ADVERTISEMENT

ದೂರದರ್ಶನಕ್ಕೊಂದು ದೂರನಿಯಂತ್ರಕ

ಯು.ಬಿ ಪವನಜ
Published 28 ಡಿಸೆಂಬರ್ 2016, 19:30 IST
Last Updated 28 ಡಿಸೆಂಬರ್ 2016, 19:30 IST
ದೂರದರ್ಶನಕ್ಕೊಂದು  ದೂರನಿಯಂತ್ರಕ
ದೂರದರ್ಶನಕ್ಕೊಂದು ದೂರನಿಯಂತ್ರಕ   

ಟೆಲಿವಿಶನ್ ಇಲ್ಲದ ಮನೆ ಇಲ್ಲವೇ ಇಲ್ಲವೆನ್ನಬಹುದು. ಕೆಲವು ಮಂದಿ ಅದನ್ನು ವೀಕ್ಷಿಸುವುದು ಅತಿ ಕಡಿಮೆಯಾಗಿದ್ದರೂ ಅವರ ಮನೆಯಲ್ಲಿ ಅದು ಇರುತ್ತದೆ. ಈ ಪಂಗಡದಲ್ಲಿ ನಾನೂ ಇದ್ದೇನೆ. ಟಿ.ವಿ.ಯಲ್ಲಿ ತೋರಿಸುವ ಕಾರ್ಯಕ್ರಮಗಳಲ್ಲಿ ಬಹುತೇಕ ಕೆಲಸಕ್ಕೆ ಬಾರದ ಸಮಯ ಹಾಳುವ ಕಾರ್ಯಕ್ರಮಗಳೇ ಇರುವುದು ನಿಜ. ಆದುದರಿಂದಲೇ ಅದಕ್ಕೆ ಮೂರ್ಖರಪೆಟ್ಟಿಗೆ ಎಂಬ ಹೆಸರು ಅನ್ವರ್ಥನಾಮವಾಗಿದೆ. ಅದೆಲ್ಲ ಇರಲಿ. ಈ ಟಿ.ವಿ.ಗೆ ಒಂದು ದೂರನಿಯಂತ್ರಕ ಇರುವುದೂ ನಿಜ.

ಈಗಿನ ಕಾಲದಲ್ಲಿ ಬಹುತೇಕ ಎಲ್ಲರೂ ಬಳಸುವುದು ಡಿ.ಟಿ.ಎಚ್. ಪೆಟ್ಟಿಗೆಯನ್ನು. ಮನೆಯ ಮೇಲಿನ ಡಿಶ್‌ನಿಂದ ಈ ಡಿ.ಟಿ.ಎಚ್. ಪೆಟ್ಟಿಗೆಗೆ ಸಿಗ್ನಲ್ ಬಂದು ಅಲ್ಲಿಂದ ಅದು ಮನೆಯ ಟಿ.ವಿ.ಗೆ ಬರುತ್ತದೆ. ಅಂದರೆ ನಾವು ಚಾನೆಲ್ ಬದಲಿಸುವುದು ಡಿ.ಟಿ.ಎಚ್.ನಲ್ಲೇ ವಿನಾ ಟಿ.ವಿ.ಯಲ್ಲಿ ಅಲ್ಲ. ಈ ಡಿ.ಟಿ.ಎಚ್. ಪೆಟ್ಟಿಗೆಗೆ ಅದರದ್ದೇ ಆದ ದೂರನಿಯಂತ್ರಕ (ರಿಮೋಟ್ ಕಂಟ್ರೋಲ್) ಇರುತ್ತದೆ. ಆದರೆ ಅದು ಬುದ್ಧಿವಂತ ಅಲ್ಲ. ಈ ಸಲ ನಾವು ವಿಮರ್ಶಿಸಲು ಹೊರಟಿರುವುದು ಒಂದು ಬುದ್ಧಿವಂತ ದೂರನಿಯಂತ್ರಕವನ್ನು.

ಬೆಂಗಳೂರಿನ ಸೆನ್ಸಾರ ಕಂಪೆನಿ ತಯಾರಿಸಿದ ಸೆನ್ಸಿ ರಿಮೋಟ್ (Sensy Remote) ನಮ್ಮ ಈ ವಾರದ ಗ್ಯಾಜೆಟ್. ಇದೊಂದು ಚಿಕ್ಕ ಪೆಟ್ಟಿಗೆಯಾಕಾರದ ಗ್ಯಾಜೆಟ್. ಕಪ್ಪು ಬಣ್ಣದ ಅರೆಪಾರದರ್ಶಕ ಪೆಟ್ಟಿಗೆ. ಗಾತ್ರ 90x90x30 ಮಿ.ಮೀ. ಇದರ ಕೆಳಭಾಗದಲ್ಲಿ ಆನ್/ಆಫ್ ಬಟನ್ ಇದೆ. ಕೆಳಭಾಗದಲ್ಲಿ ನಾಲ್ಕು ಸ್ಕ್ರೂಗಳಿವೆ. ಬ್ಯಾಟರಿ ಬದಲಿಸಲು ಈ ಸ್ಕ್ರೂಗಳನ್ನು ತೆಗೆಯಬೇಕು. ಇದೊಂದು ಚಿಕ್ಕ ಕಿರಿಕಿರಿ ಎನ್ನಬಹುದು. ಸಾಮಾನ್ಯವಾಗಿ ಎಲ್ಲ ಸಾಧನಗಳಲ್ಲಿ ಬ್ಯಾಟರಿ ಬದಲಿಸಲು ಸರಳವಾದ ತೆಗೆದು ಹಾಕಬಹುದಾದ ಮುಚ್ಚಳವಿರುವ ಸ್ಥಳ ಇರುತ್ತದೆ. ಇದರಲ್ಲಿ ಹಾಗಲ್ಲ. ಪ್ರತಿ ಸಲ ಸ್ಕ್ರೂ ತೆಗೆಯಬೇಕು. ಇದಕ್ಕಾಗಿ ನಿಮ್ಮ ಮನೆಯಲ್ಲಿ ಸ್ಕ್ರೂಡ್ರೈವರ್ ಇರತಕ್ಕದ್ದು.

ಈ ಸಾಧನ ಕೆಲಸ ಮಾಡಲು ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಅವರದ್ದೇ ಆದ ಕಿರುತಂತ್ರಾಂಶ (ಆ್ಯಪ್) ಹಾಕಿಕೊಳ್ಳಬೇಕು. ಅದು ಗೂಗಲ್‌ ಪ್ಲೇ ಸ್ಟೋರಿನಲ್ಲಿ ಲಭ್ಯ. ಸೆನ್ಸಿ ರಿಮೋಟ್ ಅನ್ನು ಆನ್ ಮಾಡಿ, ಸ್ಮಾರ್ಟ್‌ಫೋನಿನಲ್ಲಿ ಬ್ಲೂಟೂತ್ ಆನ್ ಮಾಡಿ ಸಂಪರ್ಕಿಸಿ ಕೆಲಸ ಮಾಡಬೇಕು. ಸೆನ್ಸಿ ರಿಮೋಟ್‌ನ ನಾಲ್ಕು ಬದಿಗಳಲ್ಲೂ ಒಂದೊಂದು ಅವಕೆಂಪು (infrared) ಲೇಸರ್ ಡಯೋಡು ಇದೆ. ಸಾಮಾನ್ಯವಾಗಿ ಎಲ್ಲ ದೂರನಿಯಂತ್ರಕಗಳಲ್ಲೂ ಇದು ಇರುತ್ತದೆ. ನಾಲ್ಕೂ ಬದಿಗಳಲ್ಲಿರುವ ಕಾರಣ ಸೆನ್ಸಿ ರಿಮೋಟ್‌ನ ಯಾವ ಬದಿ ನಿಮ್ಮ ಮನೆಯ ಟಿ.ವಿ. ಮತ್ತು ಡಿ.ಟಿ.ಎಚ್. ಕಡೆ ಮುಖ ಮಾಡಿರಬೇಕು ಎಂದು ಚಿಂತಿಸಬೇಕಾಗಿಲ್ಲ. ಸೆನ್ಸಿ ರಿಮೋಟ್ ಮತ್ತು ಡಿ.ಟಿ.ಎಚ್‌.ಗಳ ಮಧ್ಯೆ ಯಾವುದೇ ಅಡ್ಡ ಇರಬಾರದು ಅಷ್ಟೆ. 

ಒಮ್ಮೆ ಸೆನ್ಸಿ ರಿಮೋಟ್ ಅನ್ನು ಸಂಪರ್ಕಿಸಿ ನಿಮ್ಮನೆಯಲ್ಲಿರುವ ಡಿ.ಟಿ.ಎಚ್. ಮಾದರಿಯನ್ನು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಮನೆಯ ಡಿ.ಟಿ.ಎಚ್. ಅನ್ನು ಸೆನ್ಸಿಯ ಮೂಲಕವೇ ಅಂದರೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಸೆನ್ಸಿ ಕಿರುತಂತ್ರಾಂಶ (ಆ್ಯಪ್) ಮೂಲಕ ನಿಯಂತ್ರಿಸಬಹುದು. ಚಾನೆಲ್ ಬದಲಿಸುವುದು, ಹುಡುಕುವುದು, ಎಲ್ಲ ಮಾಡಬಹುದು. ಇದರ ವೈಶಿಷ್ಟ್ಯವಿರುವುದು ಈ ಕಿರುತಂತ್ರಾಂಶದಲ್ಲಿ.

ಎಲ್ಲ ಚಾನೆಲ್‌ಗಳ ಕಾರ್ಯಕ್ರಮ ವಿವರಗಳು, ಸಮಯ, ಎಲ್ಲ ಇದರಲ್ಲಿ ಲಭ್ಯ. ಸಿನಿಮಾ, ಧಾರಾವಾಹಿಗಳ ಪಾತ್ರಧಾರಿಗಳ ಹೆಸರು, ಧಾರಾವಾಹಿ ಅಥವಾ ಸಿನಿಮಾದ ಕಥೆಯ ಸಾರಾಂಶ, ಎಲ್ಲ ಲಭ್ಯ. ಜೊತೆಗೆ ಯುಟ್ಯೂಬ್‌ನಲ್ಲಿ ಈ ಸಿನಿಮಾಗೆ ಸಂಬಂಧಿಸಿದ ಟ್ರೈಲರ್‌ಗಳು, ನಟ ನಟಿಯರ ಇತರೆ ವಿಡಿಯೊಗಳು, ಅವರು ನಟಿಸಿದ ಬೇರೆ ಸಿನಿಮಾ, ಧಾರಾವಾಹಿ, ಇತ್ಯಾದಿಗಳಿಗೆ ಕೊಂಡಿಗಳಿವೆ. ಅವುಗಳನ್ನು ಆಯ್ಕೆ ಮಾಡಿಕೊಂಡರೆ ಅವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಪ್ಲೇ ಆಗುತ್ತವೆ. ಸ್ಟಾರ್‌ವಾರ್‌ನಂತಹ ಸಿನಿಮಾಗಳಿಗೆ ಅವುಗಳದೇ ಆದ ಮಾದರಿಗಳು, ಟಿ-ಶರ್ಟ್, ಇತ್ಯಾದಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಕಿರುತಂತ್ರಾಂಶದಲ್ಲಿ ಅವುಗಳು ದೊರೆಯುವ ಜಾಲಮಳಿಗೆಗಳಿಗೆ ಕೊಂಡಿ ಇದೆ.  

ಇಷ್ಟೇ ಆಗಿದ್ದರೆ ಈ ಸೆನ್ಸಿ ಅಂತಹ ಅದ್ಭುತವೆನ್ನಿಸುತ್ತಿರಲಿಲ್ಲ. ಸೆನ್ಸಿಯ ವಿಶೇಷತೆ ಇರುವುದು ಅದರ ಹುಡುಕುವಿಕೆಯ ಸವಲತ್ತಿನಲ್ಲಿ. ನಿಮಗೆ ಕಬಡ್ಡಿ, ಕ್ರಿಕೆಟ್, ಅಡುಗೆಯ ಕಾರ್ಯಕ್ರಮ ಅಥವಾ ಸಿನಿಮಾ ನೋಡಬೇಕಾಗಿದೆ ಎಂದುಕೊಳ್ಳಿ. ಈ ಕಿರುತಂತ್ರಾಂಶದಲ್ಲಿ ಅದರ ಹೆಸರನ್ನು ಟೈಪ್ ಮಾಡಿದರೆ ಅದು ಆ ಕಾರ್ಯಕ್ರಮ ಯಾವ ಚಾನೆಲಿನಲ್ಲಿ ಪ್ರಸಾರ ಆಗುತ್ತಿದೆ ಎಂದು ತೋರಿಸುತ್ತದೆ.

ಆ ಚಾನೆಲ್‌ಗೆ ಬದಲಿಸು ಎಂದು ಆಯ್ಕೆ ಮಾಡಿದರೆ ಹಾಗೆಯೇ ಮಾಡುತ್ತದೆ. ಇನ್ನೂ ಒಂದು ವಿಶೇಷ ಎಂದರೆ ಇದು ಧ್ವನಿಯ ಮೂಲಕ ಆದೇಶ ನೀಡಿದರೂ ಹುಡುಕುತ್ತದೆ. ಈ ಧ್ವನಿಯಿಂದ-ಪಠ್ಯಕ್ಕೆ ಪರಿವರ್ತನೆ ಉತ್ತಮವಾಗಿದೆ. ನಾನು ‘ಥಟ್ ಅಂತ ಹೇಳಿ’ ಎಂದು ಉಚ್ಚರಿಸಿದೆ. ಅದು ಕೂಡಲೇ ದೂರದರ್ಶನದ ಚಂದನ ವಾಹಿನಿಯನ್ನು ತೋರಿಸಿತು. ನಮ್ಮ ಇಷ್ಟದ ಕಾರ್ಯಕ್ರಮ, ಚಾನೆಲ್‌ಗಳನ್ನು ಗುರುತು ಮಾಡಿ ಇಟ್ಟುಕೊಳ್ಳಬಹುದು. ಇಷ್ಟದ ಕಾರ್ಯಕ್ರಮಕ್ಕೆ ಅಲಾರಂ ಕೂಡ ಹಾಕಿ ಇಟ್ಟುಕೊಳ್ಳಬಹುದು.

ಇದರ ಧ್ವನಿ ಪತ್ತೆಹಚ್ಚುವಿಕೆಯ ಸವಲತ್ತು ನಿಜಕ್ಕೂ ಚೆನ್ನಾಗಿದೆ. ಯಾವ ಕಾರ್ಯಕ್ರಮ ಈಗ ಪ್ರಸಾರ ಆಗುತ್ತಿದೆ ಎಂಬುದನ್ನೂ ಅದು ಪತ್ತೆ ಹಚ್ಚಬಲ್ಲುದು. ಆಲಿಸುವಿಕೆಯ ಬಟನ್ ಒತ್ತಿ ಸ್ವಲ್ಪ ಹೊತ್ತು ಕಾದರೆ, ಅದು ಯಾವ ಕಾರ್ಯಕ್ರಮ ಪ್ರಸಾರ ಆಗುತ್ತಿದೆ ಎಂದು ಹೇಳುತ್ತದೆ. ಟಿ.ವಿ. ವಾಲ್ಯೂಮ್ ಸ್ವಲ್ಪ ಜಾಸ್ತಿ ಇರುವುದು ಈ ಪತ್ತೆ ಹಚ್ಚುವಿಕೆ ಕೆಲಸ ಮಾಡಲು ಅಗತ್ಯ. ಬಿಗ್ ಬ್ಯಾಂಗ್ ಥಿಯರಿ ಧಾರಾವಾಹಿ ನೋಡುತ್ತಿರುವಾಗ ಈ ಸವಲತ್ತಿನ ಪರೀಕ್ಷೆ ಮಾಡಿದೆ. ಅದು ಸರಿಯಾಗಿ ತೋರಿಸಿತು.

ಆದರೆ ಕನ್ನಡ ಧಾರಾವಾಹಿಗಳನ್ನು ಪತ್ತೆ ಹಚ್ಚಲು ಅದಕ್ಕೆ ಸಾಧ್ಯವಾಗಲಿಲ್ಲ. ನಮ್ಮ ಮನೆಯಲ್ಲಿರುವ ಪ್ಯಾನಾಸೋನಿಕ್ ಟಿ.ವಿ.ಯನ್ನು ಅದಕ್ಕೆ ನಿಯಂತ್ರಿಸಲು ಆಗಲಿಲ್ಲ. ಅದೇನೂ ದೊಡ್ಡ ತೊಂದರೆಯಲ್ಲ. ಯಾಕೆಂದರೆ ಒಮ್ಮೆ ಟಿ.ವಿ.ಯನ್ನು ಆನ್ ಮಾಡಿದರೆ ನಂತರ ಎಲ್ಲ ನಿಯಂತ್ರಣವೂ ಡಿ.ಟಿ.ಎಚ್.ನಲ್ಲೇ ಆಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ₹999 ಬೆಲೆಗೆ ಒಂದು ಉತ್ತಮ ಗ್ಯಾಜೆಟ್ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.