ADVERTISEMENT

ನಾಯಕರ ನಡೆ

ಡಾ. ಗುರುರಾಜ ಕರಜಗಿ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಕಳೆದ ಎರಡು ವರ್ಷಗಳಿಂದ ಪ್ರಪಂಚ ಹಣಕಾಸಿನ ಹಿನ್ನಡೆಯಿಂದ ಚಡಪಡಿಸುತ್ತಿದೆ. ಇದು ಅತ್ಯಂತ ತೀಕ್ಷ್ಣವಾಗಿ ಅನೇಕ ಜನ ತರುಣರು ಕೆಲಸ ಕಳೆದುಕೊಂಡು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದಾಗ ಅಮೇರಿಕೆಯ ಅಧ್ಯಕ್ಷ ಬರಾಕ್ ಒಬಾಮ ಕಳೆದ ವರ್ಷ ತಮ್ಮ ದೇಶದ ಬಹುದೊಡ್ಡ ಉದ್ಯಮಿಗಳ ಸಭೆಯನ್ನು ಕರೆದರು. ಅಂತೆಯೇ ಉದ್ಯಮಗಳ ನಾಯಕರೆಲ್ಲ ವಾಷಿಂಗ್ಟನ್‌ಗೆ ಬಂದು ಸೇರಿದರು. ಅವರು ಬಂದ ರೀತಿಯನ್ನು ನೋಡಿ ಒಬಾಮರಿಗೆ ರೇಗಿ ಹೋಯಿತು. ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು, `ನಮ್ಮ ದೇಶ ಹಣಕಾಸಿನ ಮುಗ್ಗಟ್ಟಿನಿಂದ ತತ್ತರಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನೀವು ಎಂಥ ವೈಭವದಲ್ಲಿ ಇದ್ದೀರಿ. ನಿಮ್ಮಲ್ಲಿ ಕೆಲವರು ಸ್ವಂತ ವಿಮಾನಗಳಲ್ಲಿ ಬಂದಿದ್ದೀರಿ, ಕೆಲವರು ಹೆಲಿಕಾಪ್ಟರ್‌ಗಳಲ್ಲಿ ಮತ್ತೆ ಕೆಲವರು ಹತ್ತಾರು ಜನ ಬರಬಹುದಾದಷ್ಟು ದೊಡ್ಡದಾದ ಲಿಮೋಸಿನ್ ಕಾರುಗಳಲ್ಲಿ ಬಂದಿದ್ದೀರಿ. ನಿಮ್ಮ ಕಂಪೆನಿಗಳು ಕುಸಿದು ಹೋಗುತ್ತಿದ್ದರೂ ನೀವು ನಿಮ್ಮ ಸುಖ, ವೈಭೋಗಗಳಿಗೆ ಯಾವ ಕೊರತೆಯನ್ನೂ ಮಾಡಿಕೊಂಡಿಲ್ಲ. ನಾಯಕರಾದವರು ತಮ್ಮ ನಡತೆಯಿಂದ ತಮ್ಮನ್ನು ಅನುಸರಿಸುವವರಿಗೆ ಮಾದರಿಯಾಗಬೇಡವೇ?~ ಉದ್ಯಮಿಗಳು ತಲೆತಗ್ಗಿಸಿದರು.

ಇದನ್ನು ಗಮನಿಸಿದಾಗ ನಾಯಕತ್ವದ ಬಹುದೊಡ್ಡ ಗುಣ ಕಣ್ಣ ಮುಂದೆ ಬರುತ್ತದೆ.
ಅಲೆಕ್ಸಾಂಡರ್ ಪರ್ಶಿಯಾವನ್ನು ಗೆದ್ದು ಇಂದಿನ ಆಫ್ಘಾನಿಸ್ತಾನದ ಕಡೆಗೆ ಹೊರಟಿದ್ದ. ಅವನ ಸೈನ್ಯ ಪರ್ಶಿಯಾವನ್ನು ಲೂಟಿ ಮಾಡಿತ್ತು. ಅವರೆಂದೂ ಕಂಡರಿಯದಷ್ಟು, ಕಲ್ಪನೆಗೂ ನಿಲುಕದಷ್ಟು ಹಣ ದೊರೆತಿತ್ತು. ಬಂಗಾರ, ಬೆಳ್ಳಿ, ಬೆಲೆಬಾಳುವ ಅನೇಕ ವಸ್ತುಗಳ ರಾಶಿ ರಾಶಿಯೇ ಅವರ ಮುಂದೆ ಬಿದ್ದಿತ್ತು. ಎಲ್ಲರೂ ತಮ್ಮ ತಮ್ಮ ಶಕ್ತಿ ಇದ್ದಷ್ಟು ತುಂಬಿಕೊಂಡರು. ಮನುಷ್ಯನ ಆಸೆಯೇ ಹಾಗಲ್ಲವೇ? ಅದಕ್ಕೆ ಮಿತಿ ಇದೆಯೇ? ತಮ್ಮ ಶಕ್ತಿ ಮೀರಿ ತುಂಬಿಕೊಂಡರು ಸೈನಿಕರೆಲ್ಲ.

ಅಷ್ಟು ಭಾರವಾದ ವಸ್ತುಗಳನ್ನು ಹೊತ್ತುಕೊಂಡರೆ ಬೇಗ ಬೇಗ ನಡೆಯುವುದಕ್ಕೆ ಸಾಗುವುದಕ್ಕೆ ಹೇಗೆ ಸಾಧ್ಯವಾಗುತ್ತದೆ? ಅವರ ಪ್ರವಾಸ ಭಾರವಾಯಿತು, ನಿಧಾನವಾಯಿತು. ಒಂದು ಸಮರ್ಥವಾದ ಸೇನೆಯ ಮುಖ್ಯ ಗುಣ ಚಲನಶೀಲತೆ. ಅದರ ಚಲನೆ ನಿಧಾನವಾದರೆ ಸೋಲು ಕಟ್ಟಿಟ್ಟ ಬುತ್ತಿ. ಅಲೆಗ್ಸಾಂಡರ್ ಅದನ್ನು ಗಮನಿಸಿದ.

ಸೇನೆಯ ಮುಂದುವರಿಕೆ ನಿಧಾನವಾದಂತೆ ಸೈನಿಕರಲ್ಲಿ ಆಗಾಗ ವಾದವಿವಾದಗಳು ಉಂಟಾಗುತ್ತಿದ್ದವು. ತಾವು ಗಳಿಸಿದ ಹಣದ ಬಗ್ಗೆ, ಮತ್ತೊಬ್ಬರು ತಮ್ಮ ವಸ್ತುಗಳನ್ನು ಕದ್ದರೆಂಬ ವಾದಗಳು ಕೇಳಿಬರುತ್ತಿದ್ದವು.

ಅಲೆಕ್ಸಾಂಡರ್ ತನ್ನ ಸೈನಿಕರೆಲ್ಲರನ್ನು ಕರೆದು ಸಭೆ ಸೇರಿಸಿದ. ತಮ್ಮ ಸೈನ್ಯ ಹೇಗೆ ಅತ್ಯಂತ ವೇಗದಿಂದ ಚಲಿಸುವ ಅವಶ್ಯಕತೆ ಇದೆ ಎನ್ನುವುದನ್ನು ಒತ್ತಿ ಹೇಳಿದ. ಈ ಭಾರವಾದ ವಸ್ತುಗಳಿಂದ ಯುದ್ದಭೂಮಿಯಲ್ಲಿ ಯಾವ ಪ್ರಯೋಜನವೂ ಇಲ್ಲ, ಅವೆಲ್ಲವನ್ನೂ ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವುದೂ ಅಸಾಧ್ಯವೆಂದು ಅಮೋಘವಾದ ಭಾಷಣ ಮಾಡಿದ. ಅದು ಸೈನಿಕರ ಮೇಲೆ ಹೆಚ್ಚು ಪ್ರಯೋಜನ ಮಾಡಿದಂತೆ ಕಾಣಲಿಲ್ಲ. ತಕ್ಷಣ ಸೇವಕರಿಗೆ ಹೇಳಿ ತಾನು ಸಂಗ್ರಹಿಸಿದ್ದ ಎಲ್ಲ ವಸ್ತುಗಳನ್ನು ತರಿಸಿ ಅವರೆಲ್ಲರ ಮುಂದೆ ಗುಡ್ಡೆ ಹಾಕಿದ. ಅದರಲ್ಲಿದ್ದ ಕೆಲವು ಬಂಗಾರದ ನಾಣ್ಯಗಳನ್ನು ಆರಿಸಿ ತೆಗೆದುಕೊಂಡು ನಂತರ ಆ ಉಳಿದ ಗುಡ್ಡೆಗೆ ಬೆಂಕಿ ಹಚ್ಚಿಬಿಟ್ಟ. ಅವನ ಮಾತಿಗಿಂತ ಈ ಕೃತಿ ಹೆಚ್ಚು ಪರಿಣಾಮವನ್ನುಂಟು ಮಾಡಿತು. ಅವನ ಸೈನಿಕರೂ ತಮ್ಮ ಸಂಗ್ರಹದಲ್ಲಿದ್ದ ಕೆಲವೇ ವಸ್ತುಗಳನ್ನಿಟ್ಟುಕೊಂಡು ಉಳಿದವನ್ನು ಸುಟ್ಟು ಹಾಕಿದರು.

ಈಗ ಸೈನಿಕರು ಹೊರುತ್ತಿದ್ದ ಭಾರ ಕಡಿಮೆಯಾಯಿತು. ಅವರ ಚಲನೆಯ ವೇಗ ಹೆಚ್ಚಾಯಿತು. ಅಲೆಕ್ಸಾಂಡರ್‌ನ ಇಚ್ಛೆ ಫಲಿಸಿತು. ಅದಕ್ಕೆ ಕಾರಣ ಅವನಲ್ಲಿದ್ದ ನಾಯಕತ್ವದ ಗುಣ. ತನ್ನ ಹಿಂಬಾಲಕರು ಏನು ಮಾಡಬೇಕೆನ್ನುವುದನ್ನು ನಾಯಕ ಮೊದಲು ಮಾಡಿ ತೋರಿಸಬೇಕಾಗುತ್ತದೆ. ಜನ ನಾವು ಹೇಳಿದಂತೆ ನಡೆಯುವುದಿಲ್ಲ, ನಾವು ನಡೆದಂತೆ ನಡೆಯುತ್ತಾರೆ ಎಂಬುದು ನಾಯಕರಿಗೆ ಅರ್ಥವಾದಷ್ಟೂ ಅವರ ನಡವಳಿಕೆಯಲ್ಲಿ ಬದಲಾವಣೆ ಕಾಣುತ್ತದೆ, ಕಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.