ರನ್ನ ಕವಿಯು ಬರೆದ ಚಂಪೂಶೈಲಿಯ ಖಂಡಕಾವ್ಯ `ಸಾಹಸಭೀಮ ವಿಜಯಂ~ ಆಧುನಿಕ ಕಾಲದಲ್ಲಿ ಗದಾಯುದ್ಧ ಕಾವ್ಯವೆಂದೇ ಅತ್ಯಂತ ಜನಪ್ರಿಯತೆ ಪಡೆಯಿತು. ಕವಿಯೇ ಹೇಳಿಕೊಳ್ಳುವಂತೆ ಈ ಕಾವ್ಯದ ನಾಯಕ ಭೀಮಸೇನ; ಅವನ ಶೌರ್ಯ, ಪ್ರತಾಪ ಮತ್ತು ವಿಜಯದ ಕಥೆಯೇ ಈ ಕಾವ್ಯದ ಉದ್ದೇಶ. ಆದರೆ ಕಾವ್ಯದ ಒಳಹೊಕ್ಕು ಓದುವವರಿಗೆ ಆಗುವ ಅನುಭವವೇ ಬೇರೆ.
ಮಹಾಭಾರತದ ಯುದ್ಧಗಾಥೆಯ ಕೊಟ್ಟಕೊನೆಯ ಆದರೆ ಪ್ರಾಣಾಂತಿಕವಾದ ಹೋರಾಟ ಈ ಕಾವ್ಯದ ಕೇಂದ್ರವಸ್ತು. ಕುರುಕ್ಷೇತ್ರದ ಘನಘೋರ ಯುದ್ಧ ಸರ್ವನಾಶಕರವಾಗಿ ಒಂದು ರೀತಿ ಮುಕ್ತಾಯಕ್ಕೆ ಬಂದು ನಿಂತಿದೆ. ಬದುಕಿರುವವರಲ್ಲಿ ಪ್ರಧಾನನೆಂದರೆ ದುರ್ಯೋಧನ. ಆದರೆ ಹನ್ನೊಂದು ಅಕ್ಷೌಹಿಣೀ ಸೈನ್ಯದ ಬಲದಿಂದ ಅವನು ಕಟ್ಟಿದ್ದ ಸಾಮ್ರಾಜ್ಯದ ತಳವೀಗ ಕುಸಿದುಹೋಗಿದೆ. ಅವನು ಬಾಚಿ ತಬ್ಬಿದ್ದ ಭೂಮಿ ಸ್ಮಶಾನವಾಗಿದೆ. ಅವನ ಹೆಸರು ಹೇಳಲೂ ಯಾರೂ ಹತ್ತಿರವಿಲ್ಲದ ಪರಮ ಏಕಾಕಿತನದಲ್ಲಿ ಈ ದುರ್ಯೋಧನನನ್ನು ರನ್ನಕವಿ ತನ್ನ ಕಾವ್ಯದಲ್ಲಿ ಕರೆತರುತ್ತಾನೆ.
ಆದರೆ ನಮಗೆ ಕುತೂಹಲ ಹುಟ್ಟಿಸಬಹುದಾದ್ದು ಎಂದರೆ ದುರ್ಯೋಧನನಿಗೆ ಆತ್ಮವಿಮರ್ಶೆಗೆ ಬೇಕಾಗುವ ಸುದೀರ್ಘವಾದ ಏಕಾಂತವನ್ನು ರನ್ನ ಸೃಷ್ಟಿಸಿಕೊಟ್ಟಿರುವ ಬಗೆ. ನಾಟಕಗಳಲ್ಲಿ ಮಾತ್ರ ಸಾಧ್ಯವಾಗಬಹುದಾದ ಈ ತಂತ್ರವನ್ನು ಕಾವ್ಯದಲ್ಲಿ ಅವನು ಸಂಯೋಜಿಸಿದ್ದಾನೆ. ಕುರುಕ್ಷೇತ್ರ ಯುದ್ಧ ಶಲ್ಯನ ಸಾವಿನೊಂದಿಗೆ ತಾತ್ಕಾಲಿಕವಾಗಿ ನಿಂತಂತೆ ಆಗಿದೆ. ಇನ್ನೊಂದು ಪ್ರಚಂಡ ಸೆಣಸಾಟ ಮುಂದೆ ನಡೆಯಬೇಕಾದ್ದಿದೆ. ಇವೆರಡರ ನಡುವೆ ಪರಮ ಏಕಾಕಿಯಾಗಿರುವ ದುರ್ಯೋಧನನು ಮುಂದಿನ ಉಪಾಯವೇನೆಂದು ನಿರ್ಧರಿಸಲು ತಾತ ಭೀಷ್ಮರನ್ನು ಕಂಡು ಸಲಹೆ ಪಡೆಯಲು ಹೊರಡುತ್ತಾನೆ. ರಣರಂಗದಲ್ಲಿ ಎಲ್ಲೋ ಬಾಣಗಳ ಮಂಚದ ಮೇಲೆ ಇರುವ ಆ ವೃದ್ಧ ಪಿತಾಮಹನನ್ನು ಹುಡುಕುತ್ತಾ ಹೊರಟವನಿಗೆ ದಾರಿಯಿಲ್ಲದ ರಣರಂಗದಲ್ಲಿ ಇತರ ಶವಗಳ ನಡುವೆ ಶವವಾಗಿರುವ ದ್ರೋಣ, ದುಶ್ಶಾಸನ, ಕರ್ಣ, ತನ್ನ ಮಗ ಲಕ್ಷಣಕುಮಾರ, ಅಭಿಮನ್ಯು- ಮುಂತಾದ ಎಲ್ಲಾ ವೀರರ ಶವಗಳು ಒಂದೊಂದಾಗಿ ಎದುರಾಗುತ್ತವೆ. ಆ ಒಬ್ಬೊಬ್ಬರೊಂದಿಗೂ ದುರ್ಯೋಧನ ತನಗಿದ್ದ ಭಾವನಾತ್ಮಕ ಸಂಬಂಧಗಳನ್ನು ನೆನೆನೆನೆದು ಕರುಳು ಕಿತ್ತುಬರುವಂತೆ ನುಡಿಯುತ್ತಾ ಅಳುತ್ತಾನೆ. ಆ ಅಳುವೇ ಅವನ ಒಳಗಿನ ಸಂಕಟ ಹತಾಶೆಗಳ ಕೊಳೆ ತೊಳೆದ ಹಾಗೆ ಕರ್ಣ, ದುಶ್ಶಾಸನರ ಸಾವಿಗೆ ಕಾರಣರಾದ ಶತ್ರುಗಳನ್ನು ಯುದ್ಧಮಾಡಿ ನಾಶಮಾಡುವುದೊಂದೇ ತನಗಿನ್ನು ಗುರಿ ಎಂದು ತೀರ್ಮಾನಿಸುತ್ತಾನೆ. ದುಃಖತಾಪದ, ಅಂತಃಕರಣದ ತಳದಿಂದ ಹೊರಬಂದು ಛಲದಿಂದ ಮುನ್ನಡೆಯುತ್ತಾನೆ.
ದುರ್ಯೋಧನನ ಈ ಆತ್ಮಾವಲೋಕನ ಮತ್ತು ಅವರಿಂದ ಅವನು ಗಳಿಸಿಕೊಳ್ಳುವ ಶಕ್ತಿಯ ಪ್ರಕ್ರಿಯೆಯ ಸಾಂಕೇತಿಕ ಅಭಿವ್ಯಕ್ತಿಯೇ `ವೈಶಂಪಾಯನ ಸರೋವರ~ ಪ್ರವೇಶ. ಕೊಳದಲ್ಲಿ ಮುಳುಗಿ ಏಳುವುದು, ಗವಿಯಲ್ಲಿ ಹೊಕ್ಕು ಹೊರಬರುವುದು, ಪ್ರಾಣಿಯ ಉದರ ಪ್ರವೇಶಿಸಿ ಈಚೆ ಬರುವುದು ಮುಂತಾದ ಪುರಾಣ ಪ್ರತೀಕಗಳು ಪುರ್ನಜನ್ಮದ ಪ್ರತೀಕಗಳು (Rebirth Archetypes)ಈ ರೀತಿಯ ಮರುಹುಟ್ಟು ಪಡೆದ ದುರ್ಯೋಧನ ನಿಜವಾಗಿ ತನ್ನೆಲ್ಲ ಧೈರ್ಯ, ಪರಾಕ್ರಮ ಮತ್ತು ಸೇಡಿನ ಭಾವನೆಗಳನ್ನೇ ಒಗ್ಗೂಡಿಸಿಕೊಂಡು ಹೊಮ್ಮಿಬಂದವನಾಗಿದ್ದಾನೆ. ಭೀಮನ ಚುಚ್ಚುನುಡಿಗಳನ್ನು ಕೇಳಿ ಕೆರಳಿ ಉರಿದೆದ್ದು ನೀರು ಬಿಟ್ಟು ಗದಾಪಾಣಿಯಾಗಿಯೇ ಮೇಲೆದ್ದು ಬರುವ ದುರ್ಯೋಧನನ ಅಸಾಧಾರಣ ರೂಪದ ಉಜ್ವಲ ಶಬ್ದಚಿತ್ರವನ್ನು ಅತ್ಯಂತ ಸಮರ್ಥವಾಗಿ ರನ್ನ ಕಟ್ಟಿಕೊಟ್ಟಿರುವುದು ಎಲ್ಲರಿಗೂ ತಿಳಿದಿರುವಂಥದೇ.
ದುರ್ಯೋಧನನಿಗೆ ಇಷ್ಟೊಂದು ವ್ಯವಧಾನವನ್ನೂ ಗಮನವನ್ನೂ ನೀಡಿರುವ ರನ್ನಕವಿ ತನ್ನ ಕಾವ್ಯನಾಯಕನಾದ ಭೀಮನನ್ನು ಒರಟೊರಟಾದ, ಕಠೋರ ಹೃದಯದ, ಸಂಸ್ಕೃತಿಯ ಕೊರತೆಯುಳ್ಳ `ಕಳಪೆ~ ಎಂದುಬಿಡಬಹುದಾದ ವೀರನಂತೆ ಕಾಣಿಸಿರುವುದೇಕೆ? ಮಹಾಭಾರತದ ಆ ಘೋರ ಯುದ್ಧ ನಡೆಯಲೇಬೇಕೆಂದು ಪಟ್ಟುಹಿಡಿದ ದ್ರೌಪದಿಯ ಎದೆಯಾಳದ ನೋವಿಗೆ ತನ್ನೆದೆ ಕಲಕದೆ ಉಳಿದುಬಿಟ್ಟ ಈ ಕವಿಗೆ ಅವಳು `ಅಗ್ನಿಕುವರಿ~ ಮಾತ್ರವಾಗಿ ಇಬ್ಬರು ಪುರುಷ ಪುಂಗವರ ವೀರತ್ವದ ಸೆಣಸಾಟದ ಕದನಕ್ಕೆ ದಾಳವಾಗಿ ಮಾತ್ರ ಉಳಿದುಬಿಟ್ಟಿರುವುದು ಏಕೆ? ಎಂಬ ಪ್ರಶ್ನೆಗಳು ನಿಜವಾಗಿ ಓದುಗರನ್ನು ಕಾಡಿಸಿಯೇ ಕಾಡಿಸುತ್ತವೆ.
ಕೊಳದಿಂದ ಇಲ್ಲವೆ ಮನದ ಅಂತರಾಳದಿಂದ ಹೊರಬಂದ ಆತ್ಮವಿಮರ್ಶೆ ಕೂಡ ಇವನಲ್ಲಿ ನಿಜವಾದ ಪಶ್ಚಾತ್ತಾಪವನ್ನು ತಂದಿಲ್ಲ, ಬದಲಾಗಿ ತೊಡೆ ಮುರಿದ ಮೇಲೂ ಪಾಂಡವರ ತಲೆ ಕಡಿದು ತರಲು ಹೊರಟ ಅಶ್ವತ್ಥಾಮನನ್ನು ಅನುಮೋದಿಸುತ್ತಾನೆ.
ಅವನು ತರಿದು ತಂದ ತಲೆಗಳು ಕೇವಲ ಪಾಂಚಾಲಿಯ ಮಕ್ಕಳದೆಂದು ಕಂಡು, ಕೊನೆಗೂ ದುಶ್ಶಾಸನ, ಕರ್ಣರನ್ನು ಕೊಂದವರನ್ನು ಹತ್ಯೆಗೈಯದೆಯೇ ಸಾಯಬೇಕಾಯ್ತೆಂಬ ಸಂಕಟದಿಂದಲೇ ಅವನ ಪ್ರಾಣ ಹೋಗುತ್ತದೆ. ದುರ್ಯೋಧನನ ಈ ದುರಂತ ಎಲ್ಲ ಅಧಿಕಾರದಾಹ ಜನರ, ಸಂಪತ್ತು ಭೂಮಿಗಳಿಗಾಗಿ ಜೀವಕುಲವನ್ನು ಬಲಿಕೊಡುವ ದುಷ್ಕರ್ಮಿಗಳ, ಎಲ್ಲ ಕಾಲಕ್ಕೂ ಅನ್ವಯವಾಗುವ ಅಂತ್ಯದ ದರ್ಶನವಲ್ಲದೆ ಬೇರೇನು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.