ADVERTISEMENT

ಆರಿಸಿಕೊಂಡ ಅಂಧತ್ವ

ಡಾ. ಗುರುರಾಜ ಕರಜಗಿ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಮಹಾಭಾರತದಲ್ಲಿ ಗಾಂಧಾರಿಯದೊಂದು ವಿಶೇಷ ಪಾತ್ರ. ಈಕೆ ಗಾಂಧಾರ ರಾಜನಾದ ಸುಬಲನ ಮಗಳು. ಇಂದಿನ ಪೆಶಾವರ ಅಂದಿನ ಗಾಂಧಾರ. ಕಾಬೂಲ್ ನದಿಯ ದಂಡೆಯ ಮೇಲಿರುವ ಪಟ್ಟಣ ಅದು. ಇವಳಿಗೆ ಹದಿಮೂರು ಜನ ಸಹೋದರರು.  ಅವರಲ್ಲಿ ಶಕುನಿ ಮಾತ್ರ ತನ್ನ ಪ್ರಭಾವವನ್ನು ತೋರಿದ, ಅನಾಹುತಗಳನ್ನು ಮಾಡಿಸಿದ.

ಆಕೆಯ ಬಗ್ಗೆ ಒಂದು ವಿಚಿತ್ರವಾದ ಕಥೆ ಇದೆ. ಈಕೆ ಹುಟ್ಟಿದಾಗ ಜ್ಯೋತಿಷಿಗಳು ಜಾತಕವನ್ನು ನೋಡಿ ಇವಳಿಗೆ ಮದುವೆಯಾದ ತಕ್ಷಣ ಗಂಡ ಸತ್ತು ಹೋಗುತ್ತಾನೆಂದು ಹೇಳಿದರಂತೆ.  ಭವಿಷ್ಯ ಹೀಗಿದ್ದಾಗ ಯಾರು ತಾನೇ ಆಕೆಯನ್ನು ಮದುವೆಯಾದಾರು? ಅದಕ್ಕೇ ಗಾಂಧಾರಿಯ ತಾಯಿ-ತಂದೆಯರು ಆಕೆಯನ್ನು ಒಂದು ಹೋತಕ್ಕೆ ಕೊಟ್ಟು ಶಾಸ್ತ್ರೋಕ್ತ ಮದುವೆ ಮಾಡಿದರು.

ಒಂದೆರಡು ದಿನಗಳ ನಂತರ ಹೋತ ಸತ್ತು ಹೋಯಿತಂತೆ. ನಂತರ ಗಾಂಧಾರಿಯ ಮದುವೆಯನ್ನು ಧೃತರಾಷ್ಟ್ರನೊಂದಿಗೆ ಮಾಡಲಾಯಿತು. ತನ್ನ ಗಂಡ ಕುರುಡನೆಂದು ಗೊತ್ತಾದ ಕೂಡಲೇ ಗಾಂಧಾರಿ ತನ್ನ ಕಣ್ಣುಗಳಿಗೂ ಬಟ್ಟೆ ಕಟ್ಟಿಕೊಂಡು ಜೀವನ ಪರ್ಯಂತ ಕುರುಡಿಯಾಗಿಯೇ ಉಳಿದುಬಿಟ್ಟಳು. ವೇದವ್ಯಾಸರನ್ನು ಕೇಳಿ ವರ ಪಡೆದು ಗರ್ಭಿಣಿಯಾದಳು.

ಆದರೆ ಕಾಡಿನಲ್ಲಿದ್ದ ಕುಂತಿಗೆ ಗಂಡು ಸಂತಾನವಾದ ಸುದ್ದಿಯನ್ನು ಕೇಳಿ ಗಾಂಧಾರಿ ಕುದಿದು ಹೋದಳು. ಕುಂತಿಗಿಂತ ಮೊದಲೇ ತಾನು ಗರ್ಭವತಿಯಾಗಿದ್ದರೂ ಹೆರಿಗೆಯಾಗದೇ ಉಳಿದು ಕುಂತಿಯ ಮಗನಿಗೇ ಹಸ್ತನಾವತಿಯ ಸಿಂಹಾಸನ ದಕ್ಕುವಂತಾಗಿದ್ದು ಆಕೆಗೆ ಅಸಹನೀಯವಾಗಿತ್ತು.

ತನ್ನ ಗರ್ಭವನ್ನು ಕೋಪದಿಂದ, ಅಸೂದ ಹೊಸೆದುಕೊಂಡಾಗ ರಕ್ತಮಯವಾದ ನೂರೊಂದು ಪಿಂಡಗಳು ಉದುರಿಬಿದ್ದವು.  ವೇದವ್ಯಾಸರೇ ಅವುಗಳನ್ನು ಬೇರೆಬೇರೆ ಜೇನಿನ ಕೊಪ್ಪರಿಗೆಗಳಲ್ಲಿ ಮಂತ್ರಿಸಿ ಇಟ್ಟರಂತೆ. ಅವುಗಳೇ ಮುಂದೆ ದುರ್ಯೋಧನಾದಿ ಕೌರವರಾದರು. ಹೀಗೆ ಈರ್ಷ್ಯೆ, ಅಸೂಯೆಯ ಪ್ರತಿಫಲವಾದ ಮಕ್ಕಳು ಒಳ್ಳೆಯವರಾಗುವುದು ಹೇಗೆ ಸಾಧ್ಯ?

ನಂತರ ಮಕ್ಕಳು ಬೆಳೆದಂತೆ ಪಾಂಡವರ ಹಾಗೂ ತನ್ನ ಮಕ್ಕಳ ನಡುವೆ ಹೊಗೆಯಾಡುತ್ತಿದ್ದ ದ್ವೇಷವನ್ನು ನೋಡುತ್ತ ಅದನ್ನು ತಡೆಯದೇ ಹೋದಳು. ಆಕೆಗೆ ತನ್ನ ಮಗ ಮಾಡುವ ಪ್ರತಿಯೊಂದು ಮೋಸದ ಅರಿವೂ ಇತ್ತು. ಅದು ಇಷ್ಟವಾಗದೇ ಮಗನಿಗೆ ಬೈದದ್ದೂ ಉಂಟು. ಆದರೆ ಆತ ಹಟ ಮಾಡಿದಾಗ ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದಾಗ ಅವನ ತಂತ್ರಗಳಿಗೆ ಪ್ರತಿ ಹೇಳದೆ ಸುಮ್ಮನಿರುತ್ತಿದ್ದಳು.
 
ತುಂಬಿದ ಸಭೆಯಲ್ಲಿ ತನ್ನ ಸೊಸೆಯ ಮರ್ಯಾದೆಗೆ ತನ್ನ ಮಗ ಕೈ ಹಾಕಿದಾಗಲೂ ಗಾಂಧಾರಿ ತನ್ನ ಒಳಗಣ್ಣನ್ನೂ ಮುಚ್ಚಿಕೊಂಡು ಮಾತನಾಡದೆ ಕುಳಿತುಬಿಟ್ಟಳು, ವಿವೇಕದ ಕೈ ಬಿಟ್ಟಳು.

ಹದಿನೆಂಟು ದಿನದ ಯುದ್ಧದಲ್ಲಿ ತನ್ನ ನೂರೂ ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿ ತಪ್ತಳಾಗಿ ಹೋದಳು. ಕೊನೆಗೊಮ್ಮೆ ಧೃತರಾಷ್ಟ್ರ, ಕುಂತಿ, ವಿದುರರೊಂದಿಗೆ ಕಾಡಿಗೆ ಹೋಗಿ ಕಾಳ್ಗಿಚ್ಚಿಗೆ ಬಲಿಯಾಗಿ ಹೋದಳು.

ಗಾಂಧಾರಿಯ ಜೀವನ ಏಕೆ ಹೀಗಾಯಿತು? ತನ್ನ ಗಂಡ ಕುರುಡನೆಂದು ತಿಳಿದಾಗ ತಾನೂ ಕಣ್ಣುಮುಚ್ಚಿ ಕೂಡ್ರದೇ ಕಣ್ಣು ತೆರೆದುಕೊಂಡು ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸಬೇಕಿತ್ತು.  ಮಕ್ಕಳು ದಾರಿತಪ್ಪಿದಾಗ ತಿದ್ದುವ ಬದಲು ಅನುಮೋದಿಸಿ ಪುತ್ರ ಮೋಹದಲ್ಲಿ ನಿಜವಾಗಿಯೂ ಕುರುಡಾಗಿ ಹೋದಳು.

ಪ್ರತಿಯೊಬ್ಬರ ಜೀವನದಲ್ಲೂ ಈ ದ್ವಂದ್ವಗಳು ಬರುತ್ತವೆ. ಮೋಹ ಮತ್ತು ವಿವೇಕಗಳ ನಡುವಿನ ತಿಕ್ಕಾಟದಲ್ಲಿ ನಾವು ಯಾವುದನ್ನು ಹಿಂಬಾಲಿಸುತ್ತೇವೆ ಎಂಬುದರ ಮೇಲೆ ಯಶಸ್ಸು, ನಿಂತಿರುತ್ತದೆ.  ವಿವೇಕ ಎದ್ದು ನಿಂತರೆ ಸಮಾಧಾನ, ನೆಮ್ಮದಿಗಳು ಜೀವನವನ್ನು ತುಂಬುತ್ತವೆ. ಮೋಹವೇ ಗೆದ್ದರೆ ದುಃಖ, ತಳಮಳಗಳು ತಪ್ಪಿದ್ದಲ್ಲ.  ಗಾಂಧಾರಿಯ ದುರಂತ ಜೀವನವೇ ಇದಕ್ಕೆ ಸಾಕ್ಷಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.