ADVERTISEMENT

ಅರಿವಿಲ್ಲದ ಬೇಜವಾಬ್ದಾರಿ

ಡಾ. ಗುರುರಾಜ ಕರಜಗಿ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಇತ್ತೀಚಿಗೆ ಒಂದು ಅಂತರ್‌ರಾಷ್ಟ್ರೀಯ ಶಾಲೆಯ ಶಿಕ್ಷಕಿ ಪ್ರೀತಮ್ ಹೇಳಿದ ಘಟನೆ ಇದು : ಅದೊಂದು ಬಹುದೊಡ್ಡ ಹಾಗೂ ಪ್ರಖ್ಯಾತವಾದ ಶಾಲೆ. ಅಲ್ಲಿ ಅನೇಕ ದೇಶದ ಮಕ್ಕಳು ಕಲಿಯಲು ಬರುತ್ತಾರೆ. ಪಾಠ ನಡೆಯುವುದು ಇಂಗ್ಲಿಷ್‌ನಲ್ಲಿ. ಆದರೆ ಬಹಳಷ್ಟು ದೇಶದ ಮಕ್ಕಳಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ. ಹಾಗಾಗಿ ಅವರಿಗೆಲ್ಲ ಇಂಗ್ಲೀಷಿನ ವಿಶೇಷ ತರಗತಿ, ತರಬೇತಿ ಇರುತ್ತದೆ. ಅದರಲ್ಲಿ ಜರ್ಮನಿ, ರಷ್ಯ, ಚೈನಾ, ತೈವಾನ್, ಕೋರಿಯಾ, ಥೈಲಾಂಡ್, ಸುಡಾನ್ ದೇಶಗಳಿಂದ ಬರುವ ಮಕ್ಕಳಿಗೆ ಬೇರೆ ರೀತಿಯಲ್ಲೇ ಕಲಿಸಬೇಕಾಗುತ್ತದೆ. ನಾನು ಹೇಳಿದ ಶಿಕ್ಷಕಿ ಆ ಶಾಲೆಯಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಆ ಶಾಲೆಗಳಲ್ಲಿ ಪಾಠ ಮಾಡುವ ವಿಧಾನವೇ ಬೇರೆ. ಪಠ್ಯಪುಸ್ತಕವನ್ನು ಹಿಡಿದುಕೊಂಡು ಉತ್ತರ ಬರೆಯಿಸಿ ಕಲಿಸುವುದಿಲ್ಲ. ಆಟಗಳ ಮೂಲಕ, ಟೇಪ್ ರೆಕಾರ್ಡರ್ ಬಳಸಿ, ವಿಡಿಯೊಗಳನ್ನು ತೋರಿಸಿ, ಸೃಜನಶೀಲ ವಿಧಾನಗಳನ್ನು ಅನುಸರಿಸಿ ಮಕ್ಕಳು ಕಲಿತದ್ದನ್ನು ಅರಗಿಸಿಕೊಳ್ಳುವಂತೆ ಮಾಡುತ್ತಾರೆ. ನಿಜವಾದ ಪಾಠಮಾಡುವ ರೀತಿ ಮಕ್ಕಳಿಗೆ ಕೇವಲ ಮಾರ್ಕ್ಸ್ ಬಂದರೆ ಸಾಕೆಂಬ ‘ಮಾರ್ಕ್ಸವಾದಿಗಳ’ ಧೋರಣೆಯಲ್ಲ.

ಪ್ರೀತಮ್ ಕೂಡ ತುಂಬ ಪ್ರತಿಭಾವಂತೆ. ಆಕೆಗೆ ತುಂಬ ಹುಮ್ಮಸ್ಸು, ಅತೀವ ಕಳಕಳಿ. ಆಕೆ ಪ್ರತಿಯೊಬ್ಬ ಮಗುವನ್ನು ವಿಶೇಷವಾಗಿ ಗಮನಿಸುತ್ತ ಅವರವರ ಶಕ್ತಿಗೆ, ಆಸಕ್ತಿಗೆ ತಕ್ಕಂತೆ ವಿಶೇಷ ವಿಧಾನಗಳನ್ನು ಆಯ್ದುಕೊಳ್ಳುತ್ತ ಕಲಿಸುತ್ತಿದ್ದರು. ಕೆಲಮಕ್ಕಳಿಗೆ ಎಷ್ಟು ಬಾರಿ ಕಲಿಸಿದರೂ ಉಚ್ಚಾರಣೆಯೇ ಸರಿಯಾಗಿ ಬರುವುದಿಲ್ಲ. ಕಲಿಸಿದ ವ್ಯಾಕರಣ ಮರುದಿನವೇ ಗಾಳಿಯಲ್ಲಿ ಕರಗಿ ಹೋಗಿ ಕ್ರಿಯಾಪದ, ನಾಮಪದವಾಗಿ ಬಿಡುತ್ತಿತ್ತು. ಆಗ ತಾಳ್ಮೆ ತುಂಬ ಬೇಕಾಗುತ್ತಿತ್ತು.

ಆ ವರ್ಷದ ತರಗತಿಗಳು ಮುಕ್ತಾಯದ ಹಂತದಲ್ಲಿದ್ದವು. ಮುಂದಿನ ವಾರ ಮಕ್ಕಳು ತಮ್ಮ ತಮ್ಮ ದೇಶಗಳಿಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗ ಪ್ರೀತಮ್ ಹುಡುಗರನ್ನು ಮಾತನಾಡಿಸಿಕೊಂಡು ಬರಲು ತರಗತಿಗೆ ಹೋದರು. ಹುಡುಗರೆಲ್ಲ ಉತ್ಸಾಹದ ಬುಗ್ಗೆಗಳಾಗಿ ಹಾರಾಡುತ್ತಿದ್ದಾರೆ. ‘ಆರೆ! ಅದು ಯಾರು ಮೂಲೆಯಲ್ಲಿ ತಲೆತಗ್ಗಿಸಿ ಕುಳಿತವರು?’ ಹತ್ತಿರಹೋಗಿ ನೋಡಿದರೆ ಆತ ಮ್ಯಾನ್‌ಫ್ರೆಡ್. ತರಗತಿಯ ಅತ್ಯಂತ ಪ್ರತಿಭಾಶಾಲಿ ಬಾಲಕ. ಅವನು ಜರ್ಮನಿಯಿಂದ ಬಂದವನಾದರೂ ಉಳಿದೆಲ್ಲರಿಗಿಂತ ಹೆಚ್ಚು ಆಸಕ್ತಿಯಿಂದ, ಜಾಣ್ಮೆಯಿಂದ ಇಂಗ್ಲಿಷ್ ಕಲಿತು ಕೆಲವರು ಇಂಗ್ಲೆಂಡಿನ ವಿದ್ಯಾರ್ಥಿಗಳಿಗಿಂತಲೂ ಪ್ರಾವಿಣ್ಯ ಸಂಪಾದಿಸಿದ್ದವನು. ಅವನೇಕೆ ಅಳುತ್ತಿದ್ದಾನೆ ಎಂದು ಹತ್ತಿರ ಹೋಗಿ ಅವನ ಹೆಸರು ಕರೆದಾಗ ಆತ ಧಡಕ್ಕನೇ ಎದ್ದು ನಿಂತ. ಆ ಹನ್ನೊಂದು ವರ್ಷದ ಹುಡುಗನ ಕಣ್ಣುಗಳು ಅತ್ತು ಅತ್ತು ಕೆಂಪಗಾಗಿವೆ. ಪ್ರೀತಮ್‌ರನ್ನು ನೋಡಿ ಕೋಪದಿಂದ, “ನಿಮ್ಮಷ್ಟು ಕ್ರೂರಿಯಾದವರು ಭಾರತದಲ್ಲೇ ಇಲ್ಲ, ಅದೇಕೆ ಜಗತ್ತಿನಲ್ಲೇ ಇಲ್ಲ” ಎಂದ. ಈಕೆಗೆ ಆಶ್ಚರ್ಯ, ಗಾಬರಿ. ತನ್ನನ್ನು ಅತ್ಯಂತ ಪ್ರೀತಿಯ ಶಿಕ್ಷಕಿ ಎಂದು ಹೇಳಿಕೊಳ್ಳುತ್ತಿದ್ದ ಮ್ಯಾನಫ್ರೆಡ್ ಹೇಳಿದ ಮಾತೇ ಇದು? “ಯಾಕೆ ಮ್ಯಾಡಂ, ನಾನು ಚೆನ್ನಾಗಿ ಓದುತ್ತಿರಲಿಲ್ಲವೇ? ಕ್ಲಾಸಿಗೆ ಪ್ರಥಮನಾಗಿರಲಿಲ್ಲವೇ? ನೀವೇ ಹೇಳಿದ್ದಿರಿ, ನೀನು ಅತ್ಯಂತ ಪ್ರತಿಭಾಶಾಲಿ ಎಂದು. ಆದರೆ ಹೀಗೇಕೆ ಮಾಡಿದಿರಿ ಮ್ಯಾಡಂ?” ಆತನ ಕೋಪ ಕ್ಷಣದಲ್ಲಿ ಕರಗಿ ಮತ್ತೆ ಆತ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. “ನಾನೇನು ತಪ್ಪು ಮಾಡಿದೆ ಹೇಳು ಮ್ಯಾನಫ್ರೆಡ್? ಇಂದಿಗೂ ನೀನು ನನ್ನ ಅತ್ಯುತ್ತಮ ವಿದ್ಯಾರ್ಥಿ” ಎಂದು ತೊದಲಿದರು ಪ್ರೀತಮ್. ಆ ಹುಡುಗ ತನ್ನ ಚೀಲದಿಂದ ರಿಪೋರ್ಟ್ ಕಾರ್ಡ ತೆಗೆದು ತೋರಿಸಿದ, “ಕೊನೆಗೆ ಏನು ಬರೆದಿದ್ದೀರಿ ಮ್ಯಾಡಂ?” “ಇನ್ನೂ ಬಹಳಷ್ಟು ಸುಧಾರಿಸಲು ಅವಕಾಶವಿದೆ” ಎಂದಲ್ಲವೇ? ಇದನ್ನು ನಾನು ನಮ್ಮ ತಂದೆಗೆ ಕಳುಹಿಸಿದಾಗ ಏನೆಂದರು ಗೊತ್ತೇ?

ನೀನೊಬ್ಬ ಆಲಸಿ ಹುಡುಗ, ಸೋಮಾರಿ. ನಿನ್ನ ಶಿಕ್ಷಕಿ ನೀನು ಇನ್ನೂ ಸುಧಾರಿಸಲು ಸಾಧ್ಯವಿದೆ ಎಂದು ಬರೆದಿದ್ದರೆ ನೀನು ಸುಧಾರಿಸಲು ಪ್ರಯತ್ನಿಸಲಿಲ್ಲ ಎಂದರ್ಥ. ನಿನ್ನ ಬಗ್ಗೆ ನಾಚಿಕೆಯಾಗುತ್ತದೆ” ಎಂದೆಲ್ಲ ತೆಗಳಿದರು. ಆಗ ಪ್ರೀತಮ್‌ಗೆ ಗೊತ್ತಾಯಿತು. ಅವನನ್ನು ಉತ್ತೇಜಿಸಲು ಯೋಚಿಸದೆ ಬರೆದ ಶರಾ ಅವನನ್ನು ಉತ್ತೇಜಿಸದೆ ಖಿನ್ನತೆಗೆ ತಳ್ಳಿತ್ತು. ಆಗ ಆಕೆಗೆ ತಾನು ಕ್ರೂರಿ ಮಾತ್ರವಲ್ಲ, ಅತ್ಯಂತ ಬೇಜವಾಬ್ದಾರಿ ಶಿಕ್ಷಕಿ ಎನ್ನಿಸಿತು. ಅಂದಿನಿಂದ ಅವರು ಮಕ್ಕಳ ರಿಪೋರ್ಟ್ ಕಾರ್ಡಿನಲ್ಲಿ ಶರಾ ಬರೆಯುವಾಗ ತುಂಬ ವಿಚಾರ ಮಾಡಿ ಬರೆಯುತ್ತಾರಂತೆ. ಇದನ್ನು ಶಿಕ್ಷಕರು, ಪಾಲಕರು ಗಮನಿಸಬೇಕು. ನಾವು ಬಹಳ ಚಿಂತನೆಯಿಲ್ಲದೇ ಆಡಿದ, ಬರೆದ ಮಾತು ಮಗುವಿನ ದಿಶೆಯನ್ನೇ, ಸ್ವಭಾವವನ್ನೇ ಬದಲಿಸಬಿಡಬಹುದು. ನಮ್ಮ ಪ್ರತಿಯೊಂದು ನಡವಳಿಕೆಯಲ್ಲಿ, ಮಾತಿನಲ್ಲಿ ಜವಾಬ್ದಾರಿ ತುಂಬಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.