ADVERTISEMENT

ಮೊದಲ ಸಿನಿಮಾ ನಿರ್ಮಾಣ

ದ್ವಾರಕೀಶ್
Published 30 ಜೂನ್ 2012, 19:30 IST
Last Updated 30 ಜೂನ್ 2012, 19:30 IST

`ಶಿವಾಜಿ ಗಣೇಶನ್ ಇಲ್ಲಿ ಬಂದು ಟೀ ಕುಡಿಯುತ್ತಿದ್ದರಂತೆ~, `ಎಂ.ಜಿ.ಆರ್ ಅಲ್ಲೇ ಅಡ್ಡಾಡುತ್ತಿದ್ದರಂತೆ~ ಎಂಬೆಲ್ಲಾ ಮಾತುಗಳನ್ನು ಕೇಳಿದ್ದ ನಾನು, ರತ್ನಕುಮಾರಿಯಾಗಿ ಬಂದ ನಟಿ ವಾಣಿಶ್ರೀ ಆಗಿ ಬೆಳೆದದ್ದನ್ನು ಕಂಡೆ.

`ಎರಡು ಕನಸು~ ಕನ್ನಡ ಚಿತ್ರದ ತೆಲುಗು ರೀಮೇಕ್‌ನಲ್ಲಿ ಅವರು ನಾಯಕಿಯಾಗಿದ್ದರು. ಅದು ಸೂಪರ್‌ಹಿಟ್ ಆಗಿತ್ತು. ಅವರು ಸಿನಿಮಾ ಅಭಿನಯ ಬಿಟ್ಟು ಹತ್ತು ವರ್ಷಗಳಾಗಿತ್ತು. ಆಗ ನಾನು `ಗಂಡ-ಮನೆ-ಮಕ್ಕಳು~ ಎಂಬ ಸಿನಿಮಾ ಮಾಡಿ, ಶ್ರೀನಾಥ್ ಅವರ ಜೋಡಿಯಾಗಿ ವಾಣಿಶ್ರೀಯವರನ್ನು ಆಯ್ಕೆ ಮಾಡಿದೆ. ಆ ಚಿತ್ರ ಮಾಡಿದ್ದು 1987ರಲ್ಲಿ.

`ವೀರಸಂಕಲ್ಪ~ ಚಿತ್ರದಲ್ಲಿ ಎಷ್ಟೆಲ್ಲಾ ನಟರಿದ್ದರೂ ನನಗೆ ತುಂಬಾ ಹತ್ತಿರವಾದವರು ಬಿ.ಎಂ.ವೆಂಕಟೇಶ್. ಹೊಸಬರನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂಬುದಕ್ಕೆ ನನಗೆ ಇಬ್ಬರು ಸ್ಫೂರ್ತಿ. ಒಬ್ಬರು- ನಮ್ಮ ಮಾವ ಕಿಟ್ಟಣ್ಣ. ಇನ್ನೊಬ್ಬರು- ಪುಟ್ಟಣ್ಣ ಅರ್ಥಾತ್ ಪುಟ್ಟಣ್ಣ ಕಣಗಾಲ್. ಆಗ ನಾನು ಮದ್ರಾಸ್‌ನಿಂದ ರೈಲಿನಲ್ಲಿ ಓಡಾಡುತ್ತಿದ್ದೆ.

ಒಮ್ಮೆ ಪುಟ್ಟಣ್ಣನವರು ಸಿಕ್ಕಿದ್ದರು. `ನೀನು ಸಿನಿಮಾ ಮಾಡುವುದೇ ಆದರೆ ಹೊಸಬರನ್ನು ಹಾಕಿಕೊಂಡು ಮಾಡು. ಆಗ ಇಡೀ ಚಿತ್ರ ನಿನ್ನ ಕೈಯಲ್ಲಿರುತ್ತದೆ~ ಎಂದು ಅವರು ಹೇಳಿದ್ದರು. ಅದೇ ಅಭಿಪ್ರಾಯ ನಮ್ಮ ಮಾವನದ್ದೂ ಆಗಿತ್ತು. ಆ ಮನಸ್ಥಿತಿಯ ನಿರ್ದೇಶಕ, ನಿರ್ಮಾಪಕರು ಇಲ್ಲದಿದ್ದರೆ ನನ್ನಂಥ ನಟರೇ ಬರುತ್ತಿರಲಿಲ್ಲವೇನೋ. 1965ರಲ್ಲಿ ನಾನು `ಮಮತೆಯ ಬಂಧನ~ ಸಿನಿಮಾ ಮಾಡಿದಾಗ ಮುದ್ದಾಗಿದ್ದ ಅದೇ ಬಿ.ಎಂ.ವೆಂಕಟೇಶ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿದೆ.

ನಾನು ನಿರ್ಮಾಪಕನಾದದ್ದು ಇನ್ನೊಂದು ಕತೆ. ಹೆಸರು ಮಾಡಿದ್ದ ಬಹುತೇಕ ನಟರು ಆ ಕಾಲದಲ್ಲೂ ಸಿನಿಮಾ ನಿರ್ಮಿಸಲು ಹಿಂಜರಿಯುತ್ತಿದ್ದರು. ಹಾಸ್ಯ ಚಕ್ರವರ್ತಿ ಎಂದೇ ಹೆಸರಾಗಿದ್ದ ನರಸಿಂಹರಾಜು ಕೂಡ ನಿರ್ಮಾಣದ ರಿಸ್ಕ್‌ಗೆ ಕೈಹಾಕಲು ಹಿಂದೇಟು ಹಾಕಿದ್ದರು. ರಾಜ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ.ಅಯ್ಯರ್ ಸೇರಿ `ರಣಧೀರ ಕಂಠೀರವ~ ನಿರ್ಮಿಸಿದ್ದರಷ್ಟೆ. ಉಳಿದಂತೆ ಯಾವ ನಟರೂ ಸ್ವತಂತ್ರ ನಿರ್ಮಾಣಕ್ಕೆ ಇಳಿದಿರಲಿಲ್ಲ.

ನಾನು ಚಿತ್ರರಂಗಕ್ಕೆ ಕಾಲಿಟ್ಟು ಒಂದು ವರ್ಷ ಆಗಿತ್ತಷ್ಟೆ. ಆಗ `ಸತ್ಯ ಹರಿಶ್ಚಂದ್ರ~ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಕನ್ನಡದಲ್ಲಿ ರಾಜ್‌ಕುಮಾರ್ ನಾಯಕ. ತೆಲುಗಿನಲ್ಲಿ ಎನ್.ಟಿ.ಆರ್. ಆ ಪಾತ್ರ ನಿರ್ವಹಿಸಿದ್ದರು. ಕನ್ನಡ ಚಿತ್ರದ ಹಾಸ್ಯನಟರಲ್ಲಿ ನಾನೂ ಒಬ್ಬನಾಗಿದ್ದೆ. ಆಗ ಎರಡೂ ಭಾಷೆಯ ನಟರು ಒಟ್ಟಾಗಿ ಊಟ ಮಾಡುತ್ತಿದ್ದೆವು.

ಎಂ.ಜಿ.ಆರ್. ಮನೆಯಿಂದ ರುಚಿಕಟ್ಟಾದ ಊಟ ಬರುತ್ತಿತ್ತು. ಅವರ ಮನೆಯ ಮಜ್ಜಿಗೆಯೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆ ಮಜ್ಜಿಗೆ ಕುಡಿಯುವ ಭಾಗ್ಯ ಆಗ ನನ್ನದೂ ಆಗಿತ್ತು.

ಹಾಗೆ ಒಂದು ಮಧ್ಯಾಹ್ನ ಎಂ.ಜಿ.ಆರ್, ಎನ್.ಟಿ.ಆರ್, ರಾಜ್‌ಕುಮಾರ್ ಸೇರಿದಂತೆ ನಾವೆಲ್ಲಾ ಊಟ ಮಾಡುತ್ತಿದ್ದೆವು. ಆಗ ರಾಜ್‌ಕುಮಾರ್ ಅವರನ್ನು ಕುರಿತು ಎನ್.ಟಿ.ಆರ್ ಕೇಳಿದರು- `ನೀವ್ಯಾಕೆ ಸಿನಿಮಾ ನಿರ್ಮಿಸಬಾರದು?~ ಒಂದು ಸಿನಿಮಾ ಮಾಡಿ ಕಷ್ಟ ಅನುಭವಿಸಿದ್ದ ರಾಜ್‌ಕುಮಾರ್ ತಾವು ಮತ್ತೆ ಆ ಸಾಹಸಕ್ಕೆ ಕೈಹಾಕುವುದಿಲ್ಲ ಎಂದರು.

ಅವರ ಸಂಭಾಷಣೆ ಕೇಳಿದ ನನ್ನ ಮನಸ್ಸಿನಲ್ಲಿ ನಾನೇ ಯಾಕೆ ನಿರ್ಮಾಪಕ ಆಗಬಾರದು ಎಂಬ ಸಣ್ಣ ಕಿಡಿ ಹುಟ್ಟಿತು. ಮೇಕಪ್ ಮಹದೇವಯ್ಯನವರಿಂದ ಇನ್ನೊಬ್ಬ ದೊಡ್ಡ ಮೇಕಪ್‌ಮನ್ ವೀರರಾಜು ಪರಿಚಯವಾಯಿತು. ಮಾಂಬಳಂನಲ್ಲಿ ವೀರರಾಜು ಮೇಕಪ್ ಮಾಡುವ ಕೋಣೆ ಇತ್ತು. ನಟ-ನಟಿಯರು ಸಾಲುಸಾಲಾಗಿ ಬಂದು ಮೇಕಪ್ ಹಾಕಿಸಿಕೊಂಡು ತಂತಮ್ಮ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಗಳಿಗೆ ಹೋಗುತ್ತಿದ್ದರು.

ಸಾಹುಕಾರ ಜಾನಕಿ, ಕೃಷ್ಣಕುಮಾರಿ, ಜಮುನಾ ಸೇರಿದಂತೆ ಅನೇಕ ಖ್ಯಾತನಾಮರ ಮುಖಗಳನ್ನು ಚೆಂದಗಾಣಿಸಿದ ಕೀರ್ತಿ ವೀರರಾಜು ಅವರಿಗೆ ಸಲ್ಲಬೇಕು. ಅಂಥ ವೀರರಾಜು, ಮಹದೇವಯ್ಯ ಹಾಗೂ ನಾನು ಒಟ್ಟಾಗಿ ಸೇರಿ ಸಿನಿಮಾ ನಿರ್ಮಿಸಲು ತೀರ್ಮಾನಿಸಿದೆವು. ತುಂಗ ಪಿಕ್ಚರ್ಸ್‌ ಎಂಬ ಬ್ಯಾನರ್ ಹುಟ್ಟುಹಾಕಿದೆವು. 1965ರಲ್ಲಿ ನಾವು ಮೊದಲ ಚಿತ್ರ ನಿರ್ಮಾಣಕ್ಕೆ ಮುಂದಾದೆವು.

ವೀರರಾಜು ಮೇಕಪ್ ಕೋಣೆಗೆ ತ್ರಿಲೋಕ್ ಕಪೂರ್ ಎಂಬ ನಿರ್ಮಾಪಕರೊಬ್ಬರು ಬಂದು ಹೋಗಿ ಮಾಡುತ್ತಿದ್ದರು. ಅವರು ತೆಲುಗಿನಲ್ಲಿ `ಮುದ್ದು ಬಿಡ್ಡ~ ಎಂಬ ಸಿನಿಮಾ ತೆಗೆದಿದ್ದರು. ಕನ್ನಡದಲ್ಲೂ ಅದನ್ನೇ ತೆಗೆಯಬಹುದು ಎಂಬ ಪ್ರಸ್ತಾಪವನ್ನು ಅವರು ವೀರರಾಜು ಮುಂದಿಟ್ಟರು.

ಅದೇ `ಮಮತೆಯ ಬಂಧನ~ ಆಯಿತು. ಸಾಕಷ್ಟು ಪ್ರಯತ್ನಪಟ್ಟು ಜಯಂತಿಯವರನ್ನೇ ನಾಯಕಿ ಪಾತ್ರಕ್ಕೆ ಒಪ್ಪಿಸಿದೆವು. ನಾವು ಈ ಸಿನಿಮಾ ಬಗ್ಗೆ ಚರ್ಚೆ ನಡೆಸುತ್ತಿದ್ದ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲೇ ವೀರಾಸ್ವಾಮಿಯವರು `ಬೆಟ್ಟದಹುಲಿ~ ಚಿತ್ರದ ಮಾತುಕತೆ ನಡೆಸಿದ್ದರು. ಎರಡೂ ಚಿತ್ರಗಳ ನಾಯಕಿ ಜಯಂತಿ ಎಂಬುದು ವಿಶೇಷ. `ಮಮತೆಯ ಬಂಧನ~ ಚಿತ್ರಕ್ಕೆ ಹಣಕಾಸು ನೆರವು ನೀಡಿದವರು ಮಣಿರತ್ನಂ ತಂದೆ ರತ್ನಂ ಅಯ್ಯರ್.

`ವೀರಸಂಕಲ್ಪ~ ಚಿತ್ರಕ್ಕೆ ಹಣಕಾಸು ನೆರವು ನೀಡಿದವರು ಕೆ.ವಿ.ಗುಪ್ತಾ. ಅವರು ಬಂದರೆ ನಮ್ಮೆಲ್ಲರ ಮುಖಗಳು ಅರಳುತ್ತಿದ್ದವು. ಹಣ ಸಿಗುತ್ತದೆಂಬ ಖುಷಿ ಎಲ್ಲರಲ್ಲಿ. ಆಗ ಸ್ಟಾಪ್‌ವಾಚ್‌ಗಳನ್ನಿಷ್ಟು ಮೂರು ಸಾವಿರ ಅಡಿಗಿಷ್ಟು, ಆರು ಸಾವಿರ ಅಡಿಗಿಷ್ಟು, ಹನ್ನೆರಡು ಸಾವಿರ ಅಡಿಗಿಷ್ಟು ಎಂದು ಪೇಮೆಂಟ್ ಕೊಡುತ್ತಿದ್ದರು. ಮಾವನ ಎವರ್‌ಗ್ರೀನ್ ಪ್ರೊಡಕ್ಷನ್ಸ್‌ನ ಪಾಲುದಾರರು ಪುಟ್ಟಣ್ಣಯ್ಯ. ಮೈಸೂರಿನಲ್ಲಿ ಅವರು ಮಣ್ಣಿನ ಬೊಂಬೆಗಳನ್ನು ಮಾರುವ ವ್ಯಾಪಾರಿಯಾಗಿದ್ದರು. ಏನೋ ಮನಸ್ತಾಪ ಬಂದು, `ವೀರಸಂಕಲ್ಪ~ ಚಿತ್ರೀಕರಣ ಒಂದು ಒಂದೂವರೆ ವರ್ಷ ನಿಂತುಹೋಯಿತು. ಹಾಗಾಗಿ ಅದು ಬಿಡುಗಡೆಯಾದದ್ದು ತುಂಬಾ ತಡವಾಗಿ.

ಆ ಚಿತ್ರಕ್ಕೂ ಮೊದಲೇ `ಮನೆ ಕಟ್ಟಿನೋಡು~ ಚಿತ್ರದಲ್ಲಿ ಸಿ.ವಿ.ಶಿವಶಂಕರ್ ನನಗೆ ನಟಿಸುವ ಅವಕಾಶ ಕೊಟ್ಟರು. ಆ ಚಿತ್ರದಲ್ಲಿ ಬಾಲನಟಿಯೊಬ್ಬಳು ಬಂದಳು. ಬಲು ಚುರುಕಾದ ಆ ಹುಡುಗಿಯೇ ಮಂಜುಳಾ. ಅವಳು ದೊಡ್ಡ ನಾಯಕಿ ಆಗಬಹುದೆಂದು ನಾನು ಊಹಿಸಿಯೇ ಇರಲಿಲ್ಲ.

ಮುಂದೆ ಆರ್.ನಾಗೇಂದ್ರ ರಾವ್ ಅವರ `ಮದುವೆ ಮಾಡಿ ನೋಡು~ ಚಿತ್ರದಲ್ಲೂ ಒಂದು ಪಾತ್ರ ಮಾಡುವ ಅವಕಾಶ ಸಿಕ್ಕಿತು. ವಾಹಿನಿ ಸ್ಟುಡಿಯೋದಲ್ಲಿ ತುಂಬಾ ಸಂತೋಷವಾಗಿ ಸಿನಿಮಾ ಮಾಡಿದೆ.

`ಮಮತೆಯ ಬಂಧನ~ ಸಿನಿಮಾ ನಿರ್ಮಿಸಲು ನಾವು ಪಟ್ಟ ಕಟ್ಟ ಅಷ್ಟಿಷ್ಟಲ್ಲ. ನಮ್ಮ ನಾಗಣ್ಣ ಮದ್ರಾಸ್‌ಗೆ ಬಂದ. ಅವನನ್ನು ಪಟ್ಟಾಗಿ ಹಿಡಿದುಕೊಂಡೆ. ಎರಡೂವರೆ ಸಾವಿರ ರೂಪಾಯಿ ಸಾಲ ಕೊಡು, ನಮ್ಮ ಪಿಕ್ಚರ್ ಮುಗಿಸುತ್ತೇನೆ ಎಂದು ದುಂಬಾಲುಬಿದ್ದೆ. ಎರಡೂವರೆ ಸಾವಿರ ರೂಪಾಯಿಯಲ್ಲಿ ಸಿನಿಮಾ ಮುಂದುವರಿಸಿದ್ದೆ. ಆಗ ಸಾವಿರ ರೂಪಾಯಿ ಇದ್ದರೆ ಒಂದು ಹಾಡನ್ನು ರೆಕಾರ್ಡ್ ಮಾಡಿಬಿಡಬಹುದಾಗಿತ್ತು.

ಆಗ ಒಬ್ಬ ಮಾರ್ವಾಡಿ ಕೂಡ ನಮ್ಮ ಚಿತ್ರ ನಿರ್ಮಾಣಕ್ಕೆ ಸಾಲ ಕೊಟ್ಟಿದ್ದರು. ನಾನಾಗ ಮಾವನ ಮನೆಯಲ್ಲೇ ವಾಸವಾಗಿದ್ದೆ. ಒಮ್ಮೆ ಅವರು ಮನೆಗೇ ಬಂದು, `ದ್ವಾರಕೀಶ್ ದ್ವಾರಕೀಶ್... ಕಹಾಂ ಹೈ ದ್ವಾರಕೀಶ್?~ (ಎಲ್ಲಿದ್ದಾನೆ ದ್ವಾರಕೀಶ್) ಎಂದು ಕರೆದರು.

ಮಾವ ನೋಡಿದರೆ ದೊಡ್ಡ ರಾದ್ಧಾಂತವಾಗುತ್ತದಲ್ಲ ಎಂಬ ಅಳುಕಿನಿಂದಲೇ ನಾನು ಹೊರಬಂದೆ. ಅವನು ನನ್ನನ್ನು ಗುರುತೇ ಹಿಡಿಯಲಿಲ್ಲ. ದ್ವಾರಕೀಶ್ ಎಲ್ಲಿ ಅಂತ ನನ್ನನ್ನೇ ಕೇಳಿದ. ಅದು ಹುಣಸೂರು ಕೃಷ್ಣಮೂರ್ತಿಯವರ ಮನೆಯೆಂದೂ ದ್ವಾರಕೀಶ್ ಅಲ್ಲಿ ಇಲ್ಲವೆಂದೂ ಸುಳ್ಳುಹೇಳಿ ಅವನನ್ನು ಸಾಗಹಾಕಿದೆ. ಹೀಗೆ ಏನೇನೋ ಕಷ್ಟ ಅನುಭವಿಸಿ ಕೊನೆಗೂ `ಮಮತೆಯ ಬಂಧನ~ ಸಿನಿಮಾ ಮಾಡಿ ಮುಗಿಸಿದೆವು.

ಕೆ.ಎಸ್.ಅಶ್ವತ್ಥ್, ಬಿ.ಎಂ.ವೆಂಕಟೇಶ್, ಜಯಂತಿ, ನರಸಿಂಹರಾಜು, ನಾನು ಅಭಿನಯಿಸಿದ್ದ ಆ ಚಿತ್ರವನ್ನು ಐವತ್ತೈದು ಸಾವಿರ ರೂಪಾಯಿಯಲ್ಲಿ ನಿರ್ಮಿಸಿದ್ದೆವು. ಹುಬ್ಬಳ್ಳಿ ಏರಿಯಾಗೆ ಆರು ಸಾವಿರಕ್ಕೆ ವಿತರಣೆ ಹಕ್ಕು ಮಾರಾಟವಾಯಿತು. ಯಾವ ಸ್ಟಾರ್ ಕೂಡ ಇಲ್ಲದ ಚಿತ್ರಕ್ಕೆ ಅಷ್ಟು ಹಣ ಸಿಗುವುದೇ ದೊಡ್ಡ ವಿಷಯವಾಗಿತ್ತು.

ಸಂಗೀತ ನಿರ್ದೇಶಕ ಸತ್ಯಂ ಅವರನ್ನು ಆ ಚಿತ್ರದ ಮೂಲಕ ನಾನು ಪರಿಚಯಿಸಿದ್ದೆ. ಮಹದೇವಯ್ಯ ಹಾಗೂ ವೀರರಾಜು ಅವರ ಆಪ್ತಸ್ನೇಹಿತನಾಗಿದ್ದ ಸತ್ಯಂ ಸ್ಟೂಲು, ಬಾಗಿಲು, ಪಾತ್ರೆಗಳನ್ನು ಬಡಿಯುತ್ತಲೇ ಸಂಗೀತ ಸಂಯೋಜನೆ ಮಾಡುತ್ತಿದ್ದರು.

ಮುಂದೆ ಅದೇ ಸತ್ಯಂ ಅವರಿಗೆ `ರಾಮಾಂಜನೇಯ ಯುದ್ಧ~ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಸಿಕ್ಕಿತು. ಆಮೇಲೆ ಅವರು ಬೆಳೆದರು. ಮಧುರಾತಿ ಮಧುರವಾದ `ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ~ ಹಾಡಿಗೆ ರಾಗ ಸಂಯೋಜನೆ ಮಾಡಿದ ಸಂಗೀತ ನಿರ್ದೇಶಕರು ಅವರೇ.

ಏಳೆಂಟು ತಿಂಗಳಲ್ಲಿ `ಮಮತೆಯ ಬಂಧನ~ ಮಾಡಿ ಮುಗಿಸಿದೆವು. ಬೆಂಗಳೂರಿನ ಶಿವಾಜಿ ಟಾಕೀಸಿನಲ್ಲಿ ಅದು ಬಿಡುಗಡೆಯಾಯಿತು. ನನಗೆ ಮೊದಲ ದಿನ ಎಷ್ಟು ಜನ ಬರುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ. ನಾಗಣ್ಣ ಎಂಬುವರು ಆ ಚಿತ್ರಮಂದಿರದ ಮಾಲೀಕರು. ಅವರನ್ನು ಒಪ್ಪಿಸಿ ನಾನೇ ಮೊದಲ ದಿನ ಕೌಂಟರ್‌ನಲ್ಲಿ ಕೂತು ಟಿಕೇಟ್ ಹರಿದುಕೊಟ್ಟಿದ್ದೆ. ಅಂಥ ಸಿನಿಮಾಪ್ರೀತಿ ನನಗಿತ್ತು.

ಮುಂದಿನ ವಾರ: ರಾಜ್‌ಕುಮಾರ್ ಕಾಲ್‌ಷೀಟ್ ಕತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT