ADVERTISEMENT

ಈ ಪೆನ್ ಸ್ಪರ್ಶಕ್ಕೆ ಪರ್ಯಾಯವಲ್ಲ!

ಯು.ಬಿ ಪವನಜ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST
ಮೈಕ್ರೊ ಸಾಫ್ಟ್ ವಿಂಡೋಸ್ ಬಳಸದವರಾರು? ಶೇಕಡ 90ಕ್ಕಿಂತ ಹೆಚ್ಚು ಗಣಕ ಬಳಕೆದಾರರು ಬಳಸುವ ಕಾರ್ಯಾಚರಣ ವ್ಯವಸ್ಥೆ (Operating System )  ವಿಂಡೋಸ್. ಇದರ ಈಗಿನ ಆವೃತ್ತಿ ವಿಂಡೋಸ್ 8. ಇದರ ವೈಶಿಷ್ಟ್ಯ ಏನೆಂದರೆ ಇದನ್ನು ಸ್ಪರ್ಶಸಂವೇದಿ ಪರದೆಗಳಿಗಾಗಿ (touchscreen) ವಿಶೇಷವಾಗಿ ತಯಾರಿಸಲಾಗಿದೆ.

ಮಾಮೂಲಿ ಲ್ಯಾಪ್‌ಟಾಪ್‌ಗಳಲ್ಲೂ ಇದನ್ನು ಬಳಸಬಹುದು. ಆದರೆ ಇದರ ಸಂಪೂರ್ಣ ಶಕ್ತಿಯ ಪ್ರಯೋಜನ ಪಡೆಯಬೇಕಾದರೆ ಸ್ಪರ್ಶಸಂವೇದಿ ಪರದೆ ಅಗತ್ಯ. ಅಂತೆಯೇ ಮಾರುಕಟ್ಟೆಯಲ್ಲಿ ಹೊಸ ನಮೂನೆಯ ಲ್ಯಾಪ್‌ಟಾಪ್‌ಗಳು ಬರಲು ಪ್ರಾರಂಭಿಸಿವೆ. ಇವು ಸ್ಪರ್ಶಸಂವೇದಿ ಪರದೆ ಒಳಗೊಂಡಿವೆ. ಕೆಲವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟ್ಯಾಬ್ಲೆಟ್‌ಗಳಾಗಿ ಮಡಚಬಲ್ಲವಾಗಿವೆ. ಇವುಗಳ ಬಗ್ಗೆ ಪ್ರತ್ಯೇಕ ಲೇಖನ ಅಗತ್ಯ ಇದೆ.

ವಿಂಡೋಸ್ 8ರ ಇನ್ನೂ ಒಂದು ವೈಶಿಷ್ಟ್ಯ ಎಂದರೆ ಗಣಕ, ಟ್ಯಾಬ್ಲೆಟ್ ಮತ್ತು ವಿಂಡೋಸ್ ಫೋನ್ 8 -ಈ ಮೂರೂ ಕಡೆ ಒಂದೇ ರೀತಿಯ ಬಳಕೆಯ ಅನುಭವ ನೀಡುತ್ತದೆ. ಹಳೆಯ ವಿಂಡೋಸ್ ಆವೃತ್ತಿಗಳಲ್ಲಿ ಐಕಾನ್‌ಗಳಿದ್ದವು. ಮೌಸ್ ಮೂಲಕ ಅವುಗಳ ಮೇಲೆ ಕ್ಲಿಕ್ ಮಾಡಿ ಕೆಲಸ ಮಾಡುವುದು ಎಲ್ಲರಿಗೂ ತಿಳಿದ ವಿಷಯ. ವಿಂಡೋಸ್ 8ರಲ್ಲಿ  ಪರದೆಯ ಮೇಲೆ ಟೈಲ್‌ಗಳು (ಹೆಂಚು?) ಇರುತ್ತವೆ. ಇವುಗಳನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಸರಿಸಬಹುದು. ಅವುಗಳ ಮೇಲೆ ಕ್ಲಿಕ್ ಮಾಡಿ ಅಥವಾ ಬೆರಳಿನಿಂದ ಒತ್ತಿ (ಸ್ಪರ್ಶಸಂವೇದಿ ಪರದೆ ಇದ್ದಲ್ಲಿ) ಕೆಲಸ ಮಾಡಬಹುದು. ಐಕಾನ್ ಮತ್ತು ಟೈಲ್‌ಗಳ ಒಂದು ಪ್ರಮುಖ ವ್ಯತ್ಯಾಸವೆಂದರೆ ಟೈಲ್‌ಗಳು  ಜೀವಂತವಾಗಿರುವುದು. ಅಂದರೆ ಅವುಗಳಲ್ಲಿ ತೋರಿಬರುವ ಮಾಹಿತಿ ಬದಲಾಗುತ್ತ ಇರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಸ್ಪರ್ಶಸಂವೇದಿ ಪರದೆ ಇಲ್ಲದಿದ್ದಲ್ಲಿ ವಿಂಡೋಸ್ 8ರ ಬಳಕೆಯ ಅನುಭವ ಚೆನ್ನಾಗಿರುವುದಿಲ್ಲ. 
 
ಹಲವು ಮಂದಿ ಲ್ಯಾಪ್‌ಟಾಪ್ ಬಳಕೆದಾರರು ಬಳಸುತ್ತಿರುವುದು ವಿಂಡೋಸ್ 7 ಅಥವಾ ಹಿಂದಿನ ಆವೃತ್ತಿ. ಅವರುಗಳಿಗೆ ವಿಂಡೋಸ್ 8ಕ್ಕೆ ನವೀಕರಿಸಿಕೊಳ್ಳಲು ಆಸಕ್ತಿ ಇದೆ. ಆದರೆ ಸ್ಪರ್ಶಸಂವೇದಿ ಪರದೆ ಇಲ್ಲದಿದ್ದಲ್ಲಿ ಅದರ ಅನುಭವ ಅದ್ಭುತವಾಗಿರುವುದಿಲ್ಲ. ಆದುದರಿಂದ ಹಲವು ಮಂದಿ ಇನ್ನೂ ವಿಂಡೋಸ್ 8ಕ್ಕೆ ನವೀಕರಿಸಿಕೊಂಡಿಲ್ಲ. ಸಂಪೂರ್ಣ ಹೊಸ ಲ್ಯಾಪ್‌ಟಾಪ್ ಅಥವಾ ಪರಿವರ್ತಿಸಬಲ್ಲ ಲ್ಯಾಪ್‌ಟಾಪ್ (convertible) ಅಥವಾ ಸ್ಪರ್ಶಸಂವೇದಿ ಪರದೆ ಇರುವ ಲ್ಯಾಪ್‌ಟಾಪ್ ಕೊಂಡುಕೊಳ್ಳದೇ ವಿಂಡೋಸ್ 8ರ ಅನುಭವವನ್ನು ಈಗಿರುವ ಲ್ಯಾಪ್‌ಟಾಪ್ ಅಥವಾ ಗಣಕಕ್ಕೇ ನೀಡಬಲ್ಲ ಸಾಧನ ಇಟಚ್ ಪೆನ್. ಈ ಗ್ಯಾಜೆಟ್ ನಮ್ಮ ಈ ವಾರದ ಅತಿಥಿ.
 
ಈ ವಿಶೇಷ ಗ್ಯಾಜೆಟ್ ತಯಾರಿಸಿರುವುದು ನಮ್ಮ ಬೆಂಗಳೂರಿನ ಹೈ-ಟೆಕ್ ಸಲ್ಯೂಶನ್ಸ್ ಎಂಬ ಕಂಪೆನಿ. ಈ ಸಾಧನದಲ್ಲಿ ಪ್ರಮುಖ ಮೂರು ಅಂಗಗಳಿವೆ. ಗಣಕದ ಪರದೆಗೆ ಜೋಡಿಸುವ ಪ್ರೇಷಕ-ಗ್ರಾಹಕ(transmitter-receiver),, ಇದನ್ನು ಗಣಕಕ್ಕೆ ಜೋಡಿಸಲು ಯುಎಸ್‌ಬಿ ಕೇಬಲ್ ಮತ್ತು ಪರದೆಯ ಮೇಲೆ ಬರೆಯಲು/ಬಳಸಲು ವಿಶೇಷ ಪೆನ್. ಪ್ರೇಷಕ/ಗ್ರಾಹಕವನ್ನು ಪರದೆಗೆ ಅಂಟಿಸಲು ಒಂದು ಅಯಸ್ಕಾಂತೀಯ ಪಟ್ಟಿ ಇದೆ. ಇದರ ಪೆನ್ ವಿಶಿಷ್ಟ ಪೆನ್ ಆಗಿದೆ. ಅದರ ತುದಿಯಲ್ಲಿ ಚಿಕ್ಕ ಬ್ರಶ್ ಇದೆ. ಪೆನ್ ಎರಡು ಬಟನ್ ಸೆಲ್‌ಗಳನ್ನು ಬಳಸುತ್ತದೆ. ಅದು ಪ್ರೇಷಕ/ಗ್ರಾಹಕದ ಜೊತೆ ಅವಕೆಂಪು(infrared)  ಮತ್ತು ಶಬ್ದಾತೀತ (ultrasound) ತರಂಗಗಳ ಮೂಲಕ ಸಂಪರ್ಕಗೊಳ್ಳುತ್ತದೆ. ಬಳಕೆದಾರರು ಈ ಪೆನ್ ಬಳಸಿ ಪರದೆ ಮೇಲೆ ಬರೆಯಬಹುದು, ಚಿತ್ರ ಬಿಡಿಸಬಹುದು, ಟೈಲ್‌ಗಳನ್ನು ಜಾರಿಸಬಹುದು ಅಥವಾ ಆಟ ಆಡಬಹುದು. ಸರಳವಾಗಿ ಹೇಳುವುದಾದರೆ ಸ್ಪರ್ಶಸಂವೇದಿ ಪರದೆಯ ಮೇಲೆ ಬೆರಳು ಇಟ್ಟು ಮಾಡಬಹುದಾದ ಎಲ್ಲ ಕೆಲಸಗಳನ್ನು ಈ ಪೆನ್ ಬಳಸಿ ಪರದೆಯ ಮೇಲೆ ಇಟ್ಟು ಮಾಡಬಹುದು. ಪೆನ್ನಿನಲ್ಲಿ ಒಂದು ಗುಂಡಿ (ಬಟನ್) ಕೂಡ ಇದೆ. ಅದು ಮೌಸ್‌ನ ಬಲಗುಂಡಿಯ ಕೆಲಸ ಮಾಡುತ್ತದೆ. 
 
 ನಾನು ಈ ಗ್ಯಾಜೆಟ್ ಬಳಸಿ ನೋಡಿದೆ. ಬಳಕೆ ಅಷ್ಟು ಸುಲಲಿತವಾಗಿಲ್ಲ. ಸ್ವಲ್ಪ ಜಾಸ್ತಿ ಒತ್ತಿದರೆ ಮಾತ್ರ ಇದು ಕೆಲಸ ಮಾಡುತ್ತದೆ. ಪೆನ್ನಿನ ತುದಿಯಲ್ಲಿ ಬ್ರಶ್ ಇರುವುದರಿಂದ ಎಲ್‌ಸಿಡಿ ಪರದೆ ಮೇಲೆ ಗೀರುಗಳಾಗುವುದಿಲ್ಲ. ಬ್ರಶ್‌ನ ವ್ಯಾಸ ಸುಮಾರು ಐದು ಮಿಮೀ ಇದೆ. ಅಂದರೆ ನೀವು ಗ್ರಾಫಿಕ್ಸ್ ಕಲಾವಿದರಾಗಿದ್ದರೆ ಇದರ ನಿಷ್ಕೃಷ್ಟತೆ ನಿಮಗೆ ಸಾಲುವುದಿಲ್ಲ. ಒಂದು ಆಯತದ ಚಿತ್ರ ಬಿಡಿಸಲು ನಾನು ಸುಮಾರು ಐದು ನಿಮಿಷ ಒದ್ದಾಡಬೇಕಾಯಿತು.

ಗ್ರಾಫಿಕ್ಸ್ ಟ್ಯಾಬ್ಲೆಟ್ ಮತ್ತು ಪೆನ್‌ಗೆ ಇದು ಬದಲಿಯಾಗಲು ಸಾಧ್ಯವಿಲ್ಲ. ಪೆನ್‌ನ ತುದಿಯಲ್ಲಿ ಬ್ರಶ್‌ನ ಬದಲು ಪ್ಲಾಸ್ಟಿಕ್ ಕಡ್ಡಿ (ಸ್ಟೈಲಸ್) ನೀಡಿದ್ದಲ್ಲಿ ಸ್ವಲ್ಪ ನಿಷ್ಕೃಷ್ಟತೆ ಬರುತ್ತಿತ್ತು. ವಿಂಡೋಸ್8 ರ ಟೈಲ್‌ಗಳನ್ನು ಪರದೆಯಲ್ಲಿ ಸರಿಸಲು ಪೆನ್ನನ್ನು ಪರದೆ ಮೇಲೆ ಒತ್ತಿ ಸರಿಸಬೇಕು. ಈ ಅನುಭವವೂ ನನಗೆ ಅಷ್ಟೇನೂ ತೃಪ್ತಿ ನೀಡಲಿಲ್ಲ. ವಿಂಡೋಸ್ 8ರ ಒಂದು ಬಹುಮುಖ್ಯ ಗುಣವೈಶಿಷ್ಟ್ಯವೆಂದರೆ ಬಹುಸ್ಪರ್ಶ(multitouch). ಸ್ಪರ್ಶಸಂವೇದಿ ಪರದೆಯ ಮೇಲೆ ಹತ್ತು ಬೆರಳುಗಳಿಂದ ಏಕಕಾಲದಲ್ಲಿ ಗೀಚಿ ಕಲಾಕೃತಿ ತಯಾರಿಸಬಹುದು. ಇಟಚ್ ಪೆನ್ ತಂತ್ರಜ್ಞಾನದಲ್ಲಿ ಅದು ಸಾಧ್ಯವಿಲ್ಲ. ಅಂದರೆ ಒಂದಕ್ಕಿಂತ ಹೆಚ್ಚು ಪೆನ್ ನಿಮ್ಮಲ್ಲಿದ್ದರೂ ಅದು ಏಕ ಕಾಲದಲ್ಲಿ ಒಂದು ಪೆನ್ ಜೊತೆ ಮಾತ್ರ ಸಂಪರ್ಕ ಕಲ್ಪಿಸಬಲ್ಲದು. 
 
ಈ ಗ್ಯಾಜೆಟ್‌ನ ಬೆಲೆ 3999 ರೂ. ಇದೆ (etouchpen.in). ಸಾವಿರಾರು ರೂ. ಕೊಟ್ಟು ಹೊಸ ಸಿಸ್ಟಮ್ ಕೊಳ್ಳುವ ಬದಲು ಇದರಲ್ಲಿ ಹೇಗೋ ಕೆಲಸ ಮಾಡಿಕೊಳ್ಳುತ್ತೇವೆ ಎನ್ನುವವರು ಇದನ್ನು ಕೊಳ್ಳಬಹುದು. ಇನ್ನು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಹೊಸ ನಮೂನೆಯ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕನ್ವರ್ಟಿಬಲ್‌ಗಳು ಬರಲಿವೆ. ಕೆಲವು ಕಂಪೆನಿಗಳು ಈಗಾಗಲೇ ಭಾರತದಲ್ಲಿ ಮಾರಲು ಪ್ರಾರಂಭಿಸಿವೆ. ಮತ್ತೆ ಕೆಲವು ತಿಂಗಳುಗಳಲ್ಲಿ ಅವೇ ಎಲ್ಲ ಕಡೆ ತುಂಬಿಕೊಳ್ಳಲಿವೆ. ಅಲ್ಲಿ ತನಕ ಮಾತ್ರ ಈ ಇಟಚ್ ಪೆನ್ ಗ್ಯಾಜೆಟ್‌ಗೆ ಆಯುಷ್ಯ ಇರುತ್ತದೆ. 

ಗ್ಯಾಜೆಟ್ ಸಲಹೆ
* ಒಂಟಿಪ್ರೇಮಿ(?) ಅವರ ಪ್ರಶ್ನೆ: ಆಂಡ್ರೋಯಿಡ್ ಫೋನ್‌ಗಳಲ್ಲಿ ವೈಫೈ ಬಳಸುವುದು ಹೇಗೆ?
ಉ: ಮೊತ್ತಮೊದಲು ಅದರಲ್ಲಿ ಇರುವ ವೈಫೈ ಸೌಲಭ್ಯವನ್ನು ಆನ್ ಮಾಡಬೇಕು. ಆಗ ಅದು ತಾನು ಇರುವ ಸ್ಥಳದಲ್ಲಿ ಇರಬಹುದಾದ ವೈಫೈ ಸಂಪರ್ಕಗಳಿಗೆ ಹುಡುಕುತ್ತದೆ. ವೈಫೈ ಕಂಡುಬಂದಲ್ಲಿ ಅದನ್ನು ತೋರಿಸುತ್ತದೆ. ಸಾಮಾನ್ಯವಾಗಿ ಈ ವೈಫೈಗೆ ಸಂಪರ್ಕಿಸಲು ಕೀ (ಒಂದು ಗುಪ್ತ ಪದ ಅಥವಾ ಸಂಖ್ಯೆ) ನಮೂದಿಸಬೇಕು. ಅದು ನಿಮಗೆ ಗೊತ್ತಿರಬೇಕು. ಉದಾಹರಣೆಗೆ ಕಾಫಿಹೌಸ್‌ನಲ್ಲಿ ಈ ವೈಫೈಯ ಕೀ ಏನು ಎಂಬುದನ್ನು ಮೇಜಿನ ಮೇಲೆ ಬರೆದಿರುತ್ತಾರೆ. ಅದೇ ರೀತಿ ಹಲವು ವಿಮಾನನಿಲ್ದಾಣಗಳಲ್ಲೂ ವೈಫೈ ಲಭ್ಯವಿರುತ್ತದೆ. ಮನೆಗಳಲ್ಲೂ ವೈಫೈ ಇರಬಹುದು. ವೈಫೈ ಬಳಸಿ ಫೋನ್‌ಗೆ ಅಂತರಜಾಲ ಸಂಪರ್ಕ ಕಲ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.