ADVERTISEMENT

ಅಂಕವೋ, ಮಕ್ಕಳೋ ಯಾವುದು ಮುಖ್ಯ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

ಇದು ಒಂದು ಮನೆಯಲ್ಲಿ ನಡೆದ ಘಟನೆ.
ಬೆಳಿಗ್ಗೆ ಮನೆಯಲ್ಲಿ ಎಲ್ಲರಿಗೂ ತುಂಬ ಅವಸರ. ತಾಯಿಗಂತೂ ದೇವರು ಏಕೆ ಎರಡೇ ಕೈ ಕೊಟ್ಟಿದ್ದಾನೋ ಎನ್ನಿಸುತ್ತಿತ್ತು. ಇನ್ನೆರಡು ಕೈ ಇದ್ದರೂ ಸಾಲದಷ್ಟು ಕೆಲಸ, ಸಣ್ಣ ಎರಡು ಮಕ್ಕಳನ್ನು ಎಬ್ಬಿಸಿ ಸ್ನಾನ ಮಾಡಿಸಬೇಕು. ಅಷ್ಟರೊಳಗೆ ಅವರಿಗೆ ತಿಂಡಿ ಸಿದ್ಧವಾಗಿರಬೇಕು. ಅವರಿಗೆ ತಿಂಡಿ ತಿನ್ನಿಸಿ, ಮತ್ತೆ ಡಬ್ಬದಲ್ಲಿ ರೊಟ್ಟಿಯನ್ನೋ, ಚಪಾತಿಯನ್ನೋ ಹಾಕಿ ಸಿದ್ಧಮಾಡಬೇಕು. ಅವರನ್ನು ಮನೆಯ ಹೊರಗೆ ಕಳುಹಿಸುವವರೆಗೆ ತಲೆ ಬೇರೆ ಕಡೆಗೆ ಓಡುವುದೇ ಇಲ್ಲ. ಪ್ರತಿಯೊಂದಕ್ಕೂ ಧಾವಂತ.

ಎರಡನೇ ಮಗನಿಗೆ ತಲೆ ಬಾಚುತ್ತಿದ್ದಾಗ ರಾಮಣ್ಣ ಕೇಳಿದ, “ಅಮ್ಮಾವ್ರೇ, ಕೆಳಗಿನ ಕೋಣೆಯಲ್ಲಿ ಯಾರಿದ್ದಾರೆ?” ಅವನ ಮುಖದಲ್ಲಿ ಆತಂಕವಿತ್ತು. ಸಾಮಾನ್ಯವಾಗಿ ನಗುನಗುತ್ತಾ ಇರುತ್ತಿದ್ದ ರಾಮಣ್ಣನಿಗೆ ಏನಾಗಿದೆ ಇವತ್ತು ಎಂದುಕೊಂಡರು ತಾಯಿ. ಆದರೆ ಯೋಚಿಸುವುದಕ್ಕೆ ಸಮಯವೆಲ್ಲಿದೆ? “ಯಾರಿದ್ದಾರೆ ಎಂದು ನೀನೇ ನೋಡಬಾರದೇ ರಾಮಣ್ಣ?” ಎಂದರು ಆಕೆ ತಮ್ಮ ಕೆಲಸವನ್ನು ಮುಂದುವರೆಸುತ್ತ. “ಅಮ್ಮಾ ಅನುರಾಗ್ ಎಲ್ಲಿದ್ದಾನೋ?” ಮತ್ತೆ ಕೇಳಿದ ರಾಮಣ್ಣ. “ಯಾಕೋ ರಾಮಣ್ಣ ನೀನಿವತ್ತು ಬರೀ ಪ್ರಶ್ನೆ ಕೇಳುತ್ತಿದ್ದೀಯಲ್ಲ? ನೀನೇ ಹುಡುಕಬಾರದೇ ಅವನನ್ನು? ಅವನೆಲ್ಲಿ ಹೋಗುತ್ತಾನೆ ಸೋಮಾರಿ? ಮಲಗಿರಬೇಕು ತನ್ನ ಕೋಣೆಯಲ್ಲಿ” ಎಂದರು ತಾಯಿ.

ಅಷ್ಟರಲ್ಲಿ ಮಕ್ಕಳ ತಯಾರಿ ಮುಗಿದು ಮನೆಯಿಂದ ಹೊರಹೊರಟರು. ತಾುಗೆ ಈಗ ಸ್ವಲ್ಪ ನಿರಾಳವಾಯಿತು. ಗಮನವನ್ನು ರಾಮಣ್ಣನಿಗೆ ನೀಡಿ, “ಹೇಳು ರಾಮಣ್ಣ ಏನು ನಿನ್ನ ಸಮಸ್ಯೆ?” ಎಂದು ಕೇಳಿದರು. ರಾಮಣ್ಣನಿಗೆ ಅಳುವೇ ಬಂದಿತ್ತು. “ಅಮ್ಮಾ, ಅನುರಾಗ್ ತನ್ನ ಕೋಣೆಯಲ್ಲಿಲ್ಲ. ಆತ ಮನೆಯಿಂದ ಹೊರಗೆ ಹೋದದ್ದನ್ನು ವಾಚಮನ್ ನೋಡಿಲ್ಲ” ಎಂದ. “ಅಯ್ಯೋ ಅವನು ಗೆಳೆಯರ ಮನೆಗೆ ಆಡಲು ಹೋಗಿರಬೇಕು. ಈ ವಾಚಮನ್ ನೋಡಿರಲಿಕ್ಕಿಲ್ಲ” ಎಂದರು ತಾಯಿ. “ಇಲ್ಲಮ್ಮ, ಮನೆಯಲ್ಲಿ ಎಲ್ಲರೂ ಇದ್ದಾರೆ. ಆದರೆ ಕೆಳಗಿನ ಕೋಣೆಯಲ್ಲಿ ಯಾರೋ ಒಳಗೆ ಸೇರಿ ಬಾಗಿಲು ಹಾಕಿಕೊಂಡಿದ್ದಾರೆ. ನಾನು ಹದಿನೈದು ನಿಮಿಷ ಬಾಗಿಲು ತಟ್ಟಿದೆ. ಯಾರೂ ಉತ್ತರ ನೀಡುತ್ತಿಲ್ಲ. ನನಗೆ ಗಾಬರಿಯಾಗುತ್ತಿದೆಯಮ್ಮ” ಎಂದ ರಾಮಣ್ಣ.

ತಾಯಿಯ ಎದೆ ಧಸಕ್ಕೆಂದಿತು. ರಾಮಣ್ಣನ ಮಾತಿನ ಅರ್ಥವೇನು? ಅನುರಾಗ್ ಹೊರಗೆ ಹೋಗಿಲ್ಲ. ಕೆಳಗಿನ ಕೋಣೆಯ ಬಾಗಿಲು ಒಳಗಿನಿಂದ ಹಾಕಿಕೊಂಡಿದೆ. ಅಂದರೆ ಅನುರಾಗ್ ಕೋಣೆಯ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದಾನೆಯೇ?
“ಬಾಗಿಲು ಏಕೆ ತೆಗೆಯುತ್ತಿಲ್ಲ, ಅಯ್ಯೋ! ಏನಾದರೂ ಮಾಡಿಕೊಂಡು ಬಿಟ್ಟನೇ?” ಗಾಬರಿಯಿಂದ ಉಸಿರು ಬಿಗಿಹಿಡಿದು ಅಮ್ಮ ಕೆಳಗೆ ಓಡಿದರು. ಅವರ ಹಿಂದೆಯೇ ರಾಮಣ್ಣ.

“ಅನುರಾಗ್ ಬಾಗಿಲು ತೆಗೆಯೋ, ಅನುರಾಗ್ ಬೇಗ ಬಾಗಿಲು ತೆಗೆ” ಎಂದು ರಪರಪನೇ ಬಾಗಿಲಿನ ಮೇಲೆ ಬಡಿದರು ತಾಯಿ. ಅವರ ಎದೆ ಹಾರುತ್ತಿತ್ತು. ಮನಸ್ಸು ನಿನ್ನೆ ನಡೆದ ಘಟನೆಯ ಕಡೆಗೆ ನುಗ್ಗಿತು. ರಾತ್ರಿ ಅನುರಾಗ್‌ನ ಓದಿನ ಬಗ್ಗೆ ತುಂಬ ಆತಂಕಗೊಂಡಿದ್ದ ಅಪ್ಪ, ಅಮ್ಮ ಇಬ್ಬರೂ ಅವನನ್ನು ತರಾಟೆಗೆ ತೆಗೆದುಕೊಂಡಿದ್ದರು. ತಾವೂ ಆತನಿಗೆ ಸರಿಯಾಗಿ ಬಯ್ದು ಈ ಬಾರಿ ಎಸ್.ಎಸ್.ಎಲ್,ಸಿ ಪರೀಕ್ಷೆಯಲ್ಲಿ ನೂರಕ್ಕೆ ತೊಂಬತ್ತಕ್ಕಿಂತ ಕಡಿಮೆ ಬಂದರೆ ಕಾಲೇಜಿಗೆ ಕಳುಹಿಸುವುದಿಲ್ಲವೆಂದು ಜರಿದು ನುಡಿದಿದ್ದರು. ಅನುರಾಗ್ ಮುಖ ಕೆಳಗೆ ಹಾಕಿಕೊಂಡು ನಿಂತಿದ್ದ. ಕಣ್ಣೀರು ಸುರಿಯುತ್ತಿತ್ತು. ನಂತರ ತಂದೆ ಊರಿಗೆ ಹೋಗಿದ್ದರು.

ಈಗ ಅವರಿಗೆ ಖಾತ್ರಿಯಾಯಿತು. ಮಗ ಏನೋ ಮಾಡಿಕೊಂಡುಬಿಟ್ಟಿದ್ದಾನೆ. ತಾವು ಹಾಗೆ ಅವನನ್ನು ಬೈಯ್ಯಬಾರದಿತ್ತು. ಕ್ಷಣದಲ್ಲಿ ಮನಸ್ಸು ಬೆಂದು ಹೋಯಿತು. ಅಷ್ಟರಲ್ಲಿ ಮನೆಯವರು, ಪಕ್ಕದವರು ಎಲ್ಲ ಸೇರಿಬಿಟ್ಟಿದ್ದರು. “ರಾಮಣ್ಣ, ಬೇಗನೇ ಬಾಗಿಲು ತೆಗೆಸು, ಮುರಿದುಬಿಡು ಬೇಗನೇ” ಎಂದು ಕೂಗಿದರು ತಾಯಿ. ನಾಲ್ಕೈದು ಜನ ಸೇರಿ ಹಾರೆಯಿಂದ ಬಾಗಿಲು ಮುರಿದರು. ಅಮ್ಮ ಒಳಗೆ ನುಗ್ಗಿದರು, ಒಳಗೆ ಯಾರೂ ಇಲ್ಲ! ಯಾರೋ ಜೋರಾಗಿ ಬಾಗಿಲನ್ನು ಎಳೆದು ಹಾಕಿಕೊಂಡದ್ದರಿಂದ ಒಳಗಿನ ಚಿಲಕ ತಾನೇ ಬಿದ್ದುಬಿಟ್ಟದೆ. ಮನಸ್ಸಿಗೆ ನಿರಾಳವಾಯಿತು. ಓಡಿಹೋಗಿ ದೇವರ ಮುಂದೆ ದೀಪ ಹಚ್ಚಿದರು. “ಏನಮ್ಮಾ ಆ ಭಾರೀ ಸದ್ದು?” ಆ ಧ್ವನಿ ಅನುರಾಗ್‌ನದು. ಅಮ್ಮ ತಿರುಗಿ ನೋಡಿದರು. ಕ್ಷಣದಲ್ಲೇ ಥಟ್ಟನೇ ಎದ್ದು ಓಡಿಬಂದು ಮಗನನ್ನು ಅಪ್ಪಿದರು “ಎಲ್ಲಿಗೆ ಹೋಗಿದ್ದೆಯೋ” ಎಂದು ಅಳುತ್ತಲೇ ಕೇಳಿದರು. “ನಾನೆಲ್ಲಿ ಹೋಗಿದ್ದೆ? ಮಾಳಿಗೆಯ ಮೇಲೆ ಪೇಪರ್ ಓದುತ್ತ ಕುಳಿತಿದ್ದೆ!” ಎಂದ ಮಗ. ಅವರಿಗೆ ಉತ್ತರ ಕೇಳಿಸಲಿಲ್ಲ, ಅದು ಬೇಕೂ ಇರಲಿಲ್ಲ.

ಈಗ ಅಮ್ಮನಿಗೆ ಅರ್ಥವಾಯಿತು. ತನಗೆ ತನ್ನ ಮಗನ ಪ್ರತಿಶತ ತೊಂಬತ್ತು ಬಂದ ಅಂಕದ ಪಟ್ಟಿಗಿಂತ ಮಗನ ಜೀವನವೇ ದೊಡ್ಡದೆಂದು. ಮರುವರ್ಷ ಹೊಸ ಅಂಕಪಟ್ಟಿ ಬಂದೀತು, ಹೊಸ ಮಗು ಬಂದೀತೇ? ಅಂಕಗಳ ಆತುರದಲ್ಲಿ ಮಕ್ಕಳನ್ನು ಕಳೆದುಕೊಳ್ಳುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.