ADVERTISEMENT

ಇನ್ನೊಂದು ಕಡಿಮೆ ಬೆಲೆಯ ಫೋನ್‌

ಟೆಕ್ನೊ ಕಮೊನ್ ಐಏಸ್

ಯು.ಬಿ ಪವನಜ
Published 26 ಸೆಪ್ಟೆಂಬರ್ 2018, 19:30 IST
Last Updated 26 ಸೆಪ್ಟೆಂಬರ್ 2018, 19:30 IST
   

ಹಾಂಗ್‌ಕಾಂಗ್ ಮೂಲದ ಟ್ರಾನ್ಶನ್ ಹೋಲ್ಡಿಂಗ್ ಟೆಕ್ನೊ, ಇನ್‌ಫಿನಿಕ್ಸ್ ಮತ್ತು ಐಟೆಲ್ ಹೆಸರುಗಳಲ್ಲಿ ಕಡಿಮೆ ಬೆಲೆಯ ಫೋನ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಟೆಕ್ನೊ ಮೊಬೈಲ್ 2006ರಲ್ಲಿ ಭಾರತವನ್ನು ಪ್ರವೇಶಿಸಿತು. ಇತ್ತೀಚೆಗೆ ಹಲವು ಕಂಪನಿಗಳು ಮಾಡುತ್ತಿರುವಂತೆ ಈ ಕಂಪನಿಯೂ ರೂ 10 ಸಾವಿರದಿಂದ 15 ಸಾವಿರ ಒಳಗಡೆಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟು ಫೋನ್‌ಗಳನ್ನು ತಯಾರಿಸಿದೆ. ಈ ವಾರ ನಾವು ವಿಮರ್ಶೆ ಮಾಡುತ್ತಿರುವುದು ಟೆಕ್ನೊ ಕಮೊನ್ ಐಏಸ್ (Tecno Camon IAce) ಫೋನನ್ನು.

ಇದೊಂದು ಕಡಿಮೆ ಬೆಲೆಯ ಫೋನ್. ವಿಮರ್ಶೆ ಮಾಡುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ಕಿನ ದೇಹವಿದೆ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಮೈಕ್ರೊ ಯುಎಸ್‌ಬಿ ಕಿಂಡಿಗಳಿವೆ. ಹಿಂಭಾಗದಲ್ಲಿ ಮೂಲೆಯಲ್ಲಿ ಕ್ಯಾಮೆರಾಮತ್ತು ಅದರ ಕೆಳಗಡೆ ಫ್ಲಾಶ್ ಇದೆ. ಹಿಂಭಾಗದ ಕವಚ ತೆಗೆಯಬಹುದು. ಹೀಗೆ ತೆಗೆದಾಗ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಜಾಗಗಳು ಕಂಡುಬರುತ್ತವೆ. ಆದರೆ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ. ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ. ಹಿಂಭಾಗದ ಕವಚ ಬದಿಗಳಲ್ಲಿ ವಕ್ರವಾಗಿದೆ. ತುಂಬ ನಯವೂ ಅಲ್ಲ, ದೊರಗೂ ಅಲ್ಲದ ಕವಚ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಪರವಾಗಿಲ್ಲ. ನೀಡುವ ಹಣಕ್ಕೆ ತಕ್ಕಂತಿದೆ.

ಇದು ಕಡಿಮೆ ಬೆಲೆಯ ಫೋನ್. ಅಂತೆಯೇ ಇದರಲ್ಲಿರುವುದು ಮೇಲ್ದರ್ಜೆಯ ಪ್ರೊಸೆಸರ್‌ ಅಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ ಕೇವಲ 43,897 ಇದೆ. ಅಂದರೆ ಇದು ವೇಗದ ಫೋನ್ ಅಲ್ಲ. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡಬಹುದು. ಆದರೆ ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವುದಕ್ಕೆ ಇದು ತಕ್ಕುದಲ್ಲ. ಆದರೂ ಕೆಲವು ಆಟಗಳನ್ನು ಒಂದು ಮಟ್ಟಿಗೆ ಆಡಬಹುದಾದರೂ ಇದರ ಸಂವೇದನೆ ವೇಗವಾಗಿಲ್ಲ.

ADVERTISEMENT

ಇದರಲ್ಲಿ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾಗಳಿವೆ. ಪ್ರಾಥಮಿಕ ಕ್ಯಾಮೆರಾದ ಗುಣಮಟ್ಟ ಸುಮಾರಾಗಿದೆ. ಬಹುತೇಕ ಕಡಿಮೆ ಬೆಲೆಯ ಫೋನ್‌ಗಳಂತೆ ಇದರ ಕ್ಯಾಮೆರಾ ತುಂಬ ಬೆಳಕಿದ್ದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಫೋಟೊ ತೆಗೆಯುತ್ತದೆ. ಹತ್ತಿರದ ವಸ್ತುಗಳ, ಉದಾಹರಣೆಗೆ ಹೂವುಗಳ ಫೋಟೊ ಚೆನ್ನಾಗಿ ಮೂಡಿಬರುತ್ತದೆ. ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೊ ಬರುವುದಿಲ್ಲ. ವಿಡಿಯೊ ಚಿತ್ರೀಕರಣ ಚೆನ್ನಾಗಿಲ್ಲ. ಒಟ್ಟಿನಲ್ಲಿ ನಿಮಗೆ ಉತ್ತಮ ಕ್ಯಾಮೆರಾ ಬೇಕಿದ್ದಲ್ಲಿ ಈ ಫೋನ್ ಹೇಳಿದ್ದಲ್ಲ. ಆದರೂ ನೀಡುವ ಬೆಲೆಗೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು.

ಇದರ ಪರದೆ ಪರವಾಗಿಲ್ಲ. ವಿಡಿಯೊ ನೋಡುವ ಅನುಭವ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಸ್ವಲ್ಪ ಆಶ್ಚರ್ಯದ ಸಂಗತಿಯೆಂದರೆ ಇದರ ಆಡಿಯೊ ಎಂಜಿನ್ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇದೆ. ಆದರೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಯಾವುದಾದರೂ ಉತ್ತಮ ಇಯರ್‌ಪೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗುವಂತಹ ಸಂಗೀತ ಆಲಿಸಬಹುದು.

ಈ ಫೋನಿನಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ. ಆದರೆ ಮುಖವನ್ನು ಗುರುತು ಹಿಡಿಯುವ ಸವಲತ್ತು ಇದೆ. ಅದು ಚೆನ್ನಾಗಿ ಕೆಲಸ ಮಾಡುತ್ತದೆ ಕೂಡ.

ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಕನ್ನಡವೂ ಇದೆ. ಕನ್ನಡ ಭಾಷೆಯ ತೋರುವಿಕೆ ಸರಿಯಾಗಿದೆ. 3050 mAh ಶಕ್ತಿಯ ಬ್ಯಾಟರಿ ಇದೆ. ಆದರೆ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ ನೀಡಿಲ್ಲ. ಇಷ್ಟು ಶಕ್ತಿಯ ಬ್ಯಾಟರಿ ಇರುವುದು ಬಳಕೆಯಲ್ಲಿ ಅನುಭವಕ್ಕೆ ಬರುತ್ತಿಲ್ಲ. ಸ್ವಲ್ಪ ಬೇಗನೆ ಬ್ಯಾಟರಿ ಖಾಲಿಯಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾರೆ ನೀಡುವ ಹಣಕ್ಕೆ ಒಂದು ಮಟ್ಟಿಗೆ ತೃಪ್ತಿ ನೀಡಬಹುದಾದ ಫೋನ್.

ವಾರದ ಆಪ್ (app)

ನೀವು ಪುಸ್ತಕಪ್ರಿಯರೇ? ಈಗಿನ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಕಾಲದಲ್ಲಿ ಈ ಪ್ರಶ್ನೆಯೇ ತಪ್ಪು ಎನ್ನುತ್ತೀರಾ? ಹೌದು. ಈಗ ಕೇಳಬೇಕಾಗಿರುವ ಪ್ರಶ್ನೆ -ನೀವು ಓದುವ ಹವ್ಯಾಸದವರೇ ಎಂದು. ಯಾಕೆಂದರೆ ಅಂತರಜಾಲ, ಇ-ಬುಕ್ ರೀಡರ್ ಅಥವಾ ಕಿರುತಂತ್ರಾಂಶ (ಆ್ಯಪ್‌) ಮೂಲಕ ಓದಬಹುದು. ಈ ರೀತಿ ಓದಲು ಸಹಾಯ ಮಾಡುವ ಕಿರುತಂತ್ರಾಂಶಗಳು ಹಲವಾರಿವೆ. ಹಲವು ಕನ್ನಡ ಪುಸ್ತಕಗಳೂ ಸೇರಿದಂತೆ ಭಾರತದ 8 ಭಾಷೆಗಳಲ್ಲಿ ಪುಸ್ತಕಗಳು ಲಭ್ಯವಿರುವ ಕಿರುತಂತ್ರಾಂಶ ಪ್ರತಿಲಿಪಿ. ಇದು ನಿಮಗೆ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Free Stories, Novels and Books – Pratilipi ಎಂದು ಹುಡುಕಿ ಅಥವಾ http://bit.ly/gadgetloka348 ಜಾಲತಾಣಕ್ಕೆ ಭೇಟಿ ನೀಡಿ. ನೀವು ಲೇಖಕರಾಗಿದ್ದರೆ ಪ್ರತಿಲಿಪಿ ಮೂಲಕ ನಿಮ್ಮ ಪುಸ್ತಕವನ್ನು ಪ್ರಕಟಿಸುವ ಸವಲತ್ತೂ ಇದೆ.

ಗ್ಯಾಜೆಟ್ ಪದ: Byte = ಅಷ್ಟಕ (ಬೈಟ್)

ಮಾಹಿತಿ ತಂತ್ರಜ್ಞಾನದಲ್ಲಿ ಎಲ್ಲ ಮಾಹಿತಿಗಳನ್ನು ಅಂತಿಮವಾಗಿ ದ್ವಿಮಾನಾಂಕಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಒಂದು ದ್ವಿಮಾನ ಅಂಕವು 0 ಅಥವಾ 1 ಆಗಿರುತ್ತದೆ. ಗಣಕಗಳಲ್ಲಿ ಪ್ರವಹಿಸುವ (ಡಿಜಿಟಲ್) ವಿದ್ಯುತ್‌ಗೆ ಎರಡು ಸಾಧ್ಯತೆಗಳಿವೆ -ಇದೆ ಅಥವಾ ಇಲ್ಲ. ಇವುಗಳನ್ನು 0 ಮತ್ತು 1 ನ್ನು ಸೂಚಿಸಲು ಬಳಸಲಾಗುತ್ತದೆ. ಹೀಗೆ ಬಳಕೆಯಾಗುವ ಒಂದು ದ್ವಿಮಾನ ಅಂಕೆಯನ್ನು ಬಿಟ್ ಎನ್ನುತ್ತಾರೆ. ಎಂಟು ದ್ವಿಮಾನಾಂಕ ಅಥವಾ ಬಿಟ್‌ಗಳು ಸೇರಿದರೆ ಒಂದು ಅಷ್ಟಕ ಅಥವಾ ಬೈಟ್ ಆಗುತ್ತದೆ. ಇದು ಸಾಮಾನ್ಯವಾಗಿ ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಒಂದು ಅಕ್ಷರವನ್ನು ಸಂಗ್ರಹಿಸಲು ಬಳಕೆಯಾಗುತ್ತದೆ (ಯುನಿಕೋಡ್‌ ಅಲ್ಲದ ಆಸ್ಕಿ ವಿಧಾನದಲ್ಲಿ).

ಗ್ಯಾಜೆಟ್ ಸುದ್ದಿ: ಹುವಾವೇ ಕಿರಿನ್ 980

ಹುವಾವೇ ಕಂಪನಿಯವರು ತಮ್ಮ ಹೊಸ ಪ್ರೊಸೆಸರ್ ಕಿರಿನ್ 980 ಅನ್ನು ಬಿಡುಗಡೆ ಮಾಡಿದ್ದಾರೆ. ಹೋನರ್ ಮತ್ತು ಹುವಾವೇ ಫೋನ್‌ಗಳಲ್ಲಿ ಕಿರಿನ್ ಪ್ರೊಸೆಸರ್‌ಗಳು ಇರುತ್ತವೆ. ಕಿರಿನ್ 980 ಪ್ರಪಂಚದ ಮೊತ್ತಮೊದಲ 7 ನ್ಯಾನೋಮೀಟರ್ ಪ್ರೊಸೆಸರ್ ಆಗಿದೆ. ಈ ಪ್ರೊಸೆಸರ್‌ನಲ್ಲಿ 6.9 ಶತಕೋಟಿ ಟ್ರಾನ್ಸಿಸ್ಟರ್‌ಗಳಿವೆ. ಇದು ಕಿರಿನ್ 970ಕ್ಕಿಂತ 20% ಹೆಚ್ಚು ವೇಗವಾಗಿ ಮತ್ತು 40% ಉತ್ತಮವಾಗಿ ಕೆಲಸ ಮಾಡುತ್ತದೆ. ಈ ಪ್ರೊಸೆಸರ್‌ನಲ್ಲೇ ಕೃತಕ ಬುದ್ಧಿಮತ್ತೆ ಅಡಕವಾಗಿದೆ. ಇದು ನಿಮಿಷಕ್ಕೆ ಸುಮಾರು 4,500 ಚಿತ್ರಗಳನ್ನು ಗುರುತಿಸಬಲ್ಲುದು. ಇದು 4.5G ಸಂಪರ್ಕ ಸಂವಹನ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.

ಗ್ಯಾಜೆಟ್ ಸಲಹೆ

ಶಶಾಂಕ ಅವರ ಪ್ರಶ್ನೆ: ನಿಮಗೆ ವಿಮರ್ಶೆಗೆ ಬಂದ ಫೋನ್‌ಗಳಲ್ಲಿ ಯಾವುದಾದರೂ ಉತ್ತಮ ಫೋನನ್ನು, ಅದರ ಬಗ್ಗೆ ಬರೆದ ನಂತರ ನನಗೆ ನೀಡಬೇಕಾಗಿ ವಿನಂತಿ.

ಉ: ವಿಮರ್ಶೆಗೆ ಬಂದ ಅಲ್ಲ ಫೋನ್‌ಗಳನ್ನೂ ಇತರೆ ಸಾಧನಗಳನ್ನೂ ಅವುಗಳ ಬಗ್ಗೆ ಬರೆದ ನಂತರ ನೀಡಿದವರು ವಾಪಾಸು ಪಡೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.