ADVERTISEMENT

ಸಂಕಷ್ಟದ ನಡುವೆಯೂ ಆಸೆಯ ಕಿರಣ

ಡಾ. ಗುರುರಾಜ ಕರಜಗಿ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಕೆಲವು ವರ್ಷಗಳ ಹಿಂದೆ ನಾನು ಆ ಹುಡುಗಿಯನ್ನು ಕಂಡಿದ್ದೆ. ಆಗ ಆಕೆಗೆ ಸುಮಾರು 14-15 ವರ್ಷ ವಯಸ್ಸಿದ್ದಿರಬೇಕು. ಆಕೆ ಆಗ ಕೊಚ್ಚಿಯ ಒಂದು ಆಸ್ಪತ್ರೆಯಲ್ಲಿದ್ದಳು. ಅತ್ಯಂತ ತೆಳುವಾದ ಕಪ್ಪು ಬಣ್ಣದ ಹುಡುಗಿ. ಗುಂಗುರು ಕೂದಲು, ಪುಟ್ಟ ಮೊಂಡ ಮೂಗು ಆದರೆ ನೋಡಿದ ತಕ್ಷಣ ಮನಸ್ಸನ್ನು ಸೆಳೆಯುವ ಫಳಫಳನೇ ಹೊಳೆಯುವ ಕಣ್ಣುಗಳು. ಆಕೆಯ ಹೆಸರು ಲೂಸಿ ಬ್ರೆಟ್ ಎಂಬ ನೆನಪು ನನಗೆ.

ಆಕೆಯ ಹಿನ್ನೆಲೆಯನ್ನು ಆಸ್ಪತ್ರೆಯ ವೈದ್ಯರೊಬ್ಬರು ನನಗೆ ನೀಡಿದರು. ಲೂಸಿ ಎರಡು ದಿನದ ಮಗುವಾಗಿದ್ದಾಗ ಅದಾವ ಕಾರಣಕ್ಕೋ ಹೆತ್ತ ತಾಯಿಯೋ ಮತ್ತಾರೋ ಆಕೆಯನ್ನು ಕಸದ ತೊಟ್ಟಿಯ ಪಕ್ಕದಲ್ಲಿ ಒಂದು ಬುಟ್ಟಿಯಲ್ಲಿ ಇಟ್ಟು ಹೋಗಿಬಿಟ್ಟಿದ್ದರಂತೆ. ಯಾರೋ ಪುಣ್ಯಾತ್ಮರು ಗಮನಿಸಿ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಆಕೆಗೆ ನಾಮಕರಣ ಮಾಡಿದ್ದೂ ಆಶ್ರಮದವರೇ. ಹುಟ್ಟಿದಾಗಲೇ ತಂದೆ-ತಾಯಿಗಳಿಂದ ದೂರವಾದ ಲೂಸಿ ಆಶ್ರಮದಲ್ಲೇ ಬೆಳೆದಳು.

ಆಕೆಗೆ ಎರಡು ವರ್ಷವಾಗಿದ್ದಾಗ ಜಾರಿಬಿದ್ದು ಎಡಗಾಲು ಮುರಿಯಿತು. ಅದು ಗುಣವಾಗುವಷ್ಟರಲ್ಲಿ ಬಲಗಾಲಿನ ಹೆಬ್ಬೆರಳು ಮುರಿಯಿತು. ಆಕೆಯೇನೂ ಜಾರಿ ಎತ್ತರದಿಂದ ಬಿದ್ದಿರಲಿಲ್ಲ, ಮಂಚದಿಂದ ಕೆಳಗಿಳಿಯುವಾಗ ಎಲ್ಲೋ ಕೊಂಚ ತಗುಲಿರಬೇಕು. ನಂತರ ಹೀಗೆ ಆಗಾಗ ಮೂಳೆಗಳು ಮುರಿಯುವುದು ಸಾಮಾನ್ಯವಾಯಿತು. ಹೀಗಾಗಿ ಆಕೆ ಆಶ್ರಮಕ್ಕಿಂತ ಆಸ್ಪತ್ರೆಯಲ್ಲೇ ಇರುವುದು ಹೆಚ್ಚಾಯಿತು.
 
ಆಕೆಗೆ ಏಳು ವರ್ಷವಾಗುವುದರೊಳಗೆ ಹದಿನಾರು ಬಾರಿ ಮೂಳೆಗಳು ಮುರಿದಿದ್ದವಂತೆ! ವೈದ್ಯರು ಕೂಲಂಕಷವಾಗಿ ಪರೀಕ್ಷೆ ಮಾಡಿ ನೋಡಿದಾಗ ಲೂಸಿಗೆ ಒಂದು ವಿಚಿತ್ರವಾದ ರೋಗ ಆವರಿಸಿಕೊಳ್ಳುತ್ತಿರುವುದನ್ನು ಕಂಡು ಹಿಡಿದರು.

ಆಕೆಯ ಮೂಳೆಗಳು ದುರ್ಬಲವಾಗುತ್ತಿವೆ. ಸ್ಥಿರತೆಯನ್ನು, ಬಿರುಸನ್ನು ಕಳೆದುಕೊಳ್ಳುತ್ತಿವೆ. ದೇಹಕ್ಕೆ ಭದ್ರತೆಯನ್ನು ತಂದುಕೊಡುವುದರ ಬದಲು ಅವೇ ಸೀಮೆಸುಣ್ಣದ ಹಾಗೆ ಪಟಪಟನೇ ಮುರಿದು ಆತಂಕವನ್ನು ಸೃಷ್ಟಿಸುತ್ತಿವೆ. ಇದಕ್ಕೆ ಯಾವ ಸರಿಯಾದ ಔಷಧಿಯೂ ಇಲ್ಲವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದರು.

ಬರಬರುತ್ತ ಈ ಸಮಸ್ಯೆ ಇನ್ನೂ ಗಂಭೀರವಾಗತೊಡಗಿ ಆಕೆ ಆಸ್ಪತ್ರೆಯಲ್ಲಿಯೇ ಇರುವಂತಾಯಿತು. ಲೂಸಿಗೆ ತನ್ನ ಆರೋಗ್ಯದ ವಿಷಯ ತಿಳಿಯಿತು. ನಿಧಾನವಾಗಿ ರೋಗ ಇಡೀ ದೇಹವನ್ನೇ ಆವರಿಸಿಕೊಳ್ಳುತ್ತಿದೆ, ಯಾವಾಗಲಾದರೂ ಯಾವುದೇ ಎಲುವು ಮುರಿಯಬಹುದು ಅದರಿಂದ ಯಾವುದೇ ಅಪಾಯವಾಗಬಹುದು.
 
ಹುಡುಗಿಗೆ ಗಾಬರಿಯಾದರೂ ತೋರಿಸಿಕೊಳ್ಳಲಿಲ್ಲ. ಹಾಗಾದರೆ ತಾನು ಬದುಕಿರುವವರೆಗೆ ಓಡಾಡಲಾರದೇ ಮಾಡುವ ಕೆಲಸಗಳಾವವು ಎಂದು ಚಿಂತಿಸಿದಳು. ತನಗೆ ಓದುವುದಕ್ಕೆ ಬರೆಯುವುದಕ್ಕೆ ತುಂಬ ಆಸಕ್ತಿ. ಹಾಗೆಂದುಕೊಂಡು ಕೈಗೆ ಸಿಕ್ಕಿದ ಎಲ್ಲ ಪುಸ್ತಕಗಳನ್ನು ಓದಿ ಓದಿ ತನ್ನ ಭಾಷೆಯನ್ನು ಪರಿಷ್ಕರಿಸಿಕೊಂಡಳು.

ಕೈಯಲ್ಲಿ ಪೆನ್ನು ಹಿಡಿದು ಬರೆಯುವುದು ಶ್ರಮದಾಯಕ. ಆಕೆ ಜನರಿಗೆ ಮೊರೆ ಇಟ್ಟಾಗ ಕೊಚ್ಚಿಯ ಯಾವುದೋ ಸಾಮಾಜಿಕ ಕ್ಲಬ್‌ನವರು ಅಕೆಗೊಂದು ಪುಟ್ಟ ಟೈಪರೈಟರನ್ನು ಕಾಣಿಕೆಯಾಗಿಕೊಟ್ಟರು. ಆಕೆಗೆ ಅದೆಷ್ಟು ಸಂಭ್ರಮ! ಸಂತೋಷದಿಂದ ಅತ್ತುಬಿಟ್ಟಳು!.
ಮರುದಿನದಿಂದಲೇ ತನ್ನ ಭಾಷೆಯಲ್ಲೇ ತಾನು ಕಂಡದ್ದನ್ನು, ಕೇಳಿದ್ದನ್ನು, ಓದಿದ್ದನ್ನು ಬರೆಯತೊಡಗಿದಳು.

ನಂತರ ವೈದ್ಯರೊಡನೆ ಮಾತನಾಡಿ ಆಸ್ಪತ್ರೆಯಲ್ಲಿ ಬರುವ ಅನೇಕ ರೋಗಿಗಳ ಆರೋಗ್ಯದ ಇತಿಹಾಸವನ್ನು ಬರೆದಳು. ಇದು ಯಾವುದೇ ಆಸ್ಪತ್ರೆಯ ವೈದ್ಯರಿಗೆ ಅತ್ಯಂತ ಉಪಯುಕ್ತವಾಗುವ ವಿಷಯ. ನೂರಾರು ದಾಖಲೆಗಳನ್ನು ಬರೆದಳು. ಬರೆಯುತ್ತ ಬರೆಯುತ್ತ ಆಕೆ ಎಷ್ಟು ವಿಷಯಗಳನ್ನು ತಿಳಿದುಕೊಂಡಳೆಂದರೆ ವೈದ್ಯರು ಆಕೆಯ ಅಭಿಪ್ರಾಯವನ್ನು ಕೇಳುತ್ತಿದ್ದರಂತೆ.

ನಂತರ ಲೂಸಿ ಆಸ್ಪತ್ರೆಯಲ್ಲಿದ್ದುಕೊಂಡೇ ಅಮೆರಿಕೆಯ ಒಂದು ಮುಕ್ತವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಳಂತೆ.ಲೂಸಿ ಬ್ರೆಟ್ ನಮಗೆಲ್ಲ ಮಾದರಿ ಅಲ್ಲವೇ? ಎಲ್ಲವೂ ಇದ್ದು ಏನೂ ಇಲ್ಲವೆಂಬಂತೆ ಕೊರಗಿ ಜೀವನ ಕಳೆಯುವ ಅನೇಕ ಮಂದಿಯನ್ನು ಕಂಡಾಗ ಎಲ್ಲ ಸಂಗತಿಗಳೂ ತನಗೆ ವಿರುದ್ಧವಾಗಿದ್ದಾಗ ಎಲ್ಲವೂ ಇದೆಯೆಂಬಂತೆ ದುಡಿದು ಹೆಸರು ಮಾಡಿದ ಲೂಸಿ ನನಗಂತೂ ಆದರ್ಶವಾಗಿದ್ದಾಳೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.