ADVERTISEMENT

ಸುಪ್ತ ಮನಸ್ಸಿನ ಶಕ್ತಿ

ಡಾ. ಗುರುರಾಜ ಕರಜಗಿ
Published 12 ಮಾರ್ಚ್ 2014, 19:52 IST
Last Updated 12 ಮಾರ್ಚ್ 2014, 19:52 IST

ಒಬ್ಬ ಪ್ರಖ್ಯಾತ ಮನೋವೈದ್ಯರು ಹೇಳಿದ ಘಟನೆ ಇದು. ಅವರು ಒಬ್ಬ ಕೇಂದ್ರ ಸರ್ಕಾರಿ ನೌಕರರು. ಸಾಕಷ್ಟು ಉನ್ನತ ಹುದ್ದೆ­ಯಲ್ಲಿದ್ದವರು. ಒಂದು ದಿನ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಸಣ್ಣಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ರಾತ್ರಿಯಾದ ಹಾಗೆ ತೀವ್ರವಾಗುತ್ತ ಬಂದಿತು.

ಮರುದಿನ ಬೆಳಗ್ಗಿನ ಹೊತ್ತಿಗೆ ಅದು ತಡೆದುಕೊಳ್ಳದಂತಾಗಿ ನೆಲದ ಮೇಲೆ ಬಿದ್ದು ಹೊರಳಾಡತೊಡಗಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದರು.

ಹೊಟ್ಟೆ ನೋವು ಎಷ್ಟು ತೀವ್ರವಾ­ಗಿತ್ತೆಂದರೆ ಕೈಯಾಡಿಸಿದರೆ ಹೊಟ್ಟೆಯೊ­ಳಗಿನ ಗಂಟು ಕೈಗೆ ಹತ್ತುವಂತಿತ್ತು. ವೈದ್ಯರು ನೋವು ಪರಿಹಾರಕ ಔಷಧಿಗಳನ್ನು ನೀಡಿದರು. ಏನು ಮಾಡಿದರೂ ಎರಡು ದಿನ ನೋವು ಕಡಿಮೆಯಾಗಲಿಲ್ಲ. ಎಲ್ಲ ಪರೀಕ್ಷೆಗಳನ್ನು ಮಾಡಿದ ವೈದ್ಯರಿಗೆ ದೇಹದೊಳಗೆ ಯಾವ ತೊಂದರೆಯೂ ಕಂಡಿರಲಿಲ್ಲ. ಎರಡನೆಯ ದಿನ ಸಂಜೆಗೆ ನೋವು ಕಡಿಮೆಯಾಯಿತು. ರಾತ್ರಿಯ ಹೊತ್ತಿಗೆ ಯಾವ ನೋವೂ ಇಲ್ಲ! ಆ ನೋವು ಬಂದದ್ದು ಯಾಕೆ ಮತ್ತು ಹೋದದ್ದು ಹೇಗೆ ಎಂಬುದು ವೈದ್ಯರಿಗೂ ತಿಳಿಯಲಿಲ್ಲ. ಅಧಿಕಾರಿ ಮರುದಿನ­ದಿಂದಲೇ ಮತ್ತೆ ಚುರುಕಾಗಿ ಕೆಲಸಕ್ಕೆ ತೊಡಗಿದರು. ಒಂದು ವರ್ಷ ಕಳೆಯಿತು. ಡಿಸೆಂಬರ ಇಪ್ಪತ್ತೊಂದರ ಸಂಜೆಗೆ ಮತ್ತೆ ನೋವು ಕಾಣಿಸಿತು. ತಕ್ಷಣ ಮನೆಗೆ ಹೋದರು. ರಾತ್ರಿಯ ಹೊತ್ತಿಗೆ ಮತ್ತೆ ನೆಲದ ಮೇಲೆ ಹೊರಳಾ­ಡುವಷ್ಟು ತೀಕ್ಷ್ಣವಾಗಿತ್ತು ನೋವು. ಹೋದ ಬಾರಿ ಆಸ್ಪತ್ರೆಗೆ ಸೇರಿದಾಗ ನೀಡಿದ್ದ ದಾಖಲೆಗಳನ್ನು ತೆಗೆದುಕೊಂಡು ಮತ್ತೆ ಆಸ್ಪತ್ರೆ ಸೇರಿದರು. ಮತ್ತೆ ಅದೇ ನೋವು, ಅದೇ ಪರೀಕ್ಷೆಗಳು ಮತ್ತು ಅದೇ ಫಲಿತಾಂಶ. ನೋವಿನ ಕಾರಣ ವೈದ್ಯರಿಗೆ ತಿಳಿಯಲೇ ಇಲ್ಲ. ಎರಡನೆಯ ದಿನ ರಾತ್ರಿ ಮತ್ತೆ ನೋವು ಮಾಯ. ಒಂದು ವರ್ಷದ ನಂತರ ಮತ್ತೆ ನೋವು ಮರುಕಳಿಸಿದಾಗ ಈ ಬಾರಿ ವೈದ್ಯರು ಇವರನ್ನು ಮನೋವೈದ್ಯರ ಬಳಿಗೆ ಕಳುಹಿಸಿದರು.

ಯಾಕೆಂದರೆ ದೈಹಿಕ­ವಾಗಿ ಅವರಿಗೆ ನೋವಿನ ಯಾವ ಕಾರಣವೂ ಕಂಡಿರಲಿಲ್ಲ. ಮನೋ­ವೈದ್ಯರು ಹಿಂದಿನ ಎರಡು ವರ್ಷದ ದಾಖಲೆಗಳನ್ನು ನೋಡಿದಾಗ ಒಂದು ಆಶ್ಚರ್ಯ ಕಾಡಿತ್ತು. ಪ್ರತಿವರ್ಷವೂ ಈ ಹೊಟ್ಟೆನೋವು ಬಂದದ್ದು ಡಿಸೆಂಬರ್ ಇಪ್ಪತ್ತೊಂದರಂದೇ! ಅದು ತನ್ನಷ್ಟಕ್ಕೇ ತಾನೇ ಕಡಿಮೆಯಾದದ್ದು ಡಿಸೆಂಬರ ಇಪ್ಪತ್ಮೂರಕ್ಕೇ! ಒಂದು ದಿನವೂ ಹೆಚ್ಚು ಕಡಿಮೆಯಾಗಿರಲಿಲ್ಲ!

ಮನೋವೈದ್ಯರು ರೋಗಿಯ ಮನಸ್ಸಿಗೆ ಸಲಹೆಗಳನ್ನು ನೀಡುತ್ತ ಹಿಂದಕ್ಕೆ ಕರೆದೊಯ್ದಾಗ ಒಂದು ವಿಶೇಷ ವಿಷಯ ಗೊತ್ತಾಯಿತು. ಈ ಅಧಿಕಾರಿಯ ತಂದೆ ತೀರಿಹೋಗಿ ಮೂರು ವರ್ಷವಾಗಿತ್ತು. ಇವರಿಗೆ ತಮ್ಮ ತಂದೆಯ ಬಗ್ಗೆ ಅಪಾರ ಪ್ರೀತಿ ಗೌರವ. ಇವರು ಕಾರ್ಯನಿಮಿತ್ತ ಬೇರೆ ಊರಿಗೆ ಹೋದಾಗ ತಂದೆಯ ಆರೋಗ್ಯ ಹದ­ಗೆಟ್ಟಿತ್ತು. ಹೊಟ್ಟೆಯಲ್ಲಿ ಗಂಟಿ­ನಂತಾಗಿ ನೋವು ಹೆಚ್ಚಾಗಿತ್ತು. ಅವರನ್ನು ಮನೆಯವರು ಆಸ್ಪತ್ರೆಗೆ ಸೇರಿಸಿದರೂ ಅವರು ಎರಡು ದಿನ ನರಳಿ ಸಾವನ್ನ­ಪ್ಪಿದರು. ಅದು ಆದದ್ದು ಡಿಸೆಂಬರ್ ಇಪ್ಪ­ತ್ತೊಂದರಿಂದ ಡಿಸೆಂಬರ ಇಪ್ಪ­ತ್ಮೂರ­ರವರೆಗೆ. ಮರುದಿನ ಪ್ರವಾಸ­ದಿಂದ ಮರಳಿದ ಅಧಿಕಾರಿಗೆ ಅಪರಾಧಿ ಪ್ರಜ್ಞೆಕಾಡತೊಡಗಿತು. ತಾನು ಊರಿ­ನಲ್ಲಿ­ ಇದ್ದಿದ್ದರೆ ತಂದೆ ಬದುಕಬಹು­ದಾಗಿತ್ತೆಂಬ ಭಾವನೆ ಬಲಿಯಿತು. ತಮ್ಮ ಬೇಜವಾಬ್ದಾರಿಯಿಂದಲೇ ತಂದೆ ಸತ್ತರೆಂಬ ಅಪರಾಧೀ ಭಾವ ಮೂಡಿ, ಸ್ಥಿರವಾಯಿತು. ಈ ಭಾವನೆ ಸುಪ್ತ ಮನಸ್ಸಿನಲ್ಲಿ ಸೇರಿ ಹೋಯಿತು. ಪ್ರತಿವರ್ಷ ಅದೇ ದಿನಗಳಂದು ಇವರು ಒದ್ದಾಡುವುದು ತಮ್ಮ ತಪ್ಪಿನ ಪ್ರಾಯಶ್ಚಿತ್ತ ಎಂದು ಸುಪ್ತ ಮನಸ್ಸು ಸೂಚಿಸಿ ದೇಹ ಅಂತೆಯೇ ಒದ್ದಾಡು­ವಂತೆ ಮಾಡುತ್ತಿತ್ತು. ವೈದ್ಯರು ಸುಪ್ತ ಮನಸ್ಸಿಗೆ ಸೂಕ್ತ ಸಲಹೆ ನೀಡಿದ ಮೇಲೆ ಈ ನೋವು ಮರುಕಳಿಸುವುದು ನಿಂತೇ ಹೋಯಿತು. ನಾವು ಸಾಮಾನ್ಯವಾಗಿ ಗಮನಿಸುವುದು ನಮ್ಮ ಜಾಗೃತ ಮನಸ್ಸನ್ನು ಮಾತ್ರ. ಅದಕ್ಕಿಂತ ಕೋಟಿ ಪಾಲು ಪ್ರಬಲವಾದ ಸುಪ್ತಮನಸ್ಸನ್ನು ನಾವು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಜಾಗೃತ ಮನಸ್ಸು ಇರುವೆಯಷ್ಟು ಪ್ರಬಲವಾಗಿದ್ದರೆ ಸುಪ್ತ ಮನಸ್ಸು ಆನೆಯಷ್ಟು ಬಲಶಾಲಿ. ಆದರೆ, ಸರಿಯಾಗಿ ಮನಸ್ಸನ್ನು ಅರಿತು ಅದಕ್ಕೆ ಸ್ವಯಂಸಲಹೆಗಳನ್ನು ನೀಡುತ್ತ ಹೋದರೆ ಪ್ರಬಲವಾದ ಸುಪ್ತಮನಸ್ಸಿನಿಂದ ಯಾವ ಕಾರ್ಯವನ್ನಾದರೂ ಮಾಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.