ಕೆಲವರಿಗೆ ತಮ್ಮ ಫೋಟೊವನ್ನು ತಾವೇ ತೆಗೆದು ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಚಟ ಇದೆ. ತನ್ನ ಫೋಟೊ ತಾನೇ ತೆಗೆದಾಗ ಅದು ಸೆಲ್ಫೀ (selfie) ಆಗುತ್ತದೆ. ಇದು ಕ್ಯಾಮೆರಾ ಬಳಸಿ ಅಥವಾ ಸ್ಮಾರ್ಟ್‌ಫೋನ್ ಬಳಸಿ ತೆಗೆದಿರಬಹುದಾದರೂ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಬಳಕೆಗೇ ಇದು ಹೆಚ್ಚು ಅನ್ವಯವಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಸಮಯ ಹಾಳುಮಾಡುವ ಬೇಕಾದಷ್ಟು ಗುಂಪುಗಳಿವೆ. ಅವುಗಳ ಮಧ್ಯದಲ್ಲಿ ಕೆಲವು ಉತ್ತಮ ಗುಂಪುಗಳೂ ಇವೆ. ಪದಾರ್ಥ ಚಿಂತಾಮಣಿ ಅಂತಹ ಒಂದು ತಂಡ. ಅದರಲ್ಲಿ ಚರ್ಚೆಯಾಗಿ ಸೆಲ್ಫೀಗೆ ಪರ್ಯಾಯ ಎಂದು ತೀರ್ಮಾನವಾದ ಪದ ಸ್ವಂತೀ. ತುಂಬ ಜನ ಈ ಪದವನ್ನು ಈಗಾಗಲೇ ಬಳಸುತ್ತಿದ್ದಾರೆ.
ಅತಿಯಾಗಿ ಸ್ವಂತೀ ತೆಗೆಯುವುದು, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚುವುದು ಒಂದು ಮಾನಸಿಕ ಅಸ್ವಸ್ಥತೆ ಎಂಬುದಾಗಿ ಅಮೆರಿಕದ ಮನಶಾಸ್ತ್ರಜ್ಞರ ಒಕ್ಕೂಟ ಹೇಳಿದೆ ಎಂದು ವರದಿಯಾಗಿತ್ತು. ನಂತರ ಅದು ಸುಳ್ಳು, ಆ ಸಂಸ್ಥೆ ಹಾಗೆ ಹೇಳಿಯೇ ಇರಲಿಲ್ಲ ಎಂದೂ ವರದಿಯಾಗಿತ್ತು. ಇವೆಲ್ಲವನ್ನೂ ಇದೇ ಅಂಕಣದಲ್ಲಿ ವರದಿ ಮಾಡಲಾಗಿತ್ತು. ಅಂದರೆ ಸ್ವಂತೀ ತೆಗೆಯಿರಿ, ಹಂಚಿರಿ, ಚಿಂತೆಯಿಲ್ಲ ಎನ್ನಬಹುದು. ಆದರೂ ಅತಿಯಾಗಿ ಸ್ವಂತೀ ಒಂದು ರೀತಿ ನಿಮ್ಮ ಆಪ್ತರಿಗೆ ಕಿರಿಕಿರಿಯಾಗುವುದಂತೂ ಸಹಜ.
ಒಂದು ಖ್ಯಾತ ಸುಂದರ ಸ್ಮಾರಕ, ಮನಸೆಳೆಯುವ ಪ್ರಕೃತಿ ಸೌಂದರ್ಯದ ಬೀಡು, ಶಿಲ್ಪಕಲೆಗಳ ದೇವಸ್ಥಾನ ಮುಂತಾದ ಸ್ಥಳಗಳ ಮುಂದೆ ನಿಂತು ಸ್ವಂತೀ ತೆಗೆಯುವುದು ಏನೂ ಕೆಟ್ಟ ಚಾಳಿಯಲ್ಲ. ಇತ್ತೀಚೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮಾತಿನ ಸ್ಫೂರ್ತಿಯಿಂದ ಹಲವು ಮಂದಿ ತಮ್ಮ ಮಗಳ ಜೊತೆ ಸ್ವಂತೀ ತೆಗೆದು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಅವೆಲ್ಲವೂ ಸರಿಯೇ. ಈಗ ನಾವು ಅವನ್ನು ತೆಗೆಯುವುದು ಹೇಗೆ ಎಂಬ ಬಗ್ಗೆ ಗಮನ ಹರಿಸೋಣ.
ಬಹುತೇಕ ಸ್ಮಾರ್ಟ್‌ಫೋನ್‌ಗಳಿಗೆ ಸ್ವಂತೀ ತೆಗೆಯಲು ಅನುವು ಮಾಡಿಕೊಡುವ ಹಲವು ಕಿರುತಂತ್ರಾಂಶಗಳಿವೆ (ಆಪ್). ಅವುಗಳಲ್ಲಿ ಹೆಚ್ಚಿನವು ಬಟನ್ ಒತ್ತಿದ ಸ್ವಲ್ಪ ಸಮಯ, ಅಂದರೆ 5ರಿಂದ 10 ಸೆಕೆಡಿನ ನಂತರ ಫೋಟೊ ತೆಗೆಯುತ್ತವೆ. ಎಲ್ಲ ಕ್ಯಾಮೆರಾಗಳಲ್ಲೂ ಈ ಸೌಕರ್ಯ ಇದೆ. ಇನ್ನು ಕೆಲವು ಕಿರುತಂತ್ರಾಂಶಗಳು ನೀವು ಮುಗುಳ್ನಗು ಬೀರಿದಾಗ ಮಾತ್ರ ಫೋಟೊ ತೆಗೆಯುತ್ತವೆ. ಇವೆಲ್ಲಕ್ಕಿಂತ ಹೆಚ್ಚು ಉಪಯುಕ್ತ ಸ್ವಂತೀ ಕೋಲುಗಳು (selfie stick).
ಸ್ವಂತೀ ಕೋಲುಗಳು
ಇವು ಟೆಲಿಸ್ಕೋಪ್ ಮಾದರಿಯಲ್ಲಿ ಅಥವಾ ರೇಡಿಯೊದ ಆಂಟೆನಾ ಮಾದರಿಯಲ್ಲಿದ್ದು, ಕೊಳವೆಗಳನ್ನು ಒಂದರ ಒಳಗೆ ಒಂದು ಸೇರಿಸಿಟ್ಟು ಬೇಕಾದಾಗ ಅವನ್ನು ಎಳೆದು ಉದ್ದ ಕೋಲಿನಾಕಾರಕ್ಕೆ ತರಬಲ್ಲಂಥವು. ಒಂದು ತುದಿಯನ್ನು ಕೈಯಲ್ಲಿ ಹಿಡಿದುಕೊಳ್ಳುವುದು. ಇನ್ನೊಂದು ತುದಿಯಲ್ಲಿ ಸ್ಮಾರ್ಟ್‌ಫೋನನ್ನು ಜೋಡಿಸಲು ಕ್ಲಾಂಪ್ ಇದೆ. ಅದನ್ನು ಎಳೆದು ನಿಮ್ಮ ಫೋನಿನ ಗಾತ್ರಕ್ಕೆ ತಕ್ಕಂತೆ ಅಗಲ ಮಾಡಿಕೊಳ್ಳಬಹುದು. ಅದರಲ್ಲಿ ಫೋನನ್ನು ಇಟ್ಟು ಅದನ್ನು ಸ್ವಂತೀ ಕೋಲಿಗೆ ಸ್ಕ್ರೂ ಮೂಲಕ ಜೋಡಿಸಲಾಗುತ್ತದೆ.
ಇಂತಹ ಸ್ವಂತೀ ಕೋಲುಗಳ ಒಂದು ಸಾಧಕವೆಂದರೆ ಅದರ ಜೊತೆ ದೊರೆಯುವ ಈ ಕ್ಲಾಂಪನ್ನು ನಿಮ್ಮಲ್ಲಿ ಕ್ಯಾಮೆರಾ ಸ್ಟ್ಯಾಂಡ್ (ಟ್ರೈಪಾಡ್) ಇದ್ದಲ್ಲಿ ಅದಕ್ಕೂ ಜೋಡಿಸಬಹುದು. ಬಹುತೇಕ ಸ್ವಂತೀ ಕೋಲುಗಳ ಜೊತೆ ಬ್ಲೂಟೂತ್ ಮೂಲಕ ಕೆಲಸ ಮಾಡುವ ದೂರನಿಯಂತ್ರಕವೂ ದೊರೆಯುತ್ತದೆ.
ಸ್ಮಾರ್ಟ್‌ಫೋನುಗಳಲ್ಲಿ ಕೆಲಸ ಮಾಡುವ ಕ್ಯಾಮೆರಾ360 ಎಂಬ ಕಿರುತಂತ್ರಾಂಶ ಅಥವಾ ಇತರೆ ಕೆಲವು ಕ್ಯಾಮೆರಾ ಕಿರುತಂತ್ರಾಂಶಗಳನ್ನು ಈ ದೂರನಿಯಂತ್ರಕದ ಮೂಲಕ ಬಳಸಬಹುದು. ಅಂದರೆ ಸ್ವಂತೀ ಕೋಲಿನ ತುದಿಗೆ ಸ್ಮಾರ್ಟ್‌ಫೋನ್ ಜೋಡಿಸಿ ಈ ಬ್ಲೂಟೂತ್ ದೂರನಿಯಂತ್ರಕದ ಮೂಲಕ ಕ್ಲಿಕ್ ಮಾಡಬಹುದು. ಇನ್ನೂ ಒಂದು ಕೆಲಸ ನೀವು ಮಾಡಬಹುದು. ಕ್ಲಾಂಪನ್ನು ಟ್ರೈಪಾಡ್‌ಗೂ ಜೋಡಿಸಬಹುದು ಎಂದೆನಲ್ಲ? ಹಾಗೆ ಜೋಡಿಸಿ ಆಗಲೂ ಬ್ಲೂಟೂತ್ ದೂರನಿಯಂತ್ರಕದ ಮೂಲಕ ಕ್ಲಿಕ್ ಮಾಡಿ ನಿಮ್ಮ ಫೋಟೊ ನೀವೇ ತೆಗೆಯಬಹುದು.
ಈ ರೀತಿ ಜೋಡಿಸಿ ಕ್ಯಾಮ್‌ಸ್ಕ್ಯಾನರ್ (CamScanner) ಎಂಬ ಕಿರುತಂತ್ರಾಂಶ ಬಳಸಿ ಪುಸ್ತಕಗಳ ಪುಟಗಳನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಆಗಿ ಪರಿವರ್ತಿಸಬಹುದು. ಇಂತಹ ಎಲ್ಲ ಸವಲತ್ತುಗಳನ್ನು ನೀಡುವ ಒಂದು ಸ್ವಂತೀ ಕೋಲು ಸೌಂಡ್‌ಲಾಜಿಕ್‌ನವರ ಐಟೆಕ್ ಸ್ವಂತೀ ಕೋಲು (Soundlogic itek Selfie Stick). ಇದರ ನಿಗದಿತ ಬೆಲೆ ₹999. ಇದು ಸ್ವಂತೀ ಕೋಲು, ಕ್ಲಾಂಪ್ ಮತ್ತು ಬ್ಲೂಟೂತ್ ದೂರನಿಯಂತ್ರಕದ ಜೊತೆ ದೊರೆಯುತ್ತದೆ. ನನ್ನಲ್ಲಿದೆ. ಚೆನ್ನಾಗಿದೆ ಎನ್ನಬಹುದು.
ಇದರ ಒಂದು ಪ್ರಮುಖ ದೋಷವೆಂದರೆ ಕೋಲನ್ನು ಪೂರ್ತಿ ಉದ್ದ ಮಾಡಿ ತುಂಬ ತೂಕದ ಫೋನನ್ನು ಜೋಡಿಸಿದಾಗ ಇದು ತನ್ನ ಅಕ್ಷದಲ್ಲಿ ತಿರುಗುತ್ತದೆ. ಅಂದರೆ ಕ್ಯಾಮೆರಾ ಕೆಳಮುಖವಾಗುತ್ತದೆ! ಇದೇ ಸವಲತ್ತುಗಳನ್ನು ನೀಡುವ ಕೆಲವು ಸ್ವಂತೀ ಕೋಲುಗಳು ₹300ಕ್ಕೂ ದೊರೆಯುತ್ತವೆ. ಅವುಗಳ ಗುಣಮಟ್ಟ ಹೇಗಿದೆ ಎಂದು ನನಗೆ ಗೊತ್ತಿಲ್ಲ.
ಇನ್ನು ಕೆಲವು ಸ್ವಂತೀ ಕೋಲುಗಳಲ್ಲಿ ಜೋಡಿಸಬಲ್ಲ, ಕಳಚಬಲ್ಲ ಕ್ಲಾಂಪ್ ಇರುವುದಿಲ್ಲ. ಬದಲಿಗೆ ಈ ಕ್ಲಾಂಪ್ ಸ್ವಂತೀ ಕೋಲಿಗೇ ಶಾಶ್ವತವಾಗಿ ಜೋಡಣೆಯಾಗಿರುತ್ತವೆ. ಸ್ವಂತೀ ಕೋಲಿನಲ್ಲೇ ಬ್ಲೂಟೂತ್ ಸೌಲಭ್ಯವಿದ್ದು, ಕೈಯಲ್ಲಿ ಹಿಡಿಯುವ ಭಾಗದಲ್ಲಿ ಅದರ ಬಟನ್ ಇರುತ್ತದೆ. ಅಂದರೆ ಇಂತಹ ಸ್ವಂತೀ ಕೋಲುಗಳು ಸ್ಮಾರ್ಟ್‌ಫೋನ್ ಜೊತೆ ಸ್ವಂತೀ ತೆಗೆಯಲು ಮಾತ್ರ ಬಳಸಬಹುದು.
ಅಂತಹ ಒಂದು ಸ್ವಂತೀ ಕೋಲು ಶಿಯೋಮಿಯವರ ಎಂಐ (Xiaomi Mi Selfie Stick). ಇದರ ತಯಾರಿಕೆಯ ಗುಣಮಟ್ಟ ತುಂಬ ಚೆನ್ನಾಗಿದೆ. ಎಷ್ಟೇ ದೊಡ್ಡ ಅಥವಾ ತೂಕದ ಫೋನ್ ಜೋಡಿಸಿದರೂ ಇದು ತನ್ನ ಅಕ್ಷದಲ್ಲಿ ತಿರುಗುವುದಿಲ್ಲ. ಆದರೆ ಇದನ್ನು ಸ್ಮಾರ್ಟ್‌ಫೋನ್ ಜೊತೆ ಬಳಸಿ ಸ್ವಂತೀ ತೆಗೆಯುವುದು ಬಿಟ್ಟರೆ ಬೇರೆ ಏನೂ ಮಾಡಲು ಸಾಧ್ಯವಿಲ್ಲ. ಇದೂ ನನ್ನಲ್ಲಿದೆ. ಚೆನ್ನಾಗಿದೆ. ಸುಮಾರು ₹500 ಬೆಲೆಬಾಳುವ ಇದು ಸದ್ಯ ಭಾರತದಲ್ಲಿ ಲಭ್ಯವಿಲ್ಲ.
***
ವಾರದ ಆಪ್
ಸ್ವಂತೀ ಕ್ಯಾಮೆರಾ
ಸ್ವಂತೀ ತೆಗೆಯಲು ಅನುವು ಮಾಡಿಕೊಡುವ ಕಿರುತಂತ್ರಾಂಶಗಳು (ಆಪ್) ಹಲವಾರಿವೆ. ಅಂತಹ ಒಂದು ಕಿರುತಂತ್ರಾಂಶ ನಿಮ್ಮ ಕ್ಯಾಮೆರಾ ಅಲುಗಾಡದೆ ಸ್ಥಿರವಾಗಿದ್ದಾಗ ಮಾತ್ರ ಕ್ಲಿಕ್ ಮಾಡುವಂತಹದ್ದು. ಅದು Stable Camera (selfie stick). ಅದನ್ನು ಬೇಕಿದ್ದರೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ Stable Camera ಎಂದು ಹುಡುಕಿದರೆ ಸಿಗುತ್ತದೆ ಅಥವಾ bitly.com/gadgetloka183 ಕೊಂಡಿಯ ಮೂಲಕವೂ ಪಡೆಯಬಹುದು. ಇದು ನಿಮಗೆ ಸ್ವಂತೀ ತೆಗೆಯಲು ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ.
ಪರದೆಯ ಎಡಗಡೆ ಒಂದು ಪಟ್ಟಿಯಾಕಾರದಲ್ಲಿ ಯಾವಾಗ ಕ್ಯಾಮೆರಾ ಕ್ಲಿಕ್ ಆಗುತ್ತದೆ ಎಂಬುದರ ಸೂಚನೆ ನೀಡುತ್ತದೆ. 5, 4, 3, 2, 1 ಎಂದು ಎಣಿಕೆಯ ಮೂಲಕವೂ ಸೂಚನೆ ನೀಡುತ್ತದೆ. ಈ ಕಿರುತಂತ್ರಾಂಶದಲ್ಲಿ ಇತರೆ ಬಹುಪಾಲು ಕ್ಯಾಮೆರಾ ಕಿರುತಂತ್ರಾಂಶಗಳಲ್ಲಿರುವ ಹಲವು ಸವಲತ್ತುಗಳೂ ಇವೆ. ಅಂತಹ ಅದ್ಭುತ ಕಿರುತಂತ್ರಾಂಶವೇನಲ್ಲ. ಸ್ವಂತೀ ತೆಗೆಯುವ ಚಟವಿದ್ದವರಿಗೆ ಉತ್ತಮ.
***
ಗ್ಯಾಜೆಟ್ ಸುದ್ದಿ
ಸ್ವಂತೀ ಕೋಲಿನಿಂದಾಗಿ ಜೀವ ಉಳಿಯಿತು
ಸ್ವಂತೀ ತೆಗೆಯಲು ಹೋಗಿ ಹಲವು ರೀತಿಯಲ್ಲಿ ತೊಂದರೆಗೊಳಗಾದವರ ಹಾಗೂ ಪ್ರಾಣವನ್ನೇ ಕಳೆದುಕೊಂಡವರ ಕತೆ ಕೇಳಿರಬಹುದು. ಅಮೆರಿಕದ ಟೆಕ್ಸಾಸ್ ರಾಜ್ಯದ ಡೆರಿಕ್ ಜಾನ್ಸ್ ಎಂಬುವರು ತಮ್ಮ ಹೆಂಡತಿ ಮತ್ತು ಮಗಳ ಜೊತೆ ಈಜುತ್ತಿದ್ದಾಗ ಸ್ವಂತೀ ಕೋಲಿನಿಂದಾಗಿ ಅಪಾಯದಿಂದ ಪಾರಾದ ಕತೆ ವರದಿಯಾಗಿದೆ. ಅವರು ಮಗಳ ಜೊತೆ ಸಮುದ್ರದಲ್ಲಿ ಈಜುತ್ತ ಸ್ವಂತೀ ಕೋಲು ಬಳಸಿ ಗೋಪ್ರೋ ಮೂಲಕ ಸಮುದ್ರ ಕಿನಾರೆಯ ಫೋಟೊಗಳನ್ನೂ ತೆಗೆಯುತ್ತಿದ್ದರು.
ಆಗ ಅವರು ಅಲೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರು. ಸ್ವತಃ ನಾವಿಕರಾಗಿರುವ ಡೆರೆಕ್ ಅವರಿಗೆ ಈಜಿ ಸುಳಿಯಿಂದ ಹೊರಗೆ ಬರುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಮಗಳನ್ನು ರಕ್ಷಿಸಬೇಕಿತ್ತು. ಸುಳಿಸುಳಿಯಾಗಿ ಸುತ್ತುತ್ತಿದ್ದ ಅಲೆಗಳಿಂದಾಗಿ ಅವರಿಗೆ ಮಗಳು ಹತ್ತಿರದಲ್ಲೇ ಇದ್ದರೂ ಅವರ ಕೈಗೆ ಸಿಗುತ್ತಿರಲಿಲ್ಲ. ಆಗ ಅವರ ಸಹಾಯಕ್ಕೆ ಬಂದುದು ಅವರು ಬಳಸುತ್ತಿದ್ದ ಸ್ವಂತೀ ಕೋಲು. ಅದನ್ನು ಹಿಡಿದುಕೊಳ್ಳಲು ಮಗಳಿಗೆ ಹೇಳಿ ಅದರ ಮೂಲಕ ಅವರು ಮಗಳನ್ನು ಸುರಕ್ಷಿತವಾಗಿ ಕಿನಾರೆಗೆ ಎಳೆದುಕೊಂಡರು.
***
ಗ್ಯಾಜೆಟ್ ಸಲಹೆ
ಹರೀಶ ಬಾಬು ಅವರ ಪ್ರಶ್ನೆ: ನನಗೆ ಒಂದೇ ಐ.ಪಿ ಅಡ್ರಸ್ (Static IP address) ಇರುವ ಮೋಡೆಮ್ ಬೇಕಿದೆ. ದಯವಿಟ್ಟು
ಸಲಹೆ ನೀಡಿ.
ಉ: ಐ.ಪಿ. ವಿಳಾಸ ಎಂದರೆ ಅಂತರಜಾಲ ಜೋಡಣೆಯಾಗಿರುವ ನಿಮ್ಮ ಸಾಧನಕ್ಕೆ ಆ ಸಮಯಕ್ಕೆ ನಿಗದಿಯಾಗಿರುವ ಸಂಖ್ಯೆ. ಇದನ್ನು ಇಂಗ್ಲಿಷಿನಲ್ಲಿ Internet Protocol address ಎನ್ನುತ್ತಾರೆ. ಇದು ನಿಮ್ಮ ಅಂತರಜಾಲ ಸಂಪರ್ಕ ಸೇವೆ ನೀಡುವ ಕಂಪೆನಿ ನೀಡುವ ಸಂಖ್ಯೆ. ಸಾಮಾನ್ಯವಾಗಿ ಇದು ಪ್ರತಿ ಸಲ ಸಂಪರ್ಕಗೊಂಡಾಗಲೂ ಬೇರೆ ಬೇರೆ ಆಗಿರುತ್ತದೆ (dynamic IP). ನಿಮಗೆ ಸ್ಥಿರ ಅಂತರಜಾಲ ವಿಳಾಸ (Static IP address) ಬೇಕಿದ್ದಲ್ಲಿ ನಿಮಗೆ ಅಂತರಜಾಲ ಸಂಪರ್ಕ ಸೇವೆ ನೀಡುವ ಕಂಪೆನಿಯನ್ನು ಕೇಳಿ.
ಅಂತಹ ಸಂಪರ್ಕವನ್ನು ಬಹುತೇಕ ಎಲ್ಲ ಕಂಪೆನಿಗಳವರು ನೀಡುತ್ತಾರೆ. ಅದಕ್ಕೆ ಜಾಸ್ತಿ ಹಣ ನೀಡಬೇಕಾಗುತ್ತದೆ. ಆದರೆ ಈ ಸ್ಥಿರ ಐಪಿ ವಿಳಾಸ ಬಳಸುವ ವಿಷಯದಲ್ಲಿ ತುಂಬ ಎಚ್ಚರಿಕೆ ಅಗತ್ಯ. ಅದನ್ನು ಬಳಸಬೇಕಾದಲ್ಲಿ ನೀವು ನಿಜವಾದ ಪರಿಣತರಾಗಿದ್ದು ನಿಮ್ಮ ಗಣಕಕ್ಕೆ ಅಂತರಜಾಲದ ಮೂಲಕ ಲಗ್ಗೆ ಹಾಕದಂತೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಲು (Firewall) ತಿಳಿದವರಾಗಿರಬೇಕು.
***
ಗ್ಯಾಜೆಟ್ ತರ್ಲೆ
ಮಹಾಭಾರತದ ಕಾಲದಲ್ಲಿ ಮೊಬೈಲ್ ಫೋನಿದ್ದಿದ್ದರೆ ಏನಾಗುತ್ತಿತ್ತು?
1. ಮೇಘನಿಗೆ ಕೆಲಸವಿರುತ್ತಿರಲಿಲ್ಲ. ಯಕ್ಷ ತನ್ನ ಪ್ರೇಯಸಿಗೆ ನೇರವಾಗಿ ಫೋನ್ ಮಾಡುತ್ತಿದ್ದ. ಮೇಘಸಂದೇಶ ಎಂಬ ಪದ ಹುಟ್ಟುತ್ತಿರಲಿಲ್ಲ.
2. ಹಂಸಕ್ಕೆ ಕೆಲಸ ಇರುತ್ತಿರಲಿಲ್ಲ. ನಳ ದಮಯಂತಿಗೆ ನೇರವಾಗಿ ಫೋನ್ ಮಾಡುತ್ತಿದ್ದ. ಅಂಚೆ ಕಚೇರಿ ಎಂಬ ಪದವೇ ಹುಟ್ಟುತ್ತಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.