ಸನ್ಮಾನ ಮಾಡಿದರು.
ಕೊನೆಯ ವರ್ಷಕ್ಕೆ ನಾನು ಕಾಲಿಡುತ್ತಿದ್ದಾಗಲೇ ನಮ್ಮಣ್ಣ ನನ್ನನ್ನು ವ್ಯಾಪಾರಕ್ಕೆ ತಳ್ಳಿದ. ಸಿನಿಮಾ ಸಹವಾಸ ಮಾಡದೇ ಇರಲಿ ಎಂದು ಅವನು ಹೂಡಿದ ತಂತ್ರವಿದು.

ಟೈರ್‌ಗಳನ್ನು ತರಲೆಂದು ನನ್ನನ್ನು ಊಟಿ, ಕೊಟ್ಟಾಯಂ, ಕೇರಳ, ಮುಂಬೈ ಕಡೆಗೆ ಕಳುಹಿಸುತ್ತಿದ್ದ. ನನಗಿನ್ನೂ 34/7, 800/20, 900/20. 600/16, 520/14 ಮೊದಲಾದ ಟೈರ್ ಅಳತೆಗಳು ನೆನಪಿನಲ್ಲಿದೆ. ನಾನು ಮಾರುತ್ತಿದ್ದ ಬ್ರೇಕ್‌ಪ್ಲೇಟ್‌ಗಳು, ಕ್ಲಚ್‌ಪ್ಲೇಟ್‌ಗಳು ಯಾವುದಾಗಿತ್ತೆಂಬುದನ್ನೂ ಬಲ್ಲೆ.

ಕೊನೆಯ ವರ್ಷದ ಡ್ರಾಯಿಂಗ್ ಪರೀಕ್ಷೆ ಇದ್ದ ದಿನವೂ ಊಟಿಗೆ ಟೈರ್ ತರಲು ನಮ್ಮಣ್ಣ ನನ್ನನ್ನೇ ಕಳುಹಿಸಿದ್ದ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಟೈರ್‌ಗಳನ್ನು ತಂದೆ. ಟೋಲ್‌ಗೇಟ್‌ನಲ್ಲಿ ಅವನ್ನೆಲ್ಲಾ ಇಳಿಸಿಕೊಂಡೆ. ಅಲ್ಲಿಗೆ ಬಂದ ಅಣ್ಣ ಟಿಸ್ಕ್ವೇರ್, ಡ್ರಾಯಿಂಗ್ ಬೋರ್ಡ್ ತಂದುಕೊಟ್ಟ. ಕಾಲೇಜಿಗೆ ಡ್ರಾಪ್ ಮಾಡಿದ. ಊಟಿಯಿಂದ ಬಂದಿದ್ದ ನಾನು ಸೀದಾ ಅಲ್ಲಿಗೆ ಹೋಗಿ ಪರೀಕ್ಷೆ ಬರೆದ ದಿನ ಕೂಡ ನನಗೆ ಚೆನ್ನಾಗಿ ನೆನಪಿದೆ.

ಕೊನೆಯ ವರ್ಷದ ಪಾಲಿಟೆಕ್ನಿಕ್ ಪರೀಕ್ಷೆ ಮುಗಿಸಿದ ನನಗೆಂದೇ ಮದಣ್ಣ `ಭಾರತ್ ಆಟೋ ಸ್ಪೇರ್ಸ್‌~ ಎಂಬ ಅಂಗಡಿಯನ್ನು ಮೈಸೂರಿನ ಗಾಂಧಿ ಸ್ಕ್ವೇರ್‌ನಲ್ಲಿ ಹಾಕಿಕೊಟ್ಟ. 1961ರಲ್ಲಿ ದಸರಾ ರಜೆಗೆಂದು ತನ್ನ ಕಸಿನ್ ಮನೆಗೆ ಅಂಬುಜಾ ಬಂದಳು.

ಮುಂದಿನ ವಾರ: ಅಂಬುಜಾ ಜೊತೆಗೆ ಪ್ರೇಮಾಂಕುರವಾದದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.