ADVERTISEMENT

ಸಲಹೆ ನೀಡುವ ರೀತಿ

ಡಾ. ಗುರುರಾಜ ಕರಜಗಿ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಅನೇಕ ಸಂದರ್ಭಗಳಲ್ಲಿ ಜನ ನಮ್ಮ ಅಭಿಪ್ರಾಯಗಳನ್ನು ಕೇಳುತ್ತಾರೆ. ಪ್ರಾಮಾಣಿಕವಾದ ಅಭಿಪ್ರಾಯಗಳನ್ನು ನೀಡಬೇಕೆಂಬುದೇನೋ ಸರಿಯೇ. ಆದರೆ, ಜಾಗರೂಕವಾಗಿಯೂ ಇರಬೇಕಾಗುತ್ತದೆ. ಸಲಹೆಗಳನ್ನು ಪಡೆದವರು ಅವುಗಳನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಗಮನಿಸಿ ಮಾತನಾಡಬೇಕು.

ಅದೊಂದು ಚಳಿಗಾಲದ ಮುಂಜಾವು. ಮೊದಲೇ ಮೈ ಕೊರೆಯುವ ಚಳಿ ಕಾಡನ್ನು ಮುತ್ತಿದೆ. ಅದರಲ್ಲಿ ಒಂದೇ ಬಾರಿ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿಯತೊಡಗಿತು. ಕಾಡಿನಲ್ಲಿಯ ಪ್ರಾಣಿಗಳು ತಪ್ಪಿಸಿಕೊಂಡು ಎಲ್ಲಿಗೆ ಹೋದಾವು? ಪಾಪ! ತಮಗೆ ತೋಚಿದಂತೆ ಅಲ್ಲಲ್ಲಿ ಆಸರೆ ಪಡೆಯಲು ಕಷ್ಟಪಡುತ್ತಿದ್ದವು.

ಕೆಲವು ಬಿಲದಲ್ಲಿ ಸೇರಿಕೊಂಡರೆ, ಕೆಲವು ಗುಹೆಗಳಲ್ಲಿ, ಮರದ ಪೊಟರೆಗಳಲ್ಲಿ ತಮ್ಮ ತಮ್ಮ ಗಾತ್ರ ಹಾಗೂ ದೊರೆತ ಅವಕಾಶಗಳಂತೆ ನೆಲೆಕಂಡುಕೊಳ್ಳುತ್ತಿದ್ದವು. ಒಂದು ಗುಬ್ಬಚ್ಚಿಯ ಸಂಸಾರ ಮರದ ಪೊಟರೆಯೊಳಗೆ ಕಟ್ಟಿಕೊಂಡಿದ್ದ ಬೆಚ್ಚಗಿನ ಗೂಡಿನಲ್ಲಿ ಆರಾಮವಾಗಿ ಕುಳಿತಿತ್ತು. ಗಂಡು ಗುಬ್ಬಚ್ಚಿ ತನ್ನ ಮನೆಯ ಬಾಗಿಲಿನಲ್ಲಿ ನಿಂತು ಹೊರಗಡೆ ಆಗುತ್ತಿರುವುದನ್ನು ನೋಡುತ್ತಿತ್ತು. ಆಗೊಂದು ದೊಡ್ಡ ಕರೀಕೋತಿ ಮಳೆಯಲ್ಲಿ ನೆನೆದು ತೊಪ್ಪಡಿಯಾಗಿ ನಡುಗುತ್ತ ಸರಸರನೇ ಮರ ಏರಿ ಒಂದು ಕೊಂಬೆಯ ಮೇಲೆ ಕುಳಿತುಕೊಂಡಿತು.

ಆದರೂ ಮಳೆ ಅದಕ್ಕೆ ಅಪ್ಪಳಿಸುತ್ತಲೇ ಇತ್ತು. ಕೋತಿಯ ಹಲ್ಲುಗಳು ಚಳಿಗೆ ಕಟಕಟಿಸುತ್ತಿದ್ದವು. ಗುಬ್ಬಚ್ಚಿ ಅದನ್ನು ಕಂಡಿತು. ಅದರ ಬಗ್ಗೆ ಅನುಕಂಪ ಮೂಡಿತು. ತಾನು ಕೋತಿಗೊಂದು ಒಳ್ಳೆಯ ಸಲಹೆ ಕೊಡಬೇಕೆಂಬ ಮನಸ್ಸಾಯಿತು.

ಅದರೊಂದಿಗೆ ತಾನಿದ್ದ ಭದ್ರತೆಯ ಬಗ್ಗೆ ಅಭಿಮಾನವೂ ತುಂಬಿತ್ತು. ಗುಬ್ಬಚ್ಚಿ ಕೋತಿಗೆ ಕೂಗಿ ಹೇಳಿತು,  `ಎಂಥ ದಡ್ಡನಪ್ಪ ನೀನು? ನಿನಗೆ ಮನುಷ್ಯರ ಹಾಗೆಯೇ ಕೈಗಳಿವೆ, ಕಾಲುಗಳಿವೆ, ಚುರುಕಾದ ಬುದ್ಧಿ ಇದೆ. ನೀನೇ ಸರಿಯಾಗಿ ವಸ್ತುಗಳನ್ನು ಬಳಸಿಕೊಂಡು ಮನೆ ಕಟ್ಟಿಕೊಳ್ಳಬಾರದೇ'.  ಮೊದಲೇ ನೆನೆದು ಕಷ್ಟಪಡುತ್ತಿದ್ದ ಕೋತಿಗೆ ಈ ಪುಗಸೆಟ್ಟೆ ಸಲಹೆ ಕೋಪ ತಂದಿತು.  `ಹೇ, ಸುಮ್ಮನೆ ಬಾಯಿಮುಚ್ಚಿಕೊಂಡು ಕೂತುಕೋ. ನಿನಗ್ಯಾಕೆ ನನ್ನ ಉಸಾಬರಿ  ಎಂದಿತು' ಕೋತಿ.

ಗುಬ್ಬಚ್ಚಿಗೆ ಆಶ್ಚರ್ಯ! ಒಳ್ಳೆಯ ಸಲಹೆ ನೀಡಿದರೆ ಈ ರೀತಿ ಕೋಪ ಬರಬೇಕೇ ಎಂದುಕೊಂಡು ಹೇಳಿತು, `ಅಯ್ಯೊ, ನನಗಿಂತ ನೂರು ಪಟ್ಟು ದೊಡ್ಡವನು ಏನು ನೀನು. ನಮ್ಮಂತಹ ಪುಟ್ಟ ಪುಟ್ಟ ಪ್ರಾಣಿಗಳೇ ಇಂತಹ ಸುಂದರ ಮನೆಗಳನ್ನು ಕಟ್ಟಿಕೊಂಡು ಬೆಚ್ಚಗೆ ಇರುವಾಗ ನಿನಗೇನಯ್ಯೊ ತೊಂದರೆ'.

ಮೊದಲೇ ಸಿಟ್ಟಿನಿಂದ ಕುದಿಯುತ್ತಿದ್ದ ಕೋತಿ ಥಟ್ಟನೇ ಕೊಂಬೆಯಿಂದ ಕೊಂಬೆಗೆ ಹಾರುತ್ತ ಗುಬ್ಬಚ್ಚಿಯ ಗೂಡಿನತ್ತ ಬಂದು ಒಂದೇ ಕ್ಷಣದಲ್ಲಿ ಗೂಡನ್ನು ಕಿತ್ತು ಹಾಕಿ ಗುಬ್ಬಚ್ಚಿಯ ಕತ್ತು ಮುರಿದು ಮುದ್ದೆ ಮಾಡಿ ಹಾಕಿತು. ಗುಬ್ಬಚ್ಚಿಯ ಮರಿಗಳು ಅನಾಥವಾಗಿ ಮರದ ಕೆಳಗೆ ಬಿದ್ದವು. ಸಲಹೆಯನ್ನು ಒರಟಾಗಿ ನೀಡಿದ ಫಲ ಅದು.

ಇನ್ನೊಮ್ಮೆ ಕಾಡಿನ ರಾಜನಾದ ಸಿಂಹಕ್ಕೆ ಸಂಶಯ ಬಂತು. ತನ್ನನ್ನು ಕಂಡೊಡನೆ ಪ್ರಾಣಿಗಳು ಓಡಿಹೋಗುತ್ತವಲ್ಲ ಯಾಕೆ? ತನ್ನ ಮೇಲಿನ ಭಯದಿಂದಲೋ, ಗರ್ವದಿಂದಲೋ ಅಥವಾ ಮತ್ತಾವುದೇ ಕಾರಣದಿಂದಲೋ? ಪರೀಕ್ಷೆ ಮಾಡಿಯೇ ಬಿಡಬೇಕೆಂದು ಹೊರಟಿತು. ದಾರಿಯಲ್ಲಿ ಎದುರಿಗೇ ಬಂದಿತು ಒಂದು ನರಿ. ಎದುರಿಗೆ ಬಂದ ಸಿಂಹರಾಜನನ್ನು ನೋಡಿ ನಮಸ್ಕರಿಸಿ ಬಾಲಮುದುರಿಕೊಂಡು ನಿಂತಿತು.

ಸಿಂಹ ಆದಷ್ಟು ನಗೆಮೊಗದಿಂದ,  `ಬಾರಯ್ಯ ಸ್ನೇಹಿತ, ಏಕೆ ಹಾಗೆ ದೂರ ನಿಂತೆ. ನಿನಗೊಂದು ಪ್ರಶ್ನೆ ಕೇಳುತ್ತೇನೆ. ಅತ್ಯಂತ ಪ್ರಾಮಾಣಿಕವಾಗಿ ಉತ್ತರ ಕೊಡಬೇಕು ತಿಳಿಯಿತೇ. ನಾನು ಮಾತನಾಡಿದಾಗ ಬಾಯಿ ನಾರುತ್ತದೆಯೇ. ಯಾಕೆಂದರೆ ನಾನು ಹತ್ತಿರ ಬಂದೊಡನೆ ಬೇರೆ ಪ್ರಾಣಿಗಳು ದೂರ ಹೋಗಿ ಬಿಡುತ್ತವೆ'  ಎಂದು ಕೇಳಿತು.

ನರಿ ಬಲು ಜಾಣ ಪ್ರಾಣಿ. ಅದಕ್ಕೆ ಅಭಿಪ್ರಾಯವನ್ನು ಹೇಗೆ ಕೊಡಬೇಕೆಂಬುದು ಗೊತ್ತು. `ಮಹಾ ರಾಜಾ ನನ್ನನ್ನು ಕ್ಷಮಿಸಬೇಕು. ನಾನು ಇಂದು ಸರಿಯಾಗಿ ಉತ್ತರ ಕೊಡಲಾರೆ. ಯಾಕೆಂದರೆ ಎರಡು ದಿನದಿಂದ ನನಗೆ ವಿಪರೀತ ನೆಗಡಿ. ಹೀಗಾಗಿ ನನಗೆ ಯಾವ ವಾಸನೆಯೂ ತಿಳಿಯದು'  ಎಂದಿತು ನರಿ. ತಲೆ ಅಲ್ಲಾಡಿಸಿ ಸಿಂಹ ಹೊರಟುಹೋಯಿತು, ನರಿ ನಿರಾಳವಾಗಿ ಉಸಿರಾಡಿತು.

ಕೆಲವರು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ, `ನನ್ನದು ನೇರ ಮಾತು. ಒಂದು ಹೊಡೆತ ಎರಡು ತುಂಡು. ನಾಜೂಕಿನ ಮಾತು ನಮಗೆ ಬರುವುದಿಲ್ಲ, ಇದ್ದದ್ದನ್ನು ಇದ್ದ ಹಾಗೇ ಹೇಳಿಬಿಡುತ್ತೇನೆ'.  ಹೀಗೆ ಒರಟಾಗಿ ಸಲಹೆ, ಅಭಿಪ್ರಾಯ ನೀಡುವುದರಿಂದ ಯಾವಾಗಲೂ ಸರಿಯಾದ ಪ್ರತಿಕ್ರಿಯೆ ಬರುವುದು ಕಷ್ಟ. ನಾವು ಸುಳ್ಳು ಹೇಳುವುದು ಬೇಡ, ಆದರೆ ಸತ್ಯವಾದ ಮಾತನ್ನು ಮೃದುವಾಗಿ, ಮನನೋಯದಂತೆ ಹೇಳಬಹುದಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.