ADVERTISEMENT

ಬೊಗಸೆಯಲ್ಲಿ ಎಳೆ ನೀರು:ನಾರೀನುಡಿಯ ಕಟ್ಟೋಣದತ್ತ-2

ಬಿ.ಎನ್.ಸುಮಿತ್ರಾಬಾಯಿ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ಕನ್ನಡ ಮಹಿಳಾಕಾವ್ಯದಲ್ಲಿ ಸ್ತ್ರೀವಿಶಿಷ್ಟ ಅಭಿವ್ಯಕ್ತಿಯ `ನುಡಿವರಸೆ~ ಎನ್ನುವುದರ ಲಕ್ಷಣಗಳನ್ನು ಪದಗಳ ಬಳಕೆಯಲ್ಲಿ, ಅನುಭವದ ರೂಢಿಗತವಲ್ಲದ ಬಗೆಗಳಲ್ಲಿ, ಅನುಭವವನ್ನು ಬಗೆಯುವ ಕ್ರಮದಲ್ಲಿ ಹಾಗೂ ಒಟ್ಟಾದ ಜೀವನವನ್ನು ನೋಡುವ ದೃಷ್ಟಿಯಲ್ಲಿಯೂ ಗುರುತಿಸಬೇಕಾಗುತ್ತದೆ.

ಇದುವರೆಗಿನ ಮಹಿಳಾ ಅಭಿವ್ಯಕ್ತಿಯನ್ನು ಗಮನಿಸಿದಲ್ಲಿ ಮಹಿಳೆಯಾಗಿ ತನ್ನತನ, ವ್ಯಕ್ತಿತ್ವ ಮತ್ತು ಅದಕ್ಕೆ ನೆಲೆಯಾದ ದೇಹದ ಬಗೆಗಿನ ಅರಿವನ್ನು ಅವ್ಯಕ್ತದ ಜಾಗದಿಂದ ಪ್ರಜ್ಞಾವಲಯಕ್ಕೆ ತರುವ ಮತ್ತು ಆ ಅರಿವನ್ನು ಅರ್ಥವಾಗಿಸಬಲ್ಲ ಭಾಷೆಯಲ್ಲಿ ಅಭಿವ್ಯಕ್ತಿ ಕೊಡುವ ಧೈರ್ಯ ಮಾಡಿದವರೂ `ನಯಸಂಸ್ಕೃತಿ~ಯನ್ನು ಕಾಯ್ದುಕೊಳ್ಳುವ ಎಚ್ಚರದೊಂದಿಗೇ  ತಮ್ಮದೇ ನುಡಿವರಸೆಯನ್ನೂ ಕಟ್ಟಿಕೊಳ್ಳಬೇಕಾದ ಸ್ಠಿತಿಯಲ್ಲಿದ್ದಾರೆ ಎನ್ನುವುದು ಕಾಣಬಲ್ಲದು.
 
ತನಗೆ ಹೊಂದಿದ, ಹೊಂದದ ಎಲ್ಲವನ್ನೂ ಮುಚ್ಚಿಟ್ಟುಕೊಳ್ಳುವುದೇ ಹೆಣ್ಣಿನ ಪರಮ ಧರ್ಮವಾಗಿರುವ ಸಂಸ್ಕೃತಿಯ ಒಳಗಿದ್ದುಕೊಂಡೇ ತನ್ನ ವಿರುದ್ಧವಾದದ್ದರ ವಿರುದ್ಧವಾಗಿ  ಹೆಣ್ಣಿನ ಮನಸ್ಸುಗಳಿಗೆ ಬಿಚ್ಚಿಕೊಳ್ಳುವ ಬಗೆಯನ್ನು ದಾರಿಗಳನ್ನೂ ಭಾಷೆಯಲ್ಲಿ ಸೃಷ್ಟಿಸಿಕೊಳ್ಳುವುದೇ ಪ್ರಸ್ತುತ ಸಮಸ್ಯೆ.

ಸ್ಥಾಪಿತ ಭಾಷೆಗೆ ಸ್ವತ್ವದ ಅರಿವನ್ನು ತರ್ಜುಮೆ ಮಾಡಲು, ಆ ಪರಂಪರೆಯ ಒಪ್ಪಿತ ಮಾದರಿಗಳನ್ನು ಬುಡಮೇಲು ಮಾಡಲು ಇಲ್ಲವೇ ಸಾಂಪ್ರದಾಯಿಕ ಚಿಂತನೆ, ನಂಬಿಕೆಗಳನ್ನು ಪಲ್ಲಟಗೊಳಿಸಲು ನಮ್ಮ ಮಹಿಳಾ ಕವಿಗಳು ನಡೆಸುತ್ತಾ ಬಂದಿರುವ ಯತ್ನಗಳು ಸಮಾಜದೊಂದಿಗಿನ, ಭಾಷೆಯೊಂದಿಗಿನ ಅವರ ಸಂಬಂಧಗಳು ಇನ್ನೂ ವಿಕಾಸಶೀಲವಾಗಿವೆ ಎಂಬುದನ್ನೇ ಸೂಚಿಸುತ್ತವೆ.

ಹೆಣ್ಣಿನದೇ ಆದ  ನುಡಿವರಸೆಯನ್ನು ರಚಿಸುತ್ತಿರುವವರಲ್ಲಿ ತಾತ್ವಿಕ ಭಿನ್ನತೆ ದೃಷ್ಟಿಯಿಂದ ವೈದೇಹಿ ಮತ್ತು ಪ್ರತಿಭಾ ನಂದಕುಮಾರ್ ಅವರನ್ನು ಜೊತೆಯಾಗಿಟ್ಟು ನೋಡಿದಲ್ಲಿ ಸಂವೇದನೆಗಳ ತಳಸೆಲೆ ಈ ಇಬ್ಬರಲ್ಲಿ ಎರಡು ತೀರಾ ಭಿನ್ನ ಕವಲುಗಳಾಗಿ ಸಾಗುವಂತೆ ಕಾಣುತ್ತದೆ.

ಹೆಣ್ತನದ ಬಗ್ಗೆ ಕೃಷಿ ಸಂಸ್ಕೃತಿ ಮೂಲದಿಂದ ರೂಢವಾದ ಇತಿಹಾಸಪೂರ್ವಕಾಲದ ಮಾತೃಸತ್ವದ ದೃಷ್ಟಿಯನ್ನು ಎತ್ತಿಹಿಡಿಯುವುದು ಮಾತ್ರವಲ್ಲ; ಅದರಲ್ಲಿಯೇ ಹೆಣ್ಣಿನ ಶಕ್ತಿಯನ್ನೂ ನೋವನ್ನೂ ಪರಿಪೂರ್ಣತೆಯ ಸಾಧ್ಯತೆಯನ್ನೂ ವಾಸ್ತವೀಕರಿಸುವಿಕೆ ವೈದೇಹಿಯವರ ಕವಿತೆಗಳ ತಳದ ತಾತ್ವಿಕತೆಯಾಗಿ ತೋರುತ್ತದೆ. ಇದಕ್ಕೆ 180 ಡಿಗ್ರಿ ಅಂತರದಲ್ಲಿ ಪ್ರತಿಭಾ ನಂದಕುಮಾರ್ ಅವರ ಸಂವೇದನೆಯ ನೆಲೆ ಇದೆ.
 
ಅದು ಆತ್ಯಂತಿಕವಾಗಿ ಆಧುನಿಕವಾದಿ. ನಗರಕೇಂದ್ರಿತವಾದ ನಯಸಂಸ್ಕೃತಿಯ ಗಾಢವಾದ ವ್ಯಕ್ತಿಪ್ರಜ್ಞೆಯ ಮೂಲದ್ದು. ಎತ್ತಿ ಹಿಡಿಯುವ, ಸಮರ್ಥಿಸುವ ರೀತಿಗಿಂತ ತಾನೇ ತಾನಾಗುವ, ತನ್ನ ಇರವನ್ನು ಸ್ಥಾಪಿಸಲು ಬೇಕಾದ ಜಾಗ ತಾನೇ ಸೃಷ್ಟಿ ಮಾಡುತ್ತಲೇ ಬಂದು ನೆಲೆಸಿಯೂಬಿಡುವ ಆತ್ಮವಿಶ್ವಾಸದ ಬದುಕಿನದೃಷ್ಟಿ ಪ್ರತಿಭಾ ಅವರ ಕವಿತೆಯ ಮುಖ್ಯ ಭಾಷೆಯೂ ಆಗುತ್ತದೆ. ಈ ಇಬ್ಬರ ಎರಡು ನಿದರ್ಶನಗಳನ್ನು ನೋಡೋಣ;
 
                       ಮೂಗಾಲು ಮಣೆಯಲ್ಲಿ ಮೂಗಣ್ಣಿನವನ
                       ಕುಳ್ಳಿರಿಸಿ ಪ್ರೀತಿಯೊತ್ತಿ
                       ಮೂಜಗದಲೋಲಾಡಿ ಎಂತು ದಣಿದವೋ ಪಾದ
                       ಎಂಬ ನೆಪತುದಿಯಿಂದ ಧೂಳನೆತ್ತಿ
                       ಯಾರ ಮನೆ ಬೀದಿಯದು ಪತ್ತೆ ಹಚ್ಚಿ
                       ನಗುವ ನಟರಾಜನನು ಕರೆವಳೋ ಸ್ನಾನಕ್ಕೆ
                       ದುಃಖ ಹತ್ತಿಕ್ಕಿ
                       ಮುಗಿಯಿತೇ ಬೇಟೆ? ಪ್ರಶ್ನೆ ಚುಚ್ಚಿ.
                      (ಶಿವನ ಮೀಸುವ ಹಾಡು/ಬಿಂದು ಬಿಂದಿಗೆ/ವೈದೇಹಿ)

ವೈದೇಹಿಯವರ ಬಹು ಜನಪ್ರಿಯ ಕವನಗಳಲ್ಲಿ ಒಂದಾದ `ಶಿವನ ಮೀಸುವ ಹಾಡಿನ~ ಉದ್ದಕ್ಕೂ ಗೌರಿಯ ಹೊರಗೆ ಬಾರದ ದುಃಖ ಮತ್ತು ಸಿಟ್ಟುಗಳಿಗೆ ಕವನವೇ ಬಾಯಿ ಆಗುತ್ತದೆ. ಅವಳದು ಸಿಟ್ಟೂ ಹೌದು, ಬರಿಯ ಸಾಧ್ವಿಯ ಸಹನೆಯಲ್ಲ ಎನ್ನುವುದು ಓದುಗರಿಗೆ ತಲುಪುವುದು ವ್ಯಂಗ್ಯ ಮತ್ತು ವಿಡಂಬನೆಗಳ ಧ್ವನಿಗಳ ಮೂಲಕ.

ಜಗನ್ಮಾತೆಯಾಗಿದ್ದ ಗೌರಿ ಗೃಹಿಣಿಯಾಗಿ ಬಂಧಿತಳಾಗಿಬಿಟ್ಟಳು. ತಾನೇ ಆ ಸ್ಥಿತಿಯನ್ನು ಅಪ್ಪಿದವಳೂ ಆಗಿ ಆಕೆ ಅನುಭವಿಸುತ್ತಿರುವ ಅಸಹನೀಯ ಆದರೆ ಸಹಿಸುವುದು ಬಿಟ್ಟರೆ ಬೇರೆ ದಾರಿ ಕಾಣದ ಮೂಗುಬ್ಬಸದ ಪಾಕ ಈ ಕವನದ ಪ್ರತಿಪದದಲ್ಲಿದೆ.     
                  
                 ಇದೋ ಈ ತಂಬಿಗೆ ನೀರು ಗಂಗೆಯವತಾರಕ್ಕೆ
                       ಇದು ಇದೋ ಆ ಮಣಿಕರ್ಣಿಕೆಗೆ
                       ಮಿಂದ ನದಿ ನೆನಪಿಗೆ ಒಂದೊಂದು ತಂಬಿಗೆ ನೀರು
                       ಕಡೆಯದಿಗೋ ನನ್ನ ಅನುದಿನದ ಬಡ ಕನಲು
                       ಎಂದಾಗ ನೀರೊಳಗೆ ಗೌರಿ ಕಂಬನಿ ಬಿಂದು
                       ಮಿಸಕ್ಕನೇ ಬೆರೆತು ಬಿಸಿಯಾಗಲು
                       ~ಅಯ್~ ಎಂದು ಶಿವ ಬೆವರಿ
                       “ನನ್ನನೇನೆಂದುಕೊಂಡೆ? ನಿನ್ನ ಬಿಟ್ಟರೆ ಶುದ್ಧ ಭೈರಾಗಿ”
                       ಈ ಮಾತಿಗೆ “ಶಿವನೇ, ನಾನೆಷ್ಟನೆಯ ನಾರಿ?”
                       ಎನ್ನುತ್ತ ಮೃದು ಚಿವುಟಿ ಮೀಸುವಳು ನಮ್ಮ ಗೌರಿ. 

 ಗೌರಿಯ ಸಂಕಟದ ಮೂಲವನ್ನೂ ಕವನ ಹೇಳುತ್ತದೆ-ಅವನ ಎಲ್ಲಾ ಆಟವನ್ನೂ ಅರಿತೂ ಮದ್ದಿನೆಣ್ಣೆಯ ಪೂಸಿ ಮೀಯಿಸಿ, ಜ್ವರ ಹಿಡಿಸಿಕೊಂಡಿರುವ ಆ ಲೋಕ ಸಂಚಾರಿಗೆ ಕಿರಾತಕಡ್ಡಿಯ ಕಷಾಯ ಕುಡಿಸಿ ಕಾಯುವುದನ್ನು ಬಿಡಲಾರದ ~ಶಿವಕಾಮಿತ್ವ~ವನ್ನೇ ಹೆಣ್ಣಿನ ಸಹನೆಯೆಂದು ವಿಜೃಂಭಿಸುವ ಪರಂಪರೆಗೆ ಅವ್ಳದು ಸಹನೆಯಲ್ಲ, ಅಸಹಾಯಕ ಮತ್ತು ಸ್ವಾಭಿಮಾನದ ಕುದಿತದ ಜೊತೆಯೇ ಸಾಗುವ ಅನಿವಾರ್ಯ ಸೇವೆ ಎನ್ನುವುದನ್ನು ಕವನ ಬಯಲುಗೊಳಿಸುತ್ತದೆ.

ಚುಚ್ಚುವಿಕೆ, ಸುತ್ತಿ ಬಳಸಿ ಹಂಗಿಸುವ ಹೆಂಗಸರ ಧಾಟಿಯನ್ನು ಅದಿರುವಂತೆಯೇ ಹಿಡಿಯುತ್ತ  ಕೆಳದನಿಯ ಪ್ರಶ್ನೆಗಳನ್ನು ಎಸೆಯುವ ಈ  ನುಡಿವರಸೆ ಹೆಣ್ಣಿನ ರೂಢಿಯ ಮಾತಿನ ವರಸೆಯೂ ಹೌದು. 

 ಇದಕ್ಕೆ ಪೂರ್ಣ ಭಿನ್ನವಾಗಿ ತೋರುವ ಪ್ರತಿಭಾ ಅವರ ಕವನಗಳು ಅತ್ಯಾಧುನಿಕ  ಅರಿವಿನ ಮೂಲಕ ಹೆಣ್ಣಿನ ಬದುಕಿನ ಸರ್ವವ್ಯಾಪಿಯಾದ ಒಳವೈರುಧ್ಯಗಳ ಬೃಹತ್ ರೂಪಕಗಳಾಗುತ್ತವೆ:

                            ಕಾಯುವ ಕಣ್ಣುಗಳಲ್ಲಿ ನಿರಾಸೆಯ ನಿದ್ದೆ
                            ಅಯೋಡೆಕ್ಸ್ ಹಚ್ಚಿ ಮಲಗಿದ ಬೆನ್ನಲ್ಲಿ ಬೆವರು ಒದ್ದೆ.
                            ಕನಸು ಬೀಳದ ರಾತ್ರಿ ಮುಂಜಾನೆ ಅಲಾರಾಂ
                            ಹೊಡೆತಕ್ಕೆ ಎದ್ದು ಟಿ ವಿ ಪಕ್ಕದ ಗಿಡಕ್ಕೆ ನೀರೆರೆದು
                           
                            ಸ್ಟ್ರಾಂಗ್ ಕಾಫಿ ಕೊಳೆಬಟ್ಟೆ ನೆನೆಸಿಟ್ಟು
                            ಉಗುರು ಬೆಚ್ಚಗಿನ ಸ್ನಾನ ಇಸ್ತ್ರಿಮಾಡಿದ ಸೀರೆ
                            ಸಂಜೆ ಕೊಂಡು ನೀರಿನಲ್ಲಿಟ್ಟ ಗುಲಾಬಿ ತಲೆಗೆ
                            
                             ಕಾಮನ ಬಿಲ್ಲಿನ ಹಿಂದೆ ಓಡುವವರಿಗೆ
                             ದಣಿವಿಲ್ಲ ನಿಂತಲ್ಲೇ ಸುತ್ತು ಹೊಡೆಯುತ್ತಾ
                             ಒಂದೆ ಮೆಟ್ಟಿಲನ್ನು ಏರಿ ಇಳಿಯುತ್ತಾ
                             ಸೂಪರ್ ಬಜಾರಿನ ಸಾಲುಗಳ ನಡುವೆ
                             ಕೇರ್ ಫ್ರೀ ಮಹಿಳೆಯರು ಕಳೆದುಹೋಗುತ್ತಾ
                             ಇಪ್ಪತ್ತೈದು ರೂಪಾಯಿ ನೈಟಿಗಳಲ್ಲಿರೆ
                             ವ್ಯಾನಿಷಿಂಗ್ ಕ್ರೀಮುಗಳಲ್ಲಿ ಮಾಯವಾಗುತ್ತಾರೆ.

(ಕೇರ್ ಫ್ರೀ ಮಹಿಳೆಯರು/ಮುನ್ನುಡಿ ಬೆನ್ನುಡಿಗಳ ನಡುವೆ: ಪ್ರತಿಭಾ ನಂದಕುಮಾರ್)
 
ತಥಾಕಥಿತ ಆಧುನಿಕತೆ ಮತ್ತು ಪ್ರಗತಿ ಹೊಂದಿದ ಇಂದಿನ ಜೀವನಕ್ರಮಕ್ಕೆ ಹೊಂದಿಕೊಂಡವಳ  (ನಗರ?)ಜೀವನದ ದಿನಚರಿಯಲ್ಲಿ ಒಂದೊಂದು ಕ್ರಿಯೆಯೂ ಮತ್ತೊಂದರ ವಿರುದ್ಧ ವ್ಯಂಗ್ಯವಾಡುವ ಹಾಗೆ ನೇಯ್ದುಕೊಳ್ಳುತ್ತದೆ. ಫ್ರೀಯಾಗಿ ಕುಟುಂಬಕ್ಕೆ ಕೇರನ್ನು ಒದಗಿಸುವವರೇ ಕೇರ್ ಫ್ರೀ ಮಹಿಳೆಯರಾಗುವ ಪರಿಯಲ್ಲಿ ಇಂಥ ಜೀವನದ ಅರ್ಥಹೀನತೆ, ನೀರಸತೆ ಅಸಾಂಗತ್ಯಗಳೆಲ್ಲ ರಾಚುವಷ್ಟು ಒಟ್ಟಿಕೊಳ್ಳುತ್ತವೆ. ಹೀಗೆ ಪ್ರತಿ-ಚರ್ಯೆಗಳನ್ನು ಪೇರಿಸಿರುವ ರೀತಿಯೇ ಮಹಿಳೆಯರ ಬದುಕಿನ ವಾಸ್ತವದ ಒಳಗನ್ನೂ ವ್ಯಂಜಿಸುತ್ತದೆ.

ಒಂದು ಬಗೆಯ ಉದ್ವಿಗ್ನತೆ, ಅಸ್ವಾಸ್ಥ್ಯ ಅಸಹನೆಯನ್ನು ಮೇಲೆಬ್ಬಿಸುವಾಗಲೂ ಅಣಕವಿಲ್ಲದೆ, ಪರವಹಿಸದೆ ತುಂಬ ವೈಯಕ್ತಿಕವಾದದ್ದು ಎಲ್ಲ ಹೆಣ್ಣುಗಳದೂ ಆಗುತ್ತಾ ಹೋಗುತ್ತದೆ.
 
ಇಷ್ಟು ಭಿನ್ನವಾದ ನುಡಿಯ ವರಸೆಗಳನ್ನು ಕಟ್ಟುತ್ತಿದ್ದರೂ ತಮ್ಮ ಮಾತು ಗಂಡಿನ ಜಗತ್ತಿಗೆ ಅಪರಿಚಿತವೂ ಅರ್ಥವಾಗದ್ದೂ ಆಗಿರುವ ಬಗೆಯನ್ನು ಹೇಳುವಾಗ ಈ ಇಬ್ಬರೂ ಒಂದೇ ಬಗೆಯಲ್ಲಿ ಹೇಳಹೊರಡುವುದನ್ನು ಗಮನಿಸಬೇಕು;
  
ಅವಳೆಂದದ್ದು- ಹಸಿವೆ ಮತ್ತು ಬಾಯಾರಿಕೆ            
ಆತನೆಂದ-ಚೆನ್ನಾಗಿ ಉಣ್ಣು,ಕುಡಿ
ಆಕೆ ಅತ್ತಳು ಆಗ                                
ಆತ ನಕ್ಕ.                                     
ಮೊನ್ನೆ ಅವನೆಂದದ್ದು ಕಿಟಕಿ ಎಂದು                  
ಅವಳು ತಿಳಿದುಕೊಂಡಂತೆ ಬಾಗಿಲು ಅಲ್ಲ!               
ಗೋಡೆ ಅಂದರೆ ಆತ                                
ಬಯಲೆಂದುಕೊಂಡಳು.                                
ಗೋಡೆ ಒಡೆದರೆ ಎಲ್ಲ ಬಯಲು ಎಂದೆ?                  
(ಆಕೆ ಆತ ಭಾಷೆ/ಪಾರಿಜಾತ; ವೈದೇಹಿ)                                                                      

ನನಗೆ ಭಾಷೆಯಿಲ್ಲ
ನಿನಗೆ ಕಿವಿಯಿಲ್ಲ
ಮಾತನಾಡುವುದು ಹೇಗೆ?
 ನನಗೆ ಆಕಾರವಿಲ್ಲ
ನಿನಗೆ ನೋಟವಿಲ್ಲ
 ಕಾಣಿಸುವುದು ಹೇಗೆ?
ನನ್ನ ಬಿಕ್ಕಳಿಕೆ ಮತ್ತು
 ನಿನ್ನ ಆಲಿಂಗನದ ನಡುವೆ
 ಸಮಾಜವಿಜ್ಞಾನದ ಗೋಡೆ
(ಮುನ್ನುಡಿ ಬೆನ್ನುಡಿಗಳ ನಡುವೆ: ಪ್ರತಿಭಾ ನಂದಕುಮಾರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.