ADVERTISEMENT

ತಡೆದುಕೊಳ್ಳಲಾಗದ ಬೊಗಳಿಕೆ

ಡಾ. ಗುರುರಾಜ ಕರಜಗಿ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ರಜನೀಶ್‌ರವರು ಒಂದು ಕಥೆ ಹೇಳುತ್ತಿದ್ದರು. ಅದೊಂದು ತಮಾಷೆಯಾದ ಕಥೆ. ಅದನ್ನು ಮೊದಲನೆಯ ಬಾರಿಗೆ ಓದಿದಾಗ ತುಂಬಾ ನಕ್ಕಿದ್ದೆ. ಇತ್ತೀಚಿಗೆ ಮತ್ತೊಮ್ಮೆ ಓದಿದಾಗ ನಗೆ ಬರಲಿಲ್ಲ. ಆ ಕಥೆ ಇಂದಿನ ವಾಸ್ತವವನ್ನು ತಿಳಿಸುತ್ತದೆ ಎನ್ನಿಸಿತು.

ಒಬ್ಬ ಮಹಾಸಂತ ಆಯುಷ್ಯ ತೀರಿದ ಮೇಲೆ ನಾಯಿಯಾಗಿ ಮರುಜನ್ಮ ಪಡೆದ. ಅವನೇ ಅಪೇಕ್ಷೆ ಪಟ್ಟಿದ್ದನೋ ಅಥವಾ ಕರ್ಮವಿಶೇಷದಿಂದ ಈ ಜನ್ಮ ಬಂತೋ ಗೊತ್ತಿಲ್ಲ. ಹೊಸ ಜನ್ಮ ಬಂದ ಮೇಲೂ ಉಪದೇಶ ಮಾಡುವ ಹಳೆಯ ವಾಸನೆ ಹೋಗಿರಲಿಲ್ಲ. ತನ್ನ ಜಾತಿ ಬಾಂಧವರನ್ನೆಲ್ಲ ಕಂಡ, ಅವರ ಉದ್ಧಾರಕ್ಕೆ ಏನನ್ನಾದರೂ ಮಾಡಬೇಕು ಎನ್ನಿಸಿತು. ಒಬ್ಬನೇ ಕುಳಿತು ಚಿಂತಿಸಿದ. ತಾನು ಮನುಷ್ಯನಾಗಿದ್ದಾಗ ನಾಯಿಗಳಲ್ಲಿ ಯಾವ ಗುಣಗಳನ್ನು ಮೆಚ್ಚಿಕೊಂಡಿದ್ದೆ, ಯಾವ ಗುಣಗಳನ್ನು ಇಷ್ಟಪಡುತ್ತಿರಲಿಲ್ಲ ಎಂದು ಲೆಕ್ಕ ಹಾಕಿದ. ಮನುಷ್ಯರಲ್ಲೂ ತುಂಬ ಅಪರೂಪವಾದ ಪ್ರಾಮಾಣಿಕತೆ, ನಂಬಿಕೆ, ಸ್ವಾಮಿನಿಷ್ಠೆಗಳು ನಾಯಿಗಳಲ್ಲಿ ಶ್ರೇಷ್ಠ ಗುಣಗಳು. ಕೆಟ್ಟ ಗುಣಗಳೆಂದರೆ ಸುಮ್ಮಸುಮ್ಮನೇ ಬೊಗಳುವುದು ಮತ್ತು ದಾರಿಯಲ್ಲಿ ಯಾವುದಾದರೂ ವಾಹನ ಅಥವಾ ಹೊಸಬರು ಬಂದರೆ ಬೆನ್ನಟ್ಟಿ ಹೋಗುವುದು.

ಸಂತ ನಾಯಿ ತೀರ್ಮಾನ ಮಾಡಿತು. ಈ ಎರಡು ದುರ್ಗುಣಗಳನ್ನು ತೆಗೆದುಬಿಟ್ಟರೆ ತನ್ನ ಸಮಾಜ ಆದರ್ಶವಾಗುತ್ತದೆ ಎಂದು ಎಲ್ಲ ನಾಯಿಗಳನ್ನು ಒಂದೆಡೆ ಸೇರಿಸಿ ದೀರ್ಘ ಉಪನ್ಯಾಸ ಮಾಡಿದ. ಉಳಿದ ನಾಯಿಗಳು ಭಕ್ತಿಯಿಂದ ಮಾತುಗಳನ್ನು ಕೇಳಿದವು. ಅವನ ಉಪದೇಶ ಅವುಗಳ ಮನದಲ್ಲಿ ಇಳಿಯಿತು. ಇನ್ನು ಮುಂದೆ ಬೊಗಳಕೂಡದೆಂದು ನಿರ್ಧರಿಸಿದವು. ರಸ್ತೆಯಲ್ಲಿ ಬಂದು ಹೋಗುವ ವಾಹನಗಳ ಮತ್ತು ಜನರ ಉಸಾಬರಿ ನಮಗೇಕೆ ಎಂದು ನಿರ್ಲಿಪ್ತತೆ ತಾಳಿದವು.

ADVERTISEMENT

ನಾಯಿಗಳು ಗುಂಪುಗುಂಪಾಗಿ ಸಾಗುವಾಗ ಒಂದು ಇನ್ನೊಂದನ್ನು ಗಮನಿಸುತ್ತಿತ್ತು. ಅವುಗಳಿಗೆ ಬೊಗಳದೇ ಗಂಟಲು ಕೆರೆದಂತಾಗುತ್ತಿತ್ತು. ಇನ್ನೊಂದು ನಾಯಿ ಬೊಗಳಿದರೆ ತಕ್ಷಣ ತಾನೂ ಬೊಗಳಿಯೇ ಬಿಡುತ್ತೇನೆ, ಆದರೆ ತಾನು ಮೊದಲನೆಯವನಾಗಬಾರದೆಂದು ಪ್ರತಿಯೊಂದು ನಾಯಿ ಸಂಯಮದಿಂದ ಕಾಯುತ್ತಿತ್ತು. ಸಂತ ನಾಯಿಯ ಕಷ್ಟ ಇನ್ನೂ ದೊಡ್ಡದಾಗಿತ್ತು. ತಾನು ಬೊಗಳದೇ ಇರುವದಕ್ಕಿಂತ ಎಲ್ಲರನ್ನೂ ಗಮನಿಸುವುದು ದೊಡ್ಡ ಜವಾಬ್ದಾರಿ. ಹೀಗೆ ಕೆಲದಿನಗಳು ಕಳೆದವು. ಸಂತನಾಯಿಗೆ ಏನೋ ಕಳೆದುಹೋದಂತಾಗಿ ಗಂಟಲಿನಲ್ಲಿ ತುಂಬ ಕೆರೆತವುಂಟಾಗಿ ತಡೆದುಕೊಳ್ಳಲಾಗದೇ ಯಾವುದೋ ಒಂದು ದೂರದ ತಿಪ್ಪೆಯ ಹಿಂದೆ ನಿಂತು ಯಾರಿಗೂ ಕಾಣದಂತೆ ಜೋರಾಗಿ ಭೌ, ಭೌ ಎಂದು ಬೊಗಳಿತು. ಉಳಿದ ನಾಯಿಗಳು ತಮ್ಮ ಕಿವಿಗಳನ್ನು ನಿಮಿರಿಸಿಕೊಂಡು ಯಾವುದಾದರೂ ನಾಯಿ ಬೊಗಳೀತೇ ಎಂದು ಕಾಯುತ್ತಿದ್ದವಲ್ಲ, ಅವೂ ಸಂತೋಷದಿಂದ ಹಾರಾಡಿ, ಬೊಗಳುತ್ತ ಹುಯ್ಯಲೆಬ್ಬಿಸಿದವು. ಮುಂದೆ ಮತ್ತೆ ಮೊದಲಿನ ಸ್ಥಿತಿಯೇ ಸ್ಥಿರವಾಗಿ ನಿಂತಿತು.

ರಜನೀಶ ಹೇಳುತ್ತಿದ್ದರು, ಮನುಷ್ಯರು ಹೀಗಿದ್ದಾರೆ ಎಂದರೆ ಅವರ ಅಹಂಕಾರಕ್ಕೆ ಧಕ್ಕೆಯಾಗುವುದರಿಂದ ಇದನ್ನು ನಾಯಿಗಳ ಕಥೆ ಮಾಡಿದೆ ಎಂದು. ಎಲ್ಲರೂ ಮತ್ತೊಬ್ಬರು ತಪ್ಪು ಮಾಡಲಿ ಎಂದು ಕಾಯುತ್ತಿರುತ್ತಾರೆ. ತಪ್ಪು ಮಾಡಬಾರದೆಂಬ ಛಲವಿಲ್ಲ, ನಾನು ಮೊದಲನೆಯವನಾಗಬಾರದೆಂದು ಪ್ರಯತ್ನ. ನೇತಾರರು ಹಾಗಿದ್ದರೆ ಸರಿಯಲ್ಲ. ಅವರು ಯಾವ ರೀತಿಯ ಕರೆಯನ್ನು ನೀಡುತ್ತಾರೋ ಅವರ ಹಿಂಬಾಲಕರು ಅದನ್ನೇ ಪಾಲಿಸುತ್ತಾರೆ. ಕೆಲವೊಮ್ಮೆ ಸುಮ್ಮನಿದ್ದುಬಿಡಬೇಕೆನ್ನುಕೊಳ್ಳುತ್ತಾರೆ. ಆದರೆ ಗಂಟಲ ನವೆ ತಾಳಬೇಕಲ್ಲ, ಮಾತು ನುಗ್ಗಿ ಬರುತ್ತದೆ, ಭಾವ, ತಾಳ ತಪ್ಪುತ್ತವೆ. ಹಿಂಬಾಲಕರು ಭೋರಿಡುತ್ತಾರೆ. ಮತ್ತೆ ಕೆಲಕಾಲ ಮೌನ ಮತ್ತೆ ಬೊಗಳಿಕೆ. ಹೀಗೆ ಗುಂಪು, ಗುಂಪುಗಳ ನಡವಳಿಕೆ ನಡೆದು ಜನಸಾಮಾನ್ಯರ ಕಣ್ಣಿನಲ್ಲಿ ಸಣ್ಣವರಾಗಿಬಿಡುತ್ತಾರೆ, ನಾಯಕತ್ವ ನಗೆಪಾಟಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.