ADVERTISEMENT

ಗುಜರಾತ್ ಮಾದರಿಯ ಇನ್ನೊಂದು ಮುಖ!

ಆಕಾರ್ ಪಟೇಲ್
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಗುಜರಾತ್ ಮಾದರಿಯ ಇನ್ನೊಂದು ಮುಖ!
ಗುಜರಾತ್ ಮಾದರಿಯ ಇನ್ನೊಂದು ಮುಖ!   

ತೆರಿಗೆದಾರರ ಕಿಸೆಯಿಂದ ಬಹಳ ಸುಲಭವಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಎಗರಿಸಿದ ಚೂಟಿ ಗುಜರಾತಿಗಳ ಪಟ್ಟಿಗೆ ನೀರವ್ ಮೋದಿ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಹರ್ಷದ್ ಮೆಹ್ತಾ, ಹಿತೇನ್ ದಲಾಲ್, ಜತಿನ್ ಮೆಹ್ತಾ ಮತ್ತು ಕೇತನ್ ಪಾರೇಖ್ ಅವರೂ ಇದ್ದಾರೆ. ಹಣ ಮಾಯವಾಗಿದ್ದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದಲಾದರೂ, ಕಳ್ಳತನವಾಗಿದ್ದು ಸಾರ್ವಜನಿಕರ ಹಣ. ಹಾಗಾಗಿ ನಾನು 'ತೆರಿಗೆದಾರರು' ಎಂಬ ಪದ ಬಳಸಿದೆ.

ಪ್ರತಿ ಷೇರಿಗೆ ₹ 163ರಂತೆ ಸರ್ಕಾರಕ್ಕೆ ಷೇರುಗಳನ್ನು ಮಾರಾಟ ಮಾಡುವ ಮೂಲಕ ಅಂದಾಜು ₹ 5,500 ಕೋಟಿಯನ್ನು ಸಂಗ್ರಹಿಸುವುದಾಗಿ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ ಕಳೆದ ವಾರ ಹೇಳಿದೆ. ಈ ಬ್ಯಾಂಕಿನ ಷೇರುಗಳ ಮಾರುಕಟ್ಟೆ ಮೌಲ್ಯ ಈಗ ₹ 113. ಇದು ಕುಸಿಯುತ್ತಲೇ ಇದೆ. ಹಾಗಾಗಿ, ನಮ್ಮ ಹಣವನ್ನು ಪೋಲು ಮಾಡಿರುವ ಅಸಮರ್ಥ ಬ್ಯಾಂಕೊಂದರಲ್ಲಿ ಹೂಡಿಕೆ ಮಾಡಲಿಕ್ಕಾಗಿ ನಾನು ಮತ್ತು ನೀವು ಪ್ರತಿ ಷೇರಿಗೆ ₹ 50 ಪಾವತಿ ಮಾಡಲಿದ್ದೇವೆ.

ಹೆಚ್ಚುವರಿಯಾಗಿರುವ ಈ ಹಣ ಬ್ಯಾಂಕಿಗೆ ಬಂದ ನಂತರ ಎಲ್ಲವೂ ಸರಿ ಆಗಲಿದೆ ಎಂಬ ಭರವಸೆಯನ್ನು ನಮಗೆ ನೀಡಲಾಗುತ್ತಿದೆ. ಇದೊಂದು ಬೋಗಸ್ ಭರವಸೆ. ಈಗ ಆಗಿರುವಂತೆ, ಹಿಂದೆಯೂ ನಡೆದಿರುವ ವಿದ್ಯಮಾನಗಳಂತೆ, ಮುಂದೆಯೂ ಆಗಲಿದೆ. ಷೇರು ಮಾರುಕಟ್ಟೆ ಹಗರಣ ಎಂದು ನಾವು ಭಾವಿಸಿರುವುದು ವಾಸ್ತವದಲ್ಲಿ ನೀರವ್ ಮೋದಿ ಮತ್ತು ಜತಿನ್ ಮೆಹ್ತಾ ಅವರು ಮಾಡಿರುವಂತಹ ಬ್ಯಾಂಕಿಂಗ್ ವ್ಯವಸ್ಥೆಗೆ ಎಸಗಿದ ವಂಚನೆಯೇ ಹೊರತು ಇನ್ನೇನೂ ಅಲ್ಲ.

ADVERTISEMENT

'ದಿ ಸ್ಕ್ಯಾಮ್: ಫ್ರಂ ಹರ್ಷದ್ ಮೆಹ್ತಾ ಟು ಕೇತನ್ ಪಾರೇಖ್' (ಹಗರಣ: ಹರ್ಷದ್‌ ಮೆಹ್ತಾರಿಂದ ಕೇತನ್ ಪಾರೇಖ್‌ವರೆಗೆ) ಎನ್ನುವ ಪುಸ್ತಕವನ್ನು ಪತ್ರಕರ್ತರಾದ ದೇಬಶಿಶ್ ಬಸು ಮತ್ತು ಸುಚೇತಾ ದಲಾಲ್ ಬರೆದಿದ್ದಾರೆ. ಈ ಪುಸ್ತಕವನ್ನು ಅವರು ಪರಿಷ್ಕರಿಸಿ, ಅದರಲ್ಲಿ ಜೆಪಿಸಿ ಗೊಂದಲ ಮತ್ತು ಗ್ಲೋಬಲ್ ಟ್ರಸ್ಟ್ ಬ್ಯಾಂಕ್‌ ಹಗರಣವನ್ನೂ ಸೇರಿಸಿದರು. ಬೃಹತ್ ಪ್ರಮಾಣದ ಬ್ಯಾಂಕಿಂಗ್ ಹಗರಣಗಳಿಗೆ ಈ ಹತಭಾಗ್ಯ ದೇಶದಲ್ಲಿ ಕೊರತೆಯೇ ಇಲ್ಲವೆಂಬಂತೆ ಅನಿಸುತ್ತಿದೆ. ಹಾಗಾಗಿ ಅವರಿಬ್ಬರು ತಮ್ಮ ಪುಸ್ತಕವನ್ನು ಮತ್ತೆ ಮತ್ತೆ ಪರಿಷ್ಕರಿಸುತ್ತ ಇರಬೇಕಾಗುತ್ತದೆಯೇನೋ...

ಹರ್ಷದ್ ಮೆಹ್ತಾ ಹಗರಣಕ್ಕೆ ಸಂಬಂಧಿಸಿದಂತೆ ಬಸು ಮತ್ತು ದಲಾಲ್ ಅವರು, 'ಈ ಹಗರಣ ಅದೆಷ್ಟು ಬೃಹತ್ ಆಗಿತ್ತೆಂದರೆ, ಅದರ ಬಗ್ಗೆ ಒಂದು ಪರಿಪೂರ್ಣ ಪರಿಪ್ರೇಕ್ಷೆ ಬೆಳೆಸಿಕೊಳ್ಳುವುದೇ ಕಷ್ಟವಾಗಿತ್ತು. ಬಜೆಟ್ಟಿನಲ್ಲಿ ಆರೋಗ್ಯಕ್ಕೆ, ಶಿಕ್ಷಣಕ್ಕೆ ಮೀಸಲಿಡುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಹಗರಣ ಇದಾಗಿತ್ತು. ಇದರ ಎದುರು ಲಕ್ಷಾಂತರ ರೂಪಾಯಿ ಸಹ ಬಿಡಿಗಾಸಿನಂತೆ ಕಾಣಿಸಿತು. ತಾರ್ಕಿಕ ಕಾರಣಗಳೇ ಇಲ್ಲದೆ ಆರು ತಿಂಗಳುಗಳಿಂದ ಏರುಗತಿಯಲ್ಲಿ ಇದ್ದ ಷೇರುಗಳ ಮೌಲ್ಯ ದೇಶದ ಎಲ್ಲೆಡೆ ಕುಸಿಯಲು ಆರಂಭವಾಯಿತು. ಬೊಫೋರ್ಸ್‌ ಹಗರಣಕ್ಕಿಂತ ಐವತ್ತು ಪಟ್ಟು ಹೆಚ್ಚು ದೊಡ್ಡದಾಗಿದ್ದ ಈ ಹಗರಣ ದೇಶದ ಮಧ್ಯಮ ವರ್ಗದ ಜನರ ಮನೆಗಳನ್ನು ಸುಂಟರಗಾಳಿಯಂತೆ ಅಪ್ಪಳಿಸಿತು' ಎಂದು ಬರೆದಿದ್ದಾರೆ.

'ಈ ವ್ಯವಹಾರದಲ್ಲಿ ಮೆಹ್ತಾ ಅವರಿಗೆ, ಭಾರತೀಯ ರಿಸರ್ವ್ ಬ್ಯಾಂಕ್ ಮಾಲೀಕತ್ವದ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ ಮತ್ತು ಎ.ಎನ್‌.ಜೆಡ್‌ ಗ್ರಿಂಡ್ಲೆಯ್ಸ್‌ ಬ್ಯಾಂಕ್‌ನ ಸಹಕಾರ ಇತ್ತು. ಈ ಎರಡೂ ಹಣಕಾಸು ಸಂಸ್ಥೆಗಳು ಮೆಹ್ತಾ ಖಾತೆಗೆ ಮುಕ್ತವಾಗಿ ಚೆಕ್‌ ನೀಡಿದವು. ಆರ್‌ಬಿಐನಲ್ಲಿ ಇದ್ದ ಎಸ್‌ಬಿಐ ಖಾತೆಯನ್ನು ಮೆಹ್ತಾ ತಮ್ಮದೆಂಬಂತೆ ಬಳಸಿದರು. ಈ ಎಸ್‌ಬಿಐ ಖಾತೆ ಮೂಲಕ ಮೆಹ್ತಾ ಸುಳ್ಳು ವಹಿವಾಟು ನಡೆಸಿದರು, ಆ ರೀತಿಯ ಸುಳ್ಳು ವಹಿವಾಟು ನಡೆಸಿದಾಗಲೆಲ್ಲ ಮೆಹ್ತಾ ತಮ್ಮ ಖಾತೆಗೆ ಜಮಾ ಅಥವಾ ಖರ್ಚು ಆಗುವಂತೆ ನೋಡಿಕೊಳ್ಳುತ್ತಿದ್ದರು' ಎಂದೂ ಬಸು ಮತ್ತು ದಲಾಲ್ ಬರೆದಿದ್ದಾರೆ.

ಇಂಥ ವಹಿವಾಟಿಗೆ ಕಾರಣವಾಗುವ ಸೋಂಕು ಎಲ್ಲ ಕಡೆಯೂ ಇದೆ ಎಂಬುದು ಅತ್ಯಂತ ಸ್ಪಷ್ಟ. ಇಂತಹ ವಹಿವಾಟುಗಳಿಗೆ ಒಬ್ಬ ಅಥವಾ ಇಬ್ಬರು ಉದ್ಯೋಗಿಗಳು ಮಾತ್ರ ಕಾರಣ ಎನ್ನುವುದು ತರ್ಕಹೀನ. ತಪ್ಪು ಮಾಡಿದವರಿಗೆ ಕಾನೂನಿಗೆ ಅನುಗುಣವಾಗಿ ಶಿಕ್ಷೆ ಆಗುವಂತೆ ಮಾಡುವುದು ಇದಕ್ಕೆ ಇರುವ ಏಕಮಾತ್ರ ಪರಿಹಾರ. ಯಾವುದೋ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದಲ್ಲ- ಸಂಚಾರ ನಿಯಮ ಉಲ್ಲಂಘನೆಯಿಂದ ಆರಂಭಿಸಿ ಕೊಲೆ ಪ್ರಕರಣಗಳವರೆಗೆ ಶಿಕ್ಷೆ ಆಗುವಂತೆ ಮಾಡಬೇಕು.

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆ ಕಾರ್ಯತತ್ಪರ ಆಗಿರಬೇಕು. ಪ್ರಭುತ್ವವು ಎಲ್ಲ ಸಂದರ್ಭಗಳಲ್ಲೂ ಕಾನೂನು ಪ್ರಕ್ರಿಯೆಯನ್ನು ಗೌರವಿಸಬೇಕು. ಆರೋಪಿಯೊಬ್ಬನ ವಿಚಾರದಲ್ಲಿ ಪ್ರಭುತ್ವ ಮೃದು ಧೋರಣೆ ತಳೆದಿದೆ ಎಂದು ಕಂಡುಬಂದ ಸಂದರ್ಭದಲ್ಲೂ ಕಾನೂನು ಪ್ರಕ್ರಿಯೆಯನ್ನು ಮೀರಬಾರದು. ಇವೆಲ್ಲವೂ ಅತ್ಯಂತ ಕಷ್ಟದ ಕೆಲಸಗಳು. ಆದರೆ ಇದನ್ನು ಹೊರತುಪಡಿಸಿದರೆ ಅನ್ಯ ಮಾರ್ಗ ಇಲ್ಲ. ಈಚಿನ ದಿನಗಳಲ್ಲಿ ಬೆಳಕಿಗೆ ಬಂದ 'ದೊಡ್ಡವರ ಪ್ರಕರಣ'ಗಳಲ್ಲಿ, ಆ ಪ್ರಕರಣಗಳ ಸುತ್ತ ನಡೆದ ಬೆಳವಣಿಗೆಗಳ ವಿಚಾರದಲ್ಲಿ ಸರ್ಕಾರ ಇಂಥದ್ದೊಂದು ಮಾರ್ಗ ಅನುಸರಿಸಿದೆಯೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಕೆಲಸವನ್ನು ನಾನು ಓದುಗರಿಗೇ ಬಿಟ್ಟುಬಿಡುತ್ತೇನೆ.

ನೀರವ್ ಮೋದಿ ಪ್ರಕರಣದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ. ನೀರವ್ ಅಥವಾ ಬ್ಯಾಂಕ್‌ನ ಹೆಸರು ಉಲ್ಲೇಖಿಸದೆಯೇ ಪ್ರಧಾನಿಯವರು ಕಳೆದ ವಾರ, 'ಹಣಕಾಸು ಸಂಸ್ಥೆಗಳಲ್ಲಿ ನಿಯಮಗಳನ್ನು ರೂಪಿಸುವ ಮತ್ತು ನೈತಿಕ ಮಟ್ಟವನ್ನು ಕಾಯ್ದುಕೊಳ್ಳುವ ಹೊಣೆ ಹೊತ್ತವರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮನವಿ ಮಾಡುತ್ತಿದ್ದೇನೆ. ಅದರಲ್ಲೂ ಮುಖ್ಯವಾಗಿ, ಮೇಲ್ವಿಚಾರಣೆಯ ಹೊಣೆ ಇರುವವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕು' ಎಂದು ಹೇಳಿದ್ದಾರೆ.

'ನಾವು ಕ್ರಮ ಜರುಗಿಸುವುದನ್ನು ನಿಲ್ಲಿಸುವುದಿಲ್ಲ. ಸಾರ್ವಜನಿಕರ ಹಣವನ್ನು ಅಕ್ರಮವಾಗಿ ಬಳಕೆ ಮಾಡುವುದನ್ನು ಸರ್ಕಾರ ರೂಪಿಸಿರುವ ಹೊಸ ವ್ಯವಸ್ಥೆ ಒಪ್ಪುವುದಿಲ್ಲ' ಎಂದೂ ಪ್ರಧಾನಿಯವರು ಹೇಳಿದ್ದಾರೆ. ಹಣ ವಂಚನೆಯ ಪ್ರಕರಣಗಳು ತಮ್ಮ ಆಡಳಿತ ಅವಧಿಯಲ್ಲಿ ವರದಿಯಾದಾಗ ಬೇರೆಯವರೂ ಇದೇ ಮಾತುಗಳನ್ನು ಹೇಳಿದ್ದರು. ಆದರೆ ಹಗರಣಗಳು ನಡೆಯುವುದು ಮುಂದುವರಿದಿದೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಬಹಳ ಸುಲಭವಾಗಿ ಸವಾರಿ ಮಾಡುವ ಮೃದು ಮಾತಿನ ಗುಜರಾತಿ ಯುವಕರಿಂದ ರಕ್ಷಣೆ ಪಡೆಯುವ ವ್ಯವಸ್ಥೆ ನಮ್ಮ ದೇಶದಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಇಲ್ಲವೇನೋ ಎಂಬಂತೆ ಭಾಸವಾಗುತ್ತಿದೆ.

ಹರ್ಷದ್ ಮೆಹ್ತಾ ತಮ್ಮ ಹೂಡಿಕೆ ತತ್ವವನ್ನು 'ಪರ್ಯಾಯ ವೆಚ್ಚ ಸಿದ್ಧಾಂತ' ಎಂದು ಕರೆದರು. ನೆಲೆ ಕಂಡುಕೊಂಡಿರುವ ಒಂದು ಕಂಪನಿಯ ಷೇರುಗಳ ಮೌಲ್ಯವನ್ನು ಆ ಕಂಪನಿಯ ಈಗಿನ ಗಳಿಕೆಯನ್ನು ಆಧರಿಸಿ ಅಂದಾಜಿಸುವ ಬದಲು, ಆ ಕಂಪನಿ ಅಸ್ತಿತ್ವದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ, ಅದಕ್ಕೆ ಪರ್ಯಾಯ ಕಟ್ಟಲು ಏನು ಮಾಡಬೇಕಿತ್ತು ಎಂಬುದರ ಆಧಾರದ ಮೇಲೆ ಅಂದಾಜಿಸುವುದು ಈ ತತ್ವ. ಮೆಹ್ತಾ ಅವರು 30 ವರ್ಷ ವಯಸ್ಸಿನ ಆಸುಪಾಸಿನಲ್ಲಿ ಇದ್ದಾಗ ಅವರನ್ನು ಷೇರು ಮಾರುಕಟ್ಟೆಯ ಪರಿಭಾಷೆಯಲ್ಲಿ 'ದೊಡ್ಡ ಗೂಳಿ' ಎಂದು ಪ್ರಶಂಸಿಸಲಾಗಿತ್ತು, ಬುದ್ಧಿವಂತ ಎಂದು ಕೊಂಡಾಡಲಾಗಿತ್ತು.

ನೀರವ್ ಮೋದಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಲಾಭ ಪಡೆಯಲು ಆರಂಭಿಸಿದ್ದು ಏಳು ವರ್ಷಗಳ ಹಿಂದೆ ಎಂದು ಹೇಳಲಾಗಿದೆ. ಈ ಹಗರಣ ಹೊರ ಬರುವ ಕೆಲವು ದಿನಗಳ ಮೊದಲು ನೀರವ್ ಮತ್ತು ಅವರ ಕುಟುಂಬ ಭಾರತದಿಂದ ಕಣ್ಮರೆಯಾಗಿದ್ದು ಕೇವಲ ಕಾಕತಾಳೀಯ ಆಗಿರಲಾರದು. ಹಗರಣ ಹೊರಬರಲಿದೆ ಎಂದು ಸರ್ಕಾರದಲ್ಲಿನ ಹಿರಿಯರಾರೋ ಖಂಡಿತವಾಗಿಯೂ ಎಚ್ಚರಿಸಿರಬೇಕು.

ಮೇಲ್ವಿಚಾರಣೆಯ ಹೊಣೆ ಹೊತ್ತುವರು ತಮ್ಮ ಕೆಲಸವನ್ನು ಪೂರ್ಣ ಶ್ರದ್ಧೆಯಿಂದ ಮಾಡಬೇಕು ಎಂದು ಮೇಲೆ ಉಲ್ಲೇಖಿಸಿದ ಭಾಷಣದಲ್ಲಿ ನರೇಂದ್ರ ಮೋದಿ ಅವರು ಮನವಿ ಮಾಡಿದರು. 'ಹಣಕಾಸಿನ ಅವ್ಯವಹಾರಗಳನ್ನು ನಡೆಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಸಾರ್ವಜನಿಕರ ಹಣವನ್ನು ಅಕ್ರಮವಾಗಿ ಕೂಡಿಟ್ಟುಕೊಳ್ಳುವುದನ್ನು ವ್ಯವಸ್ಥೆ ಒಪ್ಪುವುದಿಲ್ಲ. ಇದು ಹೊಸ ಅರ್ಥ ವ್ಯವಸ್ಥೆಯ ಮೂಲ ಮಂತ್ರ' ಎಂದು ಅವರು ಹೇಳಿದರು.

ಇಲ್ಲಿಯವರೆಗೆ ನಡೆದಿರುವುದನ್ನು ಗಮನಿಸಿ ಜನ ಇಂತಹ ಮಾತುಗಳನ್ನು ನಂಬುತ್ತಾರೋ, ಇಲ್ಲವೋ ಎಂದು ತೀರ್ಮಾನಿಸುವುದು ಒಂದೆಡೆ ಇರಲಿ. ಸಾರ್ವಜನಿಕರ ಹಣದ ಲೂಟಿ ತಡೆಯಲು ನಮ್ಮ ದೇಶ ಇನ್ನಷ್ಟು ಬಲಿಷ್ಠವಾಗಬೇಕು ಎಂದು ನಾವೆಲ್ಲರೂ ಆಶಿಸಬೇಕು. ಮೆಹ್ತಾ, ದಲಾಲ್, ಪಾರೇಖ್ ಮತ್ತ ಮೋದಿ ಸರಣಿ ಕೊನೆಗೊಂಡರೆ ಸಮಾಧಾನ ಆಗುತ್ತದೆ.

‘ಗುಜರಾತ್ ಮಾದರಿ'ಯ ಈ ಮುಖವು ದೇಶದ ಇತರ ಪ್ರದೇಶಗಳಲ್ಲಿ ಮತ್ತೆ ಕಾಣಿಸಿಕೊಳ್ಳುವುದನ್ನು ತಡೆಯಲು ಪ್ರಧಾನಿಯವರಿಗೆ ಸಾಧ್ಯವಾದರೆ ಅದೊಂದು ವರವೇ ಆಗುತ್ತದೆ!

ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.