ADVERTISEMENT

ಭಾಷಾಂತರದ ಅಗತ್ಯ ಮತ್ತು ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

Nothing moves without translation. Human experinece is covered by three terms: emotions, techniques, thought. Emotions (fear etc.) do not change in character; thoughts and techniques do. No change in thought or technique spreads without the help of translation; because, if it is to spread it has to spread from people to people, and therefore from language to language.  

ಇ. ಎಸ್. ಬೇಟ್ಸನ ಈ ಹೇಳಿಕೆ ಭಾಷಾಂತರದ ಅಗತ್ಯ ಮತ್ತು ಪ್ರಯೋಜನಗಳನ್ನು ಸಾರರೂಪದಲ್ಲಿ ಸಾದರ ಪಡಿಸುತ್ತದೆಂದು ಹೇಳಬಹುದು. emotion, thought  ಮತ್ತು technique  ಶಬ್ದಗಳು ಮಾನವ ಸಮುದಾಯಕ್ಕೆ ಸಾಮಾನ್ಯವಾಗಿರುವಂಥ ಅನುಭವ ಗಳನ್ನು ಒಳಗೊಂಡಿರುವ ಸಾಹಿತ್ಯವನ್ನೂ, ಜಾಗತಿಕ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನೂ - ಒಟ್ಟಿನಲ್ಲಿ, ಮಾನವನ ಬೌದ್ಧಿಕ ಮತ್ತು ಆತ್ಮಿಕ ಚಟುವಟಿಕೆ ಗಳೆಲ್ಲವನ್ನೂ - ಸೂಚಿಸುತ್ತವೆ ಎಂದಿಟ್ಟುಕೊಂಡರೆ, ಆಗ ಭಾಷಾಂತರದ ವ್ಯಾಪ್ತಿ ಮತ್ತು ಅಗತ್ಯ ಮನದಟ್ಟಾಗುತ್ತವೆ.

ಈ ಸಮಗ್ರ ಚಟುವಟಿಕೆಗಳು ಮತ್ತು ಅವುಗಳ ಫಲ ದೇಶಕಾಲಗಳ ಮೇರೆಯನ್ನು ಮೀರಿ ಸಮಸ್ತ ಮಾನವ ಜನಾಂಗಕ್ಕೆ ಉಪಯುಕ್ತವಾಗಿ ಪರಿಣಮಿಸಬೇಕಾದರೆ ಅನಿವಾರ್ಯವಾಗಿ ಭಾಷಾಂತರದ ಮರೆಹೋಗ ಬೇಕಾಗುತ್ತದೆ. ಭಾಷಾಂತರದ ನೆರವಿಲ್ಲದೆ ಹೋದಲ್ಲಿ ಮುನ್ನಡೆ ಕುಂಠಿತವಾಗುತ್ತದೆ.

ಜ್ಞಾನಕ್ಕೆ ಭಾಷೆ ವಾಹಕವಷ್ಟೆ, ಈ ಭಾಷೆ ಅಥವಾ ಭಾಷೆಯನ್ನು ರೂಪಿಸುವ ಶಬ್ದವೆಂಬ ಜ್ಯೋತಿ ಬೆಳಗದಿದ್ದರೆ ಈ ಲೋಕವೆಲ್ಲ ಅಂಧಕಾರದಲ್ಲಿ ಮುಳುಗಿ ಹೋಗುತ್ತದೆ ಎಂಬ ಸಂಸ್ಕೃತ ಕಾವ್ಯಮೀಮಾಂಸಕನೊಬ್ಬನ ಮಾತು ಈ ಸಂದರ್ಭದಲ್ಲಿ ತಾನಾಗಿಯೇ ನೆನಪಿಗೆ ಬರುತ್ತದೆ. ಈ ಲೋಕಪ್ರದೀಪನ ಕಾರ್ಯ ಇಂದು ಯಾವುದೇ ಒಂದು ಭಾಷೆ ಅಥವಾ ಆ ಭಾಷೆಯಲ್ಲಿನ ಶಬ್ದಗಳಿಂದ ಸಂಪೂರ್ಣವಾಗಿ ಸಾಧಿತವಾಗಲಾರದು.
 
ಈ ಕಾರ್ಯ ಸಾರ್ವತ್ರಿಕವಾಗಿ ಸಾಧಿತವಾಗಿವಾಗಬೇಕಾದರೆ ಹಲವು ಭಾಷೆಗಳಲ್ಲಿ, ಏಕಕಾಲದಲ್ಲಿ ಈ ಕಾರ್ಯ ನೆರವೇರ ಬೇಕಾಗುತ್ತದೆ. ಈ ದೃಷ್ಟಿಯಲ್ಲಿ, ಭಾಷೆ ಮಾನವ ಜನಾಂಗಗಳ ನಡುವೆ ಅಡ್ಡಗೋಡೆಗಳನ್ನು ನಿರ್ಮಿಸಿದರೆ, ಭಾಷಾಂತರ ಅವುಗಳನ್ನು ತೊಡೆದುಹಾಕುತ್ತದೆ.

ಜ್ಞಾನಕ್ಕೆ ಭಾಷೆಯ ಒಂದು ಆವರಣವಿರುತ್ತದೆ. ಈ ಆವರಣ ಎಷ್ಟೇ ಮೋಹಕವಾಗಿರಲಿ, ಜ್ಞಾನಪ್ರಸರಣದ ದೃಷ್ಟಿಯಿಂದ ಅದನ್ನು ಕಿತ್ತೊಗೆಯ ಬೇಕಾಗುತ್ತದೆ. ಇಲ್ಲವಾದಲ್ಲಿ ಇತರ ಭಾಷಾ ಬಾಂಧವರಿಗೆ ನಾವು ಕಂಡ ಸತ್ಯದ ದರ್ಶನ ಸಾಧ್ಯವಾಗುವುದಿಲ್ಲ.

ಭಾಷಾಂತರಕಾರ  ಈ ಆವರಣದ ಪರದೆಯನ್ನು ಸರಿಸುವ  ಕಾರ್ಯವನ್ನೂ ಮಾಡಬೇಕಾಗುತ್ತದೆ.  ಆಧುನಿಕ ಜಗತ್ತಿನಲ್ಲಿ ಬಾಳುತ್ತಿರುವ ಮನುಷ್ಯ, ಜಗತ್ತಿನ ಯಾವುದೇ ಭಾಗ ದಲ್ಲಿ ಲಭ್ಯವಾಗಿರುವ ಯಾವುದೇ ಜ್ಞಾನವನ್ನು ಪಡೆಯುವ ಹಕ್ಕು ತನಗಿದೆ ಎಂದು ದೃಢವಾಗಿ ನಂಬಿರುವುದು. ಯಾವ ಅಡ್ಡಿ-ಆತಂಕಗಳೂ ಈ ಜ್ಞಾನ ತೃಷೆಯನ್ನು ಹಿಂಗಿಸಲಾರವು.

ಇಲ್ಲಿ ಇನ್ನೊಂದು ಪ್ರಶ್ನೆಯೂ ಏಳುತ್ತದೆ. ಆಲೋಚನೆಗಳ, ಅನುಭವಗಳ ವಿನಿಮಯ ನಡೆಯ ಬೇಕಾದರೆ ವ್ಯಕ್ತಿ ತನ್ನ ಭಾಷೆಯನ್ನು ಮಾತ್ರವಲ್ಲದೆ ಇತರ ಭಾಷೆಗಳನ್ನೂ ಅರಿತಿರಬೇಕಾಗುತ್ತದೆ.

ಜಾಗತಿಕ ಜ್ಞಾನ ವೆಲ್ಲವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಹಂಬಲವನ್ನಿಟ್ಟು ಕೊಂಡಿರುವ ವ್ಯಕ್ತಿ ಎಷ್ಟು ಭಾಷೆಗಳನ್ನು ಕಲಿತುಕೊಳ್ಳಲು ಸಾಧ್ಯವಾದೀತು? ಒಬ್ಬ ವ್ಯಕ್ತಿ ಹಲವಾರು ಭಾಷೆಗಳನ್ನು ಬಲ್ಲೆನೆಂದು ಹೇಳಿದರೂ, ಆ ಎಲ್ಲ ಭಾಷೆಗಳಲ್ಲಿ ಆತನ ಪ್ರಭುತ್ವ ಸಮಾನರೂಪಕವಾಗಿರುತ್ತದೆಂದು ಹೇಳಲು ಬರುತ್ತದೆಯೆ?

ಜೊತೆಗೆ ತನ್ನ ಬಾಳಿನ ಅಮೂಲ್ಯ ಅವಧಿಯ ಎಷ್ಟು ಭಾಗವನ್ನು ಭಾಷೆಗಳ ಅಧ್ಯಯನ ಕ್ಕಾಗಿಯೇ ಮೀಸಲಾಗಿಡಲು ಸಾಧ್ಯವಾದೀತು? ಅಂದರೆ, ಮಾನವನ ಬಾಳಿಗೆ ಕಾಲದ ಪರಿಮಿತಿಯೂ, ಮತಿಗೆ ಸಾಮರ್ಥ್ಯಾವಕಾಶಗಳ ಪರಿಮಿತಿಯೂ ಇದೆಯೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಜೊತೆಗೆ, ಭಾಷಾಧ್ಯಯನ ದಲ್ಲಿಯೇ ತನ್ನೆಲ್ಲ ಸಾಮರ್ಥ್ಯಗಳನ್ನೂ ವ್ಯಯಮಾಡುವುದು ವ್ಯಕ್ತಿಯ ಸಾಮರ್ಥ್ಯದ ಅಪವ್ಯಯವೂ ಆಗುತ್ತದೆ.
ಈ ಜಾಗತಿಕ ಅಪವ್ಯಯವನ್ನು ತಪ್ಪಿಸಿ, ಮಾನವಮತಿಯ ಸಾಮರ್ಥ್ಯದ ಸದ್ವಿನಿಯೋಗಕ್ಕೆ ಅವಕಾಶ ಮಾಡಿಕೊಡ ಬೇಕಾದರೆ ಭಾಷಾಂತರ ಅಗತ್ಯವಾಗುತ್ತದೆ. ಅಂದರೆ, ಕೆಲವು ವ್ಯಕ್ತಿಗಳು ಕೆಲವೊಂದು ಭಾಷೆಗಳನ್ನು ಸಮರ್ಥ ವಾಗಿ ಕಲಿತು ಅಲ್ಲಿ ಉಪಲಬ್ಧವಾಗಿರುವ ಉತ್ತಮ ಸಾಹಿತ್ಯವನ್ನು, ಜ್ಞಾನರಾಶಿಯನ್ನು ಯಥಾವತ್ತಾಗಿ ತಂದುಕೊಟ್ಟರೆ, ಸಾಹಿತಿಯಾದವನು ಸೌಂದರ್ಯದ ಅನು  ಸಂಧಾನವನ್ನೂ, ವಿಜ್ಞಾನಿಯಾದವನು ಜ್ಞಾನಾ ನ್ವೇಷಣೆಯನ್ನೂ ಮುನ್ನಡೆಸಬಹುದು.

ಹೀಗೆ, ಜ್ಞಾನ ಕ್ಷೇತ್ರದಲ್ಲಿನ ಮುನ್ನಡೆಗೆ ಭಾಷಾಂತರ ಅಗತ್ಯ ವಾಗುತ್ತದೆ.  ಅನಗತ್ಯವಾದ ಪುನರಾವರ್ತನೆ ಮತ್ತು ಶಕ್ತಿ, ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಅಪವ್ಯಯ ಇಲ್ಲವಾಗುವುದರಿಂದ ಪ್ರಗತಿಯ ವೇಗ ಹಲವು ಮಡಿಯಾಗುತ್ತದೆ.

`ಒಬ್ಬನಾಗಿ ಉಂಡ ಊಟ ಹಬ್ಬವಲ್ಲ; ಒಬ್ಬನೇ ಸವಿದ ರಸ ರುಚಿಯಲ್ಲ~ ಎಂಬ ನಾಣ್ಣುಡಿಯೊಂದು ನಮ್ಮಲ್ಲಿ ಬಳಕೆಯಲ್ಲಿದೆ. ಮತ್ತೊಂದು ಸಾಹಿತ್ಯದ ಪರಿಚಯವುಳ್ಳ ವ್ಯಕ್ತಿಗಳಲ್ಲಿ ಕೆಲವರಾದರೂ ಅಲ್ಲಿಯ ಸಾಹಿತ್ಯವನ್ನು ಸವಿದಾಗ, ತಾವು ಮಾತ್ರ ಸವಿದಿದ್ದರಿಂದ ತೃಪ್ತರಾಗದೆ, ಅದನ್ನು ತಮ್ಮವರಿಗೂ ಲಭ್ಯವಾಗಿಸಬೇಕು ಎಂದು ಆ ದಿಕ್ಕಿನಲ್ಲಿ ಪ್ರಯತ್ನಶೀಲರಾಗುತ್ತಾರೆ.

ಇಂಥ ಪ್ರಯತ್ನ  ಎಂಥ ಕ್ರಾಂತಿಗೆ ಎಡೆಮಾಡಿಕೊಡಬಹುದು ಎಂಬುದರ ಅರಿವೂ ಅವರಿಗಿರುವುದಿಲ್ಲ. ಹೋಮರನ ಕೃತಿಗಳ ಭಾಷಾಂತರ ಸಂದರ್ಭದಲ್ಲಿ ಭಾಷಾಂತರಕಾರನೊಬ್ಬ ಬಳಸಿದ ಛಂದಸ್ಸೊಂದು ಇಂಗ್ಲಿಷ್ ಕಾವ್ಯ ಕ್ಷೇತ್ರದಲ್ಲಿ ಹೊಸ ಆಯಾಮಗಳನ್ನೇ ತೆರೆಯಿತು ಎಂದು ಹೇಳಲಾಗಿದೆ.

ಅಂತೆಯೇ, ಬಿ. ಎಂ. ಶ್ರೀಕಂಠಯ್ಯನವರ `ಇಂಗ್ಲಿಷ್ ಗೀತಗಳು~ ಕನ್ನಡ ಕಾವ್ಯಕ್ಷೇತ್ರದಲ್ಲಿ ಎಂಥ ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿಯನ್ನು ಹಾಡಿತೆಂಬುದನ್ನೂ ಈ ಸಂದರ್ಭದಲ್ಲಿ ಉ್ಲ್ಲಲೇಖಿಸಬಹುದು. ಇದರ ಬಗ್ಗೆ ಮಾಸ್ತಿಯವರು ಹೀಗೆಂದಿದ್ದಾರೆ: `ಅದು ಪ್ರಕಟವಾದ ಗಳಿಗೆ ಅಮೃತಗಳಿಗೆ; ಅದನ್ನು ರಚಿಸಿದ ಹಸ್ತ ಅಮೃತಹಸ್ತ~ ಏಕೆಂದರೆ, ಅಲ್ಲಿಂದ ಮುಂದೆ ಕನ್ನಡ ಕಾವ್ಯಕ್ಷೇತ್ರದಲ್ಲಿ ಆದ ಹುಲುಸಾದ ಬೆಳೆಗೆಲ್ಲ ಅದೇ ಜೀವದ್ರವ್ಯವಾಯಿತು.

`ಸ್ವತಂತ್ರ ಕಾವ್ಯದ ಪೈರು ಹುಟ್ಟುವುದಕ್ಕೆ ಮೊದಲು ನಡೆದಿರಬೇಕಾದ ಉಳುಮೆಯ ಕೆಲಸವೇ ತರ್ಜುಮೆ~ ಎಂದು ಡಿ.ವಿ.ಜಿ. ಯವರು ಒಂದೆಡೆ ಹೇಳಿದ್ದಾರೆ. ಅಂದರೆ, ಸಮೃದ್ಧ ಸಾಹಿತ್ಯ ಬೆಳೆಯಬೇಕಾದರೆ ಭಾಷಾಂತರ ಅಗತ್ಯವಾಗುತ್ತದೆ ಎಂದಂತಾಯಿತು. ಈ ಮಾತಿಗೆ ಎರಡು ರೀತಿಯಲ್ಲಿ ಅರ್ಥಮಾಡಬಹುದು.

ಇನ್ನೊಂದು ಸಾಹಿತ್ಯದ ವಿಶಿಷ್ಟ ಕೃತಿಗಳನ್ನು ಭಾಷಾಂತರಿಸಿಕೊಳ್ಳುವುದರ ಮೂಲಕ ತನ್ನ ಸಾಹಿತ್ಯವನ್ನು ಸಮೃದ್ಧವಾಗಿಸಿ ಕೊಳ್ಳಬಹುದು ಎಂಬುದು ಮೊದಲ ಅರ್ಥ. ಇಂದು ಇಂಗ್ಲಿಷ್ ಸಾಹಿತ್ಯ ಅತ್ಯಂತ ಸಮೃದ್ಧವಾಗಿರುವುದಕ್ಕೆ ಕಾರಣ ಜಗತ್ತಿನ ನಾನಾ ಭಾಷೆಗಳಿಂದ ಭಾಷಾಂತರಗಳು ಹರಿದುಬಂದಿರುವುದು.

ಅಂತೆಯೇ ಭಾರತೀಯ ಸಾಹಿತ್ಯಗಳಲ್ಲಿ ಕನ್ನಡ ಸಾಹಿತ್ಯ ಇಂದು ಅತ್ಯಂತ ಸಮೃದ್ಧವಾಗಿ ಪರಿಣಮಿಸಿರುವುದಕ್ಕೆ ಕಾರಣ ಎಲ್ಲ ದಿಕ್ಕುಗಳಿಂದಲೂ ಭಾಷಾಂತರದ ಪೂರ ಹರಿದುಬಂದಿರುವುದು, ಕೆಲವೊಮ್ಮೆ ಭಾಷಾಂತರಗಳು ಅಪೂರ್ವ ಕ್ರಾಂತಿಯನ್ನೆಸಗಿ ಅಗಾಧ ಸಾಹಿತ್ಯಸೃಷ್ಟಿಗೆ ಕಾರಣವಾಗುತ್ತವೆ ಎನ್ನುವುದರಲ್ಲಿ ಈ ಹೇಳಿಕೆಯ ಇನ್ನೊಂದು ಅರ್ಥ ಅಡಗಿದೆ. `ಇಂಗ್ಲಿಷ್ ಗೀತಗಳು~ ಸಾಧಿಸಿದ ಪವಾಡ ನಮಗೆ ತಿಳಿದೇ ಇದೆ.

ಅಂತೆಯೇ ಕನ್ನಡ ಕಾದಂಬರಿಗಳ ವಿಕಾಸಕ್ಕೆ ಗಳಗನಾಥರು ಭಾಷಾಂತರಿಸಿ ಕೊಟ್ಟ ಆಪ್ಟೆಯವರ ಮರಾಠೀ ಕಾದಂಬರಿಗಳು ಹಾಗೂ ವೆಂಕಟಾಚಾರ್ಯರು ಭಾಷಾಂತರಿಸಿಕೊಟ್ಟ ಬಂಗಾಳಿ ಕಾದಂಬರಿಗಳು ಎಷ್ಟರ ಮಟ್ಟಿಗೆ ನೆರವಾದುವೆಂಬುದನ್ನೂ ಇಲ್ಲಿ ಸ್ಮರಿಸಬಹುದು.

ಇತರ ಸಾಹಿತ್ಯ ಪ್ರಕಾರಗಳ ವಿಕಾಸಕ್ಕೂ ಭಾಷಾಂತರಗಳು ಅರ್ಥಪೂರ್ಣ ಕಾಣಿಕೆಯನ್ನು ಇತ್ತಿವೆಯೆಂಬುದೂ ಗಮನಿಸ ಬೇಕಾದ ಸಂಗತಿ. ಅಷ್ಟೇ ಅಲ್ಲ, ಮೌಲಿಕ ಕೃತಿಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಅಜರಾಮರ ವನ್ನಾಗಿಸಿಕೊಂಡಿರುವ ಸಾಹಿತಿಗಳಲ್ಲಿ ಅನೇಕರು ಭಾಷಾಂತರದ ಎಸಕದಲ್ಲಿ ತಮ್ಮ ಬರೆಹದ, ಶೈಲಿಯ ರಹಸ್ಯವನ್ನು ಕಂಡುಕೊಂಡರೆಂದೂ ಹೇಳಲಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಷಾಂತರ ಸಾಹಿತ್ಯಸಂವರ್ಧನಕ್ಕೆ ನೆರವಾಗಿದೆ.

ಲಂಡನ್ನಿನ `ಟೈಮ್ಸ ಲಿಟರರಿ ಸಪ್ಲಿಮೆಂಟ್~ ಈಚೆಗೆ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಒಂದು ಭಾಷೆಯಲ್ಲಿ ಉತ್ತಮ ಕೃತಿಯೊಂದು ಪ್ರಕಟವಾಯಿತೆಂದರೆ, ಅದರ ಬಗೆಗಿನ ವಿಮರ್ಶೆ ಪ್ರಕಟವಾಗಲಿ ಎಂದು ಕಾದರೆ, ಅಷ್ಟರ ಒಳಗಾಗಿಯೇ ಅದರ ಅನುವಾದದ ಹಕ್ಕುಗಳನ್ನು ಬೇರೆ ಯಾರಾದರೂ ಪಡೆದುಕೊಂಡು ಬಿಟ್ಟಿರುತ್ತಾರಂತೆ. ವಿಜ್ಞಾನಕ್ಷೇತ್ರದಲ್ಲಿ ಮಿಂಚಿನ ವೇಗದಲ್ಲಿ ಸಂಶೋಧನೆಗಳು ನಡೆಯುತ್ತಿರುವಾಗ ಜಗತ್ತಿನ ಯಾವ ಭಾಗದಲ್ಲಿ, ಯಾವ ವಿಷಯದಲ್ಲಿ, ಏನು ಸಾಧನೆಯಾಗಿದೆ ಎಂಬುದನ್ನು ಅರಿಯಲು ವಿಜ್ಞಾನಿಗಳು ಭಾಷಾಂತರದ ಮರೆ ಹೋಗುತ್ತಿದ್ದಾರೆ.

ರಾಜಕೀಯವಾಗಿ ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ಜಗತ್ತಿನ ವಿವಿಧ ರಾಷ್ಟ್ರಗಳು ಪರಸ್ಪರ ಹತ್ತಿರ ಬರುತ್ತಿರುವುದರಿಂದ ಇಂದು `ವಿಶ್ವ ಸಂಕುಚಿ ಸುತ್ತಿದೆ~ ಎಂಬ ಮಾತಿಗೆ ವಿಶೇಷ ಅರ್ಥ ಲಭ್ಯವಾಗುತ್ತಿದೆ. ಸಾಂಸ್ಕೃತಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಸಹಕಾರಗಳು ಏರ್ಪಡುತ್ತಿರುವುದರಿಂದ ಸರ್ಕಾರದ ಹೊಸ ಆಯಾಮಗಳು ಮೂಡುತ್ತಿವೆ. ಈ ಎಲ್ಲ ಕ್ಷೇತ್ರಗಳಲ್ಲಿ ಭಾಷಾಂತರದ ಅಗತ್ಯ ಮನದಟ್ಟಾಗುತ್ತಿದೆ.

ಹೊಸ ಹೊಸ ಅಗತ್ಯಗಳಿಗೆ ಅನುಗುಣ ವಾಗಿ ಭಾಷೆ ತನ್ನ ಶಕ್ತಿ - ಸಾಮರ್ಥ್ಯಗಳನ್ನು ರೂಪಿಸಿ ಕೊಳ್ಳಬೇಕಾಗುತ್ತದೆ. ಹಾಗೆ ಭಾಷಾಂತರ ಭಾಷೆಯ ಶಕ್ತಿಗೆ ಸವಾಲು ಗಳನ್ನೊಡ್ಡುತ್ತದೆ. ಭಾಷೆಗೆ ಹೊಸ ಹೊಸ ಆಯಾಮಗಳು ಮೂಡುತ್ತವೆ. ಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ದೇಶಭಾಷೆಗಳು ವಿಹರಿಸುತ್ತಿರುವುದನ್ನು ಗಮನಿಸಿದರೆ ಈ ಮಾತು ಮನದಟ್ಟಾಗುತ್ತದೆ. 

ಭಾವೈಕ್ಯ ಸಾಧನೆಯ ಕ್ಷೇತ್ರದಲ್ಲಿ ಭಾಷಾಂತರಗಳಿಂದ ಆಗುವಷ್ಟು ಕಾರ್ಯಸಾಧನೆ ಬಹುಶಃ ಇತರ ಕ್ರಮಗಳಿಂದ ಆಗಲಾರದು. ಭಾಷಾಂತರಗಳಿಂದ ಭಾಷೆ ಸಾಹಿತ್ಯಗಳ ಬಗೆಗಿನ ದುರಭಿಮಾನ, ಅತಿರೇಕಗಳು ದೂರವಾಗುತ್ತವೆ.  ಜ್ಞಾನಸಾಧನೆಯ ಜೊತೆಗೆ ಭಿನ್ನಾಭಿಪ್ರಾಯಗಳ ನಿವಾರಣೆ ಆಗುತ್ತದೆ. ಬೌದ್ಧಿಕವಾಗಿ,  ಸಾಂಸ್ಕೃತಿಕವಾಗಿ ಸಾಮರಸ್ಯ ಸ್ಥಾಪನೆಗೆ ದಾರಿ ದೊರೆತಂತಾಗುತ್ತದೆ.

 ಸಾಹಿತ್ಯ ಕ್ಷೇತ್ರದಂತೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಭಾಷಾಂತರ ಸ್ಥಿತ್ಯಂತರಗಳನ್ನು ಏರ್ಪಡಿ ಸುವುದುಂಟು. ಪಾಶ್ಚಾತ್ಯ ಸಾಮಾಜಿಕ - ರಾಜಕೀಯ ಇತಿಹಾಸವನ್ನು ಬಲ್ಲವರಿಗೆ ಬೈಬಲ್ಲಿನ ಭಾಷಾಂತರ ಜನರ ಮೌಢ್ಯ - ಅಜ್ಞಾನಗಳನ್ನು ದೂರ ಮಾಡಿ, ಧಾರ್ಮಿಕ ಹಾಗೂ ಸಾಮಾಜಿಕ ಗುಲಾಮಗಿರಿಯನ್ನು ತೊಡೆದು ಹಾಕಿ ಎಂಥ ಕ್ರಾಂತಿಗೆ ದಾರಿ ಮಾಡಿಕೊಟ್ಟಿತು ಎಂಬುದು ಗೊತ್ತಿದೆ. ಕ್ರೈಸ್ತ ಧರ್ಮದ ಪ್ರಚಾರದ ವಿಷಯದಲ್ಲಿ ಭಾಷಾಂತರಗಳು ಎಂಥ ಗಣನೀಯವಾದ ಸೇವೆಯನ್ನು ಸಲ್ಲಿಸಿವೆ ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ. ಇವು ಭಾಷಾಂತರದ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತವೆ.

(ಲೇಖಕರ `ಭಾಷಾಂತರ ಕಲೆ~ ಪುಸ್ತಕದಿಂದ ಆಯ್ದ ಭಾಗ. ಪ್ರ: ಸಪ್ನ ಬುಕ್ ಹೌಸ್, 2009.)

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಒಂದು ಸಾಹಿತ್ಯ- ಭಾಷಾಂತರ- ಸಂಸ್ಕೃತಿ ಸಂಸ್ಥೆಯನ್ನು ವಿಶೇಷವಾಗಿ ರೂಪಿಸುವ ಕರ್ನಾಟಕ ಸರ್ಕಾರದ ಕನಸು `ಕುವೆಂಪು ಭಾಷಾ ಭಾರತಿ ಪ್ರಾಧಿಕಾರ~ ವಾಗಿ ಸಾಕಾರಗೊಂಡಿದೆ.

2009ರ ಮೇ 30 ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ಇದರಲ್ಲಿ ಈ ಮೊದಲು ಸ್ಥಾಪಿತವಾಗಿದ್ದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ವಿಲೀನಗೊಂಡಿದೆ. ಕನ್ನಡದ ಖ್ಯಾತ ಭಾಷಾಂತರಕಾರ ಮತ್ತು ಲೇಖಕ ಡಾ. ಪ್ರಧಾನ್ ಗುರುದತ್ತ ಇದರ ಅಧ್ಯಕ್ಷರಾಗಿದ್ದು ಹನ್ನೊಂದು ಮಂದಿ ಸಾಹಿತಿಗಳು ಮತ್ತು ಅನುವಾದಕರು ಇದರ ಸದಸ್ಯರಾಗಿದ್ದಾರೆ.

ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಾಹಿತ್ಯವನ್ನು ಕನ್ನಡಕ್ಕೆ ತರುವುದು ಭಾಷಾ ಭಾರತಿ ಪ್ರಾಧಿಕಾರದ ಧ್ಯೇಯೋದ್ದೇಶ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಕಲಾಗ್ರಾಮದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಪ್ರಾಧಿಕಾರ ಇದುವರೆಗೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಇನ್ನೂ ಹಲವಾರು ಪ್ರಕಟಣಾ ಯೋಜನೆಗಳನ್ನು ರೂಪಿಸಿದೆ. ಅಲ್ಲದೆ ಅನುವಾದ ಕಾರ್ಯದಲ್ಲಿ ನಿರತರಾದವರಿಗೆ ಮನ್ನಣೆ ನೀಡಲು ಪ್ರತಿವರ್ಷ ಅನುವಾದಕರಿಗೆ ಗೌರವ ಪ್ರಶಸ್ತಿಗಳು ಮತ್ತು ಅತ್ಯುತ್ತಮ ಅನುವಾದಗಳಿಗೆ ಪುರಸ್ಕಾರಗಳನ್ನು ನೀಡುತ್ತಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಜೊತೆ ಸಂಯೋಜನೆ ಹೊಂದಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದ್ಯದಲ್ಲೇ 1) ಭಾಷಾಂತರ 2) ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ಭಾಷಾಂತರ 3) ಪತ್ರಿಕೋದ್ಯಮ ಮತ್ತು ಭಾಷಾಂತರ 4) ಕಾನೂನು, ಆಡಳಿತ ಮತ್ತು ಭಾಷಾಂತರ 5) ತೌಲನಿಕ ಸಾಹಿತ್ಯ ಮತ್ತು ಭಾಷಾಂತರ 6) ವಿದೇಶಿ ಭಾಷೆಗಳು ಮತ್ತು ಭಾಷಾಂತರ-ಇವುಗಳಲ್ಲಿ ಸ್ನಾತಕೋತ್ತರ ಡಿಪ್ಲೊಮ ಕೋರ್ಸ್‌ಗಳನ್ನು ಆರಂಭಿಸಲಿದೆ. 

 (ಪ್ರಾಧಿಕಾರದ ದೂರವಾಣಿ: 080- 23183311, 22107770.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.