ADVERTISEMENT

ಸಮಸ್ಯೆಯ ಪರಿಹಾರ

ಡಾ. ಗುರುರಾಜ ಕರಜಗಿ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಇದೊಂದು ನೈಜ ಘಟನೆ. ಅಮೆರಿಕೆಯ ಕ್ಯಾಲಿಫೋರ್ನಿಯಾದಲ್ಲಿ ಮಾಲಿಬು ಎಂಬ ಸಣ್ಣ ಪಟ್ಟಣವಿದೆ. ಎದುರಿಗೆ ಸಮುದ್ರ, ಹಿಂಭಾಗದಲ್ಲಿ ಬೆಟ್ಟಗಳ ಸಾಲು, ಹೀಗೆ ಸುಂದರವಾದ ಪಟ್ಟಣವಿದು. ಒಂದು ಮನೆಗಳ ಸಾಲಿನ ಹಿಂದೆ ಇದ್ದ ಬೆಟ್ಟದ ಮೇಲೆ ಒಂದು ಭಾರಿ ಬಂಡೆ ಇತ್ತು. ಅದು ಮುಂದಿರುವ ಮನೆಗಳ ಮೇಲೆ ವಾಲಿದಂತಿತ್ತು.

ಒಂದು ದಿನ ಆ ಬಂಡೆಯ ಮುಂದಿದ್ದ ಮನೆಯವನಿಗೆ ಚಿಂತೆ ಆಯಿತು. ಈ ಬಂಡೆ ಏನಾದರೂ ಸರಿದು, ಕುಸಿದು ಬಿದ್ದು ಬಿಟ್ಟರೆ ತನ್ನ ಮನೆ ಚಪ್ಪಟೆಯಾಗಿ ಹೋಗುವುದು ಖಚಿತ. ಆದ್ದರಿಂದ ಅದನ್ನು ತೆಗೆಸಿಬಿಡಬೇಕು ಎಂದು ನಗರಾಡಳಿತ ಅಧಿಕಾರಿಗೆ ಅರ್ಜಿ ಸಲ್ಲಿಸಿದ. ಅವರು ಬಂದು ಪರೀಕ್ಷಿಸಿದರು. ಅದು ಅಷ್ಟು ಬೇಗ ಬೀಳಲಾರದು ಎನ್ನಿಸಿತು.

ಆದರೆ ಈ ಮನೆಯಾತ ಕೇಳಬೇಕಲ್ಲ? ತನ್ನ ಮನೆಗೆ ಈ ಬಂಡೆಯಿಂದ ಅಪಾಯ ತಪ್ಪಿದ್ದಲ್ಲ. ಅದನ್ನು ಚಿಂತಿಸಿ, ಚಿಂತಿಸಿ ತನ್ನ ಆರೋಗ್ಯ ಕೆಡುತ್ತಿದೆ. ಸರ್ಕಾರವೇ ಇದಕ್ಕೆ ಹೊಣೆ ಎಂದು ವಾದಿಸಿದ. ಕೊನೆಗೆ ಸರ್ಕಾರ ಆ ಬಂಡೆಯನ್ನು ತೆಗೆಸಬೇಕೆಂದು ತೀರ್ಮಾನಮಾಡಿ ಕಾರ್ಯಪ್ರವೃತ್ತವಾಯಿತು.

ಎರಡು ಭಾರಿ ಯಂತ್ರಗಳು ಬಂಡೆಯನ್ನು ಎತ್ತುವುದಕ್ಕೆ ಬಂದವು. ಅವು ಏನು ಮಾಡಿದರೂ ಬಂಡೆ ಅಲುಗಾಡುತ್ತಿಲ್ಲ. ಮೇಲಿನಿಂದ ಅತೀ ಒತ್ತಡದಿಂದ ಬಂಡೆಯ ಬುಡಕ್ಕೆ ನೀರು ಬಿಟ್ಟು ಸಡಿಲಿಸಲು ನೋಡಿದರು. ಕೋಟಿ ವರ್ಷಗಳಿಂದ ಭದ್ರವಾಗಿ ಕುಳಿತ ಬಂಡೆ ಸುಲಭಕ್ಕೆ ಸರಿದೀತೇ? ಮೂರು ದಿನಗಳ ಸತತ ಪ್ರಯತ್ನದಿಂದ ಅಂತೂ ಅದು ಸರಿದು, ಭಾರಿ ಸದ್ದು ಮಾಡುತ್ತ ಉರುಳಿ ಮನೆಯ ಒಂದು ಮೂಲೆಗೆ ಹಾಯ್ದು ಕೆಡವಿ ರಸ್ತೆಯ ಮಧ್ಯದಲ್ಲಿ ನಿಂತಿತು. ತಕರಾರು ಮಾಡಿದವನ ಮನೆಯ ಹಿಂದಿನ ಭಾಗವಂತೂ ಹಾಳಾಗಿ ಹೋಯಿತು. ಈಗ ರಸ್ತೆಯ ನಡುವೆ ಅಡ್ಡವಾಗಿ ನಿಂತ ಬಂಡೆಯ ನಿವಾರಣೆ ಸಮಸ್ಯೆಯಾಯಿತು.

ಆಗ ಅಲ್ಲಿಗೆ ಒಬ್ಬ ತರುಣ ಬಂದ. ಈ ಬಂಡೆಯನ್ನು ನೋಡಿ ಆಡಳಿತಾಧಿಕಾರಿಯ ಬಳಿಗೆ ಹೋಗಿ ಆ ಬಂಡೆಯನ್ನು ತಾನು ಕೊಂಡುಕೊಳ್ಳುತ್ತೇನೆಂದು ಕೇಳಿಕೊಂಡ. ಅಧಿಕಾರಿ ಸಂತೋಷದಿಂದ ಬಂಡೆಯನ್ನು ಕೇವಲ ನೂರು ಡಾಲರಿಗೆ ಕೊಡುವುದಾಗಿಯೂ ಆದರೆ ಅದನ್ನು ನಲವತ್ತೆಂಟು ಗಂಟೆಯಲ್ಲಿ ರಸ್ತೆಯಿಂದ ಹೊರಗೆ ಸಾಗಿಸಬೇಕೆಂದು ಷರತ್ತು ವಿಧಿಸಿದ. ಆ ತರುಣ ಒಬ್ಬ ಕಲಾವಿದ. ತಕ್ಷಣ ತಾನು ಅಲ್ಲಿ, ಅಲ್ಲಿ ವ್ಯಾಪಾರಸ್ಥರನ್ನು ಕಂಡು ಅವರ ಮನ ಒಲಿಸಿ ಹಣ ಸಂಗ್ರಹ ಮಾಡಿಕೊಂಡು ಬಂಡೆಯನ್ನು ಎತ್ತುವ ಯಂತ್ರವನ್ನು ತಂದ. ಮರುದಿನ ಅದನ್ನು ರಸ್ತೆಯಿಂದ ಎತ್ತಿಸಿಕೊಂಡು ತನ್ನ ಮನೆಯ ಹತ್ತಿರದ ಜಾಗೆಗೆ ವರ್ಗಾಯಿಸಿದ. ಆರು ತಿಂಗಳುಗಳ ಕಾಲ ಆ ಬಂಡೆಯನ್ನು ಕೆತ್ತಿ ಒಂದು ಸುಂದರವಾದ ಕಲಾಕೃತಿಯನ್ನಾಗಿ ಮಾಡಿದ.

ಆ ವೇಳೆಗೆ ಯಾವ ಮನುಷ್ಯ ತಕರಾರು ಮಾಡಿ ಬಂಡೆಯನ್ನು ಕೀಳಿಸಿದ್ದನೋ ಅವನಿಗೆ ಭಾರಿ ಫಜೀತಿಯಾಗಿತ್ತು. ಮಳೆಗಾಲದಲ್ಲಿ, ಮನೆಯ ಹಿಂದಿದ್ದ ಬೆಟ್ಟದಿಂದ ಮಣ್ಣು ಕೊಚ್ಚಿಕೊಂಡು ಬಂದು ಇವನ ಹಿತ್ತಲನ್ನೆಲ್ಲ ಮುಳುಗಿಸಿಬಿಟ್ಟಿತ್ತು. ಈಗ ಅವನಿಗೆ ಆ ಬಂಡೆಯಿಂದ ತನಗೆ ತೊಂದರೆಯಾಗಿರದೇ ಉಪಕಾರವಾಗಿತ್ತು ಎಂಬುದು ಗೊತ್ತಾಗಿತ್ತು.

ಬಂಡೆ, ಮಣ್ಣನ್ನು ಹಿಡಿದು ರಕ್ಷಣೆ ನೀಡಿತ್ತು. ಅದಿಲ್ಲದೇ ಅವನ ಮನೆ ಈಗ ಅಸುರಕ್ಷಿತವಾಯಿತು. ತಜ್ಞರನ್ನು ಕೇಳಿದಾಗ ಅವರು ಬಂಡೆಯನ್ನು ತೆಗೆಸಿದ್ದೇ ತಪ್ಪಾಯಿತೆಂದೂ, ಈಗ ಭದ್ರ ಮಾಡಬೇಕಾದರೆ ಮತ್ತೆ ಅಂಥ ಬಂಡೆಯನ್ನಾದರೂ ಕೂಡ್ರಿಸಬೇಕು ಇಲ್ಲವೇ ಭಾರೀ ಗೋಡೆಯನ್ನು ಕಟ್ಟಬೇಕು ಎಂದರು.
 
ಮನೆಯಾತ ಬಂಡೆಯನ್ನು ಕೊಂಡುಕೊಂಡಿದ್ದ ಕಲಾವಿದನನ್ನು ಹುಡುಕಿಕೊಂಡು ಹೋದ. ಬಂಡೆ ಒಂದು ಅದ್ಭುತ ಕಲಾಕೃತಿಯಾಗಿ ನಿಂತಿತ್ತು. ಅದಕ್ಕೆ ಎರಡು ಲಕ್ಷ ಡಾಲರ್ ಹಣ ಕೊಟ್ಟು ಮತ್ತೆ ಅದನ್ನು ಸಾಗಿಸಲು ಮತ್ತಷ್ಟು ಖರ್ಚು ಮಾಡಿ ಅದನ್ನು ಮೊದಲಿದ್ದ ಸ್ಥಾನದಲ್ಲೇ ಕೂಡ್ರಿಸಿ ನಿಟ್ಟಿಸಿರು ಬಿಟ್ಟ.
 
ತಾನಾಗಿಯೇ ಭದ್ರವಾಗಿ ಕುಳಿತಿದ್ದು ಇವನ ಮನೆಗೆ ಭದ್ರತೆಯನ್ನು ಕೊಟ್ಟ ಬಂಡೆಯನ್ನು ಕೀಳಿಸಿ ತನ್ನ ಮನೆಗೆ ಅಪಾಯವನ್ನು ತಂದುಕೊಂಡು ನಂತರ ಅದೇ ಬಂಡೆಯನ್ನು ಭಾರೀ ಹಣಕೊಟ್ಟು ತಂದು ಅಲ್ಲಿಯೇ ಭದ್ರಪಡಿಸಿದ್ದ ಮನುಷ್ಯ ಪೆಚ್ಚಾಗಿದ್ದ.

ನಮ್ಮ ಸಮಾಜದಲ್ಲಿ ಎರಡು ತರಹದ ಜನರೂ ಇರುತ್ತಾರೆ. ಕೆಲವರು ಎಂಥ ಭದ್ರತೆಯಲ್ಲೂ, ಒಳ್ಳೆಯ ಸ್ಥಿತಿಯಲ್ಲೂ ಅಪಾಯವನ್ನೇ, ಅಭದ್ರತೆಯನ್ನೇ ಚಿಂತಿಸುತ್ತ ಕೊರಗುತ್ತಾರೆ. ಇನ್ನು ಕೆಲವರು ಎಂಥ ಸಂಕಷ್ಟದಲ್ಲೂ ಅವಕಾಶಗಳನ್ನೇ ಕಾಣುತ್ತ ಯಶಸ್ಸು ಪಡೆಯುತ್ತಾರೆ. ಯಾವುದೇ ಪರಿಸ್ಥಿತಿ ಒಳ್ಳೆಯದು ಅಥವಾ ಕೆಟ್ಟದ್ದು ಆಗಿರುವುದಿಲ್ಲ, ನಾವು ಅದನ್ನು ನೋಡುವ ರೀತಿ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.