ADVERTISEMENT

ಪಡೆಯುವ ಅರ್ಹತೆ

ಡಾ. ಗುರುರಾಜ ಕರಜಗಿ
Published 27 ಮಾರ್ಚ್ 2014, 19:30 IST
Last Updated 27 ಮಾರ್ಚ್ 2014, 19:30 IST

ರಾಜಸ್ತಾನದ ಮರುಭೂಮಿಯಲ್ಲಿ ಪ್ರವಾಸಿಗನೊಬ್ಬ ಸಾಗುತ್ತಿದ್ದ. ಮೊದಲೇ ಮರುಭೂಮಿ, ಅದರ ಮೇಲೆ ಬೇಸಿಗೆಯ ಕಾಲ. ಮರಳು ಬೆಂಕಿಯಂತೆ ಸುಡುತ್ತಿದೆ. ಬಿಸಿಲಿನ ಬೇಗೆಯನ್ನು ತಾಳಲಾರದೆ ಸಣ್ಣ ಸಣ್ಣ ಗ್ರಾಮಗಳ ಜನ ಊರನ್ನು ಖಾಲಿ ಮಾಡಿ ಹೊರಟು­ಹೋಗಿದ್ದಾರೆ. ಎಲ್ಲಿಯೂ ಜನರೇ ಕಾಣುತ್ತಿಲ್ಲ.

ಹಸಿವೆಯನ್ನು ಹಿಂಗಿಸಲು ಒಂದು ಸ್ಥಳವೂ ಇಲ್ಲ. ಮತ್ತೆ ಸ್ವಲ್ಪ ಮುಂದೆ ನಡೆದಾಗ ನೀರಡಿಕೆ ಕಾಡಿತು. ಎಲ್ಲಿ ನೋಡಿದರೂ ಹನಿ ನೀರು ಕಾಣದು. ತನಗಿನ್ನು ನೀರು ದೊರಕದಿದ್ದರೆ ಬದುಕುವುದು ಅಸಾಧ್ಯ ಎಂದು ತೋರಿತು ಪ್ರವಾಸಿಗೆ. ಕಣ್ಣಿಗೆ ಚಕ್ರ ಬಂದಂತಾಯಿತು. ಮುಂದೆ ಒಂದು ಹಾಳುಬಿದ್ದ ಕಟ್ಟಡ. ಅದರ ಎದುರು ಒಂದು ಬೋರ್‌ವೆಲ್ಲಿಗೆ ಕೂಡ್ರಿಸಿದ ಕೈಪಂಪು ಕಾಣಿಸಿತು. ಅದನ್ನು ನೋಡಿಯೇ ಅವನಿಗೆ ಜೀವ ಬಂದಂತಾಯಿತು.

ಸರಸರನೇ ಹೋಗಿ ಜೋರಾಗಿ ಪಂಪು ಹೊಡೆಯತೊಡಗಿದ. ಎಷ್ಟು ಹೊಡೆದರೂ ಒಂದು ಹನಿ ನೀರು ಬರುತ್ತಿಲ್ಲ. ಅಯ್ಯೋ ಇದು ಕೆಟ್ಟು ಹೋದ ಪಂಪು ಇರಬೇಕು ಎಂದುಕೊಂಡ. ಆ ಕಡೆ, ಈ ಕಡೆ ನೋಡುವಾಗ ಪಕ್ಕದ ಕಟ್ಟೆಯ ಮೇಲೆ ನೀರಿನ ಹೂಜಿ ಮತ್ತು ಒಂದು ಬಿರಡೆ ಇದ್ದವು. ಹೂಜಿಯ ಹೊರಭಾಗದಲ್ಲಿ ಇದ್ದಲಿನಿಂದ ‘ಗೆಳೆಯಾ ನೀರು ಬೇಕಾದರೆ ಮೊದಲು ಹೂಜಿಯ ನೀರನ್ನು ಪೈಪಿನೊಳಗೆ ತುಂಬಿ, ಬಿರಡೆ ಮುಚ್ಚಿ ಪಂಪು ಹೊಡೆ. ನಂತರ ಮತ್ತೆ ಹೂಜಿಯಲ್ಲಿ ನೀರು ತುಂಬುವುದನ್ನು ಮರೆಯಬೇಡ’ ಎಂದು ಬರೆದಿದ್ದರು. ಹೂಜಿಯ ತುಂಬ ನೀರಿತ್ತು. ಓಹೋ, ಕೆಲವೊಮ್ಮೆ ನೀರು ಕೆಳಗೆ ಹೋದಾಗ ಹೀಗೆ ನೀರು ತುಂಬಿ ಹೊಡೆಯು­ವುದುಂಟು ಎಂದುಕೊಂಡ ಪ್ರವಾಸಿ. ಕ್ಷಣಕಾಲ ಯೋಚಿಸಿದ. ತಾನೀಗ ನೀರಿಲ್ಲದೇ ಸಾಯುವಂತಾಗಿದ್ದೇನೆ.

ಈ ಹೂಜಿಯಲ್ಲಿಯ ನೀರು ಕುಡಿದರೆ ನೀರಡಿಕೆಯಿಂದ ಸಾಯುವುದು ತಪ್ಪು­ತ್ತದೆ. ಹಾಗಾದರೆ ಬರವಣಿಗೆ­ಯಲ್ಲಿದ್ದಂತೆ ಹೂಜಿಯ ನೀರನ್ನು ಈ ಪೈಪಿನೊಳಗೆ ಹಾಕುವುದು ಬೇಡವೇ? ಇರುವಷ್ಟು ನೀರನ್ನು ಪೈಪಿನೊಳಗೆ ಹಾಕಿ ಪಂಪು ಹೊಡೆದಾಗ ಅದು ಕೆಲಸಮಾ­ಡದಿದ್ದರೆ ಏನು ಗತಿ? ಈ ಬರಹವನ್ನು ಬರೆದದ್ದು ಯಾರೋ ಏನೋ ? ಅದನ್ನು ನಂಬಿ ನೀರನ್ನು ವ್ಯರ್ಥಮಾಡಬಹುದೇ? ಹೀಗೆಲ್ಲ ಯೋಚಿಸಿದ ಪ್ರವಾಸಿ.

ಈಗಾಗಲೇ ಹೂಜಿಯ ತುಂಬ ನೀರಿರುವುದರಿಂದ ತನಗಿಂತ ಮೊದಲು ಯಾರೋ ನೀರನ್ನು ಬಳಸಿ ಮುಂದೆ ಬರುವವರಿಗೆ ಅನುಕೂಲವಾಗಲಿ ಎಂದು ತುಂಬಿಟ್ಟಿದ್ದಾರೆ. ಆಗ ಅವನ ಅಂತಃಕರಣದ ದನಿ ಹೇಳಿದಂತೆ ಆತ ಹೂಜಿಯ ನೀರನ್ನು ಪೈಪಿನೊಳಗೆ ತುಂಬಿ ಬಿರಡೆಯನ್ನು ಮುಚ್ಚಿ ಜೋರಾಗಿ ಪಂಪನ್ನು ಹೊಡೆಯ­ತೊಡಗಿದ. ಹತ್ತಾರು ಬಾರಿ ಹೊಡೆದಾಗ ತುಕ್ಕು ಹಿಡಿದ ಪೈಪಿನಿಂದ ನೀರು ಉಕ್ಕಿಬಂತು. ಒಂದಷ್ಟನ್ನು ಹೊರಹಾಕಿ, ಕೈ, ಮುಖಗಳನ್ನು ತೊಳೆದುಕೊಂಡು ತೃಪ್ತಿಯಾಗುವಂತೆ ನೀರು ಕುಡಿದ. ಒಣಗಿ ಹೋದ ದೇಹಕ್ಕೆ ಆ ನೀರು ಅಮೃತದಂತೆನ್ನಿಸಿತು.

ಪ್ರವಾಸಿ ಮತ್ತೆ ಹೂಜಿಯನ್ನು ನೀರಿನಿಂದ ತುಂಬಿದ. ಹತ್ತಿರದಲ್ಲೇ ಬಿದ್ದಿದ್ದ ಇದ್ದಲಿನಿಂದ ಈಗಾಗಲೇ ಬರೆದಿದ್ದ ಬರಹದ ಕೆಳಗೆ ತನ್ನದೊಂದು ಸಾಲನ್ನು ಸೇರಿಸಿದ. ‘ಸ್ನೇಹಿತರೇ ದಯವಿಟ್ಟು ನಂಬಿ. ಇದು ಸತ್ಯವಾದ ಮಾತು. ನಾವು ಏನನ್ನಾದರೂ ಪಡೆದುಕೊಳ್ಳುವುದಕ್ಕಿಂತ ಮೊದಲು ನಮ್ಮದೆಲ್ಲವನ್ನೂ ನೀಡಬೇಕಾ­ಗುತ್ತದೆ’. ನಂತರ ತೃಪ್ತಿಯಿಂದ ಎದ್ದು ಹೊರಟ. ಅವನಲ್ಲಿ ಎರಡು ತೃಪ್ತಿಗಳು ಮನೆಮಾಡಿದ್ದವು. ಮೊದಲನೆಯದು ನೀರು ಕುಡಿದ ತೃಪ್ತಿ ಮತ್ತು ಎರಡನೆಯದು ನಾವು ನೀಡಿದಾಗಲೇ ಏನನ್ನಾದರೂ ಪಡೆಯ­ಬಹುದೆಂಬ ತಿಳುವಳಿಕೆಯ ತೃಪ್ತಿ. ಭಗವಂತ ಪಕ್ಕಾ ವ್ಯಾಪಾರಿ.

ನಾವು ಕೊಟ್ಟ­ಷ್ಟನ್ನೇ ನಮಗೆ ಮರಳಿ ಕೊಡಿಸುತ್ತಾನೆ. ಒಂದು ವೇಳೆ ಏನನ್ನೂ ಕೊಡದೇ ಸ್ವಾರ್ಥಿಗಳಾಗಿ ಪಡೆದುಕೊಂಡಿದ್ದರೆ ಆತ ಸಮಯ ಕಾಯ್ದು ಬಡ್ಡಿ ಸಮೇತ ಮರಳಿಕೊ­ಡುವಂತೆ ಮಾಡುತ್ತಾನೆ. ನಾವು ಕೊಡಬೇಕಾದದ್ದು ಹಣ ಮಾತ್ರವಲ್ಲ. ಅದು ಸಮಯವಾಗಬಹುದು, ಪ್ರೀತಿ­ಯಾ­ಗಬಹುದು, ಒಂದು ಒಳ್ಳೆಯ ಮಾತಾಗ­­ಬಹುದು, ಅವಕಾಶ­ವಾಗಬಹುದು. ಏನನ್ನಾದರೂ ನೀಡಿದರೆ ಮಾತ್ರ ಪಡೆಯುವ ಅರ್ಹತೆಯನ್ನು ಪಡೆಯುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT