ADVERTISEMENT

ಶ್ರದ್ಧಾಪೂರ್ವಕ ಪರಿಶ್ರಮದ ಬೆಲೆ

ಡಾ. ಗುರುರಾಜ ಕರಜಗಿ
Published 6 ಜನವರಿ 2015, 19:30 IST
Last Updated 6 ಜನವರಿ 2015, 19:30 IST

ಹದ್ರತ್ ಅಬ್ದುಲ್ ಖಾದಿರ್ ಇರಾಕಿನ ಬಾಗ್ದಾದ್‌ನಲ್ಲಿ ಹನ್ನೆರಡನೇ ಶತ­ಮಾನದಲ್ಲಿ ಬದುಕಿದ್ದ ಮಹಾನ್ ಸೂಫೀ ಸಂತ. ಆತನ ದೈವಭಕ್ತಿ, ಆಳ­ವಾದ ಆಧ್ಯಾತ್ಮ ಚಿಂತನೆಗಳು ಅವನನ್ನು ಪವಾಡ ಪುರುಷನನ್ನಾಗಿ ಮಾಡಿದ್ದವು.  ಅವನ ಬಗ್ಗೆ ದಂತಕಥೆಗಳೇ ಬಂದಿದ್ದವು. ಅವನ ನಂತರ ಅವನ ಶಿಷ್ಯರ ಪಡೆಗೆ ಖಾದಿರೀ ಪಂಥ ಎಂದೇ ಹೆಸರಾಯಿತು.  ಖಾದಿರ್ ಸಣ್ಣ ಸಣ್ಣ ಕಥೆಗಳಲ್ಲಿ ಅತ್ಯಂತ ಮೌಲಿಕವಾದ ಚಿಂತನೆಗಳನ್ನು ತಿಳಿಸುವುದರಲ್ಲಿ ನಿಷ್ಣಾತ. ಒಂದು ಕಥೆ ಹೀಗಿದೆ.

ಒಂದು ಬಾರಿ ತರುಣ ರಾಜನೊಬ್ಬ  ಪರಿವಾರದೊಂದಿಗೆ ಹೋಗುತ್ತಿರುವಾಗ ರಸ್ತೆಯ ಬದಿಯಲ್ಲಿ ವಿಸ್ತಾರವಾಗಿ ಹರಡಿದ ದ್ರಾಕ್ಷಿ ತೋಟವನ್ನು ಕಂಡ. ಅದು ತುಂಬ ಸೊಂಪಾಗಿ ಹರಡಿತ್ತು. ಆದರೆ ಇದು ಹಣ್ಣು ಬಿಡುವ ಕಾಲವಾದರೂ ಅದ­ರಲ್ಲಿ ಒಂದು ಹಣ್ಣೂ ಇರಲಿಲ್ಲ.  ಇದೇಕೆ ಹೀಗೆ ಎಂದು ಮಂತ್ರಿಗಳನ್ನು ಕೇಳಿ­ದರೆ ಅವರು ನಕ್ಕು, ‘ಪ್ರಭೂ, ಈ ತೋಟದ ಒಡೆಯ ಮೂರ್ಖ. ಅದು ಯಾವುದೋ ತಳಿ ಹಾಕಿದ್ದಾನೆ, ತುಂಬ ಪರಿಶ್ರಮ ಪಡುತ್ತಾನೆ. ಈ ಬಳ್ಳಿ ಮೂವತ್ತು ವರ್ಷದ ನಂತರ ಫಲ ಕೊಡುತ್ತದಂತೆ. ಅದನ್ನೇ ನಂಬಿ ಆತ ದುಡಿಯುತ್ತಿ­ದ್ದಾನೆ’ ಎಂದರು. ರಾಜ ರೈತನನ್ನು ಕರೆಸಿ ಕೇಳಿದ. ಆಗ ರೈತ, ‘ಹೌದು ಪ್ರಭೂ, ಇದೊಂದು ವಿಶೇಷ ತಳಿ. ಮೂವತ್ತು ವರ್ಷದ ನಂತರ ಹಣ್ಣು ನೀಡುತ್ತದೆ. ಆದರೆ ಆ ಹಣ್ಣಿಗೆ ಇರುವ ರುಚಿ ಮತ್ತೆ ಯಾವ ಹಣ್ಣಿಗೂ ಇರು­ವುದು ಸಾಧ್ಯವಿಲ್ಲ. ಅದಕ್ಕೇ ಶ್ರದ್ಧೆಯಿಂದ ದುಡಿಯುತ್ತಿದ್ದೇನೆ. ಈಗಾಗಲೇ ಇಪ್ಪತ್ತು ವರ್ಷ ಕಳೆದು ಹೋಗಿದೆ’ ಎಂದ. ರಾಜ ಮೆಚ್ಚಿ ಒಂದಷ್ಟು ಹಣ ಕೊಟ್ಟು, ‘ಈ ಬಳ್ಳಿಗಳಿಂದ ಯಾವಾಗಲಾದರೂ ಹಣ್ಣು ಬಂದರೆ, ಅಲ್ಲಿಯವರೆಗೂ ನಾವಿಬ್ಬರೂ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದರೆ, ದಯವಿಟ್ಟು ನನಗೆ ಇದರ ಹಣ್ಣು ತಂದು ಕೊಡು’ ಎಂದು ಹೇಳಿ ನಡೆದ.

ಮುಂದೆ ಕೆಲವರ್ಷಗಳು ಉರುಳಿದವು. ರೈತನ ತೋಟದ ದ್ರಾಕ್ಷಿ ಬಳ್ಳಿಗಳಲ್ಲಿ ರಸಪೂರಿತ ಹಣ್ಣುಗಳು ಮೂಡತೊಡಗಿದವು. ಅದೇನು ಅಪೂರ್ವ ರುಚಿ ಅವುಗಳಿಗೆ! ರೈತ ಚೆನ್ನಾಗಿ ಬೆಳೆದ ರಸವತ್ತಾದ ಹಣ್ಣುಗಳನ್ನು ದೊಡ್ಡ ಬುಟ್ಟಿ­ಯಲ್ಲಿ ತುಂಬಿಸಿಕೊಂಡು ತಾನು ಹಿಂದೆ ಮಾತು ಕೊಟ್ಟಂತೆ ಅರಮನೆಗೆ ನಡೆದ.  ಕಾವಲುಗಾರರಿಗೆ ವಿಷಯವನ್ನೆಲ್ಲ ತಿಳಿಸಿದ. ಅವರು ರಾಜನಿಗೆ ಹೇಳಿದೊಡನೆ ಅರಮನೆ­ಯೊಳಗೆ ಬರಲು ಆಜ್ಞೆ ಬಂದಿತು. ರಾಜ ರೈತ ತಂದಿದ್ದ ಹಣ್ಣುಗಳಲ್ಲಿ  ಕೆಲವನ್ನು ಬಾಯಿಗೆ ಹಾಕಿಕೊಂಡು ಅವುಗಳ ರುಚಿಗೆ ಸಂತೋಷಪಟ್ಟ. ತನ್ನ ಹೆಂಡಂದಿರಿಗೂ, ಪರಿವಾರದವರಿಗೂ ಹಂಚಿದ. ನಂತರ ರೈತನನ್ನು ಕರೆದು ಕೆಲವು ಬೆಲೆಬಾಳುವ ರತ್ನಾಭರಣಗಳನ್ನು ಕೊಡುವುದರೊಂದಿಗೆ ರೈತ ಬದುಕಿದ್ದ ಹಳ್ಳಿಯನ್ನೇ ಅವನಿಗೆ ಉಂಬಳಿಯಾಗಿ ನೀಡಿಬಿಟ್ಟ. ಅರಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ! ಒಂದು ಬುಟ್ಟಿ ಹಣ್ಣಿಗೆ ಇಷ್ಟೊಂದು ಮರ್ಯಾದೆಯೇ? ಈ ಸುದ್ದಿ  ರಾಜ್ಯದಲ್ಲೆಲ್ಲ ಹರಡಿತು.

ಮುಂದೆ ಒಂದು ವಾರದಲ್ಲಿ ನೂರಾರು ಜನ ರೈತರು ಬುಟ್ಟಿಗಳಲ್ಲಿ ದ್ರಾಕ್ಷಿ ಹಣ್ಣುಗಳನ್ನು ತುಂಬಿಕೊಂಡು ಬಂದು ರಾಜನನ್ನು ಕಾಣಲು ದುಂಬಾಲು ಬಿದ್ದರು. ಆದರೆ ರಾಜ ಮಾತ್ರ ಯಾರನ್ನೂ ಕಾಣದೇ ಆಗ ಮಾರುಕಟ್ಟೆಯಲ್ಲಿದ್ದ ದರವನ್ನೇ ಅವರಿಗೆಲ್ಲ ಕೊಡುವಂತೆ ಆಜ್ಞೆ ಮಾಡಿ ಕಳುಹಿಸಿಬಿಟ್ಟ. ರೈತರಿಗೆಲ್ಲ ಕೋಪ ಬಂದಿತು. ಒಬ್ಬ ರೈತನಿಗೆ ಒಂದು ಊರನ್ನೇ ಉಂಬಳಿ ಹಾಕಿ ಕೊಡುವು­ದಾದರೆ ತಮಗೇಕೆ ಈ ಕಡಿಮೆ ಬೆಲೆ ದೊರೆಯಬೇಕು? ತಾವು ತಂದದ್ದೂ ದ್ರಾಕ್ಷಿ ಹಣ್ಣೇ ತಾನೇ? ಅವರು ಮಂತ್ರಿಗಳ ಜೊತೆಗೆ ವಾಗ್ವಾದ ಮಾಡಿ ರಾಜನನ್ನು ನೋಡುವ ಅವಕಾಶ ಗಿಟ್ಟಿಸಿಕೊಂಡರು. ರಾಜನ ಮುಂದೆ ಒಬ್ಬ ರೈತ ಇದರ ಬಗ್ಗೆ ಕೇಳಿಯೇ ಬಿಟ್ಟ.  ಆಗ ರಾಜ ಹೇಳಿದ, ‘ನಿಮಗೆ ಹೊಟ್ಟೆಕಿಚ್ಚು ಬೇಡ. ಆ ರೈತನ ಹಣ್ಣಿನ ರುಚಿಯೇ ಬೇರೆ. ನಾನು ಉಂಬಳಿ ಹಾಕಿಕೊಟ್ಟು ಮರ್ಯಾದೆ ಮಾಡಿದ್ದು ಹಣ್ಣಿನ ಬೆಲೆಯಲ್ಲ, ಅವನ ಶ್ರದ್ಧೆಯ, ಪರಿಶ್ರಮದ, ತಾಳ್ಮೆಯ ಬೆಲೆ. ಮೂವತ್ತು ವರ್ಷಗಳ ನಂತರ ವಿಶೇಷ ಬೆಳೆ ಬಂದೀತೆಂಬ ನಂಬಿಕೆಯಲ್ಲಿ ಆತ ಯಾರ ಟೀಕೆಗೂ ಬಗ್ಗದೇ, ಬೇಗ ಹಣ ಗಳಿಸುವ ಆಮಿಷಕ್ಕೆ ಬೀಳದೆ, ಪರಿಶ್ರಮ­ವನ್ನು ಬಿಡದೇ ಹಾಕಿ ತನ್ನ ಗುರಿಯನ್ನು ತಲುಪಿಯೇ ಬಿಟ್ಟ. ಈ ಶ್ರದ್ಧಾಪೂರ್ವಕ­ವಾದ ಪರಿಶ್ರಮದ ಬೆಲೆ ರಾಜ್ಯಕ್ಕೆಲ್ಲ ತಿಳಿಯಲೆಂದೇ ನಾನು ಆತನಿಗೆ ಮರ್ಯಾದೆ ಮಾಡಿದೆ’. ಜನ ಅವನ ಮಾತನ್ನು ಒಪ್ಪಿದರು.

ಯಾವುದೋ ಒಂದು ಘನತತ್ವಕ್ಕೆ, ಆದರ್ಶಕ್ಕೆ ಮನತೆತ್ತು, ಅದರ ಮೇಲಿನ ಕಣ್ಣು ತೆಗೆಯದೇ, ಅದರಲ್ಲಿ ನಂಬಿಕೆಯನ್ನು ಕಳೆದುಕೊಳ್ಳದೇ, ಬಹುಕಾಲ ಶ್ರದ್ಧೆಯಿಂದ ದುಡಿದದ್ದರ ಫಲ ಖಂಡಿತ ದೊರೆಯುತ್ತದೆ. ಆದರೆ ಫಲ ಪಡೆಯು­ವಲ್ಲಿ ಆತುರ ಬೇಡ, ಅಸಹನೆ ಬೇಡ, ನಿರಾಸೆ ಬೇಡ. ಅವಸರದ ಅನುಕರಣೆಗಿಂತ ತಾಳ್ಮೆಯ, ಶ್ರದ್ಧೆಯ, ದೀರ್ಘಕಾಲದ ಪರಿಶ್ರಮದ ಸ್ವಂತಿಕೆಯ ಪ್ರತಿಫಲ ದೊಡ್ಡದು ಮತ್ತು ಶಾಶ್ವತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.