ADVERTISEMENT

ಪ್ರತಿಕ್ರಿಯೆಗಳು -30

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಓ.ಎಲ್. ನಾಗಭೂಷಣ ಸ್ವಾಮಿ ಅವರು `ನಿವೇದನೆ'ಯಲ್ಲಿ ತಮ್ಮ ಇಡೀ ಬದುಕನ್ನು ಸಂಕ್ಷಿಪ್ತವಾಗಿ, ಗಾಢವಾಗಿ ಹಂಚಿಕೊಂಡಿದ್ದಾರೆ. ಅವರು ಹೇಳಿದಂತೆ ಖಂಡಿತವಾಗಿಯೂ ನಮ್ಮ ಫೋಟೋ ಆಲ್ಬಂ ಅನ್ನು ಕೇಳದ ಹೊರತು ಯಾರಿಗೂ ತೋರಿಸಬಾರದು.

`ಸಿಟ್ಟು ಬಂದು ಶಾಲಾ ಪುಸ್ತಕಗಳಿಗೆ ಚಪ್ಪಲಿಯಲ್ಲಿ ಹೊಡೆದದ್ದು, ಮಾತು, ಓದು ಬರಹ ಎಲ್ಲವು ಒಳ - ಹೊರಗುಗಳ ನಡುವೆ ಓಡಾಡುವುದಕ್ಕೆ ಕಲ್ಪಿಸಿಕೊಂಡ ಕಾಲು ಹಾದಿಗಳು... ಎಲ್ಲಿ ಹೋದರೂ ನಾವು ಬಿಟ್ಟು ಬಂದೆವೆಂದುಕೊಂಡ ಜಾಗದಲ್ಲೆ ಇರುತ್ತೇವೆ. ಐದಾರು ಸಾವಿರ ಅಡಿ ಎತ್ತರದಿಂದ ದುರ್ಬೀನು ಹಾಕಿ ನೋಡಿದರೂ, ತಮ್ಮ ಅಕ್ಷರಗಳ ಸಾಧನೆ ಕಾಣುವುದಿಲ್ಲ...' ಎಂಬ ಅವರ ಸಾಲುಗಳು ಇಷ್ಟವಾದವು. ನಿಜಕ್ಕೂ ಮನ ಮುಟ್ಟುವ ಬರಹ ಅವರದು.
- ಜಾವಗಲ್ ಕೃಷ್ಣಶರ್ಮ, ಜಾವಗಲ್ಲು

ಓ.ಎಲ್. ನಾಗಭೂಷಣ ಸ್ವಾಮಿಯವರ `ನಿವೇದನೆ' ಮುಖ ಪುಟ ಲೇಖನ ಚಿಂತನಾರ್ಹ. ನಮ್ಮ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ವಿಭಿನ್ನ ಶೈಲಿಯಲ್ಲಿ ಸಾಹಿತ್ಯ ಕೃಷಿ ಮಾಡಿರುವ ನಾಗಭೂಷಣ ಸ್ವಾಮಿಯವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅನುವಾದ ಮತ್ತು ವಿಮರ್ಶೆ ಎರಡೂ ಪ್ರಕಾರಗಳಲ್ಲಿನ ಅವರ ಬಹುರೂಪಿ ಪ್ರಯಾಣ ಎಲ್ಲರನ್ನು ಮೆಚ್ಚಿಸುವುದು ಸಂತೋಷದ ವಿಷಯ. ತಮ್ಮ ವಿಶಿಷ್ಟ ಬರಹಗಳಿಂದ ಅವರು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಬರವಣಿಗೆಯ ಲೋಕದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದು ಯುವ ಬರಹಗಾರರಿಗೆ, ಮಾರ್ಗದರ್ಶಿಯಾಗಿದೆ, ಸ್ಫೂರ್ತಿ ತರುವಂತಿದೆ.
- ಸತೀಶ ಎಚ್. ಆರ್., ಗಂಗಾವತಿ

ಜೀವನೋಪಾಯಕ್ಕೆ ಕಾಲೇಜು ಮಾಸ್ತರಿಕೆ, ಹವ್ಯಾಸ ಬರವಣಿಗೆ, ಆರೋಗ್ಯ ಸುಧಾರಿಸಲು ಉಪಾಯ ಮಣ್ಣಿನೊಡನೆ ಸರಸ, ಬಹುಮುಖ ಪ್ರತಿಭೆ, ಪಾಂಡಿತ್ಯ ಉಳ್ಳ ಓ.ಎಲ್.ಎನ್ ಅವರ ಪಾಠ ಹೇಳುವ ಶೈಲಿ, ಮಾತುಗಾರಿಕೆಗೆ ಅವರ ಜೀವನ ಕ್ರಮವೇ ಒಂದು ಮಾದರಿ.
- ಕೆ.ಸಿ. ಸತ್ಯನಾರಾಯಣ, ದೊಡ್ಡಬಳ್ಳಾಪುರ

`ನಮ್ಮ ನಡುವಿನ ಸಾಹಿತ್ಯಕ, ಸಾಂಸ್ಕೃತಿಕ ಪಲ್ಲಟಗಳು' (ಶೂದ್ರ ಶ್ರೀನಿವಾಸ್) ಲೇಖನ ಮನನೀಯವಾಗಿದೆ, ಸಾಕ್ಷಿ, ಸಂಕ್ರಮಣದಂಥ ಪತ್ರಿಕೆಗಳಿಂದ ಹಿಡಿದು ಒಕ್ಕೂಟ, ರೈತ ಚಳವಳಿಗಳವರೆಗೆ ಪಲ್ಲಟಗಳಿಗೆ ಕಾರಣವಾದ ಸಂಗತಿಗಳನ್ನು ವಿವರಿಸಲಾಗಿದೆ. ಆದರೆ ಇಲ್ಲಿ ಅವಶ್ಯವಾಗಿ ಪ್ರಶ್ತಾಪಿಸಲೇಬೇಕಾದ ಮತ್ತೊಂದು ಪತ್ರಿಕೆ ಎಂದರೆ `ಲಂಕೇಶ್ ಪತ್ರಿಕೆ'. ಇದು ಕರ್ನಾಟಕದ ಯುವಜನ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ರಾಜಕಾರಣಿಗಳು ಹೀಗೆ ಸಮಾಜದ ಹಲವು ಸ್ತರಗಳಲ್ಲಿ ಉಂಟು ಮಾಡಿದ ಪಲ್ಲಟ ಗಮನಾರ್ಹ. 
- ಹುರುಕಡ್ಲಿ ಶಿವಕುಮಾರ , ಬಾಚಿಗೊಂಡನಹಳ್ಳಿ

ತೆಲುಗಿನ ದಿಗಂಬರ ಕಾವ್ಯದ ನಗ್ನಮನಿ (ಎಂ.ಎಚ್.  ಕೇಶವರಾವ್) ಅವರ ಮಾತುಕತೆ ಚೆನ್ನಾಗಿತ್ತು. ಸಂದರ್ಶಕರಾದ ಡಾ. ಎಚ್.ಎಸ್. ಅನುಪಮಾ ಅವರ ಪ್ರಶ್ನೆಗಳಿಗೆ ನಗ್ನಮುನಿಯವರ ಉತ್ತರ ನೇರ, ಗಂಭೀರ. ತೆಲುಗಿನ ದಿಗಂಬರ ಕಾವ್ಯದ ಬಗ್ಗೆ ಸಾಕಷ್ಟು ಮನದಟ್ಟು ಮಾಡಿಕೊಟ್ಟಿದ್ದಾರೆ. ಹಳಸಿದ ಮೌಲ್ಯಗಳ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ. ಅವರ ಮಾತುಗಳನ್ನು ಓದುತ್ತಾ ಹೋದಂತೆ ನಮಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ.
- ಬಿ. ಎಸ್. ಮಳ್ಳೂರ, ಹಲಗತ್ತಿ

ಡಾ. ಎಚ್.ಎಸ್. ಅನುಪಮ `ನಗ್ನ ಮುನಿ' ಯವರೊಡನೆ ನಡೆಸಿದ ಸಂದರ್ಶನದ ವಿಚಾರಗಳು ಮನೋಜ್ಞವಾಗಿವೆ. `ನಗ್ನಮುನಿ'ಯವರು ವ್ಯವಸ್ಥೆಯಲ್ದ್ದ್‌ದೇ ಅನ್ಯಾಯ, ಅಕ್ರಮಗಳ ವಿರುದ್ಧ ಸಮಾನಮನಸ್ಕರನ್ನು ಸಂಘಟಿಸಿ, `ದಿಗಂಬರ ಕಾವ್ಯ' ವನ್ನು ಹುಟ್ಟುಹಾಕಿ ಜನಮನದಲ್ಲಿ ಹೋರಾಟದ ಮನೋಭಾವನೆಯನ್ನು ಬಿತ್ತಿ ಬೆಳೆಸಿದ ರೀತಿ ಅನುಕರಣೀಯ.
- ಮೋಹನ್ ರು. ಹಣಗಿ, ಅಮೀನಗಡ

ಇಷ್ಟು ದಿನಗಳು ಕೇವಲ ಸಾಹಿತಿಗಳ ಬಗ್ಗೆ ಸಾಹಿತ್ಯದ ಬಗ್ಗೆಯೇ ಓದಿದ್ದ ನಮಗೆ ಪ್ರಕಾಶಕರ ಕಷ್ಟ-ಸುಖದ ಬಗ್ಗೆಯೂ ಗೊತ್ತಾಯಿತು.  ತಮ್ಮ `ಅಹರ್ನಿಶಿ' ಪ್ರಕಾಶನ ಬಗ್ಗೆ ಅಕ್ಷತಾ ತಿಳಿಸಿರುವುದ್ದು, ನಿಜಕ್ಕೂ ಪ್ರಕಾಶಕರಿಗೆ ಏನೆಲ್ಲ ಸಮಸ್ಯೆಗಳಿವೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಯುವಂತಾಗಿದೆ. ಸಾಹಿತ್ಯ ಕೃತಿಗಳು ಎಲ್ಲೆಡೆ ಓದುಗರಿಗೆ  ಸುಲಭವಾಗಿ ಸಿಗುವಂತೆ ಮಾಡಿದಾಗ ಮಾತ್ರ ಪ್ರಕಾಶಕರಿಗೆ ಅನುಕೂಲ ಮಾಡಿದಂತೆ ಎನ್ನುವುದು ನಿಜ.
- ಡಾ. ಕೆ. ವಿ. ಸಂತೋಷ್ ಹೊಳಲ್ಕೆರೆ, ಚಿತ್ರದುರ್ಗ

ಅಕ್ಷತಾ ಅವರ ಬರಹ ಕೂಡ ತುಂಬಾ ಖುಷಿ ಕೊಟ್ಟಿದೆ. ಒಂದು ಸಾಹಿತ್ಯ ಸಂಪೂರ್ಣವಾಗಿ ಹೊರಬರಲು ಪ್ರಕಾಶಕ, ಓದುಗ, ಬರಹಗಾರ ಹೀಗೆ ಎಲ್ಲರ ಪ್ರಯತ್ನ ಕೂಡ ಅಗತ್ಯ. ಕನ್ನಡದಲ್ಲಿ ಒಳ್ಳೆಯ ಬರಹಗಳು ಹೊರಬರುತ್ತಿವೆ. ಅವೆಲ್ಲವೂ ಗ್ರಂಥಾಲಯಗಳಲ್ಲಿಯೂ ಸಿಗುವಂತಾಗಲಿ.
- ಶಂಕರ ಶೆಟ್ಟಿ ಕೊತ್ತಾಡಿ, ವಡ್ಡರ್ಸೆ

ನಿಮ್ಮ ಪ್ರತಿಕ್ರಿಯೆ ಇಲ್ಲಿಗೆ ಕಳುಹಿಸಿ...
ಸಂಪಾದಕರು, ಸಾಹಿತ್ಯ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು-1 sahithyapuravani@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT