ಮೊನ್ನೆ ಮೊಯಿದ್ ಸಿದ್ಧಿಕಿಯವರು ಬರೆದ ಕಾರ್ಪೋರೇಟ್ ಸೋಲ್ ಎಂಬ ಪುಸ್ತಕವನ್ನು ಓದುತ್ತಿದ್ದೆ. ಆಗ ಅಲ್ಲಿ ಪ್ರಸ್ತಾಪವಾದ ವಿಷಯವೊಂದು ನನ್ನನ್ನು ಬಹಳ ಚಿಂತನೆಗೆ ಹಚ್ಚಿತು.
ಚಕ್ರವರ್ತಿ ಶಹಾಜಹಾನನ ಹಿರಿಯಪುತ್ರ ದಾರಾ ಶಿಕೋವ್. ಮಮತಾಜ್ ಮಹಲ್‌ಳ ಪ್ರೀತಿಯ ಪುತ್ರ ಅಲ್ಲದೇ ಮುಂದೆ ಮೊಘಲ್ ಸಾಮ್ರೋಜ್ಯದ ಚಕ್ರವರ್ತಿಯಾಗುವಂಥವನು. ಅವನ ಜೀವನವನ್ನು ಗಮನಿಸಿದರೆ ಇತಿಹಾಸ ಅವನಿಗೆ ಒಂದಿಷ್ಟು ಅನ್ಯಾಯ ಮಾಡಿದೆ ಎನ್ನಿಸುತ್ತದೆ. ಆತ ತುಂಬ ಉದಾರವಾದಿ. ಸಾಹಿತ್ಯ, ಸಂಗೀತ ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ವಹಿಸಿದವನು. ಆತ ಸ್ವತಃ ಉತ್ತಮ ಚಿತ್ರಕಾರನಾಗಿದ್ದ. ಅವನು ಬಿಡಿಸಿದ ಚಿತ್ರಗಳನ್ನು ಆ ಕಾಲದ ಶ್ರೇಷ್ಠ ಕಲಾವಿದರೇ ಬಾಯಿತುಂಬ ಹೊಗಳಿದ್ದಾರೆ. ಆದರೆ ಅವನ ತಮ್ಮ ಔರಂಗಜೇಬ ಇದಕ್ಕೆ ತದ್ವಿರುದ್ಧವಾಗಿದ್ದವನು.
ದಾರಾ ಶಿಕೋವ್ ಆ ಕಾಲದ ಅತ್ಯಂತ ಶ್ರೇಷ್ಠ ವಾಸ್ತುಶಿಲ್ಪಿಗಳನ್ನು ಕರೆಯಿಸಿ ಅದ್ಭುತವಾದ ಭವನಗಳನ್ನು ನಿರ್ಮಾಣ ಮಾಡಲು ಯೋಜಿಸಿದ. ಅವುಗಳಲ್ಲಿ ಲಾಹೋರಿನಲ್ಲಿ ನಿರ್ಮಾಣವಾಗಿರುವ ಅವನ ಹೆಂಡತಿ ನಾದಿರಾ ಬಾನೂಳ ಸಮಾಧಿ ಮತ್ತು ತಾನು ಅತ್ಯಂತ ಆಳವಾಗಿ ಮೆಚ್ಚಿಕೊಂಡಿದ್ದ ಸೂಫೀ ಸಂತ ಖಾದ್ರಿಯ ಸಮಾದಿ ಹಜರತ್ ಮಿಯಾ ಮಿರ್ ಮುಖ್ಯವಾದವು.
1657 ರಲ್ಲಿ ಶಹಾಜಹಾನನ ಆರೋಗ್ಯ ಕೆಟ್ಟಾಗ ಔರಂಗಜೇಬ ತಾನೆ ಉತ್ತರಾಧಿಕಾರಿಯಾಗಬೇಕೆಂದು ಬಂಡೆದ್ದು ತಂದೆ ಮತ್ತು ಅಣ್ಣ ದಾರಾನ ವಿರುದ್ಧ ಯುದ್ಧ ಮಸೆದ. ನಂತರ ಮೇ 30, 1658 ರಂದು ಅಣ್ಣನನ್ನು ಸೋಲಿಸಿ ತಂದೆಯನ್ನು ಬಂದಿಯಾಗಿ ಹಿಡಿದು ತಂದು ಆಗ್ರಾ ಕೋಟೆಯೊಳಗಿಟ್ಟ. ಇವನ ಅಕ್ಕ ಜಹಾಂ ಆರಾ ಬೇಗಮ್ ತಂದೆಯನ್ನು ನೋಡಿಕೊಳ್ಳುತ್ತ ಕೋಟೆಯಲ್ಲೇ ಉಳಿದಳು. ಏಳೂವರೆ ವರ್ಷಗಳ ನಂತರ ಶಹಾಜಹಾನ್ ದು:ಖಿಯಾಗಿಯೇ ಮರಣಿಸಿದ. ಅಣ್ಣ ದಾರಾ ಗುಜರಾತಿಗೆ ಓಡಿಹೋಗಿ ನಂತರ ಸಿಂಧ್ ಪ್ರಾಂತ್ಯಕ್ಕೆ ಹೋದ. ಅಲ್ಲಿ ಅವನನ್ನು ಮೋಸದಿಂದ ಹಿಡಿದು ಔರಂಗಜೇಬನಿಗೆ ಒಪ್ಪಿಸಿದರು. ಔರಂಗಜೇಬ ತನ್ನ ಅಣ್ಣನ ಕೈಕಾಲುಗಳಿಗೆ ಕೋಳ ತೊಡಿಸಿ ಅಗ್ರಾದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದ. ಜನ ಪ್ರತಿಭಟಸಿದಾಗ ಅವನನ್ನು ಕೈದಿನಲ್ಲಿಟ್ಟ. ಹೇಳಿದಂತೆ ಮಾತನಾಡುವ ವಿದ್ವಾಂಸರು ಅಂದಿಗೂ ಇದ್ದರು. ಅವರ ಕಡೆಯಿಂದ ದಾರಾ ಶಿಕೋವ್ ಧರ್ಮದ್ರೋಹಿ ಎಂದು ತೀರ್ಪು ಕೊಡಿಸಿ ಆಗಸ್ಟ್ 30, 1659 ರಾತ್ರಿ ಅವನ ತಲೆ ಹಾರಿಸಿ ಕೊಲ್ಲಿಸಿಬಿಟ್ಟ. ಔರಂಗಜೇಬನ ಮಹತ್ವಾಕಾಂಕ್ಷೆ ಅವನನ್ನು ಕೊಲ್ಲಿಸಿತು ಆದರೆ ಕೊಟ್ಟ ಬಣ್ಣ ಮಾತ್ರ ಧರ್ಮದ್ರೋಹ.
ದಾರಾ ಶಿಕೋವ್ ಮಾಡಿದ ಕೆಲಸ ಆಶ್ಚರ್ಯವೆನ್ನಿಸುತ್ತದೆ. ಅವನ ಮಹಾನ್ ಕೃತಿ ಮಜ್ಮಾ-ಉಲ್-ಬಹ್ರೇನ್ (ಎರಡು ಸಮುದ್ರಗಳ ಸಂಗಮ) ಸೂಫೀ ಹಾಗೂ ಹಿಂದೂ ಆಧ್ಯಾತ್ಮ ಚಿಂತನೆಗಳನ್ನು ಬೆಸೆಯುವ ಪ್ರಯತ್ನ. ದಾರಾ ವೇದಗಳು ಮತ್ತು ಉಪನಿಷತ್ತುಗಳ ಅಭ್ಯಾಸ ಮಾಡಿದ, ಶ್ರಿ ಆದಿ ಶಂಕರಾಚಾರ್ಯರ ತತ್ವಗಳನ್ನು ಮೆಚ್ಚಿಕೊಂಡ. ಅವನು ಅನೇಕ ವಿದ್ವಾಂಸರ ಸಹಾಯವನ್ನು ಪಡೆದು ಐವತ್ತೆರಡು ಉಪನಿಷತ್ತುಗಳನ್ನು ಪರ್ಶಿಯನ್ ಭಾಷೆಗೆ ಅನುವಾದ ಮಾಡಿಸಿ ಸಿರ್-ಯು-ಅಕಬರ್ ಎಂಬ ಗ್ರಂಥ ಹೊರತಂದ. ಆತನ ಜೊತೆಗೆ ಅಂದಿನ ಖ್ಯಾತ ಸೂಫೀ ಸಂತನಾದ ಸರಮಾದ್ ಸದಾ ಇರುತ್ತಿದ್ದ. ಹೀಗಾಗಿ ಎರಡೂ ಧರ್ಮಗಳಲ್ಲಿದ್ದ ಸಮಾನತೆಯನ್ನು ಗುರುತಿಸಿ, ದಾಖಲಿಸಿ ತಾನೇ ಒಂದು ಅಮೂಲ್ಯವಾದ ಕೊಂಡಿಯಾಗಿದ್ದ. ರಾಜಕೀಯವಾದ ಕಾರಣಗಳಿದ್ದರೂ ಧರ್ಮದ್ರೋಹದ ಹಣೆಪಟ್ಟಿ ಹೊತ್ತು ಶಿರಚ್ಛೇದ ಮಾಡಿಸಿಕೊಂಡ ದಾರಾ ಶಿಕೋವ್‌ನ ಜೀವನ ಕಥೆ ಒಬ್ಬ ಅಸಾಮಾನ್ಯ ಚಿಂತಕ, ವಿಶಾಲ ಮನೋಭಾವದ ದಾರ್ಶನಿಕ ಇತಿಹಾಸಕಾರರ ಚಾಕಚಕ್ಯತೆಯಲ್ಲಿ ಹೇಗೆ ಅನಾಮಧೇಯನಾಗಿ ಕಳೆದುಹೋಗುತ್ತಾನೆ ಎಂಬುದಕ್ಕೆ ನಿದರ್ಶನ.
ಇಲ್ಲಿ ಒಂದು ವಿಚಾರ ಕಾಡುತ್ತದೆ. ಧರ್ಮಗಳ ನಡುವಿನ ವೈಮನಸ್ಸನ್ನು ಕಡಿಮೆ ಮಾಡುವ, ಸಾಮ್ಯತೆಯನ್ನು ಎತ್ತಿ ತೋರುವ ವಿಶಾಲ ಮನೋಭಾವದವರೆಲ್ಲ ತಮ್ಮ ಹೆಗಲ ಮೇಲೆ ಸದಾ ಶಿಲುಬೆಯನ್ನು ಹೊತ್ತುಕೊಂಡೇ ನಿಂತಿರಬೇಕೇ? ಬದಲಾವಣೆ ತರಬೇಕೆನ್ನುವವರೆಲ್ಲ ಬಲಿಯಾಗಬೇಕಾದ ಪರಿಸ್ಥಿತಿ ಹಿಂದೆ ಇತ್ತು, ಇಂದೂ ಇದೆ, ಮುಂದೂ ಇರಬಹುದು ಎಂಬ ಸೂಚನೆ ಇದೆ. ಧರ್ಮ ಬಹುದೊಡ್ಡ ಚಿಂತನೆ. ಅದರಲ್ಲಿ ಸಣ್ಣತನಕ್ಕೆ ಅವಕಾಶವಿಲ್ಲ. ನಮ್ಮ ಸಂಪ್ರದಾಯಗಳನ್ನು ಮನೆಯಲ್ಲಿಯೇ ಇಟ್ಟು ಸಾಮಾಜಿಕವಾಗಿ ನಾವು ಕೇವಲ ಮನುಷ್ಯರಾಗಿ ಯಾವ ಹಣೆಪಟ್ಟಿಗಳಿಲ್ಲದೇ ಬದುಕುವುದು ಎಂದು ಸಾಧ್ಯವಾದೀತು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.