ADVERTISEMENT

ಪರದೆ ಸರಿಸಿ ನೋಡು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2013, 19:30 IST
Last Updated 5 ಅಕ್ಟೋಬರ್ 2013, 19:30 IST
ಕಲಾಕೃತಿ: ರವೀಂದ್ರನಾಥ ಟ್ಯಾಗೋರ್
ಕಲಾಕೃತಿ: ರವೀಂದ್ರನಾಥ ಟ್ಯಾಗೋರ್   

ಅರಿವು ಮೂಡದ ವಯಸ್ಸಿನಲ್ಲಿ
ಬಾಗಿಲಿಗೆ ಪರದೆ ಕಟ್ಟಿದರೆ
ಬಣ್ಣಬಣ್ಣಗಳ ಕುಚ್ಚುಗಳನ್ನು ನೋಡಿ ಸಂಭ್ರಮಿಸುತ್ತಿದ್ದೆ.
ಆಗಿನ್ನೂ ಅದು ಸ್ವಾತಂತ್ರ್ಯಕ್ಕೆ
ಮೊದಲ ಸಂಕೋಲೆಯೆಂದು ತಿಳಿಯದ ಎಳೆಯವಳು.
ಬಾಗಿಲಿಗೆ ಹಾಕಿದಂತೆ ಅಮ್ಮೀ ಮುಖಕ್ಕೆ ನಖಾಬು ತೊಟ್ಟಾಗ
ಕನಸಿನಂಥ ಬದುಕಿಗದು ಶಾಪವೆಂದು ಅರಿಯದವಳು.

ಯಾವ ಯಾವ ಪರದೆಯ ಹಿಂದೆ ಎಷ್ಟೆಷ್ಟು ನಿರಾಸೆಗಳು
   ಗೂಡು ಕಟ್ಟಿರುವುವೊ
ಯಾವ ಯಾವ ಮಹಾಸ್ವಪ್ನಗಳು ಏಕಾಂಗಿ
ಪರದೆಗಳ ಗುಹೆಗಳಲ್ಲಿ ಬಲಿಯಾಗುತಿರುವುವೊ ...?
ಎಷ್ಟೆಷ್ಟು ಆಸೆಗಳು - ಆಶಯಗಳ ಕಿರಣಗಳು
ಕತ್ತಲೆ ಪರದೆಗಳ ಮರೆಯಲ್ಲಿ ಮುಕ್ಕಾಗಿವೆಯೊ

ಪರದೆಗಳ ಹಿಂದೆ ಬದುಕು ಬಂದಿಯಾದಲ್ಲಿ
ಹೆಣ್ಣನ್ನು ತುಳಿದಂತೆಲ್ಲ ಮತ್ತಷ್ಟು ತುಳಿಯಲೇಬೇಕೆಂಬ
ಹುಚ್ಚು ಆಚಾರಗಳ ಆಲದ ಮರಗಳಿದ್ದೆಡೆಯಲ್ಲಿ
ಒಮ್ಮೆ ಮುಸುಕು ಸರಿಸಿ ನೋಡು
ಆಂತರ್ಯದ ಸ್ವಾತಂತ್ರ್ಯದ ಬೆಳಕಿನ ಪರಿಮಳವನೆಲ್ಲ ಹೊಮ್ಮಿಸಿ
ಬೆಳಗುತ್ತಿರುವ ನನ್ನ ಗುಲ್ಮೊಹರ್ ಹೆಂಗಸರನ್ನು ನೋಡು

ಹುಟ್ಟಿದಂದಿನಿಂದ ಚಾಂದನಿಯ ರುಚಿಯರಿಯದೆ
ಮಳೆಯ ರುಚಿ ತಿಳಿಯದೆ
ವಸಂತದ ರುಚಿಯನ್ನೂ ನೋಡದೆ ಬೆಳೆದು
ನಿರ್ಬಂಧಗಳ ಸರಹದ್ದುಗಳಲ್ಲಿ ಗುಲಾಮಳಾಗಿ ಬೆಳೆದ ಹೆಣ್ಣು.
ಹದಿನಾಲ್ಕರ ನನ್ನ ವಸಂತವನ್ನು
ಅರವತ್ತರ ಶಿಶಿರಕ್ಕೆ ಅರ್ಪಿಸೆಂದರೆ
ವಾವೆವರಸೆ ಇಲ್ಲ ಸರಿ.
ನನ್ನಂದದ ಹಿಂದಿರುವ ರಕ್ತ ಮಾಂಸಗಳನ್ನು
ಅರಬ್ಬಿ ಷೇಕ ಹದ್ದಿನ ಕಣ್ಣುಗಳಿಂದ ಹೀರುತ್ತಿದ್ದರೆ
ನನ್ನ ದೇಹದ ಮುದ್ದೆಗವನು ಬೆಲೆ ಕಟ್ಟುತ್ತಿದ್ದರೆ
ಕಟುಕ ಕಿಲೋಗಳಲ್ಲಿ ಮಾಂಸ ಮಾರಿದಂತೆ
ಕ್ರೂರವಾಗಿ ನನ್ನನ್ನು ಹಾದರದ ಗುಲಾಮಗಿರಿಗೆ ಮಾರುತ್ತಿದ್ದರೆ
ಸ್ವಾತಂತ್ರ್ಯ .....
ಕೇಳಲೂ ನಿಷೇಧಕ್ಕೆ ಒಳಗಾದವಳು
ಕಡೆಗೆ ಕನಸಿನಲ್ಲಿ ಅನುಭವಿಸಲೂ ಅರ್ಹಳಲ್ಲದವಳು.

ADVERTISEMENT

ಪುರುಷ ಮೃಗಗಳ ನಡುವೆ ಜೀತಕ್ಕೆ ಅಡಿಯಾಗಿ
ಸ್ಥಳಾಂತರಗೊಳ್ಳುತ್ತಿರುವವಳು
ಅರಬ್ಬೀ ಕಟಿಕೆಯಂಗಡಿಗಳಲ್ಲಿ
ಹೆಣ್ಣಿನ ಮಾಂಸಕ್ಕಿಷ್ಟು ಬೆಲೆಯೆಂದರಿಯದವಳು.

ಎವರೆಸ್ಟೇನು, ಚಂದ್ರನನ್ನೂ ಮುಟ್ಟಿಬರುವ
ಮಹಿಳೆಯರನ್ನು ನೋಡುತ್ತ
ಸಂಸಾರವನ್ನೇನು ಬ್ರಿಟಿಷ್ ಕಡಲ್ಗಾಲುವೆಗಳನ್ನು ಈಜುತ್ತಿರುವ
ಇಂದಿನ ಮಹಿಳೆಯರನ್ನು ನೋಡುತ್ತ
ಮೌನದಿಂದಿರುವುದಾಗದು ನನಗೆ.

ಮಾತು ಬರದಿದ್ದಾಗ ಬಿಡು,
ಹೋರಾಡುವಂತಾದಾಗಲೂ ಕೈಕಟ್ಟಿ ಕೂರುವುದು
ಇನ್ನು ಸಾಧ್ಯವಿಲ್ಲ ನನಗೆ.
ಹೊಟ್ಟೆಪಾಡಿಗೆ ನಾಲ್ಕು ಕಾಸು ಗಳಿಸಲು
ಕಲ್ಲನಾದರು ಒಡೆವ ಶಕ್ತಿಯಿದೆ ನನಗೆ
ನೀವು ಬಿಗಿದ ಕಬ್ಬಿಣದ ಸಂಕೋಲೆಗಳನ್ನು
ಕಳಚುವ ಧೃತಿ ಇದೆ ನನಗೆ.

ಅಮ್ಮೀ - ಅಮ್ಮ, ತಾಯಿ; ನಖಾಬು -ಬುರ್ಖಾ;
ಚಾಂದನಿ-ಬೆಳದಿಂಗಳು
=ಷಾಜಹಾನ್‌
ಕನ್ನಡಕ್ಕೆ: ಸ. ರಘುನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.