ADVERTISEMENT

ಪ್ರೀತಿ

ಡಾ. ಗುರುರಾಜ ಕರಜಗಿ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ನಾನು ಆಗಾಗ ಬರೋಡಾಕ್ಕೆ ಹೋಗುತ್ತಿರುತ್ತೇನೆ. ಅಲ್ಲೊಬ್ಬ ಗುರುಗಳಿದ್ದಾರೆ. ಅವರೊಬ್ಬ ವಿಶೇಷ ವ್ಯಕ್ತಿ. ಅವರು ತಮ್ಮ ಶಿಷ್ಯರಿಗೆ ಹೋಮ ಮಾಡುವುದು ಹೇಗೆ, ವಿಶೇಷ ಪೂಜೆಯ ಬಗೆ ಹೇಗೆ, ಇವುಗಳ ಬಗ್ಗೆ ಮಾತನಾಡಿದ್ದನ್ನೇ ನಾನು ಕೇಳಿಲ್ಲ. ಅವರ ಮಾತೇನಿದ್ದರೂ ಪ್ರೀತಿ, ಅಂತಃಕರಣ, ಸಮಾಜಸೇವೆ ಇವುಗಳ ಬಗ್ಗೆಯೇ. ಆ ಆಶ್ರಮದಲ್ಲಿ ಮಡಿಯ ಹಾವಳಿ ಇಲ್ಲವೇ ಇಲ್ಲ. ಗುರುಗಳು ಹೋದವರನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ, ಪಕ್ಕದಲ್ಲೆೀ ಕೂಡ್ರಿಸಿಕೊಂಡು ಊಟ ಬಡಿಸುತ್ತಾರೆ.

ಅವರು ಕಟ್ಟಿಸಿದ ಭವ್ಯ ದೇವಸ್ಥಾನದಲ್ಲಿ ದೇವರ ವಿಗ್ರಹದ ಪಕ್ಕದಲ್ಲಿ ತಮ್ಮ ಗುರುಗಳ ಅಳೆತ್ತರದ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವುಗಳಿಗೂ ಪೂಜೆಯಾಗುತ್ತದೆ. ಇನ್ನೊಂದು ಬಹುದೊಡ್ಡ ವಿಶೇಷತೆಯನ್ನು ನಾನು ಕಂಡದ್ದೆಂದರೆ ಪ್ರತಿಯೊಂದು ವಿಗ್ರಹದ ತಲೆಯ ಹಿಂಭಾಗದಲ್ಲಿ ಒಂದು ಫ್ಯಾನ್ ಕೂಡ್ರಿಸಿದ್ದಾರೆ. ಬೇಸಿಗೆಯಲ್ಲಿ ತುಂಬ ಸೆಕೆ ಇರುವುದರಿಂದ ವಿಗ್ರಹಗಳಿಗೆ ತೊಂದರೆಯಾಗಬಾರದೆಂದು ಈ ವ್ಯವಸ್ಥೆ! ಅವರಿಗೆ ವಿಗ್ರಹ ಕೇವಲ ಮೂರ್ತಿಯಲ್ಲ, ಜೀವಂತ ಚೈತನ್ಯ.

ಸ್ವಾಮಿಗಳು ನನ್ನನ್ನು ಒಂದು ದಿನ ಗೋಶಾಲೆಗೆ ಕರೆದುಕೊಂಡು ಹೋದರು. ಅಲ್ಲಿಯವರೆಗೋ ನಾನು ಅಷ್ಟೊಂದು ಸ್ವಚ್ಛತೆಯ ಗೋಶಾಲೆಯನ್ನು ಕಂಡಿರಲೇ ಇಲ್ಲ.

ಸಾಮಾನ್ಯವಾಗಿ ಒಳಗೆ ಕಾಲಿಟ್ಟ ಕೂಡಲೇ ಹಾರಿ ಬರುವ ನೊಣಗಳು, ಅಲ್ಲಲ್ಲಿ ಬಿದ್ದ ಹುಲ್ಲಿನ ರಾಶಿ, ಸೆಗಣಿ, ಮೂತ್ರದ ಗಬ್ಬು ವಾಸನೆ ಇವೆಲ್ಲದರ ನಿರೀಕ್ಷೆಯಲ್ಲಿದ್ದ ನನಗೆ ಬೆರಗಾಯಿತು.
 
ಹಸುಗಳ ಮೈ ಮಿರುಗುವಂತೆ ಚೆನ್ನಾಗಿ ತೊಳೆದಿದ್ದಾರೆ. ಒಂದು ಚೂರೂ ಕಸವಿಲ್ಲ. ಸೆಗಣಿ ಬಿದ್ದ ಮರುಕ್ಷಣವೇ ಅದನ್ನು ತೆಗೆದು ಸ್ಥಳವನ್ನು ಶುದ್ಧಿಗೊಳಿಸಲು ಸೇವಕರಿದ್ದಾರೆ.

ಪ್ರತಿಯೊಂದು ಹಸುವಿನ ಮುಖದ ಪಕ್ಕದಲ್ಲೆೀ ಅಗಲವಾದ ನೀರಿನ ಪಾತ್ರೆ ಇದೆ. ಮೇಲೆ ಇರಿಸಿದ್ದ ಟ್ಯಾಂಕಿನಿಂದ ನೀರು ಪೈಪುಗಳ ಮೂಲಕ ಈ ಪಾತ್ರೆಗಳಿಗೆ ಹರಿದುಬರುತ್ತದೆ.

ಹಸು ನೀರು ಕುಡಿದ ತಕ್ಷಣ ಅಷ್ಟೇ ಶುದ್ಧವಾದ ನೀರು ಫಿಲ್ಟರ್‌ಗಳ ಮೂಲಕ ಸೋಸಿ ಬರುತ್ತದೆ. ಮತ್ತೆ ಅಲ್ಲಿಯೂ ಒಂದೊಂದು ಹಸುವಿನ ಮೇಲೆ ಫ್ಯಾನ್ ತಿರುಗುತ್ತಿರುತ್ತದೆ. ಪ್ರಾಣಿಗಳ ಮೇಲೆ ಸೊಳ್ಳೆ, ನೊಣಗಳು ಕೂಡ್ರದಿರಲಿ ಮತ್ತು ಅದಕ್ಕೆ ಸೆಕೆಯಾಗದಿರಲಿ ಎಂಬ ಅಪೇಕ್ಷೆ!

ಅಲ್ಲಿ ಹಾಲು ಕರೆಯುವುದೂ ಒಂದು ವಿಶೇಷ. ಹಾಲು ಕರೆಯುವ ಮೊದಲು ಗೋಪಾಲಕ ಬಂದು ಹಸುವಿನ ಮೇಲೆಲ್ಲ ಪ್ರೀತಿಯಿಂದ ಕೈಯಾಡಿಸುತ್ತಾನೆ. ಅದರ ಕರುವನ್ನು ಅದರ ಬಳಿ ಬಿಟ್ಟು ಅದು ಹಾಲು ಕುಡಿದ ಮೇಲೆ ಹಸುವಿನ ಮುಂದೆಯೇ ಕಟ್ಟುತ್ತಾನೆ. ಹಿನ್ನೆಲೆಯಲ್ಲಿ ಮಧುರವಾದ ಸಂಗೀತವಿರುತ್ತದೆ. ಇದಕ್ಕೆ ಸ್ವಾಮಿಗಳು ನೀಡಿದ ವಿವರಣೆಯೇ ಚೆಂದ.

`ಹಸುವಿನಲ್ಲೂ ಜೀವವಿದೆ, ಅದಕ್ಕೂ ಭಾವನೆಗಳಿವೆ. ಹಸು ಎಂದಿಗೂ ಹಾಲನ್ನು ಬಿಟ್ಟುಕೊಡುವುದಿಲ್ಲ, ನಾವೇ ಹಿಂಡಿಕೊಳ್ಳುತ್ತೇವೆ. ಅದರ ಹಾಲು ಕರುವಿಗೆ ಮಾತ್ರ. ನಾವು ಪ್ರೀತಿಯಿಂದ ಕಂಡಾಗ ಅದು ಹೆಚ್ಚಿನ ಹಾಲನ್ನು ಪ್ರೀತಿಯಿಂದ ಕೊಡುತ್ತದೆ. ಹಸು ವ್ಯಗ್ರವಾಗಿದ್ದಾಗ, ವಾತಾವರಣ ಸರಿ ಇಲ್ಲದಾಗ ನೀಡುವ ಹಾಲು ಕಡಿಮೆಯಾಗುತ್ತದೆ~.

ಅರೇ ಹೌದಲ್ಲ ಎನ್ನಿಸಿತು. ನಮ್ಮ ಸಂಸ್ಥೆಗಳಲ್ಲೂ ಜನರನ್ನು ಪ್ರೀತಿಯಿಂದ, ವಿಶ್ವಾಸದಿಂದ ನೋಡಿಕೊಂಡಾಗ ಅವರು ಮಾಡುವ ಕೆಲಸ ಬರೀ ಆಜ್ಞೆಗಳಿಂದ, ದರ್ಪದಿಂದ ಮಾಡಿಸಿಕೊಂಡ ಕೆಲಸಕ್ಕಿಂತ ಹೆಚ್ಚಿನದೂ, ಒಳ್ಳೆಯ ಗುಣಮಟ್ಟದ್ದು ಆಗಿರುತ್ತದೆ. ಅದಕ್ಕೇ ವಿವೇಕಾನಂದರು ಹೇಳುತ್ತಿದ್ದರು, `ಜಪಾನಿನಲ್ಲಿ ತಾಯಂದಿರು ಮಕ್ಕಳಿಗೆ ತಮ್ಮ ಗೊಂಬೆಗಳನ್ನು ಪ್ರೀತಿಯಿಂದ ಆಡಿಸಲು ಹೇಳುತ್ತಾರೆ. ಪ್ರೀತಿಯಿಂದ ಕಂಡಾಗ ಗೊಂಬೆಗೆ ಜೀವ ಬರುತ್ತದೆಂದು ನಂಬಿಸುತ್ತಾರೆ. ಅತ್ಮೀಯತೆಯಿಂದ ಕಂಡಾಗ ಗೊಂಬೆಗಳಿಗೇ ಜೀವ ಬರುವುದಾದರೆ ನನ್ನ ದೇಶದ ಅಸಂಖ್ಯಾತ ದೀನದಲಿತರನ್ನು ನಾವು ಆತ್ಮೀಯತೆಯಿಂದ, ಪ್ರೀತಿಯಿಂದ ಕಂಡರೆ ಏನೆಲ್ಲ ಸಾಧನೆ ಮಾಡಬಹುದಲ್ಲವೇ?~
 ನಿರ್ಜೀವ ವಸ್ತುವಿಗೂ ಜೀವ ತುಂಬುವ ವಿಶೇಷ ಗುಣವೇ ಪ್ರೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.