ADVERTISEMENT

ಸಹಾಯ ಯಾರಿಗೆ?

ಡಾ. ಗುರುರಾಜ ಕರಜಗಿ
Published 29 ಡಿಸೆಂಬರ್ 2014, 19:30 IST
Last Updated 29 ಡಿಸೆಂಬರ್ 2014, 19:30 IST

ಒಂದು ಊರಲ್ಲಿ ಒಬ್ಬ ವ್ಯಾಪಾರಿ ಇದ್ದ. ಅವನು ಅಪಾರ ಧನಸಂಪತ್ತನ್ನು ಕೂಡಿಟ್ಟಿದ್ದ. ಸಾಯುವ ಮೊದಲು ತನ್ನ ಹಣವನ್ನೆಲ್ಲ ಬಂಗಾರದ ನಾಣ್ಯಗಳನ್ನಾಗಿ ಮಾಡಿಸಿ ನೆಲದಲ್ಲಿ ಹೂತಿಟ್ಟ. ಅವನು ಸತ್ತ ಮೇಲೆ ಅವನ ಹೆಂಡತಿ ಉಳಿದ ಆಸ್ತಿಯನ್ನು ಮತ್ತು ಹೂತಿಟ್ಟಿದ್ದ ಬಂಗಾರವನ್ನು ಕಾಪಾಡಿಕೊಂ­ಡಳು. ಅವಳೂ ಒಂದು ದಿನ ಸತ್ತು ಪುನರ್ಜನ್ಮ ಪಡೆದು ಇಲಿಯಾಗಿ ಹುಟ್ಟಿದಳು. ಗಂಡ ನೆಲದಲ್ಲಿ ಬಚ್ಚಿಟ್ಟಿದ್ದ ನಾಣ್ಯಗಳ ಪೆಟ್ಟಿಗೆಯ ಬದಿಯಲ್ಲೇ ಗೂಡು ಮಾಡಿಕೊಂಡು ಇಲಿ ಬದುಕಿತು. ಅದೇ ಊರಿನಲ್ಲಿ ಒಬ್ಬ ತರುಣ ಶಿಲ್ಪಿ ಇದ್ದ.

ಆತ ಒಳ್ಳೆಯ ಬಂಡೆಗಳನ್ನು ಆರಿಸಿಕೊಂಡು ಬಂದು ಸುಂದರ ಶಿಲ್ಪಗಳನ್ನು ಕೆತ್ತಿ ಮಾರಾಟಮಾಡಿ ಬದುಕು ಸಾಗಿಸುತ್ತಿದ್ದ. ಆತ ತುಂಬ ಒಳ್ಳೆಯ ಸ್ವಭಾವದ ಹುಡುಗ. ಈ ವ್ಯಾಪಾರಿಯ ಹಾಳು ಬಿದ್ದ ಮನೆಯ ಸುತ್ತ ಇದ್ದ ಬಂಡೆಗಳನ್ನು ನೋಡಲು ಶಿಲ್ಪಿ ಮೇಲಿಂದ ಮೇಲೆ ಬರುತ್ತಿದ್ದ. ಅವನ ಒಳ್ಳೆಯ ಸ್ವಭಾವ­ವನ್ನು ಗಮನಿಸಿದ ಇಲಿ ತನ್ನ ಬಾಯಿಯಲ್ಲಿ ಒಂದು ಬಂಗಾರದ ನಾಣ್ಯವನ್ನು ಕಚ್ಚಿಕೊಂಡು ಬಂದು ಅವನ ಮುಂದೆ ಎಸೆದು ನಿಂತಿತು. ತರುಣನಿಗೆ ಆಶ್ಚರ್ಯ­ವಾಯಿತು. ಇಲಿ ಹೇಳಿತು, ‘ಮಗೂ, ಗಾಬರಿಪಡಬೇಡ. ನನಗೆ ವಯಸ್ಸಾಗುತ್ತಿದೆ. ಆಹಾರಕ್ಕಾಗಿ ಓಡಾಡ­­ಲಾರೆ.

ನಿನಗೆ ನಿತ್ಯವೂ ಒಂದು ಬಂಗಾರದ ನಾಣ್ಯ ಕೊಡುತ್ತೇನೆ. ನನಗೆ ಒಂದು ಮುಷ್ಟಿ ಆಹಾರ ತಂದುಕೊ­ಡುತ್ತೀಯಾ?’ ಆತ ಆಗಬಹುದೆಂದು ಒಪ್ಪಿ ನಾಣ್ಯ ಪಡೆದು ಹೊರಟ. ಮಾತು ಕೊಟ್ಟಂತೆ ನಿತ್ಯವೂ ಆತ ಮುಷ್ಟಿ ಆಹಾರ ತಂದುಕೊಟ್ಟು ಇಲಿ ಕೊಟ್ಟ ಬಂಗಾರದ ನಾಣ್ಯ ಪಡೆದುಕೊಂಡು ಹೋಗುತ್ತಿದ್ದ. ಹೀಗೆ ಕೆಲಕಾಲ ನಡೆಯಿತು. ಒಂದು ದಿನ ಬೆಕ್ಕೊಂದು ಈ ಇಲಿಯನ್ನು ಹಿಡಿಯಿತು. ಆಗ ಇಲಿ, ‘ಬೆಕ್ಕೇ ನಾನು ನಿನಗೆ ಕೇವಲ ಒಂದು ದಿನದ ಆಹಾರವಾಗಬೇಕೇ ಅಥವಾ ನಿತ್ಯವೂ ಕಷ್ಟಪಡದೇ ಆಹಾರ ಕೊಡುವಂತೆ ಮಾಡಬೇಕೇ?’ ಎಂದು ಕೇಳಿತು. ಬೆಕ್ಕು ನಿತ್ಯವೂ ಆಹಾರ ಬೇಕೆಂದಿತು. ‘ಹಾಗಾದರೆ ನನ್ನನ್ನು ಬಿಡು. ನಾಳೆಯಿಂದ ನನಗೆ ಬರುವ ಆಹಾರದಲ್ಲಿ ಅರ್ಧ ಭಾಗ ನಿನಗೆ’ ಎಂದಿತು.

ಹೇಳಿದಂತೆ ಮರುದಿನ ತರುಣ ಶಿಲ್ಪಿ ತಂದಿಟ್ಟ ಆಹಾರದಲ್ಲಿ ಎರಡು ಭಾಗ ಮಾಡಿ ಒಂದನ್ನು ಬೆಕ್ಕಿಗೆ ನೀಡಿತು. ಬೆಕ್ಕು ಈ ವಿಷಯವನ್ನು ಸ್ನೇಹಿತರಿಗೆ ಹೇಳಿಕೊಂಡಿತು.  ಮರುದಿನ ಮತ್ತೊಂದು ಬೆಕ್ಕು ಇಲಿಯನ್ನು ಹಿಡಿ­ಯಿತು. ಅದರೊಂದಿಗೂ ಇದೇ ಕರಾರನ್ನು ಇಲಿ ಮಾಡಿಕೊಂಡಿತು. ಈಗ ತಂದ ಆಹಾರದಲ್ಲಿ ಮೂರು ಭಾಗ­ವಾದವು. ಮತ್ತೆರಡು ದಿನಗಳಲ್ಲಿ ಮತ್ತೆ ಎರಡು ಬೆಕ್ಕುಗಳು ಗಂಟು ಬಿದ್ದವು. ಇಲಿ ಪೇಚಿಗೆ ಸಿಲುಕಿತು. ಆಹಾರದ ಐದನೇ ಒಂದು ಭಾಗ ತುಂಬ ಕಡಿಮೆ­ಯಾಗು­ತ್ತಿತ್ತು ಮತ್ತು ಬೆಕ್ಕುಗಳೂ ತೃಪ್ತಿ­ಯಾಗದೇ ತಿಂದೇ ಬಿಡುತ್ತೇವೆ ಎಂದು ಹೆದರಿಸುತ್ತಿದ್ದವು. ಇಲಿ ದಾರಿ ಕಾಣದೆ ತರುಣನಲ್ಲಿ ಕಷ್ಟ ಹೇಳಿಕೊಂಡಿತು. ಆತ ಒಂದು ಉಪಾಯ ಹೂಡಿದ. ಒಂದು ಕಲ್ಲನ್ನು ತೆಳುವಾದ ಸರಳಿನಂತೆ ಕೆತ್ತಿದ. ಅದರ ತುದಿಗೆ ಕಬ್ಬಿಣದ ಸರಳನ್ನು ಜೋಡಿಸಿದ.

ನೋಡಿದರೆ ಅವು ಬೇರೆ ಎಂದು ತಿಳಿಯುತ್ತಿರಲಿಲ್ಲ. ಕಲ್ಲಿನ ಭಾಗವನ್ನು ಬಾಯಿಯಲ್ಲಿ ಹಿಡಿದು­ಕೊಂಡು ಕಬ್ಬಿಣದ ಭಾಗವನ್ನು ಬೆಂಕಿ­ಯಲ್ಲಿ ಚೆನ್ನಾಗಿ ಕಾಸಿ ಇಟ್ಟುಕೊಂಡು ಹತ್ತಿರ ಬಂದ ಬೆಕ್ಕಿಗೆ ಇನ್ನೊಂದು ತುದಿಯನ್ನು ಕಚ್ಚಲು ಕೇಳು ಎಂದು ಹೇಳಿದ. ಇಲಿಯೇ ಬಾಯಿಯಲ್ಲಿ ಹಿಡಿ­ದು­ಕೊಂಡಾಗ ತಮಗೇನು ತೊಂದರೆ ಎಂದು ಧೈರ್ಯದಿಂದ ಬೆಕ್ಕು ಬಾಯಿ ಹಾಕಿದ್ದೇ ತಡ ಬಾಯಿಯೆಲ್ಲ ಸುಟ್ಟು ಗುಳ್ಳೆಯಾಗಿ ಓಡಿಹೋಯಿತು. ಇದ­ರಂತೆ ಎಲ್ಲ ಬೆಕ್ಕುಗಳು ಫಜೀತಿ ಪಟ್ಟು ಇಲಿಯ ಹತ್ತಿರ ಬರುವುದೇ ನಿಂತು ಹೋಯಿತು.

ಇಲಿ ಸಂತೋಷದಿಂದ ನಿತ್ಯವೂ ಬಂಗಾರದ ನಾಣ್ಯಗಳನ್ನು ಶಿಲ್ಪಿಗೆ ಕೊಡುತ್ತ ಸಾಯುವ ಮೊದಲು ಇಡೀ ನಿಧಿಯನ್ನು ಅವನಿಗೆ ಕೊಟ್ಟು ಪ್ರಾಣಬಿಟ್ಟಿತು. ಕೊಡುವವರಿದ್ದಾರೆ ಎಂದು ಗೊತ್ತಾದರೆ ಕೇಳುವವರು ಸಾವಿರ ಜನ ಬರುತ್ತಾರೆ. ನೀಡಬೇಕು ನಿಜ, ಆದರೆ ಅರ್ಹತೆ ಇದ್ದವರಿಗೆ, ಅವಶ್ಯಕತೆ ಇದ್ದವರಿಗೆ ನೀಡಬೇಕು. ನಿಮ್ಮನ್ನು ಹೆದರಿಸಿ, ಒತ್ತಾಯದಿಂದ ಸುಲಿಯಲು ಬರುವರನ್ನು ಶಕ್ತಿ­ಯಿಂದಲೋ ಯುಕ್ತಿಯಿಂದಲೋ ದೂರ­ವಿರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.