ADVERTISEMENT

ಪುಸ್ತಕದ ಜ್ಞಾನ-ಮಸ್ತಕದ ಮಣೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

ಜಲಾಲುದ್ದೀನ್ ರೂಮಿ ಒಬ್ಬ ಬಹುದೊಡ್ಡ ಸೂಫಿ ಸಂತ, ಕವಿ, ದಾರ್ಶನಿಕ. ಆತ ಬಾಲ್ಯದಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ. ಪುಸ್ತಕಗಳಿಂದ ಜ್ಞಾನವನ್ನು ಪಡೆಯುವುದು ಅವನ ಉದ್ದೇಶವಾಗಿತ್ತು. ಅವನ ಓದಿನ ಹರಹು ಮತ್ತು ಆಳ ಅಸಾಮಾನ್ಯವಾಗಿತ್ತು. ಯಾರು ಯಾವ ವಿಷಯ ಕೇಳಿದರೂ ಅದರ ಬಗ್ಗೆ ಆತ ಮಾಡನಾಡಬಲ್ಲವನಾಗಿದ್ದ. ಅವನ ಜ್ಞಾನ ಸಂಪತ್ತಿನ ಬಗ್ಗೆ ಎಲ್ಲರಿಗೂ ಗೌರವ, ಅಭಿಮಾನ, ಆಶ್ಚರ್ಯ.

ಅವರ ಜೀವನದಲ್ಲಿ ಒಂದು ಘಟನೆ ನಡೆಯಿತು. ಅದು ಜ್ಞಾನದ ಬಗೆಗಿನ ಅವರ ದೃಷ್ಟಿಯನ್ನೇ ಬದಲಾಯಿಸಿಬಿಟ್ಟಿತು. ಒಂದು ಬಾರಿ ತನ್ನ ತೋಟದಲ್ಲಿದ್ದ ಸರೋವರದ ಪಕ್ಕದಲ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಕುಳಿತುಕೊಂಡಿದ್ದ. ಅವನ ಸುತ್ತಮುತ್ತ ಬುದ್ಧಿವಂತ ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು. ರೂಮಿ ಯಾವುದೋ ಗಹನವಾದ ಆಧ್ಯಾತ್ಮಕ ಚಿಂತನೆಯನ್ನು ತಿಳಿಸಿಹೇಳುತ್ತಿದ್ದ. ಶಿಷ್ಯರು ತಮಗೆ ತಿಳಿದಂತೆ ವಿಷಯವನ್ನು ತಮ್ಮ ತಮ್ಮ ಪುಸ್ತಕಗಳಲ್ಲಿ ಬರೆದುಕೊಳ್ಳುತ್ತಿದ್ದರು. ರೂಮಿ ಒಂದಾದ ಮೇಲೆ ಒಂದು ದೊಡ್ಡ ಪುಸ್ತಕವನ್ನು ತೆಗೆದು, ಓದಿ ವಿಷಯವನ್ನು ವಿಶದಪಡಿಸುತ್ತಿದ್ದ.

ಆಗ ಅಲ್ಲೊಬ್ಬ ವಿಚಿತ್ರ ವ್ಯಕ್ತಿ ಬಂದ. ಆತ ಎತ್ತರದ ಆಳು. ಉದ್ದನೆಯ ಜಾಳುಜಾಳಾದ ಬಟ್ಟೆ ಧರಿಸಿದ್ದಾನೆ. ತಲೆಯ ಮೇಲೆ ದೊಡ್ಡ, ಭಾರಿ ರುಮಾಲು ಧರಿಸಿದ್ದಾನೆ. ಬಟ್ಟೆ ಅಲ್ಲಲ್ಲಿ ಹರಿದಿದೆ, ಕೊಳಕಾಗಿದೆ. ಅವನು ಯಾರು ಎಲ್ಲಿಂದ ಬಂದ ಎನ್ನುವುದು ರೂಮಿಗೆ ತಿಳಿದಿರಲಿಲ್ಲ. ಆಶ್ಚರ್ಯದಿಂದ ಹುಬ್ಬೇರಿಸಿ ಅವನನ್ನು ನೋಡಿದ.

ಆ ಮನುಷ್ಯ ರೂಮಿಯ ಹತ್ತಿರ ಬಂದ. ಅವನನ್ನು ಅವನ ಸುತ್ತಮುತ್ತ ಕುಳಿತಿದ್ದ ವಿದ್ಯಾರ್ಥಿಗಳನ್ನೂ ನೋಡಿದ. ಅಲ್ಲೆಲ್ಲ ಹರಡಿದ್ದ ಪುಸ್ತಕ ರಾಶಿಯನ್ನು ನೋಡಿದ. ನಂತರ ದೊಡ್ಡ ಪುಸ್ತಕವನ್ನೆತ್ತಿ ಕೈಯಲ್ಲಿ ಹಿಡಿದು, ‘ಇದೇನಿದು?’ ಎಂದು ಕೇಳಿದ. ಅಶಿಕ್ಷಿತನಂತೆ ಕಾಣುತ್ತಿದ್ದ ಅವನನ್ನು ಕಂಡು ನಗುತ್ತಾ ರೂಮಿ ಹೇಳಿದ, ‘ಅದೇ, ಅದು ನಿನಗರ್ಥವಾಗುವಂತಹದಲ್ಲ.’

ಈಗ ಆ ಮನುಷ್ಯ ನಗುತ್ತಿದ್ದ. ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಮುಂದೆ ಸಾಗಿ ಸರೋವರದ ಹತ್ತಿರ ಹೋದ. ಅವನು ಏನು ಮಾಡುತ್ತಾನೆ ಎಂದು ಎಲ್ಲರೂ ನೋಡುತ್ತಿರುವಾಗ ಪುಸ್ತಕವನ್ನು ಎತ್ತಿ ಬೀಸಿ ನೀರಿನಲ್ಲಿ ಎಸೆದುಬಿಟ್ಟ. ಆ ಭಾರಿ ಪುಸ್ತಕ ಮುಳುಗಿ ಹೋಯಿತು.

ರೂಮಿಗೆ ಭಾರಿ ಕೋಪ ಬಂದಿತು. ‘ಹೇ ಮೂರ್ಖ, ನೀನು ಏನು ಮಾಡುತ್ತಿದ್ದೀ? ನನ್ನ ಅತ್ಯಂತ ಬೆಲೆಬಾಳುವ ಮತ್ತು ಸಿಗಲಾರದಂತಹ ಪುಸ್ತಕವನ್ನು ನೀರಿನಲ್ಲಿ ಮುಳುಗಿಸಿ ಹಾಳು ಮಾಡಿ ಬಿಟ್ಟೆ’ ಎಂದು ಅರಚಿದ.

ಆಗ ಆ ವಿಚಿತ್ರ ಮನುಷ್ಯ ನಗುತ್ತಲೇ ಮತ್ತೆ ಕೊಳದ ಹತ್ತಿರ ಹೋದ. ತನ್ನ ಬಲಗೈಯನ್ನು ನೀರಿನೊಳಗೆ ಅದ್ದಿ ಕೈ ಹೊರತೆಗೆದಾಗ ಅವನ ಕೈಯಲ್ಲಿ ಆ ಪುಸ್ತಕವಿತ್ತು. ಅದು ಒಂದು ಚೂರು ಕೂಡ ಒದ್ದೆಯಾಗಿರಲಿಲ್ಲ. ಆಶ್ಚರ್ಯದಿಂದ ರೂಮಿ ಬಾಯಿ ತೆರೆದುಕೊಂಡು ಕೇಳಿದ, ‘ಏನಿದು ಆಶ್ಚರ್ಯ?’

ಆ ಆಗಂತುಕ ನಗುತ್ತಾ ಹೇಳಿದ, ‘ಅದೇ, ಅದು ನಿನಗರ್ಥವಾಗುವುದಿಲ್ಲ.’ ಆ ಮನುಷ್ಯ ಮಹಾನ್ ದಾರ್ಶನಿಕ, ಶ್ರೇಷ್ಠ ಸೂಫೀ ಸಂತ ತಾಬ್ರಿಜ್‌ನ ಶಾಮ್ಸ. ಶಾಮ್ಸ ರೂಮಿಗೆ ಹೇಳಿದ, ‘ರೂಮಿ, ಬರೀ ಪುಸ್ತಕದಲ್ಲೇ ಮುಳುಗಬೇಡ. ಅನುಭವದಲ್ಲಿ ಜ್ಞಾನವನ್ನು ಪಡೆ ಅಲ್ಲಿಂದ’ ಎಂದು ಹೊರಟೇ ಹೋದ.

ಪುಸ್ತಕಗಳಿಂದ ವಿಷಯ ತಿಳಿಯುತ್ತದೆ. ಬರಿ ವಿಷಯ ಸಂಗ್ರಹಣೆ ತಲೆಗೆ ಭಾರವಾಗುತ್ತದೆ. ಅದರಿಂದ ಜೀವನಕ್ಕೆ ಯಾವ ಪ್ರಯೋಜನವೂ ಇಲ್ಲ. ಅ ವಿಷಯ ಅನುಭವದ ಮೂಸೆಯಲ್ಲಿ ಪಕ್ವವಾದಾಗ ಜ್ಞಾನವಾಗುತ್ತದೆ. ನಮ್ಮ ಪ್ರಯತ್ನ ಸದಾ ಜ್ಞಾನವನ್ನು ಪಡೆಯುವುದರಲ್ಲಿರಬೇಕು, ಬರೀ ಮಾಹಿತಿ ಪಡೆಯುವುದರಲ್ಲಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.