ಉಪನಿಷತ್ತುಗಳು ಜ್ಞಾನದ ಶಿಖರಗಳು. ಅವು ಕೆಲವೇ ಮಾತುಗಳಲ್ಲಿ ಜ್ಞಾನದ ಗಂಗೆಯನ್ನೇ ಹರಿಸುತ್ತವೆ. ಅದಕ್ಕೇ ಅವುಗಳನ್ನು ವೇದಾಂತವೆಂದು ಗುರುತಿಸಲಾಗುತ್ತದೆ. ಅವು ವೇದದ-ಜ್ಞಾನದ ತುತ್ತ ತುದಿಗಳು. ಈ ಉಪನಿಷತ್ತುಗಳಲ್ಲಿ ದೃಷ್ಟಾರರು ಕೆಲವು ಮಹಾನ್ ಸತ್ಯಗಳನ್ನು ಸುಲಭವಾಗಿ ಅರ್ಥವಾಗುವಂತೆ ಪುಟ್ಟ ಪುಟ್ಟ ಕಥೆಗಳ ರೂಪದಲ್ಲಿ ತಿಳಿಸಿದ್ದಾರೆ. ಅಂಥದೊಂದು ಕಥೆ ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವಂತಹದ್ದು.
ಒಂದಾನೊಂದು ಕಾಲದಲ್ಲಿ ಮಹಾವೃಷ ಎಂಬ ದೇಶವನ್ನು ಜನಶೃತಿ ಎಂಬ ಮಹಾರಾಜ ಆಳುತ್ತಿದ್ದ. ಅವನು ಮಹಾಪರಾಕ್ರಮಿ. ಅವನ ರಾಜ್ಯದ ಮೇಲೆ ದಂಡೆತ್ತಿ ಬರಲು ಯಾರೂ ಧೈರ್ಯಮಾಡುತ್ತಿರಲಿಲ್ಲ. ಅವನು ಮಹಾಜ್ಞಾನಿಯೂ ಆಗಿದ್ದ. ಯಾವಾಗಲೂ ಋಷಿಗಳೊಡನೆ, ಜ್ಞಾನಿಗಳೊಡನೆ ಚರ್ಚೆ ಮಾಡುತ್ತಾ ದೇಶದ ಹಿತವನ್ನೇ ಬಯಸುತ್ತಿದ್ದ. ಅವನು ಪ್ರಾಣಿ, ಪಕ್ಷಿಗಳ ಭಾಷೆಯನ್ನು ಕಲಿತಿದ್ದ. ಅವನಿಗೊಂದು ವಿಶೇಷ ಆಸಕ್ತಿ ಇತ್ತು. ಅದೆಂದರೆ ತನ್ನ ರಾಜ್ಯದಲ್ಲಿ ಯಾರೂ ಹಸಿವೆಯಿಂದ ನರಳಬಾರದು. ಅದಕ್ಕೆಂದು ಆತ ಒಂದು ಬೃಹತ್ ಅಡುಗೆ ಮನೆಯನ್ನು ನಿರ್ಮಿಸಿ ಅಪಾರ ಪ್ರಮಾಣದ ಉತ್ತಮ ಆಹಾರವನ್ನು ಸಿದ್ಧಪಡಿಸಿ ತನ್ನ ರಾಜ್ಯದ ಮೂಲೆಮೂಲೆಗೆ ಕಳುಹಿಸಿ ಪ್ರತಿಯೊಬ್ಬರಿಗೂ ಆಹಾರ ದೊರೆಯುವಂತೆ ಯೋಜನೆ ಮಾಡಿದ್ದ.
ಪ್ರತಿದಿನ ಸಂಜೆಗೆ ಎಲ್ಲೆಡೆಯಿಂದ ಬಂದ ವರದಿಯನ್ನು ಪರಿಶೀಲಿಸಿ ಯಾರೂ ಹಸಿವೆಯಿಂದ ಬಳಲಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದ. ಆನಂತರವೇ ತಾನು ಊಟಮಾಡಿ ವಿಶ್ರಾಂತಿ ಪಡೆಯುತ್ತಿದ್ದ. ಈ ಪ್ರಯತ್ನ ಮುಂದುವರೆದಂತೆಲ್ಲ ಅವನಿಗೆ ಅರಿವಿಲ್ಲದಂತೆಯೇ ಅವನ ಮನಸ್ಸಿನಲ್ಲಿ ಒಂದು ಸಣ್ಣ ಅಹಂಕಾರ ಮೊಳೆಯತೊಡಗಿತು. ‘ನನ್ನ ಹಾಗೆ ಪ್ರಜೆಗಳನ್ನು ನೋಡಿಕೊಳ್ಳುವುದು ಸಾಧ್ಯವಿಲ್ಲ. ನನ್ನ ಪ್ರತಿಯೊಬ್ಬ ಪ್ರಜೆ ಊಟ ಮಾಡುವ ಅನ್ನ ನನ್ನದೇ.’ ಹೀಗೆ ಆತ ಅಭಿಮಾನವೆಂದು ಭಾವಿಸಿದ ಅಹಂಕಾರ ನಿಧಾನವಾಗಿ ತಲೆ ಎತ್ತುತ್ತಿತ್ತು.
ಒಂದು ದಿನ ಜನಶೃತಿ ತನ್ನ ಅರಮನೆಯ ಉಪ್ಪರಿಗೆಯ ಮೇಲೆ ನಿಂತು ಸುಂದರವಾದ ಸೂರ್ಯಾಸ್ತವನ್ನು ಗಮನಿಸಿ ಸಂತೋಷಪಡುತ್ತಿದ್ದ. ಆಗ ಹಕ್ಕಿಗಳು ತಮ್ಮ ಗೂಡಿಗೆ ಮರಳುವ ಸಮಯ. ಎರಡು ಹಂಸಪಕ್ಷಿಗಳು ಹಾರುತ್ತ ನಡೆದಿದ್ದವು. ಅವು ತಮ್ಮೊಳಗೆ ಮಾತನಾಡುತ್ತಿದ್ದವು. ಒಂದು ಹಂಸ ಮತ್ತೊಂದಕ್ಕೆ ಎಚ್ಚರಿಕೆ ನೀಡಿತು, ‘ಏಯ್ ಹುಷಾರಿನಿಂದ ಹಾರು. ಕೆಳಗೆ ಹೋಗಬೇಡ. ಅಲ್ಲಿ ಮಹಾಪ್ರತಾಪಿಯಾದ, ಜ್ಞಾನಿಯಾದ ಜನಶೃತಿ ಮಹಾರಾಜ ನಿಂತಿದ್ದಾನೆ.
ಅವನ ಧರ್ಮದ ಪ್ರಭೆ ಜ್ವಾಲೆಯಂತೆ ಹರಡುತ್ತಿದೆ. ನೀನು ಕೆಳಗೆ ಹಾರಿದರೆ ಆ ಪ್ರಭೆಗೆ ಸಿಕ್ಕು ಸುಟ್ಟು ಹೋಗುತ್ತೀಯೆ.’ ಆಗ ಇನ್ನೊಂದು ಹಂಸ, ‘ಸಾಕು ಸುಮ್ಮನಿರು ಅದೆಷ್ಟು ಅವನನ್ನು ಹೊಗಳುತ್ತೀ. ಈ ರಾಜ ಜನಶೃತಿ ಬಂಡಿ ಎಳೆಯುವ ನಮ್ಮ ರೈಕ್ಪನಿಗಿಂತ ದೊಡ್ಡವನೇ?’ ಎಂದು ಕೇಳಿತು. ಮೊದಲಿನ ಹಂಸ, ‘ಅದಾವನೇ ಬಂಡಿ ಎಳೆಯುವ ರೈಕ್ಪ? ಆತ ನಮ್ಮ ಮಹಾರಾಜನಿಗಿಂತ ದೊಡ್ಡವನೇ?’ ಎಂದು ಪ್ರಶ್ನಿಸಿತು. ‘ರಾಜ್ಯದ ಧನವನ್ನು ಬಳಸಿ ದಾನಮಾಡಿ ದೊಡ್ಡವನಾಗುವುದು ಮಹಾ ಸಾಧನೆಯೇ? ನಮ್ಮ ರೈಕ್ಪ ನಿಜವಾಗಿಯೂ ಸಾಧಕ, ಬಡವನಾದರೂ ಆಧ್ಯಾತ್ಮದಲ್ಲಿ ಪ್ರಚಂಡನಾಗಿರುವವನು’ ಎಂದಿತು ಮತ್ತೊಂದು ಹಂಸ.
ಅಷ್ಟರಲ್ಲಿ ಅವು ಹಾರಾಡುತ್ತ ದೂರ ಹೋಗಿದ್ದವು. ಈ ಮಾತುಗಳನ್ನು ಕೇಳಿಸಿಕೊಂಡಿದ್ದ ರಾಜ ಚಿಂತೆಗೆ ಬಿದ್ದ. ಅವನು ಮೂಲತಃ ಸಾತ್ವಿಕ, ಸಜ್ಜನ. ಆದರೆ ಈಗೊಂದು ಅಹಂಕಾರದ ಎಳೆ ಮೂಡಿ ಬಂದಿತ್ತು. ಹಂಸಗಳು ಅಧ್ಯಾತ್ಮ ಸಾಧನೆಯ ಸಂಕೇತಗಳು. ಆದ್ದರಿಂದ ಅವು ಹೇಳಿದ್ದು ಸರಿಯೇ ಇರಬಹುದು ಎಂದು ಮರುದಿನ ತನ್ನ ಮಂತ್ರಿಗಳಿಗೆ ಹೇಳಿ ರೈಕ್ಪನನ್ನು ಹುಡುಕಿಸಿದ. ತಾನೇ ಆರುನೂರು ಹಸುಗಳು, ಬಲಿಷ್ಠವಾದ ದನಗಳನ್ನು ಹೂಡಿದ ಬಂಡಿ ಮತ್ತು ಬಂಗಾರದ ಸರವನ್ನು ತೆಗೆದುಕೊಂಡು ರೈಕ್ಪನ ಬಳಿಗೆ ಹೋದ.
ಆತ ತೀರ ಬಡವ, ತನ್ನ ಬಂಡಿಯ ಬುಡದ ನೆರಳಿನಲ್ಲಿಯೇ ಕುಳಿತಿದ್ದ. ರಾಜ ತಾನು ತಂದಿದ್ದ ಎಲ್ಲ ವಸ್ತುಗಳನ್ನು ರೈಕ್ಪನಿಗೆ ಅರ್ಪಿಸಿ ತನಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡಬೇಕೆಂದು ಕೇಳಿಕೊಂಡ. ಆಗ ರೈಕ್ಪ ಹೇಳಿದ, ‘ರಾಜಾ, ಈ ಬಂಡಿ, ಹಸುಗಳು, ಬಂಗಾರವನ್ನು ಮರಳಿ ತೆಗೆದುಕೊಂಡು ಹೋಗಿಬಿಡು. ಆತ್ಮಜ್ಞಾನ ಮಾರಾಟದ ಸರಕಲ್ಲ.’
ನಂತರ ರೈಕ್ಪ, ಜನಶೃತಿಗೆ ಅಧ್ಯಾತ್ಮ ಬೋಧನೆ ಮಾಡಿದನಂತೆ. ರಾಜನ ಅನ್ನದಾನದ ಭ್ರಮೆ ಕರಗಿತು. ಈ ಪುಟ್ಟ ಕಥೆ ನಮಗೆಷ್ಟು ಪಾಠ ಕಲಿಸುತ್ತದೆ. ಎಷ್ಟೇ ಸಾತ್ವಿಕರಾದರೂ ಆಗಾಗ ಅಹಂಕಾರ ನಮಗೆ ಅರಿವಿಲ್ಲದಂತೆ ತಲೆ ಎತ್ತುತ್ತದೆ. ನಾವು ಜಾಗೃತರಾಗಿರಬೇಕು. ನಮ್ಮ ದೋಷಗಳನ್ನು ಯಾರೂ ತೋರಬಹುದು. ಅದನ್ನು ಸ್ವೀಕರಿಸುವ ಮನೋಭಾವ ನಮಗಿರಬೇಕು. ಪ್ರಪಂಚದಲ್ಲಿ ಮೇಲು-ಕೀಳು ಎಂಬುದಿಲ್ಲ.
ಹಣ, ಅಧಿಕಾರ ಇವುಗಳು ಮೇಲುಕೀಳನ್ನು ನಿರ್ಧರಿಸಲಾರವು. ಜ್ಞಾನ ಯಾರ ಸೊತ್ತೂ ಅಲ್ಲ. ಅಹಂಕಾರವನ್ನು ಮರೆತು ಯಾರಿಂದಲಾದರೂ ಕಲಿಯುವ ಮನಸ್ಸು ಮಾಡಿದರೆ ಮಾತ್ರ ನಮ್ಮ ಬೆಳವಣಿಗೆ ಸಾಧ್ಯ. ಒಂದು ಪುಟ್ಟ ಕಥೆ ನಮಗೆ ನೀಡಬಹುದಾದ ಪಾಠಗಳ ಸಾಧ್ಯತೆ ಬೆರಗು ಹುಟ್ಟಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.