ADVERTISEMENT

ಭಯ ಗೆಲ್ಲುವ ಬಗೆ

ಡಾ. ಗುರುರಾಜ ಕರಜಗಿ
Published 28 ಡಿಸೆಂಬರ್ 2014, 19:30 IST
Last Updated 28 ಡಿಸೆಂಬರ್ 2014, 19:30 IST

ಒಂದು ನರಿ ಊಟ ಸಿಕ್ಕದೇ ತಿರುಗಾಡಿತು. ದಾರಿ ತಪ್ಪಿ ಒಂದು ಯುದ್ಧಭೂಮಿಗೆ ಬಂದಿತು. ಬಹುಶಃ ಕೆಲವೇ ದಿನಗಳ ಹಿಂದೆ ಯಾವುದೋ ಘೋರ ಯುದ್ಧವಾಗಿದ್ದಿರಬೇಕು. ನೂರಾರು ಹೆಣಗಳು ಬಿದ್ದಿದ್ದವು. ನೂರಾರು ಕುದುರೆಗಳ ದೇಹಗಳು ಕಂಡವು.  ನರಿಗೆ ಭಾರಿ ಸಂತೋಷ­ವಾಯಿತು. ದಾರಿ ತಪ್ಪಿ ಬಂದದ್ದಕ್ಕೂ ಸಾರ್ಥಕವಾಯಿತು. ಇನ್ನೂ ಕನಿಷ್ಠ ಒಂದು ತಿಂಗಳಾದರೂ ಯಾವ ಆತಂಕ­ವಿಲ್ಲದೆ ಹೊಟ್ಟೆ ತುಂಬ ತಿಂದು ಸುಖವಾಗಿ ಬದುಕಬಹುದು. ಅದಲ್ಲದೇ ಯಾವ ಕಾರಣಕ್ಕೋ ಬೇರೆ ಯಾವ ಪ್ರಾಣಿಗಳೂ ಇಲ್ಲ. ಆದ್ದರಿಂದ ಊಟಕ್ಕಾಗಿ ಹೋರಾಟ ಮಾಡಬೇಕಿಲ್ಲ. ಆಗ ಸಂಜೆಯಾಗುತ್ತಿತ್ತು. ನಿಧಾನವಾಗಿ ಪಡುವಣ ಕಡೆಯಿಂದ ಗಾಳಿ ಬೀಸ­ತೊಡಗಿತು. ಗಾಳಿ ರಭಸವನ್ನು ಪಡೆಯ­ತೊಡಗಿತು. ಅದರೊಂದಿಗೆ ಚಳಿಯೂ ಸೇರಿಕೊಂಡಿತು.

ಒಂದು ಮರೆಯನ್ನು ಕಂಡುಕೊಳ್ಳಬೇಕೆಂದು ನರಿ ಒಂದು ಮರದ ಕಡೆಗೆ ಓಡತೊಡಗಿತು. ಆಗ ಹಿಂದಿನಿಂದ ಒಂದು ವಿಚಿತ್ರವಾದ ಸದ್ದು ಕೇಳಿ ಬರತೊಡಗಿತು. ಅದು ಒಂದು ತರಹದ ಹೂಂಕಾರದ ಶಬ್ದ. ನಡುನಡುವೆ ಡಬಡಬನೇ ನಗಾರಿಯ ಸದ್ದು. ನರಿಗೆ ಗಾಬರಿಯಾಯಿತು. ಹಾಗಾದರೆ ಇಲ್ಲಿ ಯಾರೋ ಇದ್ದಾರೆ. ಬಹುಶಃ ತನ್ನನ್ನು ಬಲಿ ಹಾಕಲೆಂದೇ ಯಾರೋ ಕಾಯ್ದು ಕುಳಿತಿರಬೇಕು. ಹೀಗೆ ಶಬ್ದ ಮಾಡಿ ಒಂದಷ್ಟು ಜನರನ್ನು ಸೇರಿಸಿ ನನ್ನನ್ನು ಹಿಡಿದುಕೊಂಡು ಹೋಗಬಹುದು ಅಥವಾ ಕೊಂದೇ ಬಿಡಬಹುದು. ನರಿ ಮತ್ತಷ್ಟು ಗಾಬರಿ­ಯಾಗಿ ಓಡತೊಡಗಿತು. ಗಾಳಿಯ ವೇಗ ಹೆಚ್ಚಾದಂತೆ ಆ ವಿಚಿತ್ರವಾದ ಸಪ್ಪಳವೂ ಹೆಚ್ಚಾಗತೊಡಗಿತು. ನರಿ ತಿರುಗಿ ನೋಡಿತು. ಯಾರೂ ಕಾಣಲಿಲ್ಲ, ಆದರೆ ಸದ್ದು ನಿಲ್ಲಲಿಲ್ಲ.

ಈಗ ನರಿಗೆ ಚಿಂತೆ ಪ್ರಾರಂಭ­ವಾಯಿತು. ಅದು ಒಂದು ಕ್ಷಣ ನಿಂತು ಯೋಚಿಸಿತು. ಭಯಪಟ್ಟು ಪ್ರಯೋಜ­ನವಿಲ್ಲ. ಮೊದಲು ವೈರಿ ಯಾರು ಎಂಬುದನ್ನು ಗಮನಿಸುತ್ತೇನೆ. ನಂತರ ಅವರಿಂದ ಪಾರಾಗಲು ಉಪಾ­ಯವನ್ನು ಹುಡುಕುತ್ತೇನೆ. ದೀರ್ಘ ಶ್ವಾಸ ತೆಗೆದು­ಕೊಂಡು ಸುಧಾರಿಸಿಕೊಂಡು ನರಿ ಮರದ ಹಿಂದೆ ಅವಿತುಕೊಂಡು ಶಬ್ದ ಬಂದೆಡೆಗೆ ನೋಡಿತು. ಯಾರೂ ಕಂಡು ಬರಲಿಲ್ಲ. ಗಾಳಿ ಜೋರಾಗಿ ಬೀಸಿದಾಗ ಶಬ್ದ ಜೋರಾಗುತ್ತಿತ್ತು. ಮತ್ತು ಗಾಳಿ ನಿಂತಾಗ ಸದ್ದೇ ಇರಲಿಲ್ಲ. ಅಂದರೆ ಇದು ಗಾಳಿಗೆ ಆಗುವ ಸದ್ದು ಎಂದುಕೊಂಡು ನಿಧಾನವಾಗಿ ತೆವಳಿಕೊಂಡು ಶಬ್ದ ಬಂದ ದಿಕ್ಕಿಗೆ ಸಾಗಿತು. ತೀರ ಹತ್ತಿರಕ್ಕೆ ಬಂದಾಗ ಕಂಡದ್ದನ್ನು ನೋಡಿ ಜೋರಾಗಿ ನಕ್ಕಿತು. ಯುದ್ಧ ಮಾಡಲು ಬಂದವರಲ್ಲಿ ಕೆಲವರು ನಗಾರಿ ತಂದಿದ್ದಾರೆ. ತಂದವರು ಸತ್ತು ಹೋದರೋ, ಓಡಿ ಹೋದರೋ ತಿಳಿಯದು. ನಗಾರಿ ಮಾತ್ರ ಅಲ್ಲಿಯೇ ಬದಿಗೆ ಬಿದ್ದಿದೆ. ಗಾಳಿ ಬಿಟ್ಟಾಗ ಮರದ ಟೊಂಗೆಗಳು ನಗಾರಿಗೆ ಬಡಿದು, ತಿಕ್ಕಿ ಸದ್ದನ್ನುಂಟು ಮಾಡುತ್ತಿವೆ.

ಅದೇ ಸದ್ದಿಗೆ ನರಿ ಹೆದರಿದ್ದು. ಆ ಭಯದ ಮೂಲವನ್ನು ಹುಡುಕಿಕೊಂಡು ಹೋಗ­ದಿದ್ದರೆ ಭಯ ನರಿಯನ್ನು ಕಾಡುತ್ತಿತ್ತು. ಎಲ್ಲಿಯವರೆಗೂ ನಾವು ಭಯವನ್ನು ಎದುರಿಸಿ ನಿಲ್ಲುವುದಿಲ್ಲವೋ ಅಲ್ಲಿಯ­ವರೆಗೆ ಅದು ನಮ್ಮನ್ನು ಕಾಡುತ್ತದೆ. ನನ್ನ ಅನುಭವದಲ್ಲಿ ನಮ್ಮ ಬದುಕಿನ ನರಳಿಕೆಗೆ ಕಾರಣವಾದವು ಎರಡು ಮೂಲಭೂತ­ವಾದ ಭಾವನೆಗಳು. ಒಂದು ಭಯ, ಇನ್ನೊಂದು ಕೋಪ. ಕೋಪದ ಭಾವನೆ ನಮ್ಮಲ್ಲಿ ಅಸಹನೆ, ಕಿರಿಕಿರಿ, ಹತಾಶೆ, ಟೀಕೆ, ಅಸೂಯೆ ಮತ್ತು ಅಸಂತೋಷ­ವಾಗಿ ಹೊರಹೊಮ್ಮಿದರೆ, ಭಯ – ನಮ್ಮ ನಡವಳಿಕೆಗಳಲ್ಲಿ ಆತಂಕ, ತಳಮಳ, ಒತ್ತಡ, ಅಧೀರತೆ, ಚಿಂತೆ, ಸಂಶಯ ಮತ್ತು ಕೀಳರಿಮೆಗಳಾಗಿ ಕಾಣಿಸಿಕೊಳ್ಳುತ್ತದೆ. ಭಯದಿಂದ ಮುಕ್ತಿ ಪಡೆಯುವ ಒಂದೇ ಉಪಾಯವೆಂದರೆ ಅದನ್ನು ಎದುರಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.