ADVERTISEMENT

ಕಾಣದ ಸಹಾಯಹಸ್ತ

ಡಾ. ಗುರುರಾಜ ಕರಜಗಿ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಆಗ ತಾನೇ ನಮ್ಮ ಶಿಕ್ಷಕರ ತರಬೇತಿ ಕೇಂದ್ರ ಪ್ರಾರಂಭವಾಗಿತ್ತು. ಅದು ಕರ್ತವ್ಯನಿರತರಾದ ಶಿಕ್ಷಕರಿಗೆ ವ್ಯವಸ್ಥಿತ ತರಬೇತಿ ನೀಡುವ ಭಾರತದ ಮೊದಲ­ನೆಯ ಹಾಗೂ ವಿಶಿಷ್ಟವಾದ ಕೇಂದ್ರವೆಂದು ಪ್ರಶಂಸೆ ಪಡೆದಿತ್ತು. ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಶ್ರೇಷ್ಠಮಟ್ಟದ ಶಿಕ್ಷಕರು ತರಗತಿಗಳನ್ನು ನಡೆಸಲು ಸಿದ್ಧ­ರಾ­ಗಿದ್ದರು.

ತರಬೇತಿಗೆ ಬೇಕಾದ ಸಕಲ ಸಿದ್ಧತೆಗಳು ಮುಗಿದಿದ್ದವು. ಒಂದು ವರ್ಷದ ಕೋರ್ಸಿಗೆ ಅರ್ಜಿಗಳು ಬಂದಿದ್ದವು. ನಾವು ತೆಗೆದುಕೊಳ್ಳುವುದು ಕೇವಲ ನಲ­ವತ್ತು ವಿದ್ಯಾರ್ಥಿಗಳನ್ನು ಮಾತ್ರ. ಬಂದ ನೂರಾರು ಅರ್ಜಿಗಳಲ್ಲಿ ನಲ­ವತ್ತನ್ನು ಮಾತ್ರ ಆರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಷಯ ತಿಳಿಸಿ ಮುಂದಿನ ಹದಿನೈದು ದಿನಗಳಲ್ಲಿ ಅವರು ಬೆಂಗಳೂರಿಗೆ ಬಂದು ತರಗತಿಗೆ ಸೇರಿಕೊಳ್ಳ­ಬೇಕೆಂದು ಪತ್ರ ಕಳುಹಿಸ­ಲಾಗಿತ್ತು. ಆ ಸಮಯದಲ್ಲೇ ನನಗೆ ಕುಸುಮಾಳ ಪರಿ­ಚ­ಯ­ವಾದದ್ದು.

ಅಂದು ನನ್ನ ಆಫೀಸಿಗೆ ಹಿರಿಯ ಮಹಿಳೆಯೊಂದಿಗೆ ಹುಡುಗಿ­ಯೊ­ಬ್ಬಳು ಬಂದಳು. ಆಕೆಗೆ ನನ್ನ ಕೊಠಡಿಯಲ್ಲಿ ಬಂದು ಮಾತನಾಡಲು ಹೆದರಿಕೆ. ನನ್ನ ಕಾರ್ಯದರ್ಶಿಯೊಡನೆಯೇ ಏನೇನೋ ಚೌಕಾಸಿ ಮಾಡುತ್ತಿದ್ದಳೆಂದು ತೋರು­ತ್ತದೆ. ಕೊನೆಗೆ ನನ್ನ ಕಾರ್ಯದರ್ಶಿ ಒಳಗೆ ಬಂದು, ‘ಸಾರ್ ಒಬ್ಬ ಹುಡುಗಿ ಬಂದಿದ್ದಾಳೆ. ಆಕೆಯ ಜೊತೆಗೆ ತಾಯಿಯೂ ಇದ್ದಾರೆ. ಹುಡುಗಿಗೆ ನಮ್ಮ ­ತರಬೇತಿಗಾಗಿ ಆಯ್ಕೆಯಾಗಿದೆ. ಆದರೆ ಅವರು ತುಂಬ ಬಡವರಂತೆ, ಹಣ ಕಟ್ಟಲು ಆಗುವುದಿಲ್ಲವಂತೆ. ಆದರೆ ಕೋರ್ಸಿಗೆ ಸೇರಲೇಬೇಕಂತೆ. ನಿಮ್ಮನ್ನು ನೋಡಲು ಭಯಪಡುತ್ತಿದ್ದಾರೆ’ ಎಂದಳು.

ನಾನು ಅವರನ್ನು ನನ್ನೆಡೆಗೆ ಕಳುಹಿ­ಸಲು ಹೇಳಿದೆ. ಎರಡು ಕ್ಷಣಗಳಲ್ಲಿ ತಾಯಿ, ಮಗಳಿಬ್ಬರೂ ಒಳಗೆ ಬಂದರು. ಹುಡುಗಿಯ ಮುಖದ ಮೇಲೆ ಭಯ ಎದ್ದು ಕಾಣುತ್ತಿತ್ತು. ಹಣೆಯ ಮೇಲೆ ಬೆವ­ರಿನ ಸಾಲು. ಕುರ್ಚಿಯ ಮೇಲೆ ಕುಳಿತುಕೊಳ್ಳಲೂ ಹೆದರಿಕೆ. ಪರವಾಗಿಲ್ಲ, ಕುಳಿತು­ಕೊಳ್ಳಮ್ಮ ಎಂದು ಕೂಡ್ರಿಸಿದೆ. ಆಕೆ ಒಂದೇ ಸಮನೆ ಅಳತೊಡಗಿದಳು. ಕ್ಷಣ­ಕಾಲ ಸುಮ್ಮನಿದ್ದು ತನ್ನ ಕಷ್ಟ ಹೇಳಿಕೊಂಡಳು. ಆಕೆಯ ಹೆಸರು ಕುಸುಮಾ, ಬಾಗಲ­ಕೋಟೆಯ ಹತ್ತಿರದ ಒಂದು ಹಳ್ಳಿಯವಳು. ಅವಳು ಹೇಳಿದ್ದಿಷ್ಟು. ಅವಳ ತಂದೆ ಒಕ್ಕಲುತನ ಮಾಡುತ್ತಾರೆ. ಅವರದೇ ಆದ ಜಮೀನಿಲ್ಲ. ಬೇರೆಯವರ ಹೊಲ­­ದಲ್ಲಿ ಕೂಲಿಯ ಕೆಲಸ.

ಮನೆಯಲ್ಲಿ ಅಣ್ಣನ ಬೆನ್ನಿಗೆ ಪೆಟ್ಟಾಗಿ ಹಾಸಿಗೆ ಹಿಡಿದು ಮಲಗಿದ್ದಾನೆ. ಇಳಿವಯಸ್ಸಿನ ತಂದೆಗೆ ದುಡಿಯದೇ ಬೇರೆ ಗತಿಯಿಲ್ಲ. ತಾಯಿ ಕೂಡ ಆಗಾಗ ಕೂಲಿಕೆಲಸಕ್ಕೆ ಹೋಗುತ್ತಾರೆ. ಕುಸುಮಾ ಬಾಗಲಕೋಟೆ­ಯ­­ಲ್ಲಿದ್ದು ಶ್ರೀಮಂತರ ಮನೆಯ ಮಕ್ಕಳಿಗೆ ಪಾಠ ಹೇಳಿ ಸ್ವಲ್ಪ ಹಣಗಳಿಸಿ ಕಾಲೇಜಿಗೆ ಹೋಗಿ ಬಿ.ಎ. ಮುಗಿಸಿದ್ದಾಳೆ. ಈ ಕೋರ್ಸಿಗೆ ಸೇರಿದರೆ ಒಳ್ಳೆಯ ತರ­ಬೇತಿ­ಯೊಂದಿಗೆ ನೌಕರಿಯ ಖಾತರಿಯೂ ಇರುವುದರಿಂದ ಇದನ್ನು ಸೇರಬಯ­ಸಿ­ದ್ದಾಳೆ. ಆದರೆ, ತರಬೇತಿಯ ಹಾಗೂ ವಸತಿಯ ಖರ್ಚು ಆಕೆಗೆ ನಿಲುಕಲಾಗದ್ದು. ಅದಕ್ಕೇ ಈ ಹತಾಶೆಯ ನಡೆ.

ನನಗೂ ಏನು ಮಾಡಬೇಕೆಂಬುದು ಹೊಳೆಯಲಿಲ್ಲ. ಕುಸುಮಾಳಂಥ ಇನ್ನೂ ಮೂರು ನಾಲ್ಕು ಜನ ವಿದ್ಯಾರ್ಥಿಗಳಿ­ರುವುದು ನನ್ನ ಗಮನಕ್ಕೆ ಬಂದಿತ್ತು. ಅವರೆಲ್ಲ­ರಿಗೂ ಉಚಿತವಾಗಿ ಶಿಕ್ಷಣ ನೀಡುವಷ್ಟು ಶ್ರೀಮಂತ ಸಂಸ್ಥೆ ನಮ್ಮದಲ್ಲ. ಕುಸುಮಾ­ಳಿಗೆ ಒಂದು ವಾರದ ನಂತರ ತಿಳಿಸುವುದಾಗಿ ಕಳುಹಿಸಿ ನಮ್ಮ ಆಫೀಸಿನ ಪಕ್ಕದಲ್ಲೇ ಇದ್ದ ಬ್ಯಾಂಕಿನ ಶಾಖೆಗೆ ಹೋದೆ. ಈ ವಿದ್ಯಾರ್ಥಿಗಳ ಕಷ್ಟವನ್ನು ಮ್ಯಾನೇಜರ್‌ ಅವರ ಹತ್ತಿರ ಹೇಳಿಕೊಂಡು ಏನಾದರೂ ಪರಿಹಾರ ದೊರೆತೀತೇ ಎಂದು ಕೇಳಿದೆ.

ಅವರು ಇಂತಹ ತರಬೇತಿಗೆ ಸಾಲ ನೀಡುವುದು ಕಷ್ಟವಾದರೂ ಮೇಲಿನವರಿಗೆ ಹೇಳಿ ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ನಾನೂ ಅವರೊಂದಿಗೆ ಡಿವಿ­ಜ­ನಲ್ ಮ್ಯಾನೇಜರ್‌ ಅವರನ್ನು ಕಂಡು ವಿವರಿಸಿದೆ. ಅವರು ಅದನ್ನು ಪರಿ­ಶೀಲಿಸಿ ನಮ್ಮ ಸಂಸ್ಥೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣದ ವೆಚ್ಚವನ್ನು ಸಾಲವಾಗಿ ಕೊಡುವು­ದಾಗಿಯೂ ನಂತರ ಅವರು ಕೆಲಸಕ್ಕೆ ಸೇರಿದ ಮೇಲೆ ಪ್ರತಿ ತಿಂಗಳು ಸುಲಭದ ಕಂತುಗಳಲ್ಲಿ ಅದನ್ನು ತೀರಿಸಬಹು­ದೆಂದೂ ತಿಳಿಸಿ ಆಜ್ಞೆ ಹೊರಡಿಸಿ­ದರು.

ಅದರಂತೆ ಕುಸುಮಾಳಿಗೂ, ಇನ್ನೂ ಮೂವರು ವಿದ್ಯಾರ್ಥಿ­ಗಳಿಗೂ ಶಿಕ್ಷಣದ ಸಾಲ ದೊರಕಿ ತರಬೇತಿ ಮುಗಿಸಿದರು. ಅವರೆಲ್ಲರಿಗೂ ಕೈತುಂಬ ಸಂಬಳ ಬರುವುದರಿಂದ ಸಾಲ ತೀರಿಸುವುದು ಭಾರವಾಗಲೇ ಇಲ್ಲ. ಮನೆ­ಯವರ ಮೇಲೆ ಭಾರಹಾಕದೇ ಸುಸೂತ್ರವಾಗಿ ತರಬೇತಿ ಪಡೆದದ್ದಕ್ಕಾಗಿ ಅವರು ಬ್ಯಾಂಕಿಗೆ ವಂದನೆ ಸಲ್ಲಿಸಿದರು. ಈಗ ಕುಸುಮಾ ಒಂದು ಅಂತರ್‌­ರಾಷ್ಟ್ರೀಯ ಮಟ್ಟದ ಶಾಲೆಯ ಪ್ರಾಂಶುಪಾಲ­ಳಾಗಿದ್ದಾಳೆ.

ನಮಗೆ ಯಾವ ಮೂಲ­­ದಿಂದ, ಯಾವಾಗ ಸಹಾಯ ದೊರೆತೀತು ಎಂಬುದನ್ನು ಹೇಳುವುದು ಕಷ್ಟ. ಆದರೆ ದೊರೆಯುವುದಿಲ್ಲ ಎಂದು ಕಣ್ಣುಮುಚ್ಚಿ ಕುಳಿತರೆ ಯಾವ ಸಹಾಯ­ಹಸ್ತವೂ ಮುಂದೆ ಬರಲಾರದು. ಅವಕಾಶಗಳು ಸಾವಿರ ಇವೆ. ಆದರೆ, ಅವು­ಗಳನ್ನು ನಾವೇ ಹುಡುಕಿಕೊಂಡು ಹೋಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.