ADVERTISEMENT

ಮಧುಶಾಲೆಯಲ್ಲಿ ಮಾನಿನಿಯರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಕನ್ನಡ ಸಾಹಿತ್ಯದಲ್ಲಿ ತಮ್ಮ ಕಾಲದ ಜನಜೀವನವನ್ನು ಬಣ್ಣಿಸಿರುವ ಕವಿಗಳ ಪ್ರತಿಭಾವಿಲಾಸ ಬೆರಗು ಮೂಡಿಸುತ್ತದೆ. ಅವರ ಪೈಕಿ ಪಂಪ ಮಹಾಕವಿಯ ಬಣ್ಣನೆಯ ಮೆರುಗೇ ಬೇರೆ.

ಪಂಪ ತನ್ನ ಆಶ್ರಯದಾತನಾದ ಅರಿಕೇಸರಿಯನ್ನು ಕಾವ್ಯನಾಯಕನನ್ನಾಗಿ ಮಾಡಿಕೊಂಡು ಅವನನ್ನು ಅರ್ಜುನನಿಗೆ ಸಮೀಕರಿಸಿದ- ಕಾವ್ಯಕ್ಕೆ `ವಿಕ್ರಮಾರ್ಜುನ ವಿಜಯ~ ಎಂದೇ ಹೆಸರಿಟ್ಟ. ಅದಕ್ಕೆ ಅನುಗುಣವಾಗಿ ಕಥೆಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ವಹಿಸಿದ. ಆದರೆ, ಅಷ್ಟಾದಶ ವರ್ಣನೆಗಳ ಪಾಶದಿಂದ ಬಿಡಿಸಿಕೊಳ್ಳಲು ಅವನಿಗೆ ಆಗಲಿಲ್ಲ.

ಸುಭದ್ರೆಯನ್ನು ಪ್ರೀತಿಸುತ್ತಿದ್ದ ಈ ಅರ್ಜುನ ವಿರಹದಲ್ಲಿ ಬೇಯುತ್ತ, ಮನಃಶಾಂತಿಗಾಗಿ ನಗರ ಪ್ರದಕ್ಷಿಣೆಗೆ ಹೊರಟ. ಮನ್ಮಥನ ಸಭಾಸ್ಥಾನಕ್ಕೆ ಬರುವಂತೆ ವೇಶ್ಯಾವಾಟಿಕೆಯ ಒಳಹೊಕ್ಕ. ಹಾಗೇ ಅವನು ಮುಂದೆ ಬಂದಾಗ ಪಾನಶಾಲೆ ಕಣ್ಣಿಗೆ ಬಿತ್ತು!

ಅಲ್ಲಿ ಕಳ್ಳು ಮತ್ತು ಅಮೃತದಲ್ಲಿ ಹುಟ್ಟಿದ ಸ್ತ್ರೀಯರಂತೆ ಸುರಾದೇವಿ, ಲಕ್ಷ್ಮೀದೇವಿಯರಂತೆ ಸೊಗಯಿಸುವ ಸುಂದರಿಯರು ಅವನಿಗೆ ಕಂಡರು. ಆ ಮಧುಶಾಲೆಯಲ್ಲೋ ಒಂದೆರಡಲ್ಲ, ಮುನ್ನೂರ ಅರವತ್ತು ಜಾತಿಯ ಕಳ್ಳುಗಳು ಇದ್ದವು! ಅವುಗಳನ್ನು ಮುಂದಿಟ್ಟುಕೊಂಡ ಸುಂದರಿಯರು ಮೊದಲು ಮಧುಮಂತ್ರದಿಂದಲೇ ಮಧುದೇವತೆಗಳನ್ನು ಪೂಜಿಸಿದರು.

ಅಲ್ಲಿ ಗಿಳಿ, ಕೋಗಿಲೆ, ಕ್ರೌಂಚ, ಹಂಸಗಳ ಆಕಾರದಲ್ಲಿ ಚಿನ್ನ, ಬೆಳ್ಳಿ ಮತ್ತು ಪದ್ಮರಾಗಗಳಿಂದ ಮಾಡಿದ ಪಾನಪಾತ್ರೆಗಳಿದ್ದವು. ಅವುಗಳಲ್ಲಿ ಕಳ್ಳು ತುಂಬಿಟ್ಟರು.

ಮಧುಮಂತ್ರ ಹೇಳುತ್ತ ನೆಲಕ್ಕೆ ಸ್ವಲ್ಪ ಕಳ್ಳು ಚೆಲ್ಲಿದರು. ಆಮೇಲೆ ಆ ಸುಂದರಿಯರು ಸ್ವಲ್ಪ ಮಧುವನ್ನು ತಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಂಡರು. ಕಳ್ಳಿನಿಂದಲೇ ಮುಖಕ್ಕೆ ಬೊಟ್ಟು ಇಟ್ಟುಕೊಂಡರು. ದಾನ ಮಾಡಲು ಮೀಸಲು ತೆಗೆದಿಟ್ಟ ಕಳ್ಳನ್ನು ದಾನ ಮಾಡಿದರು.

ಸೀದು, ಮಾರೀಚಿ, ಶರದೆ, ಚಿಂತಾಮಣಿ, ಕಕ್ಕರ ಇವೆಲ್ಲ ಅಲ್ಲಿದ್ದ ಕಳ್ಳುಗಳ ಹೆಸರುಗಳು. ಆಮೇಲೆ ಸುಂದರಿಯರು ಪಾತ್ರೆಗಳಲ್ಲಿ ತುಂಬಿಕೊಂಡು, ಎಳೆಯ ಬಿದಿರಿನ ಕಳಕೆ, ಮಾವಿನ ಮಿಡಿ, ಬಿಲ್ಪತ್ರೆಯ ಕಾಯಿಯ ತಿರುಳು, ಕಾರದ ಕಡಲೆ, ಹಸಿಶುಂಠಿ ಇವುಗಳನ್ನು ಸೇರಿಸಿ ಮಾಡಿದ ಚಕ್ಕಣ ಎಂಬ ತಿಂಡಿಯನ್ನು ನೆಂಚಿಕೊಂಡು ಕಳ್ಳು ಕುಡಿದರು. ಕೆಲವರು ಕುಡಿದು ಕುಣಿದರು. ಇದೆಲ್ಲ ಕಂಡ ಅರ್ಜುನನೂ ಅಲ್ಲಿ ಮಧುಸೇವನೆ ಮಾಡಿದನೇ? ಇಲ್ಲ, ಅರಮನೆಗೆ ಬಂದು ಮಲಗಿದ. ಸುಭದ್ರೆ ಕನಸಿಗೆ ಬಂದಳು. ನಶೆ ಅಂದರೆ  ಮತ್ತಿನ್ನೇನು...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.