ADVERTISEMENT

ಸ್ವಲ್ಪ ಸುಧಾರಿತ ಎ1 ಫೋನ್

ಯು.ಬಿ ಪವನಜ
Published 16 ಆಗಸ್ಟ್ 2017, 19:30 IST
Last Updated 16 ಆಗಸ್ಟ್ 2017, 19:30 IST
ಸ್ವಲ್ಪ ಸುಧಾರಿತ ಎ1 ಫೋನ್
ಸ್ವಲ್ಪ ಸುಧಾರಿತ ಎ1 ಫೋನ್   

ಭಾರತದಲ್ಲಿ ಮಾರಾಟವಾಗುತ್ತಿರುವ ಚೀನಾ ದೇಶದ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋನೀ  ಕೂಡಒಂದು. ಗ್ಯಾಜೆಟ್‌ಲೋಕ ಅಂಕಣದಲ್ಲಿ ವಿಮರ್ಶೆ ಮಾಡುತ್ತಿರುವ ಬಹುತೇಕ ಫೋನ್‌ಗಳೂ ಚೀನಾದವೇ.

ಕೆಲವರು ತಮ್ಮ ಫೋನ್‌ಗಳನ್ನು ಸೆಲ್ಫೀ ಸ್ಪೆಶಲ್ ಎಂದು ಮಾರಾಟ ಮಾಡುತ್ತಿದ್ದಾರೆ. ಆ ಸಾಲಿಗೆ ಜಿಯೋನಿಯೂ ಸೇರಿದೆ. ಈ ಕಂಪೆನಿಯ ಸೆಲ್ಫೀ ಸ್ಪೆಶಲ್ ಫೋನ್ ಜಿಯೋನೀ ಎ1 ಫೋನ್‌ ಅನ್ನು ಈ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅದರದೇ ಸ್ವಲ್ಪ ಸುಧಾರಿತ ಆವೃತ್ತಿ ಜಿಯೋನೀ ಎ1 ಪ್ಲಸ್ (Gionee A1 Plus) ಎಂಬ ಫೋನನ್ನು.

ರಚನೆ ಮತ್ತು ವಿನ್ಯಾಸದಲ್ಲಿ ಹೇಳಿಕೊಳ್ಳುವಂತಹ ವೈಶಿಷ್ಟ್ಯವೇನಿಲ್ಲ. ಇತ್ತೀಚೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆ ಇದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡಭಾಗದಲ್ಲಿ ಸಿಮ್ ಕಾರ್ಡ್‌ಗಳನ್ನು ಹಾಕಲು, ಪಿನ್‌ ಮೂಲಕ ಚುಚ್ಚಿದಾಗ ಹೊರಬರುವ ಚಿಕ್ಕ ಟ್ರೇ ಇದೆ. ಈ ಟ್ರೇಯಲ್ಲಿ ಒಂದು ಮೈಕ್ರೊಸಿಮ್ ಮತ್ತು ಮೆಮೊರಿ ಕಾರ್ಡ್‌ ಹಾಕಬಹುದು ಅಥವಾ ಒಂದು ಮೈಕ್ರೊ ಸಿಮ್ ಮತ್ತು ಒಂದು ನ್ಯಾನೋ ಸಿಮ್ ಹಾಕಬಹುದು. ಎದುರುಗಡೆ ಕೆಳಭಾಗದಲ್ಲಿ ಸಾಫ್ಟ್‌ ಬಟನ್‌ಗಳಿವೆ.

ADVERTISEMENT

ಎದುರುಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಇದೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್‌ ಕಿಂಡಿ ಇದೆ. ಹಿಂಭಾಗದಲ್ಲಿ ಮಧ್ಯದಲ್ಲಿ ಎರಡು ಕ್ಯಾಮೆರಾಗಳಿವೆ. ಅವುಗಳ ಪಕ್ಕದಲ್ಲಿ ಫ್ಲಾಶ್ ಇದೆ. ಹಿಂಭಾಗದ ಕವಚ ತುಂಬ ನುಣುಪೂ ಅಲ್ಲ, ತುಂಬ ದೊರಗೂ ಅಲ್ಲ ಎನ್ನಬಹುದು. ಬದಿಗಳಲ್ಲಿ ಸ್ವಲ್ಪ ಬಾಗಿದೆ. ಕೈಯಲ್ಲಿ ಹಿಡಿದುಕೊಂಡಾಗ ಒಂದು ಮೇಲ್ದರ್ಜೆಯ ಫೋನನ್ನು ಹಿಡಿದುಕೊಂಡ ಅನುಭವವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಫೋನಿನ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಈ ವಿಭಾಗದಲ್ಲಿ ಇದಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಇದರ ಪ್ರೊಸೆಸರ್ ವೇಗ ತುಂಬ ಹೆಚ್ಚೂ ಅಲ್ಲ, ಅತಿ ಕಡಿಮೆಯೂ ಅಲ್ಲ. ಅಂಟುಟು ಬೆಂಚ್‌ಮಾರ್ಕ್ 65,128 ಇದೆ. ಆದರೆ ದೈನಂದಿನ ಚಟುವಟಿಕೆಗಳಲ್ಲಿ ಇದು ಕಡಿಮೆ ವೇಗದ ಫೋನ್ ಎಂದು ಅನ್ನಿಸುವುದಿಲ್ಲ. ಸಾಮಾನ್ಯ ಆಟಗಳನ್ನು ಆಡುವ ಅನುಭವ ಚೆನ್ನಾಗಿಯೇ ಇದೆ. ತುಂಬ ಹೊತ್ತು ಬಳಸಿದರೆ ಬಿಸಿಯಾಗುವುದಿಲ್ಲ.

ಈಗಾಗಲೇ ಹೇಳಿದಂತೆ ಇದು ಇವರದೇ ಎ1ಗೆ ಉತ್ತರಾಧಿಕಾರಿಯಾಗಿ ಬಂದುದು. ಅದರಲ್ಲಿರುವಂತೆ ಇದರಲ್ಲೂ ಸ್ವಂತೀ ಕ್ಯಾಮೆರಾಕ್ಕೆ ವಿಶೇಷ ಗಮನ ಹರಿಸಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 13 ಮತ್ತು 5 ಮೆಗಾಪಿಕ್ಸೆಲ್‌ ರೆಸೊಲೂಶನ್‌ನವು. ಅದರ ಕಿರುತಂತ್ರಾಂಶದಲ್ಲಿ (ಆ್ಯಪ್) ಹಲವು ವಿಶೇಷ ಸವಲತ್ತುಗಳನ್ನು ನೀಡಿದ್ದಾರೆ.

ನ್ಯುವಲ್ ವಿಧಾನವೂ ಇದೆ. ವಿಶೇಷ ಪೋರ್ಟ್ರೈಟ್ ಮೋಡ್ ಇದೆ. ಇದನ್ನು ಬಳಸಿ ವಸ್ತು ಅಥವಾ ವ್ಯಕ್ತಿಯ ಮೇಲೆ ಫೋಕಸ್ ಮಾಡಿ ಹಿನ್ನೆಲೆಯನ್ನು ಮಸುಕಾಗಿಸಬಹುದು. ಆದರೆ ಕ್ಯಾಮೆರಾದ ಫಲಿತಾಂಶಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಚೆನ್ನಾಗಿ ಬರುತ್ತವೆ. ಕೆಲವೊಮ್ಮೆ ಫೋಕಸ್ ಮಾಡಲು ಸ್ವಲ್ಪ ಕಷ್ಟಪಡುತ್ತದೆ.

ಕಡಿಮೆ ಬೆಳಕಿನಲ್ಲೂ ಫೋಟೊ ಅಷ್ಟೇನೂ ಚೆನ್ನಾಗಿ ಬರುವುದಿಲ್ಲ. ಸ್ವಂತೀ ಫೋಟೊಗಳು ಚೆನ್ನಾಗಿ ಬರುತ್ತವೆ. ಯಾಕೆಂದರೆ ಸ್ವಂತೀ ಕ್ಯಾಮೆರಾ 20 ಮೆಗಾಪಿಕ್ಸೆಲ್‌ನದು. ಸ್ವಂತೀ ತೆಗೆಯಲೂ ಫ್ಲಾಶ್ ಇರುವ ವಿಶೇಷ ಫೋನ್ ಇದು. ಸ್ವಂತೀ ತೆಗೆಯುವಾಗ ಹಲವು ವಿಶೇಷ ಆಯ್ಕೆಗಳೂ ಇವೆ. ಉತ್ತಮ ಸ್ವಂತೀ ಕ್ಯಾಮೆರಾ ಇರುವ ಫೋನ್‌ಗಳ ಪಟ್ಟಿಗೆ ಇದನ್ನು ಸೇರಿಸಬಹುದು.

ಇದರ ಪರದೆ 6 ಇಂಚು ಗಾತ್ರದ್ದು. ಪರದೆಯ ಗುಣಮಟ್ಟ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳೂ ಪ್ಲೇ ಆಗುತ್ತವೆ. ಇದರ ಆಡಿಯೊ ಇಂಜಿನ್ ಸುಮಾರಾಗಿದೆ. ಇಯರ್‌ಬಡ್ ನೀಡಿದ್ದಾರೆ. ಆದರೆ ಒಂದೇ ಪ್ರತಿ ಕುಶನ್ ನೀಡಿದ್ದಾರೆ. ಇಯರ್‌ಬಡ್‌ನ ಗುಣಮಟ್ಟ ಮಾತ್ರ ಏನೇನೂ ಚೆನ್ನಾಗಿಲ್ಲ.

ಸುಮಾರು ₹200-250ಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಇಯರ್‌ಬಡ್‌ಗಳಿರುವಷ್ಟೇ ಗುಣಮಟ್ಟ ಇದರದ್ದಾಗಿದೆ. ನಿಮ್ಮಲ್ಲಿರುವ ಬೇರೆ ಉತ್ತಮ ಇಯರ್‌ಫೋನ್ ಜೋಡಿಸಿದರೆ ಸ್ವಲ್ಪ ಮಟ್ಟಿಗೆ ಉತ್ತಮ ಎನ್ನುವಂತಹ ಸಂಗೀತ ಆಲಿಸಬಹುದು. ದೊಡ್ಡ ಗಾತ್ರದ ಪರದೆಯಾಗಿರುವುದರಿಂದ ಸಿನಿಮಾ ನೋಡಲು ಇದು ಉತ್ತಮ ಎನ್ನಬಹುದು.

ಇದನ್ನು ನೀವು ಮಕ್ಕಳಿಗೆ ಕೊಡುವುದಿದ್ದಲ್ಲಿ ಕಿಡ್ಸ್ ಮೋಡ್ ಎಂಬ ಆಯ್ಕೆ ಇದೆ. ಈ ವಿಧಾನದಲ್ಲಿ ಯಾವ ಯಾವ ಕಿರುತಂತ್ರಾಂಶಗಳು (ಆ್ಯಪ್) ಕೆಲಸ ಮಾಡಬೇಕು ಎಂದು ನೀವು ಆಯ್ಕೆ ಮಾಡಿಕೊಳ್ಳಬಹುದು.

4550 mAh ಶಕ್ತಿಯ ಬ್ಯಾಟರಿ ಇದೆ. ಆದರೆ ಇಷ್ಟು ಶಕ್ತಿಯ ಬ್ಯಾಟರಿ ಇದೆ ಎಂದು ಅನ್ನಿಸುವುದಿಲ್ಲ. ಒಂದೇ ದಿನದಲ್ಲಿ ಬ್ಯಾಟರಿ ಖಾಲಿಯಾಗುತ್ತದೆ. ಕನ್ನಡ ಭಾಷೆಯ ಯೂಸರ್ ಇಂಟರ್‌ಫೇಸ್ ಇದೆ.

ಒಟ್ಟಿನಲ್ಲಿ ಹೇಳುವುದಾದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುವ ಫೋನ್‌ಗಳಿಗೆ ಹೋಲಿಸಿದರೆ ಇದರ ಗುಣಮಟ್ಟಕ್ಕೂ ಬೆಲೆಗೂ ಹೊಂದಿಕೆಯಾಗುವುದಿಲ್ಲ. ಬೆಲೆ ಸ್ವಲ್ಪ ಜಾಸ್ತಿಯಾಯಿತು ಎಂದೇ ಹೇಳಬಹುದು.

ಗ್ಯಾಜೆಟ್ ಸಲಹೆ ‌
ಸುರೇಶರ ಪ್ರಶ್ನೆ: ಮೊಬೈಲ್ ಫೋನ್ ಚಾರ್ಜ್ ಮಾಡಲು 10000 mAh ಶಕ್ತಿಯ ಉತ್ತಮ ಪವರ್‌ಬ್ಯಾಂಕ್ ಯಾವುದು?
ಉ: ವನ್‌ಪ್ಲಸ್ ಅಥವಾ ಶಿಯೋಮಿ.

ಗ್ಯಾಜೆಟ್ ಸುದ್ದಿ
ಕೈಗೆ ಕಟ್ಟುವ ಆರೋಗ್ಯಪಟ್ಟಿಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಆದರೆ ಈ ಪಟ್ಟಿ ಅಂತಹ ಆರೋಗ್ಯಪಟ್ಟಿಯಲ್ಲ. ಇದು ದೃಷ್ಟಿವಂಚಿತರಿಗೆ ದಾರಿ ಹೇಳಬಲ್ಲ ಪಟ್ಟಿ. ಈ ಸುನು ಬ್ಯಾಂಡ್‌ನ ಒಂದು ಭಾಗದಲ್ಲಿ ಶ್ರವಣಾತೀತ ತರಂಗಗಳನ್ನು ಉತ್ಪಾದಿಸಿ ಅದನ್ನು ಹೊರಸೂಸಲಾಗುತ್ತದೆ.

ಈ ಪಟ್ಟಿಯನ್ನು ಧರಿಸಿದಾತ ಅದನ್ನು ಮುಂದುಗಡೆಗೆ ಹಿಡಿದು ಎದುರುಗಡೆ ಇರುವ ವಸ್ತುಗಳಿಂದ ಈ ಶ್ರವಣಾತೀತ ತರಂಗಗಳು ಪ್ರತಿಫಲಿತವಾಗಿ ಬಂದುದನ್ನು ಅದು ಗ್ರಹಿಸಿ ವಿಶ್ಲೇಷಿಸಿ ಆ ವಸ್ತು ಏನಿರಬಹುದು, ಎಷ್ಟು ದೊಡ್ಡದಿರಬಹುದು ಎಂಬುದನ್ನು ಬೇರೆ ಬೇರೆ ವಿಧಗಳಲ್ಲಿ ಕಂಪಿಸಿ ಸೂಚಿಸುತ್ತದೆ.

ನಾಯಿಯೊಂದಕ್ಕೆ ತನ್ನ ಮನೆಯಲ್ಲಿರುವ ರೂಂಬ ಬುದ್ಧಿವಂತ ಕಸಪೊರಕೆ ಇಷ್ಟವಾಗಿರಲಿಲ್ಲ. ಅದು ಹೇಗೋ ಮಾಡಿ ಅದನ್ನು ನಿಲ್ಲಿಸುವುದನ್ನು ಕಲಿತುಬಿಟ್ಟಿತ್ತು. ಮನೆಯೊಡತಿ ರೂಂಬ ವಾಕ್ಯೂಮ್ ಕ್ಲೀನರ್ ಪ್ರಾರಂಭಿಸಿದಾಗಲೆಲ್ಲ ಈ ನಾಯಿ ಹೋಗಿ ಅದರ ಮೂತಿಯಿಂದ ಆನ್/ಆಫ್ ಬಟನ್ ಒತ್ತಿ ಅದನ್ನು ನಿಲ್ಲಿಸುತ್ತಿತ್ತು.

* ವಾರದ ಅ್ಯಪ್
ಗ್ರಹಣ ಲೆಕ್ಕ ಹಾಕಿ

ಗ್ರಹಣ ಯಾವಾಗ ಸಂಭವಿಸುತ್ತದೆ ಎಂದು ಪಂಚಾಂಗದಲ್ಲಿ ನೀಡಿರುತ್ತಾರೆ. ಎಷ್ಟು ಹೊತ್ತಿಗೆ ಪ್ರಾರಂಭವಾಗಿ ಎಷ್ಟು ಹೊತ್ತಿಗೆ ಮುಗಿಯುತ್ತದೆ ಎಂಬ ಪಟ್ಟಿಯೂ ಇರುತ್ತದೆ. ಆದರೆ ಅದು ಯಾವುದೋ ಒಂದು ನಗರಕ್ಕೆ ಅನ್ವಯವಾಗಿರುತ್ತದೆ. ಸ್ಥಳದಿಂದ ಸ್ಥಳಕ್ಕೆ ಗ್ರಹಣದ ಸಮಯ ಬದಲಾವಣೆಯಾಗುತ್ತದೆ. ನೀವಿರುವ ಸ್ಥಳದಲ್ಲಿ ಯಾವಾಗ ಗ್ರಹಣ ಆಗುತ್ತದೆ. ಅದು ಎಷ್ಟು ಸಮಯ ಇರುತ್ತದೆ. ಪಾರ್ಶ್ವಗ್ರಹಣ ಯಾವಾಗ, ಪೂರ್ಣಗ್ರಹಣ ಯಾವಾಗ, ಇತ್ಯಾದಿ ಮಾಹಿತಿ ಬೇಕಾ? ಹಾಗಿದ್ದರೆ ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Eclipse Calculator 2 ಎಂದು ಹುಡುಕಿ ಅಥವಾ bit.ly/gadgetloka291 ಜಾಲತಾಣಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.