ADVERTISEMENT

ಒಂದು ಅರ್ಥವತ್ತಾದ ಘೋಷಣೆ

ರಾಮಚಂದ್ರ ಗುಹಾ
Published 7 ಜನವರಿ 2016, 19:30 IST
Last Updated 7 ಜನವರಿ 2016, 19:30 IST
ಒಂದು ಅರ್ಥವತ್ತಾದ ಘೋಷಣೆ
ಒಂದು ಅರ್ಥವತ್ತಾದ ಘೋಷಣೆ   

ಘೋಷಣೆಗಳು ಮತ್ತು ಪ್ರಥಮಾಕ್ಷರಗಳನ್ನು ಸೇರಿಸಿ ಪದಗಳನ್ನು ರೂಪಿಸುವುದು ನಮ್ಮ ಪ್ರಧಾನಿಗೆ ಬಹಳ ಇಷ್ಟ. ಅದಕ್ಕೆ ನಿದರ್ಶನಗಳಾಗಿ ಸ್ವಚ್ಛ ಭಾರತ ಮತ್ತು ಮೇಕ್ ಇನ್ ಇಂಡಿಯಾಗಳಿವೆ. ಈಗ ಮತ್ತೆ ಸ್ಟಾರ್ಟ್ ಅಪ್ ಇಂಡಿಯಾ, ಸ್ಯಾಂಡ್ ಅಪ್ ಇಂಡಿಯಾಗಳಿವೆ. ಯೋಜನಾ ಆಯೋಗವು ನೀತಿ ಆಯೋಗವಾಯಿತು N(ational) I(nstitution) for T(ransforming) I(ndia) (ಭಾರತದ ರಾಷ್ಟ್ರೀಯ ಪರಿವರ್ತನೆ ಸಂಸ್ಥೆ). ಎರಡನೇ ಭಾಗಕ್ಕೆ ಕೂಡ ಗಾಢ ಮತ್ತು ಗಹನವಾದ ಅರ್ಥ ಇರಲೇಬೇಕು ಎಂಬುದು ಖಚಿತ. ಬಹುಶಃ ಅದು  ಸಮಗ್ರ ಪ್ರಗತಿಗಾಗಿ ಆಧುನಿಕ ಮತ್ತು ವಿಶ್ಲೇಷಣಾತ್ಮಕ ತುಡಿತ ಆಗಿರಬಹುದು.

ಸ್ಮಾರ್ಟ್ ಸಿಟಿಯಲ್ಲಿ ಇರುವ ಸ್ಮಾರ್ಟ್ ಎಂಬ ಇಂಗ್ಲಿಷ್‌ ಅಕ್ಷರಗಳು ಯಾವ ಅರ್ಥಗಳನ್ನು ಹೊಂದಿವೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಪ್ರಧಾನಿ ಅವರು ಸ್ಮಾರ್ಟ್ ಪೊಲೀಸ್‌ನಲ್ಲಿ ಇರುವ ಸ್ಮಾರ್ಟ್ ಎಂದರೆ ಏನು ಎಂಬುದನ್ನು ವಿವರಿಸಿದ್ದಾರೆ- ಸ್ಮಾರ್ಟ್ ಎಂದರೆ, ಕಟ್ಟುನಿಟ್ಟು ಮತ್ತು ಸೂಕ್ಷ್ಮ, ಆಧುನಿಕ ಮತ್ತು ಚಲನಶೀಲ, ಕಟ್ಟೆಚ್ಚರ ಮತ್ತು ಹೊಣೆಗಾರಿಕೆಯ, ವಿಶ್ವಾಸಾರ್ಹ ಮತ್ತು ಸ್ಪಂದನಾತ್ಮಕ, ತಂತ್ರಜ್ಞಾನ ಪ್ರಿಯ ಮತ್ತು ತರಬೇತಿ ಪಡೆದವರು.

ಚತುರ (ಸ್ಮಾರ್ಟ್) ಘೋಷಣೆಗಳ ಬಗ್ಗೆ ಪ್ರಧಾನಿ ಅವರು ಹೊಂದಿರುವ ಆಕರ್ಷಣೆ ದೇಶದೊಳಗಿನ ನೀತಿಗಳಿಗೆ ಮಾತ್ರ ಸೀಮಿತವಲ್ಲ. ನಮ್ಮ ಅತ್ಯಂತ ಪ್ರಬಲ ನೆರೆಯ ದೇಶದೊಂದಿಗಿನ ಭವಿಷ್ಯದ ಸಂಬಂಧದ ವಿಷಯದಲ್ಲಿ ಅದು ಮೈಲುಗಳೆಡೆಗೆ ಸಾಗುವ ಇಂಚು ಅಗಿದೆ ( INCH towards MILES). ಅದರಲ್ಲಿರುವ ಮೊದಲ ಭಾಗ ಇಂಡಿಯಾ ಮತ್ತು ಚೀನಾಗಳ ಮೊದಲಕ್ಷರಗಳನ್ನು ಸೇರಿಸಿದ ಪದವಾಗಿದೆ. ಸಹಜವಾಗಿಯೇ ಇಲ್ಲಿ ಭಾರತ ಮಾತೆ ಮೊದಲು. ಎರಡನೇ ಪದದ ಅರ್ಥ ಅಸಾಧಾರಣ ಸಮನ್ವಯದೊಂದಿಗೆ ಸಹಸ್ರಮಾನದಲ್ಲಿ ಜತೆಯಾಗುವುದು (Millenium with Exceptional Synergy).

ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮೋದಿ ಅವರಿಗೆ ಭಾರತದ ಅತ್ಯಂತ ಸೃಜನಶೀಲ ಘೋಷಣೆ ಬರಹಗಾರರು (ಕಾಪಿ ರೈಟರ್ಸ್) ನೆರವು ನೀಡಿದ್ದಾರೆ. ಚುನಾವಣೆ ನಂತರದ ಘೋಷಣೆಗಳು ಮತ್ತು ಪ್ರಥಮಾಕ್ಷರಗಳ ಪದಗಳನ್ನೂ ಅವರೇ ನೀಡಿದ್ದಾರೆಯೇ ಅಥವಾ ಇವು ಪ್ರಧಾನಿ ಅವರ ಬುದ್ಧಿವಂತ ಮಿದುಳಿನಿಂದ ಬಂದಿದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವು  ವೇಗವಾಗಿ ಮತ್ತು ತ್ವರಿತವಾಗಿ ಬರುತ್ತಿವೆ ಎಂಬುದು ನಮಗೆ ತಿಳಿದಿದೆ. ಎಷ್ಟು ವೇಗವಾಗಿ ಎಂದರೆ, ಒಂದು ಘೋಷಣೆಯನ್ನು ಅರ್ಥ ಮಾಡಿಕೊಂಡು ಅರಗಿಸಿಕೊಳ್ಳುವುದಕ್ಕೆ ಮೊದಲೇ ಮತ್ತೊಂದು ಘೋಷಣೆ ನಮ್ಮ ಮುಂದಿರುತ್ತದೆ.

ನರೇಂದ್ರ ಮೋದಿ ಅವರನ್ನು ಸರಣಿ ಘೋಷಣೆಕಾರ ಎಂದು ಕರೆಯಬಹುದು. ಅವರ ಎಷ್ಟು ಘೋಷಣೆಗಳು ಹತ್ತು ಅಥವಾ ಇಪ್ಪತ್ತು ವರ್ಷಗಳ ನಂತರ ಜನರಿಗೆ ನೆನಪಿರಬಹುದು? ನಾನು ಈ ಪ್ರಶ್ನೆ ಕೇಳಲು ಕಾರಣ ಮುಂದಿನ ಕೆಲವೇ ದಿನಗಳಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 50ನೇ ಪುಣ್ಯತಿಥಿ ಬರುತ್ತಿದೆ. ಶಾಸ್ತ್ರಿ ಅವರು ರೂಪಿಸಿದ್ದು ಒಂದೇ ಘೋಷಣೆ. ಈ ಘೋಷಣೆ ಅಂದು ಮತ್ತು 50 ವರ್ಷಗಳ ನಂತರ ಇಂದು ಕೂಡ ಅನುರಣಿಸುತ್ತಿದೆ. ಅದು ‘ಜೈ ಜವಾನ್, ಜೈ ಕಿಸಾನ್’.

ಶಾಸ್ತ್ರಿ ಅವರು ಈ ಘೋಷಣೆ ಹೊರಡಿಸಿದ್ದರ ಹಿನ್ನೆಲೆ ಏನು ಎಂಬುದನ್ನು ಹೇಳುವುದು ಅಗತ್ಯ. 1962ರಲ್ಲಿ ಚೀನಾದ ಜತೆಗೆ ನಡೆದ ಯುದ್ಧದಲ್ಲಿ ಭಾರತ ಅವಮಾನಕಾರಿಯಾದ ಸೋಲು ಅನುಭವಿಸಿತು. ನಮ್ಮ ಸೇನೆ ಸನ್ನದ್ಧವಾಗಿರಲಿಲ್ಲ ಮತ್ತು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ ಎಂಬುದು ಅದಕ್ಕೆ ಮುಖ್ಯ ಕಾರಣ. ಹಾಗಾಗಿಯೇ ಜೈ ಜೈವಾನ್ ಎಂಬ ಘೋಷಣೆ- ಮುಂದಿನ ದಿನಗಳಲ್ಲಿ ರಕ್ಷಣಾ ಯೋಜನೆ ರೂಪಿಸುವಾಗ ಯೋಧರೇ ಅದರ ಕೇಂದ್ರವಾಗಿರುತ್ತಾರೆ ಎಂಬುದು ಇದರ ಅರ್ಥ.

1960ರ ದಶಕದ ಆರಂಭದಲ್ಲಿ ಹಲವು ವರ್ಷ ಮುಂಗಾರು ಮಳೆ ಸರಿಯಾಗಿ ಸುರಿಯಲಿಲ್ಲ.  ತೀವ್ರ ಬರಗಾಲ ಎದುರಾಯಿತು. ದೇಶದ ಹಲವು ಭಾಗಗಳು ಹಸಿವಿನಿಂದ ನರಳಿದವು. ಪಶ್ಚಿಮದ ದೇಶಗಳಿಂದ ಆಹಾರ ಆಮದು ಮಾಡಿಕೊಂಡ ಕಾರಣದಿಂದಾಗಿ  ದೇಶವ್ಯಾಪಿ ಕ್ಷಾಮವನ್ನು ತಡೆಯುವುದು ಸಾಧ್ಯವಾಯಿತು. ಹಾಗಾಗಿಯೇ ಶಾಸ್ತ್ರಿ ಅವರು ಈಗಲೂ ನಾವು ನೆನಪಿರಿಸಿಕೊಂಡಿರುವ ತಮ್ಮ ಘೋಷಣೆಯ ಎರಡನೇ ಭಾಗವನ್ನು ರೂಪಿಸಿದರು- ಜೈ ಕಿಸಾನ್.

ರಕ್ಷಣೆ ಮತ್ತು ಕೃಷಿಯಲ್ಲಿ ನಮ್ಮ ಶಕ್ತಿಹೀನತೆಗೆ ಪ್ರಧಾನಿಯಾಗಿ ಶಾಸ್ತ್ರಿ ಅವರ ಪೂರ್ವಾಧಿಕಾರಿಯಾಗಿದ್ದ ಜವಾಹರ ಲಾಲ್ ನೆಹರೂ ಸ್ವಲ್ಪಮಟ್ಟಿಗೆ ಕಾರಣ. ನೆಹರೂ ಅವರು ರಕ್ಷಣಾ ಕಾರ್ಯತಂತ್ರದ ಬದಲಿಗೆ ವಿದೇಶಾಂಗ ನೀತಿಗೆ ಹೆಚ್ಚಿನ ಒತ್ತು ನೀಡಿದ್ದರು. ಹಾಗೆಯೇ ಆರ್ಥಿಕ ವ್ಯವಸ್ಥೆಯ ಬಗೆಗಿನ ಅವರ ಧೋರಣೆಯಲ್ಲಿ ಕೂಡ ಕೃಷಿಗಿಂತ ಕೈಗಾರಿಕೆಗೆ ಹೆಚ್ಚಿನ ಮಹತ್ವ ಇತ್ತು. ಚೀನಾ ಯುದ್ಧದ ನಂತರ ಕೊನೆಗೂ ನೆಹರೂ ಅವರು, ಅದಕ್ಷರಾಗಿದ್ದ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರನ್ನು ವಜಾ ಮಾಡಿ, ದಕ್ಷ, ನೇರ ನಡೆ ನುಡಿ ಆಡಳಿತಗಾರರೆಂದು ಹೆಸರಾಗಿದ್ದ ವೈ.ಬಿ.ಚವಾಣ್ ಅವರನ್ನು ಆ ಸ್ಥಾನಕ್ಕೆ ನೇಮಿಸಿದರು.

ಶಾಸ್ತ್ರಿ ಪ್ರಧಾನಿಯಾದಾಗಲೂ ಚವಾಣ್ ಅವರನ್ನು ಮುಂದುವರಿಸಿದರು. ಚವಾಣ್ ಅವರು ಪಶ್ಚಿಮದ ದೇಶಗಳಿಂದ ಅತ್ಯಾಧುನಿಕವಾದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಸೇನೆಯನ್ನು ಶಕ್ತಗೊಳಿಸಿದರು (ತಮ್ಮ ಸೋವಿಯತ್ ಪರ ಒಲವಿನಿಂದಾಗಿ ಕೃಷ್ಣ ಮೆನನ್ ಇದನ್ನು ಮಾಡಿರಲಿಲ್ಲ. ಅದುವೇ ಅವರ ತಲೆದಂಡಕ್ಕೆ ಕಾರಣವಾಯಿತು). ಶಾಸ್ತ್ರಿ ಮತ್ತು  ಚವಾಣ್ ಅವರ ಹೊಸ ಮತ್ತು ಚೈತನ್ಯಯುತ ರಕ್ಷಣಾ ನೀತಿ 1965ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಫಲ ನೀಡಿತು. ಭಾರತೀಯ ಭೂಸೇನೆ ಮತ್ತು ವಾಯುಪಡೆ ತಮ್ಮ ಕರ್ತವ್ಯವನ್ನು ದಕ್ಷವಾಗಿ ನಿರ್ವಹಿಸಿದವು.

ರೈತರಿಗೆ ಸಂಬಂಧಿಸಿ ಶಾಸ್ತ್ರಿ ಅವರು ಕೈಗೊಂಡ ಉಪಕ್ರಮಗಳು ಈಗಲೂ ಗಮನಾರ್ಹ. ನೆಹರೂ ಸಂಪುಟದಲ್ಲಿದ್ದ ಅತ್ಯಂತ ಸಮರ್ಥ ವ್ಯಕ್ತಿ ಸಿ.ಸುಬ್ರಮಣಿಯಂ. ಅವರು ಉಕ್ಕು ಸಚಿವರಾಗಿದ್ದರು. ನೆಹರೂ ಅವರ ಆರ್ಥಿಕ ದೃಷ್ಟಿಕೋನದಿಂದಾಗಿ ಅದು ಹೆಚ್ಚು ಮಹತ್ವದ ಖಾತೆಯಾಗಿತ್ತು. ನಂತರ  ಉಂಟಾದ ಬರದಿಂದಾಗಿ ಸುಬ್ರಮಣಿಯಂ ಅವರನ್ನು ಕೃಷಿ ಖಾತೆಗೆ ಶಾಸ್ತ್ರಿ ವರ್ಗಾಯಿಸಿದರು. ಹೊಸ ಕೃಷಿ ಸಚಿವರು ಕೃಷಿ ಕುಟುಂಬದಿಂದಲೇ ಬಂದವರಾಗಿದ್ದರು. ಕೃಷಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿತ್ತು. ಹಾಗಾಗಿಯೇ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಈ ಸಮಸ್ಯೆಗಳಿಂದ ಹೊರಬರಬಹುದು ಎಂಬುದು ಅವರ ಚಿಂತನೆಯಾಗಿತ್ತು.

ಲಭ್ಯ ಇರುವ ಹೊಸ ಹೈಬ್ರಿಡ್ ಬೀಜಗಳ ಮೇಲೆ ಪ್ರಯೋಗ ನಡೆಸಲು ಅವರು ಭಾರತೀಯ ಕೃಷಿ ಸಂಶೋಧನಾ ಸಮಿತಿಯ ವಿಜ್ಞಾನಿಗಳಿಗೆ ಅಗತ್ಯ ಬೆಂಬಲ ನೀಡಿದರು. ತಮ್ಮ ಲ್ಯುಟೆನ್ಸ್ ಬಂಗಲೆಯ ಹೊರಗಿನ ಹುಲ್ಲುಹಾಸಿನಲ್ಲಿ ಈ ಬೀಜಗಳನ್ನು ಬಿತ್ತಿದರು. ನಂತರ ಈ ಪ್ರಯೋಗಗಳನ್ನು ಭಾರತದ ರೈತರ ಹೊಲಗಳಿಗೆ ಒಯ್ಯಲಾಯಿತು. ಇದು ಭಾರತದ ಕೃಷಿ ಉತ್ಪಾದಕತೆಯನ್ನು (ಮುಖ್ಯವಾಗಿ ಗೋಧಿ) ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿತು. ಈ ಪ್ರಯತ್ನ ಭಾರತವನ್ನು ಬರಗಾಲದಿಂದ ರಕ್ಷಿಸಿದ್ದು ಮಾತ್ರವಲ್ಲದೆ, ಪಶ್ಚಿಮದ ದೇಶಗಳ ಆಹಾರದ ನೆರವಿನ ಅವಲಂಬನೆಯಿಂದಲೂ ಮುಕ್ತಿ ನೀಡಿತು. 

ಚವಾಣ್ ಮತ್ತು ಸುಬ್ರಮಣಿಯಂ ಅವರ ಬೆನ್ನಿಗೆ ನಿಂತಿದ್ದ ಶಾಸ್ತ್ರಿ ಅವರು ಈ ಇಬ್ಬರ ಕಾರ್ಯನಿರ್ವಹಣೆಯ ಮೇಲೆ ಪ್ರಧಾನಿ ಕಾರ್ಯಾಲಯದ ನಿರಂತರ ನಿಗಾ ಇಲ್ಲದಂತೆ ನೋಡಿಕೊಂಡರು. ಶಾಸ್ತ್ರಿ ಅವರಿಗೆ ಕೆಲಸ ಮಾಡಿಸುವ ಕಲೆ ಚೆನ್ನಾಗಿ ತಿಳಿದಿತ್ತು, ನೆಹರೂ ಅವರಿಗೆ ಈ ಸಾಮರ್ಥ್ಯ ಇರಲಿಲ್ಲ (ಮೋದಿ ಅವರಲ್ಲಿಯೂ ಅದು ಇರುವಂತೆ ಕಾಣಿಸುತ್ತಿಲ್ಲ). ಸಿ. ಸುಬ್ರಮಣಿಯಂ ಅವರ ಆಯ್ಕೆ ದೂರದೃಷ್ಟಿಯ ನಿರ್ಧಾರವಾಗಿತ್ತು. ಸಂಪುಟ ಸಚಿವರಾಗಿ ಮಾಡಿದ ಕೆಲಸಕ್ಕೆ ಭಾರತ ರತ್ನ ಗೌರವಕ್ಕೆ ಪಾತ್ರರಾದ ಏಕೈಕ ಸಚಿವ ಸುಬ್ರಮಣಿಯಂ. ಪ್ರಧಾನಿ ಅವರ ಬೆಂಬಲದಿಂದಾಗಿ ಅದನ್ನು ಮಾಡುವುದಕ್ಕೆ ಅವರಿಗೆ ಸಾಧ್ಯವಾಯಿತು.

ಹಸಿರು ಕ್ರಾಂತಿಯ ಪ್ರಯೋಜನ 1960ರ ದಶಕದ ಕೊನೆಯಲ್ಲಿ ಮತ್ತು 1970ರ ದಶಕದ ಆರಂಭದಲ್ಲಿ ಕಾಣಿಸಿಕೊಂಡಿತು. ಆದರೆ ಅದಕ್ಕೂ ಮೊದಲೇ ಶಾಸ್ತ್ರಿ ಅವರು ನಿಧನರಾದರು. ಹಾಗಾಗಿ ಹಸಿರು ಕ್ರಾಂತಿಯ ಯಶಸ್ಸಿನ ಹಿರಿಮೆ ತಮ್ಮದು ಎಂದು ಹೇಳಿಕೊಳ್ಳಲು ಇಂದಿರಾ ಗಾಂಧಿ ಅವರಿಗೆ ಸಾಧ್ಯವಾಯಿತು. ಅದೃಷ್ಟವಶಾತ್ 1965ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಶಾಸ್ತ್ರಿ ಅವರು ವಹಿಸಿದ ಅದ್ಭುತ ನಾಯಕತ್ವದ ಹಿರಿಮೆಯನ್ನು ಯಾರೊಬ್ಬರಿಗೂ ಕಸಿದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.

2010ರ ಏಪ್ರಿಲ್‌ನಲ್ಲಿ ಇದೇ ಅಂಕಣದಲ್ಲಿ ನಾನು ಹೀಗೆ ಬರೆದಿದ್ದೆ: ‘ಇನ್ನೊಂದು ಐದು ವರ್ಷ ಶಾಸ್ತ್ರಿ ಪ್ರಧಾನಿಯಾಗಿ ಇದ್ದಿದ್ದರೆ ನೆಹರೂ-ಗಾಂಧಿ ಕುಟುಂಬ ರಾಜಕೀಯದಲ್ಲಿ ಇರುತ್ತಿರಲಿಲ್ಲ. ಸಂಜಯ ಗಾಂಧಿ ಮತ್ತು ರಾಜೀವ್ ಗಾಂಧಿ ಜೀವಂತ ಇರುತ್ತಿದ್ದರು, ಆದರೆ ಇಬ್ಬರೂ ಖಾಸಗಿಯಾಗಿ ಬದುಕಿರುತ್ತಿದ್ದರು. ಮೊದಲನೆಯವರು ಒಬ್ಬ (ವಿಫಲ) ಉದ್ಯಮಿಯಾಗಿ  ಮತ್ತು ಎರಡನೆಯವರು ಛಾಯಾಗ್ರಹಣದಲ್ಲಿ ಅತೀವ ಆಸಕ್ತಿ ಇರುವ ಇತ್ತೀಚೆಗಷ್ಟೆ ನಿವೃತ್ತರಾದ ಪೈಲಟ್ ಆಗಿ. ಶಾಸ್ತ್ರಿ ಅವರು ಹೆಚ್ಚು ಕಾಲ ಬದುಕಿದ್ದಿದ್ದರೆ, ಸೋನಿಯಾ ಗಾಂಧಿ ಅವರು ಮಮತೆಯ ಗೃಹಿಣಿಯಾಗಿ ಇರುತ್ತಿದ್ದರು’.

ಶಾಸ್ತ್ರಿ ಅವರ ಸಾವು ಇಂದಿರಾ ಗಾಂಧಿ ಮತ್ತು ನಂತರ ಅವರ ಕುಟುಂಬದವರಿಗೆ ಕಾಂಗ್ರೆಸ್ ಮೇಲೆ ಬಲವಾದ ಹಿಡಿತ ಸಾಧಿಸುವುದಕ್ಕೆ ಅವಕಾಶ ಕೊಟ್ಟಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದ ದೀರ್ಘ ಅವಧಿಯಲ್ಲಿ ಈ ಕುಟುಂಬ ಭಾರತ ಸರ್ಕಾರದ ಮೇಲೆಯೂ ಹಿಡಿತ ಹೊಂದಿತ್ತು. ಈ ಕುಟುಂಬದ ವಂದಿಮಾಗಧರು ಕುಟುಂಬದ ಹೊರಗೆ ಒಬ್ಬ ಭಾರತೀಯ ರಾಜಕಾರಣಿಯ ಹೆಸರನ್ನು ಮಾತ್ರ ನೆನಪಿನಲ್ಲಿ ಇರಿಸಿಕೊಂಡಿದ್ದಾರೆ- ಅದು ಮಹಾತ್ಮ ಗಾಂಧಿ. ಈ ಒಂದು ಹೆಸರನ್ನೂ ಅವರು ಮರೆತಿದ್ದರೆ, 1947ರ ನಂತರ ಭಾರತದಲ್ಲಿ ಆಗುವ ಯಾವುದೇ ಪ್ರಗತಿಗೆ ನೆಹರೂ, ಇಂದಿರಾ, ರಾಜೀವ್ ಮತ್ತು ಸೋನಿಯಾ ಅವರೇ ಕಾರಣ ಎಂದು ಹೇಳುತ್ತಿದ್ದರು. ಪಕ್ಷಪಾತದ ನಾಚಿಕೆಗೇಡಿನ ಪ್ರದರ್ಶನದಲ್ಲಿ ಅವರು ಕಾಂಗ್ರೆಸ್‌ನ ದಿಗ್ಗಜ ನಾಯಕರಾದ ಪಟೇಲ್, ರಾಜಾಜಿ, ಕಾಮರಾಜ್, ಚವಾಣ್, ಸುಬ್ರಮಣಿಯಂ, ನರಸಿಂಹ ರಾವ್ ಮತ್ತು ಶಾಸ್ತ್ರಿ ಅವರನ್ನು ನಿರ್ಲಕ್ಷಿಸಿದ್ದಾರೆ.

ಇಂದಿರಾ ಮತ್ತು ಸೋನಿಯಾ ಅವರ ಕಾಂಗ್ರೆಸ್ ವಲ್ಲಭಭಾಯಿ ಪಟೇಲ್ ಅವರ ನೆನಪು ಮತ್ತು ಪರಂಪರೆಯನ್ನು ದೂರ ಇರಿಸುವ ಮೂಲಕ ಅದರ ಮೇಲೆ ಹಕ್ಕು ಸಾಧಿಸಲು ಬಿಜೆಪಿಗೆ ಅವಕಾಶ ಕೊಟ್ಟಿದೆ.  ಶಾಸ್ತ್ರಿ ಅವರ ನೆನಪು ಮತ್ತು ಪರಂಪರೆಯನ್ನೂ ಕಾಂಗ್ರೆಸ್ ಕೈಬಿಟ್ಟಿದೆ. ಇದರ ಮೇಲೆಯೂ ಬಿಜೆಪಿ ಹಕ್ಕು ಸಾಧಿಸಲಿದೆಯೇ? ಅವರು ಒಂದು ವೇಳೆ ಹಾಗೆ ಮಾಡಿದರೆ ಪಟೇಲ್ ಅವರ ಮೇಲೆ ಹಕ್ಕು ಸಾಧಿಸಿದ್ದಕ್ಕಿಂತಲೂ ಕಡಿಮೆ ಸಮರ್ಥನೆ ಇರುವ ನಡೆ ಇದಾಗಬಹುದು. ರಕ್ಷಣಾ ಸನ್ನದ್ಧತೆ ಮತ್ತು ಕೃಷಿ ಉತ್ಪಾದಕತೆಗೆ ಒತ್ತು ನೀಡುವ ಕಾರಣಕ್ಕೆ ಶಾಸ್ತ್ರಿ ಅವರು ತಮ್ಮ ಪೂರ್ವಾಧಿಕಾರಿಯಿಂದ ದೂರ ಸರಿಯುತ್ತಾರೆ. ಸಾಮಾಜಿಕ ಮತ್ತು ಧಾರ್ಮಿಕ ಬಹುತ್ವದ ಬಗೆಗಿನ ಗೌರವದಿಂದಾಗಿ ನೆಹರೂ ಅವರನ್ನು ಶಾಸ್ತ್ರಿ ಅವರು ಪೂರ್ಣವಾಗಿ ಮತ್ತು ವಿಧೇಯವಾಗಿ ಅನುಸರಿಸಿದ್ದಾರೆ.

ನೆಹರೂ ಅವರಂತೆಯೇ ಶಾಸ್ತ್ರಿ ಕೂಡ ಭಾರತವು ಎಂದೂ ಒಂದು ಹಿಂದೂ ಪಾಕಿಸ್ತಾನ ಆಗಬಾರದು ಎಂಬ ಗಟ್ಟಿ ನಿಲುವು ಹೊಂದಿದ್ದರು. 1965ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಭಾರತದ ಪ್ರಧಾನಿ  ಶಾಸ್ತ್ರಿ ಅವರು ಹಿಂದೂ ಆಗಿರುವುದರಿಂದ (ಮುಸ್ಲಿಂ) ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಸಿದ್ಧರಾಗಿದ್ದಾರೆ ಎಂದು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಹೇಳಿತ್ತು. ಪಶ್ಚಿಮದ ಮಾಧ್ಯಮಗಳಲ್ಲಿ ಜಗತ್ತಿನ ಈ ಭಾಗದ ಪ್ರತಿನಿಧೀಕರಣ ಆಗ ಹೀಗೆಯೇ ಇತ್ತು. ಈ ಹುಸಿ ಹೇಳಿಕೆಯನ್ನು ಶಾಸ್ತ್ರಿ ಬಲವಾಗಿ ಅಲ್ಲಗಳೆದರು.

1965ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಮೀರ್ ಮುಸ್ತಾಕ್ (ದೆಹಲಿ ಕಾಂಗ್ರೆಸ್ ಮುಖಂಡ) ಮುಸ್ಲಿಂ, ಈಗಾಗಲೇ ನಿಮ್ಮನ್ನು ಉದ್ದೇಶಿಸಿ ಮಾತನಾಡಿರುವ ಫ್ರಾಂಕ್ ಆಂಟನಿ (ಸಂವಿಧಾನ ರಚನಾ ಸಮಿತಿಯ ಸದಸ್ಯರು ಮತ್ತು ಪ್ರಸಿದ್ಧ ವಕೀಲರು) ಒಬ್ಬ ಕ್ರೈಸ್ತ. ಇಲ್ಲಿ ಸಿಖ್ಖರು ಮತ್ತು ಪಾರ್ಸಿಗಳಿದ್ದಾರೆ. ನಮ್ಮ ದೇಶದ ವೈಶಿಷ್ಟ್ಯ ಏನೆಂದರೆ, ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಪಾರ್ಸಿಗಳು ಮತ್ತು ಇತರ ಎಲ್ಲ ಧರ್ಮಗಳಿಗೆ ಸೇರಿದ ಜನರಿದ್ದಾರೆ. ನಮ್ಮಲ್ಲಿ ದೇವಾಲಯಗಳು ಮತ್ತು ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳಿವೆ’ ಎಂದು ಶಾಸ್ತ್ರಿ ಹೇಳಿದ್ದರು.

ಧಾರ್ಮಿಕ ವೈವಿಧ್ಯದ ವಿಷಯವನ್ನು ಮುನ್ನೆಲೆಗೆ ತಂದು ನಿಲ್ಲಿಸಿದ ನಂತರ ಶಾಸ್ತ್ರಿ ಅವರು ಹೀಗೆ ಮುಂದುರಿಸುತ್ತಾರೆ: ‘ನಾವು ಈ ಯಾವುದನ್ನೂ ರಾಜಕೀಯಕ್ಕೆ ತರುವುದಿಲ್ಲ. ಇದುವೇ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ವ್ಯತ್ಯಾಸ. ಪಾಕಿಸ್ತಾನವು ತನ್ನನ್ನು ಮುಸ್ಲಿಂ ದೇಶ ಎಂದು ಕರೆದುಕೊಂಡು ಧರ್ಮವನ್ನು ರಾಜಕೀಯ ವಿಷಯವಾಗಿಸಿದರೆ, ಭಾರತದಲ್ಲಿ ನಾವು ಆಯ್ಕೆ ಮಾಡಿಕೊಳ್ಳುವ ಯಾವುದೇ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ಇದೆ. ಯಾವ ರೀತಿಯ ಆರಾಧನೆಯನ್ನಾದರೂ ಮಾಡುವುದಕ್ಕೆ ಇಲ್ಲಿ ಅವಕಾಶ ಇದೆ’. 

ಈ ದೃಷ್ಟಿಕೋನವನ್ನು ನರೇಂದ್ರ ಮೋದಿ ಅವರು ಒಪ್ಪಿಕೊಳ್ಳುವುದಕ್ಕೆ ಸಾಧ್ಯ ಇದೆಯೇ?  ತಮ್ಮನ್ನು ಒಬ್ಬ ಸುಧಾರಕ ಎಂದು ಬಿಂಬಿಸಿಕೊಳ್ಳಲು ಮೋದಿ ಅವರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಆದರೆ ಹಿಂದೆ ಆರ್‌ಎಸ್‌ಎಸ್‌ ಪ್ರಚಾರಕನಾಗಿದ್ದುದರ ಅಂಶಗಳು ಅವರಲ್ಲಿ ಇನ್ನೂ ಇವೆ– ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಸಂಸದರು ಮತ್ತು ಸಚಿವರು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದಾಗ ಅದನ್ನು ಖಂಡಿಸದೆ ಇದ್ದದ್ದು, ಮುಸ್ಲಿಮರ ಬುರುಡೆ ಟೋಪಿ ಧರಿಸಲು ಒಪ್ಪದೇ ಇದ್ದದ್ದು (ದೇಶದಾದ್ಯಂತ ವಿವಿಧ ಜಾತಿಗಳು ಮತ್ತು ಬುಡಕಟ್ಟುಗಳ ಸಾಂಪ್ರದಾಯಿಕ ಉಡುಗೆಯನ್ನು ಅವರು ಅತ್ಯಂತ ಸಂತೋಷದಿಂದಲೇ ಧರಿಸಿದ್ದಾರೆ), ತಾವು ಪ್ರಧಾನಿ ಆಗುವುದಕ್ಕೆ ಮೊದಲು ಸಾವಿರಾರು ವರ್ಷ ಭಾರತ ದಾಸ್ಯದಲ್ಲಿತ್ತು ಎಂಬ ಹೇಳಿಕೆಯನ್ನು ಆಗಾಗ ಉಲ್ಲೇಖಿಸುತ್ತಿರುವುದರಲ್ಲಿ ಈ ಅಂಶ ಕಾಣಿಸುತ್ತಿದೆ.

ಮಹಾತ್ಮ ಗಾಂಧಿ ಮತ್ತು  ನೆಹರೂ ಅವರ ರೀತಿಯಲ್ಲಿ ಮೋದಿ ಅವರು ಧಾರ್ಮಿಕ ಬಹುತ್ವವಾದಿ ಆಗಬಹುದು ಎಂದು ಭಾವಿಸುವುದು ಅತಿಯಾದ ನಿರೀಕ್ಷೆ. ಈ ಅಂಕಣವು ಸಾಧಾರಣವಾದ ಒಂದು ಎಚ್ಚರಿಕೆಯನ್ನಷ್ಟೇ ಪ್ರಧಾನಿ ಅವರಿಗೆ ಅಥವಾ ಅವರ ಸಲಹೆಗಾರರಿಗೆ ನೀಡಲು ಬಯಸುತ್ತದೆ. ಮನಸೋ ಇಚ್ಛೆ ಘೋಷಣೆಗಳನ್ನು ಸೃಷ್ಟಿಸಬಾರದು ಎಂಬುದಷ್ಟೇ ಇಲ್ಲಿನ ವಿನಂತಿ. ಶಾಸ್ತ್ರಿ ಅವರ 50ನೇ ಪುಣ್ಯತಿಥಿ ಸಂದರ್ಭದಲ್ಲಿ ಇನ್ನು ಮುಂದೆ ಯಾವುದೇ ಹೊಸ ಘೋಷಣೆ ಅಥವಾ ಪ್ರಥಮಾಕ್ಷರಗಳನ್ನು ಸೇರಿಸಿದ ಪದಗಳನ್ನು ಸೃಷ್ಟಿಸುವುದಿಲ್ಲ ಎಂದು ಮೋದಿ ಅವರು ಸಂಕಲ್ಪ ಮಾಡಬೇಕು.

ಹೊಸ ಘೋಷಣೆಯ ಬದಲಿಗೆ ಈಗಾಗಲೇ ಅವರು ರೂಪಿಸಿರುವ ಹಲವು ಘೋಷಣೆಗಳಲ್ಲಿ ಎರಡು ಅಥವಾ ಮೂರನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಕಾರ್ಯಕ್ರಮಗಳು ಯಾವ ಸಚಿವಾಲಯಗಳಲ್ಲಿ ಬರುತ್ತವೆಯೋ ಅಂತಹ ಸಚಿವಾಲಯಗಳಿಗೆ ಅತ್ಯುತ್ತಮ  ವ್ಯಕ್ತಿಗಳನ್ನು ಗುರುತಿಸಿ ಸಚಿವರನ್ನಾಗಿ ಮಾಡಬೇಕು. ನಂತರ ವೈ.ಬಿ. ಚವಾಣ್‌ ಮತ್ತು ಸಿ. ಸುಬ್ರಮಣಿಯಂ ಅವರಿಗೆ ಅವರ ಪ್ರಧಾನಿ ನೀಡಿದ ರೀತಿಯ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.