ADVERTISEMENT

ಕವನದ ಎಲ್ಲ ಸಾಲೂ ವಾಪಸ್!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಜನವರಿ 2014, 19:30 IST
Last Updated 12 ಜನವರಿ 2014, 19:30 IST
ಕವನದ ಎಲ್ಲ ಸಾಲೂ ವಾಪಸ್!
ಕವನದ ಎಲ್ಲ ಸಾಲೂ ವಾಪಸ್!   

ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಲು ಹೋಗುವಾಗ ಪೆಕರನಿಗಿದ್ದ ಉತ್ಸಾಹ, ಆ ನಂತರ ಕಿಂಚಿತ್ತೂ ಉಳಿದಿರಲಿಲ್ಲ. ವೇದಿಕೆಯಿಂದ ಕೆಳಗಿಳಿಯುವಾಗ ಕರೆಂಟ್ ಹೊಡೆದ ಕೋಳಿಯಂತಾಗಿದ್ದ ಪೆಕರ,  ‘ನಾನಿನ್ನು ಯಾವ ಸಾಹಿತ್ಯ ಸಮ್ಮೇಳನಕ್ಕೂ ಹೋಗಲ್ಲ, ಭಾಷಣ ಮಾಡಲ್ಲ’ ಎಂದು ಬಡಬಡಿಸುತ್ತಿದ್ದುದನ್ನು ಕಂಡು ಸ್ನೇಹಿತರು ಅವನನ್ನು ಸಮಾಧಾನ ಮಾಡಲು ಯತ್ನಿಸಿದರು. ‘ಅಂಥಾದ್ದು ಏನಾಯ್ತು ಮಾರಾಯ?’ ಎಂದು ಸ್ನೇಹಿತ ಪ್ರಶ್ನಿಸಿದ.

‘ಗೋಷ್ಠಿ ಆರಂಭವಾದದ್ದೇ ತಡ, ನಾನು ವೇದಿಕೆಗೆ ಬರುವುದಕ್ಕೆ ಮುಂ­ಚೆಯೇ ಕೈಗೊಂದು ಚೀಟಿ ಬಂತು. ಸಂಭಾ­­ವನೆ, ಟಿಎ, ಡಿಎ ಇಷ್ಟು ಬೇಗ ಕೊಟ್ಟ­ರಲ್ಲ ಅಂತ ಬಹಳ ಖುಷಿಯಾಗಿ ನೋಡಿ­­ದರೆ, ನಿಮ್ಮ ಭಾಷಣದ ಅವಧಿ ಮುಗಿ­­ಯಿತು ಎಂಬ ಒಕ್ಕಣೆ ಇತ್ತು. ಆದರೂ ಸಾವರಿಸಿ­ಕೊಂಡು ಮೈಕ್ ಹಿಡಿದು­ಕೊಂಡರೆ ಬೇಗ ಮುಗಿಸಿ, ಬೇಗ ಮುಗಿಸಿ ಎಂದು ಅಂಗಿ ಹಿಡಿ­ದೆಳೆ­ದು ಅವಮಾನ ಮಾಡಿಬಿಟ್ಟರಲ್ಲಾ’- ಪೆಕರ ಗೊಳೋ ಎಂದು ಅತ್ತ.

‘ಸಮ್ಮೇಳನ ಎಂದರೆ ಜಾತ್ರೆ ಮಾರಾಯ, ಅದ­ಕ್ಯಾಕೆ  ಗೋಳಾ­ಡ್ತೀಯ? ಅಲ್ಲಿ ಭಾಷಣ ವೀರರೇ ಇದ್ದುದು ನಿನಗೆ ಮರೆತೋಯ್ತಾ? ಅಯ್ಯ ಅವರು ಸಖತ್ತಾಗಿ ಕವಿ­ವಾಣಿ­ಗಳನ್ನು ಉದುರಿ­ಸುತ್ತಾ ಭಾಷಣ ಮಾಡಿ­ದರೆ, ಮಾದೇವಪ್ಪ­ನವರೂ ನಾನೇನೂ ಕಮ್ಮಿಯಲ್ಲ ಅಂತ ಸಾಹಿತ್ಯ ಚರಿತ್ರೆ­ಯನ್ನೇ ಹೇಳ­ಲಿಲ್ಲವೇ? ಅವರಿಗೆ ಚೀಟಿ ಕೊಡದೆ, ಸಾಹಿತ್ಯ ಸರಸ್ವತಿಯ ಸುಪುತ್ರನಾದ ನಿನಗೆ ಬೇಗ ಮುಗಿಸಿ ಎಂದು ಹೇಳಿದ್ದು ತಪ್ಪು. ಹೋಗ್ಲಿ ಬಿಡಪ್ಪ, ಸಾಹಿತ್ಯ ಇಲ್ಲಿ ಯಾರಿಗೆ ಬೇಕಾ­ಗಿದೆ.

ಸಮ್ಮೇಳನ ಅಂದ್ರೆ ‘ಹಾಲೋ­ಗರ’ ಉಂಡಂತೆ. ಶತಮಾ­ನೋತ್ಸವಕ್ಕೆ ಇನ್ನೂ ಒಂದು ವರ್ಷ ಇರು­ವಂತೆಯೇ ಅನುದಾನ ಕೊಡಿ, ದುಡ್ಡು ಕೊಡಿ ಅಂತ ದುಂಬಾಲು ಬಿದ್ದವರಿಗೆ ಅಯ್ಯ ಅವರು ಸರಿಯಾಗಿಯೇ ಚಾಟಿ ಏಟು ಕೊಟ್ಟದ್ದು ಅದಕ್ಕೇ ಅಲ್ಲವೇ? ನೀವ್ ಬೇಜಾರು ಮಾಡ್ಕೋ­ಬೇಡಿ ಸುಮ್ನಿರಿ’ ಎಂದು ಸ್ನೇಹಿತರು ಪೆಕರ­ನನ್ನು ಸಮಾಧಾನಗೊಳಿಸಿದರು.

‘ಭಾಷಣ ಬೇಡ,  ಮೂರೇ ನಿಮಿಷ­ದಲ್ಲಿ ಮುಗಿಸ್ತೀನಿ ಅಂತ, ನನ್ನದೇ ಒಂದು ಕವಿತೆ ವಾಚನ ಮಾಡಿಬಿಟ್ಟೆ. ಅದನ್ನೂ ಅರ್ಥ­­ಮಾಡಿ­ಕೊಳ್ಳದ ಜನ ವೇದಿಕೆ ಮೇಲೇರಿ ಬಂದು ಪ್ರತಿ­ಭಟನೆ ಮಾಡಿ­ಬಿಟ್ಟರು. ಇದು ನನ್ನ ಹೃದಯ­ ಘಾಸಿ­ಗೊ­ಳಿ­ಸಿದೆ’ ಎಂದು ಪೆಕರ ನಿಟ್ಟುಸಿರು­ಬಿಟ್ಟ. ‘ಖಡ್ಗ­ವಾಗಲಿ ಕಾವ್ಯ ಅನ್ನುವ ಘೋಷ­ವಾಕ್ಯ ಕೇಳಿ­ಲ್ಲವೇ? ನಿನ್ನದು ಹರಿತ­ವಾದ ಕಾವ್ಯರಚನೆ. ಜನರನ್ನು ನಿನ್ನ ಕಾವ್ಯ ಕೆರಳಿಸಿದೆ ಅಂದರೆ, ಅದು ನಿಜ­ವಾದ ಬಂಡಾಯ ಕಾವ್ಯ.

ಇದನ್ನೇ ಬಂಡ­ವಾಳ ಮಾಡಿಕೊಂಡು ನೀನು ಮುಂದೆ ಆಮ್‌ ಆದ್ಮಿ ತರ ಪಕ್ಷ ಕಟ್ಟಿ, ಕಾಂಗ್ರೆಸ್ ಬೆಂಬಲ ಪಡೆದು ಸಿಎಂ ಆಗ­ಬಹುದು’ ಎಂದು ಪೆಕರನನ್ನು ಕಿಚಾ­ಯಿಸಿ­ದ ಸ್ನೇಹಿತರು, ‘ನೀನು ಓದಿದ ಕಾವ್ಯ­ವನ್ನು ಮತ್ತೊಮ್ಮೆ ಮಂಡಿಸಪ್ಪ, ಓಓಡಿ ಪ್ರತಿ ಪಡೆಯಲು ಮುಗಿಬಿದ್ದವರ ಗದ್ದಲದಲ್ಲಿ ನಿನ್ನ ಕಾವ್ಯವಾಚನ ನಮಗೆ ಕೇಳಲೇ ಇಲ್ಲ’ ಎಂದರು. ಪೆಕರ ಉತ್ಸಾಹದಿಂದ ಸಾಹಿತ್ಯ ಸಮ್ಮೇ­-­ಳನ­ದಲ್ಲಿ ಪ್ರಸ್ತುತ ಪಡಿಸಿದ ಕವಿತೆ­ಯನ್ನು ಬಿಚ್ಚಿದ.

ADVERTISEMENT

ಡೊಂಕುಬಾಲದ ನಾಯಕರೆ
ನೀವೆಲ್ಲಿ ಲೂಟಿಯ ಮಾಡಿದಿರಿ
ಕುಲಕುಲವೆಂದು ಬಡಿದಾಡದಿರಿ
ಸೌಧವನು ಒಡೆದು ಕಟ್ಟದಿರಿ
ಪಶ್ಚಿಮಘಟ್ಟದ ಕಡೆ ನೋಡುತಿರಿ
ಕಸ್ತೂರಿ ಪರಿಮಳವ ರಕ್ಷಿಸಿರಿ
ನೂರುಮರ, ನೂರು ಸ್ವರ, ಎಲ್ಲಾ ಒಂದೇ ಥರ!

ಸ್ನೇಹಿತ­ರೆಲ್ಲಾ ಚಪ್ಪಾಳೆತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಹೃದಯರಾದ ನೀವೆಲ್ಲಾ ಕರ­ತಾಡನ ಮಾಡಿ ಮೆಚ್ಚಿಕೊಂಡಿರಿ. ಆದರೆ ಕೆಲವು ಪುಢಾರಿಗಳು ವೇದಿಕೆ ಮೇಲೆ ಬಂದು ಕವನದ ಮೊದಲ ಎರಡು ಸಾಲು­ಗಳನ್ನು ಹಿಂತೆ­ಗೆ­ದು­ಕೊಳ್ಳಿ, ಇಲ್ಲ­ದಿದ್ದರೆ ಜಿಲ್ಲೆ ಬಂದ್ ಮಾಡು­ತ್ತೇವೆ ಎಂದು ಬೆದರಿಸಿದರು ಮಾರಾಯ. ಇದು ಸಾಹಿತ್ಯ ಲೋಕಕ್ಕೇ ಅವ­ಮಾನ­ವಲ್ಲವೇ?’ ಪೆಕರ ಗೋಳಾಡಿದ.

‘ಮೊದಲ ಎರಡು ಸಾಲಿನಲ್ಲಿ ಏನು ಕಂಡಿ­­ತಂತೆ? ಅವರಿಗೂ ಅದಕ್ಕೂ ಏನು ಸಂಬಂಧ?’ ಸ್ನೇಹಿತರು  ಪ್ರಶ್ನಿಸಿದರು. ‘ಡೊಂಕುಬಾಲದ ನಾಯಕರೆ ಎಂದು ಬರೆ­ದಿರುವುದು ನಮ್ಮನ್ನುದ್ದೇಶಿಸಿಯೇ ಎಂದು ರಾಜ­­ಕಾರಣಿಗಳು ತಿಳಿದು­ಕೊಂಡು ಬಿಟ್ಟಿದ್ದಾರೆ. ‘ನೀವೆಲ್ಲಿ ಲೂಟಿಯ ಮಾಡಿದಿರಿ’ ಎನ್ನುವುದು ಅವ­­ರಿಗೆ ಅವಮಾನ ಮಾಡುವ ಸಾಲು­ಗಳಂತೆ.

ಗಣಿ, ಮರಳು, ಭೂಮಿ, ಕಾಡು, ಶ್ರೀಸಾಮಾನ್ಯನ ಹಣ ಹೀಗೆ ಎಲ್ಲ­ವನ್ನೂ ಲೂಟಿ ಮಾಡಿದವರೆಲ್ಲಾ ಒಮ್ಮೆಲೇ ವೇದಿಕೆಗೆ ಬಂದು, ನನ್ನನ್ನು ಘೇರಾವ್ ಮಾಡಿ, ಕವನದ ಎರಡು ಸಾಲು­ಗಳನ್ನು ವಾಪಸ್ ಪಡೆಯದಿದ್ದರೆ ಸಮ್ಮೇ­ಳನಕ್ಕೇ ಬಹಿ­ಷ್ಕಾರ ಹಾಕುತ್ತೇವೆ ಎಂದು ಬೆದರಿಸಿದರು ಮಾರಾ­­ಯರೇ. ನಮ್ಮ ಹಣದಿಂದ ಸಮ್ಮೇಳನ ಮಾಡಿ ನಮಗೇ ಬೈತೀರಾ? ಎಂದು ಹಿಗ್ಗಾ­ಮುಗ್ಗಾ ಕೂಗಾಡಿದರು’ ಪೆಕರ ತನಗಾದ ದುರ­ವಸ್ಥೆ­ಯನ್ನ ಹೇಳಿಕೊಂಡ.

‘ಅದಕ್ಕೆ ನೀವೇಕೆ ಹೆದರಿಕೊಳ್ಳಬೇಕು. ಅಯ್ಯ ಅವರ ಆಸ್ಥಾನ ಸಾಹಿತಿಗಳೆಲ್ಲಾ ನಿಮ್ಮ ಬೆಂಬಲಕ್ಕೆ ಬಂದ್ರಲ್ಲಾ ಬಿಡಿ’ ಎಂದು ಸ್ನೇಹಿತರು ಸಮಾಧಾನ ಮಾಡಲು ಯತ್ನಿಸಿದರು. ‘ಅಯ್ಯೋ ರಾಮ ಅವರ ಕತೆ ಏನ್ ಹೇಳ್ತೀರಿ? ಅವರೂ ನನ್ನ ಮೇಲೆ ಸಿಟ್ಟಿ­ಗೆದ್ದಿ­ದ್ದಾರೆ. ಜ್ಞಾನ­ಪೀಠ, ಅಕಾಡೆಮಿ ಸ್ಥಾನಕ್ಕೆ ಕಾದು ಕುಳಿತಿರುವ ಬಕ­ಪಕ್ಷಿ ಸಾಹಿ­ತಿ­­ಗಳೇ ಬಾಯಿಬಿಡಿ ಎಂದು ನಾನು ಹೇಳಿದ್ದು ಅವರನ್ನು ಕುರಿತಂತೆ ಎಂದು ತಪ್ಪಾಗಿ ತಿಳಿದು­ಕೊಂಡು ರೇಗ್ತಾ ಇದ್ದಾರೆ’ ಎಂದು ಪೆಕರ ಗೋಳು ತೋಡಿ­ಕೊಂಡ.

‘ಇರಲಿ ಬಿಡಿ, ಇದ್ದದ್ದನ್ನು ಇದ್ದಂಗೆ ಹೇಳಿ­ದರೆ ಎದ್‌­ಬಂದ್ ಎದೇಗೊದ್ದ ಎನ್ನು­ವಂತಾಯಿತು ಕತೆ’ ಎಂದು ಸ್ನೇಹಿತರು ಹೇಳಿದರು. ‘ಪುಢಾರಿಗಳು ಘೇರಾವ್ ಹಾಕಿ­ಹೋದ ಮೇಲೆ ಬಜರಂಗಿಗಳು ಬಂದು ಮುತ್ತಿಗೆ ಹಾಕಿ ಕವ­ನದ ಮೂರು ನಾಲ್ಕನೇ ಸಾಲನ್ನು ವಾಪಸ್ ಪಡೆಯ­­ಬೇಕು ಎಂದು ಬಹಳ ಗಲಾಟೆ ಮಾಡಿ­ದರು.’- ಪೆಕರನ ಗೋಳಾಟಕ್ಕೆ ಕೊನೆಯೇ ಇಲ್ಲ­­ದಂತಾಯಿತು.

‘ಬಜರಂಗಿಗಳದ್ದು ಏನು ತಕರಾರು?’ ‘ಸೌಧವನ್ನು ಒಡೆದು ಕಟ್ಟದಿರಿ ಅನ್ನು­ವುದು ವಿಧಾನ­ಸೌಧದಲ್ಲಿ ೩೪೦ ನಂಬ­ರಿನ ಕೊಠಡಿ ಗೋಡೆ­ಯನ್ನು ಕೆಡವಿದ್ದನ್ನು ಗೇಲಿ­ಮಾಡಿದ ಸಾಲು. ಆದ್ದರಿಂದ ಸಚಿ­ವರಿಗೆ ಅವ­ಮಾನ­ವಾಗಿದೆ. ಕೂಡಲೇ ಈ ಸಾಲನ್ನು ವಾಪಸ್ ಪಡೆ­ಯಿರಿ ಎಂದು ಬಜ­ರಂಗಿ ಸಹಚರರು ಘೇರಾವ್ ಮಾಡಿ ಪ್ರತಿಭಟಿಸಿ­ದರು’ ಎಂದು ಪೆಕರ ಮತ್ತೊಂದು ಘಟನೆಯ ವಿವರ ಕೊಟ್ಟ.

‘ಏನಪ್ಪಾ ಇದು ರಾಜಕಾರಣಿಗಳ ಆರ್ಭಟ. ಹನು­ಮಂತಯ್ಯ ಅವರಿಂದ ಆರಂ­ಭಿಸಿ ಆಂಜನೇಯ­ವರೆಗೆ ನಡೆ­ದಾಡಿದ ಸೌಧದಲ್ಲಿ ಈ ರೀತಿನೂ ನಡೆ­ಯುತ್ತಾ, ತಪ್ಪು ತಪ್ಪು’ ಎಂದು ಸ್ನೇಹಿ­ತರು ಕನಿಕರ ವ್ಯಕ್ತಪಡಿಸಿದರು. ‘ಅಯ್ಯೋ ಅದೇನ್ ಹೇಳ್ತೀರಿ? ‘ಕಸ್ತೂರಿ ಪರಿಮಳವ ರಕ್ಷಿಸಿರಿ..’ ಎಂಬ ಸಾಲು­ಗಳನ್ನು ತೆಗೆ­ಯ­­ಬೇಕೆಂದು ಪರಿಸರ­ವಾದಿಗಳು ಬಂದು ಗಲಭೆ ಎಬ್ಬಿಸಿ­ದರು.’ ಪೆಕರ ಮತ್ತೊಂದು ಘಟನೆಯನ್ನು ಹೊರಗಿಟ್ಟ.

‘ನೀವು ಈ ರೀತಿ ಕೆರಳಿಸುವ ಸಾಹಿತ್ಯ ಬರೆ­­ದಿ­ರು­ವುದು ನಮಗೆಲ್ಲಾ ಹೆಮ್ಮೆಯ ವಿಷಯ. ಇದೇ ರೀತಿ ನೀವು ಮುಂ­ದೆಯೂ ಬರೆಯಿರಿ. ರಾಷ್ಟ್ರಕವಿ ಎಂಬ ಬಿರುದು ಕೊಡಿಸೋಣ’ ಎಂದು ಸ್ನೇಹಿತರು ಗೇಲಿ ಮಾಡಿದರು. ‘ಇನ್ನೊಂದು ಘಟನೆ ಮರೆತೆ. ‘ನೂರು ಮರ,­ ನೂರು ಸ್ವರ, ಎಲ್ಲಾ ಒಂದೇ ಥರ’ ಎಂದು ಹೇಳಿದ್ದು ಕೇಳಿ ಯುವಕ­ವಿ ಮಿತ್ರ­ರೆಲ್ಲಾ ನನ್ನ ಮೇಲೆ ಎಗರಿ ಬಿದ್ದರು. ನಾವು ಡಿಫರೆಂಟ್, ಡಿಫ­ರೆಂಟ್ ಕವನ ಓದಿದ್ದೇವೆ.

ಎಲ್ಲಾ ಒಂದೇ ಥರಾ..ಎಂದು ನೀವು ಷರಾ ಬರೆದರೆ ನಮ್ಮ ಮುಂದಿನ ಭವಿಷ್ಯದ ಗತಿ ಏನು? ನಿಮ್ಮ ಮಾತು ವಾಪಸ್ ಪಡೆಯಿರಿ ಎಂದು ಕವಿವರ್ಯರೆಲ್ಲಾ ಮುಗಿ­ಬಿದ್ದರು. ನಾನು, ತಕರಾರು ಏಕೆ ಎಂದು ಆಯ್ತು ವಾಪಸ್‌ ಪಡೆಯೋಣ ಎಂದೆ. ಎಲ್ಲ ಪ್ರತಿ­ಭಟನೆ­ಗಳನ್ನೂ ಯಶಸ್ವಿಯಾಗಿ ನಿಭಾ­ಯಿಸಿ ಬಿಟ್ಟೆ’ - ಪೆಕರ ಹೆಮ್ಮೆಯಿಂದ ಹೇಳಿ­ಕೊಂಡ.

‘ಕವನದ ಎಲ್ಲ ಸಾಲುಗಳನ್ನೂ ವಾಪಸ್ ತೆಗೆದು­ಕೊಂಡ ಮೇಲೆ ಅಲ್ಲಿ ಉಳಿದದ್ದಾದರೂ ಏನು?! ಇಂಥಾ ಅವಮಾನ ಸಹಿಸಿಕೊಂಡು ಹೇಗ್ರಿ ಮೂರು ದಿನ ಕುಳಿತಿದ್ರಿ? ಬಹಿಷ್ಕಾರ ಹಾಕಿ ನೀವೇ ಎದ್ದುಬಂದು ಬಿಡಬೇಕಿತ್ತು’ ಎಂದು ಸ್ನೇಹಿತರು ಆಕ್ರೋಶ ವ್ಯಕ್ತ ಪಡಿಸಿದರು. ‘ನಾನು ಮತ್ತೆ ವಿವಾದ ಕೆದಕಲು ಇಷ್ಟಪಡು­ವುದಿಲ್ಲ.

ಆ ಮೂರು ದಿನ ಕೋಟಿ ಕನ್ನಡಿಗರು ಹರಿ­ಸಿದ ಪ್ರೀತಿಯ ಹೊಳೆಯಲ್ಲಿ ನನ್ನೆಲ್ಲಾ ಕಹಿ­ಗಳು ಮೇಲೇ­ಳ­ದಂತೆ ಮುಳುಗಿ­ಹೋದವು, ಒಬ್ಬ ಸಾಹಿ­ತಿಗೆ ಇದಕ್ಕಿಂತ ಇನ್ನೇನು ಬೇಕು’ ಎಂದು ಪೆಕರ ಸಮಾಧಾನ­ಚಿತ್ತದಿಂದ ಉತ್ತರಿಸಿ ಎಲ್ಲ ವಿವಾದ­ಗಳಿಗೆ ಸಮಾಧಾನದ ತೆರೆ ಎಳೆದ.
-ಜಿಎಮ್ಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.